×
Ad

ಸಿದ್ದರಾಮಯ್ಯ ಸರಕಾರಕ್ಕೆ ಎರಡೂವರೆ ವರ್ಷಗಳು ಸಾಧನೆಗಳೇನು? ವೈಫಲ್ಯಗಳೇನು?

Update: 2025-11-25 16:27 IST

ಕರ್ನಾಟಕ ರಾಜಕೀಯದಲ್ಲಿ 2023ರ ಮೇ 20ರಂದು ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯ ಸರಕಾರಕ್ಕೆ ಈ 2025 ನವೆಂಬರ್ 19ರಂದು ಎರಡೂವರೆ ವರ್ಷ ತುಂಬಿದೆ. ಅಧಿಕಾರ ಹಸ್ತಾಂತರದ ಸತತ ಚರ್ಚೆಗಳ ಹೊರತಾಗಿಯೂ, ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿದಿದ್ದಾರೆ. ‘‘ನವೆಂಬರ್ ಕ್ರಾಂತಿ ಎಂಬುದು ಠುಸ್ ಆಗಿದೆ. ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ’’ ಎಂದು ಸ್ವತಃ ಸಿದ್ದರಾಮಯ್ಯನವರೇ ಹೇಳಿದ್ದಾರೆ. ‘‘ನಾನೇ ಐದೂ ವರ್ಷ ಸಿಎಂ ಆಗಿ ಮುಂದುವರಿಯುತ್ತೇನೆ’’ ಎಂದು, ಹಿಂದೆ ಮಾತಾಡುತ್ತಿದ್ದ ಆತ್ಮವಿಶ್ವಾಸದ ಧಾಟಿಯಲ್ಲೇ ಸಿದ್ದರಾಮಯ್ಯ ಹೇಳಿದ್ದಾರೆ. ಎಲ್ಲಿ ಹೋದರೆ ಅಧಿಕಾರ ಹೋಗುತ್ತದೆ ಎಂಬ ನಂಬಿಕೆಯೊಂದು ರಾಜಕೀಯದಲ್ಲಿ ಇದೆಯೋ ಅದೇ ಚಾಮರಾಜನಗರಕ್ಕೆ ಮತ್ತೆ ಮತ್ತೆ ಹೋಗುವ ಸಿದ್ದರಾಮಯ್ಯ, ನವೆಂಬರ್ 20ರಂದು ಕೂಡ ಅಲ್ಲಿಯೇ ಹೋಗಿ ತಾವು ಅಧಿಕಾರದಲ್ಲಿ ಮುಂದುವರಿಯುವ ಬಗ್ಗೆ, ಮುಂದಿನ ವರ್ಷ 17ನೇ ಬಜೆಟ್ ಮಂಡಿಸುವ ಬಗ್ಗೆ ದೃಢವಾಗಿ ಹೇಳಿದ್ದಾರೆ.

ಸಿದ್ದರಾಮಯ್ಯ ಸರಕಾರದ ಈ ಎರಡೂವರೆ ವರ್ಷಗಳಲ್ಲಿ ಸಿಎಂ ಬದಲಾವಣೆ ಚರ್ಚೆ ಮೊದಲ ದಿನದಿಂದಲೇ ಇತ್ತೆಂಬುದು ನಿಜ. ಆದರೆ, ಅಧಿಕಾರ ಹಸ್ತಾಂತರ ಕುರಿತ ಗದ್ದಲಗಳು ಅವರನ್ನೆಂದೂ ವಿಚಲಿತಗೊಳಿಸಲಿಲ್ಲ. ಸರಕಾರ ಮಾಡಬೇಕಿರುವ ಕೆಲಸಗಳನ್ನು ಅವರು ಮರೆಯಲಿಲ್ಲ. ತಮ್ಮ ಸರಕಾರದ ಗ್ಯಾರಂಟಿಗಳನ್ನು ಪೂರೈಸುವ ಬಗ್ಗೆ ಅಸಾಧಾರಣ ಬದ್ಧತೆ ತೋರಿಸಿದರು. ಈ ಎರಡೂವರೆ ವರ್ಷಗಳು ರಾಜಕೀಯವಾಗಿ ಬರೀ ಅಧಿಕಾರ ಹಸ್ತಾಂತರದ ಗೊಂದಲಗಳಲ್ಲೇ ಮುಳುಗಿತೆಂಬಂತೆ ಕಂಡರೂ, ಸಿದ್ದರಾಮಯ್ಯ ಸರಕಾರ ಏನೆಲ್ಲವನ್ನೂ ಮಾಡಿದೆ ಎಂಬುದು ಕೂಡ ಸ್ಪಷ್ಟವಾಗಿದೆ. ಈ ಎರಡೂವರೆ ವರ್ಷಗಳಲ್ಲಿ ಅದು ಗೆದ್ದದ್ದೆಲ್ಲಿ, ಬಿದ್ದದ್ದೆಲ್ಲಿ ಎಂಬುದನ್ನೊಮ್ಮೆ ಈ ಹೊತ್ತಲ್ಲಿ ಸ್ಥೂಲವಾಗಿ ನೋಡಬಹುದು.

ಮೊನ್ನೆ ನವೆಂಬರ್ 20ರಂದು ಸಿಎಂ ಸಿದ್ದರಾಮಯ್ಯ ಚಾಮರಾಜನಗರದಲ್ಲಿದ್ದರು. ‘‘ನನ್ನ ಸರಕಾರ ಈಗಲೂ ಭದ್ರ, ಭವಿಷ್ಯದಲ್ಲಿಯೂ ಭದ್ರವಾಗಿರುತ್ತದೆ’’ ಎಂದರು. ‘‘ಜನ ಎಲ್ಲಿಯವರೆಗೆ ಬಯಸುತ್ತಾರೋ ಅಲ್ಲಿಯವರೆಗೆ ನಾನೇ ಬಜೆಟ್ ಮಂಡಿಸುತ್ತೇನೆ’’ ಎಂದರು. ಚಾಮರಾಜನಗರದ ಜೊತೆಗೆ ಅಂಟಿಕೊಂಡಿರುವ ಮೂಢನಂಬಿಕೆಯನ್ನು ನಿರಾಕರಿಸುತ್ತಾ ‘‘20ಕ್ಕೂ ಹೆಚ್ಚು ಸಲ ಇಲ್ಲಿಗೆ ಬಂದಿದ್ದೇನೆ. ಇಲ್ಲಿಗೆ ಬಂದಾಗೆಲ್ಲ ನನ್ನ ಕುರ್ಚಿ ಗಟ್ಟಿಯಾಗಿರುವುದು ಮಾತ್ರವಲ್ಲ, ನಮ್ಮ ಸರಕಾರವೇ ಗಟ್ಟಿಯಾಗಿದೆ’’ ಎಂದರು. ಒಂದು ರೀತಿಯಲ್ಲಿ ಸರಕಾರದ ಎರಡೂವರೆ ವರ್ಷಗಳ ಆಚರಣೆ ಕೂಡ ಇಲ್ಲಿಯೇ ನಡೆಯುತ್ತಿದೆ ಎಂದರು.

ನಾಯಕತ್ವ ಬದಲಾವಣೆಯ ಗುಸುಗುಸು ಆಡಳಿತಾರೂಢ ಕಾಂಗ್ರೆಸ್ ಅನ್ನು ತಿಂಗಳುಗಳಿಂದ ಕಾಡುತ್ತಿತ್ತು. ನವೆಂಬರ್ ಕ್ರಾಂತಿ ಎಂದೆಲ್ಲ ಹೇಳಲಾಗುತ್ತಿದ್ದುದನ್ನು ಸಿದ್ದರಾಮಯ್ಯ ಸಂಪೂರ್ಣವಾಗಿ ತಳ್ಳಿಹಾಕಿದರು. ಮತ್ತದು ಮಾಧ್ಯಮಗಳ ಸೃಷ್ಟಿ ಎಂದು ಕರೆದರು. ‘‘ಈ ಪದವನ್ನು ಸೃಷ್ಟಿಸಿದವರೇ ಮಾಧ್ಯಮದವರು. ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ. ನಮಗೆ ಐದು ವರ್ಷಗಳ ಆಡಳಿತ ಅವಧಿ ನೀಡಲಾಗಿದೆ. ಐದು ವರ್ಷಗಳ ನಂತರ, ಚುನಾವಣೆ ನಡೆಯುತ್ತದೆ ಮತ್ತು ನಾವು ಮತ್ತೊಮ್ಮೆ ಗೆಲ್ಲುತ್ತೇವೆ’’ ಎಂದು ಸಿದ್ದರಾಮಯ್ಯ ಹೇಳಿದರು. ಅಲ್ಲಿಗೆ, ಅಧಿಕಾರ ಹಸ್ತಾಂತರದ ಬಗ್ಗೆ ಇದ್ದ ಈವರೆಗಿನ ಗುಸುಗುಸು ಮುಗಿದಿದೆ.

ಇದೆಲ್ಲದರ ನಡುವೆಯೂ ಈ ಆಟ ಮುಗಿದಿದೆ ಎಂದೇನೂ ಅಲ್ಲ. ಮಾಧ್ಯಮಗಳು ಕಂಡಕಂಡ ನಾಯಕರ ಎದುರು ಮತ್ತೆ ಮತ್ತೆ ಅದನ್ನೇ ಕೆದಕುವುದು, ಬಿಜೆಪಿಯವರು ಮತ್ತೆ ಮತ್ತೆ ಕೆಣಕುವುದು ನಡೆದೇ ಇತ್ತು, ಇನ್ನು ಮುಂದೆಯೂ ಇರುತ್ತದೆ. ಡಿ.ಕೆ. ಶಿವಕುಮಾರ್ ಪಾಳೆಯ ಹೊಸ ವರಸೆಯನ್ನೂ ಶುರು ಮಾಡಿದೆ ಎನ್ನುವುದಕ್ಕೆ, ಅವರ ಸಹೋದರ ಡಿ.ಕೆ. ಸುರೇಶ್ ಹೇಳಿಕೆ ಕೂಡ ಸಾಕ್ಷಿ. ಸಿದ್ದರಾಮಯ್ಯನವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದ್ದಾರೆ ಎನ್ನುವ ಮೂಲಕ, ಅಧಿಕಾರ ಹಂಚಿಕೆ ಸೂತ್ರ ಇತ್ತೆನ್ನಲಾಗಿರುವ ಬಗ್ಗೆ ಅವರು ನೆನಪಿಸಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರಕ್ಕಾಗಿ ಕಿತ್ತಾಟ ಇದೆಯೆಂಬುದು ಗುಟ್ಟಿನ ವಿಷಯವೇನೂ ಅಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿರುವುದು ಕೂಡ ಸುಳ್ಳಲ್ಲ. ಒಂದೆಡೆ ಡಿ.ಕೆ. ಶಿವಕುಮಾರ್ ಪಟ್ಟ ಬದಲಾವಣೆಗೆ ಪಟ್ಟು ಹಿಡಿದಿರುವಾಗಲೇ, ಇನ್ನೊಂದಡೆ ಸಂಪುಟ ಪುನರ್‌ರಚನೆ ಅಸ್ತ್ರ ಪ್ರಯೋಗಕ್ಕೆ ಸಿದ್ದರಾಮಯ್ಯ ಸಿದ್ಧವಾಗಿದ್ದಾರೆ. ಆದರೆ ಅವೆರಡರ ಹೊರತಾಗಿ ಸದ್ಯ ಯಥಾಸ್ಥಿತಿ ಕಾಯ್ದುಕೊಳ್ಳುವ ಸೂತ್ರವನ್ನು ಹೈಕಮಾಂಡ್ ನೆಚ್ಚಿದೆ. ಏನೋ ಮಾಡಲು ಹೋಗಿ ಇರುವುದನ್ನೂ ಕಳೆದುಕೊಳ್ಳುವ ಹಾಗಾಗಬಾರದು ಎನ್ನುವುದು ಕಾಂಗ್ರೆಸ್ ದಿಲ್ಲಿ ನಾಯಕರ ಚಿಂತೆ. ಬಿಹಾರದಲ್ಲಿನ ಸೋಲು ಅದನ್ನು ಹಿಂಡಿಹಾಕಿದೆ. ಕರ್ನಾಟಕ ಬಿಟ್ಟರೆ ಇನ್ನೆರಡೇ ರಾಜ್ಯಗಳಲ್ಲಿ ಅದು ಅಧಿಕಾರದಲ್ಲಿದೆ. ಈ ಸ್ಥಿತಿಯಲ್ಲಿ ಹೈಕಮಾಂಡ್ ಪಾಲಿಗೆ ಕರ್ನಾಟಕದಲ್ಲಿನ ಅಧಿಕಾರ ಒಂದು ದೊಡ್ಡ ಭರವಸೆ. ಮಲ್ಲಿಕಾರ್ಜುನ ಖರ್ಗೆಯವರು ಈಗಾಗಲೇ ತಮ್ಮನ್ನು ಭೇಟಿಯಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಇದನ್ನೇ ಹೇಳಿದ್ದೂ ಆಗಿದೆ. ಡಿಸೆಂಬರ್ ಮೊದಲ ವಾರ ಸಂಸತ್ ಅಧಿವೇಶನ ಶುರುವಾಗಲಿದ್ದು, ಡಿಸೆಂಬರ್ 8ರಿಂದ ವಿಧಾನಮಂಡಲ ಅಧಿವೇಶನವೂ ನಡೆಯುವುದಿದೆ. ಇದೊಂದು ನೆಪ ಸದ್ಯಕ್ಕೆ ಯಾವುದೇ ಬದಲಾವಣೆ ಸಾಧ್ಯತೆಗಳನ್ನು ದೂರವಾಗಿಸಿದೆ.

ಸಿದ್ದರಾಮಯ್ಯನವರು ಸಂಪುಟ ಪುನರ್‌ರಚನೆ ಪ್ರಸ್ತಾವ ಮುಂದಿಟ್ಟದ್ದೇ ಅಧಿಕಾರ ಹಂಚಿಕೆ ಚರ್ಚೆಯನ್ನು ಹಿಂದೆ ಸರಿಸುವುದಕ್ಕೆ ಮತ್ತು ಸಿದ್ದರಾಮಯ್ಯನವರ ಈ ದಾಳದ ಮರ್ಮವೇನೆಂಬುದು ಡಿ.ಕೆ. ಶಿವಕುಮಾರ್ ಅವರಿಗೆ ಅರ್ಥವಾಗದೆ ಇಲ್ಲ. ಹಾಗಾಗಿಯೇ ಅವರು ದಿಲ್ಲಿಯಲ್ಲಿ ಕಸರತ್ತಿಗಿಳಿದರು. ಖರ್ಗೆಯವರ ಬಳಿ ಮಾತ್ರವಲ್ಲದೆ, ಪ್ರಿಯಾಂಕಾ ಗಾಂಧಿಯವರ ಬಳಿಯೂ ತಮ್ಮ ಹಕ್ಕು ಪ್ರತಿಪಾದಿಸಿದರು. ರಾಹುಲ್ ಗಾಂಧಿಯವರನ್ನು ಭೇಟಿಯಾಗುವುದು ಅವರಿಗೆ ಸಾಧ್ಯವಾಗಲಿಲ್ಲ ಮತ್ತು ಖರ್ಗೆಯವರು ಈಗಾಗಲೇ ಸ್ಪಷ್ಟಪಡಿಸಿರುವಂತೆ, ಈಗೇನಿದ್ದರೂ ಚೆಂಡು ಇರುವುದು ರಾಹುಲ್ ಅಂಗಳದಲ್ಲಿ. ಹಾಗಾಗಿ, ಅಧಿಕಾರ ಹಸ್ತಾಂತರ, ಸಂಪುಟ ಪುನಾರಚನೆ ಚರ್ಚೆಯೆಲ್ಲವೂ ಮತ್ತಷ್ಟು ಕಾಲ ಮುಂದುವರಿಯುತ್ತವೆ. ಇದರ ನಡುವೆಯೇ ತಾವೇ ಐದು ವರ್ಷ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ರಾಜಕೀಯವಾಗಿ ಮಹತ್ವ ಪಡೆಯುತ್ತದೆ.

ಸಿದ್ದರಾಮಯ್ಯ ಸರಕಾರದ ಈ ಎರಡೂವರೆ ವರ್ಷಗಳಲ್ಲಿ ಅಧಿಕಾರ ಹಸ್ತಾಂತರದ ಗದ್ದಲ, ಗೊಂದಲಗಳಲ್ಲೇ, ಅವರ ಗ್ಯಾರಂಟಿಯೂ ಸೇರಿದಂತೆ ಸರಕಾರದ ಸಾಧನೆಗಳಿಗೆ ಮಂಕು ಕವಿಯಿತೇ ಎಂಬ ಪ್ರಶ್ನೆಯಿದೆ. ಇನ್ನೊಂದೆಡೆ, ವಾಲ್ಮೀಕಿ ನಿಗಮದ ಹಗರಣ, ಮುಡಾ ಪ್ರಕರಣ, ಎಸ್‌ಸಿ, ಎಸ್‌ಟಿ ನಿಧಿ ವರ್ಗಾವಣೆ ಆರೋಪ ಇವೆಲ್ಲವೂ ತಂದಿಟ್ಟ ನಕಾರಾತ್ಮಕ ಪರಿಣಾಮಗಳನ್ನೂ ನಿಭಾಯಿಸಬೇಕಾಯಿತು. ಹಾಗೆಂದು ಎಲ್ಲವೂ ನಕಾರಾತ್ಮಕವಾಗಿಯೇ ಇದೆಯೆಂದಲ್ಲ. ಸರಕಾರದಿಂದ ಆಗಿರುವ ಅನೇಕ ಉತ್ತಮ ಕೆಲಸಗಳಿವೆ. ಬೆಂಗಳೂರಿಗೆ ಬಹಳ ಅಗತ್ಯವಿರುವ ದೊಡ್ಡ ಯೋಜನೆಗಳನ್ನು ಮುನ್ನಡೆಸುವಲ್ಲಿಸಿದ್ದರಾಮಯ್ಯ ಸರಕಾರ ಮಹತ್ವದ ಪಾತ್ರ ವಹಿಸಿದೆ. ಗಾಢ ನಿದ್ರೆಯಿಂದ ಅಲುಗಾಡಿಸಿದ್ದಕ್ಕಾಗಿ ಸರಕಾರಕ್ಕೆ ಸಂಪೂರ್ಣ ಶ್ರೇಯಸ್ಸು ಸಲ್ಲುತ್ತದೆ ಎಂದು ಅವರು ಹೇಳುತ್ತಾರೆ. ಎತ್ತಿನಹೊಳೆ ಯೋಜನೆಯ ಮೊದಲ ಹಂತ ಪೂರ್ಣಗೊಂಡಿರುವುದು, ಹೂಡಿಕೆ ಆಕರ್ಷಣೆ ಇವೆಲ್ಲವೂ ಮಹತ್ವದ್ದವಾಗಿವೆ. ಗ್ಯಾರಂಟಿ ಯೋಜನೆಗಳಂತೂ ಸಿದ್ದರಾಮಯ್ಯ ಸರಕಾರದ ಗುರುತೇ ಆಗಿವೆ.

ಗ್ಯಾರಂಟಿಗಳನ್ನು ಪೂರೈಸಿದ ಸಿದ್ದರಾಮಯ್ಯ

ಮೇ 2023ರಲ್ಲಿ ಐದು ಗ್ಯಾರಂಟಿಗಳೊಂದಿಗೆ ಅಧಿಕಾರದ ಗದ್ದುಗೆ ಹಿಡಿದ ಕಾಂಗ್ರೆಸ್ ಸರಕಾರ ಜನರ ನಿರೀಕ್ಷೆಯನ್ನು ಹುಸಿ ಮಾಡಿಲ್ಲ. ರಾಜ್ಯ ಕಾಂಗ್ರೆಸ್ ಸರಕಾರದ ಮಹತ್ವದ ಯೋಜನೆಯಲ್ಲೊಂದು ಗ್ಯಾರಂಟಿ ಯೋಜನೆ. ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ, ಯುವನಿಧಿ, ಶಕ್ತಿ ಯೋಜನೆಗಳೇ ಆ ಐದು ಗ್ಯಾರಂಟಿಗಳಾಗಿವೆ. ಐದೂ ಗ್ಯಾರಂಟಿ ಯೋಜನೆಗಳನ್ನು ಸರಕಾರ ಜಾರಿಗೊಳಿಸಿದೆ. ಅಧಿಕಾರಕ್ಕೆ ಬಂದ ಮೊದಲ ದಿನವೇ ಗ್ಯಾರಂಟಿ ಯೋಜನೆಗೆ ಚಾಲನೆ ನೀಡಿದ ಸರಕಾರ, ಮೊದಲ ಆರು ತಿಂಗಳಲ್ಲೇ ಐದೂ ಗ್ಯಾರಂಟಿಗಳನ್ನೂ ಅನುಷ್ಠಾನಗೊಳಿಸಿದೆ. ಇದಕ್ಕಾಗಿ ವಾರ್ಷಿಕವಾಗಿ 54 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. ಸರಕಾರ ಹೇಳಿಕೊಂಡಿರುವಂತೆ, ಈವರೆಗೆ 1.05 ಲಕ್ಷ ಕೋಟಿ ರೂ. ಪ್ರಯೋಜನವನ್ನು ನೇರವಾಗಿ ಜನರಿಗೆ ತಲುಪಿಸಲಾಗಿದೆ. ಈ ಕರ್ನಾಟಕ ಮಾದರಿ ಇಡೀ ದೇಶಾದ್ಯಂತ ಗಮನ ಸೆಳೆದಿದ್ದು, ವಿರೋಧಿಸಿದ್ದ ಬಿಜೆಪಿಯೇ ಈಗ ಇದನ್ನು ಅನುಸರಿಸುವಂತಾಗಿದೆ. ಗ್ಯಾರಂಟಿಗಳ ಸಮರ್ಥ ನಿಭಾಯಿಸುವಿಕೆ ಜೊತೆಗೇ ಅಭಿವೃದ್ಧಿ ಯೋಜನೆಗಳಿಗೆ ತಡೆಯಾಗದಂತೆ ಸಿದ್ದರಾಮಯ್ಯ ಸರಕಾರ ಮುನ್ನೆಚ್ಚರಿಕೆ ವಹಿಸಿದೆ. ಬಿಜೆಪಿಯವರು ಏನೇ ಬೊಬ್ಬೆ ಹೊಡೆದರೂ, ಈ ಯೋಜನೆಗಳಿಂದ ಸಾಕಷ್ಟು ಮಂದಿಗೆ ಅನುಕೂಲವಾಗಿದೆ, ಅವರ ಬದುಕು ಬದಲಾಗಿದೆ ಎನ್ನುವುದು ನಿಜ.

ಜಾತಿ ಸಮೀಕ್ಷೆ ಎಂಬ ಮಹತ್ವದ ಹೆಜ್ಜೆ

ಜಾತಿ ಸಮೀಕ್ಷೆ ರಾಜ್ಯ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಆರ್ಥಿಕ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯ ಮೂಲಕ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡುವುದು ಇದರ ಉದ್ದೇಶ. ಈ ಮೊದಲಿನ ಜಾತಿ ಸಮೀಕ್ಷೆಗೆ ವ್ಯಾಪಕ ವಿರೋಧ ಬಂದ ಬಳಿಕ ಮರು ಸಮೀಕ್ಷೆ ನಡೆಸಲಾಯಿತು. ಈಗ ಹೊಸ ಸಮೀಕ್ಷೆಯ ವರದಿ ಬರಬೇಕಿದ್ದು, ಬಿಜೆಪಿಯ ತೀವ್ರ ವಿರೋಧದ ನಡುವೆಯೂ ಈ ಸಮೀಕ್ಷೆ ನಡೆಸುವ ಮೂಲಕ ಸಿದ್ದರಾಮಯ್ಯ ತಮ್ಮ ಸಮಾಜವಾದಿ ಬದ್ಧತೆಯನ್ನು ಮೆರೆದಿದ್ದಾರೆ.

ಬೆಂಗಳೂರಿನ ಚಹರೆ ಬದಲಿಸುವ ಜಿಬಿಎ

ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು (ಜಿಬಿಎ) ರಚಿಸಲಾಗಿದ್ದು, ಬಿಬಿಎಂಪಿ ಎಂಬುದು ಕಣ್ಮರೆಯಾಗಲಿದೆ. ಬೆಂಗಳೂರಿನ ಆಡಳಿತಕ್ಕೆ ಇದರೊಂದಿಗೆ ಹೊಸ ರೂಪ ಬರುತ್ತದೆನ್ನುವುದು ಸರಕಾರದ ಪ್ರತಿಪಾದನೆ. ಇದಕ್ಕೂ ವಿರೋಧ ಬಂತಾದರೂ, ಬೆಂಗಳೂರು ನಗರದ ಆಡಳಿತ, ಯೋಜನೆ ಮತ್ತು ನಿರ್ವಹಣೆ ಹೆಚ್ಚು ಪರಿಣಾಮಕಾರಿಯಾಗಲು ಇದನ್ನು ತರಲಾಗಿದೆ. ಬೆಂಗಳೂರು ಒಟ್ಟು ಐದು ವಿಭಾಗಗಳಲ್ಲಿ ವಿಭಜನೆಯಾಗಲಿದ್ದು, ನಿರ್ವಹಣೆ ಸುರಳೀತವಾಗುವ ನಿರೀಕ್ಷೆಯಿದೆ.

ಟ್ರಾಫಿಕ್ ಸಮಸ್ಯೆಗೆ ಸುರಂಗ ಪರಿಹಾರ

ಬೆಂಗಳೂರಿಗೆ ಸಂಬಂಧಿಸಿ ಸಿದ್ದರಾಮಯ್ಯ ಸರಕಾರದ ಮತ್ತೊಂದು ಮಹತ್ವದ ಯೋಜನೆ ಸುರಂಗ ರಸ್ತೆ. ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು 16.7 ಕಿಲೋಮೀಟರ್ ಉದ್ದದ ಅವಳಿ ಸುರಂಗ ಮಾರ್ಗ ನಿರ್ಮಾಣ ಸರಕಾರದ ಉದ್ದೇಶ. ಹೆಬ್ಬಾಳದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಈ ಯೋಜನೆ ವಿಸ್ತರಿಸಲಿದೆ. ನಗರದ ಟ್ರಾಫಿಕ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈ ಹೆಜ್ಜೆ ತೆಗೆದುಕೊಳ್ಳಲಾಗಿದೆಯಾದರೂ, ಇದರ ಬಗ್ಗೆ ವಿವಾದವೂ ಇದೆ.

ಇವೆಲ್ಲದರ ಜೊತೆಗೆ, ನಕ್ಸಲರನ್ನು ಶರಣಾಗತಿಗೆ ಮನವೊಲಿಸಿ, ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಸರಕಾರ ಗೆದ್ದಿದೆ. ದೇವನಹಳ್ಳಿಯಲ್ಲಿ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕಾಗಿ ಸಾವಿರಕ್ಕೂ ಹೆಚ್ಚು ಎಕರೆ ಭೂಮಿ ಸ್ವಾಧೀನ ಮಾಡುವ ವಿಚಾರಕ್ಕೆ ರೈತರಿಂದ ತೀವ್ರ ವಿರೋಧ ಬಂದ ಬಳಿಕ ಭೂಸ್ವಾಧೀನ ಅಧಿಸೂಚನೆಯನ್ನೇ ಸಿದ್ದರಾಮಯ್ಯ ರದ್ದುಮಾಡಿ ರೈತರ ಪರ ನಿಲುವು ತೆಗೆದುಕೊಂಡರು. ಇತ್ತೀಚಿನ ಕಬ್ಬು ಬೆಳಗಾರರ ಹೋರಾಟಕ್ಕೂ, ಅವರ ಬೇಡಿಕೆ ಕೇಂದ್ರ ಸರಕಾರದ ಹೊಣೆಗಾರಿಕೆಯಡಿ ಬರುತ್ತಿದ್ದರೂ, ಸಿದ್ದರಾಮಯ್ಯ ಸಕಾರಾತ್ಮಕವಾಗಿಯೇ ಸ್ಪಂದಿಸಿದರು. ಸಿದ್ದರಾಮಯ್ಯನವರ ರಾಜಕಾರಣ ಬರೀ ರಾಜಕೀಯ ಮಾತ್ರವಾಗಿರದೆ, ಅದು ಬಸವ, ಅಂಬೇಡ್ಕರರ ತತ್ವಗಳನ್ನೂ ಆಧರಿಸಿದೆ ಎಂಬುದಕ್ಕೆ ಅವರ ಸರಕಾರದ ನೀತಿಗಳು ಮತ್ತು ನಡೆಗಳು ಸಾಕ್ಷಿಯಾಗಿವೆ. ಅವರ ಸರಕಾರದ ಸಾಧನೆಯನ್ನು ಈ ನೆಲೆಯಿಂದಲೂ ಅರ್ಥ ಮಾಡಿಕೊಳ್ಳುವುದು ಅಗತ್ಯ.

ಇನ್ನು, ಅವರ ಸರಕಾರದ ವೈಫಲ್ಯಗಳು, ಸರಕಾರದ ವಿರುದ್ಧದ ಆಪಾದನೆಗಳನ್ನು ಕೂಡ ಕಡೆಗಣಿಸಲು ಆಗುವುದಿಲ್ಲ. ವಾಲ್ಮೀಕಿ ನಿಗಮದ ಹಗರಣ ಮತ್ತು ಮುಡಾ ಪ್ರಕರಣ ಅವರ ಸರಕಾರಕ್ಕೆ ಕಳಂಕ ತರುವ ರೀತಿಯಲ್ಲಿ ಸಾಕಷ್ಟು ಸಮಯ ಕಾಡಿದವು. ಮುಡಾ ಪ್ರಕರಣ ರಾಜ್ಯ ಸರಕಾರದ ವಿರುದ್ಧ ಕೇಳಿಬಂದ ಬಹುದೊಡ್ಡ ಆರೋಪ. ಅದರಲ್ಲೂ ನೇರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪವಿತ್ತು. ಅವರ ಪತ್ನಿ ಹೆಸರಲ್ಲಿ ನಿವೇಶನ ಹಂಚಿಕೆಯಾಗಿರುವುದನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಲಾಯಿತು. ಈ ಬೇಡಿಕೆ ಮುಂದಿಟ್ಟುಕೊಂಡೇ ಬಿಜೆಪಿ ಪಾದಯಾತ್ರೆ ರಾಜಕೀಯವನ್ನೂ ಮಾಡಿತು. ಬಳಿಕ ಸಿದ್ದರಾಮಯ್ಯ ಪತ್ನಿ ಮುಡಾ ನಿವೇಶನ ವಾಪಸ್ ನೀಡಿದ್ದರು.

ವಾಲ್ಮೀಕಿ ಹಗರಣ ಕೂಡ ಇಷ್ಟೇ ದೊಡ್ಡ ಸುದ್ದಿ ಮಾಡಿತು. ವಾಲ್ಮೀಕಿ ಹಗರಣದ ಆರೋಪ ಹೊತ್ತ ಬಿ. ನಾಗೇಂದ್ರ ಅವರು ಸಂಪುಟಕ್ಕೆ ರಾಜೀನಾಮೆ ಕೊಡಬೇಕಾಯಿತು. ಇನ್ನು ಮತಗಳ್ಳತನ ಆರೋಪ ವಿಚಾರದಲ್ಲಿ ರಾಹುಲ್ ಮಾತಿಗೆ ಅಪಸ್ವರ ತೆಗೆದರೆಂಬ ಕಾರಣಕ್ಕೆ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಬೇಕಾಯಿತು. ಅವರು ಸಿದ್ದರಾಮಯ್ಯನವರ ಆಪ್ತರಾಗಿರುವುದರಿಂದ ಇದು ಸ್ವತಃ ಅವರಿಗೂ ಮುಜುಗರ ತಂದಿತ್ತು. ಕಾಂಗ್ರೆಸ್ ಸರಕಾರದ ವಿರುದ್ಧ ಗುತ್ತಿಗೆದಾರರಿಂದ ಕಮಿಷನ್ ಆರೋಪ ಬಂದದ್ದು ಕೂಡ ಸರಕಾರದ ವರ್ಚಸ್ಸಿಗೆ ಧಕ್ಕೆ ತಂದಿತು. ಕಾಂಗ್ರೆಸ್ ವಿರೋಧ ಪಕ್ಷವಾಗಿದ್ದಾಗ ಬಿಜೆಪಿ ಸರಕಾರದ ವಿರುದ್ಧ ಕಮಿಷನ್ ಆರೋಪ ಮಾಡಿತ್ತು. ಗುತ್ತಿಗೆದಾರರ ಸಂಘದ ಪತ್ರ ಇದಕ್ಕೆ ಕಾರಣವಾಗಿತ್ತು. ಅದೇ ಆರೋಪ ಕಾಂಗ್ರೆಸ್ ಸರಕಾರವನ್ನೂ ಸುತ್ತಿಕೊಂಡಾಗ, ಅದನ್ನು ಬಿಜೆಪಿ ಅಸ್ತ್ರವಾಗಿ ಬಳಸಿತು. ಅವರದೇ ಶಾಸಕರು ಸರಕಾರದ ಬಗ್ಗೆ, ಸಚಿವರ ಬಗ್ಗೆ ಆರೋಪ ಮಾಡತೊಡಗಿದ್ದು ಮತ್ತೊಂದು ಕಳಂಕವಾಗಿ ಕಾಡಿತು. ಕ್ಷೇತ್ರವಾರು ಅನುದಾನ ಹಂಚಿಕೆಯಲ್ಲಿ ಸರಕಾರ ವಿಫಲವಾಗಿದೆ ಎಂಬ ಅಸಮಾಧಾನ ವ್ಯಕ್ತವಾಯಿತು. ಶಾಸಕ ಬಿ.ಆರ್. ಪಾಟೀಲ್ ವಸತಿ ಇಲಾಖೆ ವಿರುದ್ಧ ಆರೋಪ ಮಾಡಿದ್ದರು. ಇವೆಲ್ಲವೂ ಆ ಹೊತ್ತಲ್ಲಿ ಸರಕಾರಕ್ಕೆ ಹಿನ್ನಡೆ ಉಂಟುಮಾಡುವಂತೆ ಕಂಡವು.

ಆದರೆ ಇವೆಲ್ಲವನ್ನೂ ಮೀರಿ ಸರಕಾರವನ್ನು ಮತ್ತೆ ಮತ್ತೆ ಇಕ್ಕಟ್ಟಿನಲ್ಲಿ ಬೀಳಿಸುತ್ತಿದ್ದದ್ದು ಅಧಿಕಾರ ಹಸ್ತಾಂತರದ ಗದ್ದಲ. ಹೈಕಮಾಂಡ್ ನಾಯಕರು ಎಷ್ಟೇ ಎಚ್ಚರಿಕೆ ಕೊಡುತ್ತಿದ್ದರೂ ಸಿದ್ದರಾಮಯ್ಯ ಆಪ್ತರು ಮತ್ತು ಡಿ.ಕೆ. ಶಿವಕುಮಾರ್ ಕಡೆಯವರು ಮತ್ತೆ ಮತ್ತೆ ಅದರ ಪ್ರಸ್ತಾಪ ಮಾಡುತ್ತ ಗೊಂದಲ ಮೂಡಿಸುತ್ತಿದ್ದರು.

ಇಲ್ಲಿ ಸಮಸ್ಯೆಯಿರುವುದೇ ಅಧಿಕಾರ ಹಂಚಿಕೆ ಸೂತ್ರವಿದೆ ಎಂಬ ಒಂದು ನಿಗೂಢದಲ್ಲಿ. ಇದು ನಿಜವಾಗಿಯೂ ಇದೆಯೇ ಎಂಬುದರ ಬಗ್ಗೆ ಕಾಂಗ್ರೆಸ್ ಕೇಂದ್ರ ನಾಯಕರಾಗಲಿ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಾಗಲೀ ಎಲ್ಲೂ ಹೇಳಿಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷವೂ ಸಿಎಂ ಆಗಿ ಮುಂದುವರಿಯುತ್ತಾರೆ ಎನ್ನುವುದರ ಬಗ್ಗೆ ಹೈಕಮಾಂಡ್ ಕೂಡ ಯಾಕೋ ಈವರೆಗೂ ಎಲ್ಲಿಯೂ ಸ್ಪಷ್ಟವಾಗಿ ಮಾತಾಡಿಲ್ಲ. ಈ ಅಸ್ಪಷ್ಟತೆಯೇ ಎಲ್ಲ ಗೊಂದಲದ ಮೂಲವಾಗಿದೆ. ಸದ್ಯ ಎಲ್ಲವೂ ತಣ್ಣಗಾದಂತಿದೆಯಾದರೂ, ಮತ್ತೆ ಭುಗಿಲೇಳುವ ಸಾಧ್ಯತೆ ಇಲ್ಲದೇ ಇಲ್ಲ. ಮುಂದೇನು ಎನ್ನುವುದರ ನಡುವೆಯೇ, ಸಿದ್ದರಾಮಯ್ಯ ಎರಡೂವರೆ ವರ್ಷ ಪೂರೈಸಿ, ದ್ವಿತೀಯಾರ್ಧವನ್ನು ಆರಂಭಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಆರ್.ಜೀವಿ

contributor

Similar News