ಕೊಟ್ಟೂರು (ವಿಜಯನಗರ): ತಾಲೂಕಿನ ಅಲಬೂರು ಗ್ರಾಮದಲ್ಲಿ ಗ್ರೇಡ್-2 ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಪ್ರಜಾಸೇವಾ ಆಂದೋಲನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರೇಡ್-2 ತಹಶೀಲ್ದಾರ್, ಸಾರ್ವಜನಿಕರು ತಮ್ಮ ವೈಯಕ್ತಿಕ ಹಾಗೂ ಸಾರ್ವತ್ರಿಕ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲಿಯೇ ಹಾಜರಿರುವುದರಿಂದ ಗ್ರಾಮಗಳ ಸಮಸ್ಯೆಗಳ ಕುರಿತು ಚರ್ಚಿಸಿ, ಸಾಧ್ಯವಾದರೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗುವುದು. ಕೆಳಹಂತದ ಅಧಿಕಾರಿಗಳಿಂದ ವರದಿ ಪಡೆಯಬೇಕಾದ ಸಂದರ್ಭಗಳಲ್ಲಿ ವರದಿ ಪಡೆದು ನಂತರ ಸಮಸ್ಯೆ ಬಗೆಹರಿಸಿ, ಐಪಿಜಿಆರ್‌ಎಸ್ ಮೂಲಕ ಅರ್ಜಿದಾರರಿಗೆ ಮಾಹಿತಿ ನೀಡಲಾಗುವುದು. ಈ ಕಾರ್ಯಕ್ರಮ ಜನರಿಗೆ ಉಪಯುಕ್ತವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಂಥಾಲಯದ ಹತ್ತಿರವಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿಗೊಳಿಸುವುದು, ಅಲಬೂರಿನಿಂದ ದಿಬ್ಬದಹಳ್ಳಿ ಹಳ್ಳದವರೆಗಿನ ಹದಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸುವುದು, ದನಕರುಗಳಿಗೆ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸುವುದು, ಎರಡು ವರ್ಷಗಳಿಂದ ಬೆಳಗದೆ ಇರುವ ಹೈಮಾಸ್ಟ್ ದೀಪಗಳನ್ನು ಸರಿಪಡಿಸುವುದು, ಅಲಬೂರು-ಇಟ್ಟಿಗಿ ರಸ್ತೆಯ ಅಕ್ಕಪಕ್ಕ ಅರ್ಧಕ್ಕೆ ನಿಂತಿರುವ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಿ ನೀರು ಹಳ್ಳದವರೆಗೆ ಹರಿಯುವಂತೆ ಮಾಡುವುದು, ಹೊನ್ನಿಹಳ್ಳಿಗೆ ಹೋಗುವ ರಸ್ತೆಯ ಪಕ್ಕದ ಚರಂಡಿ ದುರಸ್ತಿಗೊಳಿಸುವುದು, ಶಾಲೆಯ ಮುಂದಿನ ರಸ್ತೆಯಲ್ಲಿ ಮಕ್ಕಳ ಸುರಕ್ಷತೆಗಾಗಿ ರಸ್ತೆ ಉಬ್ಬುಗಳನ್ನು ಅಳವಡಿಸುವುದು ಹಾಗೂ ವಾರದ ಸಂತೆ ಪ್ರಾರಂಭಿಸುವುದು ಸೇರಿದಂತೆ ಒಟ್ಟು 15 ಮನವಿಗಳನ್ನು ಸಲ್ಲಿಸಲಾಯಿತು.

ಇವುಗಳಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಮೂರು, ಆರ್‌ಡಿಪಿಆರ್ ಇಲಾಖೆಗೆ ಸಂಬಂಧಿಸಿದ ಎರಡು ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಹತ್ತು ಮನವಿಗಳು ಸ್ವೀಕೃತವಾದವು. ಕಂದಾಯ ಇಲಾಖೆಗೆ ಸಲ್ಲಿಕೆಯಾದ ಮನವಿಗಳಲ್ಲಿ ಹಕ್ಕುಪತ್ರ, ತುಂಡುಭೂಮಿ ನೋಂದಣಿ ಪರವಾನಗಿ ಹಾಗೂ ಪಿಂಚಣಿ ಮುಂದುವರಿಸುವಂತೆ ಕೋರಿದ ಆರು ಮನವಿಗಳೂ ಸೇರಿವೆ. ಕೆ.ಆರ್.ಎಸ್. ಪಕ್ಷದ ಕಾರ್ಯಕರ್ತರು ಗ್ರಾಮದ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ನರೇಗಾ ಸಹಾಯಕ ನಿರ್ದೇಶಕ ಹೆಚ್. ವಿಜಯಕುಮಾರ್, ಮುಖ್ಯ ಪಶುವೈದ್ಯಾಧಿಕಾರಿ ಚಂದ್ರನಾಯ್ಕ, ಎಪಿಎಂಸಿ ಕಾರ್ಯದರ್ಶಿ ವೀರಣ್ಣ ಎ.ಕೆ., ಕೃಷಿ ಅಧಿಕಾರಿ ನಾಗಾರ್ಜುನ, ತೋಟಗಾರಿಕೆ ಅಧಿಕಾರಿ ಶಿವಕುಮಾರ್, ಉಪತಹಶೀಲ್ದಾರ್ ಅನ್ನದಾನೇಶ್ ಬಿ. ಪತ್ತಾರ್, ಸಿಆರ್‌ಪಿ ಕರಿಬಸವರಾಜ, ಕಂದಾಯ ನಿರೀಕ್ಷಕ ಹಾಲಸ್ವಾಮಿ, ಪಿಡಿಒ ಅಂಬಿಕ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಹಾಜರಿದ್ದರು. ಸಿ.ಎಂ. ಗುರುಬಸವರಾಜ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಹಮ್ಮದ್ ಗೌಸ್, ವಿಜಯನಗರ/ವಾರ್ತಾಭಾರತಿ

ವಿಜಯನಗರ ಜಿಲ್ಲಾ ವರದಿಗಾರರು

ಮಹಮ್ಮದ್ ಗೌಸ್ ಅವರು ಕಳೆದ ಆರು ವರ್ಷಗಳಿಂದ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಮಾಧ್ಯಮ ಚಟುವಟಿಕೆಗಳಲ್ಲಿ ಅನುಭವ ಹೊಂದಿರುವ ಇವರು, ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ವಿಜಯನಗರ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ