×
Ad

ಆ್ಯಪ್ ಮೂಲಕ ಆಧಾರ್ ಅಪ್ಡೇಟ್ | ನೀವು ತಿಳಿದುಕೊಳ್ಳಬೇಕಾಗಿರುವುದು ಏನು?

Update: 2026-02-03 18:18 IST

Photo Credit : moneycontrol

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ನೂತನ ಅಪ್ಲಿಕೇಶನ್ ಮೂಲಕ ನಿಮ್ಮ ಆಧಾರ್ ದತ್ತಾಂಶವನ್ನು ರಕ್ಷಿಸಬಹುದು. ಆಫ್ಲೈನ್ ಬಳಕೆಗೂ ಆ್ಯಪ್ ಲಭ್ಯವಿದೆ.

ಆಧಾರ್ ಬಳಕೆ ಇತ್ತೀಚೆಗೆ ಅಧಿಕವಾಗುತ್ತಿದೆ. ಹೋಟೇಲ್, ಆಸ್ಪತ್ರೆ, ಮೊಬೈಲ್ ಅಂಗಡಿ, ಸರ್ಕಾರಿ ಕಚೇರಿ ಸೇರಿದಂತೆ ಇತರೆ ಎಲ್ಲಾ ಸೇವಾ ವಲಯಗಳಲ್ಲಿ ಗುರುತಿನ ದಾಖಲೆಯಾಗಿ ಆಧಾರ್ ಕಾರ್ಡ್ನ ನಕಲಿ ಪ್ರತಿ ನೀಡುತ್ತೇವೆ. ಇದರಿಂದ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಸೇರಿದಂತೆ ಇತರೆ ವೈಯಕ್ತಿಕ ಮಾಹಿತಿಗಳು ಬಹಿರಂಗವಾಗುತ್ತಿವೆ. ಆದ್ದರಿಂದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೂತನ ಅಪ್ಲಿಕೇಶನ್ ಮೂಲಕ ಆಧಾರ್ ದತ್ತಾಂಶವನ್ನು ರಕ್ಷಿಸಲಿದೆ. ಆಫ್ಲೈನ್ ಬಳಕೆಗೂ ಅಪ್ಲಿಕೇಶನ್ ಲಭ್ಯವಿದೆ.

‘ಒಂದೇ ಕುಟುಂಬ- ಒಂದು ಅಪ್ಲಿಕೇಶನ್’ ಯೋಜನೆಯಡಿ ಆಧಾರ್ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿದೆ. ಒಂದು ಮೊಬೈಲ್ ಫೋನ್ ಬಳಸಿಕೊಂಡು 5 ಪ್ರೊಫೈಲ್ಗಳನ್ನು ಸೃಷ್ಟಿಸಬಹುದು. ಅಂದರೆ ಒಂದೇ ಸಾಧನದಲ್ಲಿ ಕುಟುಂಬದ 5 ಸದಸ್ಯರ ಆಧಾರ್ ಮಾಹಿತಿ ಇರಿಸಿಕೊಳ್ಳಬಹುದು. ಕ್ಯುಆರ್ ಕೋಡ್ ಸ್ಕ್ಯಾನ್ ಅಥವಾ ಪಿಡಿಎಫ್ ಮೂಲಕ ಆಧಾರ್ ಮಾಹಿತಿ ಹಂಚಿಕೊಳ್ಳಬಹುದು.

ಕಾಗದ ರಹಿತ ಸೇವೆ

ಇನ್ನು ಮುಂದೆ ವಿವಿಧ ಕೆಲಸಗಳಿಗಾಗಿ ದಾಖಲೆ ಸಲ್ಲಿಸುವ ಸಂದರ್ಭದಲ್ಲಿ ಆಧಾರ್ನ ಭೌತಿಕ ಪ್ರತಿ ನೀಡಬೇಕಾಗಿಲ್ಲ. ಆನ್ಲೈನ್ನಲ್ಲಿಯೇ 2 ಪ್ರಕಾರದಲ್ಲಿ ಹಂಚಿಕೊಳ್ಳಬಹುದು. ಅವುಗಳೆಂದರೆ,

ಹಂಚಿಕೆ ಐಡಿ: ಬಳಕೆದಾರರು ‘ಪಾಸ್ವರ್ಡ್-ರಕ್ಷಿತ ಆಧಾರ್ ಪಿಡಿಎಫ್’ ರಚಿಸಬಹುದು. ಅವಶ್ಯಕತೆಗೆ ಅನುಗುಣವಾಗಿ ಹೆಸರು ಮತ್ತು ವಯಸ್ಸಿನಂತಹ ಆಯ್ಡ ವಿವರಗಳನ್ನು ಮಾತ್ರ ಹಂಚಿಕೊಳ್ಳಬಹುದು.

ಕ್ಯುಆರ್ ಕೋಡ್ ಸ್ಕ್ಯಾನ್: ಅಪ್ಲಿಕೇಶನ್ನಲ್ಲಿ ನಿಮ್ಮ ಆಧಾರ್ ಕ್ಯುಆರ್ ಕೋಡ್ ಲಭ್ಯವಿರಲಿದೆ. ಅಗತ್ಯವಿದ್ದಾಗ ಆಧಾರ್ ಪರಿಶೀಲನೆಗೆ ಇದನ್ನು ಬಳಸಬಹುದು. ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದರೆ ನಿಮ್ಮ ಮಾಹಿತಿ ಆನ್ಲೈನ್ ಮೂಲಕ ಹಸ್ತಾಂತರಗೊಳಿಸಬಹುದು.

ಹೊಸ ಅಪ್ಲಿಕೇಶನ್, ಸಮಯ ಹಾಗೂ ಶ್ರಮ ಎರಡನ್ನೂ ಉಳಿಸಲಿದೆ. ಈ ಹಿಂದೆ ಮೊಬೈಲ್ ಸಂಖ್ಯೆ ಸೇರ್ಪಡೆ ಅಥವಾ ನವೀಕರಣಕ್ಕೆ ಆಧಾರ್ ಸೇವಾ ಕೇಂದ್ರಗಳಿಗೆ ಹೋಗಬೇಕಿತ್ತು. ಆಧಾರ್ ಅಪ್ಲಿಕೇಶನ್ನಲ್ಲಿ ಒಟಿಪಿ ಮತ್ತು ಮುಖ ಪರಿಶೀಲನೆ ಮಾಡುವ ಮೂಲಕ ಸುಲಭವಾಗಿ ಬದಲಿಸಬಹುದಾಗಿದೆ.

ಆಧಾರ್ ಅಪ್ಲಿಕೇಶನ್ ಡೌನ್ಲೋಡ್

ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಸ್ಟೋರ್ನಲ್ಲಿ ಆ್ಯಪ್ ಉಚಿತವಾಗಿ ಲಭ್ಯವಿದೆ. ಡೌನ್ಲೋಡ್ ಮಾಡಿಕೊಂಡು ಆ್ಯಪ್ ತೆರೆಯಬೇಕು. ಅಲ್ಲಿ ಗೋಚರಿಸುವ ನಿಬಂಧನೆಗಳಿಗೆ ಅನುಮತಿ ನೀಡಬೇಕು. ಬಳಿಕ ‘ಬಿಗಿನ್ ಜರ್ನಿ’ ಆಯ್ಕೆ ಮಾಡಿ. ನಂತರ ‘ಕಂಟಿನ್ಯೂ ರಿಜಿಸ್ಟರ್’ ಮೇಲೆ ಕ್ಲಿಕ್ ಮಾಡಿ.

‘ರಿಜಿಸ್ಟರ್ ವಿತ್ ಜಸ್ಟ್ 3 ಸ್ಟೆಪ್ಸ್’ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ‘ಎಂಟರ್ ಯುವರ್ ಆಧಾರ್ ನಂಬರ್’ ಆಯ್ಕೆ ಮಾಡಿ. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ‘ಕನ್ಫರ್ಮ್ ಆಧಾರ್ ನಂಬರ್’ ಮೇಲೆ ಕ್ಲಿಕ್ ಮಾಡಿ. ‘ಟರ್ಮ್ಸ್ ಆ್ಯಂಡ್ ಕಂಡೀಷನ್ಸ್’ ಪುಟ ತೆರೆದುಕೊಳ್ಳುತ್ತದೆ. ‘ಕಂಟಿನ್ಯೂ’ ಆಯ್ಕೆ ಮಾಡಿ. ಈಗ ಮೊಬೈಲ್ ಸಂಖ್ಯೆ ಪರೀಕ್ಷೆಯಾಗುfತದೆ. ಬಳಿಕ ‘ಫೇಸ್ ಅಥೆಂಟಿಫಿಕೇಶನ್’ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ‘ಸ್ಟಾರ್ಟ್ ಫೇಸ್ ಅಥೆಂಟಿಫಿಕೇಶನ್’ ಕ್ಲಿಕ್ ಮಾಡಿ ನಿಮ್ಮ ಮುಖ ಸ್ಕ್ಯಾನ್ ಮಾಡಿ. ನಿಮ್ಮ ಆಧಾರ್ ಅಪ್ಲಿಕೇಶನ್ ದೃಢೀಕರಣವಾಗುತ್ತದೆ. ಆಧಾರ್ ಅಪ್ಲಿಕೇಶನ್ಗೆ ಪಾಸ್ವರ್ಡ್ ಹೊಂದಿಸಬಹುದು. ಈಗ ಆಧಾರ್ ಅಪ್ಲಿಕೇಶಣ್ ಸಂಪೂರ್ಣ ಸೇವೆಗೆ ಸಿದ್ಧವಾಗುತ್ತದೆ.

ಸೌಲಭ್ಯ ಪಡೆಯುವುದು ಹೇಗೆ?

ಅಪ್ಲಿಕೇಶನ್ ಮುಖಪುಟ ತೆರೆಯಿರಿ. ಇದರಲ್ಲಿ ಹಲವು ಆಯ್ಕೆಗಳಿವೆ. ಕೆಳಭಾಗದಲ್ಲಿ ‘ಸೆಲೆಕ್ಟಿವ್ ಶೇರ್, ಡೌನ್ಲೋಡ್ ಆಧಾರ್, ಬಯೊಮೆಟ್ರಿಕ್ ಅನ್ಲಾಕ್ಡ್, ಹೋಮ್, ಸೆಕ್ಯುರಿಟಿಮ ಸರ್ವಿಸಸ್ ಮತ್ತು ಹೆಲ್ಪ್ ಸೇರಿದಂತೆ ನಿಮ್ಮ ಭಾಷೆಯನ್ನು ಆರಿಸಬಹುದು.

ಸೆಲೆಕ್ಟ್ ಶೇರ್ ಆರಿಸಿದರೆ, ನಿಮ್ಮ ಆಧಾರ್ ಮಾಹಿತಿಯನ್ನು ಬೇರೆಯವರಿಗೆ ಕಳುಹಿಸಬಹುದು. ಇದರಲ್ಲಿ ನಿಮಗೆ ಅಗತ್ಯವಿರುವ ಮಾಹಿತಿ ಆರಿಸಿಕೊಳ್ಳಬಹುದು. (ಫೋಟೋ ಮತ್ತು ವಿಳಾಸ ಮಾತ್ರ ಅಗತ್ಯವಿದ್ದರೆ ಅದನ್ನು ಆಯ್ಕೆ ಮಾಡಿ ಕಳುಹಿಸಬಹುದು). ಶೇರ್ ಕಸ್ಟಮ್ ಐಡಿ ಆಯ್ಕೆ ಮಾಡಿ ಮಾಹಿತಿ ಹಂಚಿಕೊಳ್ಳಬಹುದು.

ಡೌನ್ಲೋಡ್ ಆಧಾರ್ ಆಯ್ಕೆ ಮಾಡಿಕೊಂಡು ಎಲ್ಲೆಡೆ ಯಾವಾಗ ಬೇಕಾದರೂ ಡೌನ್ಲೋಡ್ ಮಾಡಬಹುದು. ಆಧಾರ್ ಪಿಡಿಎಫ್ಗೆ ಸುರಕ್ಷಿತ ಪಾಸ್ವರ್ಡ್ ರಚಿಸುವ ಅವಕಾಶವಿದೆ.

ಸೆಕ್ಯುರಿಟಿ ಆಯ್ಕೆಯನ್ನು ಕ್ಲಿಕ್ ಮಾಡಿದರೆ ನೀವು ಈವರೆಗೆ ಆಧಾರ್ನಲ್ಲಿ ಮಾಡಿರುವ ಎಲ್ಲ ಬದಲಾವಣೆಗಳ ಇತಿಹಾಸ ಕಾಣಬಹುದು. ಜೊತೆಗೆ ನಿಮ್ಮ ಆಧಾರ್ ಅಪ್ಲಿಕೇಶನ್ನ ಪಾಸ್ವರ್ಡ್ ಬದಲಿಸಲು ಅವಕಾಶವಿದೆ.

ಸರ್ವಿಸಸ್ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಮೊಬೈಲ್ ನಂಬರ್ ಅಪ್ಡೇಟ್ ಹಾಗೂ ಅಡ್ರೆಸ್ ಅಪ್ಡೇಟ್ ಸೇವೆಗಳು ಲಭ್ಯವಾಗುತ್ತವೆ.

ಮೊಬೈಲ್ ಸಂಖ್ಯೆ ನವೀಕರಣ

ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ಬಯಸಿದರೆ ‘ಮೊಬೈಲ್ ನಂಬರ್ ಅಪ್ಡೇಟ್’ ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ ‘ಕಂಟಿನ್ಯೂ ಟು ಅಪ್ಡೇಟ್ ಮೊಬೈಲ್ ನಂಬರ್’ ಆಯ್ಕೆ ಮಾಡಿ. ಆಧಾರ್ನೊಂದಿಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ನವೀಕರಿಸಬೇಕಾದ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಹೊಸ ಸಂಖ್ಯೆಗೆ ಒಟಿಪಿ ಪಡೆಯಿರಿ. ನಂತರ ಯುಪಿಐ ಮೂಲಕ ನಿಗದಿತ ಶುಲ್ಕ ಪಾವತಿಸಿದರೆ ಮೊಬೈಲ್ ಸಂಖ್ಯೆ ನಿಗದಿತ ಅವಧಿಯೊಳಗೆ ನವೀಕರಣಗೊಳ್ಳುತ್ತದೆ.

ವಿಳಾಸ ಅಪ್ಡೇಟ್ ಮಾಡುವುದು

ವಿಳಾಸವನ್ನು ಬದಲಿಸಲು ಬಯಸಿದರೆ ‘ಅಡ್ರೆಸ್ ಅಪ್ಡೇಟ್’ ಆಯ್ಕೆ ಮಾಡಿ. ‘ಮೈ ಡಾಕ್ಯುಮೆಂಟ್ಸ್’ ಆಯ್ಕೆ ಮಾಡಿ. ‘ಕಂಟಿನ್ಯೂ ಟು ಅಪ್ಡೇಟ್ ಅಡ್ರೆಸ್’ ಕ್ಲಿಕ್ ಮಾಡಿ. ‘ಒಟಿಪಿ’ ದೃಢೀಕರಿಸಿ. ‘ಕಂಟಿನ್ಯೂ’ ಆಯ್ಕೆಮಾಡಿ. ಯಾವುದಾದರೂ ದಾಖಲೆ ಆಯ್ಕೆಮಾಡಿ.

ದಾಖಲೆ ಆಯ್ಕೆ ಮಾಡಿದ ನಂತರ ‘ಕಂಟಿನ್ಯೂ’ ಮೇಲೆ ಕ್ಲಿಕ್ ಮಾಡಿ. ‘ಪಿಡಿಎಫ್’ ರೂಪದಲ್ಲಿರುವ ನಿಮ್ಮ ದಾಖಲೆ ಅಪ್ಲೋಡ್ ಮಾಡಬಹುದು. ಅಥವಾ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬಹುದು. ನಿಮ್ಮ ಲಭ್ಯತೆಗೆ ಅನುಗುಣವಾಗಿ ‘ಸ್ಕ್ಯಾನ್ ಡಾಕ್ಯುಮೆಂಟ್ ಡೈರೆಕ್ಟರಿ’ ಅಥವಾ ‘ಸೆಲೆಕ್ಟ್ ಫೈಲ್ ಟು ಅಪ್ಲೋಡ್’ ಯಾವುದಾದರೂ ಒಂದನ್ನು ಆರಿಸಿ ದಾಖಲೆ ಸಲ್ಲಿಸಿ. ‘ಕಂಟಿನ್ಯೂ ಟು ಆಡ್ ನ್ಯೂ ಅಡ್ರೆಸ್’ ಆಯ್ಕೆ ಮಾಡಿ.

ಬಳಿಕ ನಿಮ್ಮ ಮನೆ ವಿಳಾಸ, ಪಿನ್ಕೋಡ್ ಜಿಲ್ಲೆ, ರಾಜ್ಯ, ಹಳ್ಳಿ, ಅಂಚೆ ಕಚೇರಿಯ ಮಾಹಿತಿ ಭರ್ತಿ ಮಾಡಿ. ಮುಖ ಪರಿಶೀಲನೆ ಮಾಡಿ. ನಿಗದಿತ ಶುಲ್ಕ ಪಾವತಿಸಿದರೆ ನಿಮ್ಮ ವಿಳಾಸ ಬದಲಾಗುತ್ತದೆ.

ಕುಟುಂಬಸ್ಥರ ಪ್ರೊಫೈಲ್ ಸೇರಿಸುವುದು

ಆಧಾರ್ ಅಪ್ಲಿಕೇಶಣ್ ಮುಖಪುಟದ ಮೂಲೆಯಲ್ಲಿ ‘ಆಡ್ ಪ್ರೊಫೈಲ್’ ಕಾಣಿಸುತ್ತದೆ. ಅಲ್ಲಿ ನಿಮ್ಮ ಫೋಟೋ ಮೇಲೆ ಕ್ಲಿಕ್ ಮಾಡಿ. ಬಳಿಕ ‘ಆಡ್ ಎ ನ್ಯೂ ಪ್ರೊಫೈಲ್ ಇನ್ 2 ಸ್ಟೆಪ್’ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ‘ಎಂಟರ್ ಆಧಾರ್ ನಂಬರ್’ ಆಯ್ಕೆ ಮಾಡಿ. ನಂತರ ಕುಟುಂಬದ ಸದಸ್ಯರ ಆಧಾರ್ ಸಂಖ್ಯೆ ನಮೂದಿಸಿ. ಅವರ ಮುಖ ಪರಿಶೀಲನೆ ಮಾಡಿದರೆ ಅಪ್ಲಿಕೇಶನ್ ಜೊತೆ ಅವರ ಪ್ರೊಫೈಲ್ ಲಿಂಕ್ ಆಗುತ್ತದೆ. ಹೀಗೆ ಮನೆಯ 5 ಸದಸ್ಯರ ಆಧಾರ್ ಮಾಹಿತಿ ಸೇರಿಸಬಹುದು. ಜೊತೆಗೆ ಅವರ ಮೊಬೈಲ್ ನಂಬರ್ ಮತ್ತು ವಿಳಾಸವನ್ನು ನವೀಕರಿಸಬಹುದು.

ಕ್ಯುಆರ್ ಕೋಡ್ ಪಡೆಯುವುದು

ಅಪ್ಲಿಕೇಶನ್ ಮುಖಪುಟದ ಮೇಲ್ಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ನ ಕ್ಯುಆರ್ ಕೋಡ್ ಸೃಷ್ಟಿಯಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News