ವಿಜಯನಗರ | ‘ವಾತ್ಸಲ್ಯ ಮನೆ’ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
ವಿಜಯನಗರ, ಫೆ. 2: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ಗತಿಕರಿಗೆ ಮತ್ತು ಬಡತನದಲ್ಲಿರುವವರಿಗೆ ಮಾಸಾಶನ ನೀಡುವುದು ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಾಗುತ್ತಿದೆ ಎಂದು ಹರಿಪುರ ಕ್ಷೇತ್ರ ಯೋಜನಾಧಿಕಾರಿ ಬಾಬು ಹೇಳಿದರು.
ತಾಲೂಕಿನ ಉಚ್ಚಂಗಿದುರ್ಗ ಸಮೀಪದ ಯು.ಬೇವಿನಹಳ್ಳಿ ಗ್ರಾಮದಲ್ಲಿ ಭೋವಿ ತಿಮ್ಮಕ್ಕನಿಗೆ ದರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಜೂರಾಗಿದ್ದ ವಾತ್ಸಲ್ಯ ಮನೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಭೋವಿ ತಿಮ್ಮಕ್ಕ ಎಂಬವರಿಗೆ ವಾಸಿಸಲು ಯೋಗ್ಯವಾದ ಮನೆ ಇಲ್ಲದ ಕಾರಣ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಮನೆ ಮಂಜೂರಾಗಿದೆ. ವಾತ್ಸಲ್ಯ ಮನೆ 1 ಲಕ್ಷ 35 ಸಾವಿರ ರೂ.ನಲ್ಲಿ ನಿರ್ಮಾಣವಾಗುತ್ತಿದೆ. ಶೌಚಾಲಯ, ಅಡುಗೆಕೋಣೆ, ಸೇರಿ ಸುಸಜ್ಜಿತ ಮನೆ ನಿರ್ಮಾಣ ಮಾಡಿಕೊಡುತ್ತೇವೆ ಎಂದರು.
ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಅನಿತಾ, ಮೇಸ್ತ್ರಿ ಆಲೂರು ಜಿಡಿ ಮಂಜುನಾಥ್, ಮಂಜುಳಾ, ಆರ್ಚಕರು ಪೂಜಾರ್ ಪ್ರೇಮ್ ಕುಮಾರ್, ಮಮತಾ,ಅನಿತಾ,ರೇಣುಕಾ, ಮತ್ತಿತರರು ಉಪಸ್ಥಿತರಿದ್ದರು.