×
Ad

ಸ್ಪೀಕರ್ ಗೆ ಬೇಕಿರುವುದು ಶುದ್ಧ ಕನ್ನಡವೇ ? ಶುದ್ಧ ಕನ್ನಡ ಮನಸ್ಸೇ ?

Update: 2023-07-11 20:47 IST

ವಿಧಾನ ಸಭೆಗಳಲ್ಲಿ ಅಥವಾ ಲೋಕಸಭೆಯಲ್ಲಿ ಚರ್ಚೆ ಆಗಲೇಬೇಕಾದ ಜನಸಾಮಾನ್ಯರ ಬದುಕು, ಬವಣೆಗಳ ಕುರಿತ ಮಹತ್ವದ ವಿಷಯಗಳು ಚರ್ಚೆ ಆಗದೆ ವ್ಯವಸ್ಥಿತವಾಗಿ ಬದಿಗೆ ಸರಿಸಲ್ಪಟ್ಟರೆ ಏನಾಗುತ್ತದೆ ? ಚರ್ಚೆಗೆ ಅರ್ಹವೇ ಅಲ್ಲದ, ಇನ್ನೊಬ್ಬರನ್ನು ಅಣಕಿಸುವ, ಕ್ಷುಲ್ಲಕ ವಿಷಯಗಳೇ ಚರ್ಚೆಯಾಗುತ್ತವೆ. ಅವೇ ಮತ್ತೆ ಸುದ್ದಿಯಾಗುತ್ತವೆ. ಇಡೀ ಕಲಾಪ ಅದರ ಸುತ್ತಲೇ ಗಿರಕಿ ಹೊಡೆಯುತ್ತದೆ.

ಕೊನೆಗೆ ಚರ್ಚೆ ಆಗಲೇಬೇಕಿದ್ದ ನಿರ್ಣಾಯಕ ವಿಷಯಗಳೆಲ್ಲ ಸಂಪೂರ್ಣ ಕಡೆಗಣಿಸಲ್ಪಟ್ಟು ಈ ತಮಾಷೆ, ಕುಹಕ, ಕಾಲೆಳೆಯುವಿಕೆ ಇವುಗಳೇ ಇಡೀ ಕಲಾಪವನ್ನು ಆವರಿಸಿ ಆ ಕಲಾಪ ನಡೆಸಲು ಕೋಟಿಗಟ್ಟಲೆ ತೆರಿಗೆ ಹಣ ನೀಡುವ ಜನರನ್ನು ಅಣಕಿಸುತ್ತವೆ. ನಿನ್ನೆ ಮೊನ್ನೆಯಿಂದ ಕರ್ನಾಟಕ ವಿಧಾನಸಭೆಯಲ್ಲಿ ವಿಪಕ್ಷ ಬಿಜೆಪಿಯ ಕೆಲವು ನಾಯಕರು ಮಾಡುತ್ತಾ ಇರೋದೂ ಅದನ್ನೇ. ಜನರ ತೆರಿಗೆ ಹಣದ ಪೋಲು ಹಾಗು ಅವರ ಬವಣೆ - ಭಾವನೆಗಳ ಜೊತೆ ಅಣಕ.

​ಈಗ ವಿಪಕ್ಷ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ನಾಯಕ​ ಬಸನ ಗೌಡ ಪಾಟೀಲ್ ಯತ್ನಾಳ್ ಅವರಿಗೆ ಹೇಗಾದರೂ ವರಿಷ್ಠರನ್ನು ಓಲೈಸಬೇಕಾಗಿದೆ. "ತನ್ನನ್ನು ವಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಮಾಡಿದರೆ ಈ ಸರಕಾರವನ್ನು, ಸ್ಪೀಕರ್ ಅನ್ನು ನೆಮ್ಮದಿಯಿಂದ ಕೆಲಸ ಮಾಡಲು ಬಿಡೋದಿಲ್ಲ ನೋಡ್ತಾ ಇರಿ... " ಎಂಬ ಸಂದೇಶವನ್ನು ರವಾನಿಸಬೇಕಾಗಿದೆ. ​ಅದಕ್ಕಾಗಿ ಅವರೀಗ ಎಲ್ಲ ಬಿಟ್ಟು ​ ​ಸ್ಪೀಕರ್ ಯು​ ​ಟಿ ಖಾದರ್ ಅವರ ಕನ್ನಡದ ಬಗ್ಗೆ ​ಮಾತಾಡ್ತಾ ಇದ್ದಾರೆ.

ಸದನದಲ್ಲಿ ಸ್ಪೀಕರ್​ ಅವರ​ ಕನ್ನಡದ ಬಗ್ಗೆ ಮಾತನಾಡಿ​​ದ ಬಿಜೆಪಿ ನಾಯಕ ಯತ್ನಾಳ್ ಅದನ್ನು ಪ್ರಸ್ತಾಪಿಸಿದ್ದು ಕಾಲೆಳೆಯುವ ಧಾಟಿಯಲ್ಲಿಯೇ ಹೊರತು ಮತ್ತೇನಲ್ಲ.ಅದರ ಬೆನ್ನಿಗೇ ಸೋಷಿಯಲ್ ಮೀಡಿಯಾಗಳಲ್ಲಿ ಖಾದರ್ ಅವರ ಕನ್ನಡವನ್ನು ಚರ್ಚಿಸುತ್ತಿರುವ ರೀತಿ ಮಾತ್ರ, ಅದೇನೋ​ ರಾಜ್ಯದ ಈಗಿನ​ ಬಹಳ ದೊಡ್ಡ ಸಮಸ್ಯೆ ಎನ್ನೋ ಹಾಗಿದೆ.

ಕನ್ನಡದ​ಲ್ಲಿ ಕೆಲವು ಪದಗಳ​ ಉಚ್ಚಾರಣೆಯಲ್ಲಿ ​ವ್ಯತ್ಯಾಸ ಇದೆ ಎಂದ ಮಾತ್ರಕ್ಕೆ ಖಾದರ್ ಅವರು ಸ್ಪೀಕರ್ ಸ್ಥಾನ​ವನ್ನು ನಿಭಾಯಿಸಲಾರರೇ​ ​?

ತಮ್ಮ ಉಚ್ಚಾರಣೆ​ ಪರಿಪೂರ್ಣ​​ ಆಗದೆ ಅವರು ಸ್ಪೀಕರ್ ​ಸ್ಥಾನದಲ್ಲಿ ಕೂತು ಕನ್ನಡದಲ್ಲಿ ಮಾತಾಡಬಾರದೇ​ ​?​ ಯತ್ನಾಳ್ ಅವರು ಹೇಳಿದ ಹಾಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಸ್ಥಾನದಲ್ಲಿ ಕೂತು ಅವರು ಇಂಗ್ಲೀಷ್ ಮಾತಾಡಬೇಕೆ ? ​ಖಾದರ್ ಅವರನ್ನು ​ಟ್ರೋಲ್ ಮಾಡುತ್ತಿರುವವರ ಧೋರಣೆ ಈ ಬಗೆಯದು ಎಂದೆನಿಸುವ ಹಾಗಿದೆ.

ಖಾದರ್ ಅವರ ಕನ್ನಡದ ಉಚ್ಚಾರಣೆ​ಯಲ್ಲಿ ವ್ಯತ್ಯಾಸವಿದೆ ಎಂದ ಮಾತ್ರಕ್ಕೆ ಅವರಲ್ಲಿರುವ ನಾಯಕತ್ವದ ಗುಣವನ್ನೇ ನಿರಾಕರಿಸಲು ಸಾಧ್ಯವೆ​ ​? ರಾಜಕಾರಣದಲ್ಲಿನ ಅವರ ಅನುಭವ, ​ಸಾಧನೆ, ​ಹಿರಿತನ ಇವೆಲ್ಲವೂ ಅವರ ಕನ್ನಡದಲ್ಲಿ​ ವ್ಯತ್ಯಾಸ​ ಇದೆಯೆಂಬ ಕಾರಣಕ್ಕೆ ಗೌಣವಾಗಿ​ ​ಬಿಡುತ್ತವೆಯೆ​?

ಸೋಷಿಯಲ್ ಮೀಡಿಯಾಗಳಲ್ಲಿ ಖಾದರ್ ಅವರ ಕನ್ನಡವನ್ನು ಟ್ರೋಲ್ ಮಾಡುತ್ತಿರುವವರು ಮೊದಲನೆಯದಾಗಿ ಅದರ ಮೂಲಕ ತಮ್ಮ ಅಸಿಹಿ​ಷ್ಣುತೆಯನ್ನು ಹೊರಹಾಕುತ್ತಿದ್ದಾರೆ. ಎರಡನೆಯದಾಗಿ ಅವರಿಗೆ ಕನ್ನಡದ ಸೊಗಸು, ಸ್ವಾರಸ್ಯ ಮತ್ತದರ ವೈವಿಧ್ಯತೆಯ ಬಗ್ಗೆಯೇ​ ಪ್ರಾಥಮಿಕ​ ತಿಳುವಳಿಕೆ​ಯೂ​ ಇದ್ದಂತಿಲ್ಲ.

ಕನ್ನಡ ಎಂದೊಡನೆ ಪುಸ್ತಕದಲ್ಲಿ​ರುವ​ ಒಂದು ಚೌಕಟ್ಟಿಗೆ ಒಳಪಟ್ಟ ಭಾಷೆಯಾಗಿ​ ಅದನ್ನು​ ನೋಡಲು ಸಾಧ್ಯವಿಲ್ಲ. ಕನ್ನಡದ ಬಹುತ್ವವನ್ನು ಸ್ವೀಕರಿಸುವುದರಲ್ಲಿಯೇ ಕನ್ನಡವನ್ನು ನಿಜವಾಗಿಯೂ ಅರ್ಥ ಮಾಡಿಕೊಳ್ಳೋದು ಸಾಧ್ಯ. ಹಾಗಾಗಿ, ಖಾದರ್ ಅವರ ಕನ್ನಡವನ್ನು ಯಾರಾದರೂ ಹೀಗಳೆಯುವ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ ಎಂದರೆ ಅವರು ಬಹುಶಃ ತಾವು ತಿಳಿದಿರುವುದಷ್ಟೇ ಕನ್ನಡ ಎಂದುಕೊಂಡವರಿರಬೇಕು.

ಖಾದರ್ ಅವರ ತಾಯ್ನುಡಿ ​​ಬ್ಯಾರಿ. ಸಹಜವಾಗಿಯೇ ಅವರ ಕನ್ನಡದ ಕೆಲವು ಉಚ್ಚಾರಣೆಗಳು ಭಿನ್ನವಾಗಿರಬಹುದು. ಅವರ ಉಚ್ಚಾರಣೆಯಲ್ಲಿ ವ್ಯತ್ಯಾಸವೂ ಕಾಣಿಸಬಹುದು. ಆದರೆ ಅದೇ ಒಂದು​​ ತಪ್ಪೆಂಬಂತೆ ಬಿಂಬಿಸುವುದು ಮಾತ್ರ, ತಾವು ಮಹಾ ಕನ್ನಡ ಬಲ್ಲೆವು ಎಂದುಕೊಂಡವರ ಪ್ರಮಾದ. ಯುಟಿ ಖಾದರ್ ಅವರ ಕನ್ನಡದಲ್ಲಿ ಲ ಕಾರ ಮತ್ತು ಳ ಕಾರದಲ್ಲಿನ ಉಚ್ಚಾರಣೆಯಲ್ಲಿ ತೊಡಕು ಇರುವುದು ಒಂದು ಪ್ರಾದೇಶಿಕ ಭಿನ್ನತೆಯೇ ಹೊರತು ಸಮಸ್ಯೆಯೇನೂ ಅಲ್ಲ. ಮತ್ತದು ಖಾದರ್ ಅವರಿಗೆ ಮಾತ್ರ ಇರುವ ತೊಡಕೂ ಅಲ್ಲ. ಅವರಿಗೆ ಮಾತ್ರ ಅಂಥ ತೊಂದರೆಯಿದೆ ಎಂಬಂತೆ, ಅವರಿಗೆ ಕನ್ನಡದ ಬಗ್ಗೆ ಗೌರವವಿಲ್ಲ ಎಂಬಂತೆ ಬಿಂಬಿಸುವ ರೀತಿ ಮಾತ್ರ ​ಕೆಲವರ ಕೊಳಕು ಮನಃಸ್ಥಿತಿಗೆ ಹಿಡಿದ ಕನ್ನಡಿ.

ಟ್ರೋಲ್ ಮಾಡುವವರಿಗೆ ಗೊತ್ತಿರಬೇಕು, ಬೀದರಿನಿಂದ ಕಾಸರಗೋಡಿನವರೆಗೂ ಕನ್ನಡದಲ್ಲಿ​ ಎದ್ದು​ ಕಾಣಿಸೋದು ಅಗಾಧ ವೈವಿಧ್ಯತೆ. ಅಲ್ಲದೆ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ರೀತಿಯ ಕನ್ನಡ ಆಡುಮಾತು ಮತ್ತು ಉಚ್ಚಾರಣೆ ಇದೆ. ಮಲೆನಾಡಿನ ಭಾಗದಲ್ಲಿ ಅ ಕಾರವನ್ನು ಹ ಕಾರವಾಗಿ, ಹಾಗೇ ಹ ಕಾರವನ್ನು ಅ ಕಾರವಾಗಿ ಉಚ್ಚರಿಸೋದು ಎಲ್ಲರಿಗೂ ಗೊತ್ತು. ಅದನ್ನು ತಪ್ಪೆಂದುಕೊಳ್ಳುವುದಕ್ಕಿಂತ ಹೆಚ್ಚಾಗಿ ಅದು ಆ ಪ್ರದೇಶದಲ್ಲಿನ ಉಚ್ಚಾರಣೆಯಾಗಿಬಿಟ್ಟಿದೆ.​ ಬೇರೆಲ್ಲೂ ಬೇಡ, ವಿಧಾನಸಭೆಯಲ್ಲೇ ಬೇರೆ ಬೇರೆ ಪ್ರದೇಶಗಳ ಶಾಸಕರು ಮಾತಾಡೋದನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ​

ಸದನದಲ್ಲಿ ಸ್ಪೀಕರ್ ಕನ್ನಡದ ಬಗ್ಗೆ ಯತ್ನಾಳ್ ಹೇಳಿದ್ದು, ಉತ್ತರ ಕರ್ನಾಟಕದ ತಮಗೆ ಮಂಗಳೂರಿನ ಖಾದರ್ ಅವರ ಕನ್ನಡ ಅರ್ಥವಾಗುತ್ತಿಲ್ಲ ಎಂದು. ಅದನ್ನವರು ಕೊಂಚ ಲಘು ಧಾಟಿಯಲ್ಲಿಯೇ ಹೇಳಿರುವಂತಿದೆ. ​ಆದರೆ​ ರಾಜ್ಯದ ರಾಜ್ಯಪಾಲರ ಬಳಿಕ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ​ ​ಸ್ಪೀಕರ್ ಸ್ಥಾನದಲ್ಲಿರುವವರ ​ಬಗ್ಗೆ ತಾನು ಆಗಾಗ ಈ ರೀತಿಯ ಸಡಿಲ ಮಾತಾಡುವುದು ಕೆಲಸವಿಲ್ಲದ ಟ್ರೋಲ್ ಗಳಿಗೆ ಸರಕಾಗುತ್ತಿದೆ ಎಂಬ ಪ್ರಜ್ಞೆ ಯತ್ನಾಳ್ ಅವರಿಗೆ ಇರಬೇಕಿತ್ತು.

ತನಗೆ " ಮುಸ್ಲಿಮರ ಮತ ಬೇಡ, ತನ್ನ ಬಳಿ ಮುಸ್ಲಿಮರು ಯಾವುದೇ ಕೆಲಸಕ್ಕೆ ಬರೋದು ಬೇಡ, ನಾನು ಅವರ ಕೆಲಸ ಮಾಡೋದಿಲ್ಲ" ಎಂಬಂತಹ ಅತ್ಯಂತ ಪ್ರಚೋದನಕಾರಿ, ಬೇಜವಾಬ್ದಾರಿಯುತ ಹೇಳಿಕೆಗಳನ್ನು ಕೊಟ್ಟ ದಾಖಲೆ ಇರುವವರು ಯತ್ನಾಳ್. ​ಹಾಗಾಗಿ ಅವರು ಸ್ಪೀಕರ್ ಬಗ್ಗೆ ಕಾಲೆಳೆಯುವ ಶೈಲಿಯಲ್ಲಿ ಮಾತಾಡಿದ್ದನ್ನು ಸೋಷಿಯಲ್ ಮೀಡಿಯಾದ​ ಕೋಮು ವಿಷ ತುಂಬಿಕೊಂಡಿರುವ ಟ್ರೋಲ್​ ಗಳು ಬೇರೆಯೇ ರೀತಿ ಬಳಸಿಕೊಂಡಿದ್ದಾರೆ. ಈ ಟ್ರೋಲ್ ಗಳಿಗೆ ಹೀಗಳೆಯುವ​, ಅವಮಾನಿಸುವ​ ಉದ್ದೇಶ​ ಮಾತ್ರ ಇರುವುದರಿಂದ ಅದನ್ನೊಂದು ಮಹಾ ಸಮಸ್ಯೆಯೆಂಬಂತೆ, ಮಹಾಪರಾಧವೆಂಬಂತೆ ಬಿಂಬಿಸಲು ಹೊರಟಿ​ದ್ದಾರೆ.

ಆದರೆ​ ಹೀಗೆ ಟ್ರೋಲ್ ಮಾಡಲು ಹೊರಟವರಿಗೆ ಒಂದು ವಿಷಯ ನೆನಪಿರಬೇಕು. ​​ಸ್ಪೀಕರ್ ಯು ಟಿ ಖಾದರ್ ​ಸುಮ್ಮನೆ ಯಾರದೋ ಕೃಪೆಯಿಂದ ಬಂದು ಸ್ಪೀಕರ್ ಸ್ಥಾನದಲ್ಲಿ ಕೂತಿಲ್ಲ. ಯು ಟಿ ಖಾದರ್ ಫರೀದ್ ಅವರು​​ ಸುಶಿಕ್ಷಿತರು. ಕಾನೂನು ಪದವೀಧರರು.​ ಕೋಮು ಸೂಕ್ಷ್ಮ ಎಂದು ಗುರುತಿಸುವ ದಕ್ಷಿಣ ಕನ್ನಡ ಜಿಲ್ಲೆಯ ಕ್ಷೇತ್ರವೊಂದರಲ್ಲಿ ಸರ್ವಧರ್ಮೀಯರ ಮತ ಹಾಗು ಬೆಂಬಲ ಪಡೆದು ಸತತ ಐದು ಬಾರಿ ಉತ್ತಮ ಅಂತರದಿಂದಲೇ ಗೆದ್ದು ಬಂದವರು. ಶಾಸಕರಾಗಿ ತಮ್ಮ ಕ್ಷೇತ್ರದ ಎಲ್ಲ ಜನರ ಜೊತೆ ಮುಕ್ತವಾಗಿ ಬೆರೆಯುತ್ತಾ, ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಾ ತಳ ಮಟ್ಟದಿಂದ ಬೆಳೆದು ಬಂದವರು. ಮೂರ್ನಾಲ್ಕು ಪ್ರಮುಖ ಖಾತೆಗಳ ಸಚಿವರಾಗಿ ಸಮರ್ಥ ಆಡಳಿತಗಾರ ಎಂದು ಮತ್ತೆ ಮತ್ತೆ ಸಾಬೀತು ಮಾಡಿದವರು. ಆರೋಗ್ಯ ಸಚಿವರಾಗಿದ್ದಾಗ ದೇಶದಲ್ಲೇ ನಂಬರ್ ಒನ್ ಅರೋಗ್ಯ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಹಾಗಾಗಿ ಸ್ಪೀಕರ್ ಸ್ಥಾನಕ್ಕೂ ಅತ್ಯಂತ ಅರ್ಹ ಶಾಸಕರಾಗಿ ಎಲ್ಲರ ಒತ್ತಾಸೆಯಿಂದ, ಅವಿರೋಧವಾಗಿ ಆಯ್ಕೆಯಾದವರು ಯು ಟಿ ಖಾದರ್.

ಖಾದರ್ ನಿರರ್ಗಳವಾಗಿ ಮಾತಾಡುತ್ತಾ ಹೋಗುವ ಅದ್ಭುತ ಭಾಷಣಕಾರ ಅಲ್ಲ. ಅವರೊಬ್ಬ ಜನಪ್ರಿಯ ಜನಪ್ರತಿನಿಧಿ. ಸಮರ್ಥ ಆಡಳಿತಗಾರ. ಅನುಭವೀ ಸಂಸದೀಯ ಪಟು. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲರನ್ನೂ ಸ್ವೀಕರಿಸುವ, ಯಾರನ್ನೂ ನೋಯಿಸದ ಶುದ್ಧ ಕನ್ನಡ ಮನಸ್ಸಿನ ಕನ್ನಡಿಗ. ಅಷ್ಟು ಪ್ರಬುದ್ಧತೆ ಇರುವುದರಿಂದಲೇ ಹಾಗು ತಾನು ಕೂತಿರುವ ಸ್ಥಾನದ ಘನತೆಯನ್ನು ಬಹಳ ಚೆನ್ನಾಗಿ ಅರಿತಿರುವುದರಿಂದಲೇ ಅವರು ಯತ್ನಾಳ್ ಥರದವರ ಟೀಕೆಯನ್ನೂ ಪ್ರೀತಿಯಿಂದಲೇ ತೆಗೆದುಕೊಂಡಿದ್ದಾರೆ.

ಯತ್ನಾಳ್ ತಮ್ಮ ಕನ್ನಡದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದಕ್ಕೆ ಉತ್ತರಿಸಿದ ಅವರು, ​" ​ಯತ್ನಾಳ್ ಪದೇ ಪದೇ ನನ್ನ ಕನ್ನಡ ಭಾಷೆ ಸರಿಪಡಿಸುತ್ತಾರೆ. ನನ್ನ ಕನ್ನಡ ಹೆಚ್ಚು ಕಡಿಮೆ ಇರಬಹುದು.‌ ಆದರೆ ಅದು ನಮ್ಮ ಪ್ರೀತಿಯ ಭಾಷೆ. ಪ್ರೀತಿ, ಸೋದರತೆ ಸಾಮರಸ್ಯದ ಭಾಷೆ. ಅದಕ್ಕಾಗಿ ನಾನು ಯತ್ನಾಳ್ ಅವರಿಗೆ ಕೃತಜ್ಞತೆ ಹೇಳುತ್ತಿದ್ದೇನೆ ​" ​ಎಂದಿದ್ದಾರೆ.

​ಸಂವಿಧಾನದ ಪೀಠಿಕೆ ವಿಷಯದಲ್ಲಿ ಯತ್ನಾಳ್ ಅನಗತ್ಯ ಗೊಂದಲ ಎಬ್ಬಿಸಿದಾಗಲೂ " ನೀವು ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ ಗೌರವ ತೋರಿಸುತ್ತಿರೋದು ನೋಡಿ ಖುಷಿಯಾಗಿದೆ. ನೀವು ಹೀಗೇ ಎಲ್ಲರ ಧರ್ಮೀಯರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ " ಎಂದು ಯತ್ನಾಳ್ ಗೆ ಸಂವಿಧಾನದ ಪಾಠ ಮಾಡಿದ್ದರು ಸ್ಪೀಕರ್ ಖಾದರ್. ​ಅಷ್ಟನ್ನು ಅರ್ಥಮಾಡಿಕೊಳ್ಳುವ ಪ್ರಬುದ್ಧತೆ, ಶುದ್ಧ ಕನ್ನಡ ಮನಸ್ಸು ​ಯತ್ನಾಳ್ ಗೆ ಇದೆಯೇ ?

​ಶುದ್ಧ ಕನ್ನಡ ಮನಸ್ಸು ಮಾತ್ರ ತೋರಬಹುದಾದ ​ಪ್ರೀತಿ, ಸೋದರತೆ, ಸಾಮರಸ್ಯವನ್ನು ಅವರು ತಮ್ಮ ರಾಜಕೀಯ ಬದುಕಿನುದ್ದಕ್ಕೂ ಅನುಸರಿಸಿಕೊಂಡು ಬಂದವರೆಂಬುದು ಅವರನ್ನು ಟ್ರೋಲ್ ಮಾಡುತ್ತಿರು​ವವರಿಗೆ ತಿಳಿದಿರಲಾರದು ಅಥವಾ ತಿಳಿಯುವ ಮನಃಸ್ಥಿತಿಯೂ ಅವರದಾಗಿರಲಿಕ್ಕಿಲ್ಲ. ಯಾಕೆಂದರೆ ಟ್ರೋಲ್ ಮಾಡುವ​ವರಿಗೆ ಪ್ರೀತಿ, ಸೋದರತೆ, ಸಾಮರಸ್ಯ ಎಂದರೇನೆಂಬುದೇ ಗೊತ್ತಿರಲ್ಲ.

ಉಚ್ಚಾರಣೆ ಆಧಾರದ ಮೇಲೆಯೇ ಒಬ್ಬ ನಾಯಕನ ಅಥವಾ ವ್ಯಕ್ತಿಯ ಅರ್ಹತೆಯನ್ನು ನಿರ್ಧರಿಸುತ್ತೇವೆಂಬ ಟ್ರೋಲಿಗರ ಭಾವನೆ ದುರಹಂಕಾರದ್ದೇ ಹೊರತು ಅಲ್ಲಿ, ವೈವಿಧ್ಯವನ್ನು, ಬಹುತ್ವವನ್ನು​, ವ್ಯಕ್ತಿಯ ಅನುಭವವನ್ನು​ ಗ್ರಹಿಸೋ ವಿನಯವಿಲ್ಲ. ಈ ಮನಃಸ್ಥಿತಿಯೇ ಆರೋಗ್ಯಕರವಾದದ್ದಲ್ಲ.​ ಇದು ಕನ್ನಡದ ಮನಸ್ಥಿತಿಯಲ್ಲ. ​

ಕನ್ನಡ ಮಾತಿನಲ್ಲಿ ಉಚ್ಚಾರಣೆ ಭಿನ್ನತೆ ಇದೆಯೆಂಬುದು ಕನ್ನಡಕ್ಕೆ ಅವಮಾನವಲ್ಲ.​ ​ಕನ್ನಡಿಗರಾಗಿ ಮಾಡಬೇಕಾದದ್ದು ಬಹಳ ಇದೆ.

ಇಷ್ಟೊಂದು ಟ್ರೋಲ್ ಮಾಡುತ್ತಿರುವವರ ಶೌರ್ಯ ಹಿಂದಿ ಹೇರಿಕೆ ವಿರುದ್ಧ ಏಕಿಲ್ಲ ? ಹಲವಾರು ಪರೀಕ್ಷೆಗಳಲ್ಲಿ ಕನ್ನಡಕ್ಕೆ ಆದ್ಯತೆ ಸಿಗದಿದ್ದಾಗ ಇವರೆಲ್ಲ ಯಾವ ಮೂಲೆ ಸೇರಿಕೊಂಡಿರುತ್ತಾರೆ​ ​?​ ಕನ್ನಡಕ್ಕೆ ಅನುದಾನ ಕೊಡದೆ ಸಂಸ್ಕೃತಕ್ಕೆ ಕೋಟಿಗಟ್ಟಲೆ ಅನುದಾನ ಕೊಡುವಾಗ ಈ ಟ್ರೋಲ್ ಶೂರರು ಎಲ್ಲಿರುತ್ತಾರೆ ? ​

ಹಾಗಾಗಿ ಈ ಟ್ರೋಲ್ ​ಗಳು ಅರ್ಥ ಮಾಡಿಕೊಳ್ಳಬೇಕಿರೋದು ಏನೆಂದರೆ, ಉಚ್ಚಾರಣೆಯಿಂದ ನಾಯಕತ್ವ ನಿರ್ಧಾರವಾಗುವುದಿಲ್ಲ. ಎಲ್ಲರೊಡನೆ ​ಬೆರೆಯುವ , ಎಲ್ಲರನ್ನೂ ಜೊತೆಗೂಡಿಸಿಕೊಂಡು ಮುನ್ನಡೆಯುವ ಗುಣದಲ್ಲಿ, ಪ್ರಾಮಾಣಿಕತೆಯಲ್ಲಿ, ಸಾಮಾಜಿಕ ಬದ್ಧತೆಯಲ್ಲಿ ​ಸಮರ್ಥ ​ನಾಯಕನೊಬ್ಬನ ಹಿರಿತನ ಕಾಣಿಸುತ್ತದೆ. ಅಂಥ ಹಿರಿತನವುಳ್ಳ ಯುಟಿ ಖಾದರ್​ ಅತ್ಯಂತ ಅರ್ಹವಾಗಿಯೇ​ ಸದನದ ​ಯಜಮಾನರಾಗಿದ್ದಾರೆ. ಆ ಅರ್ಹತೆ ಮತ್ತು ಅನುಭವ ಅವರಿಗೆ ಇರುವುದರಿಂದಾಗಿಯೇ ಆ ಘನತೆಯ ಸ್ಥಾನದಲ್ಲಿ ಅವರಿದ್ದಾರೆ.​ ಆ ಸ್ಥಾನಕ್ಕೆ ಘನತೆ ಬರುವಂತೆಯೇ ಅವರು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ.

ಶಾಸಕರಾಗಿಯೂ, ಸಚಿವರಾಗಿಯೂ ತಮ್ಮ ಕಾರ್ಯವೈಖರಿ ಬಗ್ಗೆ ಬಂದಿರುವ ಟೀಕೆ ಟಿಪ್ಪಣಿಗಳನ್ನು ಖಾದರ್ ಸದಾ ವಿಶಾಲ ಮನಸ್ಸಿನಿಂದ ಸ್ವೀಕರಿಸಿದ್ದಾರೆ. ​​ಈಗಲೂ ಆರೋಗ್ಯಕರ ಸಲಹೆಗಳನ್ನು ಅವರು ಖಂಡಿತ ಸ್ವೀಕರಿಸುತ್ತಾರೆ. ಆದರೆ ​ಕೊಳಕು ಮನಃಸ್ಥಿತಿಯವರ ಟ್ರೋಲ್​ ಕನ್ನಡ ಮನಸ್ಸಿನ​ ಯುಟಿ ಖಾದರ್ ಅವರನ್ನು ಬಾಧಿಸಲಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಆರ್. ಜೀವಿ

contributor

Similar News