ಬೆಂಗಳೂರು : ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ಒಟ್ಟು 78,490.4 ಕೋಟಿ ರೂ. ಮೊತ್ತದ 2,867 ಯೋಜನೆಗಳ ಪೈಕಿ 54,059.8 ಕೋಟಿ ರೂ. ಮೊತ್ತದ 1,962 ಯೋಜನೆಗಳಿಗೆ ಸಂಬಂಧಿಸಿದಂತೆ ಇಲಾಖೆಗಳು ಮೂಲ ಮಾಹಿತಿಯನ್ನೇ ಮುಖ್ಯಮಂತ್ರಿ ಸಚಿವಾಲಯಕ್ಕೇ ಕೊಟ್ಟಿಲ್ಲ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

10ಕೋಟಿ ರೂ.ಮೇಲ್ಪಟ್ಟು ಮತ್ತು 100 ಕೋಟಿ ರೂ.ಮೊತ್ತದ ಒಳಗಿರುವ ಯೋಜನೆಗಳ ಮೂಲ ಮಾಹಿತಿ ಒದಗಿಸಬೇಕಿದ್ದ ಇಲಾಖೆಗಳು ನೀಡದ ಕಾರಣ ಯೋಜನೆಗಳ ವಾಸ್ತವ ಸ್ಥಿತಿಗತಿಯೂ ಸಹ ಸರಕಾರಕ್ಕೆ ಯಾವುದೇ ಅರಿವಿಲ್ಲದಂತಾಗಿದೆ. ಈ ಬಗ್ಗೆ ಮಾಹಿತಿಯನ್ನು ನವೀಕರಿಸಿ ನೀಡಬೇಕು ಎಂದು ಖುದ್ದು ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ (ಯೋಜನೆ-ಕಾರ್ಯಕ್ರಮ ಅನುಷ್ಠಾನ) ಮುನೀಶ್ ಮೌದ್ಗಿಲ್ ಅವರು ಮೂರು ಬಾರಿ ಸೂಚನೆ ನೀಡಿದ್ದರೂ ಸಹ 23 ಇಲಾಖೆಗಳು ಮೂಲ ಮಾಹಿತಿಯನ್ನೇ ಒದಗಿಸಿಲ್ಲ.

ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದಲೂ ಸ್ಟಿಂಗ್ ಆಪರೇಷನ್ ಕುರಿತಾದ ಸಂಗತಿಯು ಚರ್ಚೆಯಲ್ಲಿದೆ. ಇದೇ ಚರ್ಚೆಯನ್ನು ಖುದ್ದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಅವರ ಸಂಪುಟ ಸದಸ್ಯರು ಚರ್ಚೆಯನ್ನು ವಿಸ್ತರಿಸುತ್ತಲೇ ಬಂದಿದ್ದಾರೆ. ಈ ನಡುವೆ ಅಭಿವೃದ್ಧಿ ಶೂನ್ಯವಾಗಿದೆ ಎಂದು ಪ್ರತಿಪಕ್ಷಗಳೂ ಆರೋಪಿಸುತ್ತಲೇ ಬಂದಿವೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೇ ಇಲಾಖೆಗಳು ಯೋಜನೆಗಳ ಮೂಲ ಮಾಹಿತಿಯನ್ನೇ ನೀಡುತ್ತಿಲ್ಲ ಎಂದು ಮುನೀಶ್ ಮೌದ್ಗಿಲ್ ಅವರು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.

ಮುನೀಶ್ ಮೌದ್ಗಿಲ್ ಅವರು 2026ರ ಅಕ್ಟೋಬರ್ 6ರಂದು ಬರೆದಿರುವ ಪತ್ರದ ಪ್ರತಿಯು ‘the-file.in’ಗೆ ಲಭ್ಯವಾಗಿದೆ.

ಮೌದ್ಗಿಲ್ ಪತ್ರದಲ್ಲೇನಿದೆ?: ಸಿಎಂ ಡ್ಯಾಷ್ ಬೋರ್ಡ್ ಮತ್ತು ಪರಿವರ್ತನೆ ಪೋರ್ಟಲ್‌ನಲ್ಲಿ 10 ಕೋಟಿ ರೂ.ಮೊತ್ತಕ್ಕೂ ಮೇಲ್ಪಟ್ಟ ಕಾಮಗಾರಿಗಳ ವಿವರಗಳನ್ನು ದಾಖಲಿಸಬೇಕಿತ್ತು. ಸಿಎಂ ಡ್ಯಾಷ್ ಬೋರ್ಡ್, ಪ್ರಗತಿ ಪೋರ್ಟಲ್‌ನಲ್ಲಿ ಇ-ಪ್ರೋಕ್ 2.0ನಿಂದ ಪಡೆಯಲಾಗಿರುವ ಕಾಮಗಾರಿಗಳ ವಿವರ ಪರಿವರ್ತನೆ ಪೋರ್ಟಲ್‌ಗೆ ಪಡೆಯಲಾಗಿದೆ. ಅದರಲ್ಲಿ 10 ಕೋಟಿ ರೂ. ಮೇಲ್ಪಟ್ಟು ಇರುವ ಕಾಮಗಾರಿಗಳ ಹೆಚ್ಚುವರಿ ಮಾಹಿತಿ ವಿವರವನ್ನು ಸಂಬಂಧಪಟ್ಟವನ್ನು ಟಿಐಎ ಲಾಗಿನ್‌ನಿಂದ ಭರ್ತಿ ಮಾಡಬೇಕಿದೆ.

ಈ ಬಗ್ಗೆ 2026ರ ಸೆ. 16, 28 ಮತ್ತು ಅಕ್ಟೋಬರ್ 1ರಂದು ಮೂರು ಬಾರಿ ಸಭೆ ನಡೆಸಲಾಗಿತ್ತು.

ಆದರೂ ಸಹ ಸಮರ್ಪಕ ಮಾಹಿತಿಯನ್ನು ಭರ್ತಿ ಮಾಡಿಲ್ಲ. ಈ ಪ್ರತಿಯೊಂದು ಯೋಜನೆ ಅಥವಾ ಕಾಮಗಾರಿಗಳ ಪ್ರಗತಿಯನ್ನು ಮುಖ್ಯಮಂತ್ರಿಯವರು ಪರಿಶೀಲನೆ ನಡೆಸಬೇಕಿದೆ. ಕೂಡಲೇ ತಮ್ಮ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಮತ್ತು ಪ್ರತಿಯೊಂದು ಇಲಾಖೆ/ನಿಗಮದಿಂದ ಒಟ್ಟು ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿ ನೇಮಿಸಬೇಕು ಎಂದು ಸರಕಾರದ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ ಸೂಚಿಸಿರುವುದು ಪತ್ರದಿಂದ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ. ಮಹಾಂತೇಶ್

contributor