ವಿಮಾನಗಳಲ್ಲಿ ಬ್ಯಾಗೇಜ್ ಕಳೆದು ಹೋದಾಗ ಏನುಮಾಡಬೇಕು? ಸಲಹೆಗಳು ಇಲ್ಲಿವೆ!
ಸಾಂದರ್ಭಿಕ ಚಿತ್ರ (Photo: PTI)
ಲಗೇಜ್ ನಿರ್ವಹಣೆಗೆ ವಿಮಾನಯಾನ ಸಂಸ್ಥೆಗಳು ಜವಾಬ್ದಾರರಾಗಿದ್ದರೂ ಕಾಣೆಯಾದ ಸಾಮಾನುಗಳಿಗೆ ಪರಿಹಾರವು ಗಮನಾರ್ಹ ಮಿತಿಗಳಿಗೆ ಒಳಪಟ್ಟಿರುತ್ತದೆ. ಹೀಗಾಗಿ ಮೊದಲೇ ಜಾಗರೂಕತೆವಹಿಸುವುದು ಅಗತ್ಯವಾಗಿರುತ್ತದೆ.
ವಿಮಾನದಲ್ಲಿ ಪ್ರಯಾಣಿಸುವಾಗ ಲಗೇಜ್ ನಿರ್ವಹಣೆ ಬಹುದೊಡ್ಡ ಸಮಸ್ಯೆಯಾಗಿರುತ್ತದೆ. ಆಭರಣಗಳು, ಡಿಸೈನರ್ ಬಟ್ಟೆಗಳು, ಐಷಾರಾಮಿ ಪರಿಕರಗಳು, ಕ್ಯಾಮೆರಾಗಳು ಅಥವಾ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳಂತಹ ದುಬಾರಿ ವಸ್ತುಗಳ ಜೊತೆಗೆ ಪ್ರಯಾಣಿಸುವಾಗ ತನ್ನದೇ ಆದ ಅಪಾಯವೂ ಇರುತ್ತದೆ. ವಿಶೇಷವಾಗಿ ಇಂತಹ ವಸ್ತುಗಳನ್ನು ಚೆಕಿನ್ ಮಾಡಿದ ವಸ್ತುಗಳ ಜೊತೆಗೆ ಪ್ಯಾಕ್ ಮಾಡಿದಾಗ ಸಮಸ್ಯೆ ಎದುರಾಗುತ್ತದೆ. ಲಗೇಜ್ ನಿರ್ವಹಣೆಗೆ ವಿಮಾನಯಾನ ಸಂಸ್ಥೆಗಳು ಜವಾಬ್ದಾರರಾಗಿದ್ದರೂ ಕಾಣೆಯಾದ ಸಾಮಾನುಗಳಿಗೆ ಪರಿಹಾರವು ಗಮನಾರ್ಹ ಮಿತಿಗಳಿಗೆ ಒಳಪಟ್ಟಿರುತ್ತದೆ.
ಮುಖ್ಯವಾಗಿ ದೇಸಿ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹೊಣೆಗಾರಿಕೆ ಭಿನ್ನವಾಗಿದೆ. ಹಾಗಿದ್ದರೆ ಚೆಕಿನ್ ಮಾಡಿದ ಸಾಮಾನುಗಳು ಕಾಣೆಯಾದಾಗ ಏನಾಗುತ್ತದೆ? ಚೆಕಿನ್ ಮಾಡಿದ ಸಾಮಾನುಗಳು ಗಮ್ಯಸ್ಥಾನ ತಲುಪಲು ವಿಫಲವಾದಾಗ ವಿಮಾನಯಾನ ಸಂಸ್ಥೆಗಳು ಸಾಮಾನ್ಯವಾಗಿ ಅದನ್ನು ಶಾಶ್ವತವಾಗಿ ಕಳೆದು ಹೋದ ಸಾಮಾನುಗಳಲ್ಲ ಎಂದು ವರ್ಗೀಕರಿಸುತ್ತವೆ. ಆದರೆ ಪ್ರಯಾಣಿಕರು ತಕ್ಷಣವೇ ವಿಮಾನಯಾನ ಸಂಸ್ಥೆಯ ಸಾಮಾನು ಸರಂಜಾಮು ಸಹಾಯ ಕೌಂಟರ್ ಸಂಪರ್ಕಿಸಿ ಪಿಐಆರ್ (Property Irregularity Report) ಸಲ್ಲಿಸಬೇಕು.
ಬ್ಯಾಗೇಜ್ ಕಾಣೆಯಾದರೆ ಯಾರ ಜವಾಬ್ದಾರಿ?
ದೆಹಲಿ ವಿಮಾನ ನಿಲ್ದಾಣದ ಪ್ರೊಟೋಕಾಲ್ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, “ಬ್ಯಾಗೇಜ್ ಕಾಣೆಯಾದರೆ ಸಂಪೂರ್ಣವಾಗಿ ಏರ್ಲೈನ್ಸ್ ನ ಜವಾಬ್ದಾರಿಯಾಗಿರುತ್ತದೆ. ಲಗೇಜ್ ಕಳೆದು ಹೋದರೆ ಹುಡುಕಿ ಕೊಡುತ್ತಾರೆ ಮತ್ತು ಹಾಳಾದರೆ ಅದಕ್ಕೆ ತಕ್ಕಂತೆ ಹಣ ಪಾವತಿಸಲಾಗುತ್ತದೆ. ಅದಕ್ಕಾಗಿ ಮೊದಲಿಗೆ ಲಗೇಜ್ ಸಿಗದೆ ಇದ್ದಾಗ ಸಂಬಂಧಿತ ಏರ್ಲೈನ್ಸ್ಗೆ ಮಾಹಿತಿ ನೀಡಬೇಕಾಗುತ್ತದೆ. ಅವರು 24 ಗಂಟೆಗಳ ಒಳಗೆ ಲಗೇಜ್ ಹುಡುಕಿ ಕೊಡುತ್ತಾರೆ. ಲಗೇಜ್ ಹುಡುಕಿಕೊಡಲು ವ್ಯಾಲಿಡಿಟಿ ಅವಧಿ ಒಂದು ತಿಂಗಳು ಇರುತ್ತದೆ. ಆದರೆ ಲಗೇಜ್ ತಪ್ಪಿ ಹೋದ ತಕ್ಷಣ ಸಂಬಂಧಿತ ಏರ್ಲೈನ್ಸ್ ನಲ್ಲಿ ಅದಕ್ಕಾಗಿಯೇ ಇರುವ ತಂಡ ಕೆಲಸ ಮಾಡುತ್ತದೆ. ಎಲ್ಲೇ ಇದ್ದರೂ ಫೀಲ್ಡ್ ಪ್ರತಿನಿಧಿಗಳು ಲಗೇಜ್ ಅನ್ನು ನಿಮ್ಮ ಬಳಿಗೆ ತಂದು ಒಪ್ಪಿಸುತ್ತಾರೆ. ಬೆಂಗಳೂರಿನಿಂದ ಅಮೆರಿಕಕ್ಕೆ ಪ್ರಯಾಣಿಸುವಾಗ ಬ್ಯಾಗ್ ತಪ್ಪಿ ಹೋದರೆ ನೀವು ಇಳಿದುಕೊಂಡಿರುವ ಹೊಟೇಲ್ಗೇ ತಂದು ಒಪ್ಪಿಸಲಾಗುತ್ತದೆ.”
ಲಗೇಜ್ನಲ್ಲಿರುವ ವಸ್ತುಗಳು ಕಾಣೆಯಾದರೆ ಮಾತ್ರ ತಕ್ಷಣವೇ ಏರ್ಲೈನ್ಸ್ ಮತ್ತು ವಿಮಾನ ನಿಲ್ದಾಣದ ಪ್ರಾಧಿಕಾರ ಎರಡಕ್ಕೂ ದೂರು ಸಲ್ಲಿಸಬೇಕಾಗುತ್ತದೆ. ಲಗೇಜ್ನಲ್ಲಿರುವ ವಸ್ತುಗಳನ್ನು ಬ್ಯಾಗ್ ಡ್ರಾಪ್ ಮಾಡಿದ ತಕ್ಷಣ ಕ್ಯಾಮರಾ ಒಳಗೆ ಲಗೇಜ್ ಸ್ಕ್ಯಾನ್ ಆಗಿರುತ್ತದೆ. ಲಗೇಜ್ ಓಪನ್ ಆಗಿದೆ ಎಂದರೆ ಏರ್ಪೋರ್ಟ್ ಅಥಾರಿಟಿ ಪರೀಕ್ಷಿಸಬೇಕಾಗುತ್ತದೆ. ಕ್ಯಾಮರಾ ಚಲನೆ ಅಥವಾ ವೀಡಿಯೋಗಳನ್ನು ಪರಿಶೀಲಿಸುವ ಅಧಿಕಾರ ಅವರಿಗೆ ಮಾತ್ರ ಇರುತ್ತದೆ. ಹೀಗಾಗಿ ಬ್ಯಾಗ್ನಲ್ಲಿರುವ ವಸ್ತುಗಳಿಗೂ ಸಂಪೂರ್ಣ ರಕ್ಷಣೆ ಇರುತ್ತದೆ ಎಂದು ಅವರು ವಿವರಿಸಿದ್ದಾರೆ.
ಬ್ಯಾಗೇಜ್ ಕಾಣೆಯಾದ ತಕ್ಷಣ ಮೊದಲಿಗೆ ಎಫ್ಐಆರ್ (ಮೊದಲ ಮಾಹಿತಿ ವರದಿ) ಸಲ್ಲಿಸಲಾಗುತ್ತದೆ. ಅದರಲ್ಲಿ ಕಳೆದು ಹೋದ ಬ್ಯಾಗ್ನ ವಿವರಣೆ, ಬ್ಯಾಗೇಜ್ ಟ್ಯಾಗ್ ನಂಬರ್ ವಿವರಗಳು ಮತ್ತು ಪ್ರಯಾಣಿಕರ ಮಾಹಿತಿ ಇರುತ್ತದೆ. ಏರ್ಲೈನ್ಸ್ ತಕ್ಷಣವೇ ಅದನ್ನು ಪತ್ತೆ ಮಾಡಲು ಕಾರ್ಯವಿಧಾನವನ್ನು ಅನುಸರಿಸುತ್ತವೆ.
ನಿಯಮಗಳು ಏನು ಹೇಳುತ್ತವೆ?
ಭಾರತದೊಳಗಿನ ದೇಶೀಯ ವಿಮಾನಗಳಿಗೆ ಸಾಮಾನು ಸರಂಜಾಮು ಹೊಣೆಗಾರಿಕೆಯನ್ನು ಕ್ಯಾರೇಜ್ ಬೈ ಏರ್ ಆಕ್ಟ್ 1972ರಲ್ಲಿ ಅನ್ವಯವಾಗುವ ನಿಯಮಗಳು ಮತ್ತು ವಿಮಾನಯಾನ ಸಂಸ್ಥೆಯ ಕ್ಯಾರೇಜ್ ಷರತ್ತುಗಳಿಂದ ನಿಯಂತ್ರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಪ್ರಯಾಣದಲ್ಲಿ 2024 ಡಿಸೆಂಬರ್ 28 ರಿಂದ ಜಾರಿಗೆ ಬರುವಂತೆ ಸಾಮಾನು ಸರಂಜಾಮುಗಳ ನಾಶ, ನಷ್ಟ, ಹಾನಿ ಅಥವಾ ವಿಳಂಬಕ್ಕೆ ಸಂಬಂಧಿಸಿದಂತೆ ಮಾಂಟ್ರಿಯಲ್ ಸಮಾವೇಶದ ಅಡಿಯಲ್ಲಿ ಹೊಣೆಗಾರಿಕೆಯನ್ನು ವಿವರಿಸಲಾಗಿದೆ.
ಆದರೆ, ಸಾಮಾನ್ಯವಾಗಿ ಪರಿಹಾರ ನೀಡುವಾಗ ಕಾಣೆಯಾದ ವಸ್ತುಗಳ ಪೂರ್ಣ ಮಾರುಕಟ್ಟೆ ಮೌಲ್ಯದ ಪ್ರಕಾರ ಲೆಕ್ಕ ಹಾಕುವ ಬದಲು ಮಿತಿಗೊಳಿಸಲಾಗುತ್ತದೆ. ಅನೇಕ ಬಾರಿ ವಸ್ತುಗಳು ಹಾಳಾದರೆ ಅದಕ್ಕೆ ಕೂಪನ್ ಕೊಡುತ್ತಾರೆ. ಅದನ್ನು ಮುಂದಿನ ಬಾರಿ ವಿಮಾನದಲ್ಲಿ ಪ್ರಯಾಣಿಸುವಾಗ ಬಳಸಿಕೊಳ್ಳಬಹುದು.
ಹೀಗಾಗಿ, ಪ್ರಯಾಣಿಕರು ಮುಖ್ಯವಾಗಿ ಕ್ಯಾಬಿನ್ ಬ್ಯಾಗೇಜ್ನಲ್ಲಿ ಆಭರಣಗಳು, ಪ್ರಮುಖ ದಾಖಲೆಗಳು, ಔಷಧಿಗಳು ಮತ್ತು ದುಬಾರಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಾಗಿಸುವುದು ಸುರಕ್ಷಿತ ವಿಧಾನವಾಗಿದೆ. ಪ್ಯಾಕ್ ಮಾಡಿದ ವಸ್ತುಗಳ ಛಾಯಾಚಿತ್ರ ತೆಗೆದುಕೊಳ್ಳಬೇಕು. ಇನ್ವಾಯ್ಸ್ ಉಳಿಸಿಕೊಳ್ಳಬೇಕು ಮತ್ತು ಅನುಮೋದಿತ ಲಗೇಜ್-ಟ್ರ್ಯಾಕಿಂಗ್ ಸಾಧನಗಳನ್ನು ಪರಿಗಣಿಸಬಹುದು.
ಲಗೇಜ್ ಸಮಸ್ಯೆಯಾದ ತಕ್ಷಣ ಪ್ರಯಾಣಿಕರು ಏನು ಮಾಡಬೇಕು?
• ಮೊದಲಿಗೆ ಪಿಐಆರ್ (Property Irregularity Report) ವರದಿಯನ್ನು ಸಲ್ಲಿಸಬೇಕಾಗುತ್ತದೆ. ವಿಮಾನ ನಿಲ್ದಾಣದಿಂದ ಹೊರಬರುವ ಮೊದಲು ಕಾಣೆಯಾದ ಸಾಮಾನುಗಳ ಬಗ್ಗೆ ವರದಿ ನೀಡಿ ಮತ್ತು ರೆಫರೆನ್ಸ್ ನಂಬರ್ ಅನ್ನು ಉಳಿಸಿಕೊಳ್ಳಬೇಕು.
• ಡಾಕ್ಯುಮೆಂಟ್ ಕಾಪಿಡಿ: ಬೋರ್ಡಿಂಗ್ ಪಾಸ್ಗಳು, ಬ್ಯಾಗೇಜ್ ಟ್ಯಾಗ್ಗಳು, ಖರೀದಿ ಇನ್ವಾಯ್ಸ್ಗಳು ಮತ್ತು ಮಾಲೀಕತ್ವ ಮತ್ತು ಮೌಲ್ಯವನ್ನು ತಿಳಿಸಲು ಫೋಟೋಗಳನ್ನು ಇಟ್ಟುಕೊಳ್ಳಿ.
• ಲಿಖಿತವಾಗಿ ಕ್ಲೇಮ್ ಮಾಡಿ: ವಿಮಾನಯಾನ ಸಂಸ್ಥೆಯನ್ನು ತಕ್ಷಣ ಸಂಪರ್ಕಿಸಿ. ಮಾಂಟ್ರಿಯಲ್ ಸಮಾವೇಶದ ಅಡಿಯಲ್ಲಿ ವಿಳಂಬಿತ-ಸಾಮಾನು ದೂರುಗಳನ್ನು ಸಾಮಾನ್ಯವಾಗಿ ಸಾಮಾನುಗಳು ಲಭ್ಯವಾದ 21 ದಿನಗಳಲ್ಲಿ ಮಾಡಬೇಕು. ಬ್ಯಾಗೇಜ್ ತಡವಾಗಿ ಬಂದ ಕಾರಣ ನಿಮಗೆ ಅಗತ್ಯ ವಸ್ತುಗಳನ್ನು ತುರ್ತಾಗಿ ಖರೀದಿಸಬೇಕಾಗಿ ಬಂದಿದ್ದರೆ ಆ ಖರ್ಚಿನ ಪರಿಹಾರವನ್ನು ಕೇಳಲು 21 ದಿನಗಳ ಒಳಗೆ ದೂರು ದಾಖಲಿಸುವುದು ಕಡ್ಡಾಯವಾಗಿರುತ್ತದೆ. ಈ ಅವಧಿ ಮೀರಿದರೆ ಏರ್ಲೈನ್ಸ್ ಪರಿಹಾರ ನೀಡಲು ನಿರಾಕರಿಸಬಹುದು.
• ವೆಚ್ಚದ ರಶೀದಿಗಳನ್ನು ಕಾಪಿಡಿ: ಸಾಮಾನು ವಿಳಂಬದ ಸಮಯದಲ್ಲಿ ಅಗತ್ಯ ವಸ್ತುಗಳ ಸಮಂಜಸವಾದ ಖರೀದಿಗಳು ಮರುಪಾವತಿಗೆ ಅರ್ಹವಾಗಬಹುದು. ಹೀಗಾಗಿ ವೆಚ್ಚದ ವಿವರಗಳು ಅಗತ್ಯವಾಗಿ ಬೇಕು.
• ಬಗೆಹರಿಯದಿದ್ದರೆ ಮೇಲ್ಮನವಿ ಸಲ್ಲಿಸಿ: ಭಾರತದಲ್ಲಿ ಪ್ರಯಾಣಿಕರು ವಿಮಾನಯಾನ ಸಂಸ್ಥೆಯ ಕುಂದುಕೊರತೆ ಅಧಿಕಾರಿಯನ್ನು ಸಂಪರ್ಕಿಸಬಹುದು ಅಥವಾ ಸರ್ಕಾರದ ಏರ್ ಸೇವಾ ವೇದಿಕೆಯನ್ನು ಬಳಸಬಹುದು.
ಪ್ರಯಾಣದ ವಿಮೆಯೂ ಹೆಚ್ಚುವರಿ ಆರ್ಥಿಕ ರಕ್ಷಣೆ ಒದಗಿಸಬಹುದು. ಆದರೂ ವ್ಯಾಪ್ತಿ ಗಣನೀಯವಾಗಿ ಬದಲಾಗುತ್ತದೆ. ಅನೇಕ ನೀತಿಗಳು ಬೆಲೆಬಾಳುವ ವಸ್ತುಗಳ ಮೇಲೆ ಪ್ರತ್ಯೇಕ ಮಿತಿಗಳನ್ನು ವಿಧಿಸುತ್ತವೆ. ಆಭರಣ ಅಥವಾ ಎಲೆಕ್ಟ್ರಾನಿಕ್ಸ್ ಅನ್ನು ಹೊರಗಿಡುತ್ತವೆ ಅಥವಾ ಮಾಲೀಕತ್ವದ ಪುರಾವೆ ಅಗತ್ಯವಿರುತ್ತದೆ.