Vijayanagara | ಕಿಶೋರ ಆರೋಗ್ಯ ಜಾಗೃತಿಗೆ ‘ಸ್ನೇಹ ಕ್ಲಬ್’ ಸಭೆ
ಹೊಸಪೇಟೆ/ವಿಜಯನಗರ: ರಾಷ್ಟ್ರೀಯ ಕಿಶೋರ ಆರೋಗ್ಯ ಕಾರ್ಯಕ್ರಮ (ಆರ್‌ಕೆಎಸ್‌ಕೆ) ಅಡಿಯಲ್ಲಿ ಗಾದಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಸಮಾನ ಸ್ಕಂದ ಶಿಕ್ಷಕರ ಚಟುವಟಿಕೆ’ (Peer Educators Activity) ಅಂಗವಾಗಿ ‘ಸ್ನೇಹ ಕ್ಲಬ್’ ಸಭೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜು ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಯಿತು.
ಸಭೆಯಲ್ಲಿ ಸಮಾನ ಸ್ಕಂದ ಶಿಕ್ಷಕರಿಗೆ ಉಚಿತವಾಗಿ ಟಿ-ಶರ್ಟ್, ಕ್ಯಾಪ್, ಬ್ಯಾಡ್ಜ್ ಹಾಗೂ ಹದಿಹರೆಯದವರ ಆರೋಗ್ಯ ಶಿಕ್ಷಣ ಕುರಿತ ಕೈಪಿಡಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, ಕಿಶೋರ-ಕಿಶೋರಿಯರಲ್ಲಿ ಆರೋಗ್ಯದ ಅರಿವು ಮೂಡಿಸುವಲ್ಲಿ ಸಮಾನ ಸ್ಕಂದ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆರೋಗ್ಯಕರ ಜೀವನಶೈಲಿ, ಮಾನಸಿಕ ಆರೋಗ್ಯ, ಪೌಷ್ಟಿಕ ಆಹಾರ ಹಾಗೂ ವೈಯಕ್ತಿಕ ಸ್ವಚ್ಛತೆ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಲು ಅವರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಜಂಬಯ್ಯ ಬಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ, ಹೊಸಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ವಿನೋದ್ ಕುಮಾರ್, ಗಾದಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದಿವ್ಯಶ್ರೀ, ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಧರ್ಮನಗೌಡ, ಜಿಲ್ಲಾ ಆರ್‌ಕೆಎಸ್‌ಕೆ ಸಂಯೋಜಕ ಯುವರಾಜ್ ಕೆ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಸಹದೇವ್ ಬಿ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಸಮಾನ ಸ್ಕಂದ ಶಿಕ್ಷಕರು ಭಾಗವಹಿಸಿದ್ದರು.