ಆಸ್ಟ್ರೇಲಿಯಾದಲ್ಲಿ ರಾಜಕೀಯ ಬಿರುಗಾಳಿಗೆ ಕಾರಣವಾದ ಕೇರಳದ ನಕಲಿ ವಿಶ್ವವಿದ್ಯಾಲಯ ಪ್ರಮಾಣಪತ್ರ ದಂಧೆ!
ನಕಲಿ ಪ್ರಮಾಣ ಪತ್ರ ದಂಧೆ ಪತ್ತೆಯಾಗಿದ್ದು ಹೇಗೆ?
Photo Credit: @MRobertsQLD
ಕೇರಳ ಪೊಲೀಸರು ಪತ್ತೆಹಚ್ಚಿದ ಬೃಹತ್ ನಕಲಿ ವಿಶ್ವವಿದ್ಯಾಲಯ ಪ್ರಮಾಣಪತ್ರ ದಂಧೆ ಆಸ್ಟ್ರೇಲಿಯಾದಲ್ಲಿ ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ. ಆಸ್ಟ್ರೇಲಿಯಾದಲ್ಲಿ ಅಧ್ಯಯನ ಮಾಡಲು ಮತ್ತು ಕೆಲಸ ಮಾಡಲು ನಕಲಿ ಪದವಿಗಳನ್ನು ಬಳಸುತ್ತಿದ್ದಾರೆ ಎಂಬ ಆರೋಪದ ಮೇಲೆ ವಿದೇಶಿ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಧಾನಿ ಆ್ಯಂಥೋನಿ ಅಲ್ಬನೀಸ್ ಸರ್ಕಾರ ವಿಫಲವಾಗಿದೆ ಎಂದು ಆಸ್ಟ್ರೇಲಿಯಾದ ಸೆನೆಟರ್ ಆರೋಪಿಸಿದ್ದಾರೆ. ಭಾರತೀಯ ವಿಶ್ವವಿದ್ಯಾಲಯಗಳಲ್ಲಿನ ನಕಲಿ ಪದವಿ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ್ದ ಸೆನೆಟರ್ ಮಾಲ್ಕಮ್ ರಾಬರ್ಟ್ಸ್, ಕೇರಳದ ದಂಧೆಯನ್ನು ಆಸ್ಟ್ರೇಲಿಯಾದ ವಿದ್ಯಾರ್ಥಿ ವೀಸಾ ಜಾರಿಯಲ್ಲಿನ ವ್ಯವಸ್ಥಿತ ವೈಫಲ್ಯ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ವಿದೇಶಿ ಪದವಿಗಳು ಸೇರಿದಂತೆ ನಕಲಿ ವಿಶ್ವವಿದ್ಯಾಲಯ ಪ್ರಮಾಣಪತ್ರಗಳನ್ನು ತಯಾರಿಸಿ ವಿತರಿಸುತ್ತಿದ್ದ ವಿಸ್ತಾರವಾದ ಪ್ಯಾನ್-ಇಂಡಿಯನ್ ಜಾಲವನ್ನು ಕೇರಳ ಪೊಲೀಸರು ಕಳೆದ ತಿಂಗಳು ಪತ್ತೆ ಹಚ್ಚಿದ್ದರು. ಭಾರತದ ಅನೇಕ ರಾಜ್ಯಗಳಲ್ಲಿ ಕನಿಷ್ಠ 11 ಜನರನ್ನು ಬಂಧಿಸಲಾಗಿದೆ ಎಂದು ʼಮಾತೃಭೂಮಿʼ ಪತ್ರಿಕೆ ವರದಿ ಮಾಡಿದೆ. ತನಿಖಾಧಿಕಾರಿಗಳು ಈ ದಂಧೆ ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳಿಗೆ ವಂಚನೆಯ ದಾಖಲೆಗಳನ್ನು ಪೂರೈಸಿರಬಹುದು ಎಂದು ಹೇಳಿದ್ದಾರೆ.
►ಕೇರಳದಲ್ಲಿ ಪತ್ತೆಯಾಯ್ತು ನಕಲಿ ಪದವಿ ದಂಧೆ
ಮಾತೃಭೂಮಿ ಪ್ರತಿಕೆಯ ವರದಿಯ ಪ್ರಕಾರ, ಈ ಕಾರ್ಯಾಚರಣೆಯನ್ನು ಡ್ಯಾನಿ ಎಂದೂ ಕರೆಯಲ್ಪಡುವ ಧನೀಶ್ ನಡೆಸುತ್ತಿದ್ದನೆಂದು ಹೇಳಲಾಗುತ್ತದೆ. ಈತ 2013 ರಲ್ಲಿ ಇದೇ ರೀತಿಯ ಅಪರಾಧಗಳಿಗಾಗಿ ಪೊಲೀಸರಿಗೆ ಸಿಕ್ಕಿಬಿದ್ದ ಪುನರಾವರ್ತಿತ ಅಪರಾಧಿ. ಜೈಲು ಶಿಕ್ಷೆ ಅನುಭವಿಸಿದ ನಂತರ, ತಮಿಳುನಾಡಿನ ಪೊಲ್ಲಾಚಿ ಪಟ್ಟಣದಲ್ಲಿ ರಹಸ್ಯ ಮುದ್ರಣ ಕಾರ್ಯ ನಡೆಸುವ ಮೂಲಕ ಈತ ಹಗರಣವನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಿದ ಎಂದು ಪೊಲೀಸರು ಹೇಳುತ್ತಾರೆ. ತಮಿಳುನಾಡಿನ ಶಿವಕಾಶಿ ನಗರದ ನುರಿತ ಕೆಲಸಗಾರರನ್ನು ನಕಲಿ ಸಹಿಗಳು, ಹೊಲೊಗ್ರಾಮ್‌ಗಳು ಮತ್ತು ವಿಶ್ವವಿದ್ಯಾಲಯದ ಮುದ್ರೆಗಳನ್ನು ಹೊಂದಿರುವ ಪ್ರಮಾಣಪತ್ರಗಳನ್ನು ತಯಾರಿಸಲ ಕರೆತರಲಾಗಿತ್ತು.
ತನಿಖಾಧಿಕಾರಿಗಳ ಪ್ರಕಾರ ಪ್ರಮಾಣಪತ್ರಗಳನ್ನು ತಮಿಳುನಾಡಿನಲ್ಲಿ ಮುದ್ರಿಸಲಾಗತ್ತು. ಇದನ್ನು ಪತ್ತೆಹಚ್ಚುವುದನ್ನು ತಪ್ಪಿಸಲು ಬೆಂಗಳೂರಿನ ಮೂಲಕ ರವಾನಿಸಲಾಯಿತು. ನಂತರ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ, ದೆಹಲಿ ಮತ್ತು ಪಶ್ಚಿಮ ಬಂಗಾಳದಾದ್ಯಂತ ಏಜೆಂಟ್‌ಗಳ ಮೂಲಕ ವಿತರಿಸಲಾಯಿತು. ಕೇರಳದ ಹೊರಗಿನ 22 ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ಸುಮಾರು ಒಂದು ಲಕ್ಷ ನಕಲಿ ಪ್ರಮಾಣಪತ್ರಗಳನ್ನು, ಕಂಪ್ಯೂಟರ್‌ಗಳು ,ಪ್ರಿಂಟರ್ ಮತ್ತು ನಕಲಿ ಮುದ್ರೆಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಪ್ರಮಾಣಪತ್ರಗಳನ್ನು ತಲಾ 75,000 ರೂ.ಗಳಿಂದ 1.5 ಲಕ್ಷ ರೂ.ಗಳಿಗೆ ಮಾರಾಟ ಮಾಡಿ ಆರೋಪಿಗಳು ಕೋಟ್ಯಂತರ ರೂಪಾಯಿಗಳನ್ನು ಗಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಧನೀಶ್ ಈ ಹಣದಿಂದ ಮಲಪ್ಪುರಂ ಮತ್ತು ಪುಣೆಯಲ್ಲಿರುವ ಐಷಾರಾಮಿ ಆಸ್ತಿಗಳು, ಪಂಚತಾರಾ ಬಾರ್‌ಗಳು ಮತ್ತು ಮಧ್ಯಪ್ರಾಚ್ಯದ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ತನ್ನ ಕುಟುಂಬದೊಂದಿಗೆ ವಿದೇಶಕ್ಕೆ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ಕೋಝಿಕ್ಕೋಡ್‌ನಲ್ಲಿ ಆತನನ್ನು ಬಂಧಿಸಲಾಗಿದೆ. ಟೆಂಪ್ಲೇಟ್‌ಗಳು ಅಥವಾ ಸೂಕ್ಷ್ಮ ಮಾಹಿತಿಯನ್ನು ಪೂರೈಸಲು ಯಾವುದಾದರೂ ವಿಶ್ವವಿದ್ಯಾಲಯದ ಅಧಿಕಾರಿಗಳು ಸಹಾಯ ಮಾಡಿದ್ದಾರೆಯೇ ಎಂದು ತನಿಖಾಧಿಕಾರಿಗಳು ಈಗ ತನಿಖೆ ನಡೆಸುತ್ತಿದ್ದಾರೆ. ಅದೇ ವೇಳೆ ನಕಲಿ ದಾಖಲೆಗಳನ್ನು ಬಳಸಿಕೊಂಡು ಉದ್ಯೋಗಗಳನ್ನು ಪಡೆದುಕೊಂಡಿರಬಹುದಾದ ಜನರನ್ನು ಪತ್ತೆಹಚ್ಚುತ್ತಿದ್ದಾರೆ.
►ಆಸ್ಟ್ರೇಲಿಯಾದಲ್ಲಿ ಉದ್ಯೋಗ ಗಿಟ್ಟಿಸಲು ನಕಲು ಪದವಿ ಬಳಕೆ
ಈ ಪ್ರಕರಣವು ಆಸ್ಟ್ರೇಲಿಯಾದಲ್ಲಿ ಸಂಚಲನವನ್ನುಂಟು ಮಾಡಿದೆ. ಅಲ್ಲಿ ಸೆನೆಟರ್ ಮಾಲ್ಕಮ್ ರಾಬರ್ಟ್ಸ್ , ಕೇರಳದ ಈ ಕುಕೃತ್ಯವನ್ನು ಆಸ್ಟ್ರೇಲಿಯಾದ ವಿದ್ಯಾರ್ಥಿ ವೀಸಾ ಜಾರಿಯಲ್ಲಿನ ವ್ಯವಸ್ಥಿತ ವೈಫಲ್ಯಗಳಿಗೆ ಲಿಂಕ್ ಮಾಡಿದ್ದಾರೆ. ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ ರಾಬರ್ಟ್ಸ್, ಭಾರತದ ಪೊಲೀಸರು 22 ವಿಶ್ವವಿದ್ಯಾಲಯಗಳಿಂದ 100,000 ನಕಲಿ ಪ್ರಮಾಣಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ವಿದೇಶಿ ಉದ್ಯೋಗಗಳಿಗೆ ಬಳಸಲಾಗುತ್ತಿತ್ತು ಎಂದು ಹೇಳಿದ್ದರು.
ನಾನು ಆಗಸ್ಟ್‌ನಲ್ಲಿ ಇದರ ಬಗ್ಗೆ ಎಚ್ಚರಿಸಿದ್ದೆ. ಆಸ್ಟ್ರೇಲಿಯಾದಲ್ಲಿ 23,000 ವಿದೇಶಿ ವಿದ್ಯಾರ್ಥಿಗಳು 'ಖರೀದಿಸಿದ' ಪದವಿಗಳೊಂದಿಗೆ ಕಂಡುಬಂದಿದ್ದಾರೆ. ಅವರಲ್ಲಿ ಹಲವರು ವೃದ್ಧರ ಆರೈಕೆ ಮತ್ತು ಮಕ್ಕಳ ಶಿಕ್ಷಣ ವಿಭಾಗದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಸಮಸ್ಯೆಯನ್ನು ಆಸ್ಟ್ರೇಲಿಯಾದ ವೀಸಾ ಷರತ್ತುಗಳ ಸ್ಪಷ್ಟ ಉಲ್ಲಂಘನೆ ಎಂದು ಕರೆದ ರಾಬರ್ಟ್ಸ್, ಸರ್ಕಾರವು ಕ್ರಮ ಕೈಗೊಳ್ಳಲು ನಿರಾಕರಿಸುತ್ತಿದೆ ಎಂದು ಆರೋಪಿಸಿದರು. ಈ ರೀತಿ ವಂಚನೆ ಮಾಡಿದವರನ್ನು ಗಡೀಪಾರು ಮಾಡುತ್ತೀರಾ ಎಂದು ನಾನು ಸಚಿವ ವ್ಯಾಟ್ ಅವರನ್ನು ಕೇಳಿದೆ. ನನಗೆ ಸಿಕ್ಕಿದ್ದು ನಿರಾಕರಣೆ ಮಾತ್ರ. "ಇವು ಸ್ಪಷ್ಟ ವೀಸಾ ಉಲ್ಲಂಘನೆಗಳಾಗಿದ್ದರೂ ಸಹ ಆಲ್ಬನೀಸ್ ಸರ್ಕಾರ ಕ್ರಮ ಕೈಗೊಳ್ಳಲು ನಿರಾಕರಿಸುತ್ತಿದೆ" ಎಂದು ಅವರು ಹೇಳಿದ್ದಾರೆ.
ಆಸ್ಟ್ರೇಲಿಯಾದ ಅಧಿಕಾರಿಗಳು ನಿರ್ದಿಷ್ಟ ವೀಸಾ ಹೊಂದಿರುವವರನ್ನು ಕೇರಳ ದಂಧೆಗೆ ಔಪಚಾರಿಕವಾಗಿ ಲಿಂಕ್ ಮಾಡದಿದ್ದರೂ, ಪ್ರಕರಣವು ಗಡಿಯಾಚೆಗಿನ ಶಿಕ್ಷಣ ವಂಚನೆ ಮತ್ತು ವಲಸೆ ವ್ಯವಸ್ಥೆಗಳ ಮೇಲೆ ಅದರ ಪರಿಣಾಮಗಳ ಪರಿಶೀಲನೆಯನ್ನು ತೀವ್ರಗೊಳಿಸಿದೆ. ಏತನ್ಮಧ್ಯೆ, ಪ್ರಮಾಣಪತ್ರ ಹಗರಣದ ಪರಿಣಾಮವು ಭಾರತದ ಗಡಿಗಳನ್ನು ಮೀರಿ ವಿಸ್ತರಿಸಬಹುದು ಎಂದು ಸೂಚಿಸುತ್ತದೆ. ಮುಂಬರುವ ವಾರಗಳಲ್ಲಿ ಮತ್ತಷ್ಟು ಬಂಧನಗಳು ಮತ್ತು ಅಂತರರಾಷ್ಟ್ರೀಯ ಸಹಕಾರದ ಸಾಧ್ಯತೆಯಿದೆ ಎಂದು ಭಾರತೀಯ ತನಿಖಾಧಿಕಾರಿಗಳು ಹೇಳುತ್ತಾರೆ.
►ನಕಲಿ ಪ್ರಮಾಣ ಪತ್ರ ದಂಧೆ ಪತ್ತೆಯಾಗಿದ್ದು ಹೀಗೆ
ಪ್ರತಿದಿನ ನೂರಾರು ಪ್ರಮಾಣಪತ್ರಗಳನ್ನು ಯಾರು ಕಳುಹಿಸುತ್ತಿದ್ದಾರೆಂದು ಎಂದು ಪತ್ತೆ ಹಚ್ಚಲು ತಿರುವನಂತಪುರಂನಲ್ಲಿ ನಕಲಿ ಪ್ರಮಾಣಪತ್ರಗಳನ್ನು ಕೊರಿಯರ್ ಮಾಡುತ್ತಿದ್ದ ಏಜೆನ್ಸಿಗೆ ತನಿಖಾ ತಂಡ ಭೇಟಿ ನೀಡಿತ್ತು. ಪೊನ್ನಾನಿಯ ಇರ್ಷಾದ್ ಮತ್ತು ತಿರೂರಿನ ನಿಸಾರ್ ಎಂಬವರು ಜೋಸ್ ಎಂಬ ವ್ಯಕ್ತಿಗೆ ಪ್ರಮಾಣಪತ್ರಗಳನ್ನು ಕಳುಹಿಸುತ್ತಿದ್ದಾರೆ ಎಂದು ಹೇಳಿದ್ದು, ಪೊಲೀಸರು ಜೋಸ್‌ಗಾಗಿ ಹುಡುಕುತ್ತಿದ್ದರು. ಕೊರಿಯರ್ ಏಜೆನ್ಸಿಯಿಂದ ಜೋಸ್ ಹೆಸರಿನ ವಿಳಾಸವನ್ನು ಪಡೆದ ಪೊಲೀಸರು ಆತನಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರು. ಕೊನೆಗೆ, ಜೋಸ್ ಎಂಬ ವ್ಯಕ್ತಿ ಇಲ್ಲ ಎಂದು ಪೊಲೀಸರು ತೀರ್ಮಾನಕ್ಕೆ ಬಂದರು. ಆಮೇಲೆ ತಿರುವನಂತಪುರಂನಲ್ಲಿರುವ ಜೋಸ್ ಎಂಬ ವ್ಯಕ್ತಿ ಮಣಕ್ಕೋಡೆಯ ನೆಡುಮಂಗಾಡ್‌ನ ಮೂಲದ ಜಾಸಿಮ್ ಎಂದು ಪೊಲೀಸರಿಗೆ ತಿಳಿಯಿತು. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ನಕಲಿ ಪ್ರಮಾಣಪತ್ರಗಳನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ ಆತ ಪ್ರಮುಖ ಆರೋಪಿ ಆಗಿದ್ದ. ಅವನು ಹೈದರಾಬಾದ್ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ. ಕೊಲ್ಲಂನ ಕಡಕ್ಕಲ್‌ನಲ್ಲಿರುವ ಶಿಕ್ಷಣ ಸಲಹಾ ಸಂಸ್ಥೆಗೆ ಜಾಸೀಮ್ ಪ್ರತಿದಿನ ನೂರಾರು ಪ್ರಮಾಣಪತ್ರಗಳನ್ನು ಕಳುಹಿಸುತ್ತಿರುವುದು ತನಿಖೆಯಲ್ಲಿ ತಿಳಿದುಬಂದಿತ್ತು. ಪೊಲೀಸರು ಕಡಕ್ಕಲ್‌ನಲ್ಲಿರುವ ಸಂಸ್ಥೆ ಮತ್ತು ಸಂಸ್ಥೆಯ ವ್ಯವಸ್ಥಾಪಕ ಕಡಕ್ಕಲ್ ಮೂಲದ ಅಫ್ಜಲ್ ಅವರ ಮನೆಯಲ್ಲಿ ಶೋಧ ನಡೆಸಿ ನೂರಾರು ಪ್ರಮಾಣಪತ್ರಗಳನ್ನು ವಶಪಡಿಸಿಕೊಂಡು ಅಫ್ಜಲ್ ಅವರನ್ನು ಬಂಧಿಸಿದ್ದಾರೆ ಎಂದು ಮಲಯಾಳಂ ಪತ್ರಿಕೆ ಮಲಯಾಳ ಮನೋರಮ ವರದಿ ಮಾಡಿದೆ.
►ನಕಲಿ ಪ್ರಮಾಣಪತ್ರಗಳನ್ನು ತಯಾರಿಸುವ ಮುದ್ರಣ ಕೇಂದ್ರ
ನಕಲಿ ಪ್ರಮಾಣಪತ್ರಗಳ ಮೂಲ ತಮಿಳುನಾಡಿನ ಶಿವಕಾಶಿಯಲ್ಲಿದೆ. ವಿರುಥ ನಗರದ ಎರಡು ಅಂತಸ್ತಿನ ಮನೆಯಲ್ಲಿ ಮುದ್ರಣವು ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿದೆ. ಈ ಮುದ್ರಣ ಕೇಂದ್ರವು ನಕಲಿ ಪ್ರಮಾಣಪತ್ರಗಳನ್ನು ತಯಾರಿಸಲು ಮಾತ್ರ ಬಳಸಲಾಗುತ್ತದೆ. ದೇಶದ 22 ವಿಶ್ವವಿದ್ಯಾಲಯಗಳ ಮುದ್ರೆಗಳು ಮತ್ತು ಹೊಲೊಗ್ರಾಮ್‌ಗಳು ಸೇರಿದಂತೆ ಎಲ್ಲವೂ ಅಲ್ಲಿ ಲಭ್ಯವಿದ್ದು ಯಾವುದೇ ಪ್ರಮಾಣಪತ್ರವನ್ನು ಸೆಕೆಂಡುಗಳಲ್ಲಿ ಮುದ್ರಿಸಬಹುದು. ಗರಿಷ್ಠ 800 ರೂ. ವೆಚ್ಚದಲ್ಲಿ ತಯಾರಾಗುವ ನಕಲಿ ಪ್ರಮಾಣಪತ್ರವನ್ನು ಒಂದೂವರೆ ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ. ಈ ಕೇಂದ್ರದಿಂದ 10 ಲಕ್ಷ ಪ್ರಮಾಣಪತ್ರಗಳನ್ನು ತಯಾರಿಸಲಾಗಿದೆ ಎಂದು ಅಂದಾಜಿಸಲಾಗಿದೆ.
ಈ ಮುದ್ರಣ ಕೇಂದ್ರದಲ್ಲಿ ಸುಮಾರು 750 ಕೋಟಿ ರೂ ಮೌಲ್ಯದ ಪ್ರಮಾಣ ಪತ್ರಗಳು ಮುದ್ರಣ ಕಂಡಿವೆ. ವಿಶ್ವವಿದ್ಯಾಲಯಗಳಲ್ಲಿನ ಕುಲಪತಿಗಳ ಹೆಸರುಗಳು, ಕೋರ್ಸ್‌ಗಳ ವಿಧಾನಗಳು ಮತ್ತು ಪ್ರಮಾಣಪತ್ರಗಳ ಸ್ವರೂಪ ಎಲ್ಲವೂ ಇಲ್ಲಿರುವವರಿಗೆ ಪರಿಚಿತವಾಗಿವೆ. ಮೂಲವನ್ನೇ ಹೋಲುವ ಹೊಲೊಗ್ರಾಮ್‌ಗಳನ್ನು ಒದಗಿಸುವ, ಮುದ್ರೆಗಳನ್ನು ತಯಾರಿಸುವ ಮತ್ತು ಪ್ರಮಾಣಪತ್ರಗಳಿಗೆ ಕಾಗದಗಳನ್ನು ತಯಾರಿಸುವ ವಿಶೇಷ ಜನರಿದ್ದಾರೆ. ಮುದ್ರಣ ಕೇಂದ್ರದಲ್ಲಿದ್ದ ಜೈನುಲಾಬುದ್ದೀನ್, ಅರವಿಂದ್ ಕುಮಾರ್ ಮತ್ತು ವೆಂಕಟೇಶ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪ್ರಮಾಣಪತ್ರಗಳಿಗೆ ಕಾಗದಗಳನ್ನು ಪೂರೈಸಿದ ಜಹಾಂಗೀರ್, ಮುದ್ರೆಗಳನ್ನು ತಯಾರಿಸಿದ ಪರಮಶಿವಂ ಮತ್ತು ಹೊಲೊಗ್ರಾಮ್‌ಗಳನ್ನು ಪೂರೈಸಿದ ಪೊನ್‌ಪಾಂಡಿ ಅವರನ್ನು ಸಹ ಬಂಧಿಸಲಾಗಿದೆ. ಪ್ರತಿದಿನ ನಕಲಿ ಪ್ರಮಾಣಪತ್ರಗಳನ್ನು ಮುದ್ರಿಸಿ ಮಾರಾಟ ಮಾಡುತ್ತಿದ್ದ ಈ ಗ್ಯಾಂಗ್‌ನ ನಾಯಕನೇ ಡ್ಯಾನಿ.
ಪ್ರಮಾಣಪತ್ರಗಳನ್ನು ಒಂದೂವರೆ ಲಕ್ಷ ರೂಪಾಯಿಗೆ ಮಾರಾಟ ಮಾಡುವ ದಂಧೆ ಇದಾಗಿದೆ. ಶಿಕ್ಷಣ ಸಲಹಾ ಸಂಸ್ಥೆಗಳು ಜಸೀಮ್ ಎಂಬಾತನಿಗೆ ಹಣವನ್ನು ಕಳುಹಿಸುತ್ತವೆ. ಜಸೀಮ್ ತನ್ನ ಸಂಬಂಧಿ ಆರ್ಯನಾಡ್ ಕಡಯಾರದ ಶೆಫೀಕ್ ಮತ್ತು ಅವನ ಸ್ನೇಹಿತ ಪಿ.ಎಸ್.ನಗರದ ರತೀಶ್ ಮೂಲಕ ಏಜೆನ್ಸಿಗಳಿಂದ ಹಣವನ್ನು ಪಡೆಯುತ್ತಿದ್ದ. ಇವರಿಬ್ಬರನ್ನು ಬಂಧಿಸಿದ ನಂತರ ಬೆಂಗಳೂರಿನ ಕೊತ್ತನೂರಿನಲ್ಲಿ ಜಾಸೀಮ್‌ನ್ನು ಪೊಲೀಸರು ಬಂಧಿಸಿದ್ದಾರೆ. ಆದಾಗ್ಯೂ ಇಷ್ಟೊಂದು ಪ್ರಮಾಣಪತ್ರಗಳು ಜಮೀಮ್ ಗೆ ಹೇಗೆ ಮತ್ತು ಎಲ್ಲಿಂದ ಸಿಗುತ್ತಿವೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.