ಇದೀಗ 10 ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಮನೆಕೆಲಸದಾಕೆ!; ಅನುಕೂಲಕರ ವ್ಯವಸ್ಥೆ ಎಷ್ಟು ಶಾಶ್ವತ?
ಸಾಂದರ್ಭಿಕ ಚಿತ್ರ | Photo Credit : freepik
ಭಾರತದ ನಗರ ಪ್ರದೇಶಗಳಲ್ಲಿ ಅನುಕೂಲ-ಚಾಲಿತ ಸೇವೆಗಳು ಹೊಸ ಅಲೆಯನ್ನೇ ಸೃಷ್ಟಿಸುತ್ತಿವೆ. ಇದೀಗ 10 ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಮನೆಕೆಲಸದಾಕೆ ಅಥವಾ ಪರಿಚಾರಕರು ಬರುವ ದಿನಗಳೂ ಬಂದಿವೆ. ಗ್ರಾಹಕರಿಗೆ ಕಡಿಮೆ ಬೆಲೆಗಳಲ್ಲಿ ಮನೆಕೆಲಸದವರು ಸಿಗುತ್ತಾರೆ. ಕಾರ್ಮಿಕರಿಗೆ ಉತ್ತಮ ವೇತನದ ಪ್ರಯೋಜನ ಸಿಗುತ್ತಿದೆ. ಆದರೆ ಹೀಗೆ 10 ನಿಮಿಷಗಳಲ್ಲಿ ಮನೆಬಾಗಿಲಿಗೆ ಕೆಲಸದಾಕೆ ಬರುವ ವ್ಯವಸ್ಥೆ ದೀರ್ಘಕಾಲೀನವಾಗಿ ಎಷ್ಟು ಸುಸ್ಥಿರ ಎನ್ನುವ ಪ್ರಶ್ನೆಯೂ ಏಳುತ್ತಿದೆ.
ಏರುತ್ತಿರುವ ಮನೆಕೆಲಸದಾಕೆಯ ಅಗತ್ಯ
ಈ ಮೊದಲು ನೆರೆಹೊರೆಯವರ ನೆರವು ಮತ್ತು ದೂರವಾಣಿ ಕರೆಗಳಿಂದ ಸಿಗುತ್ತಿದ್ದ ಮನೆಕೆಲಸದಾಕೆಯ ನೆರವು ಇದೀಗ ಮೊಬೈಲ್ ಪರದೆಯ ಮೇಲೆ ಒಂದೆರಡು ಕ್ಲಿಕ್ನಿಂದ ಸಿಗುತ್ತಿದೆ. ಸ್ನ್ಯಾಬಿಟ್, ಪ್ರೊಂಟೊ, ಅರ್ಬನ್ ಕಂಪನಿಯ ಇನ್ಸ್ಟಾಹೆಲ್ಪ್ ಮತ್ತು ಬ್ರೂಮೀಸ್ ಮೊದಲಾದ ಕಂಪನಿಗಳು ದೆಹಲಿ-ಎನ್ಸಿಆರ್, ಮುಂಬೈ, ಬೆಂಗಳೂರು ಮತ್ತು ಪುಣೆಗಳಲ್ಲಿ ಮನೆಕೆಲಸದವರನ್ನು ಸರಬರಾಜು ಮಾಡುವ ಪ್ರಮುಖ ಕಂಪನಿಗಳಾಗಿ ಬೆಳೆದಿವೆ.
ಕಳೆದ ಆಗಸ್ಟ್ನಲ್ಲಿ 1 ಲಕ್ಷ ಆರ್ಡರ್ ಪಡೆದಿದ್ದ ಸ್ನ್ಯಾಬಿಟ್ ಇದೀಗ ಫೆಬ್ರವರಿಗಾಗುವಾಗ 8.5 ಲಕ್ಷ ಆರ್ಡರ್ಗಳನ್ನು ಪಡೆದಿದೆ. ಕಳೆದ ವರ್ಷ ಮಾರ್ಚ್ನಲ್ಲಿ ಆರಂಭವಾದ ಅರ್ಬನ್ ಕಂಪನಿಯ ಇನ್ಸ್ಟಾ ಹೆಲ್ಪ್ ಇದೀಗ ನಿತ್ಯವೂ 50,000 ಕ್ಕೂ ಮೀರಿ ಆರ್ಡರ್ಗಳನ್ನು ನಿಭಾಯಿಸುತ್ತಿದೆ. ಪಾರ್ಟಿಯ ನಂತರ ಮನೆ ಸ್ವಚ್ಛಗೊಳಿಸುವುದರಿಂದ ಆರಂಭಿಸಿ ರಾತ್ರಿ ಭೋಜನಕ್ಕೆ ತರಕಾರಿ ಸಿದ್ಧಪಡಿಸುವವರೆಗೂ ನೆರವುಗಳನ್ನು ಪಡೆಯಲಾಗುತ್ತಿದೆ. ಇದೀಗ ಆಹಾರ ಡೆಲಿವರಿ ಪಡೆಯಲು, ಸಾಗಾಟದ ವಾಹನಕ್ಕೆ ಮತ್ತು ತಕ್ಷಣ ಸರಕುಗಳನ್ನು ತರಿಸಿಕೊಳ್ಳುವಂತಹ ಈ ಆ್ಯಪ್ಗಳು ಇದೀಗ ನಗರ ಜೀವನದ ಡಿಜಿಟಲ್ ಅಗತ್ಯಗಳಾಗಿ ಪರಿವರ್ತನೆಯಾಗಿವೆ.
ಅಗ್ಗ ಮತ್ತು ಅನುಕೂಲಕರ
ಆ್ಯಪ್ ಗಳ ಸೇವೆಗಳ ಬೆಲೆಗಳು ಬಹಳ ಕಡಿಮೆ ಇರುತ್ತವೆ. ಅರ್ಬನ್ ಕಂಪನಿ ತರಬೇತಿ ನೀಡಿದ ವೃತ್ತಿಪರರ ನೆರವನ್ನು ಗಂಟೆಗೆ ರೂ 100 ಬೆಲೆಗೆ ಪಡೆಯಬಹುದಾಗಿದೆ. ಸ್ನ್ಯಾಬಿಟ್ ಪ್ಯಾಕೇಜ್ ರೀತಿಯಲ್ಲಿ ನೆರವನ್ನು ನೀಡುತ್ತಿದೆ. ಮೂರು ಭೇಟಿಗಳಿಗೆ ರೂ 149 ತೆತ್ತರೆ ಸಾಕು. ಅಂದರೆ ಪ್ರತಿ ಗಂಟೆಗೆ ರೂ 50ರಂತೆ ನೆರವು ಸಿಗುತ್ತದೆ. ಈ ಸೇವೆ ಪಡೆಯುವ ಪ್ರಕ್ರಿಯೆ ಬಹಳ ಸುಲಭವಾಗಿದೆ. ಆ್ಯಪ್ ಡೌನ್ಲೋಡ್ ಮಾಡಿ. ಸೇವೆಯ ಬೇಡಿಕೆ ಇಡಿ. ಎಷ್ಟು ಗಂಟೆಗಳ ನೆರವು ಬೇಕೆಂದು ಆರಿಸಿಕೊಳ್ಳುವುದು ಮತ್ತು ತಕ್ಷಣವೇ ನೆರವು ಪಡೆಯುವುದು.
ಉತ್ತಮ ವೇತನ ಮತ್ತು ಗೌರವ
ಬಹುತೇಕ ಮಹಿಳಾ ಕಾರ್ಮಿಕರು ಈ ಮಾದರಿಯಿಂದ ಬಹಳಷ್ಟು ಲಾಭ ಮಾಡಿಕೊಳ್ಳುತ್ತಿದ್ದಾರೆ. ಕೆಲವರಿಗೆ ತಿಂಗಳಿಗೆ 22,000 – 30,000 ರೂ. ನಡುವೆ ಸ್ಥಿರ ವೇತನ ಸಿಗುತ್ತದೆ. ಕೆಲಸದ ವೇಳೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು. ಹೀಗಾಗಿ ಸ್ವಂತ ಕೌಟುಂಬಿಕ ಜವಾಬ್ದಾರಿಗಳು ಮುಗಿದ ನಂತರ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತದೆ. ರೆಫರಲ್ ಬೋನಸ್ಗಳು, ಆರೋಗ್ಯ ವಿಮೆ ಮತ್ತು ಎಸ್ಒಎಸ್ ತುರ್ತು ಸುರಕ್ಷಾ ಫೀಚರ್ಗಳನ್ನೂ ನೀಡಲಾಗಿದೆ. ಸಮವಸ್ತ್ರದಲ್ಲಿ ಕಾರ್ಮಿಕರಾಗಿ ಮನೆಗಳಿಗೆ ಹೋದರೆ ಗೌರವ ಸಿಗುತ್ತದೆ. ಪಾರಂಪರಿಕ ಮನೆಕೆಲಸದಾಕೆಯ ವ್ಯವಸ್ಥೆಯಿಂದ ಬಿಡುಗಡೆ ದೊರೆತಿದೆ ಎನ್ನುತ್ತಾರೆ ಕಾರ್ಮಿಕರು.
ಔದ್ಯಮಿಕ ಸವಾಲು
ಬೇಡಿಕೆ ಇದ್ದ ಮಾತ್ರಕ್ಕೆ ಲಾಭವಿದೆ ಎಂದುಕೊಳ್ಳುವ ಹಾಗಿಲ್ಲ. ಅರ್ಬನ್ ಕಂಪನಿ ತನ್ನ ಇನ್ಸ್ಟಾ ಹೆಲ್ಪ್ ವರ್ಟಿಕಲ್ನಲ್ಲಿ EBITDA (Earnings Before Interest, Taxes, Depreciation, and Amortisation) ನಷ್ಟವಾಗಿ 61 ಕೋಟಿ ರೂ. ಅನ್ನು ತೋರಿಸಿದೆ. ಉತ್ತಮ ವೇತನ ಮತ್ತು ಕಡಿಮೆ ಗ್ರಾಹಕ ಬೆಲೆಯಿಂದಾಗಿ ಹೆಚ್ಚು ಲಾಭವಾಗುತ್ತಿಲ್ಲ ಎಂದು ಹೇಳಲಾಗಿದೆ. ಮುಖ್ಯವಾಗಿ ಹೂಡಿಕೆದಾರರ ಹಣದಿಂದಲೇ ಕಂಪನಿ ಸ್ಥಿರತೆ ಕಾಣುತ್ತಿದೆ. ಸ್ನಾಬಿಟ್ ತನ್ನ ಹೂಡಿಕೆದಾರರಾದ ಬರ್ಟ್ಲ್ಸ್ಮನ್ ಇಂಡಿಯಾ ಮತ್ತು ಲೈಟ್ಸ್ಪೀಡ್ನಿಂದ 56 ದಶಲಕ್ಷ ಡಾಲರ್ಗಳನ್ನು ಪಡೆದಿದೆ. ಪ್ರೊನ್ಟೊ ಆರಂಭವಾದ ಒಂದು ವರ್ಷದೊಳಗೆ 13 ದಶಲಕ್ಷ ಡಾಲರ್ಗಳಷ್ಟು ಹೂಡಿಕೆ ಪಡೆದಿದೆ. ಹೀಗಾಗಿ ಉದ್ಯಮ ತಜ್ಞರು ಹೇಳುವ ಪ್ರಕಾರ ಒಮ್ಮೆ ಬೇಡಿಕೆ ಸ್ಥಿರವಾದ ನಂತರ ಉತ್ತೇಜಕಗಳು ಕಡಿಮೆಯಾಗಲಿವೆ ಮತ್ತು ಕ್ಯಾಬ್ ಚಾಲಕರು ಮತ್ತು ಡೆಲಿವರಿ ವೇದಿಕೆಯ ಮಂದಿ ಎದುರಿಸುವ ಸಮಸ್ಯೆಗಳು ಈ ಉದ್ಯಮದಲ್ಲೂ ಕಂಡುಬರಲಿದೆ.
ಮುಂದೇನು ಕಾದಿದೆ?
ಪ್ರಸ್ತುತ ಮಾದರಿ ಗ್ರಾಹಕರು ಮತ್ತು ಕಾರ್ಮಿಕರಿಗೆ ಬಹಳ ಉತ್ತಮವಾಗಿದೆ. ಆದರೆ ಇದೇ ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ. ನಿಧಾನವಾಗಿ ವೇದಿಕೆಗಳು ಸ್ಥಿರವಾದ ವೇತನಗಳು ಮತ್ತು ಬೋನಸ್ಗಳನ್ನು ಕಡಿಮೆ ಮಾಡುವ ಮೂಲಕ ಕಾರ್ಮಿಕರ ವೇತನ ಇಳಿಸಬಹುದು. ಅರ್ಬನ್ ಕಂಪನಿಯ ಬೆಲೆಗಳಲ್ಲಿ ಈಗಾಗಲೇ ಶೇ 60ರಷ್ಟು ರಿಯಾಯಿತಿ ನೀಡಿರುವುದರಿಂದ ಗ್ರಾಹಕರ ಬೆಲೆಗಳೂ ಏರಲಿವೆ. ಬೆಲೆಗಳು ಹೆಚ್ಚಾದ ನಂತರ ಗ್ರಾಹಕರು ಆನ್ಲೈನ್ ಕೆಲಸದಾಕೆಯನ್ನು ಬಳಸುವುದನ್ನು ಮುಂದುವರಿಸುತ್ತಾರೆಯೇ ಅಥವಾ ಆಫ್ಲೈನ್ ಮಾರುಕಟ್ಟೆ ಮತ್ತೆ ಪ್ರಾಬಲ್ಯ ಸಾಧಿಸುವುದೇ ಎನ್ನುವ ಪ್ರಶ್ನೆಯೂ ಮುಂದಿದೆ.
ಭಾರತದ 10 ನಿಮಿಷಗಳ ಮನೆ ಸಹಾಯ ಅಪ್ಲಿಕೇಶನ್ಗಳು ಅನುಕೂಲತೆಯ ಮುಂದಿನ ವೇದಿಕೆಯನ್ನು ಪ್ರತಿನಿಧಿಸುತ್ತವೆ. ನಗರ ಭಾರತದ ಮನೆಗಳು ಮನೆಗೆಲಸದವರ ನೆರವಿನಿಂದ ನಡೆಯುತ್ತವೆ. ಇದೀಗ ಗ್ರಾಹಕರು ಮತ್ತು ಕಾರ್ಮಿಕರು ಅಭೂತಪೂರ್ವ ಲಾಭಗಳನ್ನು ಕಾಣುತ್ತಿದ್ದಾರೆ. ಆದರೆ ಗಿಗ್ ವೇದಿಕೆಗಳ ಇತಿಹಾಸ ತೋರಿಸಿರುವಂತೆ ಲಭ್ಯತೆ, ನ್ಯಾಯೋಚಿತ ದರ ಮತ್ತು ಲಾಭದ ನಡುವಿನ ಸಮತೋಲನವು ಈಗಿನ ಕ್ರಾಂತಿಕಾರಿ ವ್ಯವಸ್ಥೆಯೇ ಅಂತಿಮವಾಗಲಿದೆಯೇ ಅಥವಾ ಇದು ಅಲ್ಪಕಾಲೀನ ಭ್ರಮೆಯ ಲೋಕವೇ ಎನ್ನುವುದನ್ನು ನಿರ್ಧರಿಸಲಿದೆ.
ಕೃಪೆ: indiatoday.in