ಅಂಜುಮನ್ ಕಮಿಟಿಯಿಂದ 100ಕ್ಕೂ ಅಧಿಕ ಬಡ ಮಹಿಳೆಯರಿಗೆ ಬಡ್ಡಿರಹಿತ ಸಾಲ ವಿತರಣೆ
ವಿಜಯನಗರ : ಅಂಜುಮನ್ ಕಮಿಟಿ ವತಿಯಿಂದ ಅಂಜುಮನ್ ಶಾದಿಮಹಲ್‌ನಲ್ಲಿ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ, ಯಾವುದೇ ಬಡ್ಡಿ ಇಲ್ಲದೆ ತಲಾ 10,000ರೂ. ಮೊತ್ತದ ಆರ್ಥಿಕ ಸಹಕಾರವನ್ನು 100ಕ್ಕೂ ಹೆಚ್ಚು ಮಹಿಳೆಯರಿಗೆ ವಿತರಿಸಲಾಯಿತು. ಸಹಾಯ ಪಡೆದ ಮಹಿಳೆಯರು ದಿನಕ್ಕೆ 100 ರೂಪಾಯಿಯಂತೆ 100 ದಿನಗಳಲ್ಲಿ ಮರುಪಾವತಿ ಮಾಡಬೇಕಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಮೊಹಿನುದ್ದಿನ್ ದುರ್ವೆಶ್, ಮಹಿಳೆಯರು ಸ್ವ ಉದ್ಯೋಗದ ಮೂಲಕ ಸ್ವಾವಲಂಬಿಗಳಾಗಬೇಕು ಎಂಬ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಹೊಲಿಗೆ, ಸಣ್ಣ ವ್ಯಾಪಾರ, ಗೃಹಾಧಾರಿತ ಉದ್ಯಮಗಳು ಸೇರಿದಂತೆ ಜೀವನೋಪಾಯಕ್ಕೆ ಸಹಕಾರಿಯಾಗುವ ಕಾರ್ಯಗಳಿಗೆ ಈ ಹಣವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಯಾವುದೇ ಬಡ್ಡಿ ಇಲ್ಲದೇ ನೀಡಲಾಗುತ್ತಿರುವ ಈ ಸಹಾಯಧನದಿಂದ ಬಡ ಕುಟುಂಬಗಳ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದರ ಜೊತೆಗೆ, ಕುಟುಂಬದ ಆರ್ಥಿಕ ಸ್ಥಿತಿಗತಿಗೂ ಬಲ ಸಿಗಲಿದೆ ಎಂದು ಅಂಜುಮನ್ ಕಮಿಟಿ ಯ ಅಧ್ಯಕ್ಷರಾದ ಎಚ್ ಎನ್ ಮಹಮ್ಮದ್ ಇಮಾಮ್ ನಿಯಾಜಿ ಹೇಳಿದರು.
ಕಾರ್ಯಕ್ರಮದಲ್ಲಿ, ಅನ್ಸಾರ್ ಬಾಷ, ಫೈರೋಝ್ ಖಾನ್, ನಗರಸಭಾ ಸದಸ್ಯೆ ಮುನ್ನಿ, ಮಹಬೂಬ್ ಬೈ, ದಾದಾಪೀರ್, ಖದೀರ್ ಬೈ ( ಕಂಚಗಾರ್ ಪೇಟ್ ), ಗಫೂರ್ ಬೈ, ಅತ್ತಾಯೇ ರಸೂಲ್, ಗುಲಾಮ್ ರಸೂಲ್, ಮೆಟ್ರೋ ಮುರ್ಶಿದ್, ಸದ್ದಾಂ, ಮೊಹಿಶಿನ್ ಕೊತ್ವಾಲ್, ಮಹಬು ಸಾಬ್, ನಯೀಂ ಸಾಬ್, ಜಹಾಂಗೀರ್ ಬೈ, ಹಾಗೂ ಅಂಜುಮ್ ಕಮಿಟಿಯ ಎಲ್ಲಾ ಸದಸ್ಯರು, ಗಣ್ಯರು ಹಾಗೂ ಲಾಭ ಪಡೆದ ಮಹಿಳೆಯರು ಉಪಸ್ಥಿತರಿದ್ದರು.