×
Ad

Vijayanagara | ನೀಟ್ ಪೇಪರ್ ಸೋರಿಕೆ ಖಂಡನೆ : ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆಗೆ ಯುವ ಕಾಂಗ್ರೆಸ್ ತೀರ್ಮಾನ

Update: 2026-05-17 22:09 IST

ಹೊಸಪೇಟೆ/ವಿಜಯನಗರ: ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ವಿಜಯನಗರದ ಐ.ಬಿ. ಸಭಾಂಗಣದಲ್ಲಿ ಹೊಸಪೇಟೆ ವಿಧಾನಸಭಾ ಕ್ಷೇತ್ರದ ಕಾರ್ಯಕಾರಿಣಿ ಸಭೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ನಾಯ್ಕ್ ಅವರ ನೇತೃತ್ವದಲ್ಲಿ ನಡೆಯಿತು.

ಸಭೆಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯಗಳಿಂದ ದೇಶದ ಸುಮಾರು 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡಿರುವ ನೀಟ್ ಪರೀಕ್ಷೆಯ ಪೇಪರ್ ಸೋರಿಕೆ ಪ್ರಕರಣವನ್ನು ತೀವ್ರವಾಗಿ ಖಂಡಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಮುಖಂಡರು, ವಿದ್ಯಾರ್ಥಿಗಳ ಶ್ರಮ ಹಾಗೂ ಭವಿಷ್ಯವನ್ನು ಹಾಳುಮಾಡುವಂತಹ ಪರೀಕ್ಷಾ ಅಕ್ರಮಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನೀಟ್ ಪೇಪರ್ ಸೋರಿಕೆ ಪ್ರಕರಣದ ಕುರಿತು ಪಾರದರ್ಶಕ ಹಾಗೂ ನ್ಯಾಯಸಮ್ಮತ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ದಿನದಿಂದ ದಿನಕ್ಕೆ ಏರುತ್ತಿರುವ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿ, ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಸಂಘಟನೆ ಬಲವರ್ಧನೆ, ಯುವ ಕಾರ್ಯಕರ್ತರಿಗೆ ಜವಾಬ್ದಾರಿಗಳ ಹಂಚಿಕೆ, ಪಕ್ಷದ ತತ್ವಾಧಾರಿತ ಕಾರ್ಯಕ್ರಮಗಳನ್ನು ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿಯಾಗಿ ತಲುಪಿಸುವುದು ಹಾಗೂ ಮುಂಬರುವ ರಾಜಕೀಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸುವ ಕುರಿತು ಸಮಗ್ರ ಚರ್ಚೆ ನಡೆಯಿತು. ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಚಟುವಟಿಕೆಗಳಿಗೆ ಸೆಳೆಯಲು ವಿಶೇಷ ಕಾರ್ಯಯೋಜನೆ ರೂಪಿಸುವ ಅಗತ್ಯವಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಅಬು ತಾಯರ್, ಉಪಾಧ್ಯಕ್ಷರಾದ ನಾಗರಾಜ್ ಬಡಲಡಿಕಿ, ಜೀಶನ್, ಹೊಸಪೇಟೆ ಅಧ್ಯಕ್ಷ ಹರೂನ್ ಶೇಖ್, ಹೊಸಪೇಟೆ ಬ್ಲಾಕ್ ಅಧ್ಯಕ್ಷ ಪ್ರದೀಪ್, ಕಮಲಾಪುರ ಬ್ಲಾಕ್ ಅಧ್ಯಕ್ಷ ಗೌಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಶೇಖ್, ಲೀಗಲ್ ಸೆಲ್ ಅಧ್ಯಕ್ಷ ಅಜಾದ್ ಹಾಗೂ ಸಾಮಾಜಿಕ ಜಾಲತಾಣ ಜಿಲ್ಲಾ ಅಧ್ಯಕ್ಷ ಗಣೇಶ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಊಹಾಪೋಹಗಳಿಗೆ ಯಾರೂ ಕಿವಿಗೊಡಬೇಕಿಲ್ಲ. ಪಕ್ಷವು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ನಿರ್ವಹಿಸುತ್ತೇನೆ. ಯುವ ಕಾಂಗ್ರೆಸ್ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವುದು ನನ್ನ ಪ್ರಮುಖ ಗುರಿಯಾಗಿದ್ದು, ಪಕ್ಷದ ತತ್ವಗಳು ಮತ್ತು ಸಂಘಟನೆಯ ಮೂಲ ಉದ್ದೇಶಗಳನ್ನು ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸಿ ಅಚ್ಚುಕಟ್ಟಾಗಿ ಮುನ್ನಡೆಸುತ್ತೇನೆ. ಪಕ್ಷವು ನೀಡಿರುವ ಉನ್ನತ ಸ್ಥಾನಮಾನವನ್ನು ಜವಾಬ್ದಾರಿಯುತವಾಗಿ ನಿಭಾಯಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

-ಅಶೋಕ್ ನಾಯ್ಕ್



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News