×
Ad

“ಆರ್ ಯು ಡೆಡ್?” ಎಂದು ಪ್ರಶ್ನಿಸುವ ಚೀನಾದ ಆ್ಯಪ್ ವೈರಲ್!

Update: 2026-01-13 18:52 IST

“ಆರ್ ಯು ಡೆಡ್?” ಎಂದು ಪ್ರಶ್ನಿಸಿರುವ ಚೀನಾದ ಆ್ಯಪ್ ಒಂದು ಜಾಗತಿಕವಾಗಿ ಯುವಜನರು ಮತ್ತು ಮುಖ್ಯವಾಗಿ ಏಕಾಂಗಿಯಾಗಿ ನೆಲೆಸಿರುವವರ ನಡುವೆ ವೈರಲ್ ಆಗಿದೆ.

ಚೀನಾದ ಭದ್ರತಾ ಆ್ಯಪ್ ಒಂದು ವೈರಲ್ ಆಗಿದೆ. “ಆರ್ ಯು ಡೆಡ್?” (ನೀವು ಸತ್ತಿದ್ದೀರಾ?) ಅಥವಾ ಡೆಮುಮು (ಚೀನೀ ಭಾಷೆಯ ಪದ) ಎಂಬ ಹೆಸರಿನ ಈ ಆ್ಯಪ್ ಏಕಾಂಗಿಯಾಗಿ ನೆಲೆಸಿರುವವರಿಗೆಂದೇ ತಯಾರಿಸಲಾಗಿದೆ. ಕಳೆದ ಮೇಯಲ್ಲಿ ಪರಿಚಯಿಸಲಾಗಿರುವ ಈ ಆ್ಯಪ್ ಏಕಾಂಗಿಯಾಗಿ ನೆಲೆಸಿರುವವರು, ಹೆಚ್ಚು ಜನನಿಭಿಡವಿಲ್ಲದ ಆವರಣಗಳಲ್ಲಿ ನೆಲೆಸಿರುವವರನ್ನು ಪರೀಕ್ಷಿಸುತ್ತದೆ. ಚೀನಾ ದೇಶದಲ್ಲಿಯೇ ಅತಿ ಹೆಚ್ಚು ಡೌನ್ಲೋಡ್ ಆಗಿರುವ ಆ್ಯಪ್ ಇದಾಗಿದೆ.

ಆರಂಭದಲ್ಲಿ ಈ ಆ್ಯಪ್ಗೆ ಹೆಚ್ಚು ಪ್ರಚಾರ ಸಿಗದೆ ಇದ್ದರೂ, ಕಳೆದ ಕೆಲವು ವಾರಗಳಲ್ಲಿ ಲಕ್ಷಾಂತರ ಚೀನೀಯರು ಈ ಆ್ಯಪ್ ಡೌನ್ಲೋಡ್ ಮಾಡಲು ಮುಗಿಬಿದ್ದಿದ್ದಾರೆ. ಚೀನಾದಲ್ಲಿ ‘ಸೈಲೆಮ್’ ಎಂದು ಕರೆಯಲಾಗುವ ಆ್ಯಪ್ ಡೌನ್ಲೋಡ್ ಮಾಡಿದ ನಂತರ ಜನರು 48 ಗಂಟೆಗಳಿಗೊಮ್ಮೆ ಹಸಿರು ಬಟನ್ ಒತ್ತಬೇಕಾಗುತ್ತದೆ. ಹಾಗೆ ಮಾಡಲು ವಿಫಲವಾದಲ್ಲಿ ಅವರ ತುರ್ತು ಸಂಪರ್ಕಗಳಿಗೆ ಸ್ವಯಂಚಾಲಿತವಾಗಿ ಸುದ್ದಿ ಮುಟ್ಟಿಸುತ್ತದೆ. ಆ್ಯಪ್ ಬಳಕೆದಾರರು ಅಪಾಯದಲ್ಲಿದ್ದಾರೆ ಎಂದು ಹೇಳುತ್ತದೆ.

ಅಂತಾರಾಷ್ಟ್ರೀಯವಾಗಿ ಈ ಆ್ಯಪ್ ‘ಡೆಮುಮು’ (ನೀವು ಸತ್ತಿದ್ದೀರಾ) ಎನ್ನುವ ಹೆಸರಿನಲ್ಲಿ ಪಟ್ಟಿಯಲ್ಲಿದೆ. ಆರಂಭದಲ್ಲಿ ಇದು ಉಚಿತವಾಗಿ ಸಿಗುತ್ತಿತ್ತು. ಇದೀಗ 99 ರೂ. ವೆಚ್ಚ ಮಾಡಬೇಕಾಗುತ್ತದೆ. ಪಾವತಿ ಮಾಡುವ ಯುಟಿಲಿಟಿ ಆ್ಯಪ್ಗಳ ಪಟ್ಟಿಯಲ್ಲಿ ಅಮೆರಿಕ, ಸಿಂಗಾಪುರ ಮತ್ತು ಹಾಂಗ್ಕಾಂಗ್ಗಳಲ್ಲಿ ಈ ಆ್ಯಪ್ ಟಾಪ್ 2 ರ‍್ಯಾಂಕ್ ನಲ್ಲಿದೆ. ಆಸ್ಟ್ರೇಲಿಯ ಮತ್ತು ಸ್ಪೇನ್ನಲ್ಲಿ 4ನೇ ಸ್ಥಾನ ಪಡೆದಿದೆ. 2030ರೊಳಗೆ ಈ ಆ್ಯಪ್ ಬಳಸುವವರ ಸಂಖ್ಯೆ 200 ದಶಲಕ್ಷಕ್ಕೆ ಏರುವ ಸಾಧ್ಯತೆಯಿದೆ ಎಂದು ಚೀನೀ ಮಾಧ್ಯಮಗಳು ಹೇಳಿವೆ.

ಆ್ಯಪಲ್ ಆ್ಯಪ್ ಸ್ಟೋರ್ನಲ್ಲಿ ಇದನ್ನು “ಹಗುರವಾದ ಸುರಕ್ಷಾ ಸಾಧನವಾಗಿದ್ದು, ಏಕಾಂಗಿಯಾಗಿ ನೆಲೆಸುವವರಿಗೆಂದು ನಿರ್ಮಿಸಲಾಗಿದೆ. ಚೆಕಿನ್ ಮೇಲ್ವಿಚಾರಣೆ ಮತ್ತು ತುರ್ತು ಸಂಪರ್ಕಗಳ ಕಾರ್ಯ ವಿಧಾನಗಳ ಮೂಲಕ ಅದೃಶ್ಯ ಭದ್ರತೆಯನ್ನು ನೀಡುವುದು, ಏಕಾಂಗಿಗಳಿಗೆ ಧೈರ್ಯವನ್ನು ತುಂಬುತ್ತದೆ” ಎಂದು ವಿವರಿಸಲಾಗಿದೆ.

ಆರ್ ಯು ಡೆಡ್ ಅಭಿವೃದ್ಧಿಪಡಿಸಿದ ಲಿಯು ಪ್ರಕಾರ, ಆ್ಯಪ್ಗೆ ನೋಂದಣಿ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ ಅಥವಾ ಸೈನಪ್ ಮಾಡುವ ಅಗತ್ಯವಿಲ್ಲ. ತುರ್ತು ಸಂಪರ್ಕ ಮಾಹಿತಿ ಮತ್ತು ಚೆಕಿನ್ ದಾಖಲೆಗಳನ್ನು ಸುರಕ್ಷಿತವಾಗಿರಿಸಲು ಎನ್ಕ್ರಿಪ್ಷನ್ ಬಳಸುತ್ತದೆ. “ಯಾರಿಗೂ ತಿಳಿಯದಂತೆ ಅಪಾಯ ಸಂಭವಿಸುವ ಸಾಧ್ಯತೆ, ಸಂಪರ್ಕಿಸಲು ಯಾರೂ ಇಲ್ಲದೆ ಇರುವ ಏಕಾಂಗಿಯಾಗಿರುವ ಅನುಭವವನ್ನು ಹೋಗಲಾಡಿಸಲು ಈ ಆ್ಯಪ್ ಸಿದ್ಧಪಡಿಸಿದ್ದೇವೆ” ಎಂದು ಲಿಯು ಹೇಳಿದ್ದಾರೆ.

ಆ್ಯಪ್ ಸೃಷ್ಟಿಸಿದವರ ಬಗ್ಗೆ ಹೆಚ್ಚು ಮಾಹಿತಿ ಇಲ್ಲದೆ ಇದ್ದರೂ, ಮೂವರು ಸೇರಿ ಆ್ಯಪ್ ಅನ್ನು ರಚಿಸಿದ್ದಾರೆ. ಮಾಧ್ಯಮಗಳಿಗೆ ವಿವರ ನೀಡಿರುವ ಲಿಯು ಆ್ಯಪ್ ಸೃಷ್ಟಿಸಿದವರಲ್ಲಿ ಒಬ್ಬರಾಗಿದ್ದಾರೆ. ದೊಡ್ಡ ನಗರಗಳಲ್ಲಿ ಏಕಾಂಗಿಯಾಗಿ ನೆಲೆಸಿರುವ ಯುವಜನರು, 25ರೊಳಗಿನ ಮಹಿಳೆಯರನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಆ್ಯಪ್ ತಯಾರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News