Vijayanagara | ವೈರ್ ಕಳ್ಳತನ ಪ್ರಕರಣ : ನಾಲ್ವರ ಬಂಧನ
ಹೊಸಪೇಟೆ/ವಿಜಯನಗರ: ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ವಿಂಡ್ ಮಿಲ್ ವಿದ್ಯುತ್ ಕಂಬಗಳ ಅಲ್ಯೂಮಿನಿಯಂ ವೈರ್ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿತರಿಂದ ಸುಮಾರು 10.50 ಲಕ್ಷ ರೂ. ಮೌಲ್ಯದ ನಗದು, ಅಲ್ಯೂಮಿನಿಯಂ ವೈರ್ ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
2026ರ ಎ.7ರಂದು ವಿಂಡ್ ಮಿಲ್ ವಿದ್ಯುತ್ ಕಂಬದಲ್ಲಿನ ಅಲ್ಯೂಮಿನಿಯಂ ವೈರ್ ಕಳ್ಳತನವಾಗಿದ್ದ ಕುರಿತು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 68/2026 ಪ್ರಕರಣ ದಾಖಲಾಗಿತ್ತು. ಪ್ರಕರಣದ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಎಸ್. ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಕೂಡ್ಲಿಗಿ ಉಪ ವಿಭಾಗದ ಡಿಎಸ್ಪಿ ಮಲ್ಲೇಶ ದೊಡ್ಡಮನಿ, ಕೊಟ್ಟೂರು ಸಿಪಿಐ ದುರುಗಪ್ಪ ಅವರ ನೇತೃತ್ವದಲ್ಲಿ ಪಿಎಸ್‌ಐ ಗೀತಾಂಜಲಿ ಶಿಂಧೆ ಹಾಗೂ ಸಿಬ್ಬಂದಿಗಳ ತಂಡ ತನಿಖೆ ಕೈಗೊಂಡಿತ್ತು.
ತನಿಖೆ ವೇಳೆ ಮೇ 15ರಂದು ಕೂಡ್ಲಿಗಿ-ಉಜ್ಜಿನಿ ರಸ್ತೆಯ ಗಂಗಮ್ಮನಹಳ್ಳಿ ಕ್ರಾಸ್ ಬಳಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ವಿಚಾರಣೆಯಲ್ಲಿ ಆರೋಪಿಗಳು ಕಳ್ಳತನದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಅವರಿಂದ 3 ಲಕ್ಷ ರೂ. ನಗದು, 4 ಲಕ್ಷ ರೂ. ಮೌಲ್ಯದ ಅಲ್ಯೂಮಿನಿಯಂ ವೈರ್ ಹಾಗೂ ಕೃತ್ಯಕ್ಕೆ ಬಳಸಿದ್ದ ₹3.50 ಲಕ್ಷ ಮೌಲ್ಯದ ಗೂಡ್ಸ್ ವಾಹನವನ್ನು ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿಗಳನ್ನು ಎ. ಮಲ್ಲಿಕಾರ್ಜುನ (26), ಜೋಗಜ್ಜರ ಅಂಜಿನಪ್ಪ (37), ಗುಡ್ಲುಮಾರಪುರ ಬಸವರಾಜ (30), ಜೋಗಜ್ಜರ ದುರುಗಪ್ಪ (38) ಎಂದು ಗುರುತಿಸಲಾಗಿದೆ.
ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಎಸ್. ಜಾಹ್ನವಿ ಪ್ರಶಂಸಿಸಿದ್ದಾರೆ.