ಮುಖ್ಯಮಂತ್ರಿ ಆಯ್ಕೆಯಲ್ಲಿ ಜಾತಿ ಪ್ರಭಾವ ಎಷ್ಟು?
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆ ಕಾವೇರಿರುವಾಗ, ಜಾತಿ ರಾಜಕಾರಣದ ಎಲ್ಲ ಮುಖಗಳು ಮತ್ತು ಎಲ್ಲ ಸಾಧ್ಯತೆಗಳು ಮತ್ತೊಮ್ಮೆ ಸ್ಪಷ್ಟವಾಗಿ ಗೋಚರಿಸುತ್ತಿವೆ. ಸಿಎಂ ಹುದ್ದೆ ವಿಷಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಕಿತ್ತಾಟ ಈಗ ಬಹಿರಂಗ ಸತ್ಯ. ಶನಿವಾರ ಇಬ್ಬರೂ ಒಟ್ಟಿಗೆ ಕೂತು ಉಪಾಹಾರ ಸೇವಿಸಿ, ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ, ನಾವಿಬ್ಬರೂ ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದು ಹೇಳಿದ್ದಾರೆ. ಆದರೆ ಈ ಬೆಳವಣಿಗೆಯಲ್ಲಿ, ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿ.ಕೆ. ಶಿವಕುಮಾರ್ ಅವರನ್ನು ಸಿಎಂ ಮಾಡಬೇಕೆನ್ನುವುದು ಇಡೀ ಒಕ್ಕಲಿಗ ಸಮುದಾಯದ ಒತ್ತಾಯವೆಂಬಂತೆ ಬಿಂಬಿತವಾಗುತ್ತಿದೆ. ಇದೇ ಹೊತ್ತಲ್ಲಿ ಸಿದ್ದರಾಮಯ್ಯ ಪರವೂ ಅಹಿಂದದ ತಾಕತ್ತಿನ ಪ್ರದರ್ಶನವಾಗುತ್ತಿದೆ. ಇದು ಈಗ ಸಿದ್ದರಾಮಯ್ಯ ವರ್ಸಸ್ ಡಿ.ಕೆ. ಶಿವಕುಮಾರ್ ಆಗಿ ಮಾತ್ರ ಉಳಿದಿಲ್ಲ. ಬದಲಾಗಿ ಇಬ್ಬರನ್ನೂ ಬೆಂಬಲಿಸುವ ಜಾತಿಗಳ ನಡುವೆ, ಸಂಬಂಧಿತ ಸಮುದಾಯಗಳ ಮಠಾಧೀಶರ ನಡುವೆ ಸಂಘರ್ಷವನ್ನು ಏರ್ಪಡಿಸಿದೆ.
ಭಾರತದ ಯಾವುದೇ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕದಲ್ಲಿನ ಜಾತಿ ರಾಜಕಾರಣವೂ ಅಸಾಧಾರಣವಾದದ್ದು. ಈವರೆಗಿನ ಸಿಎಂ ಹಾಗೂ ಸಚಿವರ ಆಯ್ಕೆಯಲ್ಲಿ ನಡೆಯುತ್ತಾ ಬಂದಿರುವ ಜಾತಿ ರಾಜಕೀಯ, ಅದಕ್ಕೆ ತಕ್ಕಂತೆ ಪಕ್ಷಗಳು ಅನುಸರಿಸಿರುವ ನೀತಿಗಳು, ಆ ಪಕ್ಷಗಳು ತೆತ್ತಿರುವ ಬೆಲೆ ಇವೆಲ್ಲವೂ ಅಸಕ್ತಿದಾಯಕ ವಿಚಾರಗಳು. ರಾಜಕೀಯದಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳ ಪ್ರಾಬಲ್ಯ ಒಂದೆಡೆ ಇರುವಾಗಲೇ, ಇತ್ತೀಚಿನ ದಶಕಗಳಲ್ಲಿ ಬೆಳೆದ ಅಹಿಂದ ಪ್ರಭಾವವೂ ಕಡಿಮೆಯಿಲ್ಲ. ದಲಿತರು, ಅಲ್ಪಸಂಖ್ಯಾತರು ದೊಡ್ಡ ಪ್ರಮಾಣದಲ್ಲಿದ್ದರೂ, ಅದನ್ನು ಮರೆಮಾಚುವ, ಅವರ ಸಮುದಾಯದ ಸಿಎಂ ಎಂಬುದನ್ನು ಮರೀಚಿಕೆಯಾಗಿಸಿರುವ ಪ್ರಭಾವವೊಂದು ಇಡೀ ರಾಜಕೀಯವನ್ನು ಆಳುತ್ತಿದೆ.
ಭಾರತದ ರಾಜಕಾರಣದಲ್ಲಿ ಜಾತಿ ಮುಖ್ಯ ಪಾತ್ರ ವಹಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಜಾತಿ ಸಮೀಕರಣಗಳ ಮೇಲೆಯೇ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ. ಅಲ್ಲಿಂದಲೇ ಶುರುವಾಗುವ ಲೆಕ್ಕಾಚಾರ, ಆಯಾ ಸಮುದಾಯಗಳನ್ನು ಓಲೈಸಬೇಕಿರುವ ಅನಿವಾರ್ಯತೆಯ ಹಳಿಯ ಮೇಲೆಯೇ ಮಂತ್ರಿ ಸ್ಥಾನಗಳ ಹಂಚಿಕೆವರೆಗೂ ಸಾಗುತ್ತದೆ. ಈವರೆಗೂ ಕರ್ನಾಟಕದಲ್ಲಿ 23 ನಾಯಕರು ಮುಖ್ಯಮಂತ್ರಿ ಹುದ್ದೆಗೆ ಏರಿದ್ದಾರೆ. ಕಾಂಗ್ರೆಸ್, ಜನತಾ ಪಕ್ಷ, ಜೆಡಿಎಸ್, ಬಿಜೆಪಿ ರಾಜ್ಯದಲ್ಲಿ ಸರಕಾರ ರಚನೆ ಮಾಡಿವೆ. ಇದರಲ್ಲಿ ಹೆಚ್ಚಿನ ಬಾರಿ ರಾಜ್ಯವನ್ನಾಳಿರುವುದು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರಿದವರು.
ಒಂದು ಉಲ್ಲೇಖದ ಪ್ರಕಾರ, ರಾಜ್ಯದ ಜನಸಂಖ್ಯೆಯ ಶೇ. 14ರಷ್ಟಿರುವ ಲಿಂಗಾಯತರು ಸಿಎಂ ಹುದ್ದೆಯಲ್ಲಿ ಶೇ. 45.5ರಷ್ಟು ಪ್ರಾತಿನಿಧ್ಯ ಪಡೆದಿದ್ದಾರೆ. ಶೇ. 11ರಷ್ಟಿರುವ ಒಕ್ಕಲಿಗರು ಶೇ. 33.3ರಷ್ಟು ಪ್ರಾತಿನಿಧ್ಯ ಪಡೆದಿದ್ದಾರೆ. ಶೇ. 45ರಷ್ಟಿರುವ ಹಿಂದುಳಿದ ವರ್ಗದವರು ಶೇ. 15.2ರಷ್ಟು ಪ್ರಾತಿನಿಧ್ಯ ಪಡೆದಿದ್ದಾರೆ. ಶೇ. 3ರಷ್ಟಿರುವ ಬ್ರಾಹ್ಮಣರು ಶೇ. 6.1ರಷ್ಟು ಪ್ರಾತಿನಿಧ್ಯ ಪಡೆದಿದ್ದಾರೆ. ಆದರೆ, ಶೇ. 17ರಷ್ಟಿರುವ ದಲಿತರು ಮತ್ತು ಶೇ. 12.6ರಷ್ಟಿರುವ ಮುಸ್ಲಿಮ್ ಸಮುದಾಯದಿಂದ ಈವರೆಗೆ ಯಾರೂ ಸಿಎಂ ಆಗಿಲ್ಲ.
23 ನಾಯಕರು 31 ಬಾರಿ ಮುಖ್ಯಮಂತ್ರಿಗಳಾಗಿದ್ದಾರೆ. ಲಿಂಗಾಯತ ಸಮುದಾಯದವರು 14 ಬಾರಿ, ಒಕ್ಕಲಿಗ ಸಮುದಾಯದವರು 8 ಬಾರಿ, ಒಬಿಸಿ ಸಮುದಾಯದವರು 6 ಬಾರಿ, ಬ್ರಾಹ್ಮಣ ಸಮುದಾಯದವರು 2 ಬಾರಿ ಮತ್ತು ರಜಪೂತ ಸಮುದಾಯದವರು ಒಂದು ಬಾರಿ ಸಿಎಂ ಆಗಿದ್ದಾರೆ.
1947ರ ಅಕ್ಟೋಬರ್ 25ರಂದು ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿ ಕೆ.ಸಿ. ರೆಡ್ಡಿ ಅಧಿಕಾರ ವಹಿಸಿಕೊಂಡರು. ಅವರು ಅಲ್ಲಿಂದ 1956ರವರೆಗೆ ಮುಖ್ಯಮಂತ್ರಿಯಾಗಿದ್ದರು. 1956ರಿಂದ 1971ರವರೆಗೆ ಸತತವಾಗಿ ರಾಜ್ಯವನ್ನು ಆಳಿದ್ದು ಲಿಂಗಾಯತ ಮುಖ್ಯಮಂತ್ರಿಗಳು. ಎಸ್. ನಿಜಲಿಂಗಪ್ಪ, ಬಿ.ಡಿ. ಜತ್ತಿ, ಎಸ್.ಆರ್. ಕಂಠಿ, ವೀರೇಂದ್ರ ಪಾಟೀಲ್ ಈ ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ್ದರು. 1973ರ ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾದ ಹೊತ್ತಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಒಬಿಸಿಯಲ್ಲಿ ಬರುವ ಅರಸು ಸಮುದಾಯದ ಡಿ. ದೇವರಾಜ ಅರಸು. 1972ರಲ್ಲಿ ಹುದ್ದೆಗೇರಿದ್ದ ಅವರು 1980ರವರೆಗೆ ಮುಖ್ಯಮಂತ್ರಿಯಾಗಿದ್ದರು. ರಾಮಕೃಷ್ಣ ಹೆಗಡೆ ಮತ್ತು ಆರ್. ಗುಂಡೂರಾವ್ ಕರ್ನಾಟಕವನ್ನು ಆಳಿದ ಬ್ರಾಹ್ಮಣ ಮುಖ್ಯಮಂತ್ರಿಗಳಾಗಿದ್ದಾರೆ. ಇನ್ನುಳಿದಂತೆ ದೇವಾಡಿಗ, ರಜಪೂತ, ಈಡಿಗ ಸಮುದಾಯದವರು ಒಂದೊಂದು ಬಾರಿ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಕುರುಬ ಸಮುದಾಯದ ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಎಸ್‌ಸಿ, ಎಸ್‌ಟಿ, ಮುಸ್ಲಿಮ್ ಮತ್ತು ಮಹಿಳಾ ಮುಖ್ಯಮಂತ್ರಿಯನ್ನು ರಾಜ್ಯ ಈವರೆಗೂ ಕಂಡಿಲ್ಲ.
ಮೈಸೂರು ಸಂಸ್ಥಾನದಲ್ಲಿ ಒಕ್ಕಲಿಗರದ್ದೇ ಆರಂಭಿಕ ಪ್ರಾಬಲ್ಯವಾಗಿತ್ತು. ಕೋಲಾರ ಜಿಲ್ಲೆಯವರಾದ, ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಒಕ್ಕಲಿಗ ಸಮುದಾಯದ ಕೆ.ಸಿ. ರೆಡ್ಡಿ ಬಳಿಕ, 1952ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗ ರಾಮನಗರ ಜಿಲ್ಲೆಯ ಒಕ್ಕಲಿಗ ಸಮುದಾಯದ ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಯಾದರು. ಆನಂತರ 1956ರ ಆಗಸ್ಟ್‌ನಿಂದ 1956ರ ಅಕ್ಟೋಬರ್‌ವರೆಗೆ ಶಿವಮೊಗ್ಗ ಜಿಲ್ಲೆಯ ಒಕ್ಕಲಿಗ ಸಮುದಾಯದ ಕಡಿದಾಳ್ ಮಂಜಪ್ಪನವರು ಮುಖ್ಯಮಂತ್ರಿಯಾದರು.
ರಾಜ್ಯದಲ್ಲಿ ಲಿಂಗಾಯತ ಮುಖ್ಯಮಂತ್ರಿಗಳ ಪರ್ವ ಶುರುವಾದದ್ದು 1956 ರಿಂದ. ಆ ವರ್ಷ ಕಾಂಗ್ರೆಸ್ ಬಳ್ಳಾರಿ ಜಿಲ್ಲೆಯ ಲಿಂಗಾಯತ ಸಮುದಾಯದ ಎಸ್. ನಿಜಲಿಂಗಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸಿತು. 1958ರಲ್ಲಿ ಬಾಗಲಕೋಟೆ ಜಿಲ್ಲೆಯ ಲಿಂಗಾಯತ ಸಮುದಾಯದ ಬಿ.ಡಿ. ಜತ್ತಿ ಸಿಎಂ ಆದರು. 1962ರ ನಂತರ ಮೂರು ತಿಂಗಳ ಅವಧಿಗೆ ಮುಖ್ಯಮಂತ್ರಿಯಾಗಿ ಬಾಗಲಕೋಟೆ ಜಿಲ್ಲೆಯ ಲಿಂಗಾಯತ ಸಮುದಾಯದ ಎಸ್.ಆರ್. ಕಂಠಿ ಆಯ್ಕೆಯಾದರು. 1962ರಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ನಿಜಲಿಂಗಪ್ಪನವರೇ ಮತ್ತೆ ಸಿಎಂ ಆದರು. 1968ರಲ್ಲಿ ಕಲಬುರಗಿ ಜಿಲ್ಲೆಯ ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲ್ ಸಿಎಂ ಆದರು. ಹಿಂದುಳಿದ ಸಮುದಾಯದ ಮೊದಲ ಮುಖ್ಯಮಂತ್ರಿ, ಅಂದಿನ ಪ್ರಮುಖ ಕಾಂಗ್ರೆಸ್ ರಾಜಕಾರಣಿ ಮೈಸೂರು ಜಿಲ್ಲೆಯ ಹುಣಸೂರಿನ ದೇವರಾಜ ಅರಸು. ಹಿಂದುಳಿದ ಸಮುದಾಯದವರಿಗೆ ಟಿಕೆಟ್ ನೀಡಿ ಗೆಲ್ಲಿಸಿ, ಇಡೀ ಸಮುದಾಯದ ರಾಜಕೀಯ ಪ್ರಾತಿನಿಧ್ಯ ದೊಡ್ಡ ಪ್ರಮಾಣದಲ್ಲಿ ಕಾಣಿಸಲು ಕಾರಣರಾದವರೂ ಅರಸು ಅವರೇ ಆಗಿದ್ದಾರೆ. ಅವರು ಅತಿ ದೀರ್ಘಾವಧಿಗೆ ಸಿಎಂ ಹುದ್ದೆಯಲ್ಲಿದ್ದ ನಾಯಕರೂ ಹೌದು. 1980ರಲ್ಲಿ ಕಾಂಗ್ರೆಸ್ ಕೊಡಗು ಜಿಲ್ಲೆಯ ಬ್ರಾಹ್ಮಣ ಸಮುದಾಯದ ಆರ್. ಗುಂಡೂರಾವ್ ಅವರನ್ನು ಕಾಂಗ್ರೆಸ್ ಮುಖ್ಯಮಂತ್ರಿಯನ್ನಾಗಿ ಮಾಡಿತು. 1983ರಲ್ಲಿ ಜನತಾ ಪಕ್ಷ 95 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ, ಬಿಜೆಪಿ ಬೆಂಬಲದೊಂದಿಗೆ ರಾಜ್ಯದಲ್ಲಿ ಮೊದಲ ಕಾಂಗ್ರೆಸೇತರ ಸರಕಾರ ರಚಿಸಿದಾಗ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಬ್ರಾಹ್ಮಣ ಸಮುದಾಯದ ರಾಮಕೃಷ್ಣ ಹೆಗಡೆ ಸಿಎಂ ಆಗುತ್ತಾರೆ. 1988ರಲ್ಲಿ ಹಾವೇರಿ ಜಿಲ್ಲೆಯ ಲಿಂಗಾಯತ ಸಮುದಾಯದ ಎಸ್.ಆರ್. ಬೊಮ್ಮಾಯಿ ಮುಖ್ಯಮಂತ್ರಿಯಾದರು. 1989ರ ಚುನಾವಣೆಯಲ್ಲಿ ಜನತಾ ಪಕ್ಷ ಸೋತು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗ ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲ್ ಸಿಎಂ ಆದರು. ಒಂದೇ ವರ್ಷದಲ್ಲಿ ಅವರನ್ನು ಕೆಳಗಿಳಿಸಿದ ಬಳಿಕ ಶಿವಮೊಗ್ಗದ ಹಿಂದುಳಿದ ವರ್ಗಕ್ಕೆ ಸೇರಿದ ಈಡಿಗ ಸಮುದಾಯದ ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾದರು. ಮತ್ತೆ ಅವಧಿಗೆ ಮೊದಲೇ 1992ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಿಂದುಳಿದ ವರ್ಗದ ದೇವಾಡಿಗ ಸಮುದಾಯದ ವೀರಪ್ಪ ಮೊಯ್ಲಿಯವರು ಆ ಹುದ್ದೆಗೆ ಬರುತ್ತಾರೆ. 1994ರ ಚುನಾವಣೆಯಲ್ಲಿ ಜನತಾದಳ ಸರಳ ಬಹುಮತ ಪಡೆದಾಗ ಹಾಸನದ ಒಕ್ಕಲಿಗ ಸಮುದಾಯದ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾದರು. 1996ರಲ್ಲಿ ಅವರು ದೇಶದ ಪ್ರಧಾನಿಯಾಗುವ ಅವಕಾಶ ಬಂದಾಗ, ಉಳಿದ ಅವಧಿಗೆ ದಾವಣಗೆರೆ ಜಿಲ್ಲೆಯ ಲಿಂಗಾಯತ ಸಮುದಾಯದ ಜೆ.ಎಚ್. ಪಟೇಲ್ ಬಂದರು. 1999ರ ಚುನಾವಣೆ ಬಳಿಕ ಕಾಂಗ್ರೆಸ್ ನಾಯಕ, ಮಂಡ್ಯ ಜಿಲ್ಲೆಯ ಒಕ್ಕಲಿಗ ಸಮುದಾಯದ ಎಸ್.ಎಂ. ಕೃಷ್ಣ ಸಿಎಂ ಆದರು. ನಂತರ ಬಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಿಎಂ ಆಗಿ ರಜಪೂತ ಸಮುದಾಯದ ಕಲಬುರಗಿ ಜಿಲ್ಲೆಯ ಧರಂಸಿಂಗ್ ಸಿಎಂ ಆದರು. 2006ರಲ್ಲಿ ಕಾಂಗ್ರೆಸ್ ಮೈತ್ರಿ ಮುರಿದುಕೊಂಡು ಬಿಜೆಪಿ ಜೊತೆ ಜೆಡಿಎಸ್ ಕೈಜೋಡಿಸಿದಾಗ ಒಕ್ಕಲಿಗ ಸಮುದಾಯದ ಎಚ್.ಡಿ. ಕುಮಾರಸ್ವಾಮಿ ಸಿಎಂ ಆದರು. ನಂತರ ಲಿಂಗಾಯತ ಸಮುದಾಯದ ಯಡಿಯೂರಪ್ಪನವರು ಸಿಎಂ ಹುದ್ದೆಗೇರಿದರು. ಅದಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಒಕ್ಕಲಿಗ ಸಮುದಾಯದ ಡಿ.ವಿ. ಸದಾನಂದಗೌಡ, ಹುಬ್ಬಳ್ಳಿಯ ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದರು. ರಾಜ್ಯ ಮತ್ತೊಮ್ಮೆ ಹಿಂದುಳಿದ ವರ್ಗದ ಮುಖ್ಯಮಂತ್ರಿಯನ್ನು ಕಂಡದ್ದು 2013ರಲ್ಲಿ ಕಾಂಗ್ರೆಸ್ ಗೆದ್ದು, ಮೈಸೂರು ಜಿಲ್ಲೆಯ ಕುರುಬ ಸಮುದಾಯದ ಸಿದ್ದರಾಮಯ್ಯ ಅವರು ಸಿಎಂ ಆದಾಗ. ಅರಸು ನಂತರ ಪೂರ್ಣಾವಧಿ ಸಿಎಂ ಆದ ಹೆಗ್ಗಳಿಕೆಯೂ ಅವರದಾಯಿತು. 2021ರಲ್ಲಿ ಸಿಎಂ ಆದವರು ಹಾವೇರಿ ಜಿಲ್ಲೆಯ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ.
ಕಾಂಗ್ರೆಸ್‌ನಿಂದ ಈವರೆಗೆ 14 ನಾಯಕರು ಸಿಎಂ ಆಗಿದ್ದಾರೆ. ಅವರಲ್ಲಿ ಕೆ.ಸಿ. ರೆಡ್ಡಿ, ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ ಮತ್ತು ಎಸ್.ಎಂ. ಕೃಷ್ಣ ಒಕ್ಕಲಿಗ ಸಮುದಾಯದವರು. ನಿಜಲಿಂಗಪ್ಪ, ಬಿ.ಡಿ. ಜತ್ತಿ, ಎಸ್.ಆರ್. ಕಂಠಿ ಮತ್ತು ವೀರೇಂದ್ರ ಪಾಟೀಲ್ ಲಿಂಗಾಯತ ಸಮುದಾಯದವರು. ದೇವರಾಜ ಅರಸು, ಬಂಗಾರಪ್ಪ, ವೀರಪ್ಪ ಮೊಯ್ಲಿ ಮತ್ತು ಸಿದ್ದರಾಮಯ್ಯ ಒಬಿಸಿ ಸಮುದಾಯದವರು. ಆರ್. ಗುಂಡೂರಾವ್ ಬ್ರಾಹ್ಮಣರಾದರೆ, ಧರಂಸಿಂಗ್ ರಜಪೂತ ಸಮುದಾಯದವರು.
ದೇಶದ ಇತರ ರಾಜ್ಯಗಳಂತೆ ಕರ್ನಾಟಕದ ರಾಜಕೀಯದಲ್ಲೂ ಜಾತಿ ದೊಡ್ಡ ಪಾತ್ರ ವಹಿಸುತ್ತದೆ. ಕರ್ನಾಟಕದ ಜಾತಿ ರಾಜಕೀಯವನ್ನು ನೋಡಿದರೆ, ಸ್ಪಷ್ಟವಾಗಿ ಒಕ್ಕಲಿಗರು ಮತ್ತು ಲಿಂಗಾಯತರದ್ದೇ ಪ್ರಾಬಲ್ಯ. ರಾಜ್ಯದಲ್ಲಿ ಮುಸ್ಲಿಮರು ಮತ್ತು ಪರಿಶಿಷ್ಟ ಜಾತಿಗಳ ಜನಸಂಖ್ಯೆ ಗಣನೀಯವಾಗಿದೆ. ಆದರೆ, ಟಿಕೆಟ್ ಹಂಚಿಕೆ ವಿಷಯಕ್ಕೆ ಬಂದಾಗ ಅಲ್ಪಸಂಖ್ಯಾತ ಸಮುದಾಯವನ್ನು ಬಹುತೇಕ ನಿರ್ಲಕ್ಷಿಸಲಾಗುತ್ತದೆ. 2011ರ ಜನಗಣತಿಯ ಪ್ರಕಾರ, ರಾಜ್ಯದ ಜನಸಂಖ್ಯೆಯ ಶೇ. 12ಕ್ಕೂ ಹೆಚ್ಚಿರುವ ಮುಸ್ಲಿಮ್ ಸಮುದಾಯವನ್ನು ಚುನಾವಣೆ ಹೊತ್ತಲ್ಲಿ ನಿರ್ಲಕ್ಷಿಸುತ್ತಲೇ ಬರಲಾಗಿದೆ. ಒಕ್ಕಲಿಗ ಮತ್ತು ಲಿಂಗಾಯತ ಜಾತಿ ಮತ್ತು ಉಪಜಾತಿಗಳ ಪ್ರಭಾವ ಹಳೇ ಮೈಸೂರು, ಉತ್ತರ ಕರ್ನಾಟಕ ಮತ್ತು ಕರಾವಳಿ-ಈ ಮೂರು ಪ್ರದೇಶಗಳಲ್ಲಿ ಜೋರಾಗಿದೆ. ಲಿಂಗಾಯತರು ಸಾಮಾನ್ಯವಾಗಿ ಬಿಜೆಪಿ ಬೆಂಬಲಿಗರಾಗಿ ಬದಲಾಗಿರುವುದು ಇತ್ತೀಚಿನ ವರ್ಷಗಳ ಬೆಳವಣಿಗೆ. ಒಕ್ಕಲಿಗರು ಸಾಂಪ್ರದಾಯಿಕವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿಗರಾಗಿದ್ದಾರೆ. ಇನ್ನೊಂದೆಡೆಯಿಂದ ನೋಡಿದರೆ, ಬಿಜೆಪಿ ಯಾವುದರ ಆಧಾರದ ಮೇಲೆ ಜನರನ್ನು ಆಕರ್ಷಿಸುತ್ತದೆಯೋ ಆ ಹಿಂದುತ್ವದ ಕಡೆ ಈಚೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ವಾಲುತ್ತಿರುವುದನ್ನು ಕಾಣಬಹುದು. ಜೆಡಿಎಸ್ ಅಂತೂ ಬಿಜೆಪಿ ಜೊತೆಗಿನ ಮೈತ್ರಿ ನಂತರ ಜಾತ್ಯತೀತ ನಿರೂಪಣೆಗಳಿಂದಲೇ ದೂರ ಸರಿದಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮತದಾರರ ನಡುವೆ ಮೂರನೇ ಒಂದು ಭಾಗದಷ್ಟು ವಿಭಜನೆ ಕಂಡಿದೆ ಎಂಬುದನ್ನು ವಿಶ್ಲೇಷಣೆಗಳು ಹೇಳುತ್ತವೆ. ಕಾಂಗ್ರೆಸ್ ಪಕ್ಷ ಒಕ್ಕಲಿಗ ಮತಗಳ ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿಯೇ ಪ್ರವೇಶ ಮಾಡಲು ಸಾಧ್ಯವಾಗಿದೆ ಎಂಬ ಅಭಿಪ್ರಾಯಗಳಿವೆ.
ರಾಜ್ಯದಲ್ಲಿ ದೇವರಾಜ ಅರಸು ಅವರು ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದರು. 1970ರ ದಶಕದಲ್ಲಿ ಅಹಿಂದ ಎಂಬ ಪದ ಸೃಷ್ಟಿಸಿದವರೂ ಅವರೇ. ಅಹಿಂದ ಕರ್ನಾಟಕ ರಾಜಕೀಯದಲ್ಲಿ ಮುಂದುವರಿದ ಪ್ರಬಲ ಜಾತಿ ಪ್ರಾಬಲ್ಯಕ್ಕೆ ಸವಾಲಾಗಿದೆ. ಅದು ದಮನಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಗುರಿಯೊಂದಿಗಿನ ರಾಜಕೀಯೇತರ ಸಾಮಾಜಿಕ ಚಳವಳಿಯಾಗಿದೆ. ಅಹಿಂದ ಚಳವಳಿ ಸಮುದಾಯಗಳ ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಡುತ್ತದೆ. ಅದು ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಮತ್ತು ದಲಿತರನ್ನು ಒಗ್ಗೂಡಿಸುತ್ತದೆ. ಕೋಲಾರದಲ್ಲಿ ಅಹಿಂದ ಚಿಂತನೆ ಆರಂಭಗೊಂಡ ಬಳಿಕ ಸಿದ್ದರಾಮಯ್ಯನವರ ಪ್ರವೇಶದಿಂದಾಗಿ ಅದಕ್ಕೊಂದು ದೊಡ್ಡ ರಾಜಕೀಯ ವ್ಯಾಪ್ತಿ ಸಿಕ್ಕಿತು. ಸಿದ್ದರಾಮಯ್ಯ 2013 ಮತ್ತು 2024ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವುದರೊಂದಿಗೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಉನ್ನತ ಸ್ಥಾನ ಪಡೆಯುವುದರೊಂದಿಗೆ, ಅಹಿಂದ ರಾಜಕೀಯ ರಾಜ್ಯದಲ್ಲಿ ಮತ್ತಷ್ಟು ಪ್ರಬಲವಾಗಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಭಾಗವಾಗಿರುವ ವರುಣಾ ಕ್ಷೇತ್ರವನ್ನು ಸಿದ್ದರಾಮಯ್ಯ ಪ್ರತಿನಿಧಿಸುತ್ತಿದ್ದರೂ, ಅವರ ಪ್ರಭಾವ ಕೇವಲ ಹಳೇ ಮೈಸೂರು ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಸಿದ್ದರಾಮಯ್ಯ, ತಮ್ಮ ಅತ್ಯುತ್ತಮ ಮಾತುಗಾರಿಕೆ, ಕೇಂದ್ರ ಸರಕಾರದ ಮೇಲೆ ನೇರ ದಾಳಿ ನಡೆಸುವ ಧಾರ್ಷ್ಟ್ಯತೆ ಉಳ್ಳವರಾಗಿದ್ದಾರೆ. ತಮ್ಮನ್ನು ತಾವು ಹಿಂದುಳಿದ ವರ್ಗದ ನಾಯಕ ಮತ್ತು ನಿರ್ದಿಷ್ಟವಾಗಿ ಕುರುಬ ಸಮುದಾಯದ ನಾಯಕ ಎಂದು ಬಿಂಬಿಸಿಕೊಳ್ಳುವ ವಿಷಯದಲ್ಲಿ ಅವರು ಹಿಂಜರಿಯುವುದಿಲ್ಲ.
ರಾಜ್ಯ ರಾಜಕೀಯದಲ್ಲಿ ಒಕ್ಕಲಿಗರು ಮತ್ತು ಲಿಂಗಾಯತರ ಪ್ರಾಬಲ್ಯ ಏನೇ ಇದ್ದರೂ, ಒಬಿಸಿ ಸಮುದಾಯಗಳನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ತುಮಕೂರು ಮತ್ತು ಬೆಂಗಳೂರಿನಲ್ಲಿ ತಿಗಳರು ಮತ್ತು ಚಾಮರಾಜನಗರದಲ್ಲಿ ಉಪ್ಪಾರರಂಥ ಒಬಿಸಿ ಸಮುದಾಯಗಳ ಪ್ರಭಾವ ನಗಣ್ಯವಲ್ಲ. ಆದರೆ ಹಳೇ ಮೈಸೂರಿನ ಬಹುತೇಕ ಪ್ರತಿಯೊಂದು ಒಕ್ಕಲಿಗ ಪ್ರಾಬಲ್ಯವಿದೆ. ಒಕ್ಕಲಿಗರ ಮತಗಳಿಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಸ್ಪರ್ಧೆ ಇರುತ್ತದೆ. ಲಿಂಗಾಯತ ಮತಗಳಿಗಾಗಿ ಬಿಜೆಪಿ ಹಿಂದೆ ಲೋಕಶಕ್ತಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಹಳೇ ಮೈಸೂರು ಪ್ರದೇಶದಲ್ಲಿ ಅದು ಒಕ್ಕಲಿಗ ಮತಗಳಿಗಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಬಂಟರು, ಬಿಲ್ಲವರು, ತಿಗಳರು, ವಿಶ್ವಕರ್ಮರು ಮತ್ತು ಬಲಿಜ ಇತ್ಯಾದಿ ಸಮುದಾಯಗಳ ಬೆಂಬಲದಿಂದಾಗಿ ಕರಾವಳಿ ಕರ್ನಾಟಕ ಸದ್ಯಕ್ಕೆ ಬಿಜೆಪಿಯ ಭದ್ರಕೋಟೆಯಾಗಿದೆ. ಎಲ್ಲಾ ಮೂರು ಪಕ್ಷಗಳಿಗೆ ಜಾತಿ ಕಾರಣಕ್ಕೇ ಉತ್ತರ ಕರ್ನಾಟಕ ಬಹಳ ನಿರ್ಣಾಯಕ ನೆಲ. ಇದನ್ನು ಮಧ್ಯ ಕರ್ನಾಟಕ, ಹೈದರಾಬಾದ್ ಕರ್ನಾಟಕ ಮತ್ತು ಬಾಂಬೆ ಕರ್ನಾಟಕ ಎಂದು ಮತ್ತಷ್ಟು ವಿಂಗಡಿಸಿರುವಲ್ಲಿನ ಸಮೀಕರಣವೂ ಬಹಳ ಸ್ಪಷ್ಟವಿದೆ. ಇವು ಭೌಗೋಳಿಕವಾಗಿ ಮತ್ತು ಜಾತಿ ಲೆಕ್ಕಾಚಾರದ ದೃಷ್ಟಿಯಿಂದ ದೊಡ್ಡದಾಗಿದ್ದು, ಈಡಿಗರು ಮತ್ತು ಕುರುಬರು ಮುಂತಾದ ವಿವಿಧ ಹಿಂದುಳಿದ ಸಮುದಾಯಗಳನ್ನು ಒಳಗೊಂಡಿವೆ. ಉತ್ತರ ಕರ್ನಾಟಕ ಪ್ರದೇಶದಲ್ಲಿ ಒಬಿಸಿ ಕುರುಬ ಮತ್ತು ಈಡಿಗ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ರಾಜಕೀಯ ಪಕ್ಷಗಳ ತಂತ್ರಗಳೇನೇ ಇದ್ದರೂ, ವಿವಿಧ ಜಾತಿ ಸಮೀಕರಣಗಳನ್ನು ಗಮನಿಸಿದರೆ, ಕರ್ನಾಟಕ ಯಾವುದೇ ಟ್ರೆಂಡ್ ಅನ್ನು ಊಹಿಸಲು ಕಷ್ಟಕರವಾದ ರಾಜ್ಯವಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಈ ಕಾರಣದಿಂದಲೂ ಲಾಭ ಪಡೆಯುತ್ತದೆ. ಬಿಜೆಪಿಯನ್ನು ಬೆಂಬಲಿಸುವ ಲಿಂಗಾಯತರು ಉತ್ತರ ಕರ್ನಾಟಕದಲ್ಲಿದ್ದರೆ, ಜೆಡಿಎಸ್‌ನೊಂದಿಗೆ ಇರುವ ಒಕ್ಕಲಿಗರು ದಕ್ಷಿಣ ಕರ್ನಾಟಕದಲ್ಲಿದ್ದಾರೆ. ಇನ್ನು, ಕಾಂಗ್ರೆಸ್ ತನ್ನ ಅಹಿಂದ ರಾಜಕೀಯದ ಜೊತೆ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ದಕ್ಷಿಣದ ಒಕ್ಕಲಿಗರನ್ನು ಓಲೈಸುತ್ತದೆ. ಅಲ್ಲದೆ, ಪ್ರಭಾವಿ ಲಿಂಗಾಯತ ಕುಟುಂಬಗಳ ಅಭ್ಯರ್ಥಿಗಳ ಮೂಲಕ ಲಿಂಗಾಯತ ಮತಗಳನ್ನು ಕೂಡ ಸೆಳೆಯುತ್ತದೆ.
ಇನ್ನು ರಾಜ್ಯದ ರಾಜಕೀಯ ಪಕ್ಷಗಳು ಆಂತರಿಕ ಪ್ರಜಾಪ್ರಭುತ್ವಕ್ಕಿಂತ ಜಾತಿ ಮತ್ತು ಕುಟುಂಬ ರಾಜಕಾರಣದ ಲಾಭಕ್ಕಾಗಿ ನೋಡುತ್ತವೆ. ಪಕ್ಷಗಳ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗುವುದಿಲ್ಲ ಎಂಬುದನ್ನು ಗಮನಿಸಬೇಕು. ಪಕ್ಷಗಳು ಬೂತ್, ಬ್ಲಾಕ್, ಕ್ಷೇತ್ರ ಮತ್ತು ಜಿಲ್ಲಾ ಘಟಕಗಳಿಗೆ ಚುನಾವಣೆಗಳನ್ನು ನಡೆಸುತ್ತಿದ್ದರೂ, ರಾಜ್ಯಾಧ್ಯಕ್ಷರ ಆಯ್ಕೆಯನ್ನು ಹಲವು ಆಯಾಮದ ಲೆಕ್ಕಾಚಾರಗಳ ಮೂಲಕ ಅಳೆದೂ ತೂಗಿ ಮಾಡಲಾಗುತ್ತದೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಯನ್ನು ಎಸ್.ಎಂ. ಕೃಷ್ಣ ನಂತರ, ಹಿರಿಯ ನಾಯಕರಾದ ವಿ.ಎಸ್. ಕೌಜಲಗಿ, ಅಲ್ಲಂ ವೀರಭದ್ರಪ್ಪ, ಜನಾರ್ದನ ಪೂಜಾರಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಆರ್. ವಿ. ದೇಶಪಾಂಡೆ ನಿಭಾಯಿಸಿದ್ದರು. ದಲಿತ ನಾಯಕ ಜಿ. ಪರಮೇಶ್ವರ್ ಅವರ ಅಧಿಕಾರವನ್ನು ಎರಡು ಬಾರಿ ವಿಸ್ತರಿಸಲಾಯಿತು. ನಂತರ ದಿನೇಶ್ ಗುಂಡೂರಾವ್ ಆ ಹುದ್ದೆಯಲ್ಲಿದ್ದರು. ಈಗ ಡಿ.ಕೆ. ಶಿವಕುಮಾರ್ ಹೊಣೆ ಹೊತ್ತಿದ್ದಾರೆ. ಬಿಜೆಪಿಯಲ್ಲಿ ಕಳೆದ ಎರಡು ದಶಕಗಳಲ್ಲಿ ಅನಂತ ಕುಮಾರ್, ಜಗದೀಶ್ ಶೆಟ್ಟರ್, ಯಡಿಯೂರಪ್ಪ, ಸದಾನಂದ ಗೌಡ ಮತ್ತು ಪ್ರಹ್ಲಾದ್ ಜೋಶಿ ರಾಜ್ಯಾಧ್ಯಕ್ಷ ಹುದ್ದೆ ನಿರ್ವಹಿಸಿದ್ದಾರೆ. ಜನಸಂಖ್ಯೆಯ ದೃಷ್ಟಿಯಿಂದ ಕಡಿಮೆಯಿರುವ ಬಂಟ ಸಮುದಾಯದ ನಳಿನ್ ಕುಮಾರ್ ಕಟೀಲು ಕೂಡ ಅದರ ಅಧ್ಯಕ್ಷರಾಗಿದ್ದರು. ಈಗ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಅಲ್ಲಿ ಕೂರಿಸುವ ಮೂಲಕ ಲಿಂಗಾಯತರಿಗೆ ಮಣೆ ಹಾಕಲಾಗಿದೆ. ಇನ್ನು ಜೆಡಿಎಸ್ ಅಂತೂ ಬಹುತೇಕ ಕುಟುಂಬ ಕೇಂದ್ರಿತವಾಗಿದೆ. ಹಾಗಾಗಿಯೇ ಅದು ಪ್ರಮುಖ ನಾಯಕರನ್ನು ದೂರವಿಟ್ಟಿದೆ. ಹೊರಗಿನವರಾದ ಎ. ಕೃಷ್ಣಪ್ಪ ಅಥವಾ ಎಚ್.ಕೆ. ಕುಮಾರಸ್ವಾಮಿ ಅಥವಾ ಸಿ.ಎಂ. ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತಾದರೂ, ಅವರು ಹೆಸರಿಗಷ್ಟೇ ಇದ್ದರೆಂಬುದು ಗೊತ್ತಿರುವ ಸತ್ಯ. ಕಾಂಗ್ರೆಸ್ 2000ದಿಂದ 9 ರಾಜ್ಯಾಧ್ಯಕ್ಷರನ್ನು ಕಂಡಿದ್ದರೂ, ಅವರಲ್ಲಿ ಮುಖ್ಯಮಂತ್ರಿಯಾದವರು ಎಸ್.ಎಂ. ಕೃಷ್ಣ ಒಬ್ಬರೇ. ಬಿಜೆಪಿಯಲ್ಲಿ 9 ಮಂದಿ ಪಕ್ಷಾಧ್ಯಕ್ಷರಲ್ಲಿ ಮೂವರು ಮುಖ್ಯಮಂತ್ರಿಗಳಾಗಿದ್ದಾರೆ. ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ಎರಡು ಸಮ್ಮಿಶ್ರ ಸರಕಾರಗಳನ್ನು ಮುನ್ನಡೆಸಿದ್ದಾರೆ.
ಇಂದಿನದು ಬಹಳ ಸೂಕ್ಷ್ಮವಾದ ಸಂದರ್ಭ. ಈ ಹಿಂದೆ ಲಿಂಗಾಯತರ ಆಕ್ರೋಶಕ್ಕೆ ತುತ್ತಾಗಿದ್ದ ಕಾಂಗ್ರೆಸ್ ಇವತ್ತಿಗೂ ಆ ಸಮುದಾಯದಲ್ಲಿ ತನ್ನ ನೆಲೆಯನ್ನು ಮೊದಲಿನ ಹಾಗೆ ಗಟ್ಟಿಗೊಳಿಸಲು ಸಾಧ್ಯವಾಗಿಲ್ಲ. ಈಗ ರಾಜಕೀಯವಾಗಿ ಮತ್ತೊಂದು ಪ್ರಬಲ ಸಮುದಾಯವಾದ ಒಕ್ಕಲಿಗರ ಆಕ್ರೋಶವನ್ನು ಎದುರಿಸಬೇಕಾಗಬಹುದೇ ಎಂಬ ಪ್ರಶ್ನೆ ಅದರೆದುರು ಇದೆ. ಆದರೆ, ನಿಜವಾಗಿಯೂ ಇದನ್ನು ಮೀರಿದ ಸತ್ಯ ಬೇರೆಯಿದೆಯೇ ಮತ್ತು ಆ ಕಾರಣದಿಂದ, ತೂಗಿ ನೋಡಿದರೆ ಅಹಿಂದದ ಬಲವೇ ಕಾಂಗ್ರೆಸ್ ಪಾಲಿಗೆ ರಾಜಕೀಯವಾಗಿಯೂ ತಾತ್ವಿಕವಾಗಿಯೂ ದೊಡ್ಡದಾಗಿದೆಯೇ ಎಂಬುದನ್ನೂ ನೋಡಬೇಕಿದೆ. ಏನೇ ಮಾಡಿದರೂ ವಿಪತ್ತುಗಳನ್ನು ಎದುರಿಸುವುದು ರಾಜಕೀಯವಾಗಿ ಇದ್ದೇ ಇರುವುದರಿಂದ, ತೆಗೆದುಕೊಳ್ಳುವ ನಿರ್ಧಾರದಲ್ಲಿನ ದೃಢತೆಯೇ ಎಲ್ಲವನ್ನೂ ಸಮರ್ಥಿಸುತ್ತದೆ. ಅಂಥ ಸಮರ್ಥನೀಯ ನಿರ್ಧಾರವನ್ನು ಕಾಂಗ್ರೆಸ್ ತೆಗೆದುಕೊಳ್ಳಬೇಕಾಗಿದೆ.