ಕಂಪ್ಲಿ | ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ
ಕಂಪ್ಲಿ , ಡಿ. 29: ಅಪರಾಧ ತಡೆ ಮಾಸಾಚರಣೆಯ ಕಾರ್ಯಕ್ರಮ ಅಂಗವಾಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಮತ್ತು ಬಂಗಾರದ ಅಂಗಡಿಗಳ ಮಾಲಕರಿಗೆ ವಿಶೇಷ ಸಭೆ ಆಯೋಜಿಸಲಾಗಿತ್ತು.
ಠಾಣೆಯ ಪಿಐ ಕೆ.ಬಿ.ವಾಸುಕುಮಾರ ಮಾತನಾಡಿ, ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಯವರು ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಗುಣಮಟ್ಟದ ಸಿಸಿಟಿವಿ ಕ್ಯಾಮೆರಾ ಬ್ಯಾಂಕಿನ ಒಳಗೆ ಮತ್ತು ಹೊರಗೆ ಅಳವಡಿಸಿ, 24/7 ರೆಕಾರ್ಡಿಂಗ್ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ಅಗತ್ಯಕ್ಕೆ ಅನುಗುಣವಾಗಿ ನುರಿತ ಸಶಸ್ತ್ರ ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳಬೇಕು, ತುರ್ತು ಸಂದರ್ಭದಲ್ಲಿ ಶಬ್ಧ ಮಾಡುವ ’ಸೈರನ್’ ಅಥವಾ ’ಪ್ಯಾನಿಕ್ ಬಟನ್’ಗಳನ್ನು ಸುಲಭವಾಗಿ ಕೈಗೆಟುಕುವ ಜಾಗದಲ್ಲಿ ಇರಿಸಬೇಕು ಎಂದು ಸಲಹೆ ನೀಡಿದರು.
ಹೆಚ್ಚಿನ ಹಣ ಸಾಗಿಸುವಾಗ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅಥವಾ ಖಾಸಗಿ ಭದ್ರತಾ ವಾಹನ ಬಳಸಬೇಕು. ಬಂಗಾರದ ಅಂಗಡಿಗಳ ಮಾಲಕರು ಚಿನ್ನಾಭರಣ ಇರಿಸಲು ಅತ್ಯಾಧುನಿಕ ಮತ್ತು ಭದ್ರವಾದ ಲಾಕರ್ ಅಥವಾ ಸೇಫ್‌ಗಳನ್ನು ಬಳಸಿ, ಅಂಗಡಿಗೆ ಬರುವ ಅಪರಿಚಿತರ ಚಲನವಲನದ ಮೇಲೆ ನಿಗಾ ಇಡಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಮುಂದಾಗುವ ಅನಾಹುತ ತಡೆಗಟ್ಟಬೇಕು ಎಂದರು.
ಅಂಗಡಿಯ ಸುತ್ತಮುತ್ತ ರಾತ್ರಿಯ ವೇಳೆಯೂ ಕೂಡ ಉತ್ತಮ ಬೆಳಕಿನ ವ್ಯವಸ್ಥೆ ಇರಬೇಕು, ಪ್ರತಿಯೊಬ್ಬ ಗ್ರಾಹಕರ ಗುರುತಿನ ಚೀಟಿ ಅಥವಾ ಮೊಬೈಲ್ ಸಂಖ್ಯೆ ದಾಖಲಿಸಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು. ಇನ್ನೂ ಸ್ಥಳೀಯ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ ತುರ್ತು ಸಂಪರ್ಕಕ್ಕಾಗಿ ಪ್ರದರ್ಶಿಸಬೇಕು ಹಾಗೂ ಅಪರಾಧ ತಡೆ ಕುರಿತು ಪೊಲೀಸರು ನೀಡುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅರಿವು ಮೂಡಿಸಿದರು.
ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ತಕ್ಷಣವೇ 112 ಸಹಾಯವಾಣಿಗೆ ಕರೆ ಮಾಡಿ ತಿಳಿಸಬೇಕು ಎಂದು ಬ್ಯಾಂಕ್ ಹಾಗೂ ಆಭರಣಗಳ ಅಂಗಡಿ ಮಾಲಕರಿಗೆ ಕರೆ ನೀಡಿದರು.
ಕಾನೂನು ಸುವ್ಯವಸ್ಥೆಯ ಪಿಎಸ್‌ಐ ಅವಿನಾಶ್ ಕಾಂಬ್ಳೆ ಸೇರಿದಂತೆ ಠಾಣಾಧಿಕಾರಿಗಳು, ಪೊಲೀಸ್ ಪೇದೆಗಳು, ವಿವಿಧ ಅಂಗಡಿ ಮಾಲೀಕರು, ಬ್ಯಾಂಕಿನ ಮುಖ್ಯಸ್ಥರು, ಸಾರ್ವಜನಿಕರು ಉಪಸ್ಥಿತರಿದ್ದರು.