×
Ad

I-PAC ಕಚೇರಿ ಮೇಲೆ ಈಡಿ ದಾಳಿ ವೇಳೆ ಫೈಲ್ ತೆಗೆದುಕೊಂಡು ಹೋದ ಮಮತಾ ಬ್ಯಾನರ್ಜಿ; ಫೈಲ್ ನಲ್ಲೇನಿತ್ತು?

Update: 2026-01-08 22:13 IST

PC: indiatoday

ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪಶ್ಚಿಮ ಬಂಗಾಳದ ರಾಜಕೀಯ ಸಲಹಾ ಸಂಸ್ಥೆ I-PAC ಕಚೇರಿಯಲ್ಲಿ ಗುರುವಾರ (ಜನವರಿ 08) ಶೋಧ ನಡೆಸಿದ್ದಾರೆ. ಈ ಶೋಧ ಕಾರ್ಯಾಚರಣೆ ವೇಳೆ ಅಲ್ಲಿಗೆ ಧಾವಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಲವಾರು ದಾಖಲೆಗಳನ್ನು ಹೊತ್ತುಕೊಂಡು ಹೊರನಡೆದಿದ್ದಾರೆ ಎಂದು ಈಡಿ ಅಧಿಕಾರಿಗಳು ಕಲ್ಕತ್ತಾ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರ ಈ ನಡೆ ಚುನಾವಣೆ ಸಮೀಪಿಸುತ್ತಿರುವ ಬಂಗಾಳದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಇಡಿ ಸಲ್ಲಿಸಿರುವ ಅರ್ಜಿ ಬಗ್ಗೆ ಶುಕ್ರವಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

ಈಡಿ ಶೋಧದ ವೇಳೆ ಏನೇನಾಯ್ತು?

ಪ್ರಶಾಂತ್ ಕಿಶೋರ್ ಸ್ಥಾಪಿಸಿದ ಐ-ಪಿಎಸಿ I-PAC (Indian Political Action Committee) ಗೆ ಸಂಬಂಧಿಸಿದ ಎರಡು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ED) ಏಕಕಾಲದಲ್ಲಿ ದಾಳಿ ನಡೆಸಿದೆ. ಲೌಡನ್ ಸ್ಟ್ರೀಟ್‌ನಲ್ಲಿರುವ (ಮಧ್ಯ ಕೋಲ್ಕತ್ತಾ) ಐ-ಪಿಎಸಿ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸ ಮತ್ತು ಸಾಲ್ಟ್ ಲೇಕ್‌ನಲ್ಲಿರುವ ಸಲಹಾ ಗುಂಪಿನ ಕಚೇರಿಯಲ್ಲಿ ಈಡಿ ಶೋಧ ನಡೆಸಿದೆ.ಐ-ಪಿಎಸಿ ವರ್ಷಗಳಿಂದ ಟಿಎಂಸಿಯೊಂದಿಗೆ ಸಂಬಂಧ ಹೊಂದಿದ್ದು, 2021ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪ್ರಾಬಲ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಪ್ರಶಾಂತ್ ಕಿಶೋರ್ ಈ ಹಿಂದೆ ಟಿಎಂಸಿಯ ಚುನಾವಣಾ ತಂತ್ರಗಳನ್ನು ನಿರ್ವಹಿಸುತ್ತಿದ್ದರು. ಆಮೇಲೆ ಅವರು ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಐ-ಪಿಎಸಿಯಿಂದ ದೂರ ಸರಿದ ನಂತರ ಜೈನ್ ಅಧಿಕಾರ ವಹಿಸಿಕೊಂಡಿದ್ದರು.

ಕಳೆದ ಹಲವಾರು ವರ್ಷಗಳಿಂದ ಪಕ್ಷಕ್ಕೆ ಬೆಂಬಲ ನೀಡಲು ತೃಣಮೂಲ ಕಾಂಗ್ರೆಸ್ ರಾಜಕೀಯ ಸಲಹಾ ಸಂಸ್ಥೆಯಾದ ಐ-ಪಿಎಸಿಯನ್ನು ನೇಮಿಸಿಕೊಂಡಿತ್ತು. 2021ರ ವಿಧಾನಸಭಾ ಚುನಾವಣೆಗಳು ಮತ್ತು ನಂತರದ ಪಶ್ಚಿಮ ಬಂಗಾಳದ ಚುನಾವಣೆಗಳಲ್ಲಿ ತೃಣಮೂಲ ತನ್ನ ಚುನಾವಣಾ ಮತ್ತು ರಾಜಕೀಯ ಕಾರ್ಯತಂತ್ರವನ್ನು ರೂಪಿಸಲು ಐ-ಪಿಎಸಿ ಸಹಾಯ ಮಾಡಿತ್ತು.

ಪ್ರತೀಕ್ ಜೈನ್ ಯಾರು?

ಪ್ರತೀಕ್ ಜೈನ್ ಎಂಜಿನಿಯರ್ ಆಗಿದ್ದು, ಈಗ ರಾಜಕೀಯ ಸಲಹೆಗಾರರಾಗಿದ್ದಾರೆ. 2015 ರಲ್ಲಿ ವಿನೇಶ್ ಚಾಂಡೆಲ್ ಮತ್ತು ರಿಷಿ ರಾಜ್ ಸಿಂಗ್ ಅವರೊಂದಿಗೆ ಐ-ಪ್ಯಾಕ್ ಅನ್ನು ಸ್ಥಾಪಿಸಿದ್ದು, ಜೈನ್ ಇದರ ಸಹ ಸಂಸ್ಥಾಪಕರಾಗಿದ್ದಾರೆ. ಜೈನ್ ಅವರು ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಂಬೆ (ಐಐಟಿ-ಬಿ) ಯಿಂದ ಮೆಟಲರ್ಜಿಕಲ್ ಎಂಜಿನಿಯರಿಂಗ್ ಮತ್ತು ಮೆಟೀರಿಯಲ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಈ ಸಮಯದಲ್ಲಿ ಅವರು ಆಕ್ಸಿಸ್ ಮ್ಯೂಚುವಲ್ ಫಂಡ್‌ನಲ್ಲಿ ಇಂಟರ್ನ್‌ಶಿಪ್ ಮಾಡಿದರು. ಪದವಿ ಪೂರ್ಣಗೊಳಿಸಿದ ನಂತರ, ಜೈನ್ ಅವರು ಡೆಲಾಯ್ಟ್‌ನಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ವಿಶ್ಲೇಷಕರಾಗಿ ಕೆಲಸ ಮಾಡಿದರು. ಭಾರತದಲ್ಲಿ ಜವಾಬ್ದಾರಿಯುತ ಆಡಳಿತವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ 'ಸಿಟಿಜನ್ಸ್ ಫಾರ್ ಅಕೌಂಟಬಲ್ ಗವರ್ನನ್ಸ್' ಎಂಬ ಎನ್‌ಜಿಒದ ಸ್ಥಾಪಕ ಸದಸ್ಯರಾಗಿದ್ದಾರೆ ಇವರು ಎಂದು ಅವರ ಲಿಂಕ್ಡ್ಇನ್ ಬಯೋದಲ್ಲಿ ಬರೆದಿದೆ. ಜೈನ್ ಅವರು ತೃಣಮೂಲ ಕಾಂಗ್ರೆಸ್‌ನ ಐಟಿ ಸೆಲ್‌ನ ಮುಖ್ಯಸ್ಥರೂ ಆಗಿದ್ದಾರೆ.

ಜೈನ್ ನಿವಾಸದ ಮೇಲೆ ಈಡಿ ದಾಳಿ

ಪಶ್ಚಿಮ ಬಂಗಾಳದಲ್ಲಿ ಕಲ್ಲಿದ್ದಲು ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದ ಕೆಲವು ಹವಾಲಾ ವಹಿವಾಟುಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ "ನಿರ್ದಿಷ್ಟ" ಪುರಾವೆಗಳನ್ನು ಉಲ್ಲೇಖಿಸಿ ಈಡಿ ಜೈನ್ ಅವರ ಮನೆಯ ಮೇಲೆ ದಾಳಿ ಮಾಡಿದೆ. ಕಲ್ಲಿದ್ದಲು ಕಳ್ಳಸಾಗಣೆಯಿಂದ ಬಂದ ಅಪರಾಧದ ಆದಾಯವನ್ನು ಜೋಡಿಸುವ ಸಂಬಂಧ ಹೊಂದಿರುವ ಒಬ್ಬ ಹವಾಲಾ ಆಪರೇಟರ್ ಇಂಡಿಯನ್ ಪ್ಯಾಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್‌ಗೆ ಹತ್ತಾರು ಕೋಟಿ ರೂಪಾಯಿಗಳ ವಹಿವಾಟುಗಳನ್ನು ಸುಗಮಗೊಳಿಸಿದ್ದಾನೆ ಎಂದು ಈಡಿ ಹೇಳಿದೆ.

ದಾಳಿ ವೇಳೆ ಧಾವಿಸಿದ ಬಂಗಾಳ ಸಿಎಂ

ಜೈನ್ ಅವರ ನಿವಾಸದಲ್ಲಿ ಈಡಿ ದಾಳಿ ನಡೆಯುತ್ತಿರುವಾಗ ಅಲ್ಲಿಗೆ ಮೊದಲು ತಲುಪಿದ್ದು ಕೋಲ್ಕತ್ತಾ ಪೊಲೀಸ್ ಮುಖ್ಯಸ್ಥ ವಿನೀತ್ ಗೋಯಲ್. ಇದಾಗಿ ಸ್ವಲ್ಪ ಸಮಯದ ನಂತರ ಅಲ್ಲಿಗೆ ಮಮತಾ ಬ್ಯಾನರ್ಜಿ ಬಂದರು. ಕೆಲವು ನಿಮಿಷಗಳ ನಂತರ ಹೊರ ಬಂದ ಮಮತಾ ಅಸಮಾಧಾನಗೊಂಡಿದ್ದು ಸ್ಪಷ್ಟವಾಗಿತ್ತು. ಅವರ ಕೈಯಲ್ಲಿ ಹಸಿರು ಫೈಲ್ ಇತ್ತು.

ಆಮೇಲೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮಮತಾ, ಈಡಿ ಕ್ರಮವು "ರಾಜಕೀಯ ಪ್ರೇರಿತ". ಇದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆದೇಶದ ಮೇರೆಗೆ ನಡೆದಿದೆ ಆರೋಪಿಸಿದರು. ತೃಣಮೂಲ ಪಕ್ಷದ ಚುನಾವಣಾ ತಂತ್ರ, 2026 ರ ಚುನಾವಣೆಗಳಿಗೆ ಅಭ್ಯರ್ಥಿಗಳ ಪಟ್ಟಿಗಳು ಮತ್ತು ಗೌಪ್ಯ ಪಕ್ಷದ ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕಾಗಿ ದಾಳಿಗಳಿಗೆ ಆದೇಶಿಸಲಾಗಿದೆ. ಪಕ್ಷದ ಚುನಾವಣಾ ತಂತ್ರಕ್ಕೆ ಸಂಬಂಧಿಸಿದ "ಕಡತಗಳನ್ನು ಕದಿಯಲು" ಈಡಿ ಪ್ರಯತ್ನಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಒಂದೆಡೆ, ಅವರು ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ನಡೆಸುವ ಮೂಲಕ ಎಲ್ಲಾ ಮತದಾರರ ಹೆಸರುಗಳನ್ನು ಅಳಿಸುತ್ತಿದ್ದಾರೆ. ಚುನಾವಣೆಗಳು ಸಮೀಪಿಸುತ್ತಿದ್ದಂತೆ ಅವರು ನನ್ನ ಪಕ್ಷದ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ

ಜೈನ್ ಅವರ ನಿವಾಸದಿಂದ ಹೊರಬಂದ ನಂತರ, ಮಮತಾ ಬ್ಯಾನರ್ಜಿ ಅಲ್ಲಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಐ-ಪಿಎಸಿಯ ಸಾಲ್ಟ್ ಲೇಕ್ ಕಚೇರಿಗೆ ಹೋಗಿದ್ದಾರೆ. ಅಲ್ಲಿ ಎರಡನೇ ಈಡಿ ತಂಡವು ಶೋಧ ನಡೆಸುತ್ತಿತ್ತು. ಮಮತಾ ಹಿಂಬಾಗಿಲಿನ ಮೂಲಕ ಆವರಣವನ್ನು ಪ್ರವೇಶಿಸಿದ್ದು ಸುಮಾರು 15-20 ನಿಮಿಷಗಳ ನಂತರ ಅಲ್ಲಿಂದ ಹೊರ ಬಂದಿದ್ದಾರೆ. ಅವರೊಂದಿಗೆ, ಮುಖ್ಯಮಂತ್ರಿ ಕಚೇರಿಯ (ಸಿಎಮ್‌ಒ) ಅಧಿಕಾರಿಗಳು ಹಲವಾರು ಫೈಲ್‌ಗಳನ್ನು ಹೊತ್ತುಕೊಂಡು ಕಚೇರಿಯಿಂದ ಹೊರಬರುತ್ತಿರುವುದು ಕಂಡುಬಂದಿತು. ಈ ಫೈಲ್ ಗಳನ್ನು ಮಮತಾ ಅವರು ಬಂದಿದ್ದ ಮಹೀಂದ್ರಾ ಕಾರಿನ ಹಿಂದಿನ ಸೀಟಿನಲ್ಲಿ ಮತ್ತು ಬೂಟ್‌ನಲ್ಲಿ ಇರಿಸಲಾಗಿತ್ತು.

ಬಲವಂತವಾಗಿ ಫೈಲ್‌ಗಳನ್ನು ತೆಗೆದುಕೊಳ್ಳಲಾಗಿದೆ

ಮಮತಾ, ಅವರ ಸಹಾಯಕರು ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿ ಭೌತಿಕ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು "ಬಲವಂತವಾಗಿ ತೆಗೆದುಕೊಂಡಿದ್ದಾರೆ" ಎಂದು ಕೇಂದ್ರ ಸಂಸ್ಥೆ ಹೇಳಿಕೊಂಡಿದೆ. ಅದೇ ವೇಳೆ ದಾಳಿಗಳು ಯಾವುದೇ ರಾಜಕೀಯ ಪಕ್ಷವನ್ನು ಗುರಿಯಾಗಿರಿಸಿಕೊಂಡಿಲ್ಲ ಮತ್ತು ಚುನಾವಣೆಗಳಿಗೆ ಸಂಬಂಧಿಸಿಲ್ಲ ಎಂದು ಅದು ಹೇಳಿದೆ. ಏತನ್ಮಧ್ಯೆ ಅಧಿಕೃತ ತನಿಖಾ ಸ್ಥಳದಿಂದ ಫೈಲ್‌ಗಳನ್ನು ಪಡೆಯಲು ಮುಖ್ಯಮಂತ್ರಿಯೊಬ್ಬರು ಈ ರೀತಿ ಧಾವಿಸಿದ್ದು ಪಿತೂರಿಯನ್ನು ಸೂಚಿಸುತ್ತದೆ ಎಂದು ಬಿಜೆಪಿ ಹೇಳಿದೆ.

ಪಶ್ಚಿಮ ಬಂಗಾಳದಲ್ಲಿ ಮರೆಮಾಡಲು ಏನೂ ಇಲ್ಲದಿದ್ದರೆ, ಅಧಿಕೃತ ತನಿಖಾ ಸ್ಥಳದಿಂದ ಫೈಲ್‌ಗಳನ್ನು ಪಡೆಯಲು ಮುಖ್ಯಮಂತ್ರಿಯೊಬ್ಬರು ಈ ರೀತಿ ಯಾಕೆ ಹೆಣಗಾಡುತ್ತಾರೆ? ಈ ನಡವಳಿಕೆಯು ಆ ದಾಖಲೆಗಳಲ್ಲಿ ಏನೆಲ್ಲಾ ಅಡಗಿರಬಹುದು? ಎಂದು ಬಿಜೆಪಿ ಪ್ರಶ್ನಿಸಿದೆ. ಈ ಬೆಳವಣಿಗೆಗಳು ಮಮತಾ ಮತ್ತು ಅವರ ಅಧಿಕಾರಿಗಳು ತೆಗೆದುಕೊಂಡು ಹೋಗಿರುವ ಫೈಲ್‌ಗಳ ವಿಷಯಗಳ ಬಗ್ಗೆ ತೀವ್ರ ಊಹಾಪೋಹಗಳಿಗೆ ಕಾರಣವಾಗಿವೆ.

ಫೈಲ್‌ಗಳಲ್ಲಿ ಏನಿದೆ?

ಮಮತಾ ಬ್ಯಾನರ್ಜಿ ಮತ್ತು ಅವರ ಅಧಿಕಾರಿಗಳು ತೆಗೆದುಕೊಂಡು ಹೋಗಿರುವ ಫೈಲ್‌ಗಳಲ್ಲಿ ಏನಿದೆ ಎಂಬುದರ ಕುರಿತು ಹೆಚ್ಚು ತಿಳಿದಿಲ್ಲವಾದರೂ ವಿಡಿಯೋದಲ್ಲಿ ಕಾಣುವ ದೃಶ್ಯಗಳನ್ನು ನೋಡಿದರೆ ಒಂದರಲ್ಲಿ "ಫೆಬ್ರವರಿ 2022" ಎಂದು ಗುರುತಿಸಲಾಗಿದೆ. ಇನ್ನೊಂದರಲ್ಲಿ ತೃಣಮೂಲ ನಾಯಕರ ಪ್ರಯಾಣ ದಾಖಲೆಗಳನ್ನು ವಿವರಿಸುವ ಹಲವಾರು ಕಾಗದಗಳಿವೆ. ಅಂತಹ ದಾಖಲೆಗಳಲ್ಲಿ "ಮಹುವಾ ಮೊಯಿತ್ರಾ x 1" ಮತ್ತು ಫೆಬ್ರವರಿ 2, 2022 ರ ಪ್ರಯಾಣ ದಿನಾಂಕವನ್ನು ಉಲ್ಲೇಖಿಸಲಾಗಿದೆ. ಮೊಯಿತ್ರಾ ಕೃಷ್ಣನಗರದ ಸಂಸದೆಯಾಗಿದ್ದಾರೆ.

ಫೈಲ್‌ಗಳಲ್ಲಿ ನಿಖರವಾಗಿ ಏನಿದೆ? ಅವುಗಳನ್ನು ಈಗಾಗಲೇ ಇಡಿ ವಶಪಡಿಸಿಕೊಂಡಿದೆಯೇ ಅಥವಾ ಏಜೆನ್ಸಿಯ ನಡೆಯುತ್ತಿರುವಾಗ ಅವುಗಳನ್ನು ತೆಗೆದುಕೊಳ್ಳಲಾಗಿದೆಯೇ? ಎಂಬುದು ಸದ್ಯ ತಿಳಿದು ಬಂದಿಲ್ಲ

ತನಿಖೆಯಲ್ಲಿ 'ಹಸ್ತಕ್ಷೇಪ' ಎಂದ ಸುವೇಂದು

ಮಮತಾ ಬ್ಯಾನರ್ಜಿ ಅವರು ಜೈನ್ ಅವರ ಮನೆಗೆ ಭೇಟಿ ನೀಡಿರುವುದು ಅಸಂವಿಧಾನಿಕ, ಕೇಂದ್ರ ಸಂಸ್ಥೆಯ ತನಿಖೆಯಲ್ಲಿ ಅವರು ಹಸ್ತಕ್ಷೇಪ ನಡೆಸಿದ್ದಾರೆ ಎಂದು ಹೇಳಿರುವ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮುಖ್ಯಮಂತ್ರಿಯ ವಿರುದ್ಧ ಈಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಕೋಲ್ಕತ್ತಾ ಪೊಲೀಸ್ ಆಯುಕ್ತರ ಭೇಟಿ ಅನೈತಿಕ, ಅಸಂವಿಧಾನಿಕ ಮತ್ತು ಕೇಂದ್ರ ಸಂಸ್ಥೆಯ ತನಿಖೆಯಲ್ಲಿ ನೇರ ಹಸ್ತಕ್ಷೇಪ ಎಂದು ನಾನು ಭಾವಿಸುತ್ತೇನೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಸುವೇಂದು ಹೇಳಿದ್ದಾರೆ.

ಮಮತಾ ಆರೋಪಗಳಿಗೆ ಈಡಿ ಪ್ರತಿಕ್ರಿಯೆ

ಮಮತಾ ಬ್ಯಾನರ್ಜಿ ಮಾಡಿರುವ ಆರೋಪಗಳಿಗೆ ಜಾರಿ ನಿರ್ದೇಶನಾಲಯ ಪ್ರತಿಕ್ರಿಯಿಸಿದ್ದು, ಈ ಶೋಧಗಳು ಚುನಾವಣೆಗಳಿಗೆ ಸಂಬಂಧಿಸಿಲ್ಲ ಮತ್ತು ಹಣ ವರ್ಗಾವಣೆಯ ವಿರುದ್ಧದ ನಿಯಮಿತ ಕ್ರಮದ ಭಾಗವಾಗಿದೆ ಎಂದು ಹೇಳಿದೆ. ಸಾಂವಿಧಾನಿಕ ಅಧಿಕಾರಿಗಳು ಸೇರಿದಂತೆ ಕೆಲವು ವ್ಯಕ್ತಿಗಳು 2 ಆವರಣಗಳಿಗೆ (10 ರಲ್ಲಿ) ಬಂದು, ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಅಕ್ರಮವಾಗಿ ಒಳನುಗ್ಗಿ ದಾಖಲೆಗಳನ್ನು ಕಸಿದುಕೊಂಡಿದ್ದಾರೆ ಎಂದು ಕೇಂದ್ರ ಸಂಸ್ಥೆ ಹೇಳಿದೆ.

ಗೋವಾ ಚುನಾವಣೆಗಾಗಿ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್‌ಗೆ ಅಪರಾಧದ ಆದಾಯ ಬಂದಿದೆ ಎಂಬುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ ಎಂದು ಅದು ಆರೋಪಿಸಿದೆ. "ಆಪಾದಿತ ಕಲ್ಲಿದ್ದಲು ಹಗರಣ ಯೋಜನೆಯ ಮೂಲಕ ಬಂದ ಅಪರಾಧದ ಆದಾಯವನ್ನು ಗೋವಾಕ್ಕೆ ಬಳಸಲಾಯಿತು. 2022ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪರ ಕೆಲಸಕ್ಕಾಗಿ ಐ-ಪ್ಯಾಕ್‌ಗೆ ನೀಡಲಾಯಿತು. ಹೆಚ್ಚಿನ ವಿವರಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಈಡಿ ಹೇಳಿದೆ.

ಏತನ್ಮಧ್ಯೆ, ಐ-ಪ್ಯಾಕ್ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಕುಟುಂಬವು ಗುರುವಾರ ಜಾರಿ ನಿರ್ದೇಶನಾಲಯದ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದು, ಮನೆಯಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಪ್ರಮುಖ ದಾಖಲೆಗಳನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News