ಇತ್ತೀಚೆಗೆ ವಾಯುಮಾಲಿನ್ಯ ಮತ್ತು ಆಹಾರ ಪದ್ಧತಿ ಹೃದಯಾಘಾತಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ: ಡಾ. ಸಿ.ಎನ್. ಮಂಜುನಾಥ್
ಡಾ. ಸಿ.ಎನ್. ಮಂಜುನಾಥ್
ವಿಶ್ವ ಹೃದಯ ದಿನವನ್ನು ಆಚರಿಸುತ್ತಿರುವ ವಾರದಲ್ಲಿ ಹೃದಯಕ್ಕೆ ಸಂಬಂಧಿಸಿದ ಬಹಳ ಆಘಾತಕಾರಿ ಸತ್ಯಗಳು ಹೊರಬರುತ್ತಿವೆ. ಕಳೆದ ಮೂರು ದಶಕಗಳಲ್ಲಿ ಭಾರತೀಯ ಯುವಕರಲ್ಲಿ ಹೃದಯಾಘಾತಗಳು ಜಾಸ್ತಿಯಾಗಿವೆ. ಈ ನಿಟ್ಟಿನಲ್ಲಿ ಹಿರಿಯ ಹೃದ್ರೋಗ ತಜ್ಞರು ಮತ್ತು ಲೋಕಸಭಾ ಸಂಸದರೂ ಆಗಿರುವ ಡಾ. ಸಿ.ಎನ್. ಮಂಜುನಾಥ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
►ಭಾರತದಲ್ಲಿ 40 ವರ್ಷದೊಳಗಿನ ಪ್ರತಿ ನಾಲ್ವರು ಪುರುಷರಲ್ಲಿ ಒಬ್ಬರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಕಾರಣಗಳೇನು?
ಕಳೆದ ಮೂರು ದಶಕಗಳಲ್ಲಿ ಹೃದಯಾಘಾತದ ಪ್ರಮಾಣವನ್ನು ನೋಡಿದ ಸಂದರ್ಭದಲ್ಲಿ ಭಾರತ ದೇಶದಲ್ಲಿ ಸುಮಾರು ಶೇ. 22ರಷ್ಟು ಹೃದಯಾಘಾತದ ಪ್ರಮಾಣ ಯುವಕರಲ್ಲಿ ಜಾಸ್ತಿಯಾಗಿದೆ. ಒಟ್ಟಾರೆ ಭಾರತದಲ್ಲಿ ಈಗ ಹೃದಯಾಘಾತ ಮತ್ತು ಬ್ರೇನ್ ಸ್ಟ್ರೋಕ್ ಎಂದು ಏನು ಹೇಳುತ್ತಿದ್ದೇವೆಯೋ, ಅದು ಸಾವಿಗೆ ಮೊದಲನೇ ಕಾರಣವಾಗುತ್ತಿದೆ. ಶೇ. 30ರಷ್ಟು ಮರಣಗಳು ಇಂದು ಹೃದಯಾಘಾತ ಮತ್ತು ಬ್ರೇನ್ ಸ್ಟ್ರೋಕ್ ಕಾರಣದಿಂದ ಆಗುತ್ತಿವೆ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ 10ರಿಂದ 15 ವರ್ಷ ಬೇಗನೇ ಆಗುತ್ತದೆ. ನಾವೊಂದು ಅಧ್ಯಯನವೂ ಮಾಡಿದ್ದೇವೆ. ಶೇ. 30ರಷ್ಟು ಹೃದಯಾಘಾತ 40 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಲ್ಲಿ ಆಗುತ್ತಿದೆ. ಇದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಆದರೆ ಹೃದಯಾಘಾತಕ್ಕೆ ಶೇ. 75ರಷ್ಟು ಮಂದಿಗೆ ಕಾರಣ ಇರುತ್ತದೆ. ಧೂಮಪಾನ, ಮದ್ಯಪಾನ, ಸಕ್ಕರೆ ಕಾಯಿಲೆ ಅಥವಾ ಕೌಟುಂಬಿಕ ಇತಿಹಾಸ ಮತ್ತು ದೈಹಿಕ ಚಟುವಟಿಕೆ ಕಡಿಮೆ ಇರುವುದು ಮೊದಲಾದವು ಇರುತ್ತವೆ. ಇನ್ನು ಶೇ. 25ರಷ್ಟು ಯುವಕರಲ್ಲಿ ಯಾವುದೇ ನಿಖರವಾದ ಕಾರಣವಿಲ್ಲ.
►‘ಆರೋಗ್ಯವಂತರು ಕೂಡ ಹೃದಯಾಘಾತಕ್ಕೆ ಒಳಗಾಗಲು ಮುಖ್ಯ ಕಾರಣವೇನು?’
ಇದೀಗ ಹೊಸ ಕಾರಣ ಪತ್ತೆಯಾಗಿರುವುದು ವಾಯುಮಾಲಿನ್ಯ. ವಾಯುಮಾಲಿನ್ಯ ಕೂಡ ಇತ್ತೀಚಿನ ದಿನಗಳಲ್ಲಿ ಪ್ರಮುಖ ಕಾರಣವಾಗುತ್ತಿದೆ. ಇತ್ತೀಚೆಗೆ ಆಹಾರ ಪದ್ಧತಿ ಬದಲಾವಣೆಯಾಗಿದೆ. ಪದಾರ್ಥಗಳು ಬದಲಾಗಿವೆ. ಆಹಾರ ಪದ್ಧತಿಯಲ್ಲಿ ರಾಸಾಯನಿಕಗಳು, ಗೊಬ್ಬರಗಳು, ಕೀಟನಾಶಕಗಳನ್ನು ಹಾಕುತ್ತಿದ್ದಾರೆ. ಆಹಾರಕ್ಕೆ ಸಂರಕ್ಷಕಗಳನ್ನು (preservatives) ಹಾಕುತ್ತಿದ್ದಾರೆ. ಈ ಎಲ್ಲದರ ಜೊತೆಗೆ ಚರಂಡಿ ನೀರನ್ನೇ ಹೊಲಕ್ಕೆ ಬಿಟ್ಟು ತರಕಾರಿ ಮತ್ತು ಹಣ್ಣುಗಳನ್ನು ಬೆಳೆಸುವುದೂ ನೋಡಿದ್ದೇವೆ.
ಇನ್ನು ಕೆಲವರು ನಾರ್ಕೋಟಿಕ್ಸ್ ಡ್ರಗ್ಸ್ ಅಂದರೆ ಗಾಂಜಾ, ಮರಿಜುವಾನಾ, ಕೊಕೇನ್ ಇಂತಹ ವಸ್ತುಗಳನ್ನು ಸೇವಿಸುತ್ತಾರೆ. ದೊಡ್ಡ ನಗರಗಳಲ್ಲಿ ಇವು ಹೆಚ್ಚಾಗಿರುತ್ತವೆ. ಕೆಲವರಿಗೆ ಇವುಗಳನ್ನು ಸೇವಿಸಿದರೆ ಸಾಮಾನ್ಯವಾಗಿದ್ದ ರಕ್ತನಾಳಗಳೂ ಶೇ. 100ರಷ್ಟು ಬ್ಲಾಕ್ ಆಗಿಬಿಡುತ್ತವೆ.
►‘ಒತ್ತಡ’ ಎಷ್ಟರ ಮಟ್ಟಿಗೆ ಹೃದಯದ ಕಾಯಿಲೆಗಳಿಗೆ ಕಾರಣವಾಗುತ್ತಿದೆ?
ಒತ್ತಡ ಬಹಳ ಮುಖ್ಯವಾದ ಕಾರಣ. ಒತ್ತಡವನ್ನು ನಾವು ಹೊಸ ತಂಬಾಕು ಅಥವಾ ಆಧುನಿಕ ಧೂಮಪಾನ ಎಂದೇ ಹೇಳುತ್ತಿದ್ದೇವೆ. ಜನರಲ್ಲಿ 10 ವರ್ಷದಲ್ಲಿ ಸಾಧನೆ ಮಾಡುವ ತುಡಿತ ಇರುತ್ತದೆ. ಒಂದೇ ಕಾಲಕ್ಕೆ ಎರಡೆರಡು ಡಿಗ್ರಿಗಳನ್ನು ತೆಗೆದುಕೊಳ್ಳಲು ಪರೀಕ್ಷೆ ಬರೆಯುವುದು ಮೊದಲಾಗಿ ಮಾನಸಿಕವಾಗಿ ದಣಿದಿರುತ್ತಾರೆ. ವಿದ್ಯಾರ್ಥಿಗಳಿಗೆ ಒಂದು ಪರೀಕ್ಷೆಯ ಒತ್ತಡ, ಮತ್ತೊಂದು ಭವಿಷ್ಯದ ಒತ್ತಡ. ಕೆಲಸ ಆದ ಮೇಲೆ ಕೆಲವರಿಗೆ ಉದ್ಯಮದ ಒತ್ತಡ, ಹೆಣ್ಣು ಮಕ್ಕಳಿಗೆ ಸಂಸಾರದ ಒತ್ತಡ. ಈಗ ಅವಿಭಕ್ತ ಕುಟುಂಬಗಳು ಒಡೆದು ಹೋಗಿವೆ. ಹಿಂದೆ ಮನೆಯಲ್ಲಿ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು. ಆಮೇಲೆ ಮನಸ್ತಾಪಗಳಿದ್ದರೆ ಮನೆಯಲ್ಲೇ ಇತ್ಯರ್ಥವಾಗುತ್ತಿತ್ತು ಮತ್ತು ಮನೆಯೇ ಕೌನ್ಸೆಲಿಂಗ್ ಕೇಂದ್ರವಾಗಿತ್ತು. ಈ ರೀತಿ ಬದುಕುವ ರೀತಿ ಬದಲಾವಣೆಯಾಗಿದೆ.
►‘ಇತ್ತೀಚಿನ ಹಠಾತ್ ಹೃದಯಾಘಾತಗಳಿಗೆ ಕಾರಣಗಳೇನು?’
ನಾನಾ ಕಾರಣಗಳಿವೆ. ಒಂದು ಉದಾಹರಣೆಯನ್ನೇ ನೋಡಿ. ಒಬ್ಬ ಮಗ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಮಗನಿಗೆ 30 ವರ್ಷ ಮತ್ತು ತಂದೆಗೆ 70 ವರ್ಷ. ತಂದೆಗೆ ಹೃದಯಾಘಾತ ಆಗಿ ಅವರು ಬದುಕಿದ್ದಾರೆ. ಆದರೆ ಮಗ ಅದೇ ಒತ್ತಡದಿಂದ ಲಿಫ್ಟ್ ನಲ್ಲಿಯೇ ಹೃದಯಾಘಾತವಾಗಿ ಸಾವನ್ನಪ್ಪಿದರು. ಐಸಿಯುನಲ್ಲಿ ನಾವು ಅನೇಕ ಘಟನೆಗಳನ್ನು ನೋಡಿದ್ದೇವೆ. ಪತಿಗೆ ಹೃದಯಾಘಾತವಾಗಿದೆ ಎಂದು ತಿಳಿದ ತಕ್ಷಣ ಪತ್ನಿ ಮೂರ್ಛೆ ಹೋಗಿರುವುದು. ಕೆಲವರು ಬದುಕುಳಿಯುವುದು ಕಷ್ಟ ಎಂಬ ಸುದ್ದಿಗಳನ್ನು ಸಹಿಸಲಾಗದೆ ಸಾವನ್ನಪ್ಪಿದ್ದಾರೆ. ಇದನ್ನು ಅಕ್ಯೂಟ್ ಶಾಕ್ ಅಥವಾ ಬ್ರೋಕನ್ ಹಾರ್ಟ್ ಸಿಂಡ್ರೋಮ್ ಎನ್ನುತ್ತೇವೆ. ಇವರು ಆರೋಗ್ಯವಂತರಾಗಿ ಕಾಣುತ್ತಾರೆ. ಯಾವುದೇ ದುರಭ್ಯಾಸಗಳಿರುವುದಿಲ್ಲ, ಆದರೆ ಹೀಗೆ ಹಠಾತ್ ಆಘಾತಕ್ಕೆ ಒಳಗಾಗುತ್ತಾರೆ.
ಕೆಲವರಲ್ಲಿ ಹೃದಯಾಘಾತಯೇತರ ಹೃದಯದ ಕಾಯಿಲೆಗಳು ಇರುತ್ತವೆ. ಪ್ರತಿ 500 ಜನರಲ್ಲಿ ಇಂತಹ ಸಮಸ್ಯೆ ಇರುತ್ತದೆ. ಹೈಪರ್ಟ್ರೋಫಿಕ್ ಕಾರ್ಡಿಯೊಮಯೋಪತಿ (hypertrophic cardiomyopathy) ಎನ್ನುವ ಸಮಸ್ಯೆ ಇರುತ್ತದೆ. ಅಂದರೆ, ಹೃದಯದಲ್ಲಿ ಸ್ನಾಯುಗಳು ದಪ್ಪ ಜಾಸ್ತಿ ಇರುತ್ತದೆ. ಹೃದಯವೇ ತೂಕ ಜಾಸ್ತಿ ಇರುತ್ತದೆ. ಇಂತಹವರು ಹಠಾತ್ ಆಗಿ ಸಾವನ್ನಪ್ಪುತ್ತಾರೆ.
ಶೇ. 95ರಷ್ಟು ಹೃದಯಾಘಾತ ಇರಬಹುದು. ಇನ್ನೂ ಶೇ. 5ರಷ್ಟು ಹೃದಯಾಘಾತವಲ್ಲದೆ ಇರುವ ಹೃದಯದ ಕಾಯಿಲೆಗಳು ಇರುತ್ತವೆ. ಇದಕ್ಕಿದ್ದಂತೆ ಹೃದಯದ ಬಡಿತ 300 ಆಗಿ ಸಾವನ್ನಪ್ಪಬಹುದು.
►‘ಆರೋಗ್ಯವಂತರು ಯಾವ ಚಿಹ್ನೆಗಳತ್ತ ಗಮನಿಸಬೇಕು?’
ಜೀವನಶೈಲಿ ಸರಿ ಇರಬೇಕು. ಹೃದಯ ಆರೋಗ್ಯವಾಗಿರಬೇಕೆಂದರೆ ಐದು ಅಂಶಗಳು ಸರಿ ಇರಬೇಕು. ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ, ರಕ್ತದಲ್ಲಿನ ಕೊಲೆಸ್ಟರಾಲ್ ಪ್ರಮಾಣ, ಶರೀರದ ತೂಕ ಮತ್ತು ಸೊಂಟದ ಸುತ್ತಳತೆ ಮತ್ತು ಐದನೆಯದು ಅತಿಯಾದ ವ್ಯಾಯಾಮವೂ ಉತ್ತಮವಲ್ಲ.
►ವ್ಯಾಯಾಮದ ಬಗ್ಗೆ ಜನರಲ್ಲಿ ಬಹಳಷ್ಟು ಅನುಮಾನಗಳಿವೆ?
ದೈಹಿಕ ಚಟುವಟಿಕೆಗಳು ಇರಬೇಕು. ಆದರೆ ಅತಿಯಾದ ವ್ಯಾಯಾಮ ಉತ್ತಮವಲ್ಲ. ಇದ್ದಕ್ಕಿದ್ದಂತೆ 15 ಕಿಮೀ ನಡೆಯುತ್ತೇನೆ ಮತ್ತು ಟ್ರೆಕ್ಕಿಂಗ್ ಹೋಗುತ್ತೇನೆ ಎನ್ನುವಂತಹ ಅಧಿಕ ತೀವ್ರತೆಯ ವ್ಯಾಯಾಮ ಮಾಡಬಾರದು. ರೂಢಿ ಇರದಂತಹ ವ್ಯಾಯಾಮಗಳನ್ನು ಮಾಡಬಾರದು. ಸಾಧಾರಣ ತೀವ್ರತೆಯ ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ.
ಧೂಮಪಾನ ಇರಬಾರದು, ತೂಕ ಜಾಸ್ತಿ ಆಗದಂತೆ ಗಮನಹರಿಸಬೇಕು, ತರಕಾರಿಗಳನ್ನು ಹೆಚ್ಚು ತಿನ್ನಬೇಕು.
►‘ಕೌಟುಂಬಿಕ ಇತಿಹಾಸ ಇರುವವರು ಯಾವ ವಿಚಾರಗಳತ್ತ ಗಮನ ಹರಿಸಬೇಕು?’
40ಕ್ಕಿಂತ ಕಡಿಮೆ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾದವರ ಕುಟುಂಬದವರು 30ರೊಳಗೆ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕಾಗುತ್ತದೆ. ಅಂದರೆ, ಟ್ರೆಡ್ಮಿಲ್ ಇಸಿಜಿ ಎಂದು ಹೇಳುತ್ತೇವೆ. ರಕ್ತದೊತ್ತಡ ಮತ್ತು ಕೊಲೆಸ್ಟರಾಲ್ ಪರೀಕ್ಷಿಸಿಕೊಳ್ಳಬೇಕಾಗುತ್ತದೆ. ಇತ್ತೀಚೆಗೆ ನಾವು CT ಸ್ಕ್ಯಾನ್ ನಲ್ಲಿ ರಕ್ತನಾಳದಲ್ಲಿ ಕ್ಯಾಲ್ಸಿಯಂ ಸ್ಕೋರ್ ಅಂತ ತಪಾಸಣೆಯನ್ನೂ ಮಾಡುತ್ತೇವೆ. ಕ್ಯಾಲ್ಸಿಯಂ ಡೆಪಾಸಿಟ್ ಆಗುತ್ತಿದೆ ಎಂದಾದಲ್ಲಿ ಸಮಸ್ಯೆ ಆರಂಭವಾಗಿದೆ ಎಂದು ಅರ್ಥ ಮಾಡಿಕೊಳ್ಳಬೇಕು.
ತೂಕ ಜಾಸ್ತಿ ಇದ್ದು, ಕೊಲೆಸ್ಟರಾಲ್ ಜಾಸ್ತಿ ಇದ್ದು, ಧೂಮಪಾನ ಜಾಸ್ತಿ ಇದ್ದರೆ ಅಥವಾ ಮದ್ಯಪಾನ ಮಾಡುವವರು ಇಂತಹ ಅತ್ಯಧಿಕ ಅಪಾಯದ ಅಂಶಗಳು ಇದ್ದರೆ ನಾವು ಸಿಟಿ ಆಂಜಿಯೋಗ್ರಾಂ ಅಂತ ಮಾಡುತ್ತೇವೆ. ರಕ್ತನಾಳವನ್ನೇ ಪರಿಶೀಲಿಸುವುದು. ಎಲ್ಲರಿಗೂ ಮಾಡುವ ಅಗತ್ಯವಿಲ್ಲ. ಆದರೆ ಅತ್ಯಧಿಕ ಅಪಾಯ ಇರುವವರು ಈ ತಪಾಸಣೆ ಮಾಡಿಸಿಕೊಳ್ಳಬಹುದು.
►‘ಹೃದಯಾಘಾತಕ್ಕೆ ಮುನ್ಸೂಚನೆ ಇರುತ್ತದೆಯೆ?’
ಹೃದಯಾಘಾತ ಆಗುವ ಮೊದಲು ಶೇ. 70ರಷ್ಟು ಮಂದಿಗೆ ಮುನ್ಸೂಚನೆ ಸಿಗುತ್ತದೆ. ಶೇ. 30ರಷ್ಟು ಮಂದಿಗೆ ಸಿಗುವುದಿಲ್ಲ. ಸುಮ್ಮನೆ ನಡೆದಾಗ, ಓಡಾಡಿದಾಗ, ವಾಕಿಂಗ್ ಮಾಡುವಾಗ, ಊಟ ಮಾಡಿ ಮೆಟ್ಟಿಲು ಹತ್ತುವಾಗ ಎದೆ ಭಾರ ಅಥವಾ ಎದೆಯುರಿ, ನಡೆಯುವಾಗ ದವಡೆಯಲ್ಲಿ ನೋವು ಜಾಸ್ತಿಯಾಗುವುದು, ಬೆನ್ನಿನ ಮೇಲ್ಭಾಗದಲ್ಲಿ ನೋವು ಬರಬಹುದು. ನಡೆಯುವಾಗ ನೋವು ಇಲ್ಲ ಎಂದಾದಲ್ಲಿ ಅದು ಹೃದಯದ ನೋವಲ್ಲ. ಹೃದಯದ ನೋವು ಯಾವಾಗಲೂ ಚಟುವಟಿಕೆಗೆ ಸಂಬಂಧಿಸಿರುತ್ತದೆ.
►‘ಜೀವನಶೈಲಿಯಲ್ಲಿ ಯಾವ ಬದಲಾವಣೆ ತರಬೇಕಾಗುತ್ತದೆ?’
ಶೇ. 10ರಷ್ಟು ಮಂದಿಯಲ್ಲಿ ಯಾವುದೇ ಕಾರಣವಿಲ್ಲದೆ ಹೃದಯಾಘಾತ ಸಂಭವಿಸುತ್ತದೆ. ಜನರು ಇಲ್ಲದರ ಬಗ್ಗೆ ಆಲೋಚನೆ ಮಾಡುವುದು ಹೆಚ್ಚು. ಏನಿದೆ ಅದರಲ್ಲಿ ಖುಷಿಪಡಬೇಕು. ಇತ್ತೀಚೆಗೆ ಪರೀಕ್ಷೆಯ ಒತ್ತಡ ಮಕ್ಕಳಿಗೆ ಜಾಸ್ತಿ ಆಗುತ್ತಿದೆ. ಮೊದಲು ಮಹಿಳೆಯರಲ್ಲಿ ಹೃದಯಾಘಾತ ಕಡಿಮೆ ಇತ್ತು, ಇದೀಗ ಅವರಲ್ಲೂ ಜಾಸ್ತಿಯಾಗುತ್ತಾ ಇದೆ. ಏಕೆಂದರೆ, ಮಕ್ಕಳ ವಿದ್ಯಾಭ್ಯಾಸ ತಾಯಂದಿರ ಪರೀಕ್ಷೆಯಾಗಿದೆ. ಜೀವನದಲ್ಲಿ ನೆಮ್ಮದಿ ಎನ್ನುವುದು ಮುಖ್ಯ. ಆತುರ ಪಡಬಾರದು, ಇತಿಮಿತಿಯಲ್ಲಿ ಜೀವನ ನಡೆಸಬೇಕು, ಚಿಂತೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು, ಕೋಪ ಮಾಡಿಕೊಳ್ಳಬಾರದು. ಆಲ್ಕೋಹಾಲ್ ನ ಹೈ ಡೋಸ್ ಬಹಳ ಅಪಾಯಕಾರಿ. ಇತ್ತೀಚಿನ ದಿನಗಳಲ್ಲಿ ಈ ಅಪಾಯ ಹೆಚ್ಚಿದೆ. ಅದಕ್ಕೆ ಆಹಾರ ಪದ್ಧತಿಯೂ ಕಾರಣವಾಗುತ್ತದೆ.