ಎಚ್ಚರಿಕೆ… ಸ್ಮಾರ್ಟ್ ಗ್ಲಾಸ್ ಗಳ ಮೂಲಕ ರಹಸ್ಯವಾಗಿ ಮಹಿಳೆಯರ ಚಿತ್ರೀಕರಣ!
ಬೇಕಿದೆ ಕಾನೂನು ಕಣ್ಗಾವಲು…
Image: AI Generative / indiatoday
ತಂತ್ರಜ್ಞಾನದ ಯುಗದಲ್ಲಿ ಮಹಿಳಾ ಸುರಕ್ಷೆ ಇನ್ನಷ್ಟು ಹದಗೆಡುತ್ತಿದ್ದು, ಸೂಕ್ತ ಕಾನೂನುಗಳ ಕೊರತೆಯಿಂದ ಅಪರಾಧಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ.
ನೀವು ಕಡಲತೀರದಲ್ಲಿ ಆರಾಮವಾಗಿ ಬಿಸಿಲಿನ ಮಜಾ ತೆಗೆದುಕೊಳ್ಳುತ್ತಿರುವಾಗ ಬರುವ ಯುವಕನೊಬ್ಬ ಮಾತುಕತೆ ಆರಂಭಿಸುತ್ತಾನೆ. ನಿಮ್ಮನ್ನು ಪ್ರಶಂಸಿಸುತ್ತಾನೆ ಮತ್ತು ವೈಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಾನೆ. ನೀವು ಬಯಸುವುದಕ್ಕಿಂತ ಹೆಚ್ಚು ಸಮಯ ಅಲ್ಲೇ ಇರುತ್ತಾನೆ. ಸ್ವಲ್ಪ ಅಹಿತಕರ ಭಾವನೆ ನಿಮಗೆ ಬಂದರೆ ಅದು ಎಚ್ಚರಿಕೆಯ ಗಂಟೆಯಾಗಬೇಕು. ಏಕೆಂದರೆ ವಾರಗಳ ನಂತರ ಈ ಸಂವಾದದ ವೀಡಿಯೋ ಇನ್‌ಸ್ಟಾಗ್ರಾಂ ಅಥವಾ ಟಿಕ್ ಟಾಕ್ ನಲ್ಲಿ ವೈರಲ್ ಆಗಿಬಿಡಬಹುದು!
ನಿಮ್ಮ ಒಪ್ಪಿಗೆ ಇಲ್ಲದೆ ಸ್ಮಾರ್ಟ್ ಕನ್ನಡಕಗಳ ಮೂಲಕ ದೃಶ್ಯಗಳನ್ನು ಚಿತ್ರೀಕರಿಸಲಾಗಿರುತ್ತದೆ. ಅದಕ್ಕೆ ಲಕ್ಷಾಂತರ ವೀಕ್ಷಣೆಗಳು ಮತ್ತು ಅಶ್ಲೀಲ ಕಾಮೆಂಟ್‌ಗಳ ಪ್ರವಾಹವೇ ಬರಬಹುದು. ಇದು ಭಯಾನಕ ಸ್ಟಾಕರ್ ಗಳ ಸಿನಿಮಾದ ದೃಶ್ಯದ ಭಾಗವಲ್ಲ; ಅಮೆರಿಕ ಮತ್ತು ಯುನೈಟೆಡ್ ಕಿಂಗ್ಡಮ್ ನಲ್ಲಿ ಮಹಿಳೆಯರು ಎದುರಿಸುತ್ತಿರುವ ವಾಸ್ತವ ಚಿತ್ರಣ.
ಜೀವನವನ್ನು ಸುಲಭಗೊಳಿಸಲೆಂದು ಬಂದಿರುವ ಸ್ಮಾರ್ಟ್ ಕನ್ನಡಕಗಳು ಕೈಗಳನ್ನು ಬಳಸದೆ ಸೆಲ್ಫಿ ತೆಗೆದುಕೊಳ್ಳಲು, ತ್ವರಿತವಾಗಿ ಅನುವಾದ ಮಾಡಲು ಮತ್ತು ಧ್ವನಿ ಚಾಲಿತ ನೆರವು ನೀಡಲು ಉದ್ದೇಶಿತವಾಗಿದ್ದವು. ಆದರೆ ಅವೇ ಕನ್ನಡಕಗಳು ಇದೀಗ ಮಹಿಳೆಯರಿಗೆ ದುಃಸ್ವಪ್ನವಾಗುತ್ತಿವೆ. ಅನುಕೂಲಕ್ಕಾಗಿ ಧರಿಸಲು ಸಿದ್ಧಪಡಿಸಿದ ತಂತ್ರಜ್ಞಾನ ಇದೀಗ ರಹಸ್ಯ ಕಣ್ಗಾವಲಿನ ಶಸ್ತ್ರವಾಗುತ್ತಿದೆ. ವಿಶೇಷವಾಗಿ ಮಹಿಳೆಯರ ವಿರುದ್ಧ ದುರುಪಯೋಗವಾಗುತ್ತಿದೆ.
►ಅಮೆರಿಕ ಮತ್ತು ಯುನೈಟೆಡ್ ಕಿಂಗ್ಡಮ್‌ನಲ್ಲಿ ಆತಂಕ
ಅಮೆರಿಕ ಮತ್ತು ಯುನೈಟೆಡ್ ಕಿಂಗ್ಡಮ್ ನಲ್ಲಿ ಮಹಿಳೆಯರು ತಮ್ಮ ಆತಂಕವನ್ನು ಆನ್‌ಲೈನ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೆಲ ಪುರುಷರಿಗೆ ಇದೊಂದು ಆಟವಾಗಿರುವಂತೆ ಪರಿಣಮಿಸಿದೆ. ಮಹಿಳೆಯರನ್ನು ತಮ್ಮ ಕೌಶಲ್ಯದಿಂದ ಒಲಿಸಿಕೊಳ್ಳುವುದನ್ನು ಸ್ಮಾರ್ಟ್ ಗ್ಲಾಸ್ ಗಳ ಮೂಲಕ ಚಿತ್ರೀಕರಿಸಲಾಗುತ್ತಿದೆ.
ಹೀಗಾಗಿ ಕಡಲತೀರಗಳು, ಬಸ್ ನಿಲ್ದಾಣಗಳು, ಬೀದಿಗಳಲ್ಲಿ ನಡೆಯುವಾಗ ಮಹಿಳೆಯರ ಒಪ್ಪಿಗೆ ಇಲ್ಲದೆ ಅವರನ್ನು ಚಿತ್ರೀಕರಿಸಲಾಗುತ್ತಿರುವ ಬಗ್ಗೆ ಮಹಿಳೆಯರು ವರದಿ ಮಾಡುತ್ತಿದ್ದಾರೆ. ಚಿತ್ರೀಕರಿಸಿದ ದೃಶ್ಯಗಳನ್ನು ಕಿರುಕುಳ ನೀಡುವ ಕಾಮೆಂಟ್ ಗಳು ಮತ್ತು ಹ್ಯಾಶ್ ಟ್ಯಾಗ್ ಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಸಂತ್ರಸ್ತೆ ಕ್ಯಾಸಿ ಜಂಜಾನಿ ಮಾಧ್ಯಮಗಳಿಗೆ ಅಭಿಪ್ರಾಯ ವ್ಯಕ್ತಪಡಿಸಿ, “ನನ್ನ ಅರಿವು ಅಥವಾ ಒಪ್ಪಿಗೆ ಇಲ್ಲದೆ ರಹಸ್ಯವಾಗಿ ಚಿತ್ರೀಕರಿಸಲಾಗಿದೆ ಎಂಬುದು ಆತಂಕಕಾರಿ. ಅದನ್ನು ಈ ರೀತಿ ಪೋಸ್ಟ್ ಮಾಡಲಾಗಿದೆ. ಹೀಗಾಗಿ ಇದು ಉತ್ತಮ ಉದ್ದೇಶವನ್ನು ಹೊಂದಿರುವ ಪೋಸ್ಟ್ ಅಲ್ಲ. ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಪಾನಮತ್ತ ಮಹಿಳೆಯರು, ದುರ್ಬಲ ಮಹಿಳೆಯರನ್ನು ಗುರಿಯಾಗಿಸಿ ಸ್ಮಾರ್ಟ್ ಗ್ಲಾಸ್ ಬಳಸುತ್ತಿದ್ದಾರೆ” ಎಂದು ಹೇಳಿದ್ದಾರೆ.
►ಸ್ಮಾರ್ಟ್ ಗ್ಲಾಸ್ ನ ಅಕ್ರಮ ಬಳಕೆ
ಕಳೆದ ತಿಂಗಳು ಇಂಗ್ಲೆಂಡ್ ನ ಚೆಷೈರ್ ನಲ್ಲಿ 47 ವರ್ಷದ ವ್ಯಕ್ತಿಯೊಬ್ಬನ ವಿರುದ್ಧ ಮಹಿಳೆಯೊಬ್ಬರು ಇಂತಹುದೇ ವಂಚನೆಯ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಜೊತೆಗಿದ್ದ ಆಪ್ತ ದೃಶ್ಯಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ ಆನ್ ಲೈನ್ ನಲ್ಲಿ ಬಿಡುಗಡೆ ಮಾಡಿದ್ದ. ಆದರೆ ನ್ಯಾಯಾಲಯದಲ್ಲಿ ಆತನಿಗೆ ಶಿಕ್ಷೆಯಾಗಲಿಲ್ಲ. ಇದೇ ರೀತಿ ಅಮೆರಿಕದಲ್ಲೂ ವ್ಯಕ್ತಿಯೊಬ್ಬ ಮಹಿಳೆಯ ಜೊತೆಗೆ ಸೂಪರ್ ಮಾರ್ಕೆಟ್‌ನಲ್ಲಿ ನಡೆಸಿದ ಸಂಭಾಷಣೆಯನ್ನು ಆನ್ ಲೈನ್ ನಲ್ಲಿ ವೈರಲ್ ಮಾಡಿದ್ದ. ಸಾಂದರ್ಭಿಕವಾಗಿ ಮಹಿಳೆಯನ್ನು ಹೊಗಳಿದ ನಂತರ ಆತ ಮುಂದೆ ಸಾಗಿದ್ದ. ಆದರೆ ಆ ಮಹಿಳೆಯ ದೃಶ್ಯಗಳು ಆನ್ ಲೈನ್ ನಲ್ಲಿ ಪ್ರಸಾರವಾದ ನಂತರ ಇದು ಸ್ಮಾರ್ಟ್ ಗ್ಲಾಸ್ ಅವಾಂತರ ಎನ್ನುವುದು ಆಕೆಗೆ ತಿಳಿದುಬಂದಿತ್ತು.
►ಭಾರತಕ್ಕೂ ಬಂದಿವೆ ಸ್ಮಾರ್ಟ್ ಗ್ಯಾಜೆಟ್ ಗಳು
ಭಾರತಕ್ಕೆ ಇದು ಭವಿಷ್ಯದ ಕಾಳಜಿಯಲ್ಲ; ಇಂತಹ ಗ್ಯಾಜೆಟ್ ಗಳು ಈಗಾಗಲೇ ಬಂದಿವೆ. ಆದರೆ ಗೌಪ್ಯತೆ ನಿಯಮಗಳು ಇನ್ನೂ ಸಿದ್ಧವಾಗಿಲ್ಲ. ದೇಶದ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆಯಲ್ಲಿ ಧರಿಸಬಹುದಾದ ಸಾಧನಗಳಿಂದ ರೆಕಾರ್ಡ್ ಮಾಡುವಾಗ ಸಾರ್ವಜನಿಕರಿಗೆ ತಿಳಿಸುವ ಅಗತ್ಯವಿಲ್ಲ. ಪ್ರೇಕ್ಷಕರು ಒಪ್ಪಿಗೆ ನೀಡದಿದ್ದರೆ ಅಥವಾ ರೆಕಾರ್ಡ್ ಮಾಡಿದ ದೃಶ್ಯವನ್ನು ಅಳಿಸುವಂತಹ ಯಾವುದೇ ಸ್ಪಷ್ಟ ನಿಯಮಗಳು ಇಲ್ಲ.
ಈಗಾಗಲೇ ಭಾರತದಲ್ಲಿ ಕ್ಯಾಮೆರಾ ಸಜ್ಜಿತ ಧರಿಸಬಹುದಾದ ಸಾಧನಗಳೊಂದಿಗೆ ಜನರು ಛಾಯಾಗ್ರಹಣ ನಿಷೇಧಿತ ಪ್ರದೇಶಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಕ್ಯಾಮೆರಾ ಸಜ್ಜಿತ ವಸ್ತುಗಳನ್ನು ಧರಿಸಿ ಜಗನ್ನಾಥ ದೇವಸ್ಥಾನ ಮತ್ತು ಅಯೋಧ್ಯೆಯ ರಾಮ ಮಂದಿರದಂತಹ ಪವಿತ್ರ ಸ್ಥಳಗಳಲ್ಲಿ ಪ್ರವೇಶಿಸಿರುವುದು ಸುದ್ದಿಯಾಗಿದೆ. ವಿಧಾನಸಭೆ ಮತ್ತು ಸಂಸತ್ ನಲ್ಲಿ ಸ್ಮಾರ್ಟ್ ಗ್ಯಾಜೆಟ್ ಬಳಸುವ ವಿರುದ್ಧ ಸರ್ಕಾರಿ ಸೂಚನೆಗಳನ್ನು ನೀಡಲಾಗಿದೆ.