ಸಾಂದರ್ಭಿಕ ಚಿತ್ರ | Photo Credit : magnific.com

ದೀಪಾವಳಿಯ ಸಡಗರದಲ್ಲಿ ಪಟಾಕಿ ಸಿಡಿಸುವಾಗ ಅನುಸರಿಸಬೇಕಾದ ಕೆಲವು ಪ್ರಮುಖ ಮುನ್ನೆಚ್ಚರಿಕೆಗಳನ್ನು ನಾರಾಯಣ ನೇತ್ರಾಲಯ ಹಂಚಿಕೊಂಡಿದೆ.

ದೀಪಾವಳಿ ಎಂದರೆ ಕುಟುಂಬದವರೊಂದಿಗೆ ಪಟಾಕಿ ಸಿಡಿಸಿ ಸಂಭ್ರಮದಿಂದ ಆಚರಿಸುವ ಬೆಳಕಿನ ಹಬ್ಬ. ಈ ಹಿನ್ನೆಲೆಯಲ್ಲಿ, ದೀಪಾವಳಿ ಹಬ್ಬವನ್ನು ಸುರಕ್ಷಿತವಾಗಿ ಆಚರಿಸುವಂತೆ ಹಾಗೂ ಹಬ್ಬದ ಸಂಭ್ರಮದಲ್ಲಿ ಕಣ್ಣಿನ ಸುರಕ್ಷತೆಯ ಬಗ್ಗೆಯೂ ಗಮನ ಹರಿಸುವಂತೆ ಬೆಂಗಳೂರಿನ ರಾಜಾಜಿನಗರದ ನಾರಾಯಣ ನೇತ್ರಾಲಯದ ವೈದ್ಯರು ಎಚ್ಚರಿಸಿದ್ದಾರೆ.

“ನಮ್ಮ ಸಂಭ್ರಮದಿಂದ ಬೇರೆಯವರಿಗೆ ತೊಂದರೆಯಾಗದಂತೆ ಎಚ್ಚರ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಕೆಲವೇ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸುವ ಮೂಲಕ ಹಾಗೂ ತುರ್ತು ಸಂದರ್ಭದಲ್ಲಿ ಸೂಕ್ತ ವೈದ್ಯಕೀಯ ನೆರವು ಪಡೆಯುವ ಮೂಲಕ ನಮ್ಮ ಕುಟುಂಬದವರ ಮತ್ತು ಸುತ್ತಮುತ್ತಲಿನವರ ಸುರಕ್ಷತೆಯನ್ನು ಕಾಪಾಡಬಹುದು” ಎಂದು ನಾರಾಯಣ ನೇತ್ರಾಲಯದ ನಿರ್ದೇಶಕ ಡಾ. ನರೇನ್ ಶೆಟ್ಟಿ ಹೇಳಿದ್ದಾರೆ.

“ಸಡಗರದ ನಡುವೆ ಸ್ವಲ್ಪ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ಅನೇಕರಿಗೆ ಕಣ್ಣಿನ ಸಮಸ್ಯೆಗಳು ಉಂಟಾಗಬಹುದು” ಎಂದು ಕಾರ್ನಿಯಾ ವಿಭಾಗದ ಮುಖ್ಯಸ್ಥ ಹಾಗೂ ನೇತ್ರತಜ್ಞ ಡಾ. ಯತೀಶ್ ಹೇಳಿದ್ದಾರೆ.

“ಪಟಾಕಿ ಹೊಡೆಯುವ ಆತುರದಲ್ಲಿ ಎಷ್ಟೋ ಜನರಿಗೆ ದೃಷ್ಟಿ ಹಾನಿ ಉಂಟಾಗಬಹುದು. ಹೀಗಾಗಿ, ಸ್ವಲ್ಪ ಮಟ್ಟಿಗೆ ಜಾಗ್ರತೆ ವಹಿಸಿದರೆ ದೀಪಾವಳಿಯನ್ನು ಸಡಗರ-ಸಂಭ್ರಮದಿಂದಲೇ ಆಚರಿಸಬಹುದು. ಪಟಾಕಿ ಹಚ್ಚುವ ಸಂದರ್ಭದಲ್ಲಿ ಮಕ್ಕಳ ಜೊತೆಗೆ ವಯಸ್ಕರು ಇರುವುದು ಅಗತ್ಯ. ಜನನಿಬಿಡ ಪ್ರದೇಶಗಳಲ್ಲಿ ಪಟಾಕಿ ಹಚ್ಚಬಾರದು. ಯಾರೂ ಓಡಾಡದ ಪ್ರದೇಶದಲ್ಲಿ ಪಟಾಕಿ ಹಚ್ಚಬೇಕು. ಪಟಾಕಿ ಹಚ್ಚುವವರಿಗೆ ಮಾತ್ರವಲ್ಲದೆ, ಅಕ್ಕಪಕ್ಕದ ಮನೆಯವರು ಹಾಗೂ ರಸ್ತೆಯಲ್ಲಿ ಸಾಗುತ್ತಿರುವವರಿಗೂ ಸಮಸ್ಯೆಯಾಗುವ ಸಾಧ್ಯತೆಯಿದೆ. ಪಟಾಕಿಯನ್ನು ಯಾವಾಗಲೂ ದೂರದಿಂದಲೇ ಹಚ್ಚುವುದು ಉತ್ತಮ. ಕೆಲವೊಮ್ಮೆ ಮಕ್ಕಳು ಪಟಾಕಿಯನ್ನು ಸಮೀಪದಿಂದ ಹಚ್ಚುವುದರಿಂದ ಗಾಯಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸಿಡಿಯುವ ಪಟಾಕಿಗಳನ್ನು ಹಚ್ಚುವಾಗ ಕಣ್ಣಿಗೆ ರಕ್ಷಣಾತ್ಮಕ ಕನ್ನಡಕಗಳನ್ನು ಧರಿಸಬೇಕು” ಎಂದು ಅವರು ಸಲಹೆ ನೀಡಿದ್ದಾರೆ.

ಪಟಾಕಿ ಸಿಡಿಸುವಾಗ ಅನುಸರಿಸಬೇಕಾದ ಕೆಲವು ಪ್ರಮುಖ ಮುನ್ನೆಚ್ಚರಿಕೆಗಳನ್ನು ನಾರಾಯಣ ನೇತ್ರಾಲಯ ಹಂಚಿಕೊಂಡಿದೆ. ಅದರ ವಿವರ ಹೀಗಿದೆ.

►ಪಟಾಕಿ ಸಿಡಿಸುವಾಗ ಪಾಲಿಸಬೇಕಾದ ನಿಯಮಗಳು

►ಮಾಡಬೇಕಾದವು

►ರಕ್ಷಣಾತ್ಮಕ ಕನ್ನಡಕ ಧರಿಸಿ: ಪಟಾಕಿ ಹಚ್ಚುವಾಗ ಕಿಡಿಗಳು ಹಾಗೂ ಹಾರುವ ಸಣ್ಣ ಅವಶೇಷಗಳಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಸೂಕ್ತ ಸುರಕ್ಷತಾ ಕನ್ನಡಕಗಳನ್ನು ಧರಿಸಿ.

1. ನೀರು ಅಥವಾ ಅಗ್ನಿಶಾಮಕ ಸಾಧನ ಹತ್ತಿರವಿರಲಿ: ತುರ್ತು ಸಂದರ್ಭಗಳನ್ನು ಎದುರಿಸಲು ನೀರು ತುಂಬಿದ ಬಕೆಟ್ ಅಥವಾ ಅಗ್ನಿಶಾಮಕ ಉಪಕರಣವನ್ನು ಸಿದ್ಧವಾಗಿಟ್ಟುಕೊಳ್ಳಿ.

2. ಸುರಕ್ಷಿತ ಅಂತರ ಕಾಯ್ದುಕೊಳ್ಳಿ: ಪಟಾಕಿ ಹಚ್ಚಿದ ತಕ್ಷಣ ಅಲ್ಲಿಂದ ದೂರ ಸರಿಯಿರಿ. ಸುರಕ್ಷಿತ ಅಂತರದಿಂದಲೇ ಪಟಾಕಿ ಸಿಡಿಯುವುದನ್ನು ವೀಕ್ಷಿಸಿ.

3. ಮಕ್ಕಳ ಮೇಲೆ ನಿಗಾ ಇರಲಿ: ಮಕ್ಕಳು ಪಟಾಕಿ ಸಿಡಿಸುವಾಗ ಕಡ್ಡಾಯವಾಗಿ ದೊಡ್ಡವರು ಅವರೊಂದಿಗೆ ಇರಬೇಕು. ಪಟಾಕಿ ಸುರಕ್ಷತೆಯ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಿ.

4. ತೆರೆದ ಸ್ಥಳದಲ್ಲಿ ಪಟಾಕಿ ಸಿಡಿಸಿ: ವಾಹನಗಳು, ಒಣ ಎಲೆಗಳು ಹಾಗೂ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳಿಂದ ದೂರವಿರುವ ವಿಶಾಲವಾದ ತೆರೆದ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಿ.

5. ಎಚ್ಚರಿಕೆಯಿಂದ ಪಟಾಕಿ ಬಳಸಿ: ಒಂದೇ ಸಮಯದಲ್ಲಿ ಒಂದೊಂದು ಪಟಾಕಿಯನ್ನು ಮಾತ್ರ ಹಚ್ಚಿ. ಪಟಾಕಿಗಳನ್ನು ಮುಟ್ಟಿದ ನಂತರ ಕೈಗಳನ್ನು ಚೆನ್ನಾಗಿ ತೊಳೆಯಿರಿ.

►ಮಾಡಬಾರದವು

►ಸಿಡಿಯದ ಪಟಾಕಿಯನ್ನು ಮತ್ತೆ ಹಚ್ಚಲು ಪ್ರಯತ್ನಿಸಬೇಡಿ:

ಸಿಡಿಯದೆ ಉಳಿದ ಪಟಾಕಿಯ ಹತ್ತಿರ ಹೋಗಬೇಡಿ ಅಥವಾ ಮತ್ತೆ ಹಚ್ಚಲು ಪ್ರಯತ್ನಿಸಬೇಡಿ. ಇತರರನ್ನು ಅದರಿಂದ ದೂರವಿರಿಸಿ ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡುವ ಕ್ರಮ ಅನುಸರಿಸಿ.

1. ಜನರು ಅಥವಾ ಪ್ರಾಣಿಗಳ ಕಡೆಗೆ ಪಟಾಕಿ ಸಿಡಿಸಬೇಡಿ: ಪಟಾಕಿಗಳನ್ನು ಯಾರ ಮೇಲೂ ಎಸೆಯಬೇಡಿ ಅಥವಾ ಅವರತ್ತ ಗುರಿಯಿಟ್ಟು ಸಿಡಿಸಬೇಡಿ.

2. ಪಾತ್ರೆಗಳೊಳಗೆ ಪಟಾಕಿ ಇಡಬೇಡಿ: ಹೆಚ್ಚಿನ ಶಬ್ದ ಅಥವಾ ಪರಿಣಾಮ ಉಂಟುಮಾಡುವ ಉದ್ದೇಶದಿಂದ ಬಾಟಲಿ, ಮಡಕೆ ಅಥವಾ ಇತರ ಪಾತ್ರೆಗಳೊಳಗೆ ಪಟಾಕಿಗಳನ್ನು ಇಟ್ಟು ಸಿಡಿಸಬೇಡಿ.

3. ಮದ್ಯಪಾನ ಮಾಡಿದ ನಂತರ ಪಟಾಕಿ ಸಿಡಿಸಬೇಡಿ: ಮದ್ಯಪಾನದಿಂದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕುಂಠಿತವಾಗಿ, ಅಪಘಾತಗಳ ಅಪಾಯ ಹೆಚ್ಚಾಗಬಹುದು.

4. ಸಡಿಲವಾದ ಅಥವಾ ಕೃತಕ ನಾರಿನ ಬಟ್ಟೆ ಧರಿಸಬೇಡಿ: ಪಟಾಕಿ ಸಿಡಿಸುವಾಗ ದೇಹಕ್ಕೆ ಸರಿಯಾಗಿ ಹೊಂದಿಕೊಳ್ಳುವ ಹತ್ತಿ ಬಟ್ಟೆಗಳನ್ನು ಧರಿಸಿ. ಉದ್ದನೆಯ ಕೂದಲನ್ನು ಕಟ್ಟಿಕೊಳ್ಳಿ.

►ಪಟಾಕಿ ಅವಘಡ ಸಂಭವಿಸಿದರೆ ಪ್ರಥಮ ಚಿಕಿತ್ಸೆ ಹೇಗೆ?

►ಸುಟ್ಟ ಗಾಯಗಳಾದ ಸಂದರ್ಭದಲ್ಲಿ

• ಗಾಯಗೊಂಡ ವ್ಯಕ್ತಿಯನ್ನು ತಕ್ಷಣ ಬೆಂಕಿ ಅಥವಾ ಸುಡುವಿಕೆಯ ಮೂಲದಿಂದ ದೂರಕ್ಕೆ ಕರೆದೊಯ್ಯಿರಿ.

• ಸುಟ್ಟ ಭಾಗವನ್ನು ಸುಮಾರು 20 ನಿಮಿಷಗಳ ಕಾಲ ತಣ್ಣನೆಯ ಹರಿಯುವ ನೀರಿನ ಅಡಿಯಲ್ಲಿ ಇರಿಸಿ.

• ಸುಟ್ಟ ಗಾಯದ ಮೇಲೆ ಮಂಜುಗಡ್ಡೆ, ಟೂತ್ಪೇಸ್ಟ್, ಎಣ್ಣೆ ಅಥವಾ ಯಾವುದೇ ಮನೆಮದ್ದುಗಳನ್ನು ಹಚ್ಚಬೇಡಿ.

• ಸ್ವಚ್ಛವಾದ, ನಾರುಗಳು ಹೊರಬರದ ಬಟ್ಟೆಯಿಂದ ಗಾಯವನ್ನು ಸಡಿಲವಾಗಿ ಮುಚ್ಚಿ, ತಕ್ಷಣ ವೈದ್ಯಕೀಯ ನೆರವು ಪಡೆಯಿರಿ.

►ಕಣ್ಣಿಗೆ ಗಾಯವಾದ ಸಂದರ್ಭದಲ್ಲಿ

• ಗಾಯಗೊಂಡ ಕಣ್ಣನ್ನು ಉಜ್ಜಬೇಡಿ ಅಥವಾ ಒತ್ತಡ ಹಾಕಬೇಡಿ.

• ಕಣ್ಣಿನೊಳಗೆ ಅಥವಾ ಸುತ್ತಮುತ್ತ ಸಿಲುಕಿರುವ ಯಾವುದೇ ವಸ್ತುವನ್ನು ಸ್ವತಃ ಹೊರತೆಗೆಯಲು ಪ್ರಯತ್ನಿಸಬೇಡಿ.

• ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದ್ದರೆ ಅಥವಾ ಯಾವುದೇ ವಸ್ತು ಕಣ್ಣಿನೊಳಗೆ ಸಿಲುಕಿಕೊಂಡಿದ್ದರೆ, ಒತ್ತಡ ಹಾಕದೆ ಸ್ವಚ್ಛವಾದ ಗಟ್ಟಿಯಾದ ಕಣ್ಣಿನ ರಕ್ಷಣಾ ಕವಚದಿಂದ ಕಣ್ಣನ್ನು ರಕ್ಷಿಸಿ.

• ರಾಸಾಯನಿಕ ವಸ್ತುಗಳು ಕಣ್ಣಿಗೆ ಬಿದ್ದರೆ, ತಕ್ಷಣ ಸಾಕಷ್ಟು ಪ್ರಮಾಣದ ಶುದ್ಧ ಹರಿಯುವ ನೀರಿನಿಂದ ಕಣ್ಣನ್ನು ತೊಳೆಯಿರಿ.

• ತಕ್ಷಣ ಕಣ್ಣಿನ ತಜ್ಞರನ್ನು ಸಂಪರ್ಕಿಸಿ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ವೈದ್ಯರ ಸಲಹೆಯಿಲ್ಲದೆ ಯಾವುದೇ ಕಣ್ಣಿನ ಹನಿಗಳು ಅಥವಾ ಔಷಧಿಗಳನ್ನು ಬಳಸಬೇಡಿ.

• ಕಣ್ಣಿಗೆ ಉಂಟಾದ ಗಾಯವು ಮೇಲ್ನೋಟಕ್ಕೆ ಸಣ್ಣದಾಗಿ ಕಂಡರೂ ಅದನ್ನು ನಿರ್ಲಕ್ಷಿಸಬಾರದು. ಕೆಲವೊಮ್ಮೆ ಹೊರಗಿನಿಂದ ಗಾಯದ ತೀವ್ರತೆ ತಿಳಿಯದಿದ್ದರೂ ಕಣ್ಣಿನ ಒಳಭಾಗಕ್ಕೆ ಹಾನಿಯಾಗಿರುವ ಸಾಧ್ಯತೆಯಿರುತ್ತದೆ. ಆದ್ದರಿಂದ, ಯಾವುದೇ ರೀತಿಯ ಕಣ್ಣಿನ ಗಾಯವಾದರೂ ತಕ್ಷಣ ನೇತ್ರತಜ್ಞರಿಂದ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯ.

►ದೀಪಾವಳಿ ಸಂದರ್ಭದಲ್ಲಿ 24 ಗಂಟೆಗಳ ತುರ್ತು ನೇತ್ರಚಿಕಿತ್ಸೆ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ, ಪಟಾಕಿಗಳಿಂದ ಉಂಟಾಗಬಹುದಾದ ಕಣ್ಣಿನ ಗಾಯಗಳಿಗೆ ತಕ್ಷಣ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ನಾರಾಯಣ ನೇತ್ರಾಲಯವು 07/11/2026ರಿಂದ 10/11/2026ರವರೆಗೆ ದಿನದ 24 ಗಂಟೆಗಳ ಕಾಲ ತುರ್ತು ನೇತ್ರಚಿಕಿತ್ಸಾ ಸೇವೆಯನ್ನು ಲಭ್ಯವಿರಿಸಲಿದೆ.

►ನಾರಾಯಣ ನೇತ್ರಾಲಯ – ರಾಜಾಜಿನಗರ

#121/C, ಕಾರ್ಡ್ ರಸ್ತೆ, 1ನೇ 'ಆರ್' ಬ್ಲಾಕ್,

ರಾಜಾಜಿನಗರ, ಬೆಂಗಳೂರು – 560010, ಕರ್ನಾಟಕ.

ಸಮಯ: ದಿನದ 24 ಗಂಟೆಗಳು

ದೂರವಾಣಿ: 080-66121641 / 080-66121643

ಮೊಬೈಲ್: 99025 46046

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor