Photo Credit : thenewsminute.com

ನಗರವು ಇನ್ನೂ ಪೂರ್ಣವಾಗಿ ಎಚ್ಚರಗೊಳ್ಳುವ ಮುನ್ನವೇ, ಮುಂಜಾನೆಯ ಮಬ್ಬುಗತ್ತಲಲ್ಲಿ ದಿವ್ಯಾ (ಹೆಸರು ಬದಲಾಯಿಸಲಾಗಿದೆ) ಬೆಂಗಳೂರಿನ ರಸ್ತೆಯಲ್ಲಿ ನಿತ್ರಾಣಳಾಗಿ ಹೆಜ್ಜೆ ಹಾಕುತ್ತಿದ್ದಳು. ಆಕೆಯ ಕೈಯಲ್ಲಿ ಬಿಗಿಯಾಗಿ ಸುತ್ತಿದ ಸಣ್ಣ ಗಂಟೊಂದು ಇತ್ತು. ಕೆಲವೇ ಗಂಟೆಗಳ ಹಿಂದೆ, ಸುಮಾರು 24 ವಾರಗಳ ಗರ್ಭಾವಸ್ಥೆಯಲ್ಲಿ ಆಕೆಗೆ ಗರ್ಭಪಾತವಾಗಿ ಹೊರಬಂದ ಮೃತ ಭ್ರೂಣ ಅದಾಗಿತ್ತು. ಗರ್ಭಪಾತ ನಡೆದ ಆಸ್ಪತ್ರೆಯ ಸಿಬ್ಬಂದಿ ಆ ಮೃತ ಭ್ರೂಣವನ್ನು ಆಕೆಯ ಕೈಗಿತ್ತು, ನಗರಸಭೆಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಿದ ಪ್ರಮಾಣಪತ್ರ ತಂದರೆ ಮಾತ್ರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವುದಾಗಿ ಹೇಳಿದ್ದರು.

ಆಕೆಯ ಪಕ್ಕದಲ್ಲೇ ನಡೆಯುತ್ತಿದ್ದ ಸಹೋದರಿ, ಕೈ ತೋರಿಸಿ ಆಟೋರಿಕ್ಷಾ ನಿಲ್ಲಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಶವದಂತೆ ಸುತ್ತಿದ್ದ ಗಂಟನ್ನು ಹಿಡಿದು ನಿಂತಿದ್ದ ಆ ಇಬ್ಬರು ಬಳಲಿದ ಮಹಿಳೆಯರನ್ನು ಕಂಡ ಚಾಲಕರು ಭಯ ಮತ್ತು ಅಸಹ್ಯದಿಂದ ವಾಹನ ನಿಲ್ಲಿಸದೆ ವೇಗವಾಗಿ ಮುಂದೆ ಸಾಗುತ್ತಿದ್ದರು. 11 ಗಂಟೆಗಳ ಕಾಲ ಯಾವುದೇ ನೋವು ನಿವಾರಕ ಔಷಧಿಯಿಲ್ಲದೆ, ಬಲವಂತದ ಹೆರಿಗೆಯ ನರಕಯಾತನೆ ಅನುಭವಿಸಿದ್ದ ದಿವ್ಯಾ, ಚಳಿಯ ಮುಂಜಾನೆಯಲ್ಲಿ ಕಿಲೋಮೀಟರ್ಗಟ್ಟಲೆ ದೂರದ ಸ್ಮಶಾನಕ್ಕೆ ನಡೆದುಕೊಂಡೇ ಹೋಗಬೇಕಾದ ಅನಿವಾರ್ಯತೆ ಎದುರಾಯಿತು.

ವ್ಯವಸ್ಥೆಯ ಕ್ರೌರ್ಯಕ್ಕೆ ಸಿಲುಕಿ ನಲುಗಿದ ಆಕೆಯ ಸುದೀರ್ಘ ದುಃಸ್ವಪ್ನದ ಅತ್ಯಂತ ಭೀಕರ ಘಟ್ಟ ಇದಾಗಿತ್ತು.

ಆಸ್ಪತ್ರೆಯಲ್ಲಿ ತಾನು ಅನುಭವಿಸಿದ ಭಯಾನಕ ಯಾತನೆಯನ್ನು ನೆನಪಿಸಿಕೊಳ್ಳುತ್ತಾ 'ದಿ ನ್ಯೂಸ್ ಮಿನಿಟ್' (TNM) ಜೊತೆ ಮಾತನಾಡಿದ ದಿವ್ಯಾ, “ಸಿಬ್ಬಂದಿ ತಮ್ಮ ಚುಚ್ಚುಮಾತುಗಳಿಂದ ನನ್ನನ್ನು ಪದೇಪದೇ ನೋಯಿಸುತ್ತಲೇ ಇದ್ದರು. ಇದರಿಂದ ಯಾರಿಗೆ ಲಾಭ? ನನ್ನನ್ನು ಬೈಯುವುದರಿಂದ ಅವರಿಗೆ ಮನಃಶಾಂತಿ ಸಿಕ್ಕಿತೇ? ಅಂತಹ ಕಠೋರ ಮಾತುಗಳನ್ನು ಕೇಳಿದಾಗ, ಕೇವಲ ಐದು ಸೆಕೆಂಡುಗಳಲ್ಲಿ ಯಾವ ಮಹಿಳೆಯಾದರೂ ತನ್ನ ಬದುಕೇ ವ್ಯರ್ಥ ಎನ್ನುವ ತೀವ್ರ ನಿರ್ಧಾರಕ್ಕೆ ಬಂದುಬಿಡಬಹುದು,” ಎಂದು ನೋವು ತೋಡಿಕೊಂಡರು.

ಇದಕ್ಕೂ ಕೆಲವು ವಾರಗಳ ಮೊದಲು, ದಿನಸಿ ಅಂಗಡಿಯೊಂದರಲ್ಲಿ ಸಿಗುವ ಅಲ್ಪ ಸಂಬಳದಲ್ಲಿ ತನ್ನ ಎಂಟು ವರ್ಷದ ಮಗನನ್ನು ಸಾಕುತ್ತಿದ್ದ ವಿಧವೆ ದಿವ್ಯಾ, ಮೆಡಿಕಲ್ ಸ್ಟೋರ್ ನಲ್ಲಿ ತಂದಿದ್ದ ಗರ್ಭಪಾತದ ಮಾತ್ರೆ ವಿಫಲವಾದ ಕಾರಣ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಆಕೆಗೆ ಸೂಕ್ತ ಚಿಕಿತ್ಸೆ ಸಿಗುವ ಬದಲು, ಜನನಿಬಿಡ ಹೊರರೋಗಿಗಳ ವಿಭಾಗದಲ್ಲೇ ವೈದ್ಯರೊಬ್ಬರು ಆಕೆಯನ್ನು ಅವಮಾನಿಸಿದರು ಎನ್ನಲಾಗಿದೆ. ಅಷ್ಟೇ ಅಲ್ಲದೆ, ಆಕೆಯ ವೈದ್ಯಕೀಯ ಚೀಟಿಯ ಮೇಲೆ ಕೆಂಪು ಶಾಯಿಯಲ್ಲಿ 'ವಿಧವೆ, ಅನೈತಿಕ ಗರ್ಭ' ಎಂದು ದಪ್ಪ ಅಕ್ಷರಗಳಲ್ಲಿ ಬರೆದಿದ್ದರು. ತನ್ನ ಮೃತ ಪತಿಯ ಮನೆಯವರನ್ನು ಅಥವಾ ತನ್ನ ತಾಯಿಯನ್ನು "ತನ್ನ ಅವಮಾನಕ್ಕೆ ಸಾಕ್ಷಿಯಾಗಲು" ಕರೆತಂದರೆ ಮಾತ್ರ ಚಿಕಿತ್ಸೆ ನೀಡುವುದಾಗಿ ಆ ವೈದ್ಯರು ಪಟ್ಟುಹಿಡಿದಿದ್ದರು ಎಂದು ದಿವ್ಯಾ ಹೇಳಿದ್ದಾರೆ.

ಒಂದು ವೇಳೆ ಈ ವಿಷಯ ತಿಳಿದರೆ ಪತಿಯ ಮನೆಯವರು ತನ್ನ ಮಗನನ್ನು ಕಸಿದುಕೊಳ್ಳಬಹುದು ಅಥವಾ ಸಮಾಜದಲ್ಲಿ ಆಗುವ ಅವಮಾನದಿಂದ ತನ್ನ ವಯಸ್ಸಾದ ಪೋಷಕರಿಗೆ ಆಘಾತವಾಗಬಹುದು ಎಂದು ದಿವ್ಯಾ ತೀವ್ರವಾಗಿ ಹೆದರಿದ್ದರು. ಇದೇ ಭಯದಲ್ಲಿ ಆಕೆ ವಾರಗಳ ಕಾಲ ಮನೆಯೊಳಗೇ ಬಂಧಿಯಾಗಿ, ಊಟ-ಮಾತು ಬಿಟ್ಟು ಕುಳಿತಿದ್ದರು. ಆಕೆಯ ಆರೋಗ್ಯ ತೀರಾ ಹದಗೆಡುತ್ತಿರುವುದನ್ನು ಗಮನಿಸಿದ ಕುಟುಂಬಸ್ಥರು ಕೊನೆಗೆ ಆರೋಗ್ಯ ಕಾರ್ಯಕರ್ತರೊಬ್ಬರ ನೆರವು ಪಡೆದರು. ಅಷ್ಟೊತ್ತಿಗಾಗಲೇ ಆಕೆಗೆ 24 ವಾರಗಳ ಗರ್ಭವಾಗಿತ್ತು. ಭಾರತದ ಕಾನೂನಿನ ಪ್ರಕಾರ ಗರ್ಭಪಾತಕ್ಕೆ ಇರುವ ಅಂತಿಮ ಗಡುವು ಕೂಡ ಇದೇ ಆಗಿದೆ.

ನಂತರ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಆಕೆ, ಗಂಟೆಗಟ್ಟಲೆ ತೀವ್ರವಾದ ಹೆರಿಗೆ ನೋವಿನಿಂದ ನರಳಿದರು. ಆ ಸಮಯದಲ್ಲಿ ಆಸ್ಪತ್ರೆಯ ಸಿಬ್ಬಂದಿ ಕನಿಷ್ಠ ನೋವು ನಿವಾರಕ ಔಷಧಿಯನ್ನೂ ನೀಡದೆ, ಆಕೆಯನ್ನು "ವೇಶ್ಯೆ" ಎಂದು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ತಡರಾತ್ರಿ ಗರ್ಭಪಾತ ಪ್ರಕ್ರಿಯೆ ಮುಗಿದ ತಕ್ಷಣ, ನಿದ್ರಿಸುತ್ತಿದ್ದ ಆಕೆಯನ್ನು ಎಬ್ಬಿಸಿದ ಸಿಬ್ಬಂದಿ, ಮೃತ ಭ್ರೂಣವನ್ನು ಆಕೆಯ ಮುಖದ ಮುಂದೆ ಹಿಡಿದು, “ನೋಡು, ನೋಡು, ಇದಕ್ಕೆ ಬೆರಳುಗಳಿವೆ, ಎದೆಬಡಿತವೂ ಇತ್ತು! ನಿನ್ನಿಂದಾಗಿ ನಾವು ಕೂಡ ಈ ಪಾಪ ಮಾಡುವಂತಾಯಿತು! ಮುಂದೆ ಇಂತಹ ಕೆಲಸಕ್ಕೆ ಕೈಹಾಕುವ ಮೊದಲು ಇದನ್ನು ನೆನಪಿಸಿಕೊ!” ಎಂದು ಕಿರುಚಾಡಿದ್ದರು.

ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಮುನ್ನ, ತಮ್ಮ ಒಪ್ಪಿಗೆಯಿಲ್ಲದೆಯೇ ಗರ್ಭನಿರೋಧಕ ಸಾಧನವನ್ನು (IUD) ಅಳವಡಿಸಿ, ಮೃತ ಭ್ರೂಣವನ್ನು ಕೈಗಿತ್ತು ರಸ್ತೆಗೆ ಕಳುಹಿಸಿದರು ಎಂದು ದಿವ್ಯಾ ಆರೋಪಿಸಿದ್ದಾರೆ.

ದಿವ್ಯಾ ಅವರ ಈ ಕಥೆ ಕೇವಲ ಒಬ್ಬರದ್ದಲ್ಲ. ತಮ್ಮ ದೇಹದ ಬಗ್ಗೆ ತಾವೇ ನಿರ್ಧಾರ ತೆಗೆದುಕೊಳ್ಳುವ ಮಹಿಳೆಯರನ್ನು ವ್ಯವಸ್ಥೆಯು ಹೇಗೆ ನಿರಂತರವಾಗಿ ಶಿಕ್ಷಿಸುತ್ತಿದೆ ಎಂಬುದರ ಕರಾಳ ವಾಸ್ತವಕ್ಕೆ ಇದು ಕನ್ನಡಿಯಾಗಿದೆ.

ಪುಣೆಯ ನಿವಾಸಿ ತಾರಾ (ಹೆಸರು ಬದಲಾಯಿಸಲಾಗಿದೆ) ಅವರಿಗೆ 18 ವರ್ಷವಿದ್ದಾಗ ಅನಪೇಕ್ಷಿತ ಗರ್ಭಧಾರಣೆಯಾಗಿತ್ತು. ಆಗ ಅವರಿಗೆ ಗರ್ಭಪಾತದ ಪ್ರಕ್ರಿಯೆಗಿಂತ ಹೆಚ್ಚಾಗಿ, ಸಮಾಜದಲ್ಲಿ ಆಗಬಹುದಾದ ಅವಮಾನದ ಭಯವೇ ಕಾಡಿತ್ತು. ಅವಿವಾಹಿತೆಯಾಗಿದ್ದರಿಂದ ಮನೆಯಲ್ಲಿ ವಿಷಯ ತಿಳಿದರೆ ಏನಾಗುತ್ತದೋ ಎಂಬ ಆತಂಕದಲ್ಲಿ ಅವರು ಆಸ್ಪತ್ರೆಯ ಮೆಟ್ಟಿಲನ್ನೂ ಹತ್ತಲಿಲ್ಲ.

"ನನ್ನ ಸಂಗಾತಿ ಪರಿಚಯಸ್ಥರ ಮೂಲಕ ಗರ್ಭಪಾತದ ಮಾತ್ರೆಗಳನ್ನು ತಂದುಕೊಟ್ಟರು" ಎಂದು ತಾರಾ ನೆನಪಿಸಿಕೊಳ್ಳುತ್ತಾರೆ. ರಾತ್ರಿ ಹೊತ್ತು ಆ ಮಾತ್ರೆಗಳನ್ನು ನುಂಗಿದ ಅವರು, ತಮ್ಮ ಕೋಣೆಯಲ್ಲಿ ಒಬ್ಬಂಟಿಯಾಗಿ ಗಂಟೆಗಟ್ಟಲೆ ತೀವ್ರವಾದ ಹೊಟ್ಟೆನೋವು ಮತ್ತು ವಿಪರೀತ ರಕ್ತಸ್ರಾವದ ಯಾತನೆಯನ್ನು ಅನುಭವಿಸಿದರು.

ಕೆಲವು ವರ್ಷಗಳ ನಂತರ, 24ನೇ ವಯಸ್ಸಿನಲ್ಲಿ ಮತ್ತೊಮ್ಮೆ ಅನಿರೀಕ್ಷಿತವಾಗಿ ಗರ್ಭಿಣಿಯಾದಾಗ, ಅವರು ಅಧಿಕೃತವಾಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲು ನಿರ್ಧರಿಸಿದರು. ಪುಣೆಯ ಪ್ರತಿಷ್ಠಿತ ಆಸ್ಪತ್ರೆಯೊಂದಕ್ಕೆ ಕರೆ ಮಾಡಿ, ತಮಗೆ ಗರ್ಭಪಾತದ ಅಗತ್ಯವಿದೆ ಎಂದು ನೇರವಾಗಿ ತಿಳಿಸಿದರು. ಆದರೆ ಆಸ್ಪತ್ರೆಯು ಎರಡು ಬಾರಿ ಅವರ ಮನವಿಯನ್ನು ತಿರಸ್ಕರಿಸಿತು. "ವೈದ್ಯರು 'ಲಭ್ಯವಿಲ್ಲ' ಎಂದು ಅಸ್ಪಷ್ಟ ಕಾರಣಗಳನ್ನು ನೀಡಿದ ಸಿಬ್ಬಂದಿ, ಹಲವು ವಾರಗಳ ನಂತರದ ದಿನಾಂಕಗಳನ್ನು ನೀಡಿದರು. ಸಮಯವೇ ಅತ್ಯಂತ ನಿರ್ಣಾಯಕವಾಗಿರುವ ಈ ಪ್ರಕ್ರಿಯೆಯಲ್ಲಿ, ಇದು ಅನಗತ್ಯ ವಿಳಂಬಕ್ಕೆ ಕಾರಣವಾಯಿತು" ಎಂದು ತಾರಾ ಹೇಳಿದ್ದಾರೆ.

ಇದೊಂದು ಮೌನ ನಿರಾಕರಣೆ ಎಂಬುದನ್ನು ಅರಿತ ಅವರು, ಸಣ್ಣ ಖಾಸಗಿ ಕ್ಲಿನಿಕ್ ಗಳತ್ತ ಮುಖ ಮಾಡಿದರು.

ಕೊನೆಗೆ ಆನ್‌ ಲೈನ್ ವಿಮರ್ಶೆಗಳ ಆಧಾರದ ಮೇಲೆ ಖಾಸಗಿ ಕ್ಲಿನಿಕ್ ಒಂದನ್ನು ಪತ್ತೆಹಚ್ಚಿದಾಗ, ಅಲ್ಲಿನ ಸ್ತ್ರೀರೋಗ ತಜ್ಞರು ಮಾತ್ರೆಗಳನ್ನು ನೀಡುವ ಮುನ್ನ ಅವರ ವೃತ್ತಿ, ಕೌಟುಂಬಿಕ ಹಿನ್ನೆಲೆ ಮತ್ತು ಸಂಬಂಧದ ಸ್ಥಿತಿಯ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದರು. ವೈದ್ಯರು ತಮ್ಮ ಆರೋಗ್ಯ ತಪಾಸಣೆ ಮಾಡುವುದಕ್ಕಿಂತ ಹೆಚ್ಚಾಗಿ, ತಮಗೆ ಎದುರಾಗಬಹುದಾದ ಕಾನೂನು ತೊಡಕುಗಳ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಂತೆ ತಮಗೆ ಅನಿಸಿತು ಎಂದು ತಾರಾ ಹೇಳಿದ್ದಾರೆ.

ಕಾನೂನುಗಳನ್ನು ನೋಡಿದರೆ, ಭಾರತದ ಗರ್ಭಪಾತ ಕಾನೂನುಗಳು ವಿಶ್ವದಲ್ಲೇ ಅತ್ಯಂತ ಪ್ರಗತಿಪರವಾಗಿವೆ. ಇಲ್ಲಿ 24 ವಾರಗಳವರೆಗಿನ ಗರ್ಭಪಾತಕ್ಕೆ ಅವಕಾಶವಿದೆ. ಆದರೆ ವಾಸ್ತವದಲ್ಲಿ, ಸಂತಾನೋತ್ಪತ್ತಿ ಆರೋಗ್ಯ ಸೇವೆಯು ಕಾನೂನಿನ ಅಸ್ಪಷ್ಟ ಸುಳಿಯಲ್ಲಿ ಸಿಲುಕಿದೆ. ಇಲ್ಲಿ ಮಹಿಳೆಯ ದೇಹದ ಮೇಲಿನ ಹಕ್ಕು ವೈದ್ಯರ ವಿವೇಚನೆಗೆ ಸೀಮಿತವಾಗಿದ್ದು, ಮೂಲಭೂತ ಆರೋಗ್ಯ ಹಕ್ಕನ್ನು ಪಡೆಯಲು ಮಹಿಳೆಯರು ವೈದ್ಯರ ಮನವೊಲಿಸಬೇಕಾದ ದುಃಸ್ಥಿತಿ ಇದೆ.

ಇಲ್ಲಿರುವ ಅಡೆತಡೆ ಕೇವಲ ಕಾನೂನಿನ ನಿರ್ಬಂಧ ಅಥವಾ ಆಡಳಿತಾತ್ಮಕ ನಿರಾಕರಣೆಯಲ್ಲ. ಬದಲಾಗಿ ಇದೊಂದು ವ್ಯವಸ್ಥಿತ ಸಾಂಸ್ಥಿಕ ಹಿಂಸಾಚಾರವಾಗಿದೆ. 'ವೈದ್ಯಕೀಯ ಗರ್ಭಪಾತ ಕಾಯ್ದೆ'ಯ (MTP) ಪ್ರಗತಿಪರ ಭರವಸೆಗಳ ಹಿಂದೆ, ಆರೋಗ್ಯ ಸೇವಾ ಪೂರೈಕೆದಾರರು ಸಾರ್ವಜನಿಕ ಅವಮಾನ, ಬಲವಂತದ ಚಿಕಿತ್ಸೆ, ಹಣ ಸುಲಿಗೆ ಮತ್ತು ಅನೈತಿಕ ವಿಚಾರಣೆಯಂತಹ ಅಸ್ತ್ರಗಳನ್ನು ಬಳಸುತ್ತಿದ್ದಾರೆ. ಆ ಮೂಲಕ, ಮೂಲಭೂತ ಆರೋಗ್ಯ ಹಕ್ಕನ್ನು ಅಪರಾಧವೆಂಬಂತೆ ಮತ್ತು ಮಹಿಳೆಯ ಸ್ವಾಯತ್ತತೆಯನ್ನು ತಪ್ಪು ಎಂಬಂತೆ ಬಿಂಬಿಸಲಾಗುತ್ತಿದೆ.

►ಕಾನೂನು ಏನು ಹೇಳುತ್ತದೆ ಮತ್ತು ವೈದ್ಯರ ಸಲಹೆ ಏನು?

1971ರಲ್ಲಿ ಜಾರಿಗೆ ಬಂದ MTP ಕಾಯ್ದೆಯನ್ನು ಒಂದು ಐತಿಹಾಸಿಕ ಮತ್ತು ಪ್ರಗತಿಪರ ಕಾನೂನು ಎಂದು ಶ್ಲಾಘಿಸಲಾಗಿತ್ತು. ಅಸುರಕ್ಷಿತ ಹಾಗೂ ಕದ್ದುಮುಚ್ಚಿ ನಡೆಯುವ ಗರ್ಭಪಾತಗಳಿಂದ ಉಂಟಾಗುವ ತಾಯಂದಿರ ಮರಣವನ್ನು ತಡೆಗಟ್ಟುವ ಮುಖ್ಯ ಉದ್ದೇಶದಿಂದ ಇದನ್ನು ರೂಪಿಸಲಾಗಿತ್ತು. ದೈಹಿಕ ಅಥವಾ ಮಾನಸಿಕ ಆರೋಗ್ಯಕ್ಕೆ ಅಪಾಯವಿದ್ದಾಗ ಮತ್ತು ಗರ್ಭನಿರೋಧಕ ವಿಫಲವಾದಾಗ ಮಹಿಳೆಯರು ಕಾನೂನುಬದ್ಧವಾಗಿ ಗರ್ಭಪಾತ ಮಾಡಿಸಿಕೊಳ್ಳಬಹುದು ಎಂದು ಈ ಕಾಯ್ದೆ ಸ್ಪಷ್ಟಪಡಿಸಿತ್ತು. 2021ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದು, ಅವಿವಾಹಿತ ಮಹಿಳೆಯರು, ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ಮತ್ತು ಭ್ರೂಣದಲ್ಲಿ ನ್ಯೂನತೆ ಇರುವವರಂತಹ ವಿಶೇಷ ವರ್ಗಗಳಿಗೆ ಗರ್ಭಪಾತದ ಕಾನೂನು ಮಿತಿಯನ್ನು 20ರಿಂದ 24 ವಾರಗಳಿಗೆ ವಿಸ್ತರಿಸಲಾಯಿತು. ಅಲ್ಲದೆ, ವಯಸ್ಕ ಮಹಿಳೆಯೊಬ್ಬಳು ಗರ್ಭಪಾತ ಮಾಡಿಸಿಕೊಳ್ಳಲು ಆಕೆಯ ಒಪ್ಪಿಗೆ ಮಾತ್ರ ಸಾಕು ಎಂಬುದನ್ನು ಕಾನೂನು ಸ್ಪಷ್ಟವಾಗಿ ಹೇಳಿದೆ.

ಗರ್ಭಪಾತ ಕಾನೂನುಗಳಷ್ಟೇ ಅಲ್ಲದೆ, ಭಾರತದ ಸಂವಿಧಾನದ 21ನೇ ವಿಧಿಯ (ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಅಡಿಯಲ್ಲಿ ಆರೋಗ್ಯ, ಸಂತಾನೋತ್ಪತ್ತಿಯ ಆಯ್ಕೆ ಮತ್ತು ದೇಹದ ಮೇಲಿನ ಸ್ವಾಯತ್ತತೆಯನ್ನು ಮೂಲಭೂತ ಹಕ್ಕುಗಳೆಂದು ನ್ಯಾಯಾಲಯಗಳು ದೃಢಪಡಿಸಿವೆ.

2022ರ 'ಎಕ್ಸ್ ವರ್ಸಸ್ ಪ್ರಿನ್ಸಿಪಲ್ ಸೆಕ್ರೆಟರಿ' (X v Principal Secretary (2022)) ಪ್ರಕರಣದಂತಹ ಮಹತ್ವದ ತೀರ್ಪಿನಲ್ಲಿ, 24 ವಾರಗಳ ಗರ್ಭಪಾತಕ್ಕೆ ಅನುಮತಿ ಕೋರಿದ್ದ ಅವಿವಾಹಿತ ಮಹಿಳೆಯ ಪರವಾಗಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತು. ವೈವಾಹಿಕ ಸ್ಥಿತಿ ಏನೇ ಇರಲಿ, ಪ್ರತಿಯೊಬ್ಬ ಮಹಿಳೆಗೂ ತನ್ನ ದೇಹ ಮತ್ತು ನಿರ್ಧಾರಗಳ ಮೇಲೆ ಸಂಪೂರ್ಣ ಹಕ್ಕಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಅನಪೇಕ್ಷಿತ ಗರ್ಭಧಾರಣೆಯನ್ನು ಮುಂದುವರಿಸುವಂತೆ ಒತ್ತಾಯಿಸುವುದು ಆಕೆಯ ಘನತೆ ಮತ್ತು ಮಾನಸಿಕ ಆರೋಗ್ಯದ ನೇರ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ವೈದ್ಯಕೀಯ ಚಿಕಿತ್ಸೆಯಲ್ಲಿ ಖಾಸಗಿತನ, ಗೌಪ್ಯತೆ ಮತ್ತು ಮಾಹಿತಿಯುಕ್ತ ಒಪ್ಪಿಗೆಯನ್ನು ಇತರ ನ್ಯಾಯಾಂಗ ತೀರ್ಪುಗಳು ಸ್ಪಷ್ಟವಾಗಿ ಖಾತರಿಪಡಿಸಿವೆ. ವಯಸ್ಕ ಮಹಿಳೆಯ ಆಯ್ಕೆಯೇ ಅಂತಿಮವಾಗಿದ್ದು, ಅದಕ್ಕೆ ಪತಿ, ಪೋಷಕರು ಅಥವಾ ಇನ್ಯಾವುದೇ ಮೂರನೇ ವ್ಯಕ್ತಿಯ ಅನುಮತಿ ಕಾನೂನುಬದ್ಧವಾಗಿ ಬೇಕಾಗಿಲ್ಲ ಎಂದು ಇಲ್ಲಿ ಹೇಳಲಾಗಿದೆ.

ವೈದ್ಯಕೀಯ ದೃಷ್ಟಿಕೋನದಿಂದ ನೋಡಿದರೆ, ಗರ್ಭಪಾತ ಮಾಡಿಸಿಕೊಳ್ಳುವ ಸಮಯವು ಅದರ ಕಾನೂನು ಸಂಕೀರ್ಣತೆ ಮತ್ತು ರೋಗಿಯ ದೈಹಿಕ ಶ್ರಮವನ್ನು ನಿರ್ಧರಿಸುತ್ತದೆ. ಅನಗತ್ಯ ಶಸ್ತ್ರಚಿಕಿತ್ಸೆಗಳನ್ನು ತಪ್ಪಿಸಲು ಆರಂಭಿಕ ಹಂತದಲ್ಲೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ ಎಂದು ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಗೀತ್ ಮೊನ್ನಪ್ಪ ಹೇಳುತ್ತಾರೆ.

"ಸಾಧ್ಯವಾದಷ್ಟು ಮಟ್ಟಿಗೆ ಮಹಿಳೆಯರು ಗರ್ಭಧಾರಣೆಯಾದ 12 ವಾರಗಳ ಒಳಗಾಗಿ, ಅಂದರೆ ಆರಂಭಿಕ ಹಂತದಲ್ಲೇ ನಮ್ಮ ಬಳಿಗೆ ಬರಬೇಕೆಂದು ನಾವು ಸಾಮಾನ್ಯವಾಗಿ ಸಲಹೆ ನೀಡುತ್ತೇವೆ. ಕೇವಲ ಮಾತ್ರೆಗಳ ಮೂಲಕವೇ ಗರ್ಭಪಾತ ಮಾಡಲು ಒಂಭತ್ತು ವಾರಗಳ ಒಳಗಿನ ಅವಧಿ ಅತ್ಯಂತ ಸೂಕ್ತವಾಗಿದೆ. ಭಾರತೀಯ ಕಾನೂನಿನ ಪ್ರಕಾರ, ಒಂಭತ್ತು ವಾರಗಳನ್ನು ಮೀರಿದ ಯಾವುದೇ ಗರ್ಭಧಾರಣೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಅಥವಾ ಆಸ್ಪತ್ರೆಯ ಕಟ್ಟುನಿಟ್ಟಿನ ನಿಗಾದಲ್ಲೇ ನಿರ್ವಹಿಸಬೇಕು. ಅಂತಹ ಸಂದರ್ಭದಲ್ಲಿ ರೋಗಿಗೆ ಮಾತ್ರೆಗಳನ್ನು ನೀಡಿ ಮನೆಗೆ ಕಳುಹಿಸಲು ಸಾಧ್ಯವಿಲ್ಲ" ಎಂದು ಡಾ. ಗೀತ್ ಹೇಳಿದ್ದಾರೆ.

MTP ಕಾಯ್ದೆಯಡಿ ಗರ್ಭಪಾತದ ಕಾನೂನು ಮಿತಿಯನ್ನು 20ರಿಂದ 24 ವಾರಗಳಿಗೆ ವಿಸ್ತರಿಸುವುದರ ಹಿಂದಿನ ತರ್ಕವನ್ನು ವಿವರಿಸಿದ ಡಾ. ಗೀತ್, ಭ್ರೂಣದ ನ್ಯೂನತೆಗಳು ತಡವಾಗಿ ಪತ್ತೆಯಾಗುವುದರಿಂದ ಮಹಿಳೆಯರು ಗರ್ಭಾವಸ್ಥೆಯ ಮುಂದಿನ ಹಂತದಲ್ಲಿ ಗರ್ಭಪಾತ ಮಾಡಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಒತ್ತಿ ಹೇಳಿದರು.

"ಹೆಚ್ಚಿನ ಸಂದರ್ಭಗಳಲ್ಲಿ, ಗಂಭೀರವಾದ ನ್ಯೂನತೆಗಳನ್ನು 20 ವಾರಗಳಷ್ಟು ಬೇಗ ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ನಾವು ಸಾಮಾನ್ಯವಾಗಿ 18 ವಾರಗಳ ಆಸುಪಾಸಿನಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡುತ್ತೇವೆ. ಆದರೆ, ವಿಶೇಷವಾಗಿ ಹೃದಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಅಷ್ಟು ಬೇಗ ಕಾಣಿಸಿಕೊಳ್ಳುವುದಿಲ್ಲ. 22 ವಾರಗಳಲ್ಲಿ ಸ್ಕ್ಯಾನ್ ಮಾಡುವುದರಿಂದ ಭ್ರೂಣದ ಬಹುತೇಕ ದೈಹಿಕ ನ್ಯೂನತೆಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕಾಗಿ ವೈದ್ಯಕೀಯ ಮಂಡಳಿಯು ಈ ಮಿತಿಯನ್ನು 24 ವಾರಗಳಿಗೆ ವಿಸ್ತರಿಸಿದೆ" ಎಂದು ಹೇಳಿದ್ದಾರೆ.

ಈ ಪ್ರಗತಿಪರ ಕಾನೂನಿನ ಮೇಲ್ನೋಟದ ಅಡಿಯಲ್ಲಿ ಒಂದು ಮೂಲಭೂತ ರಚನಾತ್ಮಕ ದೋಷವಿದೆ. MTP ಕಾಯ್ದೆಯು ಗರ್ಭಪಾತವನ್ನು ಮಹಿಳೆಯರ ಸಂಪೂರ್ಣ ಹಕ್ಕು ಎಂದು ಪರಿಗಣಿಸುವುದಿಲ್ಲ. ಬದಲಾಗಿ, ನೋಂದಾಯಿತ ವೈದ್ಯರ ವಿವೇಚನೆಯ ಮೇರೆಗೆ ಮಾತ್ರ ನೀಡಬಹುದಾದ ಕ್ರಿಮಿನಲ್ ಕಾನೂನಿನ ಒಂದು ವಿನಾಯಿತಿಯಾಗಿ ನೋಡುತ್ತದೆ.

ಮೂಲಭೂತವಾಗಿ, ಭಾರತೀಯ ಅಪರಾಧ ಕಾನೂನು ಗರ್ಭಪಾತವನ್ನು ಮೊದಲು ಅಪರಾಧವೆಂದೂ, ನಂತರವಷ್ಟೇ ಆರೋಗ್ಯ ಸೇವೆಯೆಂದೂ ಪರಿಗಣಿಸುತ್ತದೆ. ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ, ಮಹಿಳೆಯ ಜೀವ ಉಳಿಸಲು "ಸದುದ್ದೇಶದಿಂದ" ಮಾಡದ ಹೊರತು, ಗರ್ಭಪಾತ ಮಾಡಿಸುವುದು ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾದ ಶಿಕ್ಷಾರ್ಹ ಅಪರಾಧವಾಗಿದೆ.

ವೈಯಕ್ತಿಕ ಪೂರ್ವಾಗ್ರಹಗಳನ್ನು ಹೊರತುಪಡಿಸಿ, ಕಾನೂನಿನ ಈ ಅಪರಾಧಿ ದೃಷ್ಟಿಕೋನವೂ ಸಹ ವೈದ್ಯರು 'ರಕ್ಷಣಾತ್ಮಕ ವೈದ್ಯಕೀಯ ಪದ್ಧತಿ'ಯನ್ನು (ಡಿಫೆನ್ಸಿವ್ ಮೆಡಿಸಿನ್) ಅನುಸರಿಸಲು ಕಾರಣವಾಗಿದೆ. ಇಲ್ಲಿ ವೈದ್ಯರು ರೋಗಿಗೆ ಸಕಾಲಿಕ ಚಿಕಿತ್ಸೆ ನೀಡುವುದಕ್ಕಿಂತ ಹೆಚ್ಚಾಗಿ, ಕಾನೂನು ಹೊಣೆಗಾರಿಕೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಇದು ಅವರನ್ನು ಅನುಮಾನಾಸ್ಪದ ಕಾನೂನು ಕಾವಲುಗಾರರನ್ನಾಗಿ ಬದಲಾಯಿಸಿದ್ದು, ತಮ್ಮ ಸುರಕ್ಷತೆಗಾಗಿ ಅನಗತ್ಯ ದಾಖಲೆಗಳು ಮತ್ತು ಕುಟುಂಬದ ಒಪ್ಪಿಗೆಯನ್ನು ಕೇಳುವಂತೆ ಮಾಡುತ್ತದೆ.

ಈ ಚೌಕಟ್ಟಿನೊಳಗೆ, MTP ಕಾಯ್ದೆಯು ಮಹಿಳೆಯರಿಗೆ ಗರ್ಭಪಾತವನ್ನು ಕಾನೂನುಬದ್ಧಗೊಳಿಸುವುದಿಲ್ಲ, ಬದಲಾಗಿ ವೈದ್ಯರನ್ನು ಕ್ರಿಮಿನಲ್ ಮೊಕದ್ದಮೆಗಳಿಂದ ರಕ್ಷಿಸುತ್ತದೆ ಅಷ್ಟೇ. ಆದರೆ ಆ ರಕ್ಷಣೆ ಸಿಗುವುದು ವೈದ್ಯರು ಪ್ರತಿಯೊಂದು ಕಟ್ಟುನಿಟ್ಟಾದ ಆಡಳಿತಾತ್ಮಕ ನಿಯಮ ಮತ್ತು ಗರ್ಭಾವಸ್ಥೆಯ ಮಿತಿಯನ್ನು ಪಾಲಿಸಿದಾಗ ಮಾತ್ರ. ದಾಖಲೆಗಳಲ್ಲಿ ವೈದ್ಯರು ಸಣ್ಣ ತಪ್ಪು ಮಾಡಿದರೂ ಅವರು ಪೊಲೀಸ್ ತನಿಖೆಯನ್ನು ಎದುರಿಸಬೇಕಾಗುತ್ತದೆ.

ಮಹಿಳೆಯರನ್ನು ರಕ್ಷಿಸಬೇಕಾದ ಈ ಕಾನೂನಿನ ಬಲೆಯೊಳಗೆ ಸಿಲುಕಿ ನಿಜವಾದ ಮಹಿಳೆಯರ ಬದುಕು ನಾಶವಾಗುತ್ತಿದೆ.

ಕೊಚ್ಚಿಯ ಉದ್ಯೋಗಸ್ಥ ಮಹಿಳೆ ಅಂಜಲಿ (ಹೆಸರು ಬದಲಾಯಿಸಲಾಗಿದೆ) ಅವರಿಗೆ, ಆರು ವಾರಗಳ ಗರ್ಭವನ್ನು ತೆಗೆಸಿಕೊಳ್ಳುವ ಪ್ರಯತ್ನವು ಹಲವಾರು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಅನೈತಿಕ ಆರೋಪಗಳ ಸುರಿಮಳೆಯಾಗಿ ಬದಲಾಯಿತು. ಸಾಮಾನ್ಯ ಸರ್ಕಾರಿ ವೈದ್ಯಕೀಯ ಸೇವೆಯ ನಿರೀಕ್ಷೆಯಲ್ಲಿ ಅವರು ಕೊಚ್ಚಿಯ ಪ್ರಮುಖ ಸರ್ಕಾರಿ ಆಸ್ಪತ್ರೆಯೊಂದಕ್ಕೆ ಹೋದಾಗ, ಅಲ್ಲಿದ್ದ ಹಿರಿಯ ವೈದ್ಯರು ಅವರ ವೈದ್ಯಕೀಯ ದಾಖಲೆಗಳನ್ನು ಮೇಜಿನ ಮೇಲೆ ಎಸೆದು, ಸಿಬ್ಬಂದಿಯ ಎದುರೇ ಅವರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. "ಅವರು ನನ್ನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, 'ನೀನು ಎಷ್ಟು ಕ್ರೂರಿ! ಕೊಲೆ ಮಾಡಲು ನಮ್ಮನ್ನು ಬಳಸಿಕೊಳ್ಳುತ್ತಿದ್ದೀಯಾ?' ಎಂದು ಕೇಳಿದರು" ಎಂದು ಅಂಜಲಿ ನೆನಪಿಸಿಕೊಂಡರು.

"ಅವರು 'ಕೊಲೆ' ಎಂಬ ಪದ ಬಳಸಿದಾಗ ನನಗೆ ತೀವ್ರ ಆಘಾತವಾಯಿತು," ಎಂದು ಅಂಜಲಿ ಹೇಳಿದರು. ಅದು ಇನ್ನೂ ಬೆಳೆದ ಭ್ರೂಣವಲ್ಲ, ಕೇವಲ ಜೀವಕೋಶಗಳ ಗುಂಪು ಎಂದು ಅವರು ಉತ್ತರಿಸಿದ್ದರು. ಇದಕ್ಕೆ ಪ್ರತಿಯಾಗಿ ವೈದ್ಯರು, "ನಿನ್ನ ತಾಯಿ ನಿನಗೂ ಹೀಗೆಯೇ ಮಾಡಿದ್ದರೆ ಏನಾಗುತ್ತಿತ್ತು?" ಎಂದು ಪ್ರಶ್ನಿಸಿದರು ಎನ್ನಲಾಗಿದೆ.

"ನನ್ನ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಮತ್ತು ನನಗೆ ಈಗಷ್ಟೇ ಹೊಸ ಕೆಲಸ ಸಿಕ್ಕಿರುವ ಬಗ್ಗೆ ವಿವರಿಸಿದಾಗ, ಅವರು ಧರ್ಮದ ಹೆಸರು ಎಳೆದು ತಂದು, ದೇವರು ನನಗೆ ಶಿಕ್ಷೆ ನೀಡುತ್ತಾನೆ ಎಂದು ಹೇಳಿದರು." ನಂತರ ಆಸ್ಪತ್ರೆಯವರು ಪತಿ ಮತ್ತು ಕುಟುಂಬ ಸದಸ್ಯರನ್ನು ಕರೆತರುವಂತೆ ಒತ್ತಾಯಿಸಿ, "ಖಾಸಗಿ ಆಸ್ಪತ್ರೆಗಳಲ್ಲಿ ನಿಮಗೆ ಬೇಕಾದ್ದನ್ನು ಮಾಡಿಕೊಳ್ಳಿ!" ಎಂದು ಹೇಳಿದರು ಎಂಬ ಆರೋಪವಿದೆ.

►ಸಾಂಸ್ಥಿಕ ದೌರ್ಜನ್ಯ ಮತ್ತು ಅನೈತಿಕ ಪೊಲೀಸ್‌ ಗಿರಿ

ವಾಸ್ತವದಲ್ಲಿ, ವೈದ್ಯಕೀಯ ಗರ್ಭಪಾತ ಕಾಯ್ದೆಯ (MTP Act) ಪ್ರಗತಿಪರ ಭರವಸೆಗಳು ಆಸ್ಪತ್ರೆಗಳ ಭಯ, ರಕ್ಷಣಾತ್ಮಕ ವೈದ್ಯಕೀಯ ಪದ್ಧತಿ ಮತ್ತು ವ್ಯಾಪಕ ಅನೈತಿಕ ಪೊಲೀಸ್‌ ಗಿರಿಗಳ ಅಡೆತಡೆಗಳ ಮುಂದೆ ಮಂಕಾಗುತ್ತಿವೆ.

ಸತ್ತ ಭ್ರೂಣವನ್ನು ಸಣ್ಣ ಗಂಟಿನಲ್ಲಿ ಕೈಗಿಡಲ್ಪಟ್ಟ ಬೆಂಗಳೂರಿನ ಮಹಿಳೆ ದಿವ್ಯಾ ಅವರಿಗೆ, ಸಾಮಾನ್ಯ ವೈದ್ಯಕೀಯ ಚಿಕಿತ್ಸೆ ಪಡೆಯುವುದೇ ಸಾರ್ವಜನಿಕ ಅವಮಾನ ಮತ್ತು ಸಾಂಸ್ಥಿಕ ದೌರ್ಜನ್ಯದ ಹಾದಿಯಾಗಿ ಪರಿಣಮಿಸಿತ್ತು. "ನಿನಗೆ ನಿನ್ನ ಆಸೆಗಳನ್ನು ನಿಯಂತ್ರಿಸಿಕೊಳ್ಳಲು ಆಗದಿದ್ದರೆ, ಬೇರೆ ಯಾವುದಾದರೂ ಕೆಲಸಕ್ಕೆ ಹೋಗಬಾರದೇಕೆ?" ಎಂದು ಅವರು ಭೇಟಿಯಾದ ಮೊದಲ ವೈದ್ಯರು ಕಿರುಚಾಡಿದ್ದರು ಎನ್ನಲಾಗಿದೆ.

"ನಮ್ಮ ದೇಹದ ಬಗ್ಗೆ ನಾವೇ ಒಂದು ನಿರ್ಧಾರ ತೆಗೆದುಕೊಳ್ಳಲು, ಅಂದರೆ 'ನನಗೆ ಈಗ ಇದು ಬೇಡ' ಎಂದು ಹೇಳಿದರೆ, ವೈದ್ಯರು ಸಾಮಾನ್ಯವಾಗಿ 'ನಿನ್ನ ತಂದೆಯನ್ನು ಕರೆದುಕೊಂಡು ಬಾ, ತಾಯಿಯನ್ನು ಕರೆದುಕೊಂಡು ಬಾ, ಗಂಡನನ್ನು ಕರೆದುಕೊಂಡು ಬಾ' ಎನ್ನುತ್ತಾರೆ. ನಮ್ಮ ಪರಿಸ್ಥಿತಿಯ ಬಗ್ಗೆ ಮಾತನಾಡಲು ಅವರು ಅವಕಾಶವನ್ನೇ ನೀಡುವುದಿಲ್ಲ" ಎಂದು ದಿವ್ಯಾ ಹೇಳಿದ್ದಾರೆ.

"ನನ್ನ ಬಗ್ಗೆಯಾಗಲಿ ಅಥವಾ ಹುಟ್ಟಲಿರುವ ಮಗುವಿನ ಬಗ್ಗೆಯಾಗಲಿ ಯೋಚಿಸುವ ಬದಲು, 'ನೀನು ಏಕೆ ತಪ್ಪು ಮಾಡಿದೆ? ತಪ್ಪು ಮಾಡುವಾಗ ಚೆನ್ನಾಗಿತ್ತಾ?' ಎಂದು ಪ್ರಶ್ನಿಸುತ್ತಾರೆ. ಒಬ್ಬ ಮಹಿಳೆ ಹೋದಾಗ ಅವಳು ಏಕೆ ತಪ್ಪು ಮಾಡಿದಳು ಎಂದು ಕೇಳುತ್ತಾರೆ, ಅದೇ ಒಬ್ಬ ಪುರುಷ ಅಲ್ಲಿದ್ದರೆ ಅವನಿಗೆ ಆ ಪ್ರಶ್ನೆಯನ್ನು ಕೇಳುವುದಿಲ್ಲ" ಅಂತಾರೆ ದಿವ್ಯಾ.

ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ನ ಸಹಾಯಕ ಪ್ರಾಧ್ಯಾಪಕಿ ಹಾಗೂ ಆರೋಗ್ಯ ಹಕ್ಕುಗಳ ಕಾರ್ಯಕರ್ತೆ ಡಾ. ಮಾಳು ಮೋಹನ್ ಅವರು ತಮ್ಮ ವೈಯಕ್ತಿಕ ಸಂಪರ್ಕಗಳ ಮೂಲಕ ಮಧ್ಯಪ್ರವೇಶಿಸುವ ಹೊತ್ತಿಗೆ, ದಿವ್ಯಾ ಅವರಿಗೆ ಸುಮಾರು 24 ವಾರಗಳ ಗರ್ಭವಾಗಿತ್ತು. ಇದರಿಂದ ಆರಂಭಿಕ ಹಂತದ ಗರ್ಭಪಾತದ ಆಯ್ಕೆಗಳ ಸಮಯ ಮೀರಿಹೋಗಿತ್ತು.

ಗರ್ಭಧಾರಣೆಯ 12 ವಾರಗಳವರೆಗೆ, ಎರಡು ಮಾತ್ರೆಗಳ ವಿಧಾನವನ್ನು ಬಳಸಿ ಮನೆಯಲ್ಲಿಯೇ ಸುರಕ್ಷಿತವಾಗಿ ಗರ್ಭಪಾತ ಮಾಡಿಸಿಕೊಳ್ಳಬಹುದು: ಮೊದಲು ಪ್ರೊಜೆಸ್ಟರಾನ್ ಹಾರ್ಮೋನ್ ತಡೆಯಲು ಮತ್ತು ಗರ್ಭಕೋಶದ ಒಳಪದರವನ್ನು ಬೇರ್ಪಡಿಸಲು 'ಮಿಫೆಪ್ರಿಸ್ಟೋನ್' (Mifepristone) ನೀಡಲಾಗುತ್ತದೆ, ನಂತರ ಗರ್ಭಕೋಶ ಸಂಕುಚಿತಗೊಂಡು ತೀವ್ರ ಮುಟ್ಟಿನ ರೀತಿಯಲ್ಲಿ ಅಂಗಾಂಶಗಳು ಹೊರಹೋಗಲು 'ಮಿಸೊಪ್ರೊಸ್ಟಾಲ್' (Misoprostol) ಮಾತ್ರೆ ನೀಡಲಾಗುತ್ತದೆ.

"ಈ ಔಷಧಿಗಳು ಗರ್ಭಕೋಶದಲ್ಲಿ ಬಲವಾದ ಸೆಳೆತವನ್ನು ಉಂಟುಮಾಡುತ್ತವೆ ಮತ್ತು ಗರ್ಭಕೋಶದ ದ್ವಾರವನ್ನು ತೆರೆಯುತ್ತವೆ, ಇದರಿಂದ ಒಳಗಿನ ಅಂಶಗಳು ಹೊರಬರುತ್ತವೆ. ಇದು ಮೂಲತಃ ನೋವು ಮತ್ತು ಸೆಳೆತವನ್ನು ಪ್ರಚೋದಿಸುವ ಔಷಧಿಗಳ ಮೂಲಕ ಗರ್ಭಪಾತ ಮಾಡಿಸುವ ವಿಧಾನವಾಗಿದೆ" ಎಂದು ಡಾ. ಗೀತ್ ವಿವರಿಸಿದ್ದಾರೆ.

12ರಿಂದ 14 ವಾರಗಳ ನಡುವಿನ ಗರ್ಭಪಾತಕ್ಕೆ ಡಿ ಆ್ಯಂಡ್ ಸಿ (D&C - Dilation and Curettage) ಎಂಬ ಸಣ್ಣ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಇದರಲ್ಲಿ ಗರ್ಭಕಂಠವನ್ನು ಹಿಗ್ಗಿಸಿ, ಗರ್ಭಕೋಶದ ಒಳಪದರವನ್ನು ಮೃದುವಾಗಿ ಕೆರೆದು ಅಥವಾ ಹೀರಿ ಹೊರತೆಗೆಯುವ ಮೂಲಕ (Suction) ಅಂಗಾಂಶಗಳನ್ನು ತೆಗೆದು ಗರ್ಭಕೋಶವನ್ನು ಸ್ವಚ್ಛಗೊಳಿಸಲಾಗುತ್ತದೆ.

ವೈದ್ಯಕೀಯ ಗರ್ಭಪಾತ ವಿಧಾನಗಳ ಬಗ್ಗೆ ಇರುವ ವ್ಯಾಪಕ ಭಯ ಮತ್ತು ಗೊಂದಲಗಳನ್ನು ನಿವಾರಿಸುತ್ತಾ, ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಪಾತ ಮಾಡುವುದಕ್ಕೂ ಮತ್ತು ಔಷಧಿಗಳ ಮೂಲಕ ಗರ್ಭಪಾತ ಮಾಡುವುದಕ್ಕೂ ಇರುವ ವ್ಯತ್ಯಾಸವನ್ನು ಡಾ. ಗೀತ್ ವಿವರಿಸಿದ್ದಾರೆ.

"ಆರಂಭಿಕ ಹಂತದ ಶಸ್ತ್ರಚಿಕಿತ್ಸಾ ವಿಧಾನಗಳು ಹೆರಿಗೆಗಿಂತ ತೀರಾ ಭಿನ್ನವಾಗಿರುತ್ತವೆ" ಎಂದಿರುವ ಡಾ. ಗೀತ್, "ಒಂಭತ್ತು ವಾರಗಳ ನಂತರ ಮಾಡಿದರೆ, ಅದು 'ಸಕ್ಷನ್ ಇವಾಕ್ಯುಯೇಷನ್' (Suction evacuation) ಎಂಬ ಸಣ್ಣ ಪ್ರಕ್ರಿಯೆಯಾಗಿರುತ್ತದೆ. ಇದನ್ನು ಆಪರೇಷನ್ ಥಿಯೇಟರ್ ನಲ್ಲಿ ಅಲ್ಪಾವಧಿಯ ಅರಿವಳಿಕೆ (Anesthesia) ನೀಡಿ ಮಾಡಲಾಗುತ್ತದೆ. ಇದಕ್ಕೆ ಸುಮಾರು ಅರ್ಧ ಗಂಟೆ ಸಮಯ ಹಿಡಿಯುತ್ತದೆ ಮತ್ತು ರೋಗಿಯು ಅದೇ ದಿನ ಮನೆಗೆ ಹೋಗಬಹುದು" ಎಂದು ತಿಳಿಸಿದ್ದಾರೆ.

24 ವಾರಗಳ ವೇಳೆಗೆ ಭ್ರೂಣ ಮತ್ತು ಜರಾಯು (Placenta) ಸಂಪೂರ್ಣವಾಗಿ ಬೆಳೆದಿರುತ್ತವೆ. ಹೀಗಾಗಿ ಸಕ್ಷನ್ ಇವಾಕ್ಯುಯೇಷನ್ (ಗರ್ಭಕೋಶದಲ್ಲಿರುವುದನ್ನು ಹೊರತೆಗೆಯಲು ಮೃದುವಾಗಿ ಹೀರುವ ಸಾಮಾನ್ಯ ಮತ್ತು ಸುರಕ್ಷಿತ ವಿಧಾನ) ವೈದ್ಯಕೀಯವಾಗಿ ಸಾಧ್ಯವಾಗುವುದಿಲ್ಲ. ಆಗ ಉಳಿದಿರುವ ಏಕೈಕ ವೈದ್ಯಕೀಯ ಆಯ್ಕೆಯೆಂದರೆ ಹೆರಿಗೆ ನೋವು ಪ್ರಚೋದಿಸಿ ಗರ್ಭಪಾತ ಮಾಡಿಸುವುದು (Labour-induction abortion). ಈ ಪ್ರಕ್ರಿಯೆಯು ಪೂರ್ಣಾವಧಿಯ ಹೆರಿಗೆಯಂತೆಯೇ ಇರುತ್ತದೆ. ಇದರಲ್ಲಿ ಗರ್ಭಕಂಠ ಹಿಗ್ಗುವಂತೆ ಮಾಡಲು ಹೆಚ್ಚಿನ ಪ್ರಮಾಣದ ಹಾರ್ಮೋನ್ ಗಳನ್ನು ನೀಡಲಾಗುತ್ತದೆ ಮತ್ತು ಭ್ರೂಣ ಹೊರಬರುವವರೆಗೆ ಗಂಟೆಗಳ ಕಾಲ ತೀವ್ರವಾದ ಗರ್ಭಕೋಶದ ಸೆಳೆತ (ಹೆರಿಗೆ ನೋವು) ಉಂಟಾಗುತ್ತದೆ. ಇದಕ್ಕೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗುವುದು, ತೀವ್ರ ನೋವು ನಿವಾರಣೆಗೆ ಎಪಿಡ್ಯೂರಲ್ (Epidural) ಅಥವಾ ನೋವು ನಿವಾರಕಗಳನ್ನು ನೀಡುವುದು ಹಾಗೂ ನಿರಂತರ ವೈದ್ಯಕೀಯ ನೆರವಿನ ಅಗತ್ಯವಿರುತ್ತದೆ.

24 ವಾರಗಳ ಗರ್ಭಾವಸ್ಥೆಯನ್ನು ತಲುಪಿದ್ದ ದಿವ್ಯಾ ಅವರಿಗೆ, ಅನೇಕ ವೈದ್ಯರು ಮುಂದೂಡಲು ಬಯಸುತ್ತಿದ್ದ ಈ ಸಂಕೀರ್ಣ ಮತ್ತು ಅಪಾಯಕಾರಿ ಪ್ರಕ್ರಿಯೆಯನ್ನು ಎದುರಿಸುವ ಅನಿವಾರ್ಯತೆ ಎದುರಾಯಿತು. ಗರ್ಭಪಾತ ಮಾಡಿಸಲು ಖಾಸಗಿ ಆಸ್ಪತ್ರೆಗಳು ಅವರಿಂದ 50,000ರಿಂದ 1,00,000 ರೂಪಾಯಿವರೆಗೆ ಹಣ ಕೇಳಿದ್ದವು.

ವೈದ್ಯಕೀಯ ಗರ್ಭಪಾತ ಕಾಯ್ದೆಯಡಿ (MTP Act) ತಡವಾದ ಗರ್ಭಪಾತಕ್ಕೆ ಅಗತ್ಯವಿರುವ ಎರಡು ಅಧಿಕೃತ ವೈದ್ಯಕೀಯ ಅನುಮತಿಗಳನ್ನು ಸರ್ಕಾರಿ ಆಸ್ಪತ್ರೆಯ ಸಹಾನುಭೂತಿಯುಳ್ಳ ಹಿರಿಯ ವೈದ್ಯರೊಬ್ಬರಿಂದ ಪಡೆಯುವಲ್ಲಿ ಡಾ. ಮಾಳು ಯಶಸ್ವಿಯಾದರು. "ಪ್ರಾಥಮಿಕ ರಕ್ತ ಪರೀಕ್ಷೆಗಾಗಿ ದಿವ್ಯಾ ಬಂದಾಗ ವೈದ್ಯರು ತಮ್ಮ ರೌಂಡ್ಸ್ ಮುಗಿಸಿ ಹೋಗಿದ್ದರು. ಆಗ ನರ್ಸಿಂಗ್ ಸಿಬ್ಬಂದಿ ದಿವ್ಯಾ ಅವರನ್ನು ಕಿರಿಯ ಪುರುಷ ವೈದ್ಯರು ನಡೆಸುತ್ತಿದ್ದ ಜನನಿಬಿಡ ಹೊರರೋಗಿ ವಿಭಾಗಕ್ಕೆ (OPD) ತಳ್ಳಿದರು" ಎಂದು ಅವರು ಹೇಳಿದ್ದಾರೆ.

ಹತ್ತಾರು ಜನರ ಎದುರಲ್ಲೇ ಸಿಬ್ಬಂದಿ ದಿವ್ಯಾ ಮತ್ತು ಅವರ ಮಗನನ್ನು ಹೀಯಾಳಿಸಿದರು ಎನ್ನಲಾಗಿದೆ. ಮನೆಯಲ್ಲಿ ಸುರಕ್ಷಿತ ವಾತಾವರಣ ಇಲ್ಲದ ಕಾರಣ ಮಗನನ್ನು ಜೊತೆಗೆ ಕರೆತರಲಾಗಿತ್ತು. ಗರ್ಭಿಣಿಯಾಗುವ ಮುನ್ನ "ನಿನ್ನ ಮಗುವಿನ ಮುಖವನ್ನಾದರೂ ನೋಡಬೇಕೆಂದು ನಿನಗೆ ಅನಿಸಲಿಲ್ಲವೇ?" ಎಂದು ಸಿಬ್ಬಂದಿ ಪ್ರಶ್ನಿಸಿ ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕೊನೆಗೆ ತಾವು ಇಂಗ್ಲಿಷ್ ನಲ್ಲಿ ಮಾತನಾಡಿದಾಗಲೇ ಸಿಬ್ಬಂದಿ ಹಿಂದೆ ಸರಿದರು ಎಂದು ಡಾ. ಮಾಳು ಹೇಳಿದ್ದಾರೆ. "ನನಗೆ ಕನ್ನಡ ಬರುವುದಿಲ್ಲ. ನಾನು ಇಂಗ್ಲಿಷ್ ನಲ್ಲಿ ಮಾತನಾಡುವುದನ್ನು ಕೇಳಿದ ತಕ್ಷಣ ಅವರು ಹಿಂದೆ ಸರಿದು ತಮ್ಮ ವ್ಯಂಗ್ಯದ ಮಾತುಗಳನ್ನು ನಿಲ್ಲಿಸಿದರು. ಇಂತಹ ಸ್ಥಳಗಳಲ್ಲಿ ಇಂಗ್ಲಿಷ್ ಭಾಷೆಗೆ ಒಂದು ರೀತಿಯ ಅಧಿಕಾರ ಮತ್ತು ಮೇಲ್ವರ್ಗದ ಗೌರವ ಇರುತ್ತದೆ. 'ಓಹ್, ಇವರಿಗೆ ಹಿರಿಯ ವೈದ್ಯರ ಶಿಫಾರಸು ಇದೆ ಎಂದು ನಮಗೆ ತಿಳಿದಿರಲಿಲ್ಲ, ಬರೀ ಬೇರೆ ವೈದ್ಯರ ಶಿಫಾರಸು ಇರಬಹುದು ಎಂದುಕೊಂಡಿದ್ದೆವು' ಎಂದು ಅವರು ಹೇಳಲು ಶುರುಮಾಡಿದರು. ನನಗಿದ್ದ ಆ ಸವಲತ್ತಿನೊಂದಿಗೆ ಮಧ್ಯಪ್ರವೇಶಿಸಲು ಸಾಧ್ಯವಾದ್ದರಿಂದಲೇ ಕೊನೆಗೂ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಅವರು ಒಪ್ಪಿದರು" ಎಂದು ಅವರು ನೆನಪಿಸಿಕೊಂಡಿದ್ದಾರೆ.

ನಂತರ ಹೆರಿಗೆ ನೋವು ಪ್ರಚೋದಿಸುವ ಪ್ರಕ್ರಿಯೆ ಆರಂಭವಾಯಿತು. ಹಿರಿಯ ವೈದ್ಯರು ಆ ವಾರ್ಡ್ನಿಂದ ಹೊರಹೋದ ತಕ್ಷಣ, ಕಿರಿಯ ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ನರ್ಸ್ಗಳು ದಿವ್ಯಾ ಅವರೊಂದಿಗೆ ಕೆಟ್ಟದಾಗಿ ವರ್ತಿಸಲು ಶುರುಮಾಡಿದರು ಎನ್ನಲಾಗಿದೆ. ನೋವು ನಿವಾರಕಗಳಿಲ್ಲದೆ 11 ಗಂಟೆಗಳ ಕಾಲ ತೀವ್ರ ಹೆರಿಗೆ ನೋವಿನಿಂದ ದಿವ್ಯಾ ನರಳುತ್ತಿದ್ದಾಗ, ಸಿಬ್ಬಂದಿ ಅವರನ್ನು ನಿರಂತರವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಆರೋಪಿಸಲಾಗಿದೆ.

ಹೆರಿಗೆ ನೋವು ಪ್ರಚೋದಿಸುವ ಔಷಧಿಗಳು ಕೆಲಸ ಮಾಡಲು ಶುರುಮಾಡಿ ಹೆರಿಗೆ ನೋವು ಆರಂಭವಾದಾಗ, ಸಿಬ್ಬಂದಿ ಉದ್ದೇಶಪೂರ್ವಕವಾಗಿಯೇ ಪ್ರಾಥಮಿಕ ವೈದ್ಯಕೀಯ ಆರೈಕೆಯನ್ನು ನೀಡಲಿಲ್ಲ ಎನ್ನಲಾಗಿದೆ. ನೋವು ಹೆಚ್ಚಾದಂತೆ, ನರ್ಸ್ಗಳು ಮತ್ತು ಕರ್ತವ್ಯದಲ್ಲಿದ್ದ ಕಿರಿಯ ವೈದ್ಯರು ತಮ್ಮ ಚೀರಾಟವನ್ನು ನಿರ್ಲಕ್ಷಿಸಿದರು ಮತ್ತು ಆರೋಗ್ಯ ಸ್ಥಿತಿ ಪರೀಕ್ಷಿಸಲು ಅಥವಾ ಯಾವುದೇ ರೀತಿಯ ನೋವು ನಿವಾರಕ ನೀಡಲು ನಿರಾಕರಿಸಿದರು ಎಂದು ದಿವ್ಯಾ ಹೇಳಿದ್ದಾರೆ. ಬದಲಾಗಿ, ತಾವು ಗಮನಹರಿಸಬೇಕೆಂದು ಆಕೆ ಅಂಗಲಾಚುವವರೆಗೂ ಅವರು ಕಾದರು. ಕೇವಲ ಪರೀಕ್ಷೆ ಮಾಡಿಸಿಕೊಳ್ಳಲೂ ಕಣ್ಣೀರಿಡುತ್ತಾ ಬೇಡಿಕೊಳ್ಳುವಂತೆ ಮಾಡಿದರು. ಅಷ್ಟಾದರೂ ತಮಗೆ ಯಾವುದೇ ನೆರವು ನೀಡಲಿಲ್ಲ ಎಂದು ಅವರು ನೋವು ತೋಡಿಕೊಂಡಿದ್ದಾರೆ.

ಹೆರಿಗೆ ನೋವು ತೀವ್ರಗೊಂಡಂತೆ ಸಿಬ್ಬಂದಿ ತಮ್ಮನ್ನು "ವೇಶ್ಯೆ" ಎಂದು ಕರೆಯುತ್ತಲೇ ಇದ್ದರು ಎಂದು ದಿವ್ಯಾ ನೆನಪಿಸಿಕೊಂಡಿದ್ದಾರೆ. ಮಧ್ಯರಾತ್ರಿ ಹೆರಿಗೆ ಮುಗಿದಾಗ, ತೀವ್ರ ರಕ್ತಸ್ರಾವದಿಂದ ಬಳಲಿ ನಿದ್ರೆಗೆ ಜಾರಿದ್ದ ದಿವ್ಯಾ ಅವರನ್ನು ಅಲುಗಾಡಿಸಿ ಎಬ್ಬಿಸಿ, ಸತ್ತ ಭ್ರೂಣವನ್ನು ಅವರ ಮುಖದ ಮುಂದೆ ಹಿಡಿದರು ಎಂದು ಆರೋಪಿಸಲಾಗಿದೆ.

ದಿವ್ಯಾ ಅವರ ಕುಟುಂಬದವರಿಗೂ ಸಿಬ್ಬಂದಿ ಕಿರುಕುಳ ಮುಂದುವರಿಸಿದರು ಎನ್ನಲಾಗಿದೆ. ದಿವ್ಯಾ ದೊಡ್ಡ ಪಾಪ ಮಾಡಿದ್ದಾಳೆ ಮತ್ತು ಅದರಲ್ಲಿ ನೀನೂ ಭಾಗಿಯಾಗಿದ್ದೀಯಾ ಎಂದು ನಂಬುವಂತೆ ಆಕೆಯ ಸಹೋದರಿಯ ತಲೆಕೆಡಿಸಿದರು. ಇದರಿಂದ ಅಪರಾಧಿ ಭಾವನೆ ಮತ್ತು ಆಯಾಸದಿಂದ ಕಂಗೆಟ್ಟ ಸಹೋದರಿ, ಅಲ್ಲೇ ಹಾಸಿಗೆಯಲ್ಲಿ ನಿತ್ರಾಣರಾಗಿ ಮಲಗಿದ್ದ ದಿವ್ಯಾ ಅವರ ಕೆನ್ನೆಗೆ ಬಾರಿಸಿದರು. ಆ ನಂತರವಷ್ಟೇ ಚಿಕಿತ್ಸೆ ನೀಡುತ್ತಿದ್ದ ವೈದ್ಯಕೀಯ ತಂಡ ತೃಪ್ತಿಪಟ್ಟುಕೊಂಡು ಹಿಂದೆ ಸರಿಯಿತು ಎಂದು ದಿವ್ಯಾ ಹೇಳಿದ್ದಾರೆ.

ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ನಡೆದ ಘಟನೆಯು ಆಕೆಗೆ ನೀಡಲಾದ 'ಶಿಕ್ಷೆಯ' ಕೊನೆಯ ಮತ್ತು ಅತ್ಯಂತ ಭೀಕರ ಭಾಗವಾಗಿತ್ತು.

ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ನಿಯಮಗಳು, 2016ರ ಪ್ರಕಾರ, ಆರಂಭಿಕ ಹಂತದ ವೈದ್ಯಕೀಯ ಗರ್ಭಪಾತದಿಂದ (12 ವಾರಗಳ ಒಳಗಿನ) ಬರುವ ಭ್ರೂಣದ ಅಂಗಾಂಶ ಮತ್ತು ಅವಶೇಷಗಳನ್ನು ಕಾನೂನುಬದ್ಧವಾಗಿ ಜೈವಿಕ ವೈದ್ಯಕೀಯ ತ್ಯಾಜ್ಯವೆಂದು ವರ್ಗೀಕರಿಸಲಾಗಿದೆ. ಇವುಗಳನ್ನು ನೋಂದಾಯಿತ ಕೇಂದ್ರಗಳಲ್ಲಿ ವಿಶೇಷ ಹಳದಿ ಅಥವಾ ಕೆಂಪು ಬಣ್ಣದ ಡಬ್ಬಿಗಳಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ.

ಒಮ್ಮೆ ಗರ್ಭಧಾರಣೆಯು 12 ವಾರಗಳನ್ನು ದಾಟಿದರೆ, ಭ್ರೂಣದ ಅವಶೇಷಗಳ ವಿಲೇವಾರಿಗೆ ಕಟ್ಟುನಿಟ್ಟಾದ ನಿಯಮಗಳಿವೆ. ಅಕ್ರಮವಾಗಿ ಭ್ರೂಣವನ್ನು ಬಚ್ಚಿಡುವುದು ಅಥವಾ ಭ್ರೂಣಹತ್ಯೆಯಂತಹ ಪ್ರಕರಣಗಳನ್ನು ತಡೆಯಲು, ಅವಶೇಷಗಳನ್ನು ಸರಿಯಾಗಿ ಸೀಲ್ ಮಾಡಿ, ಲೇಬಲ್ ಹಚ್ಚಿ, ದಾಖಲಾತಿ ಪುಸ್ತಕದಲ್ಲಿ ವಿವರವಾಗಿ ನಮೂದಿಸಬೇಕು ಮತ್ತು ಸ್ಥಳೀಯ ಅಧಿಕಾರಿಗಳು ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕಾಗುತ್ತದೆ.

ವೈದ್ಯಕೀಯ-ಕಾನೂನು (Medico-legal) ಅಥವಾ ಅಪ್ರಾಪ್ತ ವಯಸ್ಕರ ಪ್ರಕರಣಗಳಲ್ಲಿ, ವಿಧಿವಿಜ್ಞಾನ ಪ್ರಯೋಗಾಲಯಗಳು (FSL) ಮತ್ತು ಡಿಎನ್ಎ ಪರೀಕ್ಷೆಗಾಗಿ ಜೈವಿಕ ಅಂಗಾಂಶ ಅಥವಾ ಗರ್ಭಧಾರಣೆಯ ಅಂಶಗಳನ್ನು ಸುರಕ್ಷಿತವಾಗಿ ಕಾಯ್ದಿಡಲು ಕಟ್ಟುನಿಟ್ಟಾದ ನಿಯಮಗಳಿವೆ. ಯಾವುದೇ ಹಂತದಲ್ಲಿ ಅನಧಿಕೃತವಾಗಿ ಅಥವಾ ನಿಯಮಬಾಹಿರವಾಗಿ ಅವುಗಳನ್ನು ವಿಲೇವಾರಿ ಮಾಡುವುದು ಭಾರತೀಯ ನ್ಯಾಯ ಸಂಹಿತೆಯಡಿ (BNS) ಕಠಿಣ ಶಿಕ್ಷಾರ್ಹ ಅಪರಾಧವಾಗಿದೆ.

ದಿವ್ಯಾ ಅವರ ಗರ್ಭಪಾತವು ಸುಮಾರು 24 ವಾರಗಳಲ್ಲಿ ನಡೆದಿದ್ದರಿಂದ, ನಗರಸಭೆಯ ಜನನ ಮತ್ತು ಮರಣ ನೋಂದಣಿ ಕಾನೂನುಗಳ ಪ್ರಕಾರ ಆ ಭ್ರೂಣವನ್ನು ಸಾಮಾನ್ಯ ವೈದ್ಯಕೀಯ ತ್ಯಾಜ್ಯವೆಂದು ಪರಿಗಣಿಸದೆ, 'ತಡವಾದ ಅವಧಿಯ ಮೃತ ಶಿಶು ಜನನ' (Late-stage stillbirth) ಎಂದು ವರ್ಗೀಕರಿಸಲಾಯಿತು. ಆಸ್ಪತ್ರೆಯಿಂದ ಅಂತಿಮ ಬಿಡುಗಡೆ ಪತ್ರ (Medical clearance) ನೀಡುವ ಮೊದಲು, ಮೃತ ಭ್ರೂಣವನ್ನು ವಿಲೇವಾರಿ ಮಾಡಿ ಅಧಿಕೃತ ಮರಣ ಪ್ರಮಾಣಪತ್ರವನ್ನು ಸಾಕ್ಷಿಯಾಗಿ ತರುವಂತೆ ದಿವ್ಯಾ ಅವರಿಗೆ ಸೂಚಿಸಲಾಯಿತು.

ದಿವ್ಯಾ ಮತ್ತು ಅವರ ಸಹೋದರಿ ಆಸ್ಪತ್ರೆಯಿಂದ ಹೊರಬಂದು ಆಟೋರಿಕ್ಷಾಗಳನ್ನು ನಿಲ್ಲಿಸಲು ಪ್ರಯತ್ನಿಸಿದಾಗ, ಒಬ್ಬರ ಹಿಂದೆ ಒಬ್ಬರಂತೆ ಚಾಲಕರು ನಿಲ್ಲಿಸದೆ ವೇಗವಾಗಿ ಹೊರಟುಹೋದರು. ಸಾವಿನ ಸುತ್ತ ಇರುವ ಆಳವಾದ ಮೂಢನಂಬಿಕೆಗಳು, ದಾಖಲೆಗಳಿಲ್ಲದ ಮೃತದೇಹವನ್ನು ಸಾಗಿಸುವಾಗ ಪೊಲೀಸರು ತಡೆದು ನಿಲ್ಲಿಸಬಹುದೆಂಬ ಭಯ, ಮತ್ತು ಅವಿವಾಹಿತ ಅಥವಾ ಬೆಂಬಲವಿಲ್ಲದ ಗರ್ಭಧಾರಣೆಗೆ ಇರುವ ತೀವ್ರ ಸಾಮಾಜಿಕ ಕಳಂಕದ ಕಾರಣದಿಂದ ಆಟೋ ಚಾಲಕರು ಭ್ರೂಣದ ಅವಶೇಷಗಳನ್ನು ಸಾಗಿಸಲು ನಿರಾಕರಿಸುತ್ತಾರೆ ಎಂದು ಆರೋಗ್ಯ ಹಕ್ಕುಗಳ ಕಾರ್ಯಕರ್ತರು ಹೇಳುತ್ತಾರೆ.

ಕೊನೆಗೆ, ದಿವ್ಯಾ ಮೈಲಿಗಟ್ಟಲೆ ನಡೆದುಕೊಂಡೇ ನಗರಸಭೆಯ ಸ್ಮಶಾನವನ್ನು ತಲುಪಿ ಭ್ರೂಣವನ್ನು ಹಸ್ತಾಂತರಿಸಿದರು. ಅಂತ್ಯಕ್ರಿಯೆ ನಡೆಸಿದ ರಶೀದಿ ಪಡೆದ ನಂತರವಷ್ಟೇ ಅವರು ಆಸ್ಪತ್ರೆಗೆ ಮರಳಿ, ಪ್ರಮಾಣಪತ್ರವನ್ನು ಸಲ್ಲಿಸಿ ಆ ನರಕಯಾತನೆಯಿಂದ ಮುಕ್ತರಾದರು.

"ಇಷ್ಟೊಂದು ಕ್ರೂರವಾಗಿ ನಡೆದುಕೊಳ್ಳುವ ಅಗತ್ಯವಿಲ್ಲ. ಮಹಿಳೆಯರಿಗೆ ಗರ್ಭಕೋಶವಿದೆ, ಅವರು ಗರ್ಭಿಣಿಯಾಗುತ್ತಾರೆ, ಇದರಲ್ಲಿ ಅಸಹಜವಾದದ್ದೇನೂ ಇಲ್ಲ. ಈ ವ್ಯವಸ್ಥೆಯು ಜನರ ಮನಸ್ಸಿಗೆ ಆಳವಾದ ಗಾಯ ಮಾಡುತ್ತದೆ. ಅವಿವಾಹಿತರಾಗಲಿ, ವಿಧವೆಯರಾಗಲಿ ಅಥವಾ ವಿವಾಹಿತರಾಗಲಿ—ಪೋಷಕರು, ಗಂಡಂದಿರು, ಕಚೇರಿಗಳು ಮತ್ತು ವೈದ್ಯರಿಂದ ಇದನ್ನು ರಹಸ್ಯವಾಗಿ ಇಡಬೇಕಾಗುತ್ತದೆ. ಏಕೆಂದರೆ ಮಹಿಳೆಯರ ಆಸೆಗಳನ್ನೇ ಇಲ್ಲಿ ಅಪರಾಧ ಎಂಬಂತೆ ನೋಡಲಾಗುತ್ತದೆ," ಎಂದು ಡಾ. ಮಾಳು ಹೇಳಿದ್ದಾರೆ.

"ಸರ್ಕಾರಿ ಆಸ್ಪತ್ರೆಯಲ್ಲೂ ಸಹ ನಿಮಗೆ ವಿದ್ಯೆ ಅಥವಾ ಹಣ ಇದ್ದರೆ ಮಾತ್ರ ಗೌರವ ಸಿಗುತ್ತದೆ," ಎಂದು ದಿವ್ಯಾ ಬೇಸರ ವ್ಯಕ್ತಪಡಿಸಿದ್ದಾರೆ. "ವಿದ್ಯಾವಂತರು ಏನಾದರೂ ಕೇಳಿದರೆ ಅವರಿಗೆ ಬಹಳ ಗೌರವ ಕೊಡುತ್ತಾರೆ. ಆದರೆ ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವವರು ಹೆಚ್ಚಾಗಿ ಖಾಸಗಿ ಆಸ್ಪತ್ರೆಯ ವೆಚ್ಚ ಭರಿಸಲಾಗದ ಬಡವರು ಮತ್ತು ಅವಿದ್ಯಾವಂತರು. ಅವರಿಗೆ ಏಕೆ ಅದೇ ಗೌರವ ನೀಡುವುದಿಲ್ಲ? ನಾನು ಆಸ್ಪತ್ರೆಗೆ ದಾಖಲಾದಾಗ ವೈದ್ಯರು ಬೇರೆಯವರನ್ನು ಚೆನ್ನಾಗಿ ನೋಡಿಕೊಳ್ಳುವುದನ್ನು ಕಂಡೆ. ಅವರ ಗಮನವೆಲ್ಲಾ ಅವರ ಮೇಲಿತ್ತು, ಪ್ರತಿ 10 ನಿಮಿಷಕ್ಕೊಮ್ಮೆ ಗ್ಲೂಕೋಸ್ (IV drip) ಪರಿಶೀಲಿಸುತ್ತಿದ್ದರು. ಆದರೆ ನಾನು ಆಸ್ಪತ್ರೆಗೆ ಬಂದಾಗ ನನಗೇಕೆ ಆ ಬೆಲೆ ಸಿಗಲಿಲ್ಲ? ಜನರು ಆಸ್ಪತ್ರೆಗೆ ಬರಲು ಹಿಂಜರಿಯುವಂತೆ ಮಾಡಬಾರದು. ಬಡವರಾಗಲಿ, ಶ್ರೀಮಂತರಾಗಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗೌರವ ಸಿಗುತ್ತದೆ ಎಂಬ ಭಾವನೆ ಎಲ್ಲರಿಗೂ ಬರಬೇಕು" ಎಂದಿದ್ದಾರೆ.

►ಸಾಂಸ್ಥಿಕ ದೌರ್ಜನ್ಯದ ಸರಣಿ

ಮೃತ ಭ್ರೂಣವನ್ನು ವಿಲೇವಾರಿ ಮಾಡಲು ಕಳುಹಿಸುವ ಮೊದಲು, ವೈದ್ಯಕೀಯ ಸಿಬ್ಬಂದಿ ದಿವ್ಯಾ ಅವರ ದೇಹದ ಹಕ್ಕನ್ನು ಮತ್ತೊಮ್ಮೆ ಉಲ್ಲಂಘಿಸಿದ್ದರು ಎನ್ನಲಾಗಿದೆ. ಅವರಿಗೆ ಪ್ರಕ್ರಿಯೆಯ ಬಗ್ಗೆ ವಿವರಿಸದೆಯೇ, ಒಪ್ಪಿಗೆಯನ್ನೂ ಪಡೆಯದೆ ಗರ್ಭನಿರೋಧಕ ಸಾಧನವನ್ನು (IUD - ಕಾಪರ್-ಟಿ) ಅಳವಡಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ಗರ್ಭನಿರೋಧಕ ಸಾಧನವು (IUD) ದೀರ್ಘಕಾಲದವರೆಗೆ ಗರ್ಭಧಾರಣೆ ತಡೆಯುವ ಉತ್ತಮ ವಿಧಾನವಾಗಿದ್ದರೂ, ವೈದ್ಯಕೀಯ ನೀತಿ ಮತ್ತು ನಿಯಮಗಳ ಪ್ರಕಾರ ರೋಗಿಗೆ ಸಂಪೂರ್ಣ ಮಾಹಿತಿ ನೀಡಿ, ಅವರ ಸ್ಪಷ್ಟ ಮತ್ತು ಸ್ವಯಂಪ್ರೇರಿತ ಒಪ್ಪಿಗೆಯ ನಂತರವಷ್ಟೇ ಅದನ್ನು ಅಳವಡಿಸಬೇಕು.

ವೈದ್ಯಕೀಯ ಗರ್ಭಪಾತದ ನಂತರ ಒಪ್ಪಿಗೆಯಿಲ್ಲದೆ ಗರ್ಭನಿರೋಧಕ ಸಾಧನ ಅಳವಡಿಸುವುದು ಅಥವಾ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವುದು ಕೇವಲ ದಿವ್ಯಾ ಅವರಿಗೆ ಮಾತ್ರ ಆದ ಅನುಭವವಲ್ಲ. ಈಗಾಗಲೇ ಮಕ್ಕಳಿರುವ ಬಡ ಮಹಿಳೆಯರಿಗೆ ತಡವಾದ ಅವಧಿಯ ಗರ್ಭಪಾತದ ಚಿಕಿತ್ಸೆ ನೀಡಲು, ಶಾಶ್ವತ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಪ್ಪಿಕೊಳ್ಳಲೇಬೇಕೆಂಬ ಷರತ್ತು ವಿಧಿಸಲಾಗುತ್ತದೆ. ಈ ಪದ್ಧತಿಯು ಸ್ವಯಂಪ್ರೇರಿತ ಕುಟುಂಬ ಯೋಜನೆಯ ರಾಷ್ಟ್ರೀಯ ಮಾರ್ಗಸೂಚಿಗಳ ನೇರ ಉಲ್ಲಂಘನೆಯಾಗಿದೆ.

ಮಧುರೈನಲ್ಲಿ ಮನೆಗೆಲಸ ಮಾಡುತ್ತಿದ್ದ ಮೂರು ಮಕ್ಕಳ ತಾಯಿ ಮೀನಾ (ಹೆಸರು ಬದಲಾಯಿಸಲಾಗಿದೆ), 19 ವಾರಗಳ ಗರ್ಭಪಾತಕ್ಕಾಗಿ ಸರ್ಕಾರಿ ಆಸ್ಪತ್ರೆಗೆ ಹೋದಾಗ, ಅದೇ ಸಮಯದಲ್ಲಿ ಟ್ಯೂಬೆಕ್ಟಮಿ (ಗರ್ಭಧಾರಣೆಯನ್ನು ಶಾಶ್ವತವಾಗಿ ತಡೆಯಲು ಗರ್ಭನಾಳಗಳನ್ನು ಕತ್ತರಿಸುವ ಶಸ್ತ್ರಚಿಕಿತ್ಸೆ) ಮಾಡಿಸಿಕೊಳ್ಳಲು ಒಪ್ಪದ ಹೊರತು ಗರ್ಭಪಾತ ಮಾಡುವುದಿಲ್ಲ ಎಂದು ವೈದ್ಯರು ನಿರಾಕರಿಸಿದರು ಎನ್ನಲಾಗಿದೆ.

"ನಿನಗೆ ಈಗಾಗಲೇ ಮೂರು ಮಕ್ಕಳಿವೆ, ಇನ್ನೇಕೆ ಬೇಕು? ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಪ್ಪಿದರೆ ಮಾತ್ರ ನಾವು ಗರ್ಭಪಾತ ಮಾಡುತ್ತೇವೆ ಎಂದು ವೈದ್ಯರು ಹೇಳಿದರು" ಎಂದು ಮೀನಾ ನೆನಪಿಸಿಕೊಂಡಿದ್ದಾರೆ.

ಇದು ವೈದ್ಯಕೀಯ ಸಲಹೆಯ ಸೋಗಿನಲ್ಲಿ ನಡೆಸುವ ಬ್ಲ್ಯಾಕ್ಮೇಲ್ ಎಂದು ಡಾ. ಮಾಳು ಕರೆದಿದ್ದಾರೆ. "ಬಡ ಮಹಿಳೆಯರು ಅತ್ಯಂತ ಅಸಹಾಯಕ ಸ್ಥಿತಿಯಲ್ಲಿದ್ದಾಗ, ಸರ್ಕಾರದ ಜನಸಂಖ್ಯಾ ನಿಯಂತ್ರಣ ಗುರಿಯ ಮನಸ್ಥಿತಿಯನ್ನು ಅವರ ದೇಹದ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ" ಎಂದು ಅವರು ಹೇಳಿದ್ದಾರೆ.

ಕಿರಿಯ ವಯಸ್ಸಿನ ಅವಿವಾಹಿತ ಮಹಿಳೆಯರಿಗೆ ಇಲ್ಲಿ ಎದುರಾಗುವ ದೊಡ್ಡ ಅಡೆತಡೆಯೆಂದರೆ, ಅವರ ವಿಷಯವನ್ನು ಬಹಿರಂಗಪಡಿಸುವುದಾಗಿ ನೀಡುವ ಕಾನೂನುಬಾಹಿರ ಬೆದರಿಕೆ. ವಯಸ್ಕ ಮಹಿಳೆಯ ಒಪ್ಪಿಗೆಯೊಂದೇ ಕಾನೂನುಬದ್ಧವಾಗಿ ಸಾಕು ಎಂದು ವೈದ್ಯಕೀಯ ಗರ್ಭಪಾತ ಕಾಯ್ದೆ (MTP Act) ಸ್ಪಷ್ಟವಾಗಿ ಹೇಳಿದ್ದರೂ, ಆಸ್ಪತ್ರೆಯವರು ಪದೇಪದೇ ಪೋಷಕರು ಅಥವಾ ಪತಿಯ ಅನುಮತಿಯನ್ನು ಕೇಳುತ್ತಾರೆ.

ಚೆನ್ನೈನ ಸರ್ಕಾರಿ ಆಸ್ಪತ್ರೆಯಲ್ಲಿ 21 ವರ್ಷದ ಅನನ್ಯಾ (ಹೆಸರು ಬದಲಾಯಿಸಲಾಗಿದೆ) ಗರ್ಭಪಾತಕ್ಕೆ ಹೋದಾಗ, ಪೋಷಕರು ಬರದೆ ಚಿಕಿತ್ಸೆ ನೀಡಲು ವೈದ್ಯಾಧಿಕಾರಿ ನಿರಾಕರಿಸಿದರು ಎನ್ನಲಾಗಿದೆ. ಅಲ್ಲದೆ, ದಾಖಲೆಗಳಲ್ಲಿರುವ ಫೋನ್ ನಂಬರ್‌ ಗೆ ನೇರವಾಗಿ ಕರೆ ಮಾಡಿ ಪೋಷಕರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದರು.

"ಅವರು ವಯಸ್ಕ ಅವಿವಾಹಿತ ಮಹಿಳೆಯರನ್ನು ಏನೋ ದೊಡ್ಡ ಅಪರಾಧ ಮಾಡಿದ ಅಪ್ರಾಪ್ತರಂತೆ ನಡೆಸಿಕೊಳ್ಳುತ್ತಾರೆ. 'ನಿಮ್ಮ ಮಗಳು ಏನು ಮಾಡುತ್ತಿದ್ದಾಳೆ ಎಂದು ತಿಳಿಯಲು ನಿನ್ನ ತಂದೆಯನ್ನು ಕರೆದುಕೊಂಡು ಬಾ' ಎಂದು ವೈದ್ಯರು ಹೇಳಿದರು. ನಾನು ನಿರಾಕರಿಸಿದಾಗ, ಅವಿವಾಹಿತ ಹುಡುಗಿಯೊಬ್ಬಳು ಗರ್ಭಪಾತಕ್ಕೆ ಬಂದಿದ್ದಾಳೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದಾಗಿ ಬೆದರಿಕೆ ಹಾಕಿದರು" ಎಂದು ಅನನ್ಯಾ ಹೇಳಿದ್ದಾರೆ. ಸಮಾಜದಲ್ಲಿ ಮರ್ಯಾದೆ ಹೋಗುತ್ತದೆ ಎಂಬ ಭಯವು ಮಹಿಳೆಯರನ್ನು ಸುರಕ್ಷಿತವಲ್ಲದ, ಅನಧಿಕೃತ ಖಾಸಗಿ ಕ್ಲಿನಿಕ್ ಗಳತ್ತ ಅಥವಾ ಅಪಾಯಕಾರಿ ಸ್ವಯಂ-ಔಷಧಿಗಳ ಮೊರೆ ಹೋಗುವಂತೆ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.

ನಗರ ಪ್ರದೇಶಗಳಲ್ಲಿ ಆಸ್ಪತ್ರೆಗಳು 'ನಯವಾದ ನಿರಾಕರಣೆ' ತಂತ್ರಗಳನ್ನು ಅನುಸರಿಸುತ್ತವೆ. ಅಂದರೆ, ಉದ್ದೇಶಪೂರ್ವಕವಾಗಿ ವೈದ್ಯರ ಭೇಟಿಯನ್ನು ಮುಂದೂಡುವುದು, ರಕ್ತ ಪರೀಕ್ಷೆಗಳನ್ನು ವಿಳಂಬ ಮಾಡುವುದು ಅಥವಾ ರೋಗಿಗಳನ್ನು ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ಅಲೆದಾಡಿಸುವುದು. ಈ ಮೂಲಕ ಕಾನೂನುಬದ್ಧ ಗರ್ಭಪಾತದ ಗಡುವಾದ 24 ವಾರಗಳನ್ನು ದಾಟುವಂತೆ ಮಾಡಿ, ಮಹಿಳೆಯರು ಅನಿವಾರ್ಯವಾಗಿ ಮಗುವಿಗೆ ಜನ್ಮ ನೀಡುವಂತೆ ಮಾಡಲಾಗುತ್ತದೆ.

ತಮಿಳುನಾಡಿನ ತಿರುನಲ್ವೇಲಿಯ ಸರ್ಕಾರಿ ಆಸ್ಪತ್ರೆಗೆ 18 ವಾರಗಳ ಗರ್ಭಿಣಿಯಾಗಿದ್ದಾಗ ಭೇಟಿ ನೀಡಿದ್ದ 23 ವರ್ಷದ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಅನು (ಹೆಸರು ಬದಲಾಯಿಸಲಾಗಿದೆ) ಅವರಿಗೂ ಇದೇ ಅನುಭವವಾಗಿತ್ತು. ಅವರಿಗೆ ಮದುವೆಯಾಗಿದ್ದರೂ, ಆ ಹಂತದಲ್ಲಿ ಮಗು ಪಡೆಯಲು ಅವರು ಸಿದ್ಧರಿರಲಿಲ್ಲ.

ತಪ್ಪು ಮಾಹಿತಿ ಮತ್ತು ಸ್ವಯಂ-ಚಿಕಿತ್ಸೆಯ ದುಬಾರಿ ಬೆಲೆ

ಅಧಿಕೃತ ವೈದ್ಯಕೀಯ ಸಂಸ್ಥೆಗಳು ಬಾಗಿಲು ಮುಚ್ಚಿದಾಗ, ಮಹಿಳೆಯರು ಅನಿವಾರ್ಯವಾಗಿ ಸ್ವಯಂ-ಚಿಕಿತ್ಸೆ, ಅನಧಿಕೃತ ಜಾಲಗಳು ಮತ್ತು ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ಸುಳಿಗೆ ಸಿಲುಕುತ್ತಾರೆ. ಅನೇಕ ಯುವತಿಯರು ಮತ್ತು ಅವಿವಾಹಿತ ಮಹಿಳೆಯರಿಗೆ ಆರ್ಥಿಕ ಹೊರೆಯೊಂದೇ ದಾಟಲಾಗದ ದೊಡ್ಡ ಅಡೆತಡೆಯಾಗಿ ಪರಿಣಮಿಸಿದೆ.

ಔಷಧಿ ಅಂಗಡಿಗಳಲ್ಲಿ ಅಥವಾ ಅನಧಿಕೃತ ಮಾರ್ಗಗಳ ಮೂಲಕ ಗರ್ಭಪಾತದ ಮಾತ್ರೆಗಳು ಕೆಲವೇ ನೂರು ರೂಪಾಯಿಗಳಿಗೆ ಸಿಗಬಹುದಾದರೂ, ಸಮಗ್ರ ವೈದ್ಯಕೀಯ ಆರೈಕೆ, ಅಗತ್ಯವಿರುವ ಅಲ್ಟ್ರಾಸೌಂಡ್ ಸ್ಕ್ಯಾನ್ ಗಳು ಮತ್ತು ಚಿಕಿತ್ಸೆಯ ನಂತರದ ತಪಾಸಣೆಗಳಿಗೆ 8,000 ರೂಪಾಯಿಗಿಂತ ಹೆಚ್ಚು ವೆಚ್ಚವಾಗುತ್ತದೆ.

ಒಂದು ವೇಳೆ ಗರ್ಭಪಾತದ ನಂತರ ಗರ್ಭಕೋಶದಲ್ಲಿ ಗರ್ಭಧಾರಣೆಯ ಕೆಲವು ಅಂಗಾಂಶಗಳು ಉಳಿದುಕೊಳ್ಳುವಂತಹ (RPOC) ತೊಂದರೆಗಳು ಎದುರಾದರೆ, ಶಸ್ತ್ರಚಿಕಿತ್ಸೆಯ ಮೂಲಕ (D&C ಅಥವಾ ಸಕ್ಷನ್ ಇವಾಕ್ಯುಯೇಷನ್) ಅವುಗಳನ್ನು ತೆಗೆಯಬೇಕಾಗುತ್ತದೆ. ಇದಕ್ಕೆ 40,000 ರೂಪಾಯಿಗಿಂತ ಹೆಚ್ಚು ಖರ್ಚಾಗಬಹುದು. ಕಾಲೇಜು ವಿದ್ಯಾರ್ಥಿಗಳು ಮತ್ತು ಯುವತಿಯರಂತಹ ಆರ್ಥಿಕ ಶಕ್ತಿ ಇಲ್ಲದವರಿಗೆ, ಈ ಹೆಚ್ಚುವರಿ ವೆಚ್ಚವನ್ನು ಭರಿಸಲು ಹೆಚ್ಚಿನ ಬಡ್ಡಿಗೆ ಸಾಲ ಮಾಡುವುದು, ವೈಯಕ್ತಿಕ ವಸ್ತುಗಳನ್ನು ಮಾರುವುದು ಅಥವಾ ಚಿಕಿತ್ಸೆಯ ನಡುವೆಯೇ ಕೈಬಿಟ್ಟು ಹೋಗಬಹುದಾದ ಸಂಗಾತಿಗಳನ್ನು ಅವಲಂಬಿಸುವುದು ಅನಿವಾರ್ಯವಾಗುತ್ತದೆ.

ಆರು ವಾರಗಳ ಗರ್ಭಿಣಿಯಾಗಿದ್ದಾಗ ಕೊಚ್ಚಿಯ ಖಾಸಗಿ ಕ್ಲಿನಿಕ್ ಗಳಲ್ಲಿ ಮಾತ್ರೆಗಳಿಗಾಗಿ ಹುಡುಕಾಡಿದ ಅಂಜಲಿ ಅವರಿಗೆ ಇಂತಹ ವಾಣಿಜ್ಯ ಶೋಷಣೆಯ ಕಹಿ ಅನುಭವವಾಗಿದೆ. "ಗರ್ಭಧಾರಣೆಯ ಆ ಆರಂಭಿಕ ಹಂತದಲ್ಲಿ ಅಗತ್ಯವಿಲ್ಲದಿದ್ದರೂ, ಖಾಸಗಿ ಆಸ್ಪತ್ರೆಯೊಂದು ಶಸ್ತ್ರಚಿಕಿತ್ಸೆಯ (D&C) ಮೂಲಕವೇ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿತು. ಇದಕ್ಕೆ ಸುಮಾರು 60,000 ರೂಪಾಯಿ ವೆಚ್ಚವಾಗುತ್ತದೆ ಎಂದು ಅವರು ಹೇಳಿದರು," ಎಂದು ಅಂಜಲಿ ತಿಳಿಸಿದ್ದಾರೆ.

ಮತ್ತೊಂದು ಖಾಸಗಿ ಕ್ಲಿನಿಕ್ನಲ್ಲಿ 24,000 ರೂಪಾಯಿ ಪಾವತಿಸುವಂತೆ ಕೇಳಿದಾಗ ತಮಗೆ ಆಘಾತವಾಯಿತು ಎಂದು ಅಂಜಲಿ ನೆನಪಿಸಿಕೊಂಡಿದ್ದಾರೆ. "ನೀವು ಅನೈತಿಕ ಮೌಲ್ಯಗಳಿಗೆ ವಿರುದ್ಧವಾದ ಕೆಲಸ ಮಾಡುತ್ತಿದ್ದೀರಿ, ಇಂತಹ ಅನೈತಿಕ ಕೆಲಸಗಳನ್ನು ಬಹಳ ಕಡಿಮೆ ವೈದ್ಯರು ಮಾಡುತ್ತಾರೆ ಮತ್ತು ಮಾಡಿದಾಗ ಅವರಿಗೆ ಹಣಕಾಸಿನ ಲಾಭವಾಗಬೇಕು ಎಂದು ವೈದ್ಯರು ನಮ್ಮ ಮುಖಕ್ಕೆ ಹೊಡೆದಂತೆ ಹೇಳಿದರು. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರಿಗೂ ನಾವು ಗರ್ಭಪಾತಕ್ಕೆ ಶಿಫಾರಸು ಮಾಡುವುದಿಲ್ಲ ಎಂದೂ ಅವರು ಹೇಳಿದರು. ಅವರಿಗೆ ಜೀವದ ಬಗ್ಗೆ ಕಾಳಜಿ ಇರಲಿಲ್ಲ, ಕೇವಲ ಹಣವಷ್ಟೇ ಬೇಕಾಗಿತ್ತು," ಎಂದು ಅಂಜಲಿ ಆರೋಪಿಸಿದ್ದಾರೆ.

ಖಾಸಗಿ ಕಂಪನಿಯ ಉದ್ಯೋಗಿ ಸಾವಿತ್ರಿ (ಹೆಸರು ಬದಲಾಯಿಸಲಾಗಿದೆ) ನಾಲ್ಕು ವಾರಗಳ ಗರ್ಭಿಣಿಯಾಗಿದ್ದಾಗ, ಕೊಚ್ಚಿಯ ಖಾಸಗಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕ ಮತ್ತು ಉದ್ದೇಶಪೂರ್ವಕ ವಿಳಂಬವನ್ನು ಎದುರಿಸಿದ್ದಾರೆ ಎನ್ನಲಾಗಿದೆ. "ಈಗಲೇ ಮಾತ್ರೆಗಳು ಕೆಲಸ ಮಾಡುವುದಿಲ್ಲ ಎಂದು ಹೇಳಿ ಒಂದು ವಾರದ ನಂತರ ಬರುವಂತೆ ಮಾಡಿದರು," ಎಂದು ಅವರು TNMಗೆ ತಿಳಿಸಿದ್ದಾರೆ.

"ನಾನು ವಾಪಸ್ ಹೋದಾಗ, 'ನೀವು ಆಸ್ಪತ್ರೆಗೆ ದಾಖಲಾಗಬೇಕು ಮತ್ತು ಇದಕ್ಕೆ ಸುಮಾರು 20,000 ರೂಪಾಯಿ ಖರ್ಚಾಗುತ್ತದೆ' ಎಂದರು. ಈ ಯಾವ ವಿಷಯವನ್ನೂ ಮೊದಲೇ ಹೇಳಿರಲಿಲ್ಲ. ನಾನು ಈಗಾಗಲೇ ಸ್ಕ್ಯಾನ್ ಮತ್ತು ರಕ್ತ ಪರೀಕ್ಷೆಗಳಿಗೆ 4,000 ರೂಪಾಯಿ ಪಾವತಿಸಿದ್ದೆ. ಇದು ಸಂಪೂರ್ಣ ಮೋಸದಂತೆ ಅನಿಸಿತು; ಹೆಚ್ಚು ದುಬಾರಿ ಚಿಕಿತ್ಸೆಯ ಹಂತಕ್ಕೆ ಹೋಗಲಿ ಎಂದೇ ಅವರು ಉದ್ದೇಶಪೂರ್ವಕವಾಗಿ ಪ್ರಕ್ರಿಯೆಯನ್ನು ವಿಳಂಬ ಮಾಡಿದಂತಿತ್ತು. ಗಾಬರಿಯಲ್ಲಿರುವವರಿಗೆ 20,000 ರೂಪಾಯಿ ಕೇಳಿದಾಗ ಬಲೆಯಲ್ಲಿ ಸಿಲುಕಿಕೊಂಡಂತೆ ಭಾಸವಾಗುತ್ತದೆ," ಎಂದಿದ್ದಾರೆ.

19ನೇ ವಯಸ್ಸಿನಲ್ಲಿ ವೈದ್ಯಕೀಯ ಗರ್ಭಪಾತಕ್ಕೆ ಒಳಗಾದ ಚೆನ್ನೈನ ವಿದ್ಯಾರ್ಥಿನಿ ಅಪ್ಸರಾ (ಹೆಸರು ಬದಲಾಯಿಸಲಾಗಿದೆ), ಅಪೂರ್ಣ ವೈದ್ಯಕೀಯ ಮಾಹಿತಿಯಿಂದ ಅನುಭವಿಸಿದ ಭಯಾನಕ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಗರ್ಭಧಾರಣೆಯ ಆರಂಭಿಕ ಹಂತದಲ್ಲೇ ಆಸ್ಪತ್ರೆಗೆ ಹೋಗಿದ್ದರೂ, ಆಸ್ಪತ್ರೆಯವರು ಚಿಕಿತ್ಸೆಯನ್ನು ವಿಪರೀತವಾಗಿ ವಿಳಂಬ ಮಾಡಿದರು ಎಂದು ಅವರು ಹೇಳಿದ್ದಾರೆ.

"ನಾನು ಮಾತ್ರೆಗಳನ್ನು ತೆಗೆದುಕೊಂಡಾಗ, ಸಾಮಾನ್ಯ ರಕ್ತಸ್ರಾವಕ್ಕೂ ಮತ್ತು ತುರ್ತು ವೈದ್ಯಕೀಯ ಪರಿಸ್ಥಿತಿಗೂ ಇರುವ ವ್ಯತ್ಯಾಸವನ್ನು ಯಾರೂ ನನಗೆ ವಿವರಿಸಲಿಲ್ಲ," ಎಂದು ಅಪ್ಸರಾ ಹೇಳಿಕೊಂಡಿದ್ದಾರೆ. "ಹೊಟ್ಟೆ ಸೆಳೆತ ಸಹಿಸಲಾಗದಷ್ಟು ಹೆಚ್ಚಾಗಿ, ಭಾರೀ ಪ್ರಮಾಣದಲ್ಲಿ ರಕ್ತದ ಹೆಪ್ಪುಗಳು ಹೊರಬರಲು ಶುರುವಾದಾಗ ನಾನು ಸಾಯುತ್ತಿದ್ದೇನೆ ಎಂದೇ ಭಾವಿಸಿದ್ದೆ. ಸಾಮಾಜಿಕ ಕಳಂಕದ ಭಯದಿಂದ ಆಸ್ಪತ್ರೆಗೆ ಹೋಗಲು ನನಗೆ ತುಂಬಾ ಹೆದರಿಕೆಯಾಯಿತು. ಹೀಗಾಗಿ ಗಂಟೆಗಳ ಕಾಲ ನಾನು ಬಾತ್ ರೂಮ್ ನೆಲದ ಮೇಲೆಯೇ ಬಿದ್ದಿದ್ದೆ. ವಾರಗಳ ನಂತರ ಮಾಡಿಸಿದ ಅಲ್ಟ್ರಾಸೌಂಡ್ ಸ್ಕ್ಯಾನ್ ನಲ್ಲಿ ಗರ್ಭಕೋಶದಲ್ಲಿ ಅಂಗಾಂಶ ಉಳಿದುಕೊಂಡಿರುವುದು ಮತ್ತು ಅದರಿಂದ ತೀವ್ರ ಸೋಂಕು ಉಂಟಾಗಿರುವುದು ತಿಳಿದುಬಂತು. ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಡಿ ಆ್ಯಂಡ್ ಸಿ (D&C) ಶಸ್ತ್ರಚಿಕಿತ್ಸೆಗಾಗಿ ನಾನು ಸುಮಾರು 40,000 ರೂಪಾಯಿ ಪಾವತಿಸಬೇಕಾಯಿತು. ಆರ್ಥಿಕ ಹೊರೆ ನನ್ನನ್ನು ಕಂಗೆಡಿಸಿತ್ತು, ಆದರೆ ಅದಕ್ಕಿಂತಲೂ ಹೆಚ್ಚಾಗಿ ಮಾನಸಿಕ ಏಕಾಂಗಿತನ ನನ್ನನ್ನು ತೀವ್ರವಾಗಿ ಕಾಡಿತು" ಎಂದಿದ್ದಾರೆ.

ಡಿ ಆ್ಯಂಡ್ ಸಿ (D&C) ಶಸ್ತ್ರಚಿಕಿತ್ಸೆಯ ಸರಾಸರಿ ವೆಚ್ಚ 20,000 ರೂಪಾಯಿಯಾಗಿದ್ದು, ಇದು 20,000ರಿಂದ 80,000 ರೂಪಾಯಿವರೆಗೂ ಇರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಅಪ್ಸರಾ ಅವರ ಪ್ರಕರಣವು ಸಾರ್ವಜನಿಕ ಆರೋಗ್ಯ ಮಾಹಿತಿಯಲ್ಲಿರುವ ದೊಡ್ಡ ಕೊರತೆಯನ್ನು ಎತ್ತಿ ತೋರಿಸುತ್ತದೆ. ವೈದ್ಯಕೀಯ ಗರ್ಭಪಾತದ ಮಾತ್ರೆಗಳು (ಮಿಫೆಪ್ರಿಸ್ಟೋನ್ ಮತ್ತು ಮಿಸೊಪ್ರೊಸ್ಟಾಲ್) ಸುರಕ್ಷಿತವೆಂದು ಪರಿಗಣಿಸಲ್ಪಟ್ಟಿದ್ದರೂ, ಮಾತ್ರೆಗಳ ಪ್ಯಾಕೆಟ್ಗಳ ಮೇಲೆ ಸುಲಭವಾಗಿ ಅರ್ಥವಾಗುವ ಚಿತ್ರಸಹಿತ ಸೂಚನೆಗಳಂತಹ ಪೂರ್ವಗ್ರಹವಿಲ್ಲದ ಮಾರ್ಗದರ್ಶನದ ಕೊರತೆಯಿದೆ. ಇದರಿಂದ ಸಾಮಾನ್ಯ ಅಡ್ಡಪರಿಣಾಮಗಳು ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಮಹಿಳೆಯರಿಗೆ ಸಾಧ್ಯವಾಗುತ್ತಿಲ್ಲ.

ಚೆನ್ನೈನಲ್ಲಿ ಬೆಂಬಲ ಜಾಲವನ್ನು ನಡೆಸುತ್ತಿರುವ ಸಂತಾನೋತ್ಪತ್ತಿ ಹಕ್ಕುಗಳ ಕಾರ್ಯಕರ್ತೆ ಅರ್ಚನಾ ಶೇಖರ್ ಮಾತನಾಡಿ, ಈ ಮಾಹಿತಿಯ ಕೊರತೆಯೇ ಆಸ್ಪತ್ರೆಗಳ ಶೋಷಣೆ ಮತ್ತು ಮಾನಸಿಕ ಆಘಾತಕ್ಕೆ ನೇರ ಕಾರಣವಾಗುತ್ತಿದೆ ಎಂದಿದ್ದಾರೆ. "ವೈದ್ಯಕೀಯ ಗರ್ಭಪಾತದ ಸಮಯದಲ್ಲಿ ಏನಾಗಬಹುದು ಎಂಬುದರ ಬಗ್ಗೆ ಮಹಿಳೆಯರನ್ನು ಕತ್ತಲಲ್ಲಿ ಇಡಲಾಗುತ್ತದೆ. ಸಾಮಾನ್ಯ ರಕ್ತಸ್ರಾವ ಅಥವಾ ತೀವ್ರ ಹೊಟ್ಟೆ ಸೆಳೆತ ಕಾಣಿಸಿಕೊಂಡಾಗ, ಇದು ಪ್ರಕ್ರಿಯೆಯ ಒಂದು ಭಾಗ ಎಂದು ಯಾರೂ ಹೇಳದ ಕಾರಣ ಅವರು ಗಾಬರಿಯಾಗುತ್ತಾರೆ. ಖಾಸಗಿ ಕ್ಲಿನಿಕ್ ಗಳು ಮತ್ತು ಸಹಾನುಭೂತಿಯಿಲ್ಲದ ವೈದ್ಯರು ತಕ್ಷಣವೇ ಆ ಭಯದ ಲಾಭ ಪಡೆಯುತ್ತಾರೆ. ಧೈರ್ಯ ತುಂಬುವ ಅಥವಾ ಪ್ರಾಥಮಿಕ ವೈದ್ಯಕೀಯ ಮಾರ್ಗದರ್ಶನ ನೀಡುವ ಬದಲು, ಕೆಲವೊಮ್ಮೆ ವೈದ್ಯಕೀಯವಾಗಿ ಅಗತ್ಯವಿಲ್ಲದಿದ್ದರೂ D&Cಯಂತಹ ದುಬಾರಿ ಶಸ್ತ್ರಚಿಕಿತ್ಸೆಗಳಿಗೆ ಒತ್ತಾಯಿಸುತ್ತಾರೆ. ಸುರಕ್ಷಿತ ಮತ್ತು ಸಾಮಾನ್ಯ ಪ್ರಕ್ರಿಯೆಯಾಗಬೇಕಿದ್ದದ್ದು ದೊಡ್ಡ ಖರ್ಚು ಮತ್ತು ದೈಹಿಕ ಹಿಂಸೆಯಾಗಿ ಬದಲಾಗುತ್ತದೆ" ಎಂದು ಅವರು 'ಟಿಎನ್ಎಂ'ಗೆ ತಿಳಿಸಿದ್ದಾರೆ.

ಆಸ್ಪತ್ರೆ ವ್ಯವಸ್ಥೆಯ ಭಯವು ಹೇಗೆ ಅಪಾಯಕಾರಿ ವಿಳಂಬಕ್ಕೆ ಅಥವಾ ನಕಲಿ ವೈದ್ಯರ ಮೊರೆ ಹೋಗಲು ಕಾರಣವಾಗುತ್ತದೆ ಎಂಬುದನ್ನು ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಗೀತ್ ವಿವರಿಸಿದ್ದಾರೆ. ಅನಿಯಮಿತ ಮುಟ್ಟು ಮತ್ತು ಗರ್ಭನಿರೋಧಕಗಳ ವೈಫಲ್ಯದಂತಹ ಸಾಮಾನ್ಯ ಕಾರಣಗಳನ್ನು ಗುರುತಿಸುತ್ತಾ, ಸೋಂಕಿತ ಗರ್ಭಪಾತಗಳ (Septic abortions) ಗಂಭೀರ ಪರಿಣಾಮಗಳ ಬಗ್ಗೆ ಅವರು ಬೆಳಕು ಚೆಲ್ಲಿದ್ದಾರೆ.

"ಹಿಂದೆಲ್ಲಾ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಕಲಿ ವೈದ್ಯರು ಗರ್ಭಪಾತ ಮಾಡಿಸಲು ಗರ್ಭಕೋಶದೊಳಗೆ ವಸ್ತುಗಳನ್ನು ತೂರಿಸುತ್ತಿದ್ದರು. ಇದರಿಂದ ಜೀವಕ್ಕೆ ಅಪಾಯ ತರುವ ತೀವ್ರ ಸೋಂಕುಗಳು (Septic abortions) ಉಂಟಾದ ಅನೇಕ ಪ್ರಕರಣಗಳನ್ನು ನಾವು ನೋಡಿದ್ದೇವೆ. ನನ್ನ ವೃತ್ತಿಜೀವನದ ಆರಂಭದಲ್ಲಿ, ಸೋಂಕು ಎಷ್ಟು ತೀವ್ರವಾಗಿತ್ತೆಂದರೆ ನಾನು ರೋಗಿಯ ಗರ್ಭಕೋಶವನ್ನೇ ತೆಗೆದುಹಾಕಬೇಕಾದ ಪ್ರಸಂಗ ಬಂದಿತ್ತು. ಇಂದು ರೋಗಿಗಳಲ್ಲಿ ಹೆಚ್ಚಿನ ಅರಿವಿದೆ ಮತ್ತು ಇಂತಹ ತೀವ್ರ ನಕಲಿ ಚಿಕಿತ್ಸೆಗಳು ಕಡಿಮೆಯಾಗಿವೆ. ಆದರೂ, ಅನೇಕ ಮಹಿಳೆಯರು 9 ಅಥವಾ 12 ವಾರಗಳನ್ನು ದಾಟಿದ ನಂತರವೂ ನಮ್ಮ ಬಳಿಗೆ ಬರುತ್ತಾರೆ. ಚಿಕಿತ್ಸೆ ವಿಳಂಬವಾದಾಗ ರಕ್ತಸ್ರಾವದ ಪ್ರಮಾಣ, ನೋವು, ಚಿಕಿತ್ಸೆಯ ಅವಧಿ ಮತ್ತು ಶಸ್ತ್ರಚಿಕಿತ್ಸೆಯ ಅಗತ್ಯತೆ ಗಮನಾರ್ಹವಾಗಿ ಹೆಚ್ಚಾಗುತ್ತದೆ" ಎಂದು ಡಾ. ಗೀತ್ ವಿವರಿಸಿದ್ದಾರೆ.

"ವಿಳಂಬಕ್ಕೆ ಒಂದು ಪ್ರಮುಖ ಕಾರಣವೆಂದರೆ ಅನೇಕ ಯುವತಿಯರು PCOS ಸಮಸ್ಯೆಯಿಂದಾಗಿ ಅನಿಯಮಿತ ಮುಟ್ಟನ್ನು ಅನುಭವಿಸುತ್ತಾರೆ. ಮುಟ್ಟು ನಿಂತಾಗ ಅದು ಎಂದಿನಂತೆ ತಡವಾಗಿದೆ ಎಂದು ಭಾವಿಸಿ, ಗರ್ಭಾವಸ್ಥೆ ಮುಂದುವರಿಯುವವರೆಗೂ ಅವರು ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ. ಇದಲ್ಲದೆ, I-Pill ನಂತಹ ತುರ್ತು ಮಾತ್ರೆಗಳ ಬದಲಿಗೆ ನಿಯಮಿತ ಗರ್ಭನಿರೋಧಕಗಳನ್ನು ಬಳಸುವಂತೆ ನಾವು ಪದೇಪದೇ ಅರಿವು ಮೂಡಿಸಬೇಕು. ತುರ್ತು ಗರ್ಭನಿರೋಧಕ ಮಾತ್ರೆಗಳು ಕೇವಲ ತುರ್ತು ಸಂದರ್ಭಗಳಿಗೆ ಮಾತ್ರವೇ ಹೊರತು, ನಿಯಮಿತ ಜನನ ನಿಯಂತ್ರಣಕ್ಕಲ್ಲ. ಸುರಕ್ಷಿತ ಮತ್ತು ಆರಂಭಿಕ ಹಂತದ ಚಿಕಿತ್ಸೆ ಪಡೆಯಲು ನಿಯಮಿತ ಗರ್ಭನಿರೋಧಕ ಬಳಸುವುದು ಹಾಗೂ ಮುಟ್ಟು ತಪ್ಪಿದ ತಕ್ಷಣ ಗರ್ಭಧಾರಣೆ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಗತ್ಯ" ಎಂದು ಅವರು ಸಲಹೆ ನೀಡಿದ್ದಾರೆ.

►ಸ್ವಯಂ ನಿರ್ಮಿತ ಬೆಂಬಲ ವ್ಯವಸ್ಥೆಗಳು: ಡಿಜಿಟಲ್ ಸಮುದಾಯಗಳು ಮತ್ತು ತಳಮಟ್ಟದ ಹೋರಾಟ

ಆಸ್ಪತ್ರೆಗಳ ಅಸಹಕಾರ ಮತ್ತು ಅಧಿಕೃತ ವ್ಯವಸ್ಥೆಯ ಮೌನವನ್ನು ಎದುರಿಸಲು ಮಹಿಳೆಯರು, ಕಾರ್ಯಕರ್ತರು ಮತ್ತು ಸಂಶೋಧಕರು ತಮ್ಮದೇ ಆದ ಅನೌಪಚಾರಿಕ ಗುಂಪುಗಳು ಮತ್ತು ಸಮುದಾಯ ಆಧಾರಿತ ಬೆಂಬಲ ಜಾಲಗಳನ್ನು ನಿರ್ಮಿಸಿಕೊಂಡಿದ್ದಾರೆ. 'ದಿ ವೈಪಿ ಫೌಂಡೇಶನ್'ನ ಸೇಫ್ ಫೆಲೋಶಿಪ್ ಅಡಿಯಲ್ಲಿ ನಡೆದ ವ್ಯಾಪಕ ಕ್ಷೇತ್ರ ಸಂಶೋಧನೆಯ ನಂತರ ರೂಪುಗೊಂಡ 'ಸೇಫ್ ಅಬಾರ್ಷನ್ ಕೇರಳಂ' (Safe Abortion Keralam) ನಂತಹ ಗುಂಪುಗಳು ಸಾಂಸ್ಥಿಕ ದೌರ್ಜನ್ಯದ ವಿರುದ್ಧ ಪ್ರಮುಖ ವೇದಿಕೆಗಳಾಗಿ ಹೊರಹೊಮ್ಮಿವೆ. ಸ್ತ್ರೀರೋಗ ಚಿಕಿತ್ಸೆಯಲ್ಲಿನ ದೌರ್ಜನ್ಯಗಳನ್ನು ದಾಖಲಿಸುವ ಮೂಲಕ, ರೋಗಿಗಳಿಗೆ ಬೆಂಬಲ ನೀಡುವ ಮೂಲಕ ಮತ್ತು ಆರೋಗ್ಯ ಪೂರೈಕೆದಾರರನ್ನು ಸಾರ್ವಜನಿಕವಾಗಿ ಹೊಣೆಗಾರರನ್ನಾಗಿ ಮಾಡುವ ಮೂಲಕ, ಭಾರತದ ಪ್ರಗತಿಪರ ಕಾನೂನು ಭರವಸೆಗಳು ತಪಾಸಣಾ ಕೊಠಡಿಗಳ ಒಳಗೆ ಹೇಗೆ ಕುಸಿಯುತ್ತಿವೆ ಎಂಬುದನ್ನು ಈ ಗುಂಪುಗಳು ಬಯಲಿಗೆಳೆಯುತ್ತಿವೆ.

ಮಹಿಳೆಯರು ತಮ್ಮದೇ ಆದ ಪರ್ಯಾಯ ಬೆಂಬಲ ವ್ಯವಸ್ಥೆಯನ್ನೂ ಕಟ್ಟಿಕೊಂಡಿದ್ದಾರೆ. ರೆಡ್ಡಿಟ್ (Reddit), ಟ್ವಿಟರ್/ಎಕ್ಸ್ (Twitter/X) ಮತ್ತು ಅನಾಮಧೇಯ ಕೋರಾ (Quora) ಗುಂಪುಗಳಂತಹ ಆನ್‌ ಲೈನ್ ವೇದಿಕೆಗಳು ಪರಸ್ಪರ ನೆರವಾಗುವ ಪ್ರಮುಖ ಕೇಂದ್ರಗಳಾಗಿವೆ. ಇಲ್ಲಿ ಮಹಿಳೆಯರು ಪೂರ್ವಗ್ರಹವಿಲ್ಲದ ಸ್ತ್ರೀರೋಗ ತಜ್ಞರ ಪಟ್ಟಿಯನ್ನು ಹಂಚಿಕೊಳ್ಳುತ್ತಾರೆ, ಕಿರುಕುಳ ನೀಡುವ ಆಸ್ಪತ್ರೆಗಳ ಬಗ್ಗೆ ಎಚ್ಚರಿಕೆ ನೀಡುತ್ತಾರೆ ಮತ್ತು ಗರ್ಭಪಾತದ ನಂತರದ ದೈಹಿಕ ಚೇತರಿಕೆಯ ಬಗ್ಗೆ ಪ್ರಾಯೋಗಿಕ ಸಲಹೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.

"ದೊಡ್ಡ ಆಸ್ಪತ್ರೆಗಳು ಅಸ್ಪಷ್ಟ ಕಾರಣಗಳನ್ನು ನೀಡಿ, ವಿಪರೀತ ವಿಳಂಬ ಮಾಡಿ ನನ್ನನ್ನು ವಾಪಸ್ ಕಳುಹಿಸಿದಾಗ, ಅಧಿಕೃತ ವ್ಯವಸ್ಥೆಯನ್ನು ನಂಬಲು ಸಾಧ್ಯವಿಲ್ಲ ಎಂದು ನನಗೆ ತಿಳಿಯಿತು. ನಾನು ಆನ್‌ ಲೈನ್ನಲ್ಲಿ ಗಂಟೆಗಟ್ಟಲೆ ಫೋರಂಗಳಲ್ಲಿನ ವಿಮರ್ಶೆಗಳು ಮತ್ತು ವೈಯಕ್ತಿಕ ಅನುಭವಗಳನ್ನು ಓದಿದೆ. ಆ ಹಂಚಿಕೊಂಡ ಅನುಭವಗಳ ಮೂಲಕ ಖಾಸಗಿ ಕ್ಲಿನಿಕ್ ಒಂದನ್ನು ಹುಡುಕಿದ್ದರಿಂದಲೇ ನನಗೆ ಚಿಕಿತ್ಸೆ ಪಡೆಯಲು ಸಾಧ್ಯವಾಯಿತು. ಆ ಅನಾಮಧೇಯ ಚರ್ಚೆಗಳು ಮತ್ತು ಎಚ್ಚರಿಕೆಗಳು ಇಲ್ಲದಿದ್ದರೆ, ನನ್ನಂತಹ ಮಹಿಳೆಯರು ಸಂಪೂರ್ಣವಾಗಿ ದಿಕ್ಕು ತೋಚದಂತಾಗುತ್ತಿದ್ದರು" ಎಂದು ಎರಡು ಬಾರಿ ಗರ್ಭಪಾತಕ್ಕೆ ಒಳಗಾಗಿದ್ದ ಪುಣೆ ನಿವಾಸಿ ತಾರಾ ಹೇಳಿದ್ದಾರೆ.

ತಮಿಳುನಾಡು ಮತ್ತು ನೆರೆಯ ರಾಜ್ಯಗಳಲ್ಲಿ ಸ್ತ್ರೀವಾದಿ ಕಾರ್ಯಕರ್ತರ ಜಾಲಗಳು ಮಹಿಳೆಯರಿಗೆ ನೇರವಾಗಿ ನೆರವು ನೀಡಲು ಮುಂದಾಗಿವೆ. ಕಾರ್ಯಕರ್ತೆ ಅರ್ಚನಾ ಅವರು ವೈದ್ಯಕೀಯ ಸಮಾಲೋಚನೆ, ತುರ್ತು ಚಿಕಿತ್ಸೆ ಮತ್ತು ಕಾನೂನು ಪ್ರಕ್ರಿಯೆಗಳ ಮೂಲಕ ಹತ್ತಾರು ಮಹಿಳೆಯರ ಜೊತೆ ನಿಂತಿದ್ದಾರೆ.

"ಸಾಮಾನ್ಯ ವೈದ್ಯಕೀಯ ಚಿಕಿತ್ಸೆ ಪಡೆಯಲು ಮಹಿಳೆಯರು ವೈದ್ಯರ ಬಗ್ಗೆ ತನಿಖಾ ಸಂಸ್ಥೆಗಳ ಮಟ್ಟದ ಹಿನ್ನೆಲೆ ಪರಿಶೀಲನೆ ನಡೆಸುವಂತಾಗಬಾರದು. ವೈದ್ಯರಿಂದ ಸುಳ್ಳು ಮಾಹಿತಿ ಪಡೆದ, ಮಾತ್ರೆಗಳಿಂದ ಶಾಶ್ವತವಾಗಿ ಬಂಜೆತನ ಬರುತ್ತದೆ ಎಂದು ಹೆದರಿಸಲ್ಪಟ್ಟ ಅಥವಾ ಪೊಲೀಸ್ ಕ್ರಮದ ಬೆದರಿಕೆಗೆ ಒಳಗಾದ ಯುವತಿಯರಿಂದ ನಮ್ಮ ಜಾಲಕ್ಕೆ ನಿರಂತರವಾಗಿ ಸಂದೇಶಗಳು ಬರುತ್ತವೆ. ನಾವು ಗಂಟೆಗಟ್ಟಲೆ ಕ್ಲಿನಿಕ್ ಗಳನ್ನು ಪರಿಶೀಲಿಸುತ್ತೇವೆ, ಅವರು ಒಬ್ಬಂಟಿಯಲ್ಲ ಎಂದು ವೈದ್ಯರಿಗೆ ತಿಳಿಯುವಂತೆ ಆಸ್ಪತ್ರೆಗೆ ಅವರೊಂದಿಗೆ ಹೋಗುತ್ತೇವೆ ಮತ್ತು ವೈದ್ಯಕೀಯ ವ್ಯವಸ್ಥೆಯು ನೀಡಲು ನಿರಾಕರಿಸುವ ಪ್ರಾಥಮಿಕ ಮಾನಸಿಕ ಧೈರ್ಯವನ್ನು ತುಂಬುತ್ತೇವೆ" ಎಂದು ಅರ್ಚನಾ ಹೇಳಿದ್ದಾರೆ.

►ಕಾನೂನಿನ ಸಂಕೀರ್ಣತೆ: ರಕ್ಷಣಾತ್ಮಕ ವೈದ್ಯಕೀಯ ಪದ್ಧತಿ ಮತ್ತು ಕಾಯ್ದೆಗಳ ಸಂಘರ್ಷ

ವೈದ್ಯರು ಚಿಕಿತ್ಸೆ ನೀಡುವವರ ಬದಲಿಗೆ ತಡೆಗೋಡೆಗಳಂತೆ ಏಕೆ ವರ್ತಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಭಾರತೀಯ ವೈದ್ಯಕೀಯ ಕ್ಷೇತ್ರವನ್ನು ನಿಯಂತ್ರಿಸುವ ಕಾನೂನುಗಳ ಜಟಿಲತೆಯನ್ನು ಗಮನಿಸಬೇಕು.

ವೈದ್ಯಕೀಯ ಮತ್ತು ಕಾನೂನು ತಜ್ಞೆ ಡಾ. ಅಲ್ಕಾ ಬರ್ಧನ್ ಬರುವಾ ಅವರ ಪ್ರಕಾರ, ವೈದ್ಯರು ಮೂರು ಪರಸ್ಪರ ಸಂಘರ್ಷದ ಕಾನೂನುಗಳ ನೆರಳಿನಲ್ಲಿ ಕೆಲಸ ಮಾಡುತ್ತಿದ್ದಾರೆ: ವೈದ್ಯಕೀಯ ಗರ್ಭಪಾತ ಕಾಯ್ದೆ (MTP Act), ಗರ್ಭಧಾರಣಾ ಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ತಡೆ ಕಾಯ್ದೆ (PCPNDT Act), ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO Act).

MTP ಕಾಯ್ದೆಯು ಗರ್ಭಪಾತಕ್ಕೆ ಅನುಮತಿ ನೀಡಿದರೆ, ಹೆಣ್ಣು ಭ್ರೂಣಹತ್ಯೆಯನ್ನು ತಡೆಯಲು ಜಾರಿಗೆ ತಂದ PCPNDT ಕಾಯ್ದೆಯು ದಾಖಲೆಗಳಲ್ಲಿನ ಸಣ್ಣ ವ್ಯತ್ಯಾಸಗಳಿಗೂ ಸ್ತ್ರೀರೋಗ ತಜ್ಞರು ಮತ್ತು ರೇಡಿಯಾಲಜಿಸ್ಟ್ಗಳನ್ನು ಕಠಿಣ ತಪಾಸಣೆ ಮತ್ತು ಕ್ರಿಮಿನಲ್ ಮೊಕದ್ದಮೆಗಳಿಗೆ ಗುರಿಪಡಿಸುತ್ತದೆ. ಅಕ್ರಮ ಲಿಂಗ ಪತ್ತೆ ಪರೀಕ್ಷೆ ನಡೆಸಿದ ಸುಳ್ಳು ಆರೋಪಗಳಿಗೆ ಹೆದರಿ, ಅನೇಕ ವೈದ್ಯರು 'ರಕ್ಷಣಾತ್ಮಕ ವೈದ್ಯಕೀಯ' (Defensive medicine) ಧೋರಣೆಯನ್ನು ಅನುಸರಿಸುತ್ತಾರೆ.

"ಈ ನಿಯಂತ್ರಣ ವಾತಾವರಣವು ವೈದ್ಯರನ್ನು ರಕ್ಷಣಾತ್ಮಕ ಅಧಿಕಾರಿಗಳನ್ನಾಗಿ ಬದಲಾಯಿಸಿದೆ. ಗರ್ಭಪಾತವನ್ನು ಸಂಪೂರ್ಣ ಆರೋಗ್ಯ ಹಕ್ಕು ಎಂದು ಪರಿಗಣಿಸುವ ಬದಲು, ದಂಡ ಸಂಹಿತೆಯಡಿ ಅಪರಾಧಕ್ಕೆ ಒಂದು ವಿನಾಯಿತಿಯಾಗಿ ಇನ್ನೂ ನೋಡಲಾಗುತ್ತಿದೆ. ಹೀಗಾಗಿ ವೈದ್ಯರು ಪ್ರತಿ ಗರ್ಭಪಾತದ ರೋಗಿಯನ್ನು ಸಂಭಾವ್ಯ ಕಾನೂನು ಹೊಣೆಗಾರಿಕೆಯಂತೆ ಕಾಣುತ್ತಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅವರು ಅನಗತ್ಯ ನ್ಯಾಯಾಲಯದ ಅನುಮತಿಗಳನ್ನು ಕೇಳುತ್ತಾರೆ, ಕುಟುಂಬ ಸದಸ್ಯರನ್ನು ಕರೆತರುವಂತೆ ಒತ್ತಾಯಿಸುತ್ತಾರೆ ಅಥವಾ ಚಿಕಿತ್ಸೆ ನೀಡಲು ಸಂಪೂರ್ಣವಾಗಿ ನಿರಾಕರಿಸುತ್ತಾರೆ" ಎಂದು ಡಾ. ಅಲ್ಕಾ ವಿವರಿಸಿದ್ದಾರೆ.

"ಕಾನೂನಿನ ಪ್ರಕಾರ, ಮಹಿಳೆಗೆ 18 ವರ್ಷ ತುಂಬಿದ್ದರೆ ಆಕೆ ಸ್ವಂತ ನಿರ್ಧಾರದ ಮೇಲೆ ಗರ್ಭಪಾತ ಮಾಡಿಸಿಕೊಳ್ಳಬಹುದು. ಸಂಗಾತಿ ಅಥವಾ ಕುಟುಂಬದವರನ್ನು ಕರೆತರುವುದು ಕಾನೂನುಬದ್ಧವಾಗಿ ಕಡ್ಡಾಯವಲ್ಲ. ಆದರೆ, ಅರಿವಳಿಕೆ (Anesthesia) ನೀಡಿ ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭದಲ್ಲಿ, ಶಸ್ತ್ರಚಿಕಿತ್ಸೆಯ ನಂತರದ ಆರೈಕೆಗಾಗಿ ಜೊತೆಯಲ್ಲಿ ಒಬ್ಬರು ಇರುವುದನ್ನು ವೈದ್ಯರು ಬಯಸುತ್ತಾರೆ" ಎಂದು ಡಾ. ಗೀತ್ ಸ್ಪಷ್ಟಪಡಿಸಿದ್ದಾರೆ.

ಅಪ್ರಾಪ್ತ ವಯಸ್ಕರ ವಿಷಯದಲ್ಲಿ ಈ ಕಾನೂನು ಸಂಘರ್ಷ ಮತ್ತಷ್ಟು ಜಟಿಲವಾಗಿದೆ. POCSO ಕಾಯ್ದೆಯಡಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಯಾವುದೇ ಲೈಂಗಿಕ ಚಟುವಟಿಕೆಯ ಬಗ್ಗೆ ವೈದ್ಯರು ಕಡ್ಡಾಯವಾಗಿ ಪೊಲೀಸರಿಗೆ ವರದಿ ಮಾಡಬೇಕು. ಈ ನಿಯಮವು MTP ಕಾಯ್ದೆಯ ಗೌಪ್ಯತೆಯ ಭರವಸೆಗೆ ನೇರವಾಗಿ ವಿರುದ್ಧವಾಗಿದೆ. ಇದರಿಂದ ಗರ್ಭಿಣಿ ಹದಿಹರೆಯದವರು ಅನಪೇಕ್ಷಿತ ಗರ್ಭಧಾರಣೆಯನ್ನು ಮುಂದುವರಿಸುವುದು ಅಥವಾ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಸುಳಿಗೆ ಸಿಲುಕುವುದು—ಈ ಎರಡರಲ್ಲಿ ಒಂದನ್ನು ಆರಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕುತ್ತಾರೆ.

►ಅಡೆತಡೆಗಳನ್ನು ನಿವಾರಿಸುವುದು ಹೇಗೆ?

ಮಹಿಳೆಯರು ಎದುರಿಸುತ್ತಿರುವ ವ್ಯವಸ್ಥಿತ ಅಡೆತಡೆಗಳು, ವೈದ್ಯಕೀಯ ಕಿರುಕುಳ ಮತ್ತು ಆರ್ಥಿಕ ಸುಲಿಗೆಯು ಸುಸಜ್ಜಿತ ವ್ಯವಸ್ಥೆಯೊಂದರಲ್ಲಿ ಆಕಸ್ಮಿಕವಾಗಿ ನಡೆದ ಲೋಪಗಳಲ್ಲ, ಬದಲಾಗಿ ಪುರುಷಪ್ರಧಾನ ನಿಯಂತ್ರಣ ಮತ್ತು ಅನೈತಿಕ ಪೊಲೀಸ್ ಗಿರಿಯಲ್ಲಿ ಬೇರೂರಿರುವ ವೈದ್ಯಕೀಯ ವ್ಯವಸ್ಥೆಯ ಸಹಜ ಫಲಿತಾಂಶವಾಗಿದೆ.

ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಸ್ಟಡೀಸ್ ನ ಸಂಶೋಧನಾ ವಿದ್ಯಾರ್ಥಿನಿ ಹಾಗೂ 'ಸೇಫ್ ಅಬಾರ್ಷನ್ ಕೇರಳಂ' (Safe Abortion Keralam) ಸದಸ್ಯೆ ಫಿರ್ಷಾ ವಿ ಅವರು ಹೇಳುವಂತೆ, ವೈದ್ಯಕೀಯ ವಲಯವು ಗರ್ಭಪಾತವನ್ನು ಅನೈತಿಕ ಅಪರಾಧವೆಂದೋ ಅಥವಾ ಹಣ ಗಳಿಸುವ ವಾಣಿಜ್ಯ ಅವಕಾಶವೆಂದೋ ನೋಡುವುದನ್ನು ನಿಲ್ಲಿಸುವವರೆಗೆ ನಿಜವಾದ ಸುಧಾರಣೆ ಸಾಧ್ಯವಿಲ್ಲ.

"ಲಿಖಿತ ಮತ್ತು ಅಲಿಖಿತ ಅನೈತಿಕ ಕಟ್ಟಳೆಗಳನ್ನು ತೆಗೆದುಹಾಕುವವರೆಗೆ, ಕಾನೂನುಬಾಹಿರ ಒಪ್ಪಿಗೆ ಪತ್ರಗಳ ಬೇಡಿಕೆಯನ್ನು ನಿಲ್ಲಿಸುವವರೆಗೆ ಮತ್ತು ಆಸ್ಪತ್ರೆಗಳನ್ನು ಕಟ್ಟುನಿಟ್ಟಾಗಿ ಹೊಣೆಗಾರರನ್ನಾಗಿ ಮಾಡುವವರೆಗೆ, ವೈದ್ಯಕೀಯ ಗರ್ಭಪಾತ ಕಾಯ್ದೆಯ (MTP Act) ಪ್ರಗತಿಪರ ಕಾನೂನುಗಳು ಕೇವಲ ಕಾಗದದ ಮೇಲಿನ ಬರಹಗಳಾಗಿಯೇ ಉಳಿಯುತ್ತವೆ," ಎಂದು ಅವರು ಹೇಳಿದ್ದಾರೆ.

ಈ ನೈಜ ಅನುಭವಗಳ ಆಧಾರದ ಮೇಲೆ ಕೆಲಸ ಮಾಡುತ್ತಿರುವ 'ಸೇಫ್ ಅಬಾರ್ಷನ್ ಕೇರಳಂ'ನಂತಹ ಸಂಘಟನೆಗಳು ಮತ್ತು ಸಂತಾನೋತ್ಪತ್ತಿ ಹಕ್ಕುಗಳ ಹೋರಾಟಗಾರರ ಪ್ರಕಾರ, ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ಹಲವು ವಿಚಾರಗಳನ್ನು ಏಕಕಾಲದಲ್ಲಿ ಸರಿಪಡಿಸಬೇಕಾಗಿದೆ:

ಮೊದಲನೆಯದಾಗಿ, ಭಾರತೀಯ ನ್ಯಾಯ ಸಂಹಿತೆಯಂತಹ (BNS) ಸಾಮಾನ್ಯ ದಂಡ ಸಂಹಿತೆಗಳಿಂದ ಗರ್ಭಪಾತವನ್ನು ಕೈಬಿಡುವ ಮೂಲಕ ಸರ್ಕಾರ ಅದನ್ನು ಸಂಪೂರ್ಣವಾಗಿ ಅಪರಾಧಮುಕ್ತಗೊಳಿಸಬೇಕು.

"ಗರ್ಭಪಾತವನ್ನು ಕ್ರಿಮಿನಲ್ ಅಪರಾಧಕ್ಕೆ ಒಂದು ವಿನಾಯಿತಿಯಂತೆ ನೋಡುವುದರಿಂದ ವೈದ್ಯರು ರಕ್ಷಣಾತ್ಮಕ ಧೋರಣೆ ತಳೆಯುವಂತಾಗಿದೆ. ಇದರಿಂದ ಪ್ರತಿ ರೋಗಿಯನ್ನೂ ಕಾನೂನಿನ ಹೊಣೆಗಾರಿಕೆಯಂತೆ ಕಾಣಲಾಗುತ್ತದೆ. ಗರ್ಭಪಾತವನ್ನು ಸಂಪೂರ್ಣವಾಗಿ ಅಪರಾಧಮುಕ್ತಗೊಳಿಸಿದರೆ, ವೈದ್ಯರು 'ಅನುಮತಿ ನೀಡುವ' ವ್ಯವಸ್ಥೆಯ ಬದಲಾಗಿ ಸಂವಿಧಾನದ 21ನೇ ವಿಧಿಯಡಿ ಮಹಿಳೆಯರಿಗೆ ಖಾಸಗಿತನ ಮತ್ತು ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಹಕ್ಕು ನೀಡುವ ಮಾದರಿ ಜಾರಿಗೆ ಬರುತ್ತದೆ" ಎಂದು ವೈದ್ಯಕೀಯ ಮತ್ತು ಕಾನೂನು ತಜ್ಞೆ ಅಲ್ಕಾ ಹೇಳಿದ್ದಾರೆ.

ಎರಡನೆಯದಾಗಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿರುವ "ಅನಗತ್ಯ ಆಡಳಿತಾತ್ಮಕ ಅಡೆತಡೆಗಳನ್ನು" ತೆಗೆದುಹಾಕಬೇಕು ಎಂದು ಇಂಡಿಯನ್ ಸ್ಕೂಲ್ ಆಫ್ ಡೆವಲಪ್ಮೆಂಟ್ ಮ್ಯಾನೇಜ್ಮೆಂಟ್ನ ಯೋಜನಾ ಸಲಹೆಗಾರ ಉದಯಸ್ವಾನಿ ಎಸ್ ಮತ್ತು ಫಿರ್ಷಾ ಅವರು 'ಟ್ರೂಕಾಪಿಥಿಂಕ್' (TrueCopyThink) ನಲ್ಲಿ ಪ್ರಕಟವಾದ ಲೇಖನದಲ್ಲಿ ಪ್ರತಿಪಾದಿಸಿದ್ದಾರೆ. ಮೂರನೆಯದಾಗಿ, ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವಿಧಾನಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಬೇಕು ಮತ್ತು ದರ ನಿಯಂತ್ರಣ ಮಾಡಬೇಕು.

ಕೊನೆಯದಾಗಿ, "ವ್ಯವಸ್ಥಿತ ಅಡೆತಡೆಗಳನ್ನು ನಿವಾರಿಸಲು ಮಹಿಳೆಯರಿಗೆ ಪಾರದರ್ಶಕ ಮಾಹಿತಿಯನ್ನು ಒದಗಿಸಬೇಕು. ಇದರಿಂದ ಅವರು ಆಸ್ಪತ್ರೆಗಳ ಬಲೆಗೆ ಬೀಳುವುದನ್ನು ತಪ್ಪಿಸಬಹುದು. ಸ್ವಯಂ-ನಿರ್ವಹಣೆಯ ಗರ್ಭಪಾತ ಮಾತ್ರೆಗಳ ಬಗ್ಗೆ ಕಳಂಕರಹಿತ ಮತ್ತು ಸುಲಭವಾಗಿ ಅರ್ಥವಾಗುವ ಚಿತ್ರಸಹಿತ ಮಾರ್ಗದರ್ಶನವನ್ನು ವಿತರಿಸುವುದರಿಂದ, ಮಹಿಳೆಯರು ಆರಂಭಿಕ ಹಂತದ ಗರ್ಭಪಾತವನ್ನು ಸುರಕ್ಷಿತವಾಗಿ ನಿರ್ವಹಿಸಲು ಮತ್ತು ನಿಜವಾದ ಆರೋಗ್ಯ ಸಮಸ್ಯೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಇದರಿಂದ ಸುಲಿಗೆ ಮಾಡುವ ಖಾಸಗಿ ಕ್ಲಿನಿಕ್ ಗಳಿಗೆ ಬಲಿಯಾಗುವುದು ತಪ್ಪುತ್ತದೆ" ಎಂದು ಅಲ್ಕಾ ವಿವರಿಸಿದ್ದಾರೆ.

ಸಂತಾನೋತ್ಪತ್ತಿ ಆಯ್ಕೆಗಳನ್ನು ಅಪರಾಧವೆಂದು ಪರಿಗಣಿಸುವ ಕಾನೂನಿನ ಚೌಕಟ್ಟನ್ನು ಸರ್ಕಾರ ಬದಲಾಯಿಸುವವರೆಗೆ, ವಾಣಿಜ್ಯ ಶೋಷಣೆಯನ್ನು ನಿಯಂತ್ರಿಸುವವರೆಗೆ ಮತ್ತು ಸ್ತ್ರೀರೋಗ ಚಿಕಿತ್ಸಾಲಯಗಳ ಒಳಗಿರುವ ಪುರುಷಪ್ರಧಾನ ನಿಯಂತ್ರಣವನ್ನು ತೊಡೆದುಹಾಕುವವರೆಗೆ, ತಮ್ಮ ವೈದ್ಯಕೀಯ ಅಗತ್ಯಗಳನ್ನು ಅಪರಾಧವೆಂದೂ, ತಮ್ಮ ದೇಹದ ಮೇಲಿನ ಹಕ್ಕನ್ನು ಚರ್ಚೆಯ ವಿಷಯವೆಂದೂ ಪರಿಗಣಿಸುವ ವ್ಯವಸ್ಥೆಯ ದೈಹಿಕ, ಮಾನಸಿಕ ಮತ್ತು ಆರ್ಥಿಕ ಆಘಾತವನ್ನು ಮಹಿಳೆಯರು ಅನುಭವಿಸುತ್ತಲೇ ಇರಬೇಕಾಗುತ್ತದೆ.

ಸೌಜನ್ಯ: The News Minute

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

ರಶ್ಮಿ ಕಾಸರಗೋಡು ಅವರು ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ 17 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರು. ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿ ವಿಶ್ಲೇಷಣೆಯಲ್ಲಿ ಪರಿಣತಿ ಹೊಂದಿದ್ದಾರೆ. ಇಮೇಲ್ id :kasaragod10rashmi@gmail.com