ವಿಜಯನಗರ | ರಾಜ್ಯ ಸರಕಾರದ ಸರಳ ವಿವಾಹ ಯೋಜನೆಯ ಸದುಪಯೋಗ ಪಡೆದುಕೊಳ್ಳಿ : ಶಾಸಕ ಎಚ್.ಆರ್.ಗವಿಯಪ್ಪ
ಸರಳ ವಿವಾಹ ಯೋಜನೆಯಡಿ 10 ಮುಸ್ಲಿಂ ನವ ಜೋಡಿಗಳ ಸಾಮೂಹಿಕ ವಿವಾಹ
ವಿಜಯನಗರ (ಹೊಸಪೇಟೆ): ಕರ್ನಾಟಕ ರಾಜ್ಯದ ನದಾಫ್/ಪಿಂಜಾರ ಸಂಘ (ರಿ) ಹಾಗೂ ಖಾಜಾ ಗರೀಬ್ ನವಾಜ್ ಟ್ರಸ್ಟ್ (ರಿ) ವತಿಯಿಂದ ನಗರದ ಉಮರ್ ಫಂಕ್ಷನ್ ಹಾಲ್‌ನಲ್ಲಿ ಗುರುವಾರ ರಾಜ್ಯ ಸರ್ಕಾರದ ಸರಳ ವಿವಾಹ ಯೋಜನೆ ಅಡಿಯಲ್ಲಿ 10 ಮುಸ್ಲಿಂ ನವ ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಹೆಚ್.ಆರ್. ಗವಿಯಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಸರ್ವಧರ್ಮದ ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇಂದಿನ ದುಬಾರಿ ಜೀವನದಲ್ಲಿ ಮದುವೆ ನಡೆಸುವುದು ಬಡವರಿಗೆ ಕಷ್ಟಕರವಾಗಿದ್ದು, ಈ ಹಿನ್ನೆಲೆ ಬಡತನ ರೇಖೆ ಒಳಗಿನ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಸರಳ ವಿವಾಹ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ ಎಂದು ತಿಳಿಸಿದರು.
ಈ ಯೋಜನೆಯಡಿ ಪ್ರತಿ ಜೋಡಿಗೆ 50,000 ರೂ. ಸಹಾಯಧನ ನೀಡಲಾಗುತ್ತಿದೆ. ಇಂತಹ ಜನಪರ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನದಾಫ್/ಪಿಂಜಾರ ಸಂಘ ಹಾಗೂ ಖಾಜಾ ಗರೀಬ್ ನವಾಜ್ ಟ್ರಸ್ಟ್ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನವಜೋಡಿಗಳಿಗೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘ (ಶಿವಮೊಗ್ಗ) ರಾಜ್ಯಾಧ್ಯಕ್ಷ ಹೆಚ್. ಜಲೀಲಸಾಬ್, ಜಿ. ಸೈಯದ್ ಖಾದರ್ ರಾಫಯಿ, ಬಡವಲಿ ಪಿ, ಹೊನ್ನೂರಸಾಬ್, ಇ. ದಾದಾ ಖಲಂದರ್, ಹನೀಫ್, ಜಲೀಲ್, ಕಟಕಿ ಸಾಧಿಕ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.