Vijayanagara | ಮೂರು ತಿಂಗಳಾದರೂ ಮುರಿದ ವಿದ್ಯುತ್ ಕಂಬ ದುರಸ್ತಿ ಇಲ್ಲ : ಜೆಸ್ಕಾಂ ವಿರುದ್ಧ ಗ್ರಾಮಸ್ಥರ ಆಕ್ರೋಶ

Update: 2026-07-18 22:35 IST

ಕೊಟ್ಟೂರು (ವಿಜಯನಗರ): ತಾಲೂಕಿನ ಹರಾಳು ಗ್ರಾಮದ ಸ್ಮಶಾನದ ಸಮೀಪದ ಶ್ರೀ ಗೋಣಿಬಸವೇಶ್ವರ ಸ್ವಾಮಿ ದೇವಸ್ಥಾನದ ಬಳಿ ಮೂರು ತಿಂಗಳ ಹಿಂದೆ ಗಾಳಿ-ಮಳೆಗೆ ಮುರಿದು ಬಿದ್ದ ವಿದ್ಯುತ್ ಕಂಬವನ್ನು ಇದುವರೆಗೆ ಮರುಸ್ಥಾಪಿಸದಿರುವುದಕ್ಕೆ ಗ್ರಾಮಸ್ಥರು ಹಾಗೂ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವಸ್ಥಾನ ಮತ್ತು ಸ್ಮಶಾನಕ್ಕೆ ತೆರಳುವ ಮುಖ್ಯ ಮಾರ್ಗದಲ್ಲೇ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ವಿದ್ಯುತ್ ತಂತಿಗಳೂ ದಾರಿಯುದ್ದಕ್ಕೂ ಹರಡಿಕೊಂಡಿವೆ. ಸುರಕ್ಷತಾ ದೃಷ್ಟಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಮೂರು ತಿಂಗಳು ಕಳೆದರೂ ಮರು ಸಂಪರ್ಕ ಕಲ್ಪಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಸಂಜೆ ವೇಳೆಗೆ ದೇವಸ್ಥಾನದ ಗರ್ಭಗುಡಿ ಹಾಗೂ ಸುತ್ತಮುತ್ತಲಿನ ಪ್ರದೇಶ ಸಂಪೂರ್ಣ ಕತ್ತಲಿನಲ್ಲಿ ಮುಳುಗುತ್ತಿದ್ದು, ದರ್ಶನಕ್ಕೆ ಬರುವ ಭಕ್ತರು ಭಯಭೀತಿಯಿಂದ ಸಂಚರಿಸುವಂತಾಗಿದೆ ಎಂದು ದೇವಸ್ಥಾನದ ಪೂಜಾರಿ ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.

ಜೆಸ್ಕಾಂ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಮುರಿದ ವಿದ್ಯುತ್ ಕಂಬವನ್ನು ಮರುಸ್ಥಾಪಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಸಮಸ್ಯೆ ನಿವಾರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News