×
Ad

ಆಗಾಗ್ಗೆ ಕಣ್ಣುಜ್ಜುವುದು ಅಪಾಯಕಾರಿಯೆ? ; ವೈದ್ಯರ ಸಲಹೆಗಳೇನು?

Update: 2026-02-27 16:34 IST

ಸಾಂದರ್ಭಿಕ ಚಿತ್ರ | Photo Credit : freepik

ಸುಸ್ತಾಗಿದೆಯೆ, ಒತ್ತಡವಿದೆಯೆ ಅಥವಾ ದೀರ್ಘಕಾಲ ಪರದೆಯನ್ನು ನೋಡುತ್ತಿದ್ದರೆ ಹಠಾತ್ ಆಗಿ ಕೈಗಳು ಕಣ್ಣನ್ನು ಉಜ್ಜಿಬಿಡುತ್ತವೆ. ಕಣ್ಣುಗಳನ್ನು ಉಜ್ಜಿದಾ ಕ್ಷಣ ಬಹಳ ತೃಪ್ತಿ ಸಿಗುತ್ತದೆ. ಇಂತಹ ಸಂವೇದನೆ ಬಹುತೇಕ ಎಲ್ಲರೂ ಅನುಭವಿಸಿದ್ದೇವೆ. ಆದರೆ ಕಣ್ಣನ್ನು ಉಜ್ಜಿದ ಕ್ಷಣ ಏಕೆ ನಮಗೆ ತೃಪ್ತಿ ಸಿಗುತ್ತದೆ ಎನ್ನುವುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಹೀಗೆ ಕಣ್ಣನ್ನು ಉಜ್ಜುವುದು ಹಾನಿಕರವಲ್ಲ ಎಂದು ಕಂಡುಬಂದರೂ ಆಳವಾಗಿ ಕೆದಕಿ ನೋಡಿದರೆ ಇನ್ನೂ ಹೆಚ್ಚಿನದ್ದನ್ನು ಕಾಣಬಹುದು. ಕಣ್ಣನ್ನು ಉಜ್ಜುವುದು ಏಕೆ ಸಮಾಧಾನ ತರುತ್ತದೆ ಎನ್ನುವುದಕ್ಕೆ ಯಾಂತ್ರಿಕ, ನರವ್ಯೂಹದ ಮತ್ತು ಭಾವನಾತ್ಮಕ ಕಾರಣಗಳಿವೆ.

ಕಣ್ಣುಜ್ಜಿದಾಗ ಸಂತೃಪ್ತಿ ಕಾಣಲು ಕಾರಣವೇನು?

ಕಣ್ಣಿನ ವೈದ್ಯರು ಮತ್ತು ಗ್ವಾಲಿಯರ್ನ ರತನ್ ಜ್ಯೋತಿ ನೇತ್ರಾಲಯದ ಡಾ ಪುರೇಂದ್ರ ಭಾಸಿನ್ ಪ್ರಕಾರ, “ನಾವು ಕಣ್ಣನ್ನು ಉಜ್ಜಿದಾಗ, ಕಣ್ಣುಗುಡ್ಡೆಯ ಸುತ್ತಲೂ ಮತ್ತು ಹಿಂದೆ ಇರುವ ಸೂಕ್ಷ್ಮ ನರ ತುದಿಗಳನ್ನು ಉತ್ತೇಜಿಸುತ್ತೇವೆ. ಈ ಒತ್ತಡವು ಮೆದುಳಿಗೆ ಸಂಕೇತಗಳನ್ನು ಕಳುಹಿಸುತ್ತದೆ. ಹಾಗೆ ಕಣ್ಣಿನ ಒತ್ತಡ, ಶುಷ್ಕತೆ ಅಥವಾ ಅಸ್ವಸ್ಥತೆಯನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಉಜ್ಜುವುದರಿಂದ ಕಣ್ಣೀರಿನ ಹರಿವನ್ನು ಕ್ಷಣಿಕವಾಗಿ ಸುಧಾರಿಸಬಹುದು ಮತ್ತು ಒಣಗಿದ ಕಣ್ಣುಗಳನ್ನು ನೀರುಹರಿಸಿ ಶುಚಿಗೊಳಿಸುತ್ತದೆ. ಧೂಳು ಮತ್ತು ಅಲರ್ಜಿನ್ಗಳಂತಹ ಉರಿಗಳನ್ನು ಶುಚಿಗೊಳಿಸುತ್ತದೆ.”

ಹೆಚ್ಚುವರಿಯಾಗಿ ಕಣ್ಣು ರೆಪ್ಪೆಗಳು ಮತ್ತು ಸುತ್ತಮುತ್ತಲಿನ ಅಂಗಾಂಶಗಳಿಗೆ ಸೌಮ್ಯವಾದ ಒತ್ತಡವನ್ನು ಹೇರುತ್ತದೆ. ವಿಶೇಷವಾಗಿ ನಮ್ಮ ಕಣ್ಣುಗಳು ದಣಿದಿದ್ದಾಗ ಅಥವಾ ಒಣಗಿದಾಗ ತೃಪ್ತಿಕರವಾದ ಮಸಾಜ್ನ ಪರಿಣಾಮವನ್ನು ಉಂಟು ಮಾಡುತ್ತದೆ

ಕಣ್ಣುಜ್ಜಿದಾಗ ಮನಶ್ಶಾಂತಿ ಸಿಗುವುದೇಕೆ?

ಹೌದು. ಅಂತಹ ಸಂಬಂಧವಿದೆ. ಕಣ್ಣನ್ನು ಉಜ್ಜುವಾಗ ಪ್ಯಾರಾಸಿಂಪಥೆಟಿಕ್ ನರಮಂಡಲದ ಪ್ರಮುಖ ನರಗಳಲ್ಲಿ ಒಂದಾಗಿರುವ ವೇಗಸ್ ನರವನ್ನು ಉತ್ತೇಜಿಸುತ್ತದೆ. ಈ ಪ್ರಚೋದನೆಯು ಹೃದಯದ ಬಡಿತವನ್ನು ನಿಧಾನಗೊಳಿಸುತ್ತದೆ ಮತ್ತು ಶಾಂತ ಅಥವಾ ವಿಶ್ರಾಂತ ಭಾವನೆಯನ್ನು ಉತ್ತೇಜಿಸುತ್ತದೆ.

ವೇಗಸ್ ನರವು ಉಸಿರಾಟ ಮತ್ತು ಜೀರ್ಣಕ್ರಿಯೆಯಂತಹ ಅನೇಕ ಅನೈಚ್ಛಿಕ ದೇಹದ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಹೀಗಾಗಿ ಅದನ್ನು ಸಕ್ರಿಯಗೊಳಿಸಿದಾಗ ಅಲ್ಪಾವಧಿಗೆ ಶಾಂತಗೊಳಿಸುವ ಪರಿಣಾಮ ಉಂಟುಮಾಡಬಹುದು. ಅದೇ ಕಾರಣದಿಂದ ವಿಶೇಷವಾಗಿ ಒತ್ತಡ ಅಥವಾ ಆಯಾಸವಾದಾಗ ಕಣ್ಣುಗಳನ್ನು ಉಜ್ಜುವುದರಿಂದ ಭಾವನಾತ್ಮಕ ಸಾಂತ್ವನ ಸಿಗುತ್ತದೆ.

ಆಗಾಗ್ಗೆ ಕಣ್ಣುಜ್ಜುವುದು ಅಪಾಯಕಾರಿಯೆ?

ಪದೇಪದೇ ಕಣ್ಣುಗಳನ್ನು ತೀವ್ರವಾಗಿ ಉಜ್ಜುವುದು ಅಪಾಯಕಾರಿ. ಕಾಲಾನುಸಾರ ಕಣ್ಣುಜ್ಜುವುದು ಅಭ್ಯಾಸವಾಗಿ ಹೋಗಿ ಕಾರ್ನಿಯಗೆ ಹಾನಿಯುಂಟು ಮಾಡಬಹುದು. ಅದರಿಂದಾಗಿ ಕಾರ್ನಿಯ ತೆಳುವಾಗಿ ಹೊರಕ್ಕೆ ಉಬ್ಬುವಂತಹ ಮತ್ತು ದೃಷ್ಟಿ ವಿರೂಪಗೊಳ್ಳುವ ಕೆರಟೊಕೊನಸ್ ಎನ್ನುವ ಸಮಸ್ಯೆ ಉಂಟಾಗಬಹುದು.

ಕಣ್ಣನ್ನು ಉಜ್ಜುವುದರಿಂದ ಸಣ್ಣ ರಕ್ತನಾಳಗಳು ಮುರಿಯಬಹುದು ಇದರಿಂದ ಕೆಂಪು ಬಣ್ಣಕ್ಕೆ ತಿರುಗಬಹುದು ಅಥವಾ ಮೂಗೇಟು ಸಂಭವಿಸಬಹುದು. ಅಲರ್ಜಿ ಇರುವವರು ಕಣ್ಣು ಉಜ್ಜಿದರೆ ಉರಿಯೂತ ಇನ್ನಷ್ಟು ಹದಗೆಟ್ಟು ತುರಿಕೆ ಹೆಚ್ಚಾಗಬಹುದು. ಹೆಚ್ಚುವರಿಯಾಗಿ ಕೈಗಳಲ್ಲಿ ಬ್ಯಾಕ್ಟೀರಿಯ ಮತ್ತು ಕೊಳೆ ಇರುತ್ತವೆ. ಉಜ್ಜುವುದರಿಂದ ಅವು ಕಣ್ಣುಗಳಿಗೆ ವರ್ಗಾವಣೆಯಾಗಿ ಸೋಂಕುಗಳು ಅಥವಾ ಗುಲಾಬಿ ಕಣ್ಣಿನ (onjunctivitis) ಅಪಾಯ ಹೆಚ್ಚಾಗಬಹುದು.

ಅಂತಿಮವಾಗಿ ಹೇಳುವುದಾದರೆ ಕೆಲವೊಮ್ಮೆ ಕಣ್ಣುಗಳನ್ನು ನಯವಾಗಿ ಉಜ್ಜುವುದರಿಂದ ತಾತ್ಕಾಲಿಕ ಶಮನ ಸಿಗಬಹುದು. ಕಣ್ಣಿನಲ್ಲಿ ಆಗಾಗ್ಗೆ ತುರಿಕೆ ಅಥವಾ ಒಣಗಿದಂತೆ ಇದ್ದಲ್ಲಿ ಐಡ್ರಾಪ್ಗಳನ್ನು ಬಳಸುವುದು ಉತ್ತಮ ಮತ್ತು ಉಜ್ಜುವ ಬದಲಾಗಿ ಕಣ್ಣಿನ ತಜ್ಞರನ್ನು ಕಾಣಬೇಕು.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News