ʼಕಾಕ್ರೋಚ್ ಜನತಾ ಪಾರ್ಟಿʼ ಬೆನ್ನಲ್ಲೇ ಮುನ್ನೆಲೆಗೆ ಬಂತು ʼE20 ಜನತಾ ಪಾರ್ಟಿʼ; ಈ ಚಳವಳಿಯ ಉದ್ದೇಶವೇನು? ಇವರ ಬೇಡಿಕೆಗಳೇನು?
‘ಕಾಕ್ರೋಚ್ ಜನತಾ ಪಾರ್ಟಿ’ಯಿಂದ (CJP) ಪ್ರೇರಣೆ ಪಡೆದಿರುವ ‘E20 ಜನತಾ ಪಾರ್ಟಿ’, ಎಥನಾಲ್ ಮಿಶ್ರಿತ ಇಂಧನದ ವಿರುದ್ಧ ಆನ್‌ಲೈನ್ ಅಭಿಯಾನವನ್ನು ಪ್ರಾರಂಭಿಸಿದೆ. ಗ್ರಾಹಕರಿಗೆ ಶೇಕಡಾ 100 ರಷ್ಟು ಶುದ್ಧ ಪೆಟ್ರೋಲ್ ಖರೀದಿಸುವ ಆಯ್ಕೆಯನ್ನು ನೀಡಬೇಕು ಎಂಬುದು ಈ ಅಭಿಯಾನದ ಪ್ರಮುಖ ಬೇಡಿಕೆಯಾಗಿದೆ. ಈ ಹೋರಾಟಕ್ಕೆ ಧುಮುಕಿರುವ E20 ಜನತಾ ಪಾರ್ಟಿಯು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ರಾಜೀನಾಮೆಗೂ ಆಗ್ರಹಿಸಿದೆ. ಈ ಅಭಿಯಾನಕ್ಕೆ ವಾಹನ ಸಾರಿಗೆ ಮಾಲೀಕರಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ.
E20 ಪೆಟ್ರೋಲ್ ವಿರುದ್ಧ ದಿಲ್ಲಿಯ ಟ್ಯಾಕ್ಸಿ, ಪ್ರವಾಸಿ ಸಾರಿಗೆ ಮತ್ತು ಟೂರ್ ಆಪರೇಟರ್‌ಗಳ ಸಂಘವು ಆಗಸ್ಟ್ 4 ರಂದು ಸಂಸತ್ತಿಗೆ ಚಲೋ ಹಮ್ಮಿಕೊಂಡಿದೆ. E20 ಜನತಾ ಪಾರ್ಟಿಯ ಪ್ರಕಾರ, ತಮ್ಮ ಅಭಿಯಾನವು ಗ್ರಾಹಕರ ಹಕ್ಕುಗಳ ಮೇಲೆ ಕೇಂದ್ರೀಕೃತವಾಗಿದೆಯೇ ಹೊರತು, ಎಥನಾಲ್ ಮಿಶ್ರಿತ ಇಂಧನದ ವಿರುದ್ಧವಾಗಿಲ್ಲ.
E20 ಜನತಾ ಪಾರ್ಟಿ ಎಂದರೇನು?
ಸಾಮಾಜಿಕ ಜಾಲತಾಣದ ದೀರ್ಘ ಪೋಸ್ಟ್ ಪ್ರಕಾರ, E20 ಜನತಾ ಪಾರ್ಟಿಯು ನಾಗರಿಕರಿಂದಲೇ ನಡೆಯುತ್ತಿರುವ ಒಂದು ಗ್ರಾಹಕರ ಹಕ್ಕುಗಳ ಚಳವಳಿಯಾಗಿದೆ. ಬೆಂಬಲ ಸಂಘಟಿಸಲು ಆನ್‌ಲೈನ್ ವೇದಿಕೆಗಳನ್ನು ಬಳಸಿಕೊಳ್ಳುತ್ತಿರುವ ಹೊಸ ಮಾದರಿಯ ನಾಗರಿಕ ಹೋರಾಟ ಇದಾಗಿದೆ.
"ಇಂಧನ ನೀತಿಯಲ್ಲಿ ಗ್ರಾಹಕರಿಗೆ ಪಾರದರ್ಶಕತೆ, ಸರಿಯಾದ ಮಾಹಿತಿ ಮತ್ತು ಮಾಹಿತಿ ಆಧಾರಿತ ಆಯ್ಕೆಯ ಹಕ್ಕು ಸಿಗಬೇಕು. ಇತರ ಉತ್ಪನ್ನಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಜನರಿಗಿರುವಂತೆ, ತಾವು ಖರೀದಿಸುವ ಇಂಧನವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವೂ ಇರಬೇಕು" ಎಂದು ಆ ಪೋಸ್ಟ್‌ನಲ್ಲಿ ಹೇಳಲಾಗಿದೆ.
ಇವರ ಬೇಡಿಕೆಗಳೇನು?
ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿರುವ ಈ ಬಳಗ, "ನಮ್ಮ ಬೇಡಿಕೆ ಸ್ಪಷ್ಟವಾಗಿದೆ. E20 ಜನತಾ ಪಾರ್ಟಿಯು ಜನರ ಬೆಂಬಲದಿಂದ ನಡೆಯುತ್ತಿರುವ ಚಳವಳಿಯಾಗಿದೆ. E20 (ಶೇ. 20 ಎಥನಾಲ್ ಮಿಶ್ರಿತ ಪೆಟ್ರೋಲ್) ನೀತಿಯು ತಮ್ಮ ವಾಹನಗಳು, ಜೇಬು ಮತ್ತು ಗ್ರಾಹಕರ ಹಕ್ಕುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪ್ರತಿಯೊಬ್ಬ ಭಾರತೀಯನೂ ತಿಳಿಯುವಂತೆ ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ನಾವು ಆಗ್ರಹಿಸುತ್ತಿದ್ದೇವೆ" ಎಂದು ಹೇಳಿದೆ.
ಇಂಧನ ಮಾರಾಟಗಾರರು ಎಥನಾಲ್ ಮಿಶ್ರಿತ ಪೆಟ್ರೋಲ್ ಜೊತೆಗೆ 100% ಶುದ್ಧ ಪೆಟ್ರೋಲ್ ಅನ್ನು ಸಹ ಮಾರಾಟ ಮಾಡಬೇಕು, ಇದರಿಂದ ಗ್ರಾಹಕರಿಗೆ ತಮಗೆ ಬೇಕಾದ ಇಂಧನ ಆಯ್ಕೆ ಮಾಡುವ ಅವಕಾಶ ಸಿಗುತ್ತದೆ ಎಂಬುದು ಈ ಅಭಿಯಾನದ ಮುಖ್ಯ ಬೇಡಿಕೆಯಾಗಿದೆ.
ತಮ್ಮ ಹೋರಾಟವು ಸಬ್ಸಿಡಿ, ಉಚಿತ ಇಂಧನ ಅಥವಾ E20 ಪೆಟ್ರೋಲ್ ಅನ್ನು ಸಂಪೂರ್ಣವಾಗಿ ನಿಲ್ಲಿಸುವುದಕ್ಕಾಗಿ ಅಲ್ಲ. ಬದಲಾಗಿ, ವಾಹನ ಸವಾರರು ತಮ್ಮ ವಾಹನಕ್ಕೆ ಸೂಕ್ತವಾದ ಇಂಧನವನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಹಕ್ಕಿಗಾಗಿ ಮಾತ್ರ ಎಂದು ಈ ಗುಂಪು ಸ್ಪಷ್ಟಪಡಿಸಿದೆ.
ಇದರ ಜೊತೆಗೆ, ಇಂಧನ ಮಿಶ್ರಣದ ವಿವರಗಳನ್ನು ಸರಿಯಾಗಿ ಪ್ರದರ್ಶಿಸುವುದು ಹಾಗೂ ವಿವಿಧ ಇಂಧನ ಮಿಶ್ರಣಗಳ ವೆಚ್ಚ, ಪ್ರಯೋಜನ ಮತ್ತು ಕಾರ್ಯಕ್ಷಮತೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡುವುದನ್ನೂ ಈ ಅಭಿಯಾನ ಒತ್ತಾಯಿಸುತ್ತಿದೆ. ಅಲ್ಲದೆ, ಬೇರೆ ಬೇರೆ ಇಂಧನ ಮಿಶ್ರಣಗಳು ವಾಹನದ ಮೈಲೇಜ್, ಎಂಜಿನ್ ಸಾಮರ್ಥ್ಯ, ಹೊಗೆ ಉಗುಳುವುದು ಮತ್ತು ದೀರ್ಘಕಾಲದ ವಾಹನ ನಿರ್ವಹಣೆಯ ಮೇಲೆ ಬೀರುವ ಪರಿಣಾಮಗಳ ಕುರಿತು ಪರಿಶೀಲನೆ ನಡೆಸಬೇಕೆಂದೂ ಪಾರ್ಟಿ ಆಗ್ರಹಿಸಿದೆ.
►ಹೋರಾಟಕ್ಕೆ ಕೈಜೋಡಿಸಿದ ಸಾರಿಗೆ ಸಂಘಟನೆಗಳು
ದಿಲ್ಲಿಯ ಟ್ಯಾಕ್ಸಿ, ಪ್ರವಾಸಿ ಸಾರಿಗೆ ಮತ್ತು ಟೂರ್ ಆಪರೇಟರ್‌ಗಳ ಸಂಘವು ಈ ಚಳವಳಿಗೆ ಬೆಂಬಲ ವ್ಯಕ್ತಪಡಿಸಿದ್ದು, ಆಗಸ್ಟ್ 4 ರಂದು ಸಂಸತ್ತಿಗೆ ಚಲೋ ಹಮ್ಮಿಕೊಳ್ಳುವುದಾಗಿ ಘೋಷಿಸಿದೆ.
E20 ಪೆಟ್ರೋಲ್ ಬಳಕೆ ವಿರುದ್ಧ ಹಾಗೂ ವಾಣಿಜ್ಯ ವಾಹನಗಳಲ್ಲಿ ಜಿಪಿಎಸ್ (GPS) ಟ್ರ್ಯಾಕಿಂಗ್ ಸಾಧನ ಮತ್ತು ಪ್ಯಾನಿಕ್ ಬಟನ್ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ನಡೆಯುವ ಈ ಪ್ರತಿಭಟನೆಯಲ್ಲಿ ಟ್ಯಾಕ್ಸಿ ಚಾಲಕರು, ಪ್ರವಾಸಿ ವಾಹನ ಮಾಲೀಕರು ಮತ್ತು ಇತರ ವಾಣಿಜ್ಯ ವಾಹನ ಮಾಲೀಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಸಂಸತ್ ಚಲೋ ಚಳವಳಿಯ ನೇತೃತ್ವವನ್ನು ಸಂಘದ ಅಧ್ಯಕ್ಷ ಸಂಜಯ್ ಸಾಮ್ರಾಟ್ ವಹಿಸಲಿದ್ದಾರೆ.
E20 ಇಂಧನವು ವಾಹನದ ಮೈಲೇಜ್ ಕಡಿಮೆ ಮಾಡುತ್ತದೆ, ನಿರ್ವಹಣಾ ವೆಚ್ಚವನ್ನು ಹೆಚ್ಚಿಸುತ್ತದೆ ಮತ್ತು ಹಳೆಯ ವಾಹನಗಳ ಕಾರ್ಯಕ್ಷಮತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಈ ಹೋರಾಟಗಾರರು ಆರೋಪಿಸಿದ್ದಾರೆ.
ಆದರೆ, ಎಥನಾಲ್ ಮಿಶ್ರಿತ ಇಂಧನದಿಂದ ಇಂತಹ ಯಾವುದೇ ದೊಡ್ಡ ಮಟ್ಟದ ಸಮಸ್ಯೆಗಳು ಉಂಟಾಗಿರುವ ಬಗ್ಗೆ ಸಾಕ್ಷ್ಯಾಧಾರಗಳಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
►ಇಂಟರ್ನೆಟ್‌ನಲ್ಲಿ ಹೆಚ್ಚುತ್ತಿದೆ E20 ಜನತಾ ಪಾರ್ಟಿ ಜನಪ್ರಿಯತೆ
NEET ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಚಳವಳಿ ನಡೆಸಿ, ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದ್ದ 'ಕಾಕ್ರೋಚ್ ಜನತಾ ಪಾರ್ಟಿ'ಯ ಹಾದಿಯಲ್ಲೇ ಈ ಪಕ್ಷವೂ ರೂಪುಗೊಂಡಂತೆ ಕಾಣುತ್ತಿದೆ.
ಈಗಾಗಲೇ E20 ಪಾರ್ಟಿಯ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 5.01 ಲಕ್ಷ ಬೆಂಬಲಿಗರಿದ್ದು, ಕ್ಷಣಕ್ಷಣಕ್ಕೂ ಈ ಸಂಖ್ಯೆ ಹೆಚ್ಚಾಗುತ್ತಿದೆ. ಎಕ್ಸ್ ಖಾತೆಯಲ್ಲಿ 55,700 ಫಾಲೋವರ್ ಗಳಿದ್ದಾರೆ.
ಗ್ರಾಹಕರಿಗೆ ಶೇ. 100 ರಷ್ಟು ಶುದ್ಧ ಪೆಟ್ರೋಲ್ ಖರೀದಿಸುವ ಆಯ್ಕೆಯನ್ನು ನೀಡಬೇಕು ಎಂಬ ತಮ್ಮ ಮುಖ್ಯ ಬೇಡಿಕೆಯನ್ನು ಈ ಗುಂಪು ಸಾಮಾಜಿಕ ಜಾಲತಾಣಗಳ ಮೂಲಕ ಗಟ್ಟಿಯಾಗಿ ಪ್ರತಿಪಾದಿಸುತ್ತಿದೆ.
ಈ ಪಕ್ಷದ ಆನ್‌ಲೈನ್ ಜನಪ್ರಿಯತೆ ವೇಗವಾಗಿ ಬೆಳೆಯುತ್ತಿದ್ದು, ರವಿವಾರ (ಜುಲೈ 26) ಕೇವಲ ಕೆಲವೇ ಗಂಟೆಗಳಲ್ಲಿ ಇದರ 'X' ಖಾತೆಗೆ 25,00ಕ್ಕಿಂತ ಹೆಚ್ಚು ಹೊಸ ಬೆಂಬಲಿಗರು ಸೇರ್ಪಡೆಯಾಗಿದ್ದಾರೆ.
CJPಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಈ ಹಿಂದೆ ಎಕ್ಸ್ ನಲ್ಲಿ ಹಾಕಿದ್ದ "ಎಲ್ಲಾ ಕಾಕ್ರೋಚ್‌ಗಳು ಒಂದಾದರೆ ಏನಾಗುತ್ತದೆ?" ಎಂಬ ಪೋಸ್ಟ್ ಅನ್ನು ಶೇರ್ ಮಾಡಿರುವ E20 ಜನತಾ ಪಾರ್ಟಿಯ ಸೋಷಿಯಲ್ ಮೀಡಿಯಾ ಹ್ಯಾಂಡಲ್ "ಎಲ್ಲಾ ಬೈಕ್ ಮತ್ತು ಕಾರು ಮಾಲೀಕರು ಒಂದಾದರೆ ಏನಾಗುತ್ತದೆ?" ಎಂದು ಪ್ರಶ್ನಿಸಿದೆ.
ಶೇಕಡಾ 20 ರಷ್ಟು ಎಥನಾಲ್ ಹಾಗೂ ಶೇಕಡಾ 80 ರಷ್ಟು ಪೆಟ್ರೋಲ್ ಹೊಂದಿರುವ E20 ಇಂಧನದ ಬಳಕೆ ಕುರಿತು ಸಾರ್ವಜನಿಕರಲ್ಲಿ ಚರ್ಚೆ ಮತ್ತು ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ ಈ E20 ಪಾರ್ಟಿಯ ಅಭಿಯಾನ ಮುನ್ನೆಲೆಗೆ ಬಂದಿದೆ.
►ಏನಿದು E20 ವಿವಾದ
2026 ಏಪ್ರಿಲ್ 1ರಿಂದ ಭಾರತದಾದ್ಯಂತ E20 ಇಂಧನವೇ (ಶೇಕಡಾ 20 ಎಥನಾಲ್, ಶೇಕಡಾ 80 ಪೆಟ್ರೋಲ್) ಮುಖ್ಯ ಪೆಟ್ರೋಲ್ ಆಗಿ ಲಭ್ಯವಿದೆ. ಈ ನಿರ್ಧಾರದಿಂದ ಕಚ್ಚಾ ತೈಲ ಆಮದು ಕಡಿಮೆಯಾಗಲಿದೆ, ಕಬ್ಬು ಬೆಳೆಗಾರರ ಆದಾಯ ಹೆಚ್ಚಲಿದೆ, ಮಾಲಿನ್ಯ ತಗ್ಗಲಿದೆ ಮತ್ತು ದೇಶದ ಇಂಧನ ಭದ್ರತೆ ಬಲಗೊಳ್ಳಲಿದೆ ಎಂದು ಸರ್ಕಾರ ಹೇಳಿದೆ. ಜೊತೆಗೆ, ಹೆಚ್ಚಿನ ಬೆಲೆಯಲ್ಲಿ ಶುದ್ಧ ಪೆಟ್ರೋಲ್ ಕೂಡ ಲಭ್ಯವಿದೆ ಎಂದು ಸ್ಪಷ್ಟಪಡಿಸಿದೆ. ಆದರೆ, E20 ಇಂಧನದಿಂದ ವಾಹನಗಳ ಮೈಲೇಜ್ ಶೇ. 8 ರಿಂದ 15 ರಷ್ಟು ಕಡಿಮೆಯಾಗಿದೆ, ಹಳೆಯ ವಾಹನಗಳ ಎಂಜಿನ್ ಸವೆತ ಹಾಗೂ ದುರಸ್ತಿ ವೆಚ್ಚ ಹೆಚ್ಚಾಗಿದೆ ಮತ್ತು ಕಡಿಮೆ ಮಿಶ್ರಣದ ಪೆಟ್ರೋಲ್ ಸಿಗುವುದು ಕಷ್ಟವಾಗಿದೆ ಎಂದು ವಿಮರ್ಶಕರು ಆರೋಪಿಸಿದ್ದಾರೆ. ಇಂಧನ ಪೂರೈಕೆ ವ್ಯವಸ್ಥೆಯ ಲೋಪಗಳನ್ನು ಪ್ರಶ್ನಿಸಿರುವ ಅವರು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕುಟುಂಬಕ್ಕೆ ಇದರಿಂದ ಲಾಭವಾಗಿದೆ ಎಂದೂ ಆರೋಪಿಸಿದ್ದಾರೆ. ಈ ಆರೋಪಗಳನ್ನು ಗಡ್ಕರಿ ನಿರಾಕರಿಸಿದ್ದಾರೆ. E20 ವಿರುದ್ಧ ಜಂತರ್ ಮಂತರ್‌ನಲ್ಲಿ ಆರಂಭವಾಗಿದ್ದ ಪ್ರತಿಭಟನೆ, ಈಗ ಬೃಹತ್ ಸಾರ್ವಜನಿಕ ಅಭಿಯಾನವಾಗಿ ಮಾರ್ಪಟ್ಟಿದೆ.
ಮತ್ತೊಂದೆಡೆ, ಮೆಟಾ, ಪ್ರಮುಖ ಸಾಮಾಜಿಕ ಜಾಲತಾಣಗಳು ಮತ್ತು ಅಪರಿಚಿತ ವ್ಯಕ್ತಿಗಳ ವಿರುದ್ಧ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡಲು ಬಾಂಬೆ ಹೈಕೋರ್ಟ್ ನಿತಿನ್ ಗಡ್ಕರಿ ಅವರಿಗೆ ಅನುಮತಿ ನೀಡಿದೆ. E20 ನೀತಿಯಿಂದ ಗಡ್ಕರಿ ಮತ್ತು ಅವರ ಕುಟುಂಬವು ಆರ್ಥಿಕ ಲಾಭ ಮಾಡಿಕೊಂಡಿದೆ ಎಂದು 'ಡೀಪ್‌ಫೇಕ್' ವಿಡಿಯೊಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡಲಾಗುತ್ತಿತ್ತು. ಎಥನಾಲ್ ಮಿಶ್ರಣ ನೀತಿಯನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ರೂಪಿಸಿ ನಿರ್ವಹಿಸುತ್ತದೆಯೇ ಹೊರತು ಗಡ್ಕರಿ ಅವರ ಸಚಿವಾಲಯವಲ್ಲ ಎಂಬ ಅಂಶವನ್ನು ಈ ಸುಳ್ಳು ಆರೋಪಗಳು ಮರೆಮಾಚಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.