ಜಾಗತಿಕವಾಗಿ ಸಾವಿಗೆ ಪ್ರಮುಖ ಕಾರಣವಾಗಿರುವ ಹೃದಯಾಘಾತ; ಸಾವಿನ ದವಡೆಯಿಂದ ಹೊರ ಬಂದವರ ಅನುಭವ!
ಸಾಂದರ್ಭಿಕ ಚಿತ್ರ | Photo Credit : magnific.com
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಹೃದಯ ರಕ್ತನಾಳದ ಕಾಯಿಲೆಗಳು ಜಾಗತಿಕವಾಗಿ ಸಾವಿಗೆ ಪ್ರಮುಖ ಕಾರಣವಾಗಿದ್ದು, ಪ್ರತಿ ವರ್ಷ ಅಂದಾಜು 17.9 ದಶಲಕ್ಷ ಜನರ ಪ್ರಾಣವನ್ನು ಬಲಿ ತೆಗೆದುಕೊಳ್ಳುತ್ತವೆ. ಹೃದಯಾಘಾತ ಮತ್ತು ಪಾರ್ಶ್ವವಾಯುಗಳಿಂದಾಗಿ ಹೃದಯ ರಕ್ತನಾಳದ ಕಾಯಿಲೆಗೆ ಸಂಬಂಧಿಸಿದ ಐದರಲ್ಲಿ ನಾಲ್ಕಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತವೆ. ಅವುಗಳಲ್ಲಿ ಮೂರನೇ ಒಂದು ಭಾಗದಷ್ಟು ಸಾವು 70 ವರ್ಷದೊಳಗಿನವರಲ್ಲಿ ಅಕಾಲಿಕವಾಗಿ ಸಂಭವಿಸುತ್ತವೆ. ಈ ಕಾಯಿಲೆಗೆ ತುತ್ತಾಗುವವರ ವಯಸ್ಸಿನ ಮಿತಿ ಪ್ರತಿ ವರ್ಷವೂ ಕಡಿಮೆಯಾಗುತ್ತಿದೆ.
'ಇಂಡಿಯನ್ ಹಾರ್ಟ್ ಅಸೋಸಿಯೇಷನ್' ವರದಿಯ ಪ್ರಕಾರ, ಭಾರತದಲ್ಲಿ 40 ವರ್ಷದೊಳಗಿನ ಪ್ರತಿ ನಾಲ್ವರು ಪುರುಷರಲ್ಲಿ ಒಬ್ಬರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ.
“ನನಗೆ ಎಡಕೈ ಆಕಸ್ಮಿಕವಾಗಿ ನೋವಾಗಲು ಆರಂಭವಾಯಿತು. ಸಾಮಾನ್ಯ ನೋವಲ್ಲ. ವಿಪರೀತ ನೋವು. ಅದು ಹೃದಯಕ್ಕೆ ಸಂಬಂಧಿಸಿದ ನೋವು ಎಂದು ನನಗೆ ಗೊತ್ತೇ ಇರಲಿಲ್ಲ. ಜನವರಿ 26 ರಂದು ಗಣರಾಜ್ಯೋತ್ಸವ ದಿನದ ಸಮಾರಂಭದಲ್ಲಿ ಭಾಗವಹಿಸಿದ ನಂತರ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ಹೊರ ಬಂದು ಧೂಮಪಾನ ಮಾಡಿದ ತಕ್ಷಣ ನನಗೆ ನೋವು ಶುರುವಾಗಿತ್ತು. ಮನೆಗೆ ಬಂದರೂ ನೋವು ನಿಲ್ಲಲಿಲ್ಲ. ಇನ್ನೂ ಜಾಸ್ತಿಯಾಯಿತು. ಎಡಗಡೆ ಕೈ ಪೂರ್ತಿ ಭುಜದಿಂದ ತೊಡಗಿ ನೋವು ಆರಂಭವಾಯಿತು. ಜೊತೆಗೆ ವಿಪರೀತ ಬೆವರು ಬಂತು. ಮನೆಗೆ ಬಂದ ಮೇಲೆ ನನಗೆ ಇದು ಸಾಮಾನ್ಯ ನೋವಲ್ಲ ಎಂದು ಮನದಟ್ಟಾಗಿ ತಕ್ಷಣ ಆಸ್ಪತ್ರೆಗೆ ಹೋಗಲು ನಿರ್ಧರಿಸಿದೆ. ಬೈಕ್ ಹಿಡಿದು ಪತ್ನಿಯ ಜೊತೆ ಆಸ್ಪತ್ರೆಗೆ ತೆರಳಿದೆ. ಅಂತಹ ಸಂದರ್ಭದಲ್ಲಿ ಬೈಕ್ ಓಡಿಸಬಾರದು. ಆದರೆ, ನನಗೆ ಬೇರೆ ಆಯ್ಕೆಗಳಿರಲಿಲ್ಲ. ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಹೋಗಿ ತುರ್ತು ಚಿಕಿತ್ಸಾ ಘಟಕಕ್ಕೆ ನೇರವಾಗಿ ಹೋದೆ. ನಮ್ಮ ಮನೆಯಿಂದ ಆಸ್ಪತ್ರೆ 2 ಕಿಮೀ ಒಳಗಿದೆ. ಹೋದ ತಕ್ಷಣ ಬ್ಲಾಕೇಜ್ ಆಗಿರುವುದನ್ನು ಕ್ಲಿಯರ್ ಮಾಡಿದರು. ಆಗ ನೋವು ನಿವಾರಣೆಯಾಯಿತು. ನಂತರ ಆಂಜಿಯೋಪ್ಲಾಸ್ಟಿ ಮಾಡಬೇಕು ಎಂದು ಹೇಳಿದರು. ಅದಾಗಿ ಒಂದು ವಾರದೊಳಗೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋದೆ” ಎನ್ನುತ್ತಾರೆ 36 ವರ್ಷದಲ್ಲಿ ಹೃದಯ ರೋಗ ಬಂದಿರುವ ರಾಯಚೂರಿನ ಕುಮಾರ್ ಬುರಡಿಕಟ್ಟಿ.
ಕುಮಾರ್ ಅವರು ಧೂಮಪಾನ ಮತ್ತು ಮದ್ಯಪಾನ ಮಾಡುವ ತಮ್ಮ ಜೀವನಶೈಲಿಯ ಕಾರಣದಿಂದಲೇ ಹೃದಯ ರೋಗ ಬಂದಿದೆ ಎಂದು ಹೇಳುತ್ತಾರೆ. ಈ ನಿಟ್ಟಿನಲ್ಲಿ ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಂಡ ನಂತರ ಅವರ ಆರೋಗ್ಯ ಸುಧಾರಿಸಿದೆ.
ಆದರೆ ಹುಬ್ಬಳ್ಳಿಯ ಜೀವನ್ (ಹೆಸರು ಬದಲಾಯಿಸಲಾಗಿದೆ) ಅವರಿಗೆ ಸಂಪೂರ್ಣ ಆರೋಗ್ಯವಂತರಾಗಿದ್ದರೂ 34ನೇ ವಯಸ್ಸಿನಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆ ಬಂದಿತ್ತು. 35ನೇ ವಯಸ್ಸಿನಲ್ಲಿಯೇ ಆಂಜಿಯೋಪ್ಲಾಸ್ಟಿ ಮಾಡಿಸಿಕೊಂಡಿದ್ದಾರೆ. “ಅಧಿಕ ರಕ್ತದೊತ್ತಡದ ಸಮಸ್ಯೆಗೆ ಕಳೆದ ಒಂದು ವರ್ಷದಿಂದ ಔಷಧಿ ಸೇವಿಸುತ್ತಿದ್ದೇನೆ. ಇದೇ ಆಗಸ್ಟ್ನಲ್ಲಿ ಆಕಸ್ಮಿಕವಾಗಿ ವಿಪರೀತ ಬೆವರು ಮತ್ತು ಎದೆಯುರಿ ಕಾಣಿಸಿಕೊಂಡಿತು. ಎಡ ಮತ್ತು ಬಲ ಹೃದಯದ ನಡುವೆ ಹೊಟ್ಟೆಗಿಂತ ಸ್ವಲ್ಪ ಮೇಲೆ ಎದೆಯುರಿ ಬಂತು. ಬೆವರೂ ಇದ್ದ ಕಾರಣ ತಕ್ಷಣ ಆಸ್ಪತ್ರೆಗೆ ಹೋದೆವು. ಅವರು ಬ್ಲಾಕೇಜ್ ಆಗಿದೆ ಕ್ಲಿಯರ್ ಮಾಡಬೇಕು ಎಂದು ಹೇಳಿದರು. ಮೊದಲಿಗೆ ಇಸಿಜಿ ಮಾಡಿದರು. ನಂತರ ಏಂಜಿಯೋಗ್ರಾಂ ಮಾಡಿ ನಂತರ ಏಂಜಿಯೋಪ್ಲಾಸ್ಟಿ ಮಾಡಿದರು. ಕಾರಣ ಕೇಳಿದರೆ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ನಮ್ಮ ಕುಟುಂಬದ ಇತಿಹಾಸದಲ್ಲೇ ಅಧಿಕ ರಕ್ತದೊತ್ತಡ ಅಥವಾ ಮಧುಮೇಹದ ಸಮಸ್ಯೆಗಳಿಲ್ಲ. ನಾನು ಧೂಮಪಾನ ಮಾಡುವುದಿಲ್ಲ, ಮದ್ಯಪಾನ ಮಾಡುವುದಿಲ್ಲ. ಮಾಂಸಾಹಾರವೂ ಅಪರೂಪಕ್ಕೆ ಸೇವಿಸುತ್ತೇನೆ. ನಿತ್ಯವೂ ಬೆಳಿಗ್ಗೆ ನಡೆಯುತ್ತೇನೆ ಮತ್ತು ಸಂಜೆ ವಾಲಿಬಾಲ್ ಆಡುತ್ತೇನೆ. ಇಷ್ಟೊಂದು ಆರೋಗ್ಯವಂತನಾಗಿದ್ದ ನಾನು ಹಠಾತ್ ಆಗಿ ಅಧಿಕ ರಕ್ತದೊತ್ತಡ ಬೆಳೆಯಲು ಕಾರಣವೇನು ಎನ್ನುವುದು ತಿಳಿಯುತ್ತಿಲ್ಲ. ಕೆಲಸದ ಒತ್ತಡ ಇರುತ್ತದೆ ಹೊರತುಪಡಿಸಿ ಇನ್ಯಾವುದೇ ಸಮಸ್ಯೆ ನನಗೆ ಇಲ್ಲ” ಎನ್ನುತ್ತಾರೆ.
ಇಂತಹ ಅಪಾಯದಿಂದ ಪಾರಾದವರು ಬದಲಿಸಿಕೊಳ್ಳಬೇಕಾಗಿದ್ದ ಜೀವನಶೈಲಿ ಅಭ್ಯಾಸಗಳ ಬಗ್ಗೆ ಹೇಳುತ್ತಾರೆ. ಹಾಗಿದ್ದರೂ ಕೆಲವರಿಗೆ ಏನು ಬದಲಿಸಿಕೊಳ್ಳಬೇಕು ಎನ್ನುವುದೇ ಸಂಶಯವಾಗಿದೆ! ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಹಿರಿಯ ಹೃದ್ರೋಗ ತಜ್ಞರು ಮತ್ತು ಸಂಸದರಾದ ಡಾ ಸಿ ಎನ್ ಮಂಜುನಾಥ್, “ಕಳೆದ ಮೂರು ದಶಕಗಳಲ್ಲಿ ಭಾರತ ದೇಶದಲ್ಲಿ ಸುಮಾರು ಶೇ 22ರಷ್ಟು ಹೃದಯಾಘಾತದ ಪ್ರಮಾಣ ಯುವಕರಲ್ಲಿ ಜಾಸ್ತಿ ಆಗಿದೆ. ಒಟ್ಟಾರೆ ಭಾರತದಲ್ಲಿ ಈಗ ಹೃದಯಾಘಾತ ಮತ್ತು ಪಾರ್ಶ್ವವಾಯು ಸಾವಿಗೆ ಮೊದಲನೇ ಕಾರಣವಾಗುತ್ತಿದೆ. ಶೇ 30ರಷ್ಟು ಮರಣಗಳು ಇಂದು ಹೃದಯಘಾತ ಮತ್ತು ಪಾರ್ಶ್ವವಾಯು ಕಾರಣದಿಂದ ಆಗುತ್ತಿವೆ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ 10ರಿಂದ 15 ವರ್ಷ ಚಿಕ್ಕ ವಯಸ್ಸಿನಲ್ಲಿಯೇ ಹೃದಯಘಾತ ಕಂಡುಬರುತ್ತಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅವರ ಪ್ರಕಾರ, “ಶೇ 30ರಷ್ಟು ಹೃದಯಾಘಾತ 40 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಲ್ಲಿ ಆಗುತ್ತಿರುವುದು ಆತಂಕಕಾರಿ. ಧೂಮಪಾನ, ಮದ್ಯಪಾನ, ಸಕ್ಕರೆ ಕಾಯಿಲೆ, ಅಥವಾ ಕೌಟುಂಬಿಕ ಇತಿಹಾಸ ಮತ್ತು ದೈಹಿಕ ಚಟುವಟಿಕೆ ಕಡಿಮೆ ಇರುವುದು ಮೊದಲಾದವು ಇರುತ್ತದೆ. ಇನ್ನು ಶೇ 25ರಷ್ಟು ಯುವಕರಲ್ಲಿ ಯಾವುದೇ ನಿಖರವಾದ ಕಾರಣವಿಲ್ಲ. ವಾಯು ಮಾಲಿನ್ಯ ಮತ್ತು ಆಹಾರಪದ್ಧತಿ ಇದೀಗ ಹೊಸದಾಗಿ ಕಂಡುಬಂದಿರುವ ಕಾರಣಗಳು” ಎಂದು ಅವರು ಹೇಳಿದ್ದಾರೆ.
40ರಿಂದ ಕಡಿಮೆ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾದವರ ಕುಟುಂಬದವರು 30ರೊಳಗೆ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ. “ಟ್ರೆಡ್ಮಿಲ್ ಇಸಿಜಿ ಎಂದು ಹೇಳುತ್ತೇವೆ. ರಕ್ತದೊತ್ತಡ ಮತ್ತು ಕೊಲೆಸ್ಟರಾಲ್ ಪರೀಕ್ಷಿಸಿಕೊಳ್ಳಬೇಕಾಗುತ್ತದೆ. ಇತ್ತೀಚೆಗೆ ಸಿಟಿ ಸ್ಕ್ಯಾನ್ ಅಲ್ಲಿ ರಕ್ತನಾಳದಲ್ಲಿ ಕ್ಯಾಲ್ಸಿಯಂ ಸ್ಕೋರ್ ತಪಾಸಣೆಯನ್ನೂ ಮಾಡುತ್ತೇವೆ. ಅತ್ಯಧಿಕ ಅಪಾಯದ ಅಂಶಗಳು ಇದ್ದರೆ ಸಿಟಿ ಆಂಜಿಯೋಗ್ರಾಂ ಎನ್ನುವ ತಪಾಸಣೆ ಮಾಡಿಸಿಕೊಳ್ಳಬಹುದು” ಎಂದು ಅವರು ಸಲಹೆ ನೀಡಿದ್ದಾರೆ.