ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಬಿಕ್ಕಟ್ಟಿನ ನಡುವೆ ಚರ್ಚೆಗೆ ಕಾರಣವಾದ ಕೇಂದ್ರ ಸಚಿವರ ಮಕ್ಕಳ ವಿದೇಶಿ ವ್ಯಾಸಂಗ
ಯಾವ ಸಚಿವರ ಮಕ್ಕಳು ಯಾವ ದೇಶದಲ್ಲಿ ಓದುತ್ತಿದ್ದಾರೆ?
ಎಸ್. ಜೈಶಂಕರ್ , ನಿರ್ಮಲಾ ಸೀತಾರಾಮನ್ | Photo Credit : PTI
ಸರಣಿ ಪರೀಕ್ಷಾ ಅಕ್ರಮಗಳು ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ಮತ್ತು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಳೆದ ಕೆಲವು ವಾರಗಳಿಂದ ಪ್ರತಿಭಟನಾಕಾರರು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ.
ಇದೇ ವೇಳೆ, ಇತ್ತೀಚಿನವರೆಗೂ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಅಮೆರಿಕದ ವಿಶ್ವವಿದ್ಯಾಲಯವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂಬುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಪ್ರಸ್ತಾಪಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದು, "ರಾಜಕೀಯ ನಾಯಕರು ಗುಣಮಟ್ಟದ ಶಿಕ್ಷಣಕ್ಕಾಗಿ ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸುವ ಆರ್ಥಿಕ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಭಾರತದ ಲಕ್ಷಾಂತರ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ಹಗರಣಗಳು, ವಿಳಂಬವಾಗುವ ಪರೀಕ್ಷಾ ಫಲಿತಾಂಶಗಳು ಮತ್ತು ಉತ್ತರದಾಯಿತ್ವದ ಕೊರತೆಯಿಂದ ನಲುಗುತ್ತಿರುವ ಶಿಕ್ಷಣ ವ್ಯವಸ್ಥೆಯ ವಿರುದ್ಧ ಹೋರಾಡುವಂತಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ಮಾತ್ರವಲ್ಲ, ಇನ್ನೂ ಅನೇಕ ಸಚಿವರ ಮಕ್ಕಳು ವಿದೇಶದಲ್ಲಿ ಓದುತ್ತಿದ್ದಾರೆ. ಭಾರತದ ಕ್ಯಾಬಿನೆಟ್ ದರ್ಜೆಯ ಸಚಿವರ ಮಕ್ಕಳ ಬಗ್ಗೆ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು scroll.in ಪ್ರಕಟಿಸಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, 18 ರಿಂದ 35 ವರ್ಷ ವಯೋಮಾನದ 21 ಸಚಿವರ ಮಕ್ಕಳ ಪೈಕಿ 15 ಮಕ್ಕಳು ವಿದೇಶಿ ಪದವಿ ಪಡೆದಿದ್ದಾರೆ ಅಥವಾ ಪ್ರಸ್ತುತ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೇವಲ ಒಬ್ಬರು ಮಾತ್ರ ಭಾರತದಲ್ಲಿ ಓದಿದ್ದು, ಐದು ಜನರ ಶೈಕ್ಷಣಿಕ ಹಿನ್ನೆಲೆಯ ಮಾಹಿತಿ ಲಭ್ಯವಾಗಿಲ್ಲ. 2014 ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಕಾಲೇಜು ಮತ್ತು ವಿಶ್ವವಿದ್ಯಾಲಯ ಶಿಕ್ಷಣ ಪಡೆದಿರುವ ಸಾಧ್ಯತೆ ಹೆಚ್ಚಿರುವ ಕಾರಣ ಈ ವಯೋಮಾನದವರನ್ನು ವಿಶ್ಲೇಷಣೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು scroll.in ವರದಿ ಉಲ್ಲೇಖಿಸಿದೆ.
ಉದಾಹರಣೆಗೆ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರ ಕಿರಿಯ ಪುತ್ರ ಅರ್ಜುನ್ ಜೈಶಂಕರ್, 2021 ರಲ್ಲಿ ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪುತ್ರಿ ವಾಂಗ್ಮಯಿ ಪರಕಾಲ ಅವರು ಇಲಿನಾಯ್ಸ್‌ನ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದ ಮೆಡಿಲ್ ಶಾಲೆಯಿಂದ ಮಾಸ್ಟರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ.
ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರ ಇಬ್ಬರೂ ಮಕ್ಕಳು ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ವಿದೇಶದಲ್ಲೇ ಪೂರ್ಣಗೊಳಿಸಿದ್ದಾರೆ. ಅವರ ಪುತ್ರ ಧ್ರುವ್ ಗೋಯಲ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ಮುಗಿಸಿದ್ದರೆ, ಪುತ್ರಿ ರಾಧಿಕಾ ಗೋಯಲ್ ಆಕ್ಸ್‌ಫರ್ಡ್‌ನಿಂದ ಪದವಿ, ಪಿಜಿ ಮಾಡಿ, ನಂತರ ಸ್ಯಾನ್ ಡಿಯಾಗೋ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದಿದ್ದಾರೆ.
ಅದೇ ರೀತಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಇಬ್ಬರು ಮಕ್ಕಳಾದ ತಾನ್ಯಾ ಮತ್ತು ರಾಹುಲ್ ಇಬ್ಬರೂ ಯುಕೆಯಲ್ಲಿ ವ್ಯಾಸಂಗ ಮಾಡಿದ್ದಾರೆ.
"ಸಚಿವರು ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸುತ್ತಿರುವುದು ಇಲ್ಲಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಅವರಿಗಿರುವ ಉದಾಸೀನತೆಯನ್ನು ತೋರಿಸುತ್ತದೆ" ಎಂದು ಕರ್ನಾಟಕದ ಶಿಕ್ಷಣ ತಜ್ಞ ಹಾಗೂ ಕಾರ್ಯಕರ್ತ ನಿರಂಜನಾರಾಧ್ಯ ವಿ.ಪಿ. ಹೇಳಿದ್ದಾರೆ. "ಆರ್ಥಿಕ ಸಾಮರ್ಥ್ಯ ಇರುವವರು ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸುತ್ತಾರೆ, ಆದರೆ ಇಲ್ಲಿನ ವ್ಯವಸ್ಥೆಯನ್ನು ಸುಧಾರಿಸಲು ನಾವು ಏನು ಮಾಡುತ್ತಿದ್ದೇವೆ? ಈ ಪ್ರಶ್ನೆಗೆ ನಮಗೆ ಈಗಲೇ ಉತ್ತರ ಬೇಕಾಗಿದೆ" ಎಂದು ಅವರು ಒತ್ತಾಯಿಸಿದ್ದಾರೆ.
►ವಿದೇಶಕ್ಕೆ ಹೋಗುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ
ಅನೇಕ ಸಚಿವರ ಮಕ್ಕಳು ವಿದೇಶದಲ್ಲಿ ಓದಲು ಬಯಸುತ್ತಿರುವುದು ಭಾರತದ ಉನ್ನತ ಶಿಕ್ಷಣದಲ್ಲಿ ಕಂಡುಬರುತ್ತಿರುವ ಒಂದು ದೊಡ್ಡ ಪ್ರವೃತ್ತಿಗೆ ಪೂರಕವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಪ್ರವೇಶ ಪರೀಕ್ಷೆಗಳ ಸುತ್ತ ಗೊಂದಲಗಳು ಸೃಷ್ಟಿಯಾಗುತ್ತಿದ್ದರೂ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಓದಲು ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.
ಕಳೆದ ಕೆಲವು ದಶಕಗಳಿಂದ ಈ ಸಂಖ್ಯೆ ಸ್ಥಿರವಾಗಿ ಏರುತ್ತಲೇ ಸಾಗಿದೆ. 2001 ರಲ್ಲಿ 22 ಲಕ್ಷ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಭಾರತವನ್ನು ತೊರೆದಿದ್ದರು. 2011 ರ ವೇಳೆಗೆ ಈ ಸಂಖ್ಯೆ 40 ಲಕ್ಷಕ್ಕೆ ತಲುಪಿತು ಮತ್ತು 2022 ರ ವೇಳೆಗೆ ಅದು 69 ಲಕ್ಷಕ್ಕೆ ಏರಿಕೆ ಕಂಡಿದೆ.
ಜನರು ಪರೀಕ್ಷಾ ವ್ಯವಸ್ಥೆ ಮತ್ತು ಉದ್ಯೋಗ ಮಾರುಕಟ್ಟೆಯ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಪ್ರತಿ ವರ್ಷ ಪ್ರಶ್ನೆಪತ್ರಿಕೆಗಳು ಸೋರಿಕೆಯಾದರೆ ಯಾರು ತಾನೇ ನಂಬಿಕೆ ಇಡುತ್ತಾರೆ? ಎಂದು ಬಿಹಾರದ ಶಿಕ್ಷಣ ಕಾರ್ಯಕರ್ತ ಅನಿಲ್ ಕುಮಾರ್ ರಾಯ್ ಪ್ರಶ್ನಿಸಿದ್ದಾರೆ. ಇದೇ ಕಾರಣಕ್ಕಾಗಿ ಇಷ್ಟೊಂದು ಸಂಖ್ಯೆಯ ವಿದ್ಯಾರ್ಥಿಗಳು ಓದಲಿಕ್ಕಾಗಿ ವಿದೇಶಗಳಿಗೆ ಹೋಗುತ್ತಿದ್ದಾರೆ ಎಂದಿದ್ದಾರೆ ಅವರು.
ಇದಕ್ಕೆ ವ್ಯತಿರಿಕ್ತವಾಗಿ, ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಓದಲು ಇಷ್ಟಪಡುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದೆ ಅಥವಾ ಒಂದೇ ಮಟ್ಟದಲ್ಲಿ ಸ್ಥಿರವಾಗಿದೆ. 2000-01 ರಲ್ಲಿ ಸುಮಾರು 6,900 ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಓದಲಿಕ್ಕಾಗಿ ಭಾರತಕ್ಕೆ ಬಂದಿದ್ದರು. 2013-14 ರ ವೇಳೆಗೆ ಈ ಸಂಖ್ಯೆ 39,517 ಕ್ಕೆ ಏರಿತ್ತು. ಆ ವರ್ಷಗಳಲ್ಲಿ ಭಾರತಕ್ಕೆ ಬರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಸ್ಥಿರವಾಗಿ ಬೆಳೆಯುತ್ತಿತ್ತು ಮತ್ತು ಕೆಲವು ವರ್ಷಗಳಲ್ಲಿ ಇದು ಎರಡು ಪಟ್ಟು ಆಗಿತ್ತು.
2014 ರ ನಂತರ, ಈ ಸಂಖ್ಯೆಯ ವಾರ್ಷಿಕ ಬೆಳವಣಿಗೆಯು ಎಂದಿಗೂ ಶೇಕಡಾ 10 ರ ಗಡಿಯನ್ನು ದಾಟಿಲ್ಲ.
ಶಿಕ್ಷಣ ಸಂಸ್ಥೆಗಳು ಹಣಕಾಸಿನ ಕೊರತೆಯಿಂದ ತತ್ತರಿಸುತ್ತಿವೆ ಎಂದು ರಾಯ್ ಹೇಳಿದ್ದಾರೆ. "ಗ್ರಂಥಾಲಯಗಳು, ಪ್ರಯೋಗಾಲಯಗಳು ಮತ್ತು ಸಂಶೋಧನೆಗಳಿಗೆ ನೀಡಲಾಗುವ ಅನುದಾನವನ್ನು ಕಡಿತಗೊಳಿಸಲಾಗುತ್ತಿದೆ, ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಇಲ್ಲಿ ಏಕೆ ಓದಲು ಬಯಸುತ್ತಾರೆ?" ಎಂದು ಅವರು ಪ್ರಶ್ನಿಸಿದ್ದಾರೆ. "ವಿಶ್ವಗುರು ಆಗುವ ಬಗ್ಗೆ ಎಷ್ಟೇ ದೊಡ್ಡ ಮಾತುಗಳನ್ನಾಡಿದರೂ, ದೇಶವು ವಿಜ್ಞಾನ ಮತ್ತು ಸಂಶೋಧನೆಗೆ ಧನಸಹಾಯ ನೀಡಲು ಸಿದ್ಧವಿಲ್ಲ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
►ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ
ಭಾರತದ 30 ಕ್ಯಾಬಿನೆಟ್ ಸಚಿವರ ಮಕ್ಕಳ ಸಂಖ್ಯೆ, ವಯಸ್ಸು ಮತ್ತು ಶೈಕ್ಷಣಿಕ ಹಿನ್ನೆಲೆಯನ್ನು ಪತ್ತೆಹಚ್ಚಲು 'ಸ್ಕ್ರಾಲ್ ' ಹಲವಾರು ಸಾರ್ವಜನಿಕ ಮೂಲಗಳನ್ನು ಪರಿಶೀಲಿಸಿದೆ. ಇದಕ್ಕಾಗಿ ಸರ್ಕಾರಿ ವೆಬ್‌ಸೈಟ್‌ಗಳು, ಸಾಮಾಜಿಕ ಜಾಲತಾಣ ಖಾತೆಗಳು, ವೈಯಕ್ತಿಕ ವೆಬ್‌ಸೈಟ್‌ಗಳು, ಕಾರ್ಪೊರೇಟ್ ವೆಬ್‌ಸೈಟ್‌ಗಳು, ಲಿಂಕ್ಡ್‌ಇನ್ ಪುಟಗಳು ಮತ್ತು ಮಾಧ್ಯಮ ವರದಿಗಳನ್ನು ಬಳಸಿಕೊಳ್ಳಲಾಗಿದೆ.
ಸಚಿವರಾದ ಮನೋಹರ್ ಲಾಲ್ ಖಟ್ಟರ್, ಸರ್ಬಾನಂದ ಸೋನೋವಾಲ್ ಮತ್ತು ಚಿರಾಗ್ ಪಾಸ್ವಾನ್ ಅವರು ಅವಿವಾಹಿತರಾಗಿದ್ದು, ಅವರಿಗೆ ಮಕ್ಕಳಿಲ್ಲ. ಇನ್ನು ಕೆಲವು ಸಚಿವರಿಗೆ ಸಣ್ಣ ವಯಸ್ಸಿನ ಮಕ್ಕಳಿದ್ದಾರೆ. ಉದಾಹರಣೆಗೆ, ಕಿಂಜರಾಪು ರಾಮ್ ಮೋಹನ್ ನಾಯ್ಡು ಅವರಿಗೆ 6 ವರ್ಷದೊಳಗಿನ ಇಬ್ಬರು ಮಕ್ಕಳಿದ್ದಾರೆ. ಕಿರಣ್ ರಿಜಿಜು ಅವರ ಇಬ್ಬರು ಮಕ್ಕಳು ಇನ್ನೂ ಶಾಲೆಯಲ್ಲಿ ಓದುತ್ತಿದ್ದಾರೆ.
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹಾಲಿನ ಉತ್ಪಾದನಾ ಸಚಿವ ರಾಜೀವ್ ರಂಜನ್ ಸಿಂಗ್, ಬುಡಕಟ್ಟು ವ್ಯವಹಾರಗಳ ಸಚಿವ ಜುವಾಲ್ ಓರಾಮ್ ಮತ್ತು ಕಾರ್ಮಿಕ ಹಾಗೂ ಉದ್ಯೋಗ ಸಚಿವ ಮನ್ಸುಖ್ ಮಾಂಡವೀಯ ಸೇರಿದಂತೆ ಒಂಬತ್ತು ಸಚಿವರ ಮಕ್ಕಳ ವಯಸ್ಸು, ಶೈಕ್ಷಣಿಕ ಅರ್ಹತೆ ಅಥವಾ ಅವರು ಓದಿದ ಸ್ಥಳಗಳ ಬಗ್ಗೆ ಅಂತರ್ಜಾಲದಲ್ಲಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ವಿದೇಶದಲ್ಲಿ ಓದಿರುವ 35 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊಂದಿರುವ ಇತರ ಸಚಿವರಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಕೂಡ ಒಬ್ಬರು. ಅವರ ಹಿರಿಯ ಮಗ ಕಾರ್ತಿಕೇಯ ಚೌಹಾಣ್ 2023 ರಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಕಾನೂನು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರ ಕಿರಿಯ ಮಗ ಕುನಾಲ್ ಚೌಹಾಣ್ 2016 ರಲ್ಲಿ ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಮುಗಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ ಅವರ ಪುತ್ರ ಹರೀಶ್ ನಡ್ಡಾ, 2019 ರಲ್ಲಿ ಲಂಡನ್ ವಿಶ್ವವಿದ್ಯಾಲಯದಿಂದ ಕಾನೂನು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಮಕ್ಕಳೂ ವಿದೇಶದಲ್ಲೇ ಓದಿದ್ದಾರೆ. ಅವರ ಪುತ್ರಿ ಅನನ್ಯಾ ರಾಜೆ 2024 ರಲ್ಲಿ ರೋಡ್ ಐಲ್ಯಾಂಡ್ ಸ್ಕೂಲ್ ಆಫ್ ಡಿಸೈನ್‌ನಿಂದ ಪದವಿ ಪಡೆದರೆ, ಪುತ್ರ ಮಹಾನಾರ್ಯಮನ್ ಸಿಂಧಿಯಾ 2019 ರಲ್ಲಿ ಯೇಲ್ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಹಿರಿಯ ಮಗ ಪ್ರಸ್ತುತ ಯುಕೆ ವಿಶ್ವವಿದ್ಯಾಲಯವೊಂದರಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ವ್ಯಾಸಂಗ ಮಾಡುತ್ತಿದ್ದಾರೆ. ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಪುತ್ರಿ ಸುಹಾಸಿನಿ ಶೇಖಾವತ್ ಆಕ್ಸ್‌ಫರ್ಡ್‌ನಿಂದ ಅಡ್ವಾನ್ಸ್ಡ್ ಲೀಡರ್‌ಶಿಪ್ ಡಿಪ್ಲೊಮಾ ಪಡೆದಿದ್ದಾರೆ. ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರ ಪುತ್ರಿ 2021 ರಲ್ಲಿ ಪಾರ್ಸನ್ಸ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ.
ಈ ಪ್ರವೃತ್ತಿಯ ಕುರಿತು ಪ್ರತಿಕ್ರಿಯಿಸಿದ ರಾಯ್, "ಸಚಿವರಿಗೆ ಸ್ವತಃ ಇಲ್ಲಿನ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದ ಕಾರಣಕ್ಕಾಗಿ ಮಾತ್ರ ಅವರು ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸುತ್ತಾರೆ" ಎಂದು ಹೇಳಿದ್ದಾರೆ.
ಕೃಪೆ: scroll.in