×
Ad

2015ರ ನಂತರದ ದೇಶದ ಅತ್ಯಂತ ಕಳಪೆ ಮುಂಗಾರು ಎದುರಾಗುವ ಭೀತಿ: ಶೇ 60ರಷ್ಟು ಆತಂಕ ಹೆಚ್ಚಿಸಿದ ‘ಎಲ್ ನಿನೊ’

Update: 2026-05-30 20:10 IST

ಸಾಂದರ್ಭಿಕ ಚಿತ್ರ | Photo Credit : PTI

ಕಳೆದ ಸತತ ಎರಡು ವರ್ಷಗಳ ಕಾಲ ಭಾರತದಲ್ಲಿ ಮುಂಗಾರು ಮಳೆ ಉತ್ತಮವಾಗಿ ಕೈ ಹಿಡಿದಿತ್ತು. 2024 ಮತ್ತು 2025ರಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ಜಲಾಶಯಗಳು ಭರ್ತಿಯಾಗಿದ್ದವು. ರೈತರು ಸತತವಾಗಿ ಉತ್ತಮ ಫಸಲು ಪಡೆದಿದ್ದರು. ಆದರೆ, 2026ರಲ್ಲಿ ಇದಕ್ಕೆ ಬ್ರೇಕ್ ಬಿದ್ದಿದೆ.

ಮೇ 29ರಂದು ಭಾರತೀಯ ಹವಾಮಾನ ಇಲಾಖೆ ಈ ವರ್ಷದ ನೈಋತ್ಯ ಮುಂಗಾರು ಮಳೆಯ ಮುನ್ಸೂಚನೆಯನ್ನು ಪ್ರಕಟಿಸಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಇರಲಿರುವ ಹಾಗೂ ದೇಶದ ವಾರ್ಷಿಕ ಮಳೆಯ ಒಟ್ಟು ಪ್ರಮಾಣದಲ್ಲಿ ಸುಮಾರು ಶೇ 70ರಷ್ಟನ್ನು ಒದಗಿಸುವ ಈ ಮಳೆ ಮಾರುತಗಳು, ಈ ಬಾರಿ ವಿಜ್ಞಾನಿಗಳು ಅಂದಾಜಿಸುವ 'ವಾಡಿಕೆ ಮಳೆ'ಗಿಂತ ಕೇವಲ ಶೇ 90ರಷ್ಟು ಮಾತ್ರವೇ ಸುರಿಯಲಿವೆ ಎಂದು ಇಲಾಖೆ ಖಚಿತಪಡಿಸಿದೆ.

ಒಂದು ವೇಳೆ ಈ ಮುನ್ಸೂಚನೆ ನಿಜವಾದರೆ, 2026ರ ಮುಂಗಾರು ಕಳೆದ ಒಂದು ದಶಕದಲ್ಲೇ ಭಾರತ ಎದುರಿಸಲಿರುವ ಅತ್ಯಂತ ಕಳಪೆ ಮುಂಗಾರು ಎನಿಸಿಕೊಳ್ಳಲಿದೆ. ದೇಶದಲ್ಲಿ ವಾಡಿಕೆಗಿಂತ ಶೇ 90ಕ್ಕಿಂತ ಕಡಿಮೆ ಮಳೆಯಾಗಿ, ತೀವ್ರ ಹಿನ್ನಡೆ ದಾಖಲಾಗಿದ್ದು ಕೊನೆಯ ಬಾರಿ 2015ರಲ್ಲಿ. ಆ ವರ್ಷ ಭಾರತದ ಬಹುತೇಕ ಭಾಗಗಳು ಭೀಕರ ಬರಗಾಲ, ಬೆಳೆ ನಷ್ಟ ಮತ್ತು ತೀವ್ರ ನೀರಿನ ಅಭಾವವನ್ನು ಎದುರಿಸಿದ್ದವು.

ಈ ಅಂಕಿ-ಅಂಶವೊಂದೇ 2026ರ ಮುಂಗಾರನ್ನು ದಶಕದ ಅತ್ಯಂತ ಕನಿಷ್ಠ ಮಳೆಯ ವರ್ಷವನ್ನಾಗಿ ಬಿಂಬಿಸುತ್ತಿದೆ. ಈಗಾಗಲೇ ಅಂದಾಜಿಸಲಾಗಿರುವ ಕನಿಷ್ಠ ಮಟ್ಟಕ್ಕಿಂತಲೂ ತೀವ್ರವಾದ ಮಳೆ ಕೊರತೆ ಉಂಟಾಗುವ ಸಾಧ್ಯತೆ ಬರೋಬ್ಬರಿ ಶೇ 60ರಷ್ಟಿದೆ!

ಸಾಮಾನ್ಯವಾಗಿ ಯಾವುದೇ ವರ್ಷದಲ್ಲಿ ಇಷ್ಟು ಭೀಕರ ಮಟ್ಟದ ಮಳೆ ಕೊರತೆಯಾಗುವ ಐತಿಹಾಸಿಕ ಸಾಧ್ಯತೆ ಕೇವಲ ಶೇ 16ರಷ್ಟು ಮಾತ್ರ ಇರುತ್ತದೆ. ಆದರೆ, ಹವಾಮಾನ ಇಲಾಖೆಯು ತನ್ನ ಒಂದೇ ಒಂದು ಮುನ್ಸೂಚನೆಯಲ್ಲಿ ಈ ಆತಂಕವನ್ನು ನಾಲ್ಕು ಪಟ್ಟು ಹೆಚ್ಚು ಮಾಡಿದೆ. ಇಷ್ಟೆಲ್ಲಾ ಆತಂಕಕ್ಕೆ ಕಾರಣವಾಗಿರುವ ಜಾಗತಿಕ ಹವಾಮಾನ ವಿದ್ಯಮಾನ ‘ಎಲ್ ನಿನೊ’ ಇನ್ನು ತನ್ನ ಪೂರ್ಣ ಪ್ರಮಾಣದ ತೀವ್ರತೆಯನ್ನು ತಲುಪದೇ ಇರುವುದು ಪರಿಸ್ಥಿತಿಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

‘ಎಲ್ ನಿನೊ’ ಎಂದರೇನು?

ಉಷ್ಣವಲಯದ ಪೆಸಿಫಿಕ್ ಮಹಾಸಾಗರವನ್ನು ಒಂದು ದೈತ್ಯ ಶಾಖದ ಇಂಜಿನ್ ಎಂದು ಕಲ್ಪಿಸಿಕೊಳ್ಳಿ. ಸಾಮಾನ್ಯ ಪರಿಸ್ಥಿತಿಯಲ್ಲಿ, ಪೂರ್ವದಿಂದ ಪಶ್ಚಿಮಕ್ಕೆ ಬೀಸುವ ಬಲವಾದ ಮಾರುತಗಳು ಸಾಗರದ ಮೇಲ್ಮೈಯಲ್ಲಿರುವ ಬೆಚ್ಚಗಿನ ನೀರನ್ನು ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾದ ಕಡೆಗೆ ತಳ್ಳುತ್ತವೆ. ಇದೇ ಸಮಯದಲ್ಲಿ ದಕ್ಷಿಣ ಅಮೆರಿಕಾದ ಕರಾವಳಿಯ ಉದ್ದಕ್ಕೂ ಆಳ ಸಮುದ್ರದಿಂದ ಪೋಷಕಾಂಶ ಭರಿತವಾದ ತಣ್ಣನೆಯ ನೀರು ಮೇಲಕ್ಕೆ ಬಂದು ಆ ಜಾಗವನ್ನು ಆಕ್ರಮಿಸುತ್ತದೆ.

ಗಾಳಿ ಮತ್ತು ಸಾಗರ ಪ್ರವಾಹದ ಈ ಸಂಪೂರ್ಣ ವ್ಯವಸ್ಥೆಯನ್ನು 'ವಾಕರ್ ಸರ್ಕ್ಯುಲೇಷನ್' ಎಂದು ಕರೆಯಲಾಗುತ್ತದೆ. 20ನೇ ಶತಮಾನದ ಆರಂಭದಲ್ಲಿ ಇದನ್ನು ಮೊದಲ ಬಾರಿಗೆ ವಿವರಿಸಿದ ಬ್ರಿಟಿಷ್ ಹವಾಮಾನ ತಜ್ಞ ಸರ್ ಗಿಲ್ಬರ್ಟ್ ವಾಕರ್ ಅವರ ನೆನಪಿಗಾಗಿ ಇದಕ್ಕೆ ಈ ಹೆಸರಿಡಲಾಗಿದೆ. ಭಾರತದ ಮುಂಗಾರು ಮಳೆ ಸಮಯಕ್ಕೆ ಸರಿಯಾಗಿ ಮತ್ತು ಪೂರ್ಣ ಪ್ರಮಾಣದಲ್ಲಿ ಬರುವಂತೆ ನೋಡಿಕೊಳ್ಳುವ ಪ್ರಮುಖ ಅಂಶಗಳಲ್ಲಿ ಇದು ಒಂದಾಗಿದೆ.

ಇದು ಯಾವಾಗ ಸ್ಥಗಿತಗೊಳ್ಳುತ್ತದೆಯೋ, ಆ ವಿದ್ಯಮಾನವೇ ‘ಎಲ್ ನಿನೊ’. ಈ ಅವಧಿಯಲ್ಲಿ ಮಾರುತಗಳು ದುರ್ಬಲಗೊಳ್ಳುತ್ತವೆ. ಬೆಚ್ಚಗಿನ ನೀರು ಮತ್ತೆ ಪೂರ್ವದ ಕಡೆಗೆ, ಅಂದರೆ ದಕ್ಷಿಣ ಅಮೆರಿಕಾದತ್ತ ಮುಖ ಮಾಡುತ್ತದೆ. ಆಳದಿಂದ ತಣ್ಣೀರು ಮೇಲಕ್ಕೆ ಬರುವ ಪ್ರಕ್ರಿಯೆಯು ನಿಂತುಹೋಗುತ್ತದೆ.

ಇದರ ಪರಿಣಾಮವಾಗಿ ಪೆಸಿಫಿಕ್ ಮಹಾಸಾಗರದ ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ಅಸಾಮಾನ್ಯವಾಗಿ ಬೆಚ್ಚಗಿನ ಸಾಗರ ಮೇಲ್ಮೈ ತಾಪಮಾನವು ಸೃಷ್ಟಿಯಾಗುತ್ತದೆ. ಇದರ ಪ್ರಭಾವವು ಜಗತ್ತಿನಾದ್ಯಂತ ಹರಡುತ್ತದೆ. ಮಳೆಯ ಮಾದರಿಗಳು ಬದಲಾಗುತ್ತವೆ, ಮಾರುತಗಳ ದಾರಿ ತಪ್ಪುತ್ತದೆ ಮತ್ತು ಭಾರತದ ವಿಷಯಕ್ಕೆ ಬರುವುದಾದರೆ ಇದು ಮುಂಗಾರು ಮಳೆಯನ್ನು ಕಸಿದುಕೊಳ್ಳುತ್ತದೆ.

ಇದರ ಕಾರ್ಯವಿಧಾನವು ತುಂಬಾ ಸರಳವಾಗಿದೆ. ಭಾರತದ ಮುಂಗಾರು ಮಳೆಯು ತಾಪಮಾನದ ವ್ಯತ್ಯಾಸದ ಆಧಾರದ ಮೇಲೆ ಕೆಲಸ ಮಾಡುತ್ತದೆ. ಪ್ರತಿ ಬೇಸಿಗೆಯಲ್ಲಿ ಭಾರತೀಯ ಉಪಖಂಡವು ಕಾಯುತ್ತಿದ್ದಂತೆ, ಭೂಮಿಯ ಮೇಲಿನ ಬೆಚ್ಚಗಿನ ಗಾಳಿಯ ಮೇಲೇಳುವ ಜಾಗವನ್ನು ತುಂಬಲು ಹಿಂದೂ ಮಹಾಸಾಗರದಿಂದ ತೇವಾಂಶ ಭರಿತ ಗಾಳಿಯು ವೇಗವಾಗಿ ನುಗ್ಗಿ ಬರುತ್ತದೆ. ಇದೇ ದೇಶಕ್ಕೆ ಮಳೆಯನ್ನು ತರುತ್ತದೆ.

ಆದರೆ ‘ಎಲ್ ನಿನೊ’ ವಾತಾವರಣದ 'ಕನ್ವೆಕ್ಷನ್' (ಮೋಡ ಮತ್ತು ಮಳೆಯನ್ನು ಉಂಟುಮಾಡುವ ಬೆಚ್ಚಗಿನ, ತೇವಾಂಶ ಭರಿತ ಗಾಳಿಯ ಮೇಲೇಳುವ ಪ್ರಕ್ರಿಯೆ) ವಲಯಗಳನ್ನು ದಕ್ಷಿಣ ಏಷ್ಯಾದಿಂದ ದೂರ ತಳ್ಳಿ, ಪೆಸಿಫಿಕ್ ಮಹಾಸಾಗರದ ಮಧ್ಯಭಾಗದತ್ತ ತಿರುಗಿಸುವ ಮೂಲಕ ಇಡೀ ವ್ಯವಸ್ಥೆಯನ್ನು ಏರುಪೇರು ಮಾಡುತ್ತದೆ.

ಇದರಿಂದಾಗಿ ಭಾರತಕ್ಕೆ ತಲುಪುವ ತೇವಾಂಶದ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಮಳೆಯೂ ಕ್ಷೀಣಿಸುತ್ತದೆ. ಇತಿಹಾಸವನ್ನು ಗಮನಿಸಿದರೆ, 1951 ಮತ್ತು 2022ರ ನಡುವಿನ ‘ಎಲ್ ನಿನೊ’ ವರ್ಷಗಳಲ್ಲಿ ಸುಮಾರು ಶೇ 60ರಷ್ಟು ಬಾರಿ ದೇಶಾದ್ಯಂತ ವಾಡಿಕೆಗಿಂತ ಕಡಿಮೆ ಮುಂಗಾರು ಮಳೆಯಾಗಿದೆ.

ಅತ್ಯಂತ ಭೀಕರ ಪರಿಸ್ಥಿತಿ ಎದುರಾಗುವ ಸಾಧ್ಯತೆ

ಮೇ 29ರಂದು ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಪರಿಷ್ಕೃತ ದೀರ್ಘಾವಧಿ ಮುನ್ಸೂಚನೆಯ ಪ್ರಕಾರ, ಪೆಸಿಫಿಕ್ ಮಹಾಸಾಗರವು ಪ್ರಸ್ತುತ ತಟಸ್ಥ ಸ್ಥಿತಿಯಿಂದ ‘ಎಲ್ ನಿನೊ’ ಕಡೆಗೆ ಬದಲಾಗುತ್ತಿದೆ. ಹವಾಮಾನ ಇಲಾಖೆಯ ಸ್ವಂತ ಹವಾಮಾನ ಮಾದರಿಗಳು ಸಹ ಮುಂಗಾರು ಅವಧಿಯಲ್ಲೇ ಎಲ್ ನಿನೊ ಪರಿಸ್ಥಿತಿಗಳು ಸೃಷ್ಟಿಯಾಗಲಿವೆ ಮತ್ತು ತೀವ್ರಗೊಳ್ಳಲಿವೆ ಎಂಬುದನ್ನು ಖಚಿತಪಡಿಸಿವೆ.

ಈ ಬದಲಾವಣೆಯ ಸಮಯವೇ ಅತ್ಯಂತ ನಿರ್ಣಾಯಕವಾಗಿದೆ. ಮುಂಗಾರು ಎನ್ನುವುದು ಕೇವಲ ಒಂದೇ ಒಂದು ಘಟನೆಯಲ್ಲ. ಅದೊಂದು ನಾಲ್ಕು ತಿಂಗಳ ಸುದೀರ್ಘ ವ್ಯವಸ್ಥೆ. ಅದರ ಕೊನೆಯ ತಿಂಗಳಾದ ಸೆಪ್ಟೆಂಬರ್‌ನಲ್ಲಿಯೇ ಹೊಲದಲ್ಲಿನ ಬೆಳೆಗಳು ಅತ್ಯಂತ ಸೂಕ್ಷ್ಮ ಹಾಗೂ ದುರ್ಬಲ ಸ್ಥಿತಿಯಲ್ಲಿರುತ್ತವೆ.

ಬೆಳೆಗಳು ಕಾಳು ಕಟ್ಟುವ ಹಂತದಲ್ಲಿ, ಅಂದರೆ ಭತ್ತ ಮತ್ತು ಇತರ ಖಾರಿಫ್ ಬೆಳೆಗಳು ತಾವು ಸಂಗ್ರಹಿಸಿದ ಪೋಷಕಾಂಶಗಳನ್ನು ಕಾಳನ್ನಾಗಿ ಪರಿವರ್ತಿಸುವ ಸಮಯದಲ್ಲಿ ನಿರಂತರ ಮಳೆಯಾಗುವುದು ಅತ್ಯಗತ್ಯ. ಆರಂಭದಲ್ಲಿ ದುರ್ಬಲವಾಗಿ ಕಾಣಿಸಿಕೊಂಡು, ದಿನ ಕಳೆದಂತೆ ತೀವ್ರಗೊಳ್ಳುತ್ತಾ, ಸರಿಯಾಗಿ ಸೆಪ್ಟೆಂಬರ್ ಆರಂಭದ ವೇಳೆಗೆ ಉತ್ತುಂಗಕ್ಕೇರುವ ಎಲ್ ನಿನೊ ವ್ಯವಸ್ಥೆಯು ಭಾರತೀಯ ಕೃಷಿ ವಲಯಕ್ಕೆ ಎದುರಾಗಬಹುದಾದ ಅತ್ಯಂತ ಕೆಟ್ಟ ಪರಿಸ್ಥಿತಿಯಾಗಿದೆ.

ಈ ಕುರಿತು ಆತಂಕ ವ್ಯಕ್ತಪಡಿಸುತ್ತಿರುವುದು ಭಾರತ ಮಾತ್ರವಲ್ಲ. ಜೂನ್ ತಿಂಗಳ ಆರಂಭದಲ್ಲೇ ಎಲ್ ನಿನೊ ಪರಿಸ್ಥಿತಿಗಳು ಸೃಷ್ಟಿಯಾಗಬಹುದು ಎಂದು ಆಸ್ಟ್ರೇಲಿಯಾದ ಹವಾಮಾನ ಬ್ಯೂರೋ ಅಂದಾಜಿಸಿದೆ. ಪೆಸಿಫಿಕ್ ಮಹಾಸಾಗರದಲ್ಲಿ ತಾಪಮಾನ ಏರಿಕೆಯು ಈಗಾಗಲೇ ಎಲ್ ನಿನೊ ಹಂತವನ್ನು ಪ್ರವೇಶಿಸಿದೆ ಮತ್ತು ಮುಂಬರುವ ತಿಂಗಳುಗಳಲ್ಲಿ ಇದು ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ ಎಂದು ಚೀನಾದ ರಾಷ್ಟ್ರೀಯ ಹವಾಮಾನ ಕೇಂದ್ರ ವರದಿ ಮಾಡಿದೆ.

ಪ್ರತಿ ಹತ್ತು ದಿನಗಳಿಗೊಮ್ಮೆ ಇಡೀ ಸಾಗರ ಮೇಲ್ಮೈ ಎತ್ತರವನ್ನು ನಕ್ಷೆ ಮಾಡುವ ‘ಸೆಂಟಿನೆಲ್-6 ಮೈಕೆಲ್ ಫ್ರೈಲಿಚ್’ ಉಪಗ್ರಹದ ದತ್ತಾಂಶಗಳನ್ನು ವಿಶ್ಲೇಷಿಸಿರುವ ನಾಸಾ, ಪೆಸಿಫಿಕ್ ಮಹಾಸಾಗರದ ಆಳದಲ್ಲಿ ಅಪಾರ ಪ್ರಮಾಣದ ಬೆಚ್ಚಗಿನ ನೀರು ಸಂಗ್ರಹವಾಗುತ್ತಿರುವುದನ್ನು ಪತ್ತೆಹಚ್ಚಿದೆ. ವಿಜ್ಞಾನಿಗಳ ಪ್ರಕಾರ, ಸಾಗರದ ಆಳದಲ್ಲಿ ಕಂಡುಬರುವ ಇಂತಹ ತಾಪಮಾನ ಏರಿಕೆಯು ಎಲ್ ನಿನೊ ರಚನೆಗೆ ದೃಢವಾದ ಮುನ್ಸೂಚನೆಯಾಗಿದೆ.

ಹಿಂದೂ ಮಹಾಸಾಗರದಿಂದಲೂ ಸಿಗುತ್ತಿಲ್ಲ ರಕ್ಷಣಾ ಕವಚ

ಕೆಲವು ಎಲ್ ನಿನೊ ವರ್ಷಗಳಲ್ಲಿ, ‘ಇಂಡಿಯನ್ ಓಷನ್ ಡೈಪೋಲ್’ ಎಂದು ಕರೆಯಲಾಗುವ ಹವಾಮಾನ ವಿದ್ಯಮಾನವು ಭಾರತಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡಿದೆ.

ಇದನ್ನು ಹಿಂದೂ ಮಹಾಸಾಗರದ ಎರಡು ಬದಿಗಳಲ್ಲಿರುವ ತಾಪಮಾನದ ತಕ್ಕಡಿ ಎಂದು ಊಹಿಸಿಕೊಳ್ಳಿ. ಇದರ ಪಶ್ಚಿಮ ಭಾಗವು (ಆಫ್ರಿಕಾ ಕರಾವಳಿ) ಪೂರ್ವ ಭಾಗಕ್ಕಿಂತ (ಇಂಡೋನೇಷ್ಯಾ ಕರಾವಳಿ) ಹೆಚ್ಚು ಬೆಚ್ಚಗಾಗಿದ್ದಾಗ ‘ಪಾಸಿಟಿವ್ ಐಒಡಿ’ ಸೃಷ್ಟಿಯಾಗುತ್ತದೆ. ಇದು ಭಾರತೀಯ ಉಪಖಂಡದ ಕಡೆಗೆ ಹೆಚ್ಚಿನ ತೇವಾಂಶವನ್ನು ತಳ್ಳುತ್ತದೆ ಮತ್ತು ಎಲ್ ನಿನೊ ಉಂಟುಮಾಡುವ ಮಳೆ ಕೊರತೆಯ ಪರಿಣಾಮವನ್ನು ಭಾಗಶಃ ಇಲ್ಲವಾಗಿಸುತ್ತದೆ.

1997-98ರ ಮುಂಗಾರು ಮಳೆಯಲ್ಲಿ ಭಾರತವನ್ನು ಬಚಾವ್ ಮಾಡಿದ್ದು ಇದೇ ವಿದ್ಯಮಾನ. ಆ ವರ್ಷ ಇತಿಹಾಸದಲ್ಲೇ ಅತ್ಯಂತ ಪ್ರಬಲವಾದ ಎಲ್ ನಿನೊ ಸೃಷ್ಟಿಯಾಗಿದ್ದರೂ, ಪ್ರಬಲವಾದ ಪಾಸಿಟಿವ್ ಐಒಡಿ ಅದನ್ನು ತಡೆದು ದೇಶದಲ್ಲಿ ವಾಡಿಕೆಯಷ್ಟೇ ಮಳೆಯಾಗುವಂತೆ ನೋಡಿಕೊಂಡಿತ್ತು.

ಆದರೆ ಈ ವರ್ಷ ಐಎಂಡಿ ಮಾದರಿಗಳು ತೋರಿಸುತ್ತಿರುವಂತೆ, ಐಒಡಿ ಸ್ಥಿತಿಯು ತಟಸ್ಥವಾಗಿದೆ. ಇದು ಇಡೀ ಮುಂಗಾರು ಕಾಲದಾದ್ಯಂತ ಹೀಗೆಯೇ ಮುಂದುವರಿಯುವ ಸಾಧ್ಯತೆಯಿದೆ. ಅಂದರೆ ಈ ಬಾರಿ ಯಾವುದೇ ಸುರಕ್ಷಾ ಕವಚವಿಲ್ಲ. ಎಲ್ ನಿನೊ ಪೆಸಿಫಿಕ್ ಮಹಾಸಾಗರದಲ್ಲಿ ಎಷ್ಟೇ ಹಾನಿ ಉಂಟುಮಾಡಿದರೂ, ಅದನ್ನು ತಡೆಯುವ ಶಕ್ತಿ ಈ ಬಾರಿ ಹಿಂದೂ ಮಹಾಸಾಗರಕ್ಕಿಲ್ಲ.

ಅತಿ ಹೆಚ್ಚು ಹೊಡೆತ ಬೀಳುವುದು ಯಾರಿಗೆ?

ಭಾರತೀಯ ಹವಾಮಾನ ಇಲಾಖೆ ನೀಡಿರುವ ಪ್ರಾದೇಶಿಕವಾರು ವಿವರಗಳು ಯಾವುದೇ ನೆಮ್ಮದಿಯನ್ನು ನೀಡುತ್ತಿಲ್ಲ. ದೇಶದ ಈಶಾನ್ಯ ಭಾಗ ಮಾತ್ರ ವಾಡಿಕೆಯಷ್ಟೇ (ದೀರ್ಘಾವಧಿ ಸರಾಸರಿಯ ಶೇ 94ರಿಂದ ಶೇ 106ರಷ್ಟು) ಮಳೆಯನ್ನು ಪಡೆಯುವ ನಿರೀಕ್ಷೆಯಿರುವ ಏಕೈಕ ವಲಯವಾಗಿದೆ.

ಮಧ್ಯ ಭಾರತ, ದಕ್ಷಿಣ ಪರ್ಯಾಯ ದ್ವೀಪ ಮತ್ತು ವಾಯುವ್ಯ ಭಾರತದಾದ್ಯಂತ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ವಾಯುವ್ಯ ಭಾರತದಲ್ಲಿ ವಾಡಿಕೆಗಿಂತ ಕೇವಲ ಶೇ 92ರಷ್ಟು ಮಾತ್ರ ಅತ್ಯಲ್ಪ ಮಳೆಯಾಗುವ ಸಾಧ್ಯತೆಯಿದೆ. ಎಲ್ಲಕ್ಕಿಂತ ತೀವ್ರ ಆತಂಕಕ್ಕೆ ಕಾರಣವಾಗಿರುವುದು ಐಎಂಡಿ ಗುರುತಿಸಿರುವ ‘ಮಾನ್ಸೂನ್ ಕೋರ್ ಝೋನ್’. ಪಶ್ಚಿಮದ ಗುಜರಾತ್‌ನಿಂದ ಹಿಡಿದು ಪೂರ್ವದ ಒಡಿಶಾದವರೆಗೆ ವಿಸ್ತರಿಸಿರುವ ಈ ವಿಶಾಲ ರಾಜ್ಯಗಳ ಪಟ್ಟಿಯು, ದೇಶದ ಬಹುಪಾಲು ಮಳೆ ಆಶ್ರಿತ ಕೃಷಿ ಭೂಮಿಯನ್ನು ಒಳಗೊಂಡಿದೆ.

ಈ ಇಡೀ ವಲಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಭಾರತದ ಸುಮಾರು ಶೇ 60ರಷ್ಟು ರೈತರು ಯಾವುದೇ ನೀರಾವರಿ ಸೌಲಭ್ಯವಿಲ್ಲದೆ ಕೃಷಿ ಮಾಡುತ್ತಿದ್ದಾರೆ. ಅವರ ಬಳಿ ಆಶ್ರಯಿಸಲು ಬೋರ್‌ವೆಲ್‌ಗಳಾಗಲಿ ಅಥವಾ ನೀರು ಹರಿಸಲು ಕಾಲುವೆಗಳ ಜಾಲವಾಗಲೀ ಇಲ್ಲ. ಜೂನ್ ಮತ್ತು ಸೆಪ್ಟೆಂಬರ್ ನಡುವೆ ಆಕಾಶದಿಂದ ಬೀಳುವ ಮಳೆಹನಿಯೇ ಅವರ ಇಡೀ ವರ್ಷದ ಕೃಷಿ ಬದುಕನ್ನು ನಿರ್ಧರಿಸುತ್ತದೆ.

ಮುಖ್ಯ ವಲಯದಲ್ಲಿ ಮುಂಗಾರು ಕೈಕೊಟ್ಟರೆ, ಬೇಸಿಗೆಯ ಆರಂಭದಲ್ಲಿ ಬಿತ್ತನೆ ಮಾಡಿ ಶರತ್ಕಾಲದಲ್ಲಿ ಕೊಯ್ಲು ಮಾಡುವ ಭತ್ತ, ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ದಪ್ಪ ಧಾನ್ಯಗಳಂತಹ ಮುಂಗಾರು ಬೆಳೆಗಳ ಇಳುವರಿ ಕುಸಿಯುತ್ತದೆ.

ಭಾರತದ ಒಟ್ಟು ಹಣದುಬ್ಬರ ಸೂಚ್ಯಂಕದಲ್ಲಿ ಆಹಾರ ಪದಾರ್ಥಗಳ ಪಾಲು ಸುಮಾರು ಶೇ 37ರಷ್ಟಿದೆ. ಬೆಳೆಗಳ ಇಳುವರಿ ಕಡಿಮೆಯಾದಾಗ ದಿನಸಿ ಸಾಮಗ್ರಿಗಳ ಬೆಲೆಗಳು ಗಗನಕ್ಕೇರುತ್ತವೆ. ಹೀಗಿರುವಾಗ ಇದರ ನೇರ ಹೊಡೆತ ಬೀಳುವುದು ಈ ಬೆಲೆ ಏರಿಕೆಯನ್ನು ತಡೆದುಕೊಳ್ಳುವ ಆರ್ಥಿಕ ಶಕ್ತಿಯಿಲ್ಲದ ಬಡ ಕುಟುಂಬಗಳ ಮೇಲೆ.

ಮುಂದೇನಾಗಬಹುದು?

‘ಎಲ್ ನಿನೊ’ ಎದುರಾದ ತಕ್ಷಣ ಬರಗಾಲ ಬಂದೇ ತೀರುತ್ತದೆ ಎಂಬ ಗ್ಯಾರಂಟಿಯೇನೂ ಇಲ್ಲ. 1951 ಮತ್ತು 2022ರ ನಡುವೆ ದಾಖಲಾದ 17 ಎಲ್ ನಿನೊ ವಿದ್ಯಮಾನಗಳಲ್ಲಿ, ಪೆಸಿಫಿಕ್ ಮಹಾಸಾಗರ ಕಾಯುತ್ತಿದ್ದಾಗಲೂ ಭಾರತವು 5 ಬಾರಿ ವಾಡಿಕೆ ಅಥವಾ ವಾಡಿಕೆಗಿಂತ ಹೆಚ್ಚಿನ ಮಳೆಯನ್ನು ಪಡೆದ ಇತಿಹಾಸವಿದೆ.

ಮುಂಗಾರು ವ್ಯವಸ್ಥೆಯು ಏಕಕಾಲದಲ್ಲಿ ಹಲವು ಹವಾಮಾನ ಬದಲಾವಣೆಗಳ ಮೇಲೆ ಆಧಾರಿತವಾಗಿರುತ್ತದೆ. ಹೀಗಾಗಿ ಮುಂಗಾರು ಮುನ್ನಡೆದಂತೆ ಐಎಂಡಿ ನಿಯತಕಾಲಿಕವಾಗಿ ಪರಿಷ್ಕೃತ ಪ್ರಾದೇಶಿಕ ಮುನ್ಸೂಚನೆಗಳನ್ನು ನೀಡುತ್ತಾ ಹೋಗುತ್ತದೆ. ಜುಲೈ ತಿಂಗಳ ಮಳೆಯ ಪ್ರಮಾಣವನ್ನು ಒಳಗೊಂಡ ಮುಂದಿನ ಬುಲೆಟಿನ್ 2026ರ ಜೂನ್ ಕೊನೆಯ ವಾರದಲ್ಲಿ ಹೊರಬೀಳುವ ನಿರೀಕ್ಷೆಯಿದೆ.

ಆದರೆ ಪ್ರಸ್ತುತ ನಮ್ಮ ಮುಂದಿರುವ ಅಂಕಿ-ಅಂಶಗಳನ್ನು ನಿರ್ಲಕ್ಷಿಸುವುದು ಕಷ್ಟ. ತೀವ್ರ ಮಳೆ ಕೊರತೆಯಾಗುವ ಸಾಧ್ಯತೆ ಬರೋಬ್ಬರಿ ಶೇ 60ರಷ್ಟಿದೆ. ಇದರ ಐತಿಹಾಸಿಕ ಸರಾಸರಿ ಕೇವಲ ಶೇ 16ರಷ್ಟು ಮಾತ್ರ. ಇನ್ನೊಂದೆಡೆ ಎಲ್ ನಿನೊ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಅದಕ್ಕೆ ಪ್ರತಿಯಾಗಿ ರಕ್ಷಣೆ ನೀಡಲು ಹಿಂದೂ ಮಹಾಸಾಗರದಲ್ಲಿ ಯಾವುದೇ ಚಲನವಲನಗಳಿಲ್ಲ. ಇದರ ನಡುವೆ, ಏಪ್ರಿಲ್‌ನಿಂದೀಚೆಗೆ ಹವಾಮಾನ ಇಲಾಖೆಯು ಈಗಾಗಲೇ ಒಮ್ಮೆ ತನ್ನ ಮುನ್ಸೂಚನೆಯನ್ನು ಪರಿಷ್ಕರಿಸಿದೆ.

ಮಳೆ ಇನ್ನೂ ಬರಬಹುದು. ಆದರೆ ಕಳೆದ ಒಂದು ದಶಕದಲ್ಲೇ ಮೊದಲ ಬಾರಿಗೆ, "ಭಾರತದ ಮುಂಗಾರು ಎಷ್ಟು ಚೆನ್ನಾಗಿರಲಿದೆ?" ಎಂಬ ಪ್ರಶ್ನೆ ಈಗ ಉಳಿದಿಲ್ಲ. ಬದಲಿಗೆ, "ಪರಿಸ್ಥಿತಿ ಎಷ್ಟು ಭೀಕರವಾಗಬಹುದು?" ಎಂಬ ಆತಂಕ ಮಾತ್ರ ಎದುರಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News