ದಿಲ್ಲಿಯಲ್ಲಿ ಅತಿಕ್ರಮಣ ವಿರೋಧಿ ಅಭಿಯಾನ; ಈವರೆಗೆ ನೆಲಸಮವಾಗಿದ್ದು ಏನೇನು?
ಸಾಂದರ್ಭಿಕ ಚಿತ್ರ | Photo Credit : PTI
ದಿಲ್ಲಿಯ ಮಸೀದಿಯ ಬಳಿ ಇಂದು (2026 ಜನವರಿ 07) ಬೆಳಗಿನ ಜಾವ ಅತಿಕ್ರಮಣ ವಿರೋಧಿ ಅಭಿಯಾನದ ಸಂದರ್ಭದಲ್ಲಿ ಹಿಂಸಾತ್ಮಕ ಘರ್ಷಣೆ ಭುಗಿಲೆದ್ದಿತು. ರಾಮಲೀಲಾ ಮೈದಾನದಲ್ಲಿರುವ ಸೈಯದ್ ಫೈಝ್ ಇಲಾಹಿ ಮಸೀದಿಗೆ ಹೊಂದಿಕೊಂಡಿರುವ ಭೂಮಿಯನ್ನು ಕೆಡವುವ ಸಂದರ್ಭದಲ್ಲಿ ಸ್ಥಳೀಯರು ಪುರಸಭೆ ಅಧಿಕಾರಿಗಳು ಮತ್ತು ಪೊಲೀಸ್ ತಂಡಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ. ದಿಲ್ಲಿ ಹೈಕೋರ್ಟ್‌ನ ಆದೇಶದ ಮೇರೆಗೆ ತೆರವು ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಈ ವೇಳೆ ಘರ್ಷಣೆ ಮತ್ತು ಕಲ್ಲು ತೂರಾಟ ನಡೆದಿದ್ದು ಕನಿಷ್ಠ ಐದು ಪೊಲೀಸ್ ಸಿಬ್ಬಂದಿ ಗಾಯಗೊಂಡರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಬಳಸಿದ್ದು, ಇಲ್ಲಿಯವರೆಗೆ ಐವರನ್ನು ಬಂಧಿಸಲಾಗಿದೆ. ಕಳೆದ ನವೆಂಬರ್‌ನಲ್ಲಿ ದಿಲ್ಲಿ ಹೈಕೋರ್ಟ್ ದಿಲ್ಲಿ ಮಹಾನಗರ ಪಾಲಿಕೆ (MCD) ಮತ್ತು ಲೋಕೋಪಯೋಗಿ ಇಲಾಖೆಗೆ ತುರ್ಕಮನ್ ಗೇಟ್ ಬಳಿಯ ರಾಮ್‌ಲೀಲಾ ಮೈದಾನದಲ್ಲಿ ಸುಮಾರು 39,000 ಚದರ ಅಡಿ ವಿಸ್ತೀರ್ಣದ ಅತಿಕ್ರಮಣವನ್ನು ತೆರವುಗೊಳಿಸುವಂತೆ ಸೂಚಿಸಿತ್ತು . ನಂತರ ಅಧಿಕಾರಿಗಳು ರಸ್ತೆ, ಪಾದಚಾರಿ ಮಾರ್ಗ, ಬ್ಯಾಂಕೆಟ್ ಹಾಲ್, ಪಾರ್ಕಿಂಗ್ ಪ್ರದೇಶ ಮತ್ತು ಖಾಸಗಿ ರೋಗನಿರ್ಣಯ ಕೇಂದ್ರ ಸೇರಿದಂತೆ ಅತಿಕ್ರಮಣಗಳನ್ನು ತೆಗೆದುಹಾಕಲು ಆದೇಶ ಹೊರಡಿಸಿದರು. ಆದೇಶವನ್ನು ಪ್ರಶ್ನಿಸಿ, ಮಸೀದಿ ಸಮಿತಿಯು ಅರ್ಜಿ ಸಲ್ಲಿಸಿದ್ದು ಈ ಭೂಮಿ ಅಧಿಸೂಚಿತ ವಕ್ಫ್ ಆಸ್ತಿಯಾಗಿದೆ. ಇದು ವಕ್ಫ್ ಕಾಯ್ದೆಯಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ವಕ್ಫ್ ನ್ಯಾಯಮಂಡಳಿ ಮಾತ್ರ ಅಂತಹ ವಿವಾದಗಳನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿದೆ ಎಂದು ವಾದಿಸಿತು.
ಆದಾಗ್ಯೂ, ಮಸೀದಿ ಇರುವ 0.195 ಎಕರೆ ಭೂಮಿಯನ್ನು ಮಾತ್ರ 1940 ರಲ್ಲಿ ಗುತ್ತಿಗೆಗೆ ನೀಡಲಾಗಿದೆ. ಅದು ಧ್ವಂಸ ಕಾರ್ಯಾಚರಣೆಯನ್ನು ಕೈಗೊಳ್ಳುತ್ತಿರುವ ಪಕ್ಕದ ಭೂಮಿಯನ್ನು ಒಳಗೊಂಡಿಲ್ಲ ಎಂದು ಎಂಸಿಡಿ ವಾದಿಸಿತು.
0.195 ಎಕರೆ ಭೂಮಿಯನ್ನು ಮೀರಿದ ಎಲ್ಲಾ ಕಟ್ಟಡಗಳು (ಮಸೀದಿಯನ್ನು ಹೊಂದಿರುವ) ಕೆಡವುವಿಕೆಯನ್ನು ಎದುರಿಸಬೇಕಾಗುತ್ತದೆ. ಮಸೀದಿಯ ವ್ಯವಸ್ಥಾಪಕ ಸಮಿತಿ ಅಥವಾ ದಿಲ್ಲಿ ವಕ್ಫ್ ಮಂಡಳಿಯು ಭೂಮಿಯ ಕಾನೂನುಬದ್ಧ ಸ್ವಾಧೀನವನ್ನು ಸ್ಥಾಪಿಸಲು ಯಾವುದೇ ದಾಖಲೆ ಪುರಾವೆಗಳನ್ನು ಸ್ವೀಕರಿಸಿಲ್ಲ ಎಂದು ಎಂಸಿಡಿ ಹೇಳಿತ್ತು. ಜನವರಿ 4 ರಂದು, ಅತಿಕ್ರಮಣ ಪ್ರದೇಶವನ್ನು ಗುರುತಿಸಲು ಎಂಸಿಡಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ, ಸ್ಥಳೀಯರು ಪ್ರತಿಭಟಿಸಿದ್ದರು. ನಂತರ ಅಧಿಕಾರಿಗಳು ಕೆಡವುವಿಕೆಯನ್ನು ನಡೆಸಬಹುದೆಂದು ಖಚಿತಪಡಿಸಿಕೊಳ್ಳಲು ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿತ್ತು
ಏತನ್ಮಧ್ಯೆ, ಮಸೀದಿ ಸಮಿತಿಯ ಅರ್ಜಿ ಬಗ್ಗೆ ನಿನ್ನೆ (ಬುಧವಾರ) ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿತು. ಹೈಕೋರ್ಟ್ ಎಂಸಿಡಿ, ನಗರಾಭಿವೃದ್ಧಿ ಸಚಿವಾಲಯ ಮತ್ತು ದಿಲ್ಲಿ ವಕ್ಫ್ ಮಂಡಳಿಯಿಂದ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಕೇಳಿತು. ಇದನ್ನು ಎಪ್ರಿಲ್ 22 ರಂದು ಹೆಚ್ಚಿನ ವಿಚಾರಣೆಗೆ ನಿಗದಿಪಡಿಸಲಾಗಿದೆ.
ಬುಧವಾರ (ಜನವರಿ 07) ಪುರಸಭೆಯ ಅಧಿಕಾರಿಗಳು ಮತ್ತು ಕಾರ್ಮಿಕರು ಕೆಡವುವ ಕಾರ್ಯಾಚರಣೆಗಾಗಿ 30 ಬುಲ್ಡೋಜರ್‌ಗಳು ಮತ್ತು 50 ಡಂಪ್ ಟ್ರಕ್‌ಗಳೊಂದಿಗೆ ಸ್ಥಳಕ್ಕೆ ಬಂದರು. ಅಧಿಕಾರಿಗಳೊಂದಿಗೆ ಬಂದ ಪೊಲೀಸ್ ತಂಡಗಳ ಮೇಲೆ ಸುಮಾರು 25-30 ಜನರು ಕಲ್ಲು ತೂರಾಟ ಆರಂಭಿಸಿದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಧಿಕಾರಿಗಳು ಒಂದು ಔಷಧಾಲಯ ಮತ್ತು ಬ್ಯಾಂಕ್ವೆಟ್ ಹಾಲ್ ಅನ್ನು ಕೆಡವಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.
ದಿಲ್ಲಿಯಲ್ಲಿ ಅತಿಕ್ರಮಣ ವಿರೋಧಿ ಅಭಿಯಾನದ ಮೂಲಕ ಮನೆ, ಅಂಗಡಿ ಮುಗ್ಗಟ್ಟುಗಳನ್ನು ಕೆಡವುವ ಕಾರ್ಯಾಚರಣೆ ಇದೇ ಮೊದಲಲ್ಲ. 2019 ರಿಂದ ಇಲ್ಲಿ ತೆರವು ಕಾರ್ಯಾಚರಣೆಗಳು ನಡೆದಿದೆ. 2019 ರಿಂದ ರಾಷ್ಟ್ರ ರಾಜಧಾನಿಯಲ್ಲಿ ವಿವಿಧ ಸಂಸ್ಥೆಗಳು ಒಟ್ಟು 33,477 ನೆಲಸಮ ಕಾರ್ಯಾಚರಣೆಗಳನ್ನು ನಡೆಸಿದ್ದು, ಸುಮಾರು 20,643 ಜನರ ಮೇಲೆ ಇದು ಪರಿಣಾಮ ಬೀರಿದೆ ಎಂದು 2024ರಲ್ಲಿ ರಾಜ್ಯಸಭೆಯಲ್ಲಿ ಸಚಿವರು ಹೇಳಿದ್ದಾರೆ. 2023ರಲ್ಲಿ 16,138 ಕಟ್ಟಡ ನೆಲಸಮ ಮಾಡಲಾಗಿದ್ದು, ಈ ಪೈಕಿ 11,060 ಮನೆಗಳು ಮತ್ತು 23 ವಾಣಿಜ್ಯ ಘಟಕಗಳನ್ನು ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಕೆಡವಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ತೋಖನ್ ಸಾಹು ಅವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಅಂಕಿಅಂಶಗಳು ಏನು ಹೇಳುತ್ತವೆ?
ಕಳೆದ ಐದು ವರ್ಷಗಳಲ್ಲಿ ನೆಲಸಮ ಕಾರ್ಯಾಚರಣೆಯ ಪ್ರಮಾಣವು ಏಕರೂಪವಾಗಿಲ್ಲ. ಬದಲಿಗೆ, ಇದು ಇತ್ತೀಚೆಗೆ ಜಾಸ್ತಿಯಾಗಿದೆ. 2023 ರಲ್ಲಿ ಮಾತ್ರ 16,138 ಕೆಡವುವಿಕೆಗಳನ್ನು ನಡೆಸಲಾಗಿದ್ದು, ಇದು 2019 ರಿಂದ ತೆಗೆದುಕೊಂಡ ಒಟ್ಟು ಕ್ರಮಗಳಲ್ಲಿ ಅರ್ಧಕ್ಕಿಂತ ಹೆಚ್ಚು ಆಗಿದೆ. ಸೆಪ್ಟೆಂಬರ್ 2023 ರಲ್ಲಿ ದಿಲ್ಲಿಯಲ್ಲಿ ನಡೆದ G20 ಶೃಂಗಸಭೆಗೆ ಮುಂಚಿತವಾಗಿ ಕೈಗೊಳ್ಳಲಾದ ಸ್ವಚ್ಛತೆ ಮತ್ತು ಅತಿಕ್ರಮಣ ವಿರೋಧಿ ಅಭಿಯಾನಗಳು ಈ ಏರಿಕೆಗೆ ಕಾರಣವಾಗಿವೆ.
ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವಾಲದ ಮಾಹಿತಿ ಪ್ರಕಾರ
* 2019: 4,804 ಧ್ವಂಸಗಳು.
* 2020: 2,967 ಧ್ವಂಸಗಳು.
* 2021: 2,927 ಧ್ವಂಸಗಳು.
* 2022: 4,017 ಧ್ವಂಸಗಳು.
* 2023: 16,138 ಧ್ವಂಸಗಳು.
* 2024 (ಆಗಸ್ಟ್ ವರೆಗೆ): 2,624 ನೆಲಸಮ ಕಾರ್ಯಾಚರಣೆ ನಡೆದಿದೆ.
2023 ರಲ್ಲಿ ತೆರವು ಮಾಡಿದ 16,138 ಕಟ್ಟಡಗಳಲ್ಲಿ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರವು (DDA) 11,060 ವಸತಿಗಳು ಮತ್ತು 23 ವಾಣಿಜ್ಯ ಕಟ್ಟಡಗಳನ್ನು ಕೆಡವುವ ಜವಾಬ್ದಾರಿಯನ್ನು ಹೊಂದಿತ್ತು. 2019 ರಿಂದ ಡಿಡಿಎ 256 ನೆಲಸಮ ಕಾರ್ಯಾಚರಣೆ ಮೂಲಕ ಒಟ್ಟು 316.72 ಎಕರೆ ಭೂಮಿಯನ್ನು ಮರಳಿ ಪಡೆದುಕೊಂಡಿದೆ. ಈ ಕಾರ್ಯಾಚರಣೆಗಾಗಿ ತಗಲಿದ ವೆಚ್ಚ ಸರಿಸುಮಾರು 103.27 ಕೋಟಿ ರೂ.. ಈ ತೆರವು ಕಾರ್ಯಾಚರಣೆಗಳಿಗೆ ಕಾರಣ ಅನಧಿಕೃತ ಒತ್ತುವರಿ ,ಸರ್ಕಾರಿ ಭೂಮಿಯ ಅತಿಕ್ರಮಣ, ಕೊಳೆಗೇರಿ ನಿವಾಸಿಗಳ ಪುನರ್ವಸತಿ ಮತ್ತು ಸ್ಥಳಾಂತರ ಸೇರಿವೆ .ಸುಮಾರು 2462 ಜುಗ್ಗಿ ಝೋಪ್ರಿ (ಸ್ಲಂ) ನಿವಾಸಿಗಳಿಗೆ ಪುನರ್ವಸತಿ ಒದಗಿಸಲಾಗಿದೆ ಎಂದು ರಾಜ್ಯ ಸಚಿವರು ಹೇಳಿದ್ದರು.
►ಕಾನೂನು ರೀತಿ-ನೀತಿ
ದಿಲ್ಲಿಯ ಕೊಳೆಗೇರಿ ನಿವಾಸಿಗಳ ಭವಿಷ್ಯವನ್ನು ನಿಯಂತ್ರಿಸುವ ಪ್ರಾಥಮಿಕ ಕಾರ್ಯವಿಧಾನವೆಂದರೆ ದೆಹಲಿ ಕೊಳೆಗೇರಿ ಮತ್ತು ಜುಗ್ಗಿ ಝೋಪ್ರಿ ಪುನರ್ವಸತಿ ಮತ್ತು ಸ್ಥಳಾಂತರ ನೀತಿ, 2015. ಇದನ್ನು 2016 ರಲ್ಲಿ ಅನುಮೋದಿಸಲಾಯಿತು. ಈ ನೀತಿಯು "ಸ್ಥಳದಲ್ಲೇ" ಪುನರ್ವಸತಿಗೆ ಆದ್ಯತೆ ನೀಡುತ್ತದೆ, ಅಂದರೆ ನಿವಾಸಿಗಳಿಗೆ ಅದೇ ಭೂಮಿಯಲ್ಲಿ ಅಥವಾ 5 ಕಿಮೀ ವ್ಯಾಪ್ತಿಯಲ್ಲಿ ಪರ್ಯಾಯ ವಸತಿಯನ್ನು ಒದಗಿಸಬೇಕು.
ಆದಾಗ್ಯೂ, ಈ ರಕ್ಷಣೆಗೆ ಅರ್ಹತೆಯನ್ನು ಕಟ್ಟುನಿಟ್ಟಾದ ಮತ್ತು ಆಗಾಗ್ಗೆ ವಿವಾದಾತ್ಮಕ ಮಾನದಂಡಗಳಿಂದ ನಿಯಂತ್ರಿಸಲಾಗುತ್ತದೆ
1. ಕ್ಲಸ್ಟರ್ : ಜುಗ್ಗಿ ಝೋಪ್ರಿ (ಜೆಜೆ) ಕ್ಲಸ್ಟರ್ ಜನವರಿ 1, 2006 ಕ್ಕಿಂತ ಮೊದಲು ಅಸ್ತಿತ್ವದಲ್ಲಿರಬೇಕು.
2. ನಿವಾಸಿ ಅಧಿಕಾರಾವಧಿ: ವೈಯಕ್ತಿಕ ಕೊಳೆಗೇರಿ ನಿವಾಸಿಗಳು ಜನವರಿ 1, 2015 ಕ್ಕಿಂತ ಮೊದಲು ಕೊಳೆಗೇರಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಸಾಬೀತುಪಡಿಸಬೇಕು.
3. ಕ್ಲಸ್ಟರ್ ಗಾತ್ರ: ಕೊಳೆಗೇರಿ ಕನಿಷ್ಠ 50 ಮನೆಗಳನ್ನು ಒಳಗೊಂಡಿರಬೇಕು.
ಈ ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸದ ಕ್ಲಸ್ಟರ್‌ಗಳು "ಅಧಿಕಾರಶಾಹಿ ಶೂನ್ಯ" ಎಂದು ವಿವರಿಸುವ ವ್ಯಾಪ್ತಿಗೆ ಬರುತ್ತವೆ. ಹೀಗಿದ್ದರೆ ಅಲ್ಲಿ ನಿವಾಸಿಗಳಿಗೆ ಯಾವುದೇ ಕಾನೂನು ರಕ್ಷಣೆ ಮತ್ತು ಪುನರ್ವಸತಿ ಹಕ್ಕಿಲ್ಲ. ಇದಲ್ಲದೆ, ಅರ್ಹತೆ ಪಡೆದವರಿಗೂ ಸಹ, ಸ್ಥಳಾಂತರ ನಿರಂತರ ಸಮಸ್ಯೆಯಾಗಿಯೇ ಉಳಿದಿದೆ. ಕಳೆದ ಮೂರು ವರ್ಷಗಳಲ್ಲಿ ಡಿಡಿಎ 5,185 ಮನೆಗಳನ್ನು ಕೆಡವಿದ್ದರೂ, ಅಶೋಕ್ ವಿಹಾರ್, ಕಲ್ಕಾಜಿ ಮತ್ತು ನರೇಲಾದಂತಹ ಪ್ರದೇಶಗಳಲ್ಲಿ ಕೇವಲ 3,043 ಮನೆಗಳಿಗೆ - ಸರಿಸುಮಾರು 17,015 ಜನರಿಗೆ ಪರ್ಯಾಯ ಫ್ಲಾಟ್‌ಗಳನ್ನು ಒದಗಿಸಲಾಗಿದೆ.
►ಬಡವರಿಗೆ ಸಂಕಷ್ಟ
ತೆರವು ಕಾರ್ಯಾಚರಣೆ ವೇಳೆ ಬೀದಿ ಪಾಲಾದವರಲ್ಲಿ ಹೆಚ್ಚಿನವರು ನಗರದ ದುಡಿಯುವ ಬಡವರು, ಗೃಹ ಕಾರ್ಮಿಕರು, ನಿರ್ಮಾಣ ಕಾರ್ಮಿಕರು ಮತ್ತು ಆಟೋ-ರಿಕ್ಷಾ ಚಾಲಕರು. ಈ ಕಾರ್ಯಾಚರಣೆಗಳಿಂದ 27,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಕನಿಷ್ಠ 9,000 ಜನರಿಗೆ ಯಾವುದೇ ರೀತಿಯ ಪುನರ್ವಸತಿ ನಿರಾಕರಿಸಲಾಗಿದೆ ಎಂದು ʼನ್ಯೂಸ್‌ಲಾಂಡ್ರಿʼ ವರದಿ ಮಾಡಿದೆ.
ವಿವಾದದ ನಿರ್ಣಾಯಕ ಅಂಶವೆಂದರೆ ಕಾರ್ಯವಿಧಾನದ ಸುರಕ್ಷತಾ ಕ್ರಮಗಳ ಉಲ್ಲಂಘನೆ. ಸುಪ್ರೀಂಕೋರ್ಟ್ ಮಾರ್ಗಸೂಚಿಗಳು ಈ ರೀತಿ ಕಾರ್ಯಾಚರಣೆ ಮಾಡುವ ಮೊದಲು ನಿವಾಸಿಗಳಿಗೆ ಕನಿಷ್ಠ 15 ದಿನಗಳ ಲಿಖಿತ ಸೂಚನೆ ನೀಡಬೇಕು ಎಂದು ಆದೇಶಿಸುತ್ತದೆ. ಪ್ರಾಯೋಗಿಕವಾಗಿ, ಇದನ್ನು ವಿರಳವಾಗಿ ಅನುಸರಿಸಲಾಗುತ್ತದೆ. ಉದಾಹರಣೆಗೆ:
* ಯಮುನಾ ಪ್ರವಾಹ ಪ್ರದೇಶದ ನಿವಾಸಿಗಳು ಮಾರ್ಚ್ 2023 ರಲ್ಲಿ ತಮ್ಮ ಮನೆಗಳನ್ನು ಧ್ವಂಸಗೊಳಿಸುವ ಮೊದಲು ಕೇವಲ ಮೂರು ದಿನಗಳ ಸೂಚನೆಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.
* ಕಲ್ಕಾಜಿಯ ಭೂಮಿಹೀನ್ ಶಿಬಿರದಲ್ಲಿ, ನಿವಾಸಿಗಳಿಗೆ ಕೇವಲ ನಾಲ್ಕು ದಿನಗಳ ಸೂಚನೆ ನೀಡಲಾಯಿತು.
* ತೈಮೂರ್ ನಗರದ ನಿವಾಸಿಗಳಿಗೆ ಒಂಬತ್ತು ದಿನಗಳ ಸೂಚನೆ ನೀಡಲಾಯಿತು.
►ದಿಲ್ಲಿಯಲ್ಲಿ ನಡೆದ ತೆರವು ಕಾರ್ಯಾಚರಣೆಗಳು (2025ರಲ್ಲಿ)
2025 ಮಾರ್ಚ್ 05: ಮಾರ್ಚ್ 5 ರಂದು, ಯಮುನಾ ನದಿ ತೀರ ಪ್ರದೇಶದಲ್ಲಿ ಅತಿಕ್ರಮಣ ವಿರೋಧಿ ಅಭಿಯಾನವನ್ನು ನಡೆಸಲಾಯಿತು . ವಿವಿಧ ಮಾಧ್ಯಮ ವರದಿಗಳ ಪ್ರಕಾರ ತೆರವು ಕಾರ್ಯಾಚರಣೆ ಆ ಪ್ರದೇಶದ ಸುಮಾರು 200 ಕುಟುಂಬಗಳ ಮೇಲೆ ಪರಿಣಾಮ ಬೀರಿದೆ. ಕೆಡವುವ ಕೇವಲ ಮೂರು ದಿನಗಳ ಮೊದಲು ನೋಟಿಸ್‌ಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.
ಎಪ್ರಿಲ್ 24: ಸೈನಿಕ್ ಫಾರ್ಮ್ಸ್
ಎಪ್ರಿಲ್ 24 ಮತ್ತು 26ರಂದು, ದಿಲ್ಲಿಯ ಅನಧಿಕೃತ ಆದರೆ ಶ್ರೀಮಂತ ಕಾಲೋನಿಯಾದ ಸೈನಿಕ್ ಫಾರ್ಮ್ಸ್‌ಗೆ ಬುಲ್ಡೋಜರ್‌ಗಳು ನುಗ್ಗಿದವು. ದಿಲ್ಲಿಯ ಲೆಫ್ಟಿನೆಂಟ್ ಜನರಲ್ ಅಧಿಕಾರಿ ವಿಕೆ ಸಕ್ಸೇನಾ ಅವರ ಆದೇಶದ ಮೇರೆಗೆ ಮೂರು ದಿನಗಳಲ್ಲಿ 1.25 ಎಕರೆ ಅತಿಕ್ರಮಣಗಳನ್ನು ತೆರವುಗೊಳಿಸಲಾಯಿತು.
ಮೇ 5: ತೈಮೂರ್ ನಗರ ಇಂದಿರಾ ಕ್ಯಾಂಪ್
ಡಿಸೆಂಬರ್ 2024 ರಲ್ಲಿ ದಿಲ್ಲಿ ಹೈಕೋರ್ಟ್ ನೀಡಿದ ಆದೇಶದ ಮೇರೆಗೆ, ಡಿಡಿಎ ಸ್ಥಳೀಯ ಚರಂಡಿಯ ಉದ್ದಕ್ಕೂ ಇರುವ ತೈಮೂರ್ ನಗರದಲ್ಲಿ 100 ಕಟ್ಟಡಗಳನ್ನು ನೆಲಸಮಗೊಳಿಸಿತು. ಮೇ 5 ರಂದು ಸುಮಾರು 480 ನಿವಾಸಿಗಳನ್ನು ಸ್ಥಳಾಂತರಿಸಲಾಯಿತು. ಚರಂಡಿಯ ಉದ್ದಕ್ಕೂ ಇರುವ ಅತಿಕ್ರಮಣಗಳನ್ನು ಕೆಡವುವುದನ್ನು ತಡೆಯಲು ಹೈಕೋರ್ಟ್ ನಿರಾಕರಿಸಿತ್ತು
ಮೇ 5: ವಜೀರ್‌ಪುರ
ವಾಯುವ್ಯ ದಿಲ್ಲಿಯ ವಜೀರ್‌ಪುರದಲ್ಲಿ ರೈಲ್ವೆ ಮಾರ್ಗಗಳ ಉದ್ದಕ್ಕೂ ಹಲವಾರು ನೆಲಸಮ ಕಾರ್ಯಾಚರಣೆಗಳು ನಡೆದವು. ಮೊದಲ ಕಾರ್ಯಾಚರಣೆಯು ವಜೀರ್‌ಪುರ ರೈಲ್ವೆ ಮಾರ್ಗದಲ್ಲಿ ಮೇ 5 ರಂದು ನಡೆಯಿತು, ಇದರಲ್ಲಿ 220 ಮನೆಗಳು ನೆಲಸಮಗೊಂಡವು. ಇದು ಸುಮಾರು 1,056 ಜನರ ಮೇಲೆ ಪರಿಣಾಮ ಬೀರಿತು.
ಜೂನ್ 1: ಮದ್ರಾಸಿ ಕ್ಯಾಂಪ್
ಜೂನ್ 1 ರಂದು ನೆಲಸಮಗೊಳಿಸಲಾದ ಮತ್ತೊಂದು ಕೊಳಚೆ ಪ್ರದೇಶವೆಂದರೆ ಮದ್ರಾಸಿ ಕ್ಯಾಂಪ್. ಇದನ್ನು ಜೂನ್ 1 ರಂದು ನೆಲಸಮ ಮಾಡಲಾಯಿತು. DUSIB ಲೆಕ್ಕ ಹಾಕಿದ 370 ಕುಟುಂಬಗಳಲ್ಲಿ ರೈಲ್ವೆ ಒಡೆತನದ ಭೂಮಿಯಲ್ಲಿ ಕೇವಲ 189 ಕುಟುಂಬಗಳಿಗೆ ಮಾತ್ರ ಪುನರ್ವಸತಿ ನೀಡಲಾಯಿತು. ಸುಮಾರು 900 ಜನರು ಮನೆ ಕಳೆದುಕೊಂಡರು. ಅರ್ಹ ನಿವಾಸಿಗಳಿಗೆ ಅವರ ಪ್ರಸ್ತುತ ನಿವಾಸದಿಂದ ಕನಿಷ್ಠ 50 ಕಿ.ಮೀ ದೂರದಲ್ಲಿರುವ ನರೇಲಾದಲ್ಲಿ ಮನೆ ನೀಡಲಾಯಿತು.
ಜೂನ್ 2: ಮಾಡೆಲ್ ಟೌನ್, ವಜೀರ್‌ಪುರ
ಜೂನ್ 2 ರಂದು ಮಾಡೆಲ್ ಟೌನ್‌ನಲ್ಲಿ ರೈಲ್ವೆ ಹಳಿಯ ಒಂದು ಬದಿಯಲ್ಲಿರುವ ಜುಗ್ಗಿಗಳನ್ನು ಉತ್ತರ ರೈಲ್ವೆ ಕೆಡವಿತು. ರೈಲ್ವೆ ಸಿಗ್ನಲ್‌ಗಳ ಗೋಚರತೆಯನ್ನು ಪುನಃಸ್ಥಾಪಿಸಲು ಮತ್ತು ಕಾರ್ಯಾಚರಣೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಕೆಡವುವಿಕೆ ಅಗತ್ಯ ಎಂದು ರೈಲ್ವೆ ಹೇಳಿದೆ. ದಿಲ್ಲಿ ವಸತಿ ಹಕ್ಕುಗಳ ಕಾರ್ಯಪಡೆಯ ಪ್ರಕಾರ ಸುಮಾರು 200 ಮನೆಗಳನ್ನು ನೆಲಸಮ ಮಾಡಲಾಯಿತು, 960 ಜನರನ್ನು ಸ್ಥಳಾಂತರಿಸಲಾಯಿತು.
ಜೂನ್ 10: ವಜೀರ್‌ಪುರ
ಜೂನ್ 10 ರಂದು, ವಜೀರ್‌ಪುರ ಕೈಗಾರಿಕಾ ಪ್ರದೇಶದಲ್ಲಿ 100 ಮನೆಗಳನ್ನು ನೆಲಸಮ ಮಾಡಿ ಕನಿಷ್ಠ 480 ಜನರನ್ನು ಸ್ಥಳಾಂತರಿಸಲಾಯಿತು.
ಜೂನ್ 11: ಭೂಮಿಹೀನ್ ಕ್ಯಾಂಪ್
ಜೂನ್ 11 ರಂದು, ಭೂಮಿಹೀನ್ ಕ್ಯಾಂಪ್‌ನಲ್ಲಿ ಐದು ಎಕರೆ ಭೂಮಿಗೆ ಸಮಾನವಾದ 344 ಮನೆಗಳನ್ನು ನೆಲಸಮ ಮಾಡಲಾಯಿತು.
ಜೂನ್ 16: ಅಶೋಕ್ ವಿಹಾರ್
ಜೂನ್ 16 ರಂದು, ಅಶೋಕ್ ವಿಹಾರ್‌ನ ಜೈಲೋರ್‌ವಾಲಾ ಬಾಗ್ ಪ್ರದೇಶದಲ್ಲಿ ಸುಮಾರು 200 ಕಟ್ಟಡಗಳು ನೆಲಸಮವಾದವು. ಡಿಡಿಎ ದಾಖಲೆಗಳ ಪ್ರಕಾರ, ಹತ್ತಿರದ ಸ್ವಾಭಿಮಾನ್ ಅಪಾರ್ಟ್‌ಮೆಂಟ್‌ಗಳಲ್ಲಿ 1,078 ಮನೆಗಳಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಆದರೆ 567 ಮನೆಗಳನ್ನು ಅನರ್ಹವೆಂದು ಘೋಷಿಸಲಾಗಿದ್ದು, ಸುಮಾರು 2,800 ಜನರಿಗೆ ಪುನರ್ವಸತಿ ಇಲ್ಲವಾಗಿದೆ.
►ರಾಜಕೀಯ ಜಟಾಪಟಿ
ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅತಿಶಿ ಮತ್ತು ಅರವಿಂದ್ ಕೇಜ್ರಿವಾಲ್ ಸೇರಿದಂತೆ ಎಎಪಿ ನಾಯಕರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು "ಎಲ್ಲರಿಗೂ ವಸತಿ" ಎಂಬ ಭರವಸೆಯನ್ನು ಮುರಿದಿದೆ ಎಂದು ಆರೋಪಿಸಿದ್ದಾರೆ. ಕೇಜ್ರಿವಾಲ್ ತಮ್ಮ ಅಧಿಕಾರಾವಧಿಯಲ್ಲಿ 37 ಕೊಳೆಗೇರಿಗಳನ್ನು ತೆರವು ಕಾರ್ಯಾಚರಣೆಯಿಂದ ರಕ್ಷಿಸಿರುವುದಾಗಿ ಎಂದು ಹೇಳಿಕೊಂಡಿದ್ದಾರೆ. ಆದರೆ ಪ್ರಸ್ತುತ ದಿಲ್ಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ, ನ್ಯಾಯಾಲಯದ ಆದೇಶದ ಮೇರೆಗೆ ಈ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ. ಎಎಪಿ ಈ ವಿಷಯವನ್ನು "ರಾಜಕೀಯಗೊಳಿಸುತ್ತಿದೆ" ಎಂದು ಹೇಳಿದ್ದಾರೆ.