ಗುರುಗ್ರಹದ ಚಂದ್ರನಲ್ಲಿ ಅನ್ಯಗ್ರಹದ ಜೀವಿಗಳು ಇವೆಯೆ? ಹೊಸ ಅಧ್ಯಯನ ಏನು ಹೇಳುತ್ತದೆ?
ಸಾಂದರ್ಭಿಕ ಚಿತ್ರ | Photo Credit : wikipedia.org
"ಯುರೋಪ"ವನ್ನು ಅಧ್ಯಯನ ಮಾಡುತ್ತಿರುವ ವಿಜ್ಞಾನಿಗಳಿಗೆ ಇದೀಗ ಗುರುಗ್ರಹದ ಈ ಚಂದ್ರನ ಕುರಿತಂತೆ ಹೊಸ ವಿಷಯ ತಿಳಿದು ಬಂದಿದೆ.
ಗುರು ಗ್ರಹದ ಚಂದ್ರನಾದ ಯುರೋಪದ ಹಿಮದ ಕವಚದ ಅಡಿಯಲ್ಲಿ ಭೂಮಿಗಿಂತಲೂ ವಿಶಾಲವಾದ ಸಾಗರ ಅಡಗಿದೆ. ಆದರೆ ಸಾಗರದ ಅಡಿಯಲ್ಲಿ ಜೀವರಾಶಿ ಇದೆಯೇ ಅಥವಾ ಮೌನ ಪ್ರಪಂಚ ಅಡಗಿದೆಯೇ ಎನ್ನುವುದು ಈವರೆಗೂ ನಿಗೂಢವಾದ ವಿಷಯವಾಗಿತ್ತು. ಇದೀಗ ಹೊಸ ಅಧ್ಯಯನ ಆ ಕುರಿತ ರಹಸ್ಯವನ್ನು ಬಹಿರಂಗಡಪಡಿಸಿದೆ.
ಭೂಮಿಯ ಸಮುದ್ರಗಳನ್ನೆಲ್ಲ ಸಂಯೋಜಿಸಿದರೆ ಸಿಗುವುದಕ್ಕಿಂತ ಬೃಹತ್ ಗಾತ್ರದ ಸಾಗರವನ್ನು ಅಡಗಿಸಿಕೊಂಡ ದಪ್ಪನೆಯ ಮಂಜುಗಡ್ಡೆಯಿಂದ ಮುಚ್ಚಿಕೊಂಡ ಜಗತ್ತನ್ನು ಊಹಿಸಿ ನೋಡಿ. ಅದೇ ಗುರು ಗ್ರಹದ ಚಂದ್ರ ಯುರೋಪ. ನಮ್ಮ ಸೌರ ವ್ಯವಸ್ಥೆಯಲ್ಲಿ ಅನ್ಯಗ್ರಹದ ಜೀವಿಯನ್ನು ಕಾಣುವ ಸಾಧ್ಯತೆ ಹೆಚ್ಚಿರುವ ಜಾಗ ಎನ್ನುವ ಹಿರಿಮೆಯನ್ನು ಯುರೋಪ ಹೊಂದಿದೆ. ಆದರೆ ಇತ್ತೀಚೆಗಿನ ಅಧ್ಯಯನವೊಂದು ಕಂಡುಕೊಂಡಿರುವ ಪ್ರಕಾರ ಯುರೋಪದ ಸಾಗರದಡಿ ಜೀವ ವ್ಯವಸ್ಥೆ ಇರುವ ಸಾಧ್ಯತೆ ಅತಿ ಕಡಿಮೆಯಿದೆ. ಬಹುಶಃ ಖಾಲಿ ಸಮುದ್ರವನ್ನು ಕಾಣಬಹುದು.
ಅನ್ಯಗ್ರಹಜೀವಿಗಳನ್ನು ಕಾಣುವ ಕನಸು
ಯುರೋಪದ ಸಮುದ್ರದ ನೆಲದಲ್ಲಿ ವಿಚಿತ್ರ ಜೀವಿಗಳು ಹರಿದಾಡುತ್ತಿರಬಹುದು ಎಂದು ವಿಜ್ಞಾನಿಗಳು ಕನಸು ಕಂಡಿದ್ದರು. ಭೂಮಿಯ ಆಳ ಸಾಗರದಲ್ಲಿ ಕಂಡುಬಂದಿರುವಂತಹ ಪರಿಸರ ಯುರೋಪದಲ್ಲಿ ಇರಬಹುದು ಎಂದು ಊಹಿಸಲಾಗಿತ್ತು. ಸಾಗರದ ಕಿರುದ್ವಾರಗಳು ಸೂರ್ಯನ ಬೆಳಕು ಇಲ್ಲದೆಯೇ ಜೀವಕ್ಕೆ ಆಹಾರವನ್ನು ನೀಡುವ ಶಾಖ ಮತ್ತು ರಾಸಾಯನಿಕಗಳನ್ನು ಹೊರಹಾಕುತ್ತವೆ. ಹೀಗಾಗಿ ಜೀವಪರಿಸರವಿರುವ ಸಾಧ್ಯತೆಯನ್ನು ಅಂದಾಜಿಸಲಾಗಿತ್ತು. ಆದರೆ ಹೊಸ ಲೆಕ್ಕಾಚಾರಗಳು ಯುರೋಪಾದ ಕಲ್ಲಿನ ತಳವು ಬಹುಶಃ ಭೌಗೋಳಿಕವಾಗಿ ಮೃತಪಟ್ಟಿದೆ ಎಂದು ತೋರಿಸುತ್ತಿದೆ.
ಗುರುವಿನ ಗುರುತ್ವಾಕರ್ಷಣೆಗೆ ಹೆಚ್ಚು ಬಲವಿಲ್ಲ
ಸೇಂಟ್ ಲೂಯಿಸ್‌ನ ವಾಷಿಂಗ್ಟನ್ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞ ಪೌಲ್ ಬೈರನ್ ನೇತೃತ್ವದಲ್ಲಿ ವಿಜ್ಞಾನಿಗಳ ತಂಡವು ಗುರುವಿನ ಚಂದ್ರನ ಅಂತರಂಗವನ್ನು ಹುಡುಕಾಡಿದೆ. ಯುರೋಪದ ಮಧ್ಯಭಾಗವು ಶತಕೋಟಿ ವರ್ಷಗಳ ಹಿಂದೆ ತಣ್ಣಗಾಗಿದೆ. ಗುರುವಿನ ಗುರುತ್ವಾಕರ್ಷಣೆ ಬಲ ಹೆಚ್ಚು ಪ್ರಬಲವಾಗಿಲ್ಲ. ಹೀಗಾಗಿ ಆಂತರಿಕ ಸ್ಫೋಟಗಳಿಗೆ ಸಾಕಷ್ಟು ಬಲವಿಲ್ಲ. ಗುರುವಿನ ಸಮೀಪವಿರುವ ಚಂದ್ರ ಲೋ ಜ್ವಾಲಾಮುಖಿಗಳನ್ನು ಹೊರಹೊಮ್ಮಿಸಿತ್ತು. ಆದರೆ ಯುರೋಪದಲ್ಲಿ ಸ್ಥಿರವಾದ ಕಕ್ಷೆಯಿರುವುದು ಸೌಮ್ಯವಾದ ಶಾಖವಿರುವುದಕ್ಕೆ ಸಾಕ್ಷಿಯಾಗಿದೆ. ಇದು ಸಾಗರವನ್ನು ದ್ರವ ರೂಪದಲ್ಲಿರಿಸಲು ಸಾಕಾಗುತ್ತದೆ. ಆದರೆ ಸಮುದ್ರದ ನೆಲವನ್ನು ಮುರಿಯುವಷ್ಟು ಗಟ್ಟಿಯಿಲ್ಲ.
ಏಕೆ ಮೌನವಾದ ಸಾಗರದಂಡೆಯಿದೆ?
ಭೂಮಿಯಲ್ಲಿ ಸಮುದ್ರದ ಅಡಿಯಲ್ಲಿರುವ ಜೀವಿಗಳು ಟೆಕ್ಟಾನಿಕ್ (ಭೂಮಿಯ ಚಿಪ್ಪಿನ ವಿರೂಪಗಳ)ಚಟುವಟಿಕೆಯಿಂದ ಶಕ್ತಿಯನ್ನು ಪಡೆಯುತ್ತವೆ. ಹೊಸ ಬಂಡೆಗಳು ಬಿರುಕು ಬಿಡುವುದು ಅಥವಾ ಬಿಸಿನೀರಿನ ಝರಿಗಳಿಲ್ಲದೆ (ನದಿ ನೀರು ಮತ್ತು ಸಮುದ್ರದ ಉಪ್ಪಿನ ಮಿಶ್ರಣದ ಪರಿಣಾಮವಾಗಿ ಸಮುದ್ರದಲ್ಲಿ ರೂಪುಗೊಳ್ಳುವ ಶುದ್ಧೀಕರಿಸಿದ ನೀರಿನ ದ್ರವ್ಯರಾಶಿ) ಸೂಕ್ಷ್ಮ ಜೀವಿಗಳಿಗೆ ರಾಸಾಯನಿಕ ಇಂಧನ ಸಾಕಷ್ಟು ದೊರೆಯುವುದಿಲ್ಲ. ಹೀಗಾಗಿ ಸಂಕೀರ್ಣ ಜೀವ ಸ್ವರೂಪ ಕಂಡುಬರಲು ಸಾಧ್ಯವೇ ಇಲ್ಲ.
ಸಮುದ್ರದ ಅಡಿಗೆ ಸಬ್‌ಮೆರೀನ್ ಕಳುಹಿಸಿದರೂ ಏನೂ ನಡೆಯುವುದಿಲ್ಲ. ಯಾವುದೇ ಮುರಿತ, ಜ್ವಾಲಾಮುಖಿಗಳು, ನೀರ್ಗುಳ್ಳೆ ಬರುವ ದ್ವಾರಗಳು ಇರುವುದಿಲ್ಲ. ಸಾಗರ ವಿಶಾಲವಾಗಿ ಉಪ್ಪುಮಯವಾಗಿರಬಹುದು. ಆದರೆ ಅದರ ನೆಲ ಖಾಲಿ ಬಯಲಾಗಿರಬಹುದು.
ನಾಸಾದ ಹೊಸ ಅಧ್ಯಯನದ ಮೇಲೆ ಭರವಸೆ
ಹಾಗೆಂದು ಯುರೋಪದಲ್ಲಿ ಜೀವಪರಿಸರವಿಲ್ಲ ಎಂದು ಈಗಲೇ ನಿರ್ಧರಿಸಿಬಿಡುವುದು ಬೇಡ. ನಾಸಾದ ಯುರೋಪ ಕ್ಲಿಪ್ಪರ್ ಮಿಷನ್ 2031ರಿಂದ ಯುರೋಪದ ಸಮೀಪದಲ್ಲಿ ಹಾದು ಹೋಗಲಿದೆ. ಅದರಿಂದಾಗಿ ಸಮೀಪದ ಫೋಟೋಗಳು ಸಿಗಲಿವೆ. ಅದರಲ್ಲಿ ಹಿಮ ಮತ್ತು ಸಾಗರದ ವಿವರಗಳೂ ಲಭಿಸಬಹುದು. ಆ ಫೋಟೋಗಳು ವಿಜ್ಞಾನಿಗಳು ಹೇಳಿರುವುದನ್ನು ದೃಢಪಡಿಸಬಹುದು ಅಥವಾ ಸುಳ್ಳು ಎಂದೂ ಹೇಳಬಹುದು. ಯುರೋಪದ ಆಳದಲ್ಲಿ ಜೀವ ಪರಿಸರವಿಲ್ಲದೆ ಇದ್ದರೂ, ಬ್ರಹ್ಮಾಂಡದ ಬೇರೆ ಗ್ರಹಗಳಲ್ಲಿ ಜೀವಿಗಳು ಇರಬಹುದು ಎಂದು ಬೈರನ್ ಅಭಿಪ್ರಾಯಪಡುತ್ತಾರೆ. ಹೊಸ ಅನ್ವೇಷಣೆಗಳಲ್ಲಿ ಹೊಸ ವಿಷಯಗಳು ತಿಳಿಯಬಹುದು.