ನರೇಂದ್ರ ಮೋದಿ, ಕೆವಿನ್ ರುಡ್, ಹರ್ದೀಪ್ ಸಿಂಗ್ ಪುರಿ: Epstein files ನಲ್ಲಿ ಹೆಸರಿರುವ ವಿಶ್ವ ನಾಯಕರು ಯಾರ್ಯಾರು?
ನರೇಂದ್ರ ಮೋದಿ, ಕೆವಿನ್ ರುಡ್, ಹರ್ದೀಪ್ ಸಿಂಗ್ ಪುರಿ - Photo : PTI & X
ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ಅಪರಾಧಿಯಾಗಿದ್ದ ಉದ್ಯಮಿ ಜೆಫ್ರಿ ಎಪ್ಸ್ಟೀನ್‌ನ ಅಪರಾಧಗಳ ಕುರಿತು ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ ದಾಖಲೆಯಲ್ಲಿ ವಿಶ್ವದ ಪ್ರಭಾವಿ ನಾಯಕರ ಹೆಸರು ಕೇಳಿಬಂದಿದೆ.ಮೂರು ಮಿಲಿಯನ್‌ಗಿಂತಲೂ ಹೆಚ್ಚು ಪುಟಗಳ ದಾಖಲೆಗಳನ್ನು ಒಳಗೊಂಡಿರುವ ಫೈಲ್‌ಗಳನ್ನು ಅಮೆರಿಕ ಶುಕ್ರವಾರ ಬಿಡುಗಡೆ ಮಾಡಿತ್ತು. ಕಳೆದ ವರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ದಾಖಲೆಗಳ ಬಿಡುಗಡೆಯನ್ನು ಒತ್ತಾಯಿಸಲು ಕಾನೂನನ್ನು ಜಾರಿಗೆ ತಂದ ನಂತರ ಇದನ್ನು ಬಿಡುಗಡೆ ಮಾಡಲಾಗಿದೆ.
2008 ರಲ್ಲಿ ಎಪ್ಸ್ಟೀನ್ ಮೇಲೆ ಲೈಂಗಿಕ ಅಪರಾಧಗಳ ಆರೋಪ ಹೊರಿಸಲಾಗಿತ್ತು. ಆದರೆ ಪ್ರಾಸಿಕ್ಯೂಟರ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಜೀವಾವಧಿ ಶಿಕ್ಷೆಯನ್ನು ಎದುರಿಸಬೇಕಾಗಿದ್ದ ಆತ ಬರೀ 18 ತಿಂಗಳ ಜೈಲು ಶಿಕ್ಷೆ ಅನುಭವಿಸಿದ್ದ. ಜೈಲಿನಿದ್ದಾಗಲೂ ಆತನಿಗೆ ದಿನಕ್ಕೆ 12 ಗಂಟೆಗಳ ಕಾಲ, ವಾರಕ್ಕೆ ಆರು ದಿನಗಳು "ಕೆಲಸದ ಬಿಡುಗಡೆ" ಯ ಮೇಲೆ ಕಚೇರಿಗೆ ಹೋಗಲು ಅವಕಾಶ ನೀಡಲಾಗಿತ್ತು. 13 ತಿಂಗಳ ನಂತರ ಆತನನ್ನು ಪ್ರೊಬೇಶನ್‌ನಲ್ಲಿ ಬಿಡುಗಡೆ ಮಾಡಲಾಯಿತು.
2019ರಲ್ಲಿ ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ, ಕಳ್ಳಸಾಗಣೆ ಸೇರಿದಂತೆ ಆರೋಪಗಳ ಮೇಲೆ ಆತನನ್ನು ಮತ್ತೆ ಬಂಧಿಸಲಾಗಿತ್ತು. ಆದರೆ ಈ ಪ್ರಕರಣದ ವಿಚಾರಣೆ ಪ್ರಾರಂಭವಾಗುವ ಮೊದಲೇ ಎಪ್ಸ್ಟೀನ್ 2019 ರಲ್ಲಿ ಮ್ಯಾನ್‌ಹ್ಯಾಟನ್ ಜೈಲಿನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ.
ಆತನ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಇಮೇಲ್‌ಗಳ ಬಗ್ಗೆ ಎಪ್ಸ್ಟೀನ್ ಫೈಲ್ ನಲ್ಲಿ ಬಹಿರಂಗವಾಗಿದೆ. ಇದರಲ್ಲಿ ಆತ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ, ನಾರ್ವೆ, ಸ್ಲೋವಾಕಿಯಾ ಮತ್ತು ಭಾರತದ ಶ್ರೀಮಂತ ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗಿನ ಸಂವಹನ ನಡೆಸಿರುವ ಬಗ್ಗೆಯೂ ಮಾಹಿತಿ ಇದೆ.
ಎಪ್ಸ್ಟೀನ್ ದಾಖಲೆ ಅಥವಾ ಇಮೇಲ್‌ಗಳಲ್ಲಿ ಹೆಸರಿಸಲ್ಪಟ್ಟ ಮಾತ್ರಕ್ಕೆ ಒಬ್ಬ ವ್ಯಕ್ತಿಯು ಕ್ರಿಮಿನಲ್ ತಪ್ಪು ಮಾಡಿದ ತಪ್ಪಿತಸ್ಥನೆಂದು ಅರ್ಥವಲ್ಲ. ಇಲ್ಲಿಯವರೆಗೆ ಇದರಲ್ಲಿ ಹೆಸರಿಸಲಾದ ವ್ಯಕ್ತಿಗಳ ವಿರುದ್ಧ ಯಾವುದೇ ಆರೋಪಗಳನ್ನು ಹೊರಿಸಲಾಗಿಲ್ಲ.
ಆದಾಗ್ಯೂ, ಹೊಸ ದಾಖಲೆಗಳು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಬಿಲ್ ಗೇಟ್ಸ್ ಮತ್ತು ಎಲಾನ್ ಮಸ್ಕ್‌ನಂತಹ ವ್ಯವಹಾರ ಉದ್ಯಮಿಗಳು ಸೇರಿದಂತೆ ಅಮೆರಿಕದ ಉನ್ನತ ವ್ಯಕ್ತಿಗಳ ನಡುವಿನ ಸಂವಹನವನ್ನು ತೋರಿಸುತ್ತವೆ. ಈ ದಾಖಲೆಗಳಲ್ಲಿ ಇತರ ದೇಶಗಳ ಪ್ರಭಾವಿ ನಾಯಕರ ಹೆಸರುಗಳೂ ಕಾಣಿಸಿಕೊಂಡಿವೆ. ಎಪ್ಸ್ಟೀನ್ ಫೈಲ್ ನಲ್ಲಿ ಉಲ್ಲೇಖಿಸಲಾಗಿರುವ ನಾಯಕರು ಯಾರು? ಯಾವ ವಿಷಯದ ಬಗ್ಗೆ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ ಎಂಬುದನ್ನು ನೋಡೋಣ
► ಭಾರತದ ಪ್ರಧಾನಿ ನರೇಂದ್ರ ಮೋದಿ
ಶುಕ್ರವಾರ ಬಿಡುಗಡೆಯಾದ ದಾಖಲೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಆಪ್ತರಾಗಿರುವ ರಿಲಯನ್ಸ್ ಗ್ರೂಪ್‌ನ ಬಿಲಿಯನೇರ್ ಅಧ್ಯಕ್ಷ ಅನಿಲ್ ಅಂಬಾನಿ ಮತ್ತು ಎಪ್ಸ್ಟೀನ್ ನಡುವಿನ ಸಂಭಾಷಣೆಗಳಿವೆ. ಎಲ್ಲಾ ಸಂಭಾಷಣೆಗಳು 2008 ರಲ್ಲಿ ಲೈಂಗಿಕ ಅಪರಾಧಗಳಿಗೆ ಎಪ್ಸ್ಟೀನ್ ಮೊದಲ ಬಾರಿ ಶಿಕ್ಷೆಗೊಳಗಾದ ನಂತರದ ವರ್ಷಗಳಲ್ಲಿ ನಡೆದವು. ಭಾರತಕ್ಕೆ ಬರುವ ಅಮೆರಿಕದ ರಾಯಭಾರಿಗಳ ಸಂಖ್ಯೆಯನ್ನು ನಿರ್ಧರಿಸುವುದರಿಂದ ಹಿಡಿದು ಅಮೆರಿಕದ ಉನ್ನತ ಅಧಿಕಾರಿಗಳೊಂದಿಗೆ ಮೋದಿಗಾಗಿ ಸಭೆಗಳನ್ನು ಏರ್ಪಡಿಸುವವರೆಗೆ ಹಲವಾರು ವಿಷಯಗಳ ಬಗ್ಗೆ ಇಬ್ಬರೂ ಪರಸ್ಪರ ಇಮೇಲ್ ಸಂವಹನ ನಡೆಸಿದ್ದಾರೆ ಎಂಬುದು ಈ ದಾಖಲೆಯಲ್ಲಿದೆ
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ಕಿರಿಯ ಸಹೋದರ ಅನಿಲ್ ಅಂಬಾನಿ ಪ್ರಧಾನಿ ಮೋದಿಗೂ ಆಪ್ತರು.
ಮಾರ್ಚ್ 16, 2017 ರಂದು, ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ತಮ್ಮ ಮೊದಲ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ ಎರಡು ತಿಂಗಳ ನಂತರ, ಅಂಬಾನಿ ಎಪ್ಸ್ಟೀನ್‌ಗೆ ಐಮೇಸೇಜ್ ಕಳುಹಿಸಿದ್ದಾರೆ. ಜೇರೆಡ್ ಕುಶ್ನರ್ ಮತ್ತು ಸ್ಟೀವ್ ಬ್ಯಾನನ್ ಸೇರಿದಂತೆ ಟ್ರಂಪ್ ವಲಯದ ಹಿರಿಯ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು "ನಾಯಕತ್ವ" ತನ್ನ ಸಹಾಯವನ್ನು ಕೇಳುತ್ತಿದೆ ಎಂಬುದಾಗಿತ್ತು ಆ ಸಂದೇಶ.
ಮೇ ತಿಂಗಳಲ್ಲಿ ಟ್ರಂಪ್ ಅವರನ್ನು ಭೇಟಿ ಮಾಡುವುದಕ್ಕಾಗಿ ಮೋದಿ ಭೇಟಿ ನೀಡುವ ಸಾಧ್ಯತೆಯ ಬಗ್ಗೆ ಅಂಬಾನಿ ಎಪ್ಸ್ಟೀನ್ ಅವರಿಂದ ಸಲಹೆ ಕೇಳಿದ್ದಾರೆ.
ಎರಡು ವಾರಗಳ ನಂತರ, ಮಾರ್ಚ್ 29 ರಂದು ನಡೆದ ಮತ್ತೊಂದು ಐಮೆಸೇಜ್ ವಿನಿಮಯದಲ್ಲಿ, ಎಪ್ಸ್ಟೀನ್ ಅನಿಲ್ ಅಂಬಾನಿಗೆ ಹೀಗೆ ಉತ್ತರಿಸಿದ್ದಾರೆ: "ಇಸ್ರೇಲ್ ಕಾರ್ಯತಂತ್ರದ ಕುರಿತಾದ ಚರ್ಚೆಗಳು ಮೋದಿಯ ದಿನಾಂಕದ ಮೇಲೆ ಪ್ರಾಬಲ್ಯ ಸಾಧಿಸುತ್ತಿವೆ. ಇದಕ್ಕೆ ಎರಡು ದಿನಗಳ ನಂತರ ಉತ್ತರಿಸಿದ ಅನಿಲ್ ಅಂಬಾನಿ, ಮೋದಿ ಜುಲೈನಲ್ಲಿ ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ. "ನಿಮಗೆ ಟ್ರ್ಯಾಕ್ 2 ಗಾಗಿ ಯಾರು ಗೊತ್ತು" ಎಂದು ಕೇಳಿದ್ದಾರೆ.
ಜೂನ್ 26 ರಂದು, ಟ್ರಂಪ್ ಅಧ್ಯಕ್ಷರಾದ ನಂತರ ಮೋದಿ ವಾಷಿಂಗ್ಟನ್ ನಲ್ಲಿ ಟ್ರಂಪ್ ಅವರನ್ನು ಭೇಟಿಯಾದರು. ನಂತರ, 2017 ಜುಲೈ 6 ರಂದು, ಮೋದಿ ಇಸ್ರೇಲ್‌ಗೆ ಭೇಟಿ ನೀಡಿದರು.
ಆ ವರ್ಷ, ಭಾರತ 715 ಮಿಲಿಯನ್ ಡಾಲರ್ ಮೌಲ್ಯದ ಇಸ್ರೇಲಿ ಶಸ್ತ್ರಾಸ್ತ್ರಗಳ ಅತಿದೊಡ್ಡ ಖರೀದಿದಾರರಾಯಿತು. ಈ ಭೇಟಿಯು 1992 ರಲ್ಲಿ ಇಸ್ರೇಲ್ ಜೊತೆ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು ತೆರೆಯಿತು. ಅದಕ್ಕೂ ಮೊದಲು, 1948 ರಲ್ಲಿ ದೇಶ ರಚನೆಯಾದಾಗಿನಿಂದ ಭಾರತವು ಭಾರತೀಯ ನಾಗರಿಕರನ್ನು ಇಸ್ರೇಲ್‌ಗೆ ಪ್ರಯಾಣಿಸುವುದನ್ನು ನಿಷೇಧಿಸಿತ್ತು.
ಜುಲೈ 6 ರಂದು ಮೋದಿ ಅವರ ಭೇಟಿಯ ನಂತರ, ಎಪ್ಸ್ಟೀನ್ ಅವರು "Jabor Y" ಎಂದು ಉಲ್ಲೇಖಿಸಿದ ಅಪರಿಚಿತ ವ್ಯಕ್ತಿಗೆ ಇಮೇಲ್ ಮಾಡಿ, "ಭಾರತದ ಪ್ರಧಾನಿ ಮೋದಿ ಸಲಹೆ ಪಡೆದರು. ಅಮೆರಿಕ ಅಧ್ಯಕ್ಷರ ಪ್ರಯೋಜನಕ್ಕಾಗಿ ಇಸ್ರೇಲ್‌ನಲ್ಲಿ ನೃತ್ಯ ಮಾಡಿದರು. ಹಾಡು ಹಾಡಿದರು. ಅವರು ಕೆಲವು ವಾರಗಳ ಹಿಂದೆ ಭೇಟಿಯಾದರು.. ಇದು ಕೆಲಸ ಮಾಡಿತು! ಎಂದಿದ್ದಾರೆ.
ಅಂಬಾನಿ ರಿಲಯನ್ಸ್ ಡಿಫೆನ್ಸ್ ಲಿಮಿಟೆಡ್ ಕಳೆದ ವರ್ಷ ಇಸ್ರೇಲಿ ರಾಜ್ಯ ರಕ್ಷಣಾ ಗುಂಪಿನೊಂದಿಗೆ ಒಂದು ದಶಕದಲ್ಲಿ 10 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದದಲ್ಲಿ ಜಂಟಿ ಉದ್ಯಮವನ್ನು ಮಾಡಿಕೊಂಡಿತು.
ಮೋದಿ ಅವರ ಇಸ್ರೇಲ್ ಭೇಟಿಯ ಸ್ವಲ್ಪ ಸಮಯದ ನಂತರ, ಹಾರ್ವರ್ಡ್ ವಿಶ್ವವಿದ್ಯಾಲಯದ ಮಾಜಿ ಅಧ್ಯಕ್ಷ ಮತ್ತು ಯುಎಸ್ ಖಜಾನೆಯ ಮಾಜಿ ಕಾರ್ಯದರ್ಶಿ ಲ್ಯಾರಿ ಸಮ್ಮರ್ಸ್, ಪ್ರತಿಸ್ಪರ್ಧಿ ಅಭ್ಯರ್ಥಿ ಹಿಲರಿ ಕ್ಲಿಂಟನ್ ಗಿಂತ ಟ್ರಂಪ್ ಇನ್ನೂ ಉತ್ತಮ ಅಧ್ಯಕ್ಷರಾಗಿದ್ದಾರೆ ಎಂದು ನೀವು ಭಾವಿಸುತ್ತೀರಾ ಎಂದು ಎಪ್ಸ್ಟೀನ್ ಅವರನ್ನು ಕೇಳಿದರು. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಎಪ್ಸ್ಟೀನ್, "ಹೌದು, ಖಂಡಿತ ಭಾರತ ಇಸ್ರೇಲ್. ಉದಾಹರಣೆಗೆ ಅದ್ಭುತ ಮತ್ತು ಅವರ ಎಲ್ಲಾ ಕಾರ್ಯಗಳು ಎಂದು ಹೇಳಿದರು.
ಇತ್ತೀಚಿನ ದಾಖಲೆಗಳಲ್ಲಿ ಬಹಿರಂಗಗೊಂಡ ಮತ್ತೊಂದು ಸಂಭಾಷಣೆಯಲ್ಲಿ, 2019ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಭಾರಿ ಬಹುಮತವನ್ನು ಗಳಿಸಿದ ಕೆಲವೇ ಗಂಟೆಗಳ ನಂತರ, ಮೋದಿ ಮತ್ತು ಶ್ವೇತಭವನದ ಮಾಜಿ ಮುಖ್ಯ ತಂತ್ರಜ್ಞ ಸ್ಟೀವ್ ಬ್ಯಾನನ್ ನಡುವೆ ಸಭೆಯನ್ನು ಏರ್ಪಡಿಸಲು ಎಪ್ಸ್ಟೀನ್ ಪ್ರಸ್ತಾಪಿಸಿದರು.
ಮೇ 19, 2019 ರಂದು ಬ್ಯಾನನ್‌ಗೆ ಬರೆದ ಐ-ಮೆಸೇಜ್‌ನಲ್ಲಿ, ಎಪ್ಸ್ಟೀನ್ ಅಂಬಾನಿಯನ್ನು ಉಲ್ಲೇಖಿಸಿ, "ಮೋದಿ ಗುರುವಾರ ನನ್ನನ್ನು ನೋಡಲು ಒಬ್ಬರನ್ನು ಕಳುಹಿಸುತ್ತಿದ್ದಾರೆ" ಎಂದು ಬರೆದಿದ್ದಾರೆ.
ಆ ಗುರುವಾರ, ಮೇ 23 ರಂದು, ಎಪ್ಸ್ಟೀನ್ ನ್ಯೂಯಾರ್ಕ್ ನಲ್ಲಿ ಅನಿಲ್ ಅಂಬಾನಿಯನ್ನು ಭೇಟಿಯಾದರು. ಆ ದಿನದ ಅವರ ದಿನಚರಿಯಲ್ಲಿ ಬೇರೆ ಯಾವುದೇ ಸಭೆಯನ್ನು ನಿಗದಿಪಡಿಸಲಾಗಿಲ್ಲ.
ಅಂಬಾನಿ ಜತೆಗಿನ ಭೇಟಿಯ ನಂತರ, ಎಪ್ಸ್ಟೀನ್ ಬ್ಯಾನನ್ ಗೆ ಬರೆದ ಪತ್ರದಲ್ಲಿ ಈ ರೀತಿ ಬರೆದಿದ್ದಾರೆ- "ಮೋದಿ ಜತೆಗಿನ ಸಭೆ ನಿಜವಾಗಿಯೂ ಆಸಕ್ತಿದಾಯಕವಾಗಿತ್ತು. ಅವರು (2019 ರ ಸಂಸತ್ ಚುನಾವಣೆಯಲ್ಲಿ) ಭಾರಿ ಬಹುಮತದೊಂದಿಗೆ ಗೆದ್ದರು. ಆದರೆ ವಾಷಿಂಗ್ಟನ್‌ನಲ್ಲಿ ಮೋದಿ ಅವರೊಂದಿಗೆ ಯಾರೂ ಮಾತನಾಡುವುದಿಲ್ಲ ಎಂದು ತನ್ನನ್ನು ಭೇಟಿಯಾದ ವ್ಯಕ್ತಿ ಹೇಳಿದರು. ಅವರ ಮುಖ್ಯ ಶತ್ರು ಚೀನಾ ಮತ್ತು ಪಾಕಿಸ್ತಾನ. ಅವರು 22 ರಲ್ಲಿ g20 ಆಯೋಜಿಸುತ್ತಾರೆ.ಮೋದಿಗೆ ನಿಮ್ಮ ದೂರದೃಷ್ಟಿಯಲ್ಲಿ ಸಂಪೂರ್ಣ ವಿಶ್ವಾಸವಿದೆ
ನಂತರ ಎಪ್ಸ್ಟೀನ್ ಅಂಬಾನಿಗೆ ಕಳುಹಿಸಿದ ಸಂದೇಶದಲ್ಲಿ "ಮೋದಿ ಸ್ಟೀವ್ ಬ್ಯಾನನ್ ಅವರನ್ನು ಭೇಟಿಯಾದರೆ ಖುಷಿಯಾಗಬಹುದು ಎಂದು ನಾನು ಭಾವಿಸುತ್ತೇನೆ, ನೀವೆಲ್ಲರೂ ಚೀನಾ ಸಮಸ್ಯೆಯನ್ನು ಹಂಚಿಕೊಳ್ಳುತ್ತೀರಿ ಎಂದಿದ್ದಾರೆ. ಇದಕ್ಕೆ ಅಂಬಾನಿ "Sure" ಎಂದು ಉತ್ತರಿಸಿದರು.
ನಂತರ ಎಪ್ಸ್ಟೀನ್ ಬ್ಯಾನನ್ ಕಳುಹಿಸಿದ ಪ್ರತಿಕ್ರಿಯೆಯಲ್ಲಿ 'ಮೋದಿ ಆನ್ ಬೋರ್ಡ್' ಎಂದಿದೆ
ಭಾರತ ಸರ್ಕಾರದ ಪರವಾಗಿ ಅಂತಹ ನಿರ್ಧಾರಗಳನ್ನು ಅನುಮೋದಿಸಲು ಅನಿಲ್ ಅಂಬಾನಿಗೆ ಅಧಿಕಾರವಿದೆಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಆ ಸಮಯದಲ್ಲಿ ಬ್ಯಾನನ್ ಮತ್ತು ಭಾರತೀಯ ಅಧಿಕಾರಿಗಳ ನಡುವೆ ನಡೆದ ಸಭೆಯ ಯಾವುದೇ ಸಾರ್ವಜನಿಕ ದಾಖಲೆಗಳಿಲ್ಲ.
► ಹರ್ದೀಪ್ ಸಿಂಗ್ ಪುರಿ, ಭಾರತೀಯ ರಾಜಕಾರಣಿ
ಎಪ್ಸ್ಟೀನ್ ಫೈಲ್ ಗಳಲ್ಲಿ ಕಾಣಿಸಿಕೊಂಡಿರುವ ಭಾರತದ ಮತ್ತೊಂದು ಪ್ರಮುಖ ಹೆಸರು ಹರ್ದೀಪ್ ಸಿಂಗ್ ಪುರಿ, ಅವರು 2014 ರಲ್ಲಿ ಭಾರತೀಯ ವಿದೇಶಾಂಗ ಸೇವೆಯಿಂದ ನಿವೃತ್ತರಾಗಿ ಬಿಜೆಪಿ ಸೇರಿದ್ದಾರೆ.
ದಾಖಲೆಗಳಲ್ಲಿ ಪುರಿ ಮತ್ತು ಎಪ್ಸ್ಟೀನ್ ನಡುವಿನ ಇಮೇಲ್ ವಿನಿಮಯಗಳು ಪ್ರಾರಂಭವಾಗಿದ್ದು ಜೂನ್ 2014ರಲ್ಲಿ.ಎಪ್ಸ್ಟೀನ್, ಲಿಂಕ್ಡ್‌ಇನ್‌ನ ಸಹ-ಸಂಸ್ಥಾಪಕ ರೀಡ್ ಹಾಫ್‌ಮನ್ ಬಗ್ಗೆ ಪುರಿ ಅವರಿಗೆ ಇಮೇಲ್ ಕಳುಹಿಸಿದ್ದು, ಹಾಫ್‌ಮನ್ ಭಾರತಕ್ಕೆ ಭೇಟಿ ನೀಡಲು ಪುರಿ ವ್ಯವಸ್ಥೆ ಮಾಡಿದ್ದಾರೆ.
ಇಮೇಲ್‌ಗಳ ವಿನಿಮಯದ ನಂತರ, ಪುರಿ ಭಾರತದಲ್ಲಿ ಹೂಡಿಕೆ ಅವಕಾಶಗಳಿಗಾಗಿ ಎಪ್ಸ್ಟೀನ್ ಮತ್ತು ಹಾಫ್‌ಮನ್ ಗೆ ವಿವರವಾದ ಪತ್ರ ಬರೆದಿದ್ದಾರೆ. ಅವರು ಹೊಸದಾಗಿ ಆಯ್ಕೆಯಾದ ಮೋದಿ ಸರ್ಕಾರದ ಅಡಿಯಲ್ಲಿ ಭಾರತದಲ್ಲಿ ಆರ್ಥಿಕ ಯೋಜನೆಗಳನ್ನು ರೂಪಿಸಿದರು. ಹಾಫ್‌ಮನ್ ಅವರನ್ನು ಭೇಟಿ ಮಾಡಲು ಒತ್ತಾಯಿಸಿದರು. ಪುರಿ ಎಪ್ಸ್ಟೀನ್ ಅವರನ್ನು ಕನಿಷ್ಠ ಮೂರು ಸಂದರ್ಭಗಳಲ್ಲಿ ಫೆಬ್ರವರಿ 4, 2015, ಜನವರಿ 6, 2016 ಮತ್ತು ಮೇ 19, 2017 ರಲ್ಲಿ ತಮ್ಮ ಮ್ಯಾನ್‌ಹ್ಯಾಟನ್ ಟೌನ್‌ಹೌಸ್ ನಲ್ಲಿ ಭೇಟಿಯಾದರು ಎಂದು ದಾಖಲೆಗಳು ತೋರಿಸುತ್ತವೆ.
ಎಪ್ಸ್ಟೀನ್ ಅವರ ಭೇಟಿಗಳು ಮತ್ತು ಸಂವಹನಗಳು ಕಟ್ಟುನಿಟ್ಟಾಗಿ ವ್ಯವಹಾರಕ್ಕೆ ಸಂಬಂಧಿಸಿವೆ ಎಂದು ಪುರಿ ಪ್ರತಿಕ್ರಿಯಿಸಿದ್ದಾರೆ.
ಡಿಸೆಂಬರ್ 2014 ರಲ್ಲಿ, ಪುರಿ ಮತ್ತೊಮ್ಮೆ ಎಪ್ಸ್ಟೀನ್‌ಗೆ ಇಮೇಲ್ ಬರೆದಿದ್ದು,"ನೀವು ನಿಮ್ಮ ವಿನೂತನ ದ್ವೀಪದಿಂದ ಹಿಂತಿರುಗಿದಾಗ ದಯವಿಟ್ಟು ನನಗೆ ತಿಳಿಸಿ" ಎಂದಿದ್ದಾರೆ. "ಭಾರತದಲ್ಲಿ ಆಸಕ್ತಿಯನ್ನು ಹುಟ್ಟುಹಾಕಲು" ಎಪ್ಸ್ಟೀನ್‌ಗೆ ಕೆಲವು ಪುಸ್ತಕಗಳನ್ನು ನೀಡಬೇಕಿದೆ ಅದಕ್ಕಾಗಿ ಸಭೆಯನ್ನು ಏರ್ಪಡಿಸುವಂತೆ ಪುರಿ ಕೇಳಿಕೊಂಡಿದ್ದಾರೆ.
► ಭಾರತ ಸರ್ಕಾರ ಹೇಗೆ ಪ್ರತಿಕ್ರಿಯಿಸಿದೆ?
ಎಪ್ಸ್ಟೀನ್ ಫೈಲ್‌ಗಳಲ್ಲಿ ಮೋದಿ ಅವರ ಉಲ್ಲೇಖಗಳನ್ನು ಭಾರತ ನಿರಾಕರಿಸಿದೆ.
“ಜುಲೈ 2017 ರಲ್ಲಿ ಪ್ರಧಾನಿಯವರ ಇಸ್ರೇಲ್ ಗೆ ಅಧಿಕೃತ ಭೇಟಿಯ ಸಂಗತಿಯನ್ನು ಮೀರಿ, ಇಮೇಲ್ ನಲ್ಲಿನ ಉಳಿದ ಪ್ರಸ್ತಾಪಗಳು ಶಿಕ್ಷೆಗೊಳಗಾದ ಅಪರಾಧಿಯೊಬ್ಬರ ಕೀಳು ಆಲೋಚನೆಗಳು ಅಲ್ಲದೆ ಹೆಚ್ಚೇನೂ ಅಲ್ಲ, ಇದನ್ನು ಅತ್ಯಂತ ತಿರಸ್ಕಾರದಿಂದ ತಳ್ಳಿಹಾಕಬೇಕು” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಶನಿವಾರ ಹೇಳಿದ್ದಾರೆ.
ಆದಾಗ್ಯೂ, ಕಾಂಗ್ರೆಸ್ ಪಕ್ಷದ ನೇತೃತ್ವದ ವಿರೋಧ ಪಕ್ಷವು ಇತ್ತೀಚಿನ ಬಹಿರಂಗಪಡಿಸುವಿಕೆಗಳ ಬಗ್ಗೆ ವಿಶೇಷವಾಗಿ ಇಸ್ರೇಲ್ ಸಂಬಂಧಗಳಿಗೆ ಸಂಬಂಧಿಸಿದವುಗಳ ಬಗ್ಗೆ ಸರ್ಕಾರದಿಂದ ಉತ್ತರಗಳನ್ನು ಕೋರಿದೆ.
ಕಾಂಗ್ರೆಸ್ ಪಕ್ಷದ ಸಂಘಟನಾ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಎಕ್ಸ್‌ನಲ್ಲಿ ಬರೆದ ಪೋಸ್ಟ್ ನಲ್ಲಿ “ಎಪ್ಸ್ಟೀನ್ ಫೈಲ್ಸ್‌ನ ಹೊಸ ಬ್ಯಾಚ್ ನ ವರದಿಗಳು ಪ್ರಧಾನಿ ಮೋದಿಯನ್ನು ಸಂಪರ್ಕಿಸುವ ವಿಕೃತ ವ್ಯಕ್ತಿಗಳ ಬಗ್ಗೆ ಮತ್ತು ಅವರು ವಿದೇಶಿ ಕುಶಲತೆಗೆ ಎಷ್ಟು ಒಳಗಾಗುತ್ತಾರೆ ಎಂಬುದರ ಬಗ್ಗೆ ಒಂದು ದೊಡ್ಡ ಎಚ್ಚರಿಕೆಯ ಕರೆಯಾಗಿದೆ. ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುವ ಈ ಬಹಿರಂಗಪಡಿಸುವಿಕೆಗಳ ಬಗ್ಗೆ ಪ್ರಧಾನಿ ವೈಯಕ್ತಿಕವಾಗಿ ಸ್ಪಷ್ಟನೆ ನೀಡಬೇಕೆಂದು ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದಿದ್ದಾರೆ.
► ಕೆವಿನ್ ರುಡ್, ಮಾಜಿ ಆಸ್ಟ್ರೇಲಿಯಾದ ಪ್ರಧಾನಿ
2007 ರಿಂದ 2010 ರವರೆಗೆ ಮತ್ತು ಮತ್ತೆ 2013 ರಲ್ಲಿ ದೇಶದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಆಸ್ಟ್ರೇಲಿಯಾದ ರಾಜತಾಂತ್ರಿಕ ಕೆವಿನ್ ರುಡ್ ಅವರ ಹೆಸರು ಕೂಡಾ ಎಪ್ಸ್ಟೀನ್ ಫೈಲ್ ಗಳಲ್ಲಿದೆ.
ಜೂನ್ 8, 2014 ರಂದು ಸಂಜೆ 4:30 ಕ್ಕೆ ಎಪ್ಸ್ಟೀನ್ ಅವರ ದೈನಂದಿನ ಸಭೆಯ ವೇಳಾಪಟ್ಟಿಯಲ್ಲಿ ರುಡ್ ಅವರ ಹೆಸರು ಇದೆ. ಆ ದಿನ ಎಪ್ಸ್ಟೀನ್, ರುಡ್ ಅವರ ಜತೆಗಿನ ಸಭೆ ಸೇರಿದಂತೆ ಹಲವಾರು ಸಭೆಗಳಿಗಾಗಿ ಯುಎಸ್ ವರ್ಜಿನ್ ದ್ವೀಪಗಳಲ್ಲಿರುವ ತನ್ನ ಖಾಸಗಿ ದ್ವೀಪವಾದ ಲಿಟಲ್ ಸೇಂಟ್ ಜೇಮ್ಸ್‌ನಿಂದ ನ್ಯೂಯಾರ್ಕ್ ಗೆ ಪ್ರಯಾಣಿಸಿದ್ದಾರೆ.
ಪ್ರಸ್ತುತ ಅಮೆರಿಕದಲ್ಲಿ ಆಸ್ಟ್ರೇಲಿಯಾದ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿರುವ ರುಡ್, ತಾನು ಎಪ್ಸ್ಟೀನ್ ಅವರನ್ನು ಭೇಟಿ ಮಾಡಿಲ್ಲ.ಅವರೊಂದಿಗೆ ಯಾವುದೇ ಗೆಳೆತನ ಹೊಂದಿಲ್ಲ ಎಂದಿದ್ದಾರೆ.
ಆದರೆ ಹೊಸದಾಗಿ ಬಿಡುಗಡೆಯಾದ ಫೈಲ್‌ಗಳು, ನಿಗದಿತ ಅಪಾಯಿಂಟ್ ಮೆಂಟ್ ಗೆ ಎರಡು ದಿನಗಳ ಮೊದಲು, ಎಪ್ಸ್ಟೀನ್ ಜೂನ್ 6, 2014 ರಂದು ಮುಂಬರುವ ರವಿವಾರ ಊಟದಲ್ಲಿ ಮಾಂಸಾಹಾರ ಲಭ್ಯವಾಗುವಂತೆ ಕೇಳಲು ತಮ್ಮ ಸಹಾಯಕ ಲೆಸ್ಲಿ ಗ್ರಾಫ್‌ಗೆ ಇಮೇಲ್ ಮಾಡಿದ್ದಾರೆ ಎಂದು ತೋರಿಸುತ್ತದೆ. "ಈಗ ಕೆವಿನ್ ರುಡ್ ಕೂಡ ಬರುತ್ತಿದ್ದಾರೆ" ಎಂದು ಅದರಲ್ಲಿದೆ. ಆ ಸಮಯದಲ್ಲಿ ರುಡ್ ಸರ್ಕಾರದಲ್ಲಿ ಇರಲಿಲ್ಲ.
► ಪೀಟರ್ ಮ್ಯಾಂಡೆಲ್ಸನ್, ಯುಕೆ ರಾಜಕಾರಣಿ
ಯುಕೆಯ ಮಾಜಿ ಕ್ಯಾಬಿನೆಟ್ ಮಂತ್ರಿ ಆಗಿದ್ದ ಪೀಟರ್ ಮ್ಯಾಂಡೆಲ್ಸನ್ ಅವರ ಹೆಸರು ಈ ಹಿಂದೆ ಸಾರ್ವಜನಿಕವಾಗಿ ಪ್ರಕಟವಾದ ಎಪ್ಸ್ಟೀನ್ ಫೈಲ್‌ಗಳಲ್ಲಿ ಕಾಣಿಸಿಕೊಂಡಿತ್ತು. ಆದರೆ ಇತ್ತೀಚಿನ ಕಡತಗಳಲ್ಲಿ ಎಪ್ಸ್ಟೀನ್ ಜೊತೆಗಿನ ಹೆಚ್ಚಿನ ಸಂಪರ್ಕಗಳು ಕಾಣಿಸಿಕೊಂಡ ನಂತರ ಅವರು ಭಾನುವಾರ ಯುಕೆಯ ಆಡಳಿತಾರೂಢ ಲೇಬರ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಎಪ್ಸ್ಟೀನ್ ಜೊತೆಗಿನ ಸಂಪರ್ಕದ ಆರೋಪದ ಮೇಲೆ ಕಳೆದ ವರ್ಷ ಮ್ಯಾಂಡೆಲ್ಸನ್ ಅವರನ್ನು ಅಮೆರಿಕಕ್ಕೆ ಯುಕೆ ರಾಯಭಾರಿ ಸ್ಥಾನದಿಂದ ವಜಾಗೊಳಿಸಲಾಯಿತು.
2003 ಮತ್ತು 2004 ರಲ್ಲಿ ಮೂರು ಪ್ರತ್ಯೇಕ ವಹಿವಾಟುಗಳಲ್ಲಿ ಎಪ್ಸ್ಟೀನ್ ಮ್ಯಾಂಡೆಲ್ಸನ್ ಗೆ 75,000 ಡಾಲರ್ ಪಾವತಿಗಳನ್ನು ಮಾಡಿದ್ದಾರೆ ಎಂದು ಇತ್ತೀಚಿನ ದಾಖಲೆಗಳು ಬಹಿರಂಗಪಡಿಸುತ್ತವೆ.
ಲೇಬರ್ ಪಕ್ಷದ ಪ್ರಧಾನ ಕಾರ್ಯದರ್ಶಿಗೆ ಬರೆದ ರಾಜೀನಾಮೆ ಪತ್ರದಲ್ಲಿ, ಮ್ಯಾಂಡೆಲ್ಸನ್ “ಈ ವಾರಾಂತ್ಯದಲ್ಲಿ ಜೆಫ್ರಿ ಎಪ್ಸ್ಟೀನ್ ಸಂಬಂಧಿಸಿದ ವಿವಾದದಲ್ಲಿ ಸಂಬಂಧ ಹೊಂದಿದ್ದೇನೆ ಮತ್ತು ಇದರ ಬಗ್ಗೆ ನನಗೆ ವಿಷಾದವಿದೆ. ಆದಾಗ್ಯೂ, ಪಾವತಿಗಳ ಬಗ್ಗೆ ತನಗೆ "ನೆನಪಿಲ್ಲ" ಎಂದಿದ್ದಾರೆ.
ರುಡ್ ಅವರ ಪ್ರಸ್ತಾವಿತ ಗಣಿಗಾರಿಕೆ ತೆರಿಗೆಯ ವಿರುದ್ಧದ ಅಭಿಯಾನದ ಬಗ್ಗೆ ಮ್ಯಾಂಡೆಲ್ಸನ್ ಇಮೇಲ್ ಮೂಲಕ ಎಪ್ಸ್ಟೀನ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಇತ್ತೀಚಿನ ದಾಖಲೆಗಳು ತೋರಿಸುತ್ತವೆ. ರುಡ್ ಇನ್ನೂ ಪ್ರಧಾನಿಯಾಗಿರುವಾಗಲೇ ಗಣಿಗಾರಿಕೆ ಕಂಪನಿಗಳು ಗಳಿಸುವ "super profits" ಗಳ ಮೇಲೆ 40 ಪ್ರತಿಶತದಷ್ಟು ತೆರಿಗೆ ವಿಧಿಸಲಾಗುತ್ತಿತ್ತು.
► ಮೆಟ್ಟೆ-ಮರಿಟ್, ನಾರ್ವೆಯ ಕ್ರೌನ್ ಪ್ರಿನ್ಸೆಸ್
ಎಫ್ಸ್ಟೀ ನ್ ಫೈಲ್ ನಲ್ಲಿ ನಾರ್ವೆಯ ಕ್ರೌನ್ ಪ್ರಿನ್ಸೆಸ್ ಮೆಟ್ಟೆ-ಮರಿಟ್ ಹೆಸರು ಕೂಡಾ ಇದೆ. ಅವರು ಎಪ್ಸ್ಟೀನ್ ಜತೆ ಸುಮಾರು ವರ್ಷಗಳ ಕಾಲ ಸಂಪರ್ಕದಲ್ಲಿದ್ದರು ಎಂದು ದಾಖಲೆಗಳು ತೋರಿಸುತ್ತವೆ. ನಾರ್ವೇಜಿಯನ್ ಸಿಂಹಾಸನದ ಉತ್ತರಾಧಿಕಾರಿ ಕ್ರೌನ್ ಪ್ರಿನ್ಸ್ ಹಾಕನ್ ಅವರನ್ನು ವಿವಾಹವಾದ ಮೆಟ್ಟೆ-ಮರಿಟ್, ಎಪ್ಸ್ಟೀನ್ ಫೈಲ್‌ಗಳಲ್ಲಿ ಸುಮಾರು 1,000 ಬಾರಿ ಕಾಣಿಸಿಕೊಳ್ಳುತ್ತಾರೆ, ಇಬ್ಬರ ನಡುವೆ ಹಲವಾರು ಇಮೇಲ್‌ಗಳ ಸಂವಹನ ನಡೆದಿದೆ.
ಮೆಟ್ಟೆ-ಮರಿಟ್ ಎಪ್ಸ್ಟೀನ್ ಗೆ ಬರೆದ ಇಮೇಲ್ ನಲ್ಲಿ "you tickle my brain" ಎಂದು ಹೇಳಿದ್ದಾರೆ .ಎಪ್ಸ್ಟೀನ್ ನ್ನು ಮೆಟ್ಟೆ ಮರಿಟ್ "soft hearted" ಮತ್ತು "such a sweetheart" ಎಂದು ಕರೆದಿದ್ದಾರೆ. ಇನ್ನೊಂದು ಇಮೇಲ್ ನಲ್ಲಿ , ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ಎಪ್ಸ್ಟೀನ್ ಕಳುಹಿಸಿದ ಹೂವುಗಳಿಗಾಗಿ ಧನ್ಯವಾದ ಹೇಳಿ, "Love, Mm" ಎಂದು ಬರೆದಿದ್ದಾರೆ.
2012 ರಲ್ಲಿ, ಮೆಟ್ಟೆ-ಮರಿಟ್ ಎಪ್ಸ್ಟೀನ್ ಗೆ ನೀನು "very charming" ಎಂದು ಹೇಳಿರುವುದು ಇಮೇಲ್ ನಲ್ಲಿದೆ. "ಒಬ್ಬ ತಾಯಿ ತನ್ನ 15 ವರ್ಷದ ಮಗನಿಗೆ ಫೋನ್ ವಾಲ್ ಪೇಪರ್ ಗಾಗಿ ಸರ್ಫ್ ಬೋರ್ಡ್ ಹೊತ್ತೊಯ್ಯುತ್ತಿರುವ ಇಬ್ಬರು ಬೆತ್ತಲೆ ಮಹಿಳೆಯರ ಚಿತ್ರವನ್ನು ಸೂಚಿಸುವುದು ತಪ್ಪೇ? ಎಂದು ಕೇಳಿದರು.
ನಾರ್ವೆಯ ರಾಜಮನೆತನ ಕಠಿಣ ಪರಿಸ್ಥಿತಿಯಲ್ಲಿರುವ ಹೊತ್ತಲ್ಲೇ ಈ ಬಹಿರಂಗಪಡಿಸುವಿಕೆಗಳು ಬಂದಿವೆ. ಕ್ರೌನ್ ಪ್ರಿನ್ಸ್ ಹಾಕನ್ ಅವರನ್ನು ಮದುವೆಯಾಗುವ ಮೊದಲು ಮೆಟ್ಟೆ-ಮಾರಿಟ್ ಗೆ ಹುಟ್ಟಿದ ಮಗ,ಮಾರಿಯಸ್ ಬೋರ್ಗ್ ಹೊಯ್ಬಿ ಈ ವಾರದ ಕೊನೆಯಲ್ಲಿ ಅತ್ಯಾಚಾರದ ವಿಚಾರಣೆಗೆ ಒಳಗಾಗಲಿದ್ದಾರೆ. ಹೊಯ್ಬಿ ವಿರುದ್ಧ ನಾಲ್ವರು ಮಹಿಳೆಯರ ಮೇಲಿನ ಅತ್ಯಾಚಾರಗಳು, ಹಲ್ಲೆ ಮತ್ತು ಮಾದಕವಸ್ತು ಅಪರಾಧಗಳು ಸೇರಿದಂತೆ 38 ಅಪರಾಧಗಳ ಆರೋಪ ಹೊರಿಸಲಾಗಿದೆ.