ಡಿಜಿಟಲ್ ವಂಚನೆಗಳಿಗೆ ಬ್ರೇಕ್ ಹಾಕಲು ಆರ್‌ಬಿಐನ ‘ಕಿಲ್ ಸ್ವಿಚ್’ ವ್ಯವಸ್ಥೆ; ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
ಸಾಂದರ್ಭಿಕ ಚಿತ್ರ
ಡಿಜಿಟಲ್ ವಂಚನೆಗಳಿಗೆ ಬಲಿಯಾಗುತ್ತಿರುವ ಗ್ರಾಹಕರು ತಮ್ಮ ಖಾತೆಗಳಿಂದ ನಡೆಯುವ ಎಲ್ಲಾ ಹಣಕಾಸು ವಹಿವಾಟುಗಳನ್ನು ತಕ್ಷಣವೇ ಸ್ಥಗಿತಗೊಳಿಸಲು ಅನುವು ಮಾಡಿಕೊಡುವ ‘ಕಿಲ್ ಸ್ವಿಚ್’ (Kill Switch) ವ್ಯವಸ್ಥೆಯನ್ನು ಜಾರಿಗೆ ತರುವ ಸಾಧ್ಯತೆಗಳ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪರಿಶೀಲನೆ ನಡೆಸುತ್ತಿದೆ. ಇದರೊಂದಿಗೆ, ಎಲ್ಲಾ ಡಿಜಿಟಲ್ ಪಾವತಿ ವಿಧಾನಗಳಿಗಾಗಿ ‘ಸ್ವಿಚ್ ಆನ್’ ಮತ್ತು ‘ಸ್ವಿಚ್ ಆಫ್’ ಮಾಡುವ ಸೌಲಭ್ಯವನ್ನೂ ಆರ್‌ಬಿಐ ಪ್ರಸ್ತಾಪಿಸಿದೆ. ಈ ಸೌಲಭ್ಯವು ಗ್ರಾಹಕರಲ್ಲಿ ವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಡಿಜಿಟಲ್ ಪಾವತಿ ವಹಿವಾಟುಗಳಲ್ಲಿ ನಡೆಯುವ ವಂಚನೆಗಳನ್ನು ನಿಯಂತ್ರಿಸಲು ಕೊಡುಗೆ ನೀಡುತ್ತದೆ ಎಂದು ಆರ್‌ಬಿಐನ ವಾರ್ಷಿಕ ವರದಿ ತಿಳಿಸಿದೆ.
‘ಕಿಲ್ ಸ್ವಿಚ್’ ಸೌಲಭ್ಯ ಎಂದರೇನು?
‘ಕಿಲ್ ಸ್ವಿಚ್’ ಸೌಲಭ್ಯ ಎನ್ನುವುದು ತುರ್ತು ಪರಿಸ್ಥಿತಿಯಲ್ಲಿ ಅಥವಾ ನಿರ್ದಿಷ್ಟ ಸಂದರ್ಭಗಳಲ್ಲಿ ಯಾವುದೇ ಒಂದು ವ್ಯವಸ್ಥೆ, ಸಾಧನ, ಖಾತೆ ಅಥವಾ ಸೇವೆಯನ್ನು ತಕ್ಷಣವೇ ಸ್ಥಗಿತಗೊಳಿಸಲು, ನಿಷ್ಕ್ರಿಯಗೊಳಿಸಲು ಅಥವಾ ನಿರ್ಬಂಧಿಸಲು ಅವಕಾಶ ನೀಡುವ ತಾಂತ್ರಿಕ ವ್ಯವಸ್ಥೆಯಾಗಿದೆ.
ಸರ್ಕಾರ ಮತ್ತು ಆರ್‌ಬಿಐ ಪರಿಶೀಲಿಸುತ್ತಿರುವ ಈ ‘ಕಿಲ್ ಸ್ವಿಚ್’ ಪ್ರಸ್ತಾವನೆಯ ಪ್ರಕಾರ, ಬ್ಯಾಂಕ್‌ಗಳ ಪಾವತಿ ಆ್ಯಪ್‌ಗಳಲ್ಲಿ ತುರ್ತು ಬಟನ್ ಒಂದನ್ನು ಅಳವಡಿಸುವ ಆಲೋಚನೆ ಇದೆ. ಗ್ರಾಹಕರು ತಾವು ವಂಚಕರ ಜಾಲಕ್ಕೆ ಸಿಲುಕುತ್ತಿದ್ದೇವೆ ಅಥವಾ ವಂಚನೆಗೆ ಒಳಗಾಗುತ್ತಿದ್ದೇವೆ ಎಂದು ಶಂಕಿಸಿದ ತಕ್ಷಣ, ಈ ಬಟನ್ ಒತ್ತುವ ಮೂಲಕ ತಮ್ಮ ಎಲ್ಲಾ ಬ್ಯಾಂಕಿಂಗ್ ವಹಿವಾಟುಗಳನ್ನು ಕ್ಷಣಾರ್ಧದಲ್ಲಿ ಸ್ಥಗಿತಗೊಳಿಸಬಹುದಾಗಿದೆ.
ಈ ವರ್ಷದ ಜನವರಿಯಲ್ಲಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದಂತೆ, ದೇಶದಲ್ಲಿ ಹೆಚ್ಚುತ್ತಿರುವ ‘ಡಿಜಿಟಲ್ ಅರೆಸ್ಟ್’ ಪಿಡುಗನ್ನು ತಡೆಗಟ್ಟಲು ಗೃಹ ಸಚಿವಾಲಯ ರಚಿಸಿರುವ ಉನ್ನತ ಮಟ್ಟದ ಸಮಿತಿಯು ಸಹ ಇಂತಹ “ಕಿಲ್ ಸ್ವಿಚ್” ಪರಿಕಲ್ಪನೆಯನ್ನು ಜಾರಿಗೆ ತರುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದೆ.
ಈ ಸೌಲಭ್ಯದ ಅಗತ್ಯವೇನಿದೆ?
‘ಡಿಜಿಟಲ್ ಅರೆಸ್ಟ್’ ವಂಚನೆಗಳಲ್ಲಿ, ವಂಚಕರು ವಿಡಿಯೊ ಕರೆ ಮೂಲಕ ಪೊಲೀಸ್ ಅಥವಾ ಇತರ ಕಾನೂನು ಜಾರಿ ಸಂಸ್ಥೆಗಳ ಅಧಿಕಾರಿಗಳಂತೆ ನಟಿಸುತ್ತಾರೆ. ಅಲ್ಲದೆ, ಬಲಿಪಶುಗಳು ಗಂಭೀರ ಅಪರಾಧಗಳ ತನಿಖೆಗೆ ಒಳಗಾಗಿದ್ದಾರೆ ಎಂದು ಸುಳ್ಳು ಹೇಳಿ ಹೆದರಿಸುತ್ತಾರೆ.
ಗ್ರಾಹಕರ ನಂಬಿಕೆ ಗಳಿಸಲು ಮೊದಲೇ ಸೋರಿಕೆಯಾಗಿರುವ ಅವರ ವೈಯಕ್ತಿಕ ದತ್ತಾಂಶಗಳನ್ನು ಬಳಸುವ ವಂಚಕರು, ನಕಲಿ ಗುರುತಿನ ಚೀಟಿಗಳು ಹಾಗೂ ಬಂಧನ ವಾರಂಟ್‌ಗಳನ್ನು ತೋರಿಸಿ ಭಯ ಮತ್ತು ತುರ್ತು ಪರಿಸ್ಥಿತಿಯನ್ನು ಸೃಷ್ಟಿಸುತ್ತಾರೆ. ಗಂಟೆಗಟ್ಟಲೆ ವಿಡಿಯೊ ಕರೆಯಲ್ಲಿಯೇ ಇರಿಸಿಕೊಂಡು, ಬಂಧನದಿಂದ ಪಾರಾಗಲು ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸುವಂತೆ ಬಲಿಪಶುಗಳನ್ನು ಬಲವಂತಪಡಿಸುತ್ತಾರೆ.
ಭಾರತದಾದ್ಯಂತ ಇಂತಹ ಡಿಜಿಟಲ್ ಅರೆಸ್ಟ್ ವಂಚನೆಗಳಿಗೆ ಜನರು ಬರೋಬ್ಬರಿ 3,000 ಕೋಟಿ ರೂಪಾಯಿಯಷ್ಟು ಹಣವನ್ನು ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ಕಳೆದ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ಈ ವಿಷಯದ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.
ನಿಯಂತ್ರಕರು ಮತ್ತು ಸರ್ಕಾರ ಹಲವು ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದ್ದರೂ, ಮುಗ್ಧ ಜನರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ‘ಡಿಜಿಟಲ್ ಅರೆಸ್ಟ್’ ಮತ್ತು ಹಣದ ಅಕ್ರಮ ವರ್ಗಾವಣೆ ಪಿಡುಗು ಮುಂದುವರಿಯುತ್ತಲೇ ಇದೆ. ಇಂತಹ ಸಂದರ್ಭದಲ್ಲಿ, ಯಾರಾದರೂ ತಮಗೆ ಬಂದಿರುವ ಹಣ ವರ್ಗಾವಣೆಯ ವಿನಂತಿ ನಕಲಿ ಅಥವಾ ವಂಚನೆಯಿಂದ ಕೂಡಿದೆ ಎಂದು ಶಂಕಿಸಿದರೆ, ಅವರು ಮೊಬೈಲ್‌ನಲ್ಲಿರುವ ಬ್ಯಾಂಕ್ ಆ್ಯಪ್ ಮೂಲಕ ತಕ್ಷಣವೇ ‘ಕಿಲ್ ಸ್ವಿಚ್’ ಅನ್ನು ಸಕ್ರಿಯಗೊಳಿಸಿ ಹಣ ವರ್ಗಾವಣೆಯನ್ನು ಕ್ಷಣಾರ್ಧದಲ್ಲಿ ತಡೆಯಬಹುದು.
ಎಲ್ಲಾ ಡಿಜಿಟಲ್ ಪಾವತಿಗಳಿಗೆ ‘ಸ್ವಿಚ್ ಆನ್/ಆಫ್’ ವ್ಯವಸ್ಥೆ
ಪ್ರಸ್ತುತ, ಗ್ರಾಹಕರು ತಮ್ಮ ದೇಶೀಯ ಮತ್ತು ಅಂತರರಾಷ್ಟ್ರೀಯ ಕಾರ್ಡ್ ವಹಿವಾಟುಗಳನ್ನು ತಮಗೆ ಬೇಕಾದಾಗ ‘ಸ್ವಿಚ್ ಆನ್’ ಅಥವಾ ‘ಸ್ವಿಚ್ ಆಫ್’ ಮಾಡುವ ಆಯ್ಕೆಯನ್ನು ಹೊಂದಿದ್ದಾರೆ. ಇದು ಅವರ ಕಾರ್ಡ್‌ಗಳ ಬಳಕೆ ಮತ್ತು ಭದ್ರತೆಯ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಲು ಸಹಾಯ ಮಾಡಿದೆ. ಗ್ರಾಹಕರು ತಮಗೆ ಅಗತ್ಯವಿದ್ದಾಗ ಮಾತ್ರ ಪಾವತಿ ಸೇವೆಗಳನ್ನು ಸಕ್ರಿಯಗೊಳಿಸುವ ಮೂಲಕ ಅಪಾಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ವೈಶಿಷ್ಟ್ಯವು ಸಹಕಾರಿಯಾಗಿದೆ ಎಂದು ಆರ್‌ಬಿಐ ಹೇಳಿದೆ.
ಆರ್‌ಬಿಐ ತನ್ನ ವಾರ್ಷಿಕ ವರದಿಯಲ್ಲಿ, ಯುಪಿಐ, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಇತರ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳು ಸೇರಿದಂತೆ ಎಲ್ಲಾ ಡಿಜಿಟಲ್ ಪಾವತಿ ವ್ಯವಸ್ಥೆಗಳಿಗೂ ಇಂತಹದೇ ಆದ “ಸ್ವಿಚ್ ಆನ್/ಸ್ವಿಚ್ ಆಫ್” ಸೌಲಭ್ಯವನ್ನು ವಿಸ್ತರಿಸುವ ಸಾಧ್ಯತೆಗಳನ್ನು ಪರಿಶೀಲಿಸುವುದಾಗಿ ತಿಳಿಸಿದೆ. ಈ ಕ್ರಮವು ಗ್ರಾಹಕರ ರಕ್ಷಣೆಯನ್ನು ಬಲಪಡಿಸುವ, ವಂಚನೆಗಳ ವಿರುದ್ಧ ಭದ್ರತೆಯನ್ನು ಹೆಚ್ಚಿಸುವ ಮತ್ತು ಡಿಜಿಟಲ್ ವಹಿವಾಟುಗಳ ಮೇಲೆ ಬಳಕೆದಾರರಿಗೆ ಹೆಚ್ಚಿನ ನಮ್ಯತೆ ಹಾಗೂ ನಿಯಂತ್ರಣವನ್ನು ನೀಡುವ ಉದ್ದೇಶವನ್ನು ಹೊಂದಿದೆ.
ಆರ್‌ಬಿಐ ಪ್ರಸ್ತಾಪಿಸಿರುವ ಈ “ಸ್ವಿಚ್ ಆನ್–ಸ್ವಿಚ್ ಆಫ್ ವ್ಯವಸ್ಥೆ”ಯು ಡಿಜಿಟಲ್ ಬ್ಯಾಂಕಿಂಗ್ ಮತ್ತು ಪಾವತಿಗಳಿಗಾಗಿ ತರಲು ಉದ್ದೇಶಿಸಿರುವ ಭದ್ರತಾ ವೈಶಿಷ್ಟ್ಯವಾಗಿದೆ. ಇದು ಗ್ರಾಹಕರು ತಮಗೆ ಬೇಕಾದಾಗ ಕೆಲವು ಬ್ಯಾಂಕಿಂಗ್ ಸೇವೆಗಳನ್ನು ತಾತ್ಕಾಲಿಕವಾಗಿ ಚಾಲೂ ಮಾಡಲು ಅಥವಾ ಬಂದ್ ಮಾಡಲು ಅನುವು ಮಾಡಿಕೊಡುತ್ತದೆ. ಇದು ಬ್ಯಾಂಕಿಂಗ್ ಪ್ರವೇಶದ ಮೇಲಿನ ಒಂದು ‘ಕಿಲ್ ಸ್ವಿಚ್’ನಂತೆಯೇ ಕಾರ್ಯನಿರ್ವಹಿಸುತ್ತದೆ.
ಗ್ರಾಹಕರು ಬ್ಯಾಂಕಿಂಗ್ ಆ್ಯಪ್, ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಎಸ್‌ಎಂಎಸ್ ಬಳಸಿ ಯುಪಿಐ ವಹಿವಾಟುಗಳು, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಕೆ, ಇಂಟರ್ನೆಟ್ ಬ್ಯಾಂಕಿಂಗ್ ಪ್ರವೇಶ, ಅಂತರರಾಷ್ಟ್ರೀಯ ವಹಿವಾಟುಗಳು ಹಾಗೂ ಎಟಿಎಂನಿಂದ ಹಣ ಹಿಂಪಡೆಯುವ ಸೇವೆಗಳನ್ನು ಆಫ್ ಮಾಡಬಹುದು. ನಂತರ ತಮಗೆ ಅಗತ್ಯವಿದ್ದಾಗ ಮಾತ್ರ ಈ ಸೇವೆಗಳನ್ನು ಮತ್ತೆ ಆನ್ ಮಾಡಿಕೊಳ್ಳಬಹುದು.