ಕೃತಕ ಸೂರ್ಯ ನಿರ್ಮಾಣದತ್ತ ಮತ್ತೊಂದು ಮೈಲಿಗಲ್ಲು; ಜಗತ್ತಿನ ಅತಿದೊಡ್ಡ ಮ್ಯಾಗ್ನೆಟ್ ನಿರ್ಮಿಸಿದ ಚೀನಾ!

Update: 2026-07-28 17:18 IST

Screengrab : x \ @theinformant_x

2023ರ ಸುಮಾರಿಗೆ ಫ್ಯೂಷನ್ ಪವರ್ ನಿಂದ ವಿದ್ಯುತ್ ಉತ್ಪಾದಿಸುವ ಚೀನಾದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಈಗಿನ ಸಾಧನೆ ಮಹತ್ವದ ಮೈಲಿಗಲ್ಲಾಗಿದ್ದು, ಇಂಗಾಲ ಮುಕ್ತ ಶಕ್ತಿಯ ಅಂತಿಮ ಮೂಲ ಎಂದು ಕರೆಯುವ ವೈಜ್ಞಾನಿಕ ಸ್ಪರ್ಧೆಯಲ್ಲಿ ಚೀನಾ ಜಾಗತಿಕ ನಾಯಕರ ಸಾಲಿಗೆ ಸೇರ್ಪಡೆಗೊಂಡಿದೆ.

ವಿಶ್ವದ ಅತಿದೊಡ್ಡ ಸೂಪರ್ಕಂಡಕ್ಟಿಂಗ್ ಫ್ಯೂಷನ್ ಮ್ಯಾಗ್ನೆಟ್ ಪೂರ್ಣಗೊಳಿಸಿ ಪರೀಕ್ಷಿಸಿರುವ ಚೀನಾ ಕೃತಕ ಸೂರ್ಯನನ್ನು ನಿರ್ಮಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದೆ. ನ್ಯೂಕ್ಲಿಯರ್ ಫ್ಯೂಷನ್ ಮೂಲಕ ಶುದ್ಧ ಮತ್ತು ಅಪರಿಮಿತ ಶಕ್ತಿಯನ್ನು ಉತ್ಪಾದಿಸಲು ಅಗತ್ಯವಿರುವ ಅಂಶವಾಗಿದೆ ಈ ಸೂಪರ್ಕಂಡಕ್ಟಿಂಗ್ ಫ್ಯೂಷನ್ ಮ್ಯಾಗ್ನೆಟ್.

ಕೃತಕ ಸೂರ್ಯ ಎಂದರೇನು?

ಕೃತಕ ಸೂರ್ಯ ಎಂದರೆ ಅಣು ನಕ್ಷತ್ರದಂತೆ ಪರಮಾಣು ಸಮ್ಮಿಳನ (ನ್ಯೂಕ್ಲಿಯರ್ ಫ್ಯೂಷನ್) ಕ್ರಿಯೆ ಮೂಲಕ ಅಪಾರ ಪ್ರಮಾಣದ ಶುದ್ಧ ಶಕ್ತಿಯನ್ನು ಉತ್ಪಾದಿಸಲು ಭೂಮಿ ಮೇಲೆ ನಿರ್ಮಿಸಲಾದ ವೈಜ್ಞಾನಿಕ ಪ್ರಯೋಗದ ರಿಯಾಕ್ಟರ್. ಚೀನಾದ ಮತ್ತು ದಕ್ಷಿಣ ಕೊರಿಯಾದ ರಿಯಾಕ್ಟರ್ ಗಳು ಈ ತಂತ್ರಜ್ಞಾನದಲ್ಲಿ ಪ್ರಮುಖವಾಗಿವೆ.

ನ್ಯೂಕ್ಲಿಯರ್ ಫ್ಯೂಷನ್ (ಸಮ್ಮಿಳನ) ಒಂದು ಪರಮಾಣು ತಂತ್ರಜ್ಞಾನವಾಗಿದ್ದು, ಇದು ಹೆಚ್ಚಿನ ಪ್ರಮಾಣದ ಪರಮಾಣು ತ್ಯಾಜ್ಯವನ್ನು ಉತ್ಪಾದಿಸದೆಯೇ ಅತಿ ಹೆಚ್ಚಿನ ಮಟ್ಟದ ಶಕ್ತಿಯನ್ನು ಉತ್ಪಾದಿಸುತ್ತದೆ. ಮತ್ತು ವಿಜ್ಞಾನಿಗಳು ದಶಕಗಳಿಂದ ನ್ಯೂಕ್ಲಿಯರ್ ಸಮ್ಮಿಳನದ ಸಾಧನೆಗೆ ಪ್ರಯತ್ನಿಸುತ್ತಿದ್ದಾರೆ.

ಪ್ರಸ್ತುತ ಪರಮಾಣು ಶಕ್ತಿಯನ್ನು ವಿದಳನದ (ಫಿಶನ್) ರೂಪದಲ್ಲಿ ಪಡೆಯಲಾಗುತ್ತಿದೆ. ಇದು ಸಮ್ಮಿಳನಕ್ಕೆ ವಿರುದ್ಧವಾದ ಪ್ರಕ್ರಿಯೆಯಾಗಿದೆ (ಭಾರವಾದ ಪರಮಾಣುವಿನ ನ್ಯೂಕ್ಲಿಯಸ್ ಅನ್ನು ಎರಡು ಅಥವಾ ಹೆಚ್ಚಿನ ಹಗುರವಾದ ಪರಮಾಣುಗಳ ನ್ಯೂಕ್ಲಿಯಸ್‌ಗಳಾಗಿ ವಿಭಜಿಸುವ ಮೂಲಕ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ). ವಿದಳನವನ್ನು ಸಾಧಿಸುವುದು ಸುಲಭ. ಆದರೆ ಇದು ತ್ಯಾಜ್ಯವನ್ನ ಉತ್ಪಾದಿಸುತ್ತದೆ.

ಚೀನಾದ ಮಹತ್ವಾಕಾಂಕ್ಷೆಯ ಯೋಜನೆ

2023ರ ಸುಮಾರಿಗೆ ಫ್ಯೂಷನ್ ಪವರ್ನಿಂದ (ಸಮ್ಮಿಳನ ಶಕ್ತಿ) ವಿದ್ಯುತ್ ಉತ್ಪಾದಿಸುವ ಚೀನಾದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಈಗಿನ ಸಾಧನೆ ಮಹತ್ವದ ಮೈಲಿಗಲ್ಲಾಗಿದೆ. ಇಂಗಾಲ ಮುಕ್ತ ಶಕ್ತಿಯ ಅಂತಿಮ ಮೂಲ ಎಂದು ಕರೆಯುವ ವೈಜ್ಞಾನಿಕ ಸ್ಪರ್ಧೆಯಲ್ಲಿ ಚೀನಾವನ್ನು ಜಾಗತಿಕ ನಾಯಕರ ಸಾಲಿಗೆ ಸೇರ್ಪಡೆಗೊಳಿಸಿದೆ.

ಚೀನಾದ ಅಕಾಡೆಮಿ ಆಫ್ ಸೈನ್ಸಸ್ ಅಡಿಯ್ಲಲಿ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಮಾ ಫಿಸಿಕ್ಸ್ ಅಭಿವೃದ್ಧಿಪಡಿಸಿರುವ ಹೊಸದಾಗಿ ಅಂಗೀಕರಿಸಲಾದ ‘ಟೊರೊಯ್ಡಲ್ ಫೀಲ್ಡ್ ಸೂಪರ್ ಕಂಡಕ್ಟಿಂಗ್ ಮ್ಯಾಗ್ನೆಟ್’ 21 ಮೀಟರ್ ಉದ್ದ, 12 ಮೀಟರ್ ಅಗಲ ಮತ್ತು 582 ಟನ್ ತೂಕವಿರುವ ದೈತ್ಯ ಡಿ ಆಕಾರದ ರಚನೆಯಾಗಿದೆ.

ಕೃತಕ ಸೂರ್ಯವು ನ್ಯೂಕ್ಲಿಯರ್ ಫ್ಯೂಶನ್ ರಿಯಾಕ್ಟರ್ ಆಗಿದ್ದು, ಅದು ಸೂರ್ಯನಿಗೆ ಶಕ್ತಿ ತುಂಬುವ ಅದೇ ಪ್ರಕ್ರಿಯೆಯನ್ನು ಮರುಸೃಷ್ಟಿಸುತ್ತದೆ. ಇದು 100 million°C ಗಿಂತ ಹೆಚ್ಚಿನ ತಾಪಮಾನದಲ್ಲಿ ಹೈಡ್ರೋಜನ್ ಪರಮಾಣುಗಳನ್ನು ಬೆಸೆಯುತ್ತದೆ. ಇಂಗಾಲದ ಡೈ ಆಕ್ಸೈಡ್ ಅನ್ನು ಉತ್ಪಾದಿಸದೆ ಅಗಾಧ ಪ್ರಮಾಣದ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಇದು ಭವಿಷ್ಯದಲ್ಲಿ ವಾಸ್ತವಿಕವಾಗಿ ಅಪರಿಮಿತ, ಶುದ್ಧ ಮತ್ತು ಸುರಕ್ಷಿತ ವಿದ್ಯುತ್ ಮೂಲವನ್ನು ಒದಗಿಸುತ್ತದೆಎಂದು ವಿಜ್ಞಾನಿಗಳು ಭರವಸೆ ಹೊಂದಿದ್ದಾರೆ.

ಅತಿದೊಡ್ಡ ಫ್ಯೂಷನ್ ರಿಯಾಕ್ಟರ್:

ಚೀನಾ ಈಗ ನಿರ್ಮಿಸಿರುವುದು ಈವರೆಗೆ ನಿರ್ಮಿಸಲಾದ ಅತಿದೊಡ್ಡ ಫ್ಯೂಷನ್ ರಿಯಾಕ್ಟರ್ ಸೂಪರ್ ಕಂಡಕ್ಟಿಂಗ್ ಮ್ಯಾಗ್ನೆಟ್. ಇದು ವಿಶ್ವದ ಅತಿದೊಡ್ಡ ಸಮ್ಮಿಳನ ಯೋಜನೆಯಾದ ಅಂತರರಾಷ್ಟ್ರೀಯ ಥರ್ಮೋನ್ಯೂಕ್ಲಿಯರ್ ಪ್ರಾಯೋಗಿಕ ರಿಯಾಕ್ಟರ್ಗಾಗಿ (ITER) ಅಭಿವೃದ್ಧಿಪಡಿಸಲಾದ ಇದೇ ರೀತಿಯ ಮ್ಯಾಗ್ನೆಟ್ಗಳ 1.3 ಪಟ್ಟು ವೊಲ್ಯುಮ್ (ಪರಿಮಾಣ) ಮತ್ತು ಮೂರು ಪಟ್ಟು ಸಂಗ್ರಹಿತ ಶಕ್ತಿಯನ್ನು (ಸ್ಟೋರ್ಡ್ ಎನರ್ಜಿ) ಹೊಂದಿದೆ.

ಗೋಡೆಗಳನ್ನು ತಲುಪಲು ಅನುಮತಿಸದೆ ಪ್ಲಾಸ್ಮಾವನ್ನು ರಿಯಾಕ್ಟರ್ ಒಳಗೆ ಬಲೆಗೆ ಬೀಳಿಸುವ ಅಗಾಧವಾದ ಶಕ್ತಿಶಾಲಿ ಮ್ಯಾಗ್ನೆಟಿಕ್ ಫೀಲ್ಡ್ ಅನ್ನು ರಚಿಸುವುದು ಈ ಮ್ಯಾಗ್ನೆಟ್ ಉದ್ದೇಶವಾಗಿದೆ. ಈ ಪ್ಲಾಸ್ಮಾವು ಸುಮಾರು 100 ಮಿಲಿಯನ್ ಡಿಗ್ರಿ ಸೆಲ್ಷಿಯಸ್ ತಾಪಮಾನ ತಲುಪುವ ಸೂಪರ್ಹೀಟೆಡ್ ಅನಿಲವಾಗಿದೆ.

ದೈತ್ಯ ಮ್ಯಾಗ್ನೆಟ್ ಜೊತೆಗೆ ಸಂಶೋಧಕರು ಹೈ ಟೆಂಪರೇಚರ್ ಸೂಪರ್ ಕಂಡಕ್ಟಿಂಗ್ ಸೆಂಟ್ರಲ್ ಸೊಲೆನಾಯ್ಡ್ ಕಾಯ್ಲ್ ಅನ್ನೂ ಯಶಸ್ವಿಯಾಗಿ ಪರೀಕ್ಷಿಸಿದ್ದಾರೆ. ಇದನ್ನು ಸಾಮಾನ್ಯವಾಗಿ ಫ್ಯೂಷನ್ ರಿಯಾಕ್ಟರ್ನ ಹೃದಯ ಭಾಗ ಎಂದೇ ವಿವರಿಸಲಾಗುತ್ತದೆ. ಕಾರಿನ ಎಂಜಿನ್ನಲ್ಲಿರುವ ಸ್ಪಾರ್ಕ್ ಪ್ಲಗ್ನಂತೆಯೇ ಈ ಘಟಕವು ಫ್ಯೂಷನ್ ರಿಯಾಕ್ಷನ್ಗಳಿಗೆ ಅಗತ್ಯ ಪ್ಲಾಸ್ಮಾವನ್ನು ಹೊತ್ತಿಸಲು ಮತ್ತು ಉಳಿಸಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ಸ್ವದೇಶಿ ನಿರ್ಮಾಣವೆಂದ ಚೀನಾ

ನಿರ್ಣಾಯಕ ಫ್ಯೂಷನ್ ಘಟಕಗಳಿಗೆ ವಿದೇಶಿ ಪೂರೈಕೆದಾರರ ಅವಲಂಬನೆ ಕೊನೆಗೊಳಿಸಿದ್ದು, ಎರಡೂ ತಂತ್ರಜ್ಞಾನಗಳನ್ನು ಸಂಪೂರ್ಣವಾಗಿ ದೇಶಿ ವಸ್ತುಗಳು ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ ಎಂದು ಚೀನಾ ಹೇಳಿದೆ. ಸಂಶೋಧನಾ ತಂಡದ ಪ್ರಕಾರ ಆರು ವರ್ಷಗಳ ಕಾರ್ಯಕ್ರಮವು 47 ಪೇಟೆಂಟ್ಗಳು ಮತ್ತು 25 ಉದ್ಯಮ ಮಾನದಂಡಗಳನ್ನು ಒಳಗೊಂಡಿದೆ.

ಮ್ಯಾಗ್ನೆಟ್ ನಿರ್ಮಿಸಲು ಅಸಾಧಾರಣವಾದ ಎಂಜಿನಿಯರಿಂಗ್ ನಿಖರತೆಯ ಅಗತ್ಯವಿದೆ. ಮೈನಸ್ 269°C ಸಮೀಪದ ತಾಪಮಾನದಲ್ಲಿ 60 ವರ್ಷಗಳ ಕಾಲ ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸಬೇಕು. ಆದರೆ ಅತ್ಯಂತ ಹೆಚ್ಚಿನ ಎಲೆಕ್ಟ್ರಿಕಲ್ ಕರೆಂಟ್ಗಳನ್ನು ಹೊತ್ತೊಯ್ಯುವಾಗ ತೀವ್ರವಾದ ರೇಡಿಯೇಶನ್ ಮತ್ತು ಮೆಕಾನಿಕಲ್ ಬಲಗಳನ್ನು ಪ್ರತಿರೋಧಿಸಬೇಕಾಗುತ್ತದೆ. ಎಂಜಿನಿಯರ್ಗಳು ನಿರ್ಣಾಯಕ ಜಾಯಿಂಟ್ಗಳಲ್ಲಿ ವಿದ್ಯುತ್ ಪ್ರತಿರೋಧವನ್ನು ಬಹುತೇಕ ಶೂನ್ಯಕ್ಕೆ ಇಳಿಸಿದ್ದರು. ಹೀಗಾಗಿ ಯಾವುದೇ ಶಕ್ತಿಯ ನಷ್ಟವಿಲ್ಲದೆ, 100,000 ಆಂಪಿಯರ್‌ಗಳನ್ನು ಮೀರಿದ ವಿದ್ಯುತ್ ಪ್ರವಾಹವನ್ನು ಹರಿಯಲು ಅನುಮತಿಸುತ್ತದೆ. ಕಮರ್ಶಿಯಲ್ ಫ್ಯೂಷನ್ ರಿಯಾಕ್ಟರ್ಗಳಿಗೆ ಇದು ಅತ್ಯಗತ್ಯವಾಗಿರುತ್ತದೆ.

ಈ ಪ್ರಗತಿಯು ಚೀನಾದ ಫ್ಯೂಷನ್ ಸಂಶೋಧನೆಯ ಪರಿಣತಿಯನ್ನು ಜಗತ್ತಿಗೆ ತೋರಿಸಿದೆ. ಈ ವರ್ಷದ ಆರಂಭದಲ್ಲಿ ಚೀನಾದ ಕೃತಕ ಸೂರ್ಯ ಎಂದು ಕರೆಯಲಾಗುವ ಪ್ರಾಯೋಗಿಕ ಅಡ್ವಾನ್ಸ್ಡ್ ಸೂಪರ್ ಕಂಡಕ್ಟಿಂಗ್ ಟೋಕಾಮ್ಯಾಕ್ (EAST) 1,066 ಸೆಕೆಂಡ್ಗಳಿಗೆ 100 ದಶಲಕ್ಷ ಡಿಗ್ರಿ ಸೆಲ್ಷಿಯಸ್ ಪ್ಲಾಸ್ಮಾವನ್ನು ಸಹಿಸುವ ಸಾಮರ್ಥ್ಯ ತೋರಿಸಿ ದಾಖಲೆ ಸೃಷ್ಟಿಸಿದೆ. ಅಭೂತಪೂರ್ವ ಅವಧಿಗಳಿಗೆ ಫ್ಯೂಷನ್ ಸ್ಥಿತಿಗಳನ್ನು ನಿರ್ವಹಿಸುವ ಸಾಮರ್ಥ್ಯ ಇದಾಗಿತ್ತು.

ಮೂರು ಹಂತದ ಮಾರ್ಗಸೂಚಿ

ಕಮರ್ಷಿಯಲ್ ಫ್ಯೂಷನ್ಗೆ ಮೂರು ಹಂತದ ಮಾರ್ಗಸೂಚಿ ರೂಪಿಸಿದೆ. ಬರ್ನಿಂಗ್ ಪ್ಲಾಸ್ಮಾ ಎಕ್ಸ್ಪರಿಮೆಂಟಲ್ ಸೂಪರ್ಕಂಡಕ್ಟಿಂಗ್ ಟೋಕಾಮ್ಯಾಕ್ 2027ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನಂತರ ಮೊದಲ ಫ್ಯೂಷನ್ ಪವರ್ ಜನರೇಶನ್ 20230 ವೇಳೆಗೆ ಪೂರ್ಣಗೊಳ್ಳಲಿದೆ. ನಂತರ ಅಂತಿಮವಾಗಿ ಚೀನಾ ಫ್ಯೂಷನ್ ಎಂಜಿನಿಯರಿಂಗ್ ಡೆಮಾನ್ಸ್ಟ್ರೇಶನ್ ರಿಯಾಕ್ಟರ್ ನಿರ್ಮಿಸಲಿದೆ. ಅದು ವಿಶ್ವದ ಮೊದಲ ಫ್ಯೂಷನ್ ಡೆಮಾನ್ಸ್ಟ್ರೇಶನ್ ವಿದ್ಯುತ್ ಕೇಂದ್ರವಾಗಲಿದೆ.

ಈ ಮೈಲಿಗಲ್ಲಿನ ಹೊರತಾಗಿಯೂ ಸಂಶೋಧಕರು ಉಳಿದಿರುವ ಗಮನಾರ್ಹ ಸವಾಲುಗಳ ಬಗ್ಗೆ ಎಚ್ಚರಿಸಿದ್ದಾರೆ. ಪೂರ್ಣ ರಿಯಾಕ್ಟರ್ ಜೋಡಣೆ, ದೀರ್ಘಕಾಲೀನ ಪರೀಕ್ಷೆ ಮತ್ತು ಬಳಸುವುದಕ್ಕಿಂತಲೂ ಹೆಚ್ಚು ಶಕ್ತಿಯನ್ನು ಉತ್ಪಾದಿಸುತ್ತದೆ ಎನ್ನುವ ವಿಶ್ವಾಸಾರ್ಹ ತಂತ್ರಜ್ಞಾನವೆಂದು ಸಾಬೀತಾಗಬೇಕಿದೆ. ಆದರೆ, ಪ್ರತಿ ಯಶಸ್ವೀ ಪ್ರಯೋಗವು ಶೂನ್ಯ ಇಂಗಾಲದ ಶಕ್ತಿಯ ಕನಸನ್ನು ವಾಸ್ತವಗೊಳಿಸುವತ್ತ ಒಂದು ಹೆಜ್ಜೆ ಸಮೀಪಕ್ಕೆ ತರುತ್ತಿದೆ ಮತ್ತು ಜಾಗತಿಕ ವಿದ್ಯುತ್ ಉತ್ಪಾದನೆಯ ಭವಿಷ್ಯವನ್ನು ಬದಲಿಸುವ ಸಂಭಾವ್ಯತೆಯನ್ನು ತೋರಿಸುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಕೃಪೆ: India Today

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News