ಪಾಡ್ಕಾಸ್ಟ್ ನಲ್ಲಿ ದೀಪಿಂದರ್ ಗೋಯಲ್ ಧರಿಸಿದ ʼTempleʼ ಬಗ್ಗೆ ವ್ಯಾಪಕ ಚರ್ಚೆ? ಏನಿದು ‘Temple’?; ಇಲ್ಲಿದೆ ಮಾಹಿತಿ…
ದೀಪಿಂದರ್ ಗೋಯಲ್ | Photo Credit : X \ @deepigoyal
ಸದ್ಯದ ಮಟ್ಟಿಗೆ ಟೆಂಪಲ್ ಎನ್ನುವ ಸಾಧನ ಚರ್ಚೆಯ ಹಂತದಲ್ಲಿದೆಯೇ ವಿನಾ ಬಳಕೆದಾರರ ಗಜೆಟ್ ಆಗಿ ಪರಿವರ್ತನೆಗೊಂಡಿಲ್ಲ. ಇದು ವಾಣಿಜ್ಯ ಆರೋಗ್ಯ ಸಾಧನವಾಗಿ ಹೊರಬರುತ್ತದೆಯೇ ಅಥವಾ ಸಂಶೋಧನೆಯ ಸಾಧನವಾಗಿಯೇ ಉಳಿಯುತ್ತದೆಯೇ ಎನ್ನುವುದನ್ನು ಕಾದುನೋಡಬೇಕಿದೆ.
ಝೊಮ್ಯಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಇತ್ತೀಚೆಗೆ ಜನಪ್ರಿಯ ಪಾಡ್ಕಾಸ್ಟ್ ಒಂದರಲ್ಲಿ ಭಾಗವಹಿಸುವಾಗ ಮೆದುಳು ಮೇಲ್ವಿಚಾರಣೆ ಮಾಡುವ ಸಾಧನವೊಂದನ್ನು ಧರಿಸಿದ್ದರು. ‘ಟೆಂಪಲ್’ ಎಂಬ ಹೆಸರಿನ ಈ ಸಾಧನ ಹೇಗೆ ಮಿದುಳಿಗೆ ರಕ್ತದ ಹರಿವನ್ನು ಪತ್ತೆಹಚ್ಚುತ್ತದೆ ಎಂದು ಕಾರ್ಯಕ್ರಮದಲ್ಲಿ ಅವರು ವಿವರಿಸಿದ ನಂತರ ಆನ್ಲೈನ್ನಲ್ಲಿ ಆ ಬಗ್ಗೆ ಮೀಮ್ಗಳು ಮತ್ತು ಚರ್ಚೆಗಳು ನಡೆದಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಇದನ್ನು ಚ್ಯೂಯಿಂಗ್ ಗಮ್ ಎಂದು ಕರೆದರೆ, ಇನ್ನು ಕೆಲವರು ಬಾಹ್ಯ ಪೆನ್ಡ್ರೈವ್ ಎಂದರು. ಇನ್ನು ಕೆಲವರು ಅದನ್ನು ಚಾರ್ಜ್ ಮಾಡುವ ಪ್ಯಾಡ್ ಎಂದು ಕರೆದಿದ್ದಾರೆ. ಆದರೆ ನಿಜವಾಗಿಯೂ ಈ ಸಾಧನ ಏನು ಎನ್ನುವುದು ಕುತೂಹಲಕಾರಿಯಾಗಿದೆ. ಇದೊಂದು ಪ್ರಾಯೋಗಿಕ ಸಾಧನ. ಮೆದುಳಿಗೆ ರಕ್ತದ ಹರಿವನ್ನು ನೈಜ ರೀತಿಯಲ್ಲಿ ಪತ್ತೆ ಮಾಡುವ ಸಾಧನ.
ವೈಜ್ಞಾನಿಕವಾಗಿ ನರವ್ಯೂಹದ ಆರೋಗ್ಯ ಮತ್ತು ಮುಪ್ಪಿಗೆ ಸಂಬಂಧಿಸಿ ಮೆದುಳಿಗೆ ರಕ್ತದ ಹರಿವು ಅತಿ ಮುಖ್ಯ ಸಂಕೇತ ಎಂದು ಕಾಣಲಾಗುತ್ತಿದೆ. ಈ ಕುರಿತ ದತ್ತಾಂಶವಿದ್ದರೆ ಸಂಶೋಧಕರಿಗೆ ಮುಪ್ಪು ಆವರಿಸುತ್ತಿದ್ದಂತೆ ನಮ್ಮ ತಲೆಯ ಒಳಗೆ ಏನಾಗುತ್ತಿದೆ ಎನ್ನುವುದನ್ನು ಅರಿತುಕೊಳ್ಳಲು ಉತ್ತಮ ವಿವರ ಸಿಕ್ಕಂತಾಗುತ್ತದೆ.
ದೀಪಿಂದರ್ ಇದನ್ನು ಕೇವಲ ಪಾಡ್ಕಾಸ್ಟ್ ಸಂದರ್ಭದಲ್ಲಿ ಮಾತ್ರ ಬಳಸಿಲ್ಲ. ಕಳೆದೊಂದು ವರ್ಷದಿಂದ ಅವರು ಸ್ವತಃ ಈ ಸಾಧನವನ್ನು ಧರಿಸಿ ಓಡಾಡುತ್ತಿದ್ದಾರೆ ಮತ್ತು ಪ್ರಾಯೋಗಿಕ ಅಧ್ಯಯನದಲ್ಲಿ ನೆರವಾಗುತ್ತಿದ್ದಾರೆ. ಗ್ರಾವಿಟಿ ಏಜಿಂಗ್ ಹೈಪೊಥಿಸಿಸ್ ಎನ್ನುವ ಅಧ್ಯಯನದ ಸಂದರ್ಭದಲ್ಲಿ ಅವರಿಗೆ ‘ಟೆಂಪಲ್’ ಎನ್ನುವ ಈ ಸಾಧನದ ಪರಿಚಯವಾಯಿತು. ಗ್ರಾವಿಟಿ ಏಜಿಂಗ್ ಹೈಪೊಥಿಸಿಸ್ ಅಧ್ಯಯನದಲ್ಲಿ ರಕ್ತದ ಹರಿವು ಮತ್ತು ಮುಪ್ಪಿನ ಮೇಲೆ ಗುರುತ್ವದ ದೀರ್ಘಕಾಲೀನ ಪರಿಣಾಮಗಳ ಕುರಿತು ಗಮನಿಸಲಾಗುತ್ತದೆ.
ಟೆಂಪಲ್’ ಎನ್ನುವ ಸಾಧನದ ಅಧ್ಯಯನ ಮೇಲೆ ವೈಯಕ್ತಿಕವಾಗಿ ದೀಪಿಂದರ್ ಹೂಡಿಕೆ ಮಾಡಿದ್ದಾರೆ. ಈ ಅಧ್ಯಯನವನ್ನು ಪ್ರಾಯೋಜಿಸಲು ಅವರು ರೂ. 225 ಕೋಟಿ ಹೂಡಿಕೆ ಮಾಡಿದ್ದಾರೆ. ಇದು ಝೊಮ್ಯಾಟೊ ಉತ್ಪನ್ನವಲ್ಲ. ಟೆಂಪಲ್ ಎನ್ನುವ ಸಾಧನ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ. ಇದನ್ನು ಎಟರ್ನಲ್ (ಝೊಮ್ಯಾಟೊದ ಮೂಲ ಸಂಸ್ಥೆ) ಖಾಸಗಿಯಾಗಿ ಸಂಶೋಧನೆ ನಡೆಸುತ್ತಿದೆ. ಸದ್ಯ ಅದು ಸಾರ್ವಜನಿಕವಾಗಿ ಅಥವಾ ಮಾರಾಟಕ್ಕೆ ಲಭ್ಯವಿಲ್ಲ. ಆದರೆ ಅಂತರ್ಜಾಲದಲ್ಲಿ ಈ ಸಾಧನದ ಬಗ್ಗೆ ಸಾಕಷ್ಟು ಕುತೂಹಲ ವ್ಯಕ್ತವಾಗಿದೆ.
ತಜ್ಞರು ಹೇಳುವ ಪ್ರಕಾರ ಇಂತಹ ಮೆದುಳು ಆರೋಗ್ಯವನ್ನು ಸೆನ್ಸರ್ ಮಾಡುವ ಸಾಧನಗಳು ಸಕ್ರಿಯ ಅಧ್ಯಯನದ ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ಪ್ರಸ್ತುತ ಅಂತಹ ಸಾಧನಗಳು ಪ್ರಯೋಗಾಲಯಗಳು ಅಥವಾ ಆರಂಭಿಕ ಟ್ರಯಲ್ ಹಂತದಲ್ಲಿ ಮಾತ್ರ ಇವೆ. ನೈಜ ಜೀವನದಲ್ಲಿ ಅದರ ಬಳಕೆ ಕಡಿಮೆಯೇ ಇದೆ. ಪ್ರಸ್ತುತ ಹಂತದಲ್ಲಿ ಟೆಂಪಲ್ ಕೇವಲ ಸಂಶೋಧನಾ ವಲಯದಲ್ಲಿ ಮಾತ್ರವೇ ಇದೆ.
ಗೋಯಲ್ ಅವರು ತಮ್ಮ ಗ್ರಾವಿಟಿ ಏಜಿಂಗ್ ಕಲ್ಪನೆಯ ಬಗ್ಗೆ ಆನ್ಲೈನ್ನಲ್ಲಿ ಸಾಕಷ್ಟು ವಿವರಗಳನ್ನು ಹಂಚಿಕೊಂಡಿದ್ದಾರೆ. “ದಶಕಗಳಲ್ಲಿ ಗುರುತ್ವವು ಮೆದುಳಿಗೆ ರಕ್ತದ ಹರಿವನ್ನು ನಿಧಾನಗೊಳಿಸಲಿದೆ. ನಾವು ಮುಪ್ಪಾಗುವುದರ ಮೇಲೆ ಪ್ರಭಾವ ಬೀರಲಿದೆ” ಎಂದು ಅವರು ಹೇಳಿದ್ದಾರೆ. ಈ ವಿವರಗಳು ಆನ್ಲೈನ್ನಲ್ಲಿ ಸಾಧನದ ಕುರಿತಂತೆ ಕುತೂಹಲ ಮತ್ತು ಅನುಮಾನಗಳಿಗೆ ಕಾರಣವಾಗಿದೆ. ಕೆಲವು ವಿಶ್ಲೇಷಕರು ಗುರುತ್ವ ಮಾತ್ರವೇ ಮುಪ್ಪಿನ ಮೇಲೆ ಹೇಗೆ ಮತ್ತು ಎಷ್ಟರಮಟ್ಟಿಗೆ ಪ್ರಭಾವ ಬೀರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಸದ್ಯದ ಮಟ್ಟಿಗೆ ಟೆಂಪಲ್ ಎನ್ನುವ ಸಾಧನ ಚರ್ಚೆಯ ಹಂತದಲ್ಲಿದೆಯೇ ವಿನಾ ಬಳಕೆದಾರರ ಗಜೆಟ್ ಆಗಿ ಪರಿವರ್ತನೆಗೊಂಡಿಲ್ಲ. ಇದು ವಾಣಿಜ್ಯ ಆರೋಗ್ಯ ಸಾಧನವಾಗಿ ಹೊರಬರುತ್ತದೆಯೇ ಅಥವಾ ಸಂಶೋಧನೆಯ ಸಾಧನವಾಗಿಯೇ ಉಳಿಯುತ್ತದೆಯೇ ಎನ್ನುವುದನ್ನು ಕಾದುನೋಡಬೇಕಿದೆ.
ಕೃಪೆ: indiatoday.in