Vijayanagara | ಜನಸಂಖ್ಯೆ ನಿಯಂತ್ರಣಕ್ಕೆ ಜಾಗೃತಿ ಜಾಥಾ
ಆರೋಗ್ಯಕರ ಕುಟುಂಬ ಯೋಜನೆ ಅಳವಡಿಸಿಕೊಳ್ಳುವಂತೆ ಡಿಎಚ್‌ಒ ಕರೆ
ವಿಜಯನಗರ (ಹೊಸಪೇಟೆ), ಜು.18: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ಶನಿವಾರ ನಗರದಲ್ಲಿ ಜನಸಂಖ್ಯೆ ನಿಯಂತ್ರಣ ಕುರಿತು ಜಾಗೃತಿ ಜಾಥಾ ನಡೆಸಲಾಯಿತು.
ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ), ಜನಸಂಖ್ಯೆ ನಿಯಂತ್ರಣವು ಒಂದು ದಿನದ ಕಾರ್ಯಕ್ರಮವಲ್ಲ. ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಈ ಕುರಿತು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸುರಕ್ಷಿತ ಸಮಯದಲ್ಲಿ ಗರ್ಭಧಾರಣೆ ಹಾಗೂ ಎರಡು ಮಕ್ಕಳ ಜನನದ ನಡುವೆ ಕನಿಷ್ಠ ಮೂರು ವರ್ಷಗಳ ಅಂತರ ಕಾಯ್ದುಕೊಳ್ಳುವುದು ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದೆ. ಅನಗತ್ಯ ಗರ್ಭಧಾರಣೆ ತಡೆಯಲು ಆರೋಗ್ಯ ಇಲಾಖೆಯಲ್ಲಿ ಲಭ್ಯವಿರುವ ಗರ್ಭನಿರೋಧಕ ಸಾಧನಗಳು, ಚುಚ್ಚುಮದ್ದು ಹಾಗೂ ಮಾತ್ರೆಗಳ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕುಟುಂಬ ಯೋಜನೆ ಮಹಿಳೆಯರಿಗೆ ಮಾತ್ರ ಸೀಮಿತವಲ್ಲ. ಪುರುಷರೂ ಸಂತಾನಹರಣ ಸೇರಿದಂತೆ ಸುರಕ್ಷಿತ ಕುಟುಂಬ ಯೋಜನಾ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಹಿಳೆಯರ ಆರೋಗ್ಯ ಕಾಪಾಡುವಲ್ಲಿ ಪಾಲುದಾರರಾಗಬೇಕು ಎಂದು ಕರೆ ನೀಡಿದರು.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಿಂದ ಆರಂಭವಾದ ಜಾಥಾ ಪುಣ್ಯಮೂರ್ತಿ ವೃತ್ತ, ಬಸ್ ನಿಲ್ದಾಣ, ಡಾ. ಪುನೀತ್ ರಾಜ್‌ಕುಮಾರ್ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ದೊಡ್ಡ ಮಸೀದಿ ಮಾರ್ಗವಾಗಿ ಸಂಚರಿಸಿ ಮತ್ತೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಸಮಾಪ್ತಿಯಾಯಿತು.
ಜಾಥಾದಲ್ಲಿ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಜಂಬಯ್ಯ, ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ವಿನಯ್, ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ರಾಧಿಕಾ, ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ, ಕ್ಷಯರೋಗ ನಿರ್ಮೂಲನಾಧಿಕಾರಿ ಭಾಸ್ಕರ್, ಆರೋಗ್ಯ ನಿರೀಕ್ಷಣಾಧಿಕಾರಿ ಧರ್ಮನಗೌಡ, ತಾಲೂಕು ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.