ವಿಜಯನಗರ | ರೈತರ ಜಿಲ್ಲಾ ಸಮಾವೇಶ
ವಿಜಯನಗರ, ಡಿ. 29: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವಾಸುದೇವ ಮೇಟಿ ಬಣದಿಂದ ಜಿಲ್ಲೆಯ ಹೊಸಪೇಟೆಯಲ್ಲಿ ರೈತರ ದಿನಾಚರಣೆ-2025 ಅಂಗವಾಗಿ ವಿಜಯನಗರ ಜಿಲ್ಲಾ 3ನೆ ವರ್ಷದ ರೈತರ ಸಮಾವೇಶ ಹಮ್ಮಿಕೊಳ್ಳಲಾಯಿತು.
ರೈತರು ನೇಗಿಲು ಪೂಜೆ ಸಲ್ಲಿಸಿ ನಗರದ ವಡಕರಾಯ ದೇವಸ್ಥಾನದಿಂದ ಮುಖ್ಯಬೀದಿ, ಮೇನ್ ಬಜಾರ್ - ಪಾದಗಟ್ಟೆ ಆಂಜನೇಯ ದೇವಸ್ಥಾನ ದರ್ಗಾಮಸೀದಿ - ಅಂಬೇಡ್ಕರ್ ವೃತ, ಕಾಲೇಜ್ ರಸ್ತೆ ಮುಖಾಂತರ 101 ಕಳಸಗಳನ್ನು ಯುವತಿಯರು ಹೊತ್ತುಕೊಂಡು ಮೆರವಣಿಗೆಯಲ್ಲಿ ಸಾಗಿದರು. 21 ಜೋಡಿ ಎತ್ತಿನ ಬಂಡಿ, ಡೊಳ್ಳು, ಕೋಲಾಟ, ಭಜನೆ, ವಿವಿಧ ಕಲಾ ಸಾಂಸ್ಕೃತಿಕ ಜಾನಪದ ತಂಡದ ಜೊತೆಗೆ ಜಿಲ್ಲಾ ಒಳಾಂಗಣ ಕ್ರೀಡಾಂಗಣಕ್ಕೆ ತಲುಪಿದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ರಾಣಿ ಸಂಯುಕ್ತ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ದೇಶದಲ್ಲಿ ಪ್ರತಿವರ್ಷ ಡಿ.23 ಅನ್ನು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ ಎಂದು ಆಚರಿಸಲಾಗುತ್ತದೆ. ಭಾರತದ ಬೆನ್ನುಲುಬು ರೈತರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಭಾರತ ಕೃಷಿ ಪ್ರಧಾನ ದೇಶವಾಗಿರುವುದರಿಂದ ಇಲ್ಲಿ ರೈತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ನಾವು ತಿನ್ನುವ ದವಸ ಧಾನ್ಯಗಳು, ಹಣ್ಣು, ತರಕಾರಿ, ಹೈನುಗಾರಿಕಾ ಉತ್ಪನ್ನಗಳನ್ನೆಲ್ಲ ಉತ್ಪಾದಿಸುವುದು ಈ ರೈತರೆ. ಅನಾದಿ ಕಾಲದಿಂದಲೂ ನಮ್ಮ ದೇಶವನ್ನು ಮುನ್ನಡೆಸಿದ್ದು ಈ ರೈತರೇ ಎಂಬುದು ತುಂಬಾ ಹೆಗ್ಗಳಿಕೆಯ ವಿಷಯ ಎಂದರು.