1963ರ ನ. 21. ಸಂಜೆ ಸರಿಯಾಗಿ 6.25. ಕೇರಳಂನ ತಿರುವನಂತಪುರದ ಹೊರವಲಯದಲ್ಲಿರುವ ತುಂಬಾ ಗ್ರಾಮದ ಕಡಲತೀರದಲ್ಲಿ ಭಾರತದ ಬಾಹ್ಯಾಕಾಶ ಇತಿಹಾಸದ ಮೊದಲ ಅಧ್ಯಾಯ ಬರೆಯಲ್ಪಟ್ಟಿತು. ಕಡುಗಪ್ಪು ಆಕಾಶವನ್ನು ಸೀಳಿಕೊಂಡು, ಬೆಂಕಿಯ ಕಿಡಿಗಳನ್ನು ಉಗುಳುತ್ತಾ ‘ನೈಕ್–ಅಪಾಚೆ’ ರಾಕೆಟ್ ನಭಕ್ಕೆ ಚಿಮ್ಮಿತು. ಅದು ಕೇವಲ ರಾಕೆಟ್ ಉಡಾವಣೆಯಾಗಿರಲಿಲ್ಲ; ಭಾರತದ ಬಾಹ್ಯಾಕಾಶ ಕನಸಿಗೆ ರೆಕ್ಕೆ ಮೂಡಿದ ಕ್ಷಣವಾಗಿತ್ತು.

ಇಂದು ಭಾರತ ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಲಿಟ್ಟಿದೆ, ಮಂಗಳ ಗ್ರಹಕ್ಕೆ ನೌಕೆಯನ್ನು ಕಳುಹಿಸಿದೆ, ಸೂರ್ಯನ ಅಧ್ಯಯನಕ್ಕೆ ಆದಿತ್ಯನನ್ನು ಉಡಾಯಿಸಿದೆ. ಜಗತ್ತು ಭಾರತದ ಬಾಹ್ಯಾಕಾಶ ಸಾಧನೆಗಳನ್ನು ಬೆರಗಿನಿಂದ ನೋಡುತ್ತಿದೆ. ಆದರೆ ಈ ಮಹತ್ತರ ಪಯಣದ ಆರಂಭವಾಗಿದ್ದು ಸೈಕಲ್ ಮತ್ತು ಹಳೆಯ ಚರ್ಚ್‌ ನ ಕಟ್ಟಡದಲ್ಲಿ ಎಂಬುದು ಅಚ್ಚರಿಯ ಸಂಗತಿ.

1960ರ ದಶಕದ ಆರಂಭದಲ್ಲಿ ಬಡತನ, ಹಸಿವು ಮತ್ತು ಅನಕ್ಷರತೆಯ ವಿರುದ್ಧ ಹೋರಾಡುತ್ತಿದ್ದ ಭಾರತದಲ್ಲಿ ಸ್ವತಂತ್ರ ಬಾಹ್ಯಾಕಾಶ ಸಂಶೋಧನೆಯ ಕನಸು ಕಂಡವರು ಡಾ. ವಿಕ್ರಮ್ ಸಾರಾಭಾಯ್ ಮತ್ತು ಡಾ. ಹೋಮಿ ಜಹಾಂಗೀರ್ ಭಾಭಾ. ದೇಶಕ್ಕೆ ತನ್ನದೇ ಆದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಬೇಕೆಂಬ ಕನಸಿನೊಂದಿಗೆ 1962ರಲ್ಲಿ INCOSPAR (Indian National Committee for Space Research) ಸ್ಥಾಪನೆಯಾಯಿತು.

ರಾಕೆಟ್ ಉಡಾವಣೆಗೆ ಸೂಕ್ತ ಸ್ಥಳ ಹುಡುಕುತ್ತಿದ್ದ ವಿಜ್ಞಾನಿಗಳ ತಂಡಕ್ಕೆ ಕೇರಳದ ತುಂಬಾ ಗ್ರಾಮ ಆಯ್ಕೆಯಾಯಿತು. ಭೂಮಿಯ ಕಾಂತೀಯ ಸಮಭಾಜಕ ರೇಖೆ ಈ ಗ್ರಾಮದ ಮೇಲೆಯೇ ಹಾದುಹೋಗುತ್ತಿದ್ದುದರಿಂದ ವಾತಾವರಣದ ಮೇಲ್ಪದರಗಳ ಅಧ್ಯಯನಕ್ಕೆ ಇದು ಅತ್ಯಂತ ಸೂಕ್ತ ಸ್ಥಳವಾಗಿತ್ತು.

ಆದರೆ, ಅಲ್ಲಿ ಉಡಾವಣಾ ಕೇಂದ್ರ ಸ್ಥಾಪಿಸುವುದು ಅಷ್ಟು ಸುಲಭವಾಗಿರಲಿಲ್ಲ. ಶತಮಾನಗಳಿಂದ ನೂರಾರು ಮೀನುಗಾರ ಕುಟುಂಬಗಳು ನೆಲೆಸಿದ್ದ ಆ ಪ್ರದೇಶದಲ್ಲಿ ಪುರಾತನ ಸೇಂಟ್ ಮೇರಿ ಮ್ಯಾಗ್ದಲೀನ್ ಚರ್ಚ್ ಮತ್ತು ಬಿಷಪ್ ಅವರ ನಿವಾಸವೂ ಇತ್ತು.

ವಿಜ್ಞಾನಕ್ಕಾಗಿ ದೇವರ ಮನೆಯನ್ನು ಬಿಟ್ಟುಕೊಟ್ಟ ಮೀನುಗಾರರು

ಡಾ. ವಿಕ್ರಮ್ ಸಾರಾಭಾಯ್ ಅವರು ಅಂದಿನ ತಿರುವನಂತಪುರದ ಬಿಷಪ್ ರೆವರೆಂಡ್ ಪೀಟರ್ ಬರ್ನಾರ್ಡ್ ಪೆರೇರಾ ಅವರನ್ನು ಭೇಟಿಯಾಗಿ, ದೇಶದ ವಿಜ್ಞಾನ ಮತ್ತು ಭವಿಷ್ಯಕ್ಕಾಗಿ ಚರ್ಚ್ ಹಾಗೂ ಗ್ರಾಮದ ಜಾಗವನ್ನು ಬಿಟ್ಟುಕೊಡುವಂತೆ ಮನವಿ ಮಾಡಿದರು.

ರವಿವಾರದ ಪ್ರಾರ್ಥನೆಯ ವೇಳೆ ಬಿಷಪ್ ಗ್ರಾಮದ ಮೀನುಗಾರರ ಮುಂದೆ ನಿಂತು, ವಿಜ್ಞಾನಿಗಳು ಮನುಕುಲದ ಒಳಿತಿಗಾಗಿ ಮಹತ್ವದ ಕೆಲಸಕ್ಕೆ ಮುಂದಾಗಿದ್ದಾರೆ; ದೇವರ ಮನೆಯನ್ನು ದೇಶದ ವಿಜ್ಞಾನಕ್ಕಾಗಿ ಬಿಟ್ಟುಕೊಡಬಹುದೇ ಎಂದು ಕೇಳಿದರು.

ಕ್ಷಣವೂ ತಡಮಾಡದೆ ಮೀನುಗಾರರು ಒಕ್ಕೊರಲಿನಿಂದ ‘ಆಮೆನ್’ ಎಂದು ಒಪ್ಪಿಗೆ ಸೂಚಿಸಿದರು. ತಮ್ಮ ನೆಲ ಮತ್ತು ಬದುಕಿನ ಭಾಗವಾಗಿದ್ದ ಸ್ಥಳವನ್ನು ದೇಶದ ವೈಜ್ಞಾನಿಕ ಕನಸಿಗಾಗಿ ಬಿಟ್ಟುಕೊಟ್ಟ ಅವರ ನಿರ್ಧಾರ ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಅಪೂರ್ವ ತ್ಯಾಗವಾಗಿ ಉಳಿಯಿತು.

ಚರ್ಚ್ ನಲ್ಲೇ ಪ್ರಯೋಗಾಲಯ, ಕೊಟ್ಟಿಗೆಯೇ ಗೋದಾಮು!

ಅಲ್ಲಿ ಅತ್ಯಾಧುನಿಕ ಸೌಲಭ್ಯಗಳಿರಲಿಲ್ಲ. ಹವಾನಿಯಂತ್ರಿತ ಕಚೇರಿಗಳಿರಲಿಲ್ಲ, ಬೃಹತ್ ಕ್ರೇನ್‌ ಗಳಿರಲಿಲ್ಲ, ಕಂಪ್ಯೂಟರ್‌ ಗಳೂ ಇರಲಿಲ್ಲ.

ಪುರಾತನ ಸೇಂಟ್ ಮೇರಿ ಮ್ಯಾಗ್ದಲೀನ್ ಚರ್ಚ್ ವಿಜ್ಞಾನಿಗಳ ಕಚೇರಿ ಮತ್ತು ಪ್ರಯೋಗಾಲಯವಾಯಿತು. ಬಿಷಪ್ ಅವರ ನಿವಾಸ ಕೇಂದ್ರ ಹಾಗೂ ಕಾರ್ಯಾಗಾರವಾಗಿ ಬದಲಾಯಿತು. ಚರ್ಚ್‌ ನ ದನದ ಕೊಟ್ಟಿಗೆ ಸಂಶೋಧನಾ ಸಲಕರಣೆಗಳ ಗೋದಾಮಾಯಿತು.

ಆ ತಂಡದ ಯುವ ಇಂಜಿನಿಯರ್‌ ಗಳಲ್ಲಿ ಒಬ್ಬರಾಗಿದ್ದವರು ಮುಂದೆ ಭಾರತದ ಕ್ಷಿಪಣಿ ಮನುಷ್ಯ ಹಾಗೂ ರಾಷ್ಟ್ರಪತಿಯಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ.

ಸೈಕಲ್ ಕ್ಯಾರಿಯರ್ ಮೇಲೆ ರಾಕೆಟ್!

ರಾಕೆಟ್‌ ನ ಬಿಡಿಭಾಗಗಳನ್ನು ಉಡಾವಣಾ ಸ್ಥಳಕ್ಕೆ ಸಾಗಿಸಲು ಸೂಕ್ತ ವಾಹನಗಳೇ ಇರಲಿಲ್ಲ. NASA ನೀಡಿದ್ದ ಸೌಂಡಿಂಗ್ ರಾಕೆಟ್ ‘ನೈಕ್–ಅಪಾಚೆ’ಯ ಮೂಗಿನ ತುದಿಯ ಭಾಗವನ್ನು ಯುವ ವಿಜ್ಞಾನಿಗಳು ಸೈಕಲ್‌ ನ ಕ್ಯಾರಿಯರ್ ಮೇಲೆ ಇಟ್ಟು ಸಾಗಿಸಿದರು. ಉಳಿದ ಭಾರವಾದ ಬಿಡಿಭಾಗಗಳನ್ನು ತರಲಾಯಿತು.

1963ರ ನವೆಂಬರ್ 21ರಂದು ಸಾರಾಭಾಯ್, ಭಾಭಾ, ಅಬ್ದುಲ್ ಕಲಾಂ, ಪ್ರಮೋದ್ ಕಾಳೆ, ಆರ್. ಅರವಮುದನ್ ಸೇರಿದಂತೆ ಬೆರಳೆಣಿಕೆಯ ವಿಜ್ಞಾನಿಗಳು ಉಡಾವಣೆಗೆ ಸಿದ್ಧರಾದರು. ಎಲ್ಲರಲ್ಲೂ ಆತಂಕ, ಕುತೂಹಲ. ಕೌಂಟ್‌ಡೌನ್ ಮುಗಿಯುತ್ತಿದ್ದಂತೆ 715 ಕೆಜಿ ತೂಕದ ನೈಕ್–ಅಪಾಚೆ ರಾಕೆಟ್ ಗುಡುಗಿನ ಸದ್ದಿನೊಂದಿಗೆ ಅರಬ್ಬೀ ಸಮುದ್ರದ ತೀರದಿಂದ ನಭಕ್ಕೆ ಚಿಮ್ಮಿತು.

ಸುಮಾರು 207 ಕಿಲೋಮೀಟರ್ ಎತ್ತರ ತಲುಪಿದ ರಾಕೆಟ್ ವಾತಾವರಣದ ಮೇಲ್ಪದರದಲ್ಲಿ ಸೋಡಿಯಂ ಆವಿಯನ್ನು ಬಿಡುಗಡೆ ಮಾಡಿ ತನ್ನ ವೈಜ್ಞಾನಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.

ಆ ದಿನ ವಿಜ್ಞಾನಿಗಳ ಕಣ್ಣಲ್ಲಿ ಆನಂದಭಾಷ್ಪ ತುಂಬಿತ್ತು. ಚರ್ಚ್‌ನ ಗಂಟೆಗಳ ಸದ್ದು ಕೇಳುತ್ತಿದ್ದ ಕಡಲತೀರದಲ್ಲಿ ರಾಕೆಟ್‌ ನ ಆರ್ಭಟ ಮೊಳಗಿತ್ತು.

ಸೈಕಲ್‌ ನಿಂದ ಬಾಹ್ಯಾಕಾಶದವರೆಗೆ

ಮುಂದೆ ಈ ಕೇಂದ್ರ ‘ತುಂಬಾ ಇಕ್ವಟೋರಿಯಲ್ ರಾಕೆಟ್ ಲಾಂಚಿಂಗ್ ಸ್ಟೇಷನ್’ ಆಗಿ, ಬಳಿಕ ‘ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ’ವಾಗಿ ಬೆಳೆಯಿತು. ಇಂದು ಶ್ರೀಹರಿಕೋಟಾದಿಂದ ಬೃಹತ್ ರಾಕೆಟ್‌ ಗಳನ್ನು ಉಡಾಯಿಸಿ ಭಾರತ ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಗಳಿಸಿದೆ.

ಆದರೆ ಈ ಯಶಸ್ಸಿನ ಪಯಣದ ಮೊದಲ ಹೆಜ್ಜೆ ಇಟ್ಟಿದ್ದು ತುಂಬಾ ಕಡಲತೀರದಲ್ಲಿ. ಸೈಕಲ್ ಮೇಲೆ ರಾಕೆಟ್ ಬಿಡಿಭಾಗ ಹೊತ್ತ ವಿಜ್ಞಾನಿಗಳ ಪರಿಶ್ರಮ, ವಿಜ್ಞಾನಿಗಳ ಕನಸು, ಪ್ರಯೋಗಾಲಯವಾದ ಚರ್ಚ್ ಮತ್ತು ದೇಶದ ವಿಜ್ಞಾನಕ್ಕಾಗಿ ತಮ್ಮ ನೆಲವನ್ನು ಬಿಟ್ಟುಕೊಟ್ಟ ಮೀನುಗಾರರ ತ್ಯಾಗ—ಇವೆಲ್ಲವೂ ಭಾರತದ ಬಾಹ್ಯಾಕಾಶ ಇತಿಹಾಸದ ಅವಿಭಾಜ್ಯ ಭಾಗ.

ಸೈಕಲ್‌ ನಲ್ಲಿ ಸಾಗಿದ ರಾಕೆಟ್‌ ನಿಂದ ಚಂದ್ರನ ದಕ್ಷಿಣ ಧ್ರುವದವರೆಗೆ ಭಾರತದ ಪಯಣ ಬೆಳೆದಿದೆ. ಆದರೆ ಆ ಕನಸಿನ ಮೊದಲ ಕಿಡಿ ಹೊತ್ತಿದ್ದು ತುಂಬಾ ಕಡಲತೀರದಲ್ಲೇ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಿಹಾಲ್ ಮುಹಮ್ಮದ್ ಕುದ್ರೋಳಿ

contributor