ಸಾಂದರ್ಭಿಕ ಚಿತ್ರ | Photo Credit : magnific

ಆದರೆ ಜೋಳದ ನಾರಿನ ನೀರು ನಿಜವಾಗಿಯೂ ಮೂತ್ರಪಿಂಡದ ಆರೋಗ್ಯಕ್ಕೆ ಬೆಂಬಲ ನೀಡುತ್ತದೆಯೇ? ಆಹಾರ ತಜ್ಞೆ ಮತ್ತು ಸಲಹೆಗಾರರು, ಸರ್ಟಿಫೈಡ್ ಡಯಬಿಟಿಸ್ ಶಿಕ್ಷಕಿಯಾಗಿರುವ ಕನಿಕಾ ಮಲ್ಹೋತ್ರ ಅವರು ಈ ಬಗ್ಗೆ ಏನು ಹೇಳುತ್ತಾರೆ?

ಯೋಗ ಮತ್ತು ಕ್ಷೇಮ (wellness) ತಜ್ಞೆ ರಾಧೇಶಾ ಅವರು ಇತ್ತೀಚೆಗೆ ಜೋಳದ ತೆನೆಯ ಮೇಲಿರುವ ಎಳೆ ಕೂದಲುಗಳಂತಹ ಒಣಗಿದ ಭಾಗದಿಂದ ವಿಶೇಷವಾಗಿ ಮೂತ್ರಪಿಂಡಗಳು ಮತ್ತು ಮೂತ್ರನಾಳದ ವ್ಯವಸ್ಥೆಗೆ ಆಗುವ ಲಾಭಗಳ ಬಗ್ಗೆ ಹೇಳಿದ್ದಾರೆ. “ಮೂತ್ರಪಿಂಡಗಳು, ಯಕೃತ್ತು ಮತ್ತು ಮೂತ್ರಕೋಶಕ್ಕೆ ಇದೊಂದು ಉತ್ತಮ ಔಷಧಿಯಾಗಿದೆ. ಮೂತ್ರದ ಹರಿವನ್ನು ಹೆಚ್ಚಿಸುವ ಮೂತ್ರವರ್ಧಕ ಗುಣ ಹೊಂದಿದೆ. ಜೋಳ ತಿಂದ ನಂತರ ನಾರುಗಳನ್ನು ಎಂದಿಗೂ ಎಸೆಯಬೇಡಿ” ಎಂದು ಅವರು ಸೂಚಿಸಿದ್ದಾರೆ.

“ಮೂತ್ರಪಿಂಡದ ಕಲ್ಲುಗಳು, ಪದೇಪದೇ ಬರುವ ಮೂತ್ರನಾಳದ ಸೋಂಕು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟದ ಸಮಸ್ಯೆ ಹೊಂದಿರುವವರು ಜೋಳದ ನಾರು ಸೇವಿಸುವುದು ಪ್ರಯೋಜನಕಾರಿ” ಎಂದು ಹೇಳಿರುವ ರಾಧೇಶಾ, ಅದನ್ನು ತಯಾರಿಸುವ ಬಗೆಯನ್ನೂ ವಿವರಿಸಿದ್ದಾರೆ. “250 ಮಿಲೀ ನೀರಿನಲ್ಲಿ ಸ್ವಲ್ಪ ಒಣಗಿದ ಜೋಳದ ನಾರನ್ನು ಹಾಕಿ ಐದು ನಿಮಿಷಗಳ ಕಾಲ ಕುದಿಸಬೇಕು. ನಂತರ ಅದನ್ನು ಸೋಸಿ ನೀರನ್ನು ಕುಡಿಯಬೇಕು” ಎಂದು ಅವರು ಸೂಚಿಸಿದ್ದಾರೆ.

Full View

ಆದರೆ ಜೋಳದ ನಾರಿನ ನೀರು ನಿಜವಾಗಿಯೂ ಮೂತ್ರಪಿಂಡದ ಆರೋಗ್ಯಕ್ಕೆ ಬೆಂಬಲ ನೀಡುತ್ತದೆಯೇ? ಮೂತ್ರಪಿಂಡದ ಕಲ್ಲುಗಳನ್ನು ತಡೆಯುವುದೇ? ಅಥವಾ ಮೂತ್ರದ ಸಮಸ್ಯೆಗಳಿಗೆ ಸಹಾಯ ಮಾಡುವುದೇ? ಆಹಾರ ತಜ್ಞೆ ಮತ್ತು ಸಲಹೆಗಾರರಾಗಿರುವ, ಸರ್ಟಿಫೈಡ್ ಡಯಬಿಟಿಸ್ ಶಿಕ್ಷಕಿಯಾಗಿರುವ ಕನಿಕಾ ಮಲ್ಹೋತ್ರ ಅವರು ಈ ಬಗ್ಗೆ ಏನು ಹೇಳುತ್ತಾರೆ?

ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ?

ಕನಿಕಾ ಅವರ ಪ್ರಕಾರ, ಜೋಳದ ನಾರು 'ಡೈಯೂರೆಟಿಕ್' ಗುಣಲಕ್ಷಣಗಳನ್ನು ಹೊಂದಿರುವುದು ನಿಜ. ಅಂದರೆ ಇದು ಮೂತ್ರದ ಉತ್ಪಾದನೆಯನ್ನು ಹೆಚ್ಚಿಸಬಲ್ಲದು. ವಾಸ್ತವದಲ್ಲಿ ಇದು ದೇಹದಲ್ಲಿನ ದ್ರವದ ಸಮತೋಲನಕ್ಕೆ ಸಂಬಂಧಿಸಿದೆ ಮತ್ತು ಮೂತ್ರದ ಆರೋಗ್ಯಕ್ಕಾಗಿ ಇದನ್ನು ಸಾಂಪ್ರದಾಯಿಕವಾಗಿ ಏಕೆ ಬಳಸಲಾಗುತ್ತದೆ ಎಂಬುದನ್ನು ವಿವರಿಸಬಹುದು. “ಜೋಳದ ನಾರು ಮೂತ್ರದ ಉತ್ಪಾದನೆ ಹೆಚ್ಚಿಸುವ ಮೂತ್ರವರ್ಧಕವಾಗಿದೆ ಮತ್ತು ಈ ಪ್ರಕ್ರಿಯೆಯು ಮೂತ್ರನಾಳದ ಸೋಂಕು (UTI) ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ” ಎನ್ನುತ್ತಾರೆ ಕನಿಕಾ.

ಜೋಳದ ನಾರಿನಲ್ಲಿರುವ ಕೆಲವು ಸಂಯುಕ್ತಗಳು ACE (Angiotensin-Converting Enzyme) ಮಾರ್ಗವನ್ನು (ರಕ್ತದೊತ್ತಡದ ಔಷಧಗಳು ಗುರಿಪಡಿಸುವ ಮಾರ್ಗ) ತಡೆಯಬಲ್ಲವು. ಇದರಿಂದಾಗಿ ರಕ್ತದೊತ್ತಡವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ಪರಿಣಾಮ ಹೊಂದಿರಬಹುದು. ಜೋಳದ ನಾರು ಗಮನಾರ್ಹವಾದ ಉತ್ಕರ್ಷಣ ನಿರೋಧಕ (antioxidant) ಮತ್ತು ಉರಿಯೂತ ವಿರೋಧಿ (anti-inflammatory) ಚಟುವಟಿಕೆಯನ್ನೂ ಹೊಂದಿರುವ ಕಾರಣ ಮೂತ್ರಪಿಂಡದ ಅಂಗಾಂಶಗಳಿಗೆ ಸಹಾಯ ಮಾಡಬಹುದು.

ಜೋಳದ ನಾರಿನ ಚಹಾ ಮೂತ್ರದಲ್ಲಿ ಕಲ್ಲುಗಳನ್ನು ತಡೆಯುವುದೇ?

ಜೋಳದ ನಾರು ಮೂತ್ರಪಿಂಡದ ಕಾಯಿಲೆಗೆ ಚಿಕಿತ್ಸೆ ನೀಡುವುದಿಲ್ಲ. ಮೂತ್ರಪಿಂಡದ ಕಾರ್ಯಕ್ಕೆ ಬೆಂಬಲ ನೀಡಬಹುದು. ಆದರೆ, ಮೂತ್ರದಲ್ಲಿ ಕಲ್ಲುಗಳು ರೂಪುಗೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಮೂತ್ರದ ಹರಿವು ಹೆಚ್ಚಾಗುವುದರಿಂದ ಮೂತ್ರ ವ್ಯವಸ್ಥೆಯಲ್ಲಿ ಖನಿಜ ಮತ್ತು ಕೆಸರಿನ ಸಾಂದ್ರತೆ ಕಡಿಮೆಯಾಗುತ್ತದೆ ಮತ್ತು ಹೊಸ ಕಲ್ಲುಗಳನ್ನು ತಡೆಯಲು ಸಹಾಯ ಮಾಡುತ್ತದೆ. ಆದರೆ ಅಸ್ತಿತ್ವದಲ್ಲಿರುವ ಕಲ್ಲುಗಳನ್ನು ಕರಗಿಸುವುದಿಲ್ಲ.

ಮೂತ್ರದಲ್ಲಿ ಕಲ್ಲಿನ ಸಮಸ್ಯೆ ಇರುವವರಿಗೆ ಹೆಚ್ಚು ನೀರು ಸೇವನೆಯಿಂದ ಲಾಭವಾಗಲಿದೆ. ಹೆಚ್ಚಿನ ದ್ರವ ಪ್ರಮಾಣವು ಮೂತ್ರವನ್ನು ದುರ್ಬಲಗೊಳಿಸುತ್ತದೆ ಮತ್ತು ಖನಿಜ ಸಾಂದ್ರತೆಯನ್ನು ಕಡಿಮೆಗೊಳಿಸುತ್ತದೆ. ಹೀಗಾಗಿ ಜೋಳದ ನಾರಿನ ಚಹಾ ಮಾಡಿ ಕುಡಿಯುವುದು ಗುರಿಯನ್ನು ತಲುಪಲು ಉತ್ತಮ ರುಚಿಯ ಮಾರ್ಗವಾಗಿದೆ.

ಜೋಳದ ನಾರಿನ ಚಹಾ ಮೂತ್ರನಾಳದ ಸೋಂಕನ್ನು ತಡೆಯುವುದೇ?

ಜೋಳದ ನಾರಿನ ಚಹಾದ ಮೂತ್ರವರ್ಧಕ ಪರಿಣಾಮದಿಂದಾಗಿ ಮೂತ್ರನಾಳದ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಆದರೆ ಮರುಕಳಿಸುವ ಸೋಂಕುಗಳಿಗೆ ವೈದ್ಯಕೀಯ ಮೌಲ್ಯಮಾಪನದ ಅಗತ್ಯವಿದೆ. “ಮೂತ್ರವಿಸರ್ಜನೆ ಮಾಡುವಾಗ ಉರಿ ಅಥವಾ ಆಗಾಗ್ಗೆ ಮೂತ್ರ ವಿಸರ್ಜನೆ, ಜ್ವರ, ಮೂತ್ರದಲ್ಲಿ ರಕ್ತ ಅಥವಾ ನೋವು ಮುಂತಾದ ಲಕ್ಷಣಗಳನ್ನು ಗಿಡಮೂಲಿಕೆ ಪಾನೀಯಗಳಿಂದ ಮಾತ್ರ ನಿರ್ವಹಿಸಬಾರದು. ವೈದ್ಯರನ್ನು ಕಾಣಬೇಕಾಗುತ್ತದೆ.

ನಿಯಮಿತವಾಗಿ ಜೋಳದ ನಾರಿನ ಚಹಾ ಸೇವಿಸುವುದು ಆರೋಗ್ಯಕರವೇ?

ಗಮನಿಸಬೇಕಾದ ಒಂದು ವಿಷಯವೆಂದರೆ ಪೊಟ್ಯಾಶಿಯಂ. ಜೋಳದ ನಾರಿನ ಚಹಾ ರಕ್ತದಲ್ಲಿ ಪೊಟ್ಯಾಶಿಯಂ ಅನ್ನು ಕಡಿಮೆ ಮಾಡಬಹುದು. ಯಾರಾದರೂ ಪ್ರಿಸ್ಕ್ರಿಪ್ಷನ್ ಮೂತ್ರವರ್ಧಕ ತೆಗೆದುಕೊಳ್ಳುತ್ತಿದ್ದರೆ ಜೋಳದ ನಾರಿನ ಚಹಾ ಆ ಪರಿಣಾಮವನ್ನು ವರ್ಧಿಸುತ್ತದೆ ಎಂದು ಕನಿಕಾ ಅಭಿಪ್ರಾಯಪಟ್ಟಿದ್ದಾರೆ.

ಹೀಗಾಗಿ ಮೂತ್ರಪಿಂಡದ ಕಾರ್ಯ ಕಡಿಮೆಯಾಗಿರುವ ವ್ಯಕ್ತಿಗಳು ವೈದ್ಯಕೀಯ ಸಲಹೆಗಳಿಲ್ಲದೆ ಜೋಳದ ನಾರಿನ ಚಹಾ ಸೇವನೆ ತಪ್ಪಿಸಬೇಕು. ಏಕೆಂದರೆ ಪೊಟ್ಯಾಶಿಯಂ ಅನ್ನು ನಿಯಂತ್ರಿಸುವ ಅವರ ಸಾಮರ್ಥ್ಯವು ಈಗಾಗಲೇ ದುರ್ಬಲಗೊಂಡಿರಬಹುದು.

ಗರ್ಭಿಣಿಯರೂ ಜೋಳದ ನಾರಿನ ಚಹಾ ಸೇವನೆಯನ್ನು ಮಾಡಬಾರದು. ಅಲ್ಲದೆ, ಜೋಳದ ಅಲರ್ಜಿ ಇರುವವರೂ ಇದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಸೂಚನೆ: ಈ ಲೇಖನವನ್ನು ಮಾಧ್ಯಮದ ಮೂಲಗಳಿಂದ ಮಾಹಿತಿ ನೀಡುವ ಉದ್ದೇಶಕ್ಕಾಗಿ ನೀಡಲಾಗಿದೆ. ವೈದ್ಯರ ಸಲಹೆಗಳಿಗೆ ಪರ್ಯಾಯವಲ್ಲ. ವೈದ್ಯಕೀಯ ಸಮಸ್ಯೆಗಳಿಗೆ ವೃತ್ತಿಪರ ಸಲಹೆಗಾಗಿ ವಿಶ್ವಾಸಾರ್ಹ ವೈದ್ಯರನ್ನು ಭೇಟಿ ಮಾಡಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor