ʼವಂದೇ ಮಾತರಂʼ ಗೀತೆಗೆ ರಾಷ್ಟ್ರಗೀತೆಯ ಕಾನೂನು ರಕ್ಷಣೆ ನೀಡಲು ಕೇಂದ್ರ ಸರ್ಕಾರ ಬಯಸುತ್ತಿರುವುದೇಕೆ?

Update: 2026-07-28 17:04 IST

Photo Credit : ANI 

ವಂದೇ ಮಾತರಂ ಹಾಡುವುದನ್ನು ತಡೆಯುವುದು ಅಥವಾ ಹಾಡುವ ಸಭೆಗೆ ಅಡ್ಡಿಪಡಿಸುವುದು ಇನ್ನು ಮುಂದೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಗೆ ಕಾರಣವಾಗಬಹುದು. ರಾಷ್ಟ್ರಗೀತೆಗೆ 1971ರಿಂದ ಲಭ್ಯವಿರುವ ಇದೇ ಕಾನೂನು ರಕ್ಷಣೆಯನ್ನು ಇದೀಗ ರಾಷ್ಟ್ರೀಯ ಗೀತೆಗೂ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ರಾಜ್ಯಸಭೆಯಲ್ಲಿ ವಿಧೇಯಕ ಮಂಡಿಸುವ ಮೂಲಕ ಕೇಂದ್ರ ಸರ್ಕಾರವು ದೇಶದ ಗಣರಾಜ್ಯಕ್ಕಿಂತಲೂ ಹಳೆಯದಾದ ವಾದವೊಂದನ್ನು ಮತ್ತೆ ಮುನ್ನೆಲೆಗೆ ತಂದಿದೆ.

ಕೇಂದ್ರ ಗೃಹ ಸಚಿವಾಲಯ ಸಿದ್ಧಪಡಿಸಿರುವ 'ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆಯುವ (ತಿದ್ದುಪಡಿ) ವಿಧೇಯಕ-2026', (Prevention of Insults to National Honour (Amendment) Bill, 2026) 1971ರ ಮೂಲ ಕಾಯ್ದೆಯ ಸೆಕ್ಷನ್ 3ಕ್ಕೆ ತಿದ್ದುಪಡಿ ತರಲು ಪ್ರತಿಪಾದಿಸುತ್ತದೆ. ಸದ್ಯ ಚಾಲ್ತಿಯಲ್ಲಿರುವ ಕಾಯ್ದೆಯು ರಾಷ್ಟ್ರಗೀತೆಯ ಗಾಯನವನ್ನು ಉದ್ದೇಶಪೂರ್ವಕವಾಗಿ ತಡೆಯುವುದು ಅಥವಾ ಅಡ್ಡಿಪಡಿಸುವುದಕ್ಕೆ ಮಾತ್ರ ಶಿಕ್ಷೆ ವಿಧಿಸುತ್ತದೆ. ಈ ಹೊಸ ತಿದ್ದುಪಡಿ ವಿಧೇಯಕವು ಸೋಮವಾರ ರಾಜ್ಯಸಭೆಯಲ್ಲಿ ಚರ್ಚೆಗೆ ಬರಲಿದೆ.

ಈ ತಿದ್ದುಪಡಿ ಕಾಯ್ದೆಯು ಅಪರಾಧದ ಸ್ವರೂಪವನ್ನು ಎರಡು ಭಾಗಗಳಾಗಿ ವಿಂಗಡಿಸಿ, ಎರಡನ್ನೂ 'ರಾಷ್ಟ್ರೀಯ ಗೀತೆ'ಗೂ ಅನ್ವಯಿಸಲು ಉದ್ದೇಶಿಸಿದೆ. ಆದರೆ, ಶಿಕ್ಷೆಯ ಪ್ರಮಾಣ ಮತ್ತು 'ಉದ್ದೇಶಪೂರ್ವಕವಾಗಿ' ಎಂಬ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 1971ರ ಮೂಲ ಕಾಯ್ದೆಯು ರಾಷ್ಟ್ರಧ್ವಜ ಮತ್ತು ಸಂವಿಧಾನಕ್ಕೆ ಆಗುವ ಅಪಮಾನಗಳನ್ನು ಪ್ರತ್ಯೇಕವಾಗಿ ಒಳಗೊಂಡಿದೆ.

ಶುಕ್ರವಾರದಂದು ಈ ವಿಧೇಯಕವನ್ನು ರಾಜ್ಯಸಭೆಯಲ್ಲಿ ಮಂಡಿಸಲಾಯಿತಾದರೂ, ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ವಿರೋಧ ಪಕ್ಷಗಳು ನಡೆಸಿದ ಗದ್ದಲದಿಂದಾಗಿ ಚರ್ಚೆ ಸಾಧ್ಯವಾಗಲಿಲ್ಲ. ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಅವರು ನಿಯಮ 67ರ ಅಡಿಯಲ್ಲಿ ವಿಧೇಯಕವನ್ನು ವಿರೋಧಿಸಿ ನೋಟಿಸ್ ನೀಡಿದ್ದರು. ಸಂಸತ್ತಿನ ಮುಂಗಾರು ಅಧಿವೇಶನವು ಆಗಸ್ಟ್ 13ರವರೆಗೆ ನಡೆಯಲಿದೆ.

ವಿಧೇಯಕದ ಉದ್ದೇಶ ಮತ್ತು ಕಾರಣಗಳ ಕುರಿತು ನೀಡಿರುವ ಸ್ಪಷ್ಟನೆಯಲ್ಲಿ, ಸಂವಿಧಾನ ಸಭೆಯ ನಡಾವಳಿಯನ್ನು ಸರ್ಕಾರ ಉಲ್ಲೇಖಿಸಿದೆ. 1950 ಜನವರಿ 24ರಂದು ಸಂವಿಧಾನ ಸಭೆಯ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಅವರು, "ಸ್ವಾತಂತ್ರ್ಯ ಸಂಗ್ರಾಮದಲ್ಲಿ ಐತಿಹಾಸಿಕ ಪಾತ್ರ ವಹಿಸಿದ ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರು ರಚಿಸಿದ 'ವಂದೇ ಮಾತರಂ' ಗೀತೆಗೆ 'ಜನ ಗಣ ಮನ' ಗೀತೆಗೆ ಸಮಾನವಾದ ಗೌರವ ಮತ್ತು ಸ್ಥಾನಮಾನ ಸಿಗಲಿದೆ" ಎಂದು ಹೇಳಿದ್ದರು. ಈ ಹೇಳಿಕೆಯು ಎರಡೂ ಗೀತೆಗಳಿಗೆ ಸಮಾನ ಗೌರವ ನೀಡಿತಾದರೂ, ಕಾನೂನಿನಲ್ಲಿ ಇವೆರಡನ್ನೂ ಒಂದೇ ಹಂತದಲ್ಲಿ ಇರಿಸಿರಲಿಲ್ಲ. ಹೀಗಾಗಿ ಕಳೆದ 55 ವರ್ಷಗಳಿಂದ ರಾಷ್ಟ್ರೀಯ ಗೀತೆಯು 1971ರ ಕಾಯ್ದೆಯ ವ್ಯಾಪ್ತಿಯಿಂದ ಹೊರಗೆ ಉಳಿದಿತ್ತು ಎಂದು ಟಿಪ್ಪಣಿ ತಿಳಿಸಿದೆ.

ಈ ಗೀತೆಗೆ 150 ವರ್ಷ ತುಂಬಿದ ಸವಿನೆನಪಿನ ವರ್ಷಪೂರ್ತಿ ಕಾರ್ಯಕ್ರಮಗಳು ಮುಕ್ತಾಯಗೊಂಡ ಬೆನ್ನಲ್ಲೇ, ಮೇ ತಿಂಗಳಲ್ಲಿ ಕೇಂದ್ರ ಸಚಿವ ಸಂಪುಟವು ಈ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿತ್ತು. ಕಳೆದ ಒಂದು ವರ್ಷದಿಂದ ವಂದೇ ಮಾತರಂಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಸರಣಿ ಕ್ರಮಗಳಲ್ಲಿ ಇದೂ ಒಂದಾಗಿದೆ. ಜನವರಿಯಲ್ಲಿ ಗೃಹ ಸಚಿವಾಲಯವು ಗೀತೆ ಆಲಾಪನೆಯ ಶಿಷ್ಟಾಚಾರದ ಕುರಿತು ಸುತ್ತೋಲೆ ಹೊರಡಿಸಿತ್ತು. ಫೆಬ್ರವರಿ 6ರಂದು ನಿರ್ದಿಷ್ಟ ಸರ್ಕಾರಿ ಕಾರ್ಯಕ್ರಮಗಳಲ್ಲಿ ಗೀತೆಯ ಸಂಪೂರ್ಣ ಆರು ಚರಣಗಳನ್ನು ಹಾಡುವಂತೆ ಮತ್ತು ಎರಡೂ ಗೀತೆಗಳನ್ನು ಹಾಡುವಲ್ಲಿ ರಾಷ್ಟ್ರಗೀತೆಗಿಂತ ಮೊದಲು ರಾಷ್ಟ್ರೀಯ ಗೀತೆಯನ್ನು ಆಲಿಸತಕ್ಕದ್ದು ಎಂದು ನಿರ್ದೇಶಿಸಲಾಗಿತ್ತು. ಜುಲೈ 9ರಂದು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಈ ನಿಯಮಗಳನ್ನು ಪಾಲಿಸುವಂತೆ ಪತ್ರ ಬರೆಯಲಾಗಿತ್ತು.

ಈ ಬಾರಿಯ 77ನೇ ಗಣರಾಜ್ಯೋತ್ಸವ ಪರೇಡ್ ಕೂಡ ಈ ಗೀತೆಯ 150ನೇ ವರ್ಷದ ಥೀಮ್ ಹೊಂದಿತ್ತು. ಸಂಸ್ಕೃತಿ ಸಚಿವಾಲಯದ ಸ್ತಬ್ಧಚಿತ್ರದಲ್ಲಿ ಚಟ್ಟೋಪಾಧ್ಯಾಯ ಅವರ ಮೂಲ ಹಸ್ತಪ್ರತಿಯ ಮಾದರಿಯನ್ನು ಪ್ರದರ್ಶಿಸಲಾಗಿತ್ತು. ಜೊತೆಗೆ 'ಬೀಟಿಂಗ್ ರಿಟ್ರೀಟ್' ಪಥಸಂಚಲನದಲ್ಲಿ ಸೇನಾ ವಾದ್ಯವೃಂದಗಳು 'ವಂದೇ ಮಾತರಂ' ಆಕಾರದಲ್ಲಿ ನಿಂತು ಸಂಗೀತ ನುಡಿಸಿದ್ದವು.

ನ್ಯಾಯಾಲಯ ಹೇಳಿದ್ದೇನು?

ಗೀತೆ ಆಲಾಪನೆಯ ಶಿಷ್ಟಾಚಾರದ ಕುರಿತಾದ ನಿರ್ದೇಶನಗಳನ್ನು ಈಗಾಗಲೇ ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗಿದ್ದು, ಭಿನ್ನ ರೀತಿಯ ತೀರ್ಪುಗಳು ಹೊರಬಂದಿವೆ.

ಮಾರ್ಚ್ ತಿಂಗಳಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಪಂಚೋಲಿ ಅವರನ್ನೊಳಗೊಂಡ ಉನ್ನತ ನ್ಯಾಯಾಲಯದ ತ್ರಿಪೀಠವು ಗೃಹ ಸಚಿವಾಲಯದ ಸುತ್ತೋಲೆ ಮತ್ತು ಆರೂ ಚರಣಗಳನ್ನು ಹಾಡುವ ಕಡ್ಡಾಯ ನಿಯಮದ ವಿರುದ್ಧ ಮುಹಮ್ಮದ್ ಸಯೀದ್ ನೂರಿ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತ್ತು. ವಿಷಯದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ನ್ಯಾಯಮೂರ್ತಿ ಬಾಗ್ಚಿ, ಈ ಸುತ್ತೋಲೆಯು ಕೇವಲ ಒಂದು 'ಸಲಹೆ'ಯ ರೂಪದಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದರು. ಅರ್ಜಿದಾರರ ಆತಂಕ ಅಗತ್ಯಕ್ಕಿಂತ ಮುಂಚಿತವಾದದ್ದು, ಶಿಷ್ಟಾಚಾರ ಪಾಲಿಸದಿದ್ದರೆ ಯಾವುದೇ ಶಿಕ್ಷೆ ವಿಧಿಸದಿರುವುದರಿಂದ ಇದನ್ನು ಕಡ್ಡಾಯವಾಗಿ ಪಾಲಿಸಲೇಬೇಕಾದ ಆದೇಶ ಎಂದು ಪರಿಗಣಿಸಲಾಗುವುದಿಲ್ಲ ಎಂದು ಪೀಠ ಹೇಳಿತ್ತು.

ಆದರೆ, ಸಂಸತ್ತಿನ ಮುಂದಿರುವ ಪ್ರಸ್ತುತ ವಿಧೇಯಕವು ನ್ಯಾಯಾಲಯವು ಉಲ್ಲೇಖಿಸಿದ್ದ ಅದೇ ಕೊರತೆಯನ್ನು ಅಂದರೆ 'ಶಿಕ್ಷೆಯ ಭಾಗವನ್ನು' ಪೂರೈಸಲಿದೆ.

ಸಂಸದ ಮತ್ತು ಹಿರಿಯ ವಕೀಲ ಬಿಕಾಸ್ ರಂಜನ್ ಭಟ್ಟಾಚಾರ್ಯ ಅವರು ಈ ಶಿಷ್ಟಾಚಾರದ ವಿರುದ್ಧ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಅರ್ಜಿಯ ಸಿಂಧುತ್ವವನ್ನು ಮೊದಲು ಸಾಬೀತುಪಡಿಸುವಂತೆ ಹೈಕೋರ್ಟ್ ಸೂಚಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಅತ್ಯಂತ ನೇರ ಸಂಘರ್ಷ ಪಶ್ಚಿಮ ಬಂಗಾಳದಲ್ಲಿ ಕಂಡುಬಂದಿದೆ. ಅಲ್ಲಿನ ನೂತನ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ, ಸರ್ಕಾರಿ, ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಮದರಸಾಗಳ ಬೆಳಗಿನ ಪ್ರಾರ್ಥನಾ ಸಭೆಯಲ್ಲಿ 'ವಂದೇ ಮಾತರಂ' ಹಾಡುವುದನ್ನು ಕಡ್ಡಾಯಗೊಳಿಸಿ ಮದರಸಾ ಶಿಕ್ಷಣ ನಿರ್ದೇಶನಾಲಯದ ಮೂಲಕ ಆದೇಶಿಸಿತ್ತು. ಈ ಆದೇಶಕ್ಕೆ ತಡೆ ನೀಡಿದ ಕಲ್ಕತ್ತಾ ಹೈಕೋರ್ಟ್, ಮೇಲ್ನೋಟಕ್ಕೆ ಗೀತೆಯ ಆಲಾಪನೆಯನ್ನು ಕಡ್ಡಾಯಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಈ ಹಿಂದಿನ ನ್ಯಾಯಾಲಯಗಳ ತೀರ್ಪುಗಳೂ ಸಹ ವಿಭಿನ್ನವಾಗಿವೆ. 1986ರ ಬಿಜೋಯ್ ಎಮ್ಯಾನುಯೆಲ್ vs ಕೇರಳ ಸರ್ಕಾರ ಪ್ರಕರಣದಲ್ಲಿ, ರಾಷ್ಟ್ರಗೀತೆ ಹಾಡಲು ನಿರಾಕರಿಸಿದ್ದಕ್ಕಾಗಿ ಶಾಲೆಯಿಂದ ಉಚ್ಚಾಟಿತರಾಗಿದ್ದ ಜಹೋವಾಸ್ ವಿಟ್ನೆಸ್ ಪಂಥದ ಮೂವರು ಮಕ್ಕಳ ಕ್ರಮವನ್ನು ಸುಪ್ರೀಂ ಕೋರ್ಟ್ ಸಮರ್ಥಿಸಿತ್ತು ಹಾಗೂ ಅವರ ವೈಯಕ್ತಿಕ ನಂಬಿಕೆಯ ಸ್ವಾತಂತ್ರ್ಯವನ್ನು ಎತ್ತಿಹಿಡಿದಿತ್ತು. 2017ರಲ್ಲಿ, ವಕೀಲರಾದ ಅಶ್ವಿನಿ ಉಪಾಧ್ಯಾಯ ಅವರು ವಂದೇ ಮಾತರಂ ಪ್ರಚಾರಕ್ಕಾಗಿ ರಾಷ್ಟ್ರೀಯ ನೀತಿ ರೂಪಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ವಜಾಗೊಳಿಸಿತ್ತು. ಸಂವಿಧಾನದ ವಿಧಿ 51A(a) ಕೇವಲ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಮಾತ್ರ ಉಲ್ಲೇಖಿಸುತ್ತದೆ, ಕಾನೂನಿನಲ್ಲಿ 'ರಾಷ್ಟ್ರೀಯ ಗೀತೆ' ಎಂಬ ಯಾವುದೇ ಪರಿಕಲ್ಪನೆ ಇಲ್ಲ ಎಂದು ನ್ಯಾಯಪೀಠ ಹೇಳಿತ್ತು.

150 ವರ್ಷ ಹಳೆಯ ಭಿನ್ನಾಭಿಪ್ರಾಯ

ಈ ವಿಧೇಯಕವು ಪ್ರವೇಶಿಸುತ್ತಿರುವ ವಿವಾದವು ಗೀತೆಯಷ್ಟೇ ಹಳೆಯದಾಗಿದೆ. ಚಟ್ಟೋಪಾಧ್ಯಾಯ ಅವರು 1870ರ ದಶಕದ ಮಧ್ಯಭಾಗದಲ್ಲಿ (ಸರ್ಕಾರದ ಪ್ರಕಾರ 1875 ನವೆಂಬರ್ 7) 'ವಂದೇ ಮಾತರಂ' ಗೀತೆಯನ್ನು ರಚಿಸಿದರು. ನಂತರ 1882ರಲ್ಲಿ ಪ್ರಕಟವಾದ ತಮ್ಮ 'ಆನಂದಮಠ' ಕಾದಂಬರಿಯಲ್ಲಿ ಇದನ್ನು ಸೇರಿಸಿದರು. ರವೀಂದ್ರನಾಥ ಠಾಗೋರ್ ಅವರು ಈ ಗೀತೆಗೆ ರಾಗ ಸಂಯೋಜಿಸಿ, 1896ರ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಿದ್ದರು. 1905ರ ಬಂಗಾಳ ವಿಭಜನೆಯ ನಂತರ ಇದು ಸ್ವದೇಶಿ ಚಳವಳಿಯ ಮುಖ್ಯ ಘೋಷಣೆಯಾಯಿತು. ಬ್ರಿಟಿಷ್ ಆಡಳಿತವು ಇದನ್ನು ಸಾರ್ವಜನಿಕವಾಗಿ ಹಾಡುವುದನ್ನು ದೇಶದ್ರೋಹ ಎಂದು ಪರಿಗಣಿಸಿತ್ತು.

ಗೀತೆಯ ಮೊದಲ ಚರಣಗಳು ಮಾತೃಭೂಮಿಯ ಪ್ರಾಕೃತಿಕ ಸೌಂದರ್ಯವನ್ನು ವರ್ಣಿಸಿದರೆ, ನಂತರದ ಚರಣಗಳು ಮಾತೃಭೂಮಿಯನ್ನು ದುರ್ಗಾ ಮತ್ತು ಲಕ್ಷ್ಮಿ ದೇವಿಯರಿಗೆ ಹೋಲಿಸುತ್ತವೆ. ಈ ಸಾಲುಗಳು ಏಕದೇವೋಪಾಸನೆ (ಒಬ್ಬನೇ ದೇವರನ್ನು ಪೂಜಿಸುವ) ತತ್ವಕ್ಕೆ ವಿರುದ್ಧವಾಗಿವೆ ಎಂಬುದು ಮುಸ್ಲಿಂ ನಾಯಕರ ಆಕ್ಷೇಪವಾಗಿತ್ತು.

ಈ ಆಕ್ಷೇಪವು 1923ರ ಕಾಕಿನಾಡ ಕಾಂಗ್ರೆಸ್ ಅಧಿವೇಶನದಲ್ಲಿ ಬಹಿರಂಗವಾಗಿ ವ್ಯಕ್ತವಾಯಿತು. ಗಾಯಕ ವಿಷ್ಣು ದಿಗಂಬರ್ ಪಲುಸ್ಕರ್ ಅವರು ಗೀತೆ ಹಾಡಲು ಎದ್ದುನಿಂತಾಗ, ಅಧಿವೇಶನದ ಅಧ್ಯಕ್ಷರಾಗಿದ್ದ ಮುಹಮ್ಮದ್ ಅಲಿ ಜೌಹರ್ ವಿರೋಧ ವ್ಯಕ್ತಪಡಿಸಿದ್ದರು. ನಂತರ 1937ರ ಅಕ್ಟೋಬರ್‌ನಲ್ಲಿ ಕಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಅಧಿಕೃತವಾಗಿ ಬಗೆಹರಿಸಲಾಯಿತು. ಮಹಾತ್ಮ ಗಾಂಧಿ, ನೆಹರೂ, ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ರಾಜೇಂದ್ರ ಪ್ರಸಾದ್ ಮತ್ತು ಮೌಲಾನಾ ಆಝಾದ್ ಈ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಗೆ ಮುನ್ನ ನೆಹರೂ ಅವರಿಗೆ ಪತ್ರ ಬರೆದಿದ್ದ ಠಾಗೋರ್, ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಬಳಸುವಂತೆ ಸಲಹೆ ನೀಡಿದ್ದರು. ಅದರಂತೆ 1937ರ ಅಕ್ಟೋಬರ್ 28ರ ನಿರ್ಣಯದ ಮೂಲಕ ಅಧಿಕೃತ ಕಾರ್ಯಕ್ರಮಗಳಲ್ಲಿ ಕೇವಲ ಮೊದಲ ಎರಡು ಚರಣಗಳ ಬಳಕೆಗೆ ಮಾತ್ರ ಸೀಮಿತಗೊಳಿಸಲಾಯಿತು.

1937ರ ಈ ನಿರ್ಧಾರವನ್ನೇ ಆಡಳಿತಾರೂಢ ಪಕ್ಷವು ಪದೇ ಪದೇ ಪ್ರಸ್ತಾಪಿಸುತ್ತಾ ಬಂದಿದೆ. 2025ರ ನವೆಂಬರ್ 7ರಂದು ಗೀತೆಯ 150ನೇ ವರ್ಷದ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಗೀತೆಯನ್ನು ತುಂಡರಿಸಿದ್ದು "ದೇಶ ವಿಭಜನೆಗೆ ಬೀಜ ಬಿತ್ತಿತು" ಎಂದು ಹೇಳಿದ್ದರು. ಆ ಡಿಸೆಂಬರ್‌ನಲ್ಲಿ ಸಂಸತ್ತಿನ ಉಭಯ ಸಭೆಗಳಲ್ಲಿ ನಡೆದ 10 ಗಂಟೆಗಳ ವಿಶೇಷ ಚರ್ಚೆಯಲ್ಲೂ ಅವರು ಇದೇ ಆರೋಪವನ್ನು ಪುನರುಚ್ಚರಿಸಿದ್ದರು.

ಇದಕ್ಕೆ ತಿರುಗೇಟು ನೀಡಿದ್ದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಅಸಹಕಾರ ಚಳವಳಿಯ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇದೇ ಗೀತೆಯನ್ನು ಕೂಗುತ್ತಾ ಜೈಲಿಗೆ ಹೋಗಿದ್ದರು ಎಂದು ಸ್ಮರಿಸಿದ್ದರು. ಸಂಸದ ಜೈರಾಮ್ ರಮೇಶ್ ಅವರು ಠಾಗೋರ್ ಅವರ ಪತ್ರವನ್ನು ಉಲ್ಲೇಖಿಸಿ, ಸರ್ಕಾರವು ಠಾಗೋರ್ ಅವರಿಗೇ ಅಪಮಾನ ಮಾಡುತ್ತಿದೆ ಎಂದು ವಾದಿಸಿದ್ದರು. ತೃಣಮೂಲ ಕಾಂಗ್ರೆಸ್ ಸದಸ್ಯರು ಸೆಂಟ್ರಲ್ ಹಾಲ್‌ನಲ್ಲಿ ಚಟ್ಟೋಪಾಧ್ಯಾಯ ಮತ್ತು ಠಾಗೋರ್ ಅವರ ಭಾವಚಿತ್ರಗಳನ್ನು ಹಿಡಿದು ಮೌನ ಪ್ರತಿಭಟನೆ ನಡೆಸಿದರೆ, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ ಬೆಳವಣಿಗೆಯನ್ನು ಪಶ್ಚಿಮ ಬಂಗಾಳದ ಚುನಾವಣೆಗೆ ಲಿಂಕ್ ಮಾಡಿದ್ದರು.

ಆ ಚುನಾವಣೆಯಲ್ಲಿ ಬಿಜಿಪಿ ಜಯಗಳಿಸಿತು. ಮೇ 9ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸುವೇಂದು ಅಧಿಕಾರಿ, ಕೆಲವೇ ದಿನಗಳಲ್ಲಿ ಮದರಸಾಗಳಿಗೆ ಸಂಬಂಧಿಸಿದ ಈ ಆದೇಶವನ್ನು ಹೊರಡಿಸಿದರು. ಸಂವಿಧಾನದ ವಿಧಿ 19, 25 ಮತ್ತು 28(3) ಅನ್ನು ಉಲ್ಲೇಖಿಸಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಜೂನ್ 2ರಂದು ಈ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿತು. ಜೂನ್ 22ರಂದು ನಡೆದ ತನ್ನ ಕಾರ್ಯಕಾರಿ ಸಭೆಯಲ್ಲಿ, ಸಂಸತ್ ಈ ಗೀತೆಯನ್ನು ನಾಗರಿಕರಿಗೆ ಅಥವಾ ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸಿದರೆ ನ್ಯಾಯಾಲಯದ ಮೆಟ್ಟಿಲೇರಲು ನಿರ್ಣಯಿಸಿತು. ಜಮಾತ್-ಎ-ಉಲಮಾ-ಇ-ಹಿಂದ್ ಮತ್ತು ಜಮಾತ್-ಎ-ಇಸ್ಲಾಮಿ ಸಂಘಟನೆಗಳೂ ಇದೇ ನಿಲುವನ್ನು ಬೆಂಬಲಿಸಿದವು.

ವಿಧೇಯಕದ ಮೇಲಿನ ಪ್ರತಿಕ್ರಿಯೆಗಳು ಕೇವಲ ಪಕ್ಷದ ಆಧಾರದ ಮೇಲೆ ವಿಂಗಡಣೆಯಾಗಿಲ್ಲ.

ಜನತಾ ದಳ (ಯು) ಶಾಸಕ ಶ್ಯಾಮ್ ರಝಾಕ್ ವಿಧೇಯಕವನ್ನು ಬೆಂಬಲಿಸಿ, ಗೀತೆಗೆ ಅಡ್ಡಿಪಡಿಸುವುದು "ರಾಷ್ಟ್ರಕ್ಕೆ ಮಾಡುವ ಅಪಮಾನ" ಎಂದಿದ್ದಾರೆ. ಉತ್ತರ ಪ್ರದೇಶದ ವಿರೋಧ ಪಕ್ಷದ ನಾಯಕ ಮಾತಾ ಪ್ರಸಾದ್ ಪಾಂಡೆ, ವಂದೇ ಮಾತರಂ ಅನ್ನು ವಿರೋಧಿಸಬಾರದು, ಆದರೆ ಅದನ್ನು ರಾಷ್ಟ್ರಗೀತೆಯ ಹಂತಕ್ಕೇರಿಸಬಾರದು ಎಂದು ಹೇಳಿದ್ದಾರೆ.

ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್, ಟೆಲಿಪ್ರಾಮ್ಟರ್ ಇಲ್ಲದೆ ಗೀತೆಯನ್ನು ಹೇಳುವಂತೆ ಮೋದಿ ಮತ್ತು ಅಮಿತ್ ಶಾ ಅವರಿಗೆ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಪಕ್ಷವು ಈ ವಿಧೇಯಕವನ್ನು ಜೈಲು ಶಿಕ್ಷೆಯ ಬೆದರಿಕೆಯ ಮೂಲಕ ಕಾನೂನು ತರುವ ಸರ್ಕಾರದ ಪ್ರವೃತ್ತಿಯ ಭಾಗ ಎಂದು ಬಣ್ಣಿಸಿದೆ.

ಕೃಪೆ: theprint.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News