×
Ad

ಮಹಾರಾಷ್ಟ್ರ ಪುರಸಭೆ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ಮೈತ್ರಿ; ಏನಿದು ವಿವಾದ?

Update: 2026-01-07 23:49 IST

ಸಾಂದರ್ಭಿಕ ಚಿತ್ರ | Photo Credit ; PTI

ಮಹಾರಾಷ್ಟ್ರದ ಸ್ಥಳೀಯ ಬಿಜೆಪಿ ಘಟಕಗಳು ಅಂಬರನಾಥ್ ಪುರಸಭೆಯಲ್ಲಿ ಕಾಂಗ್ರೆಸ್ ಜೊತೆ ಮತ್ತು ಅಕೋಟ್ ಪುರಸಭೆಯಲ್ಲಿ AIMIM ಜೊತೆ ಮೈತ್ರಿ ಮಾಡಿಕೊಂಡು ಎರಡು ಸ್ಥಳೀಯ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ್ದು, ಇದು ರಾಜ್ಯದ ಎರಡು ರಾಷ್ಟ್ರೀಯ ಪಕ್ಷಗಳ ನಾಯಕತ್ವದ ಆಕ್ರೋಶಕ್ಕೆ ಕಾರಣವಾಗಿದೆ. ಈ ಮೈತ್ರಿ ಎಲ್ಲೆಡೆ ಟೀಕೆಗೆ ಗುರಿಯಾದಾಗ, ರಾಜ್ಯ ಬಿಜೆಪಿ ನಾಯಕತ್ವವು ಈ ಸ್ಥಳೀಯ ಮೈತ್ರಿಗಳಿಂದ ದೂರವಿದ್ದು, ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿತು. ಇತ್ತ ಕಾಂಗ್ರೆಸ್ ತನ್ನ ಅಂಬರನಾಥ್ ಘಟಕವನ್ನು ವಿಸರ್ಜಿಸಿತು. ಮುಂಬೈ ಮಹಾನಗರ ಪ್ರದೇಶದ ಅಂಬರನಾಥ್ ಪುರಸಭೆಯಲ್ಲಿ, ಬಿಜೆಪಿ ತನ್ನ ಮಿತ್ರ ಪಕ್ಷವಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾವನ್ನ ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಜೊತೆ ಕೈಜೋಡಿಸಿತು. ಅದೇ ವೇಳೆ ವಿದರ್ಭದ ಅಕೋಲಾ ಜಿಲ್ಲೆಯ ಅಕೋಟ್ ಪುರಸಭೆಯಲ್ಲಿ ಅಧಿಕಾರ ಪಡೆಯಲು ಬಿಜೆಪಿ, ಅಸದುದ್ದೀನ್ ಉವೈಸಿಯ ಎಐಎಂಐಎಂ ಮತ್ತು ಇತರ ಪಕ್ಷಗಳೊಂದಿಗೆ ಕೈಜೋಡಿಸಿತ್ತು.

ಈ ವಿಷಯದ ಬಗ್ಗೆ ಬಿಜೆಪಿಯ ರಾಜ್ಯ ನಾಯಕತ್ವವು ಅಕೋಟ್ ಮತ್ತು ಅಂಬರನಾಥ್ ಸ್ಥಳೀಯ ನಾಯಕತ್ವಕ್ಕೆ ನೋಟಿಸ್ ಕಳುಹಿಸಿದ್ದು ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

ABP ನ್ಯೂಸ್ ನೆಟ್‌ವರ್ಕ್‌ ಜತೆ ಮಾತನಾಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, “ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಕಾಂಗ್ರೆಸ್ ಮತ್ತು ಎಐಎಂಐಎಂ ಜೊತೆಗಿನ ಯಾವುದೇ ಮೈತ್ರಿಯನ್ನು ನಾವು ಸಹಿಸುವುದಿಲ್ಲ. ಈ ಮೈತ್ರಿಯನ್ನು ಮುರಿಯಬೇಕಾಗುತ್ತದೆ. ಸ್ಥಳೀಯ ಮಟ್ಟದಲ್ಲಿ ಯಾರಾದರೂ ಏನಾದರೂ ಹೇಳಿದ್ದರೆ, ಅದು ತಪ್ಪು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಏತನ್ಮಧ್ಯೆ, ರಾಜ್ಯ ಕಾಂಗ್ರೆಸ್ ನಾಯಕತ್ವವು ತನ್ನ ಅಂಬರನಾಥ್ ಅಧ್ಯಕ್ಷ ಪ್ರದೀಪ್ ಪಾಟೀಲ್ ಅವರನ್ನು ಅಮಾನತುಗೊಳಿಸಿ ಘಟಕವನ್ನು ವಿಸರ್ಜಿಸಿದೆ.

ನಾಯಕರ ಪ್ರತಿಕ್ರಿಯೆ ಏನು?:

“ನಾವು ಎಲ್ಲಿಯೂ ಬಿಜೆಪಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಸ್ಥಳೀಯ ಮಟ್ಟದಲ್ಲಿ, ಚುನಾವಣೆಯ ನಂತರ ಯಾವುದೇ ಮೈತ್ರಿಗಳು ರಚನೆಯಾಗುತ್ತಿದ್ದರೆ, ಅವರು ನಮ್ಮ ಅನುಮತಿಯನ್ನು ಪಡೆಯಬೇಕು. ನಾವು ಎಲ್ಲರಿಗೂ ಈ ಸೂಚನೆಗಳನ್ನು ನೀಡಿದ್ದೇವೆ. ನಾವು ಬಿಜೆಪಿಯೊಂದಿಗೆ ಎಲ್ಲಿಯೂ ಮೈತ್ರಿ ಮಾಡಿಲ್ಲ. ಭವಿಷ್ಯದಲ್ಲಿ ಅವರೊಂದಿಗೆ ಮೈತ್ರಿ ಮಾಡುವ ಪ್ರಶ್ನೆಯೇ ಇಲ್ಲ . ನಮ್ಮ ಸ್ಥಳೀಯ ತಾಲೂಕು ಅಧ್ಯಕ್ಷರು ಮತ್ತು ಅಲ್ಲಿನ ಕೌನ್ಸಿಲರ್‌ಗಳಿಂದ ನಾವು ಸ್ಪಷ್ಟೀಕರಣವನ್ನು ಕೇಳಿದ್ದೇವೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಹೇಳಿದ್ದಾರೆ.

ಅಂಬರನಾಥ್‌ನಲ್ಲಿ ಪಕ್ಷದ ಅಂಗಸಂಸ್ಥೆಗಳು ಮತ್ತು ಚಿಹ್ನೆಗಳನ್ನು ಬದಿಗಿಟ್ಟು, ವಿವಿಧ ಪಕ್ಷದ ಕಾರ್ಯಕರ್ತರು ಸ್ಥಳೀಯ ಮಟ್ಟದ ಶಿಂಧೆ ನೇತ್ವದ ಶಿವಸೇನೆ ನಡೆಸಿದ ಭ್ರಷ್ಟಾಚಾರದ ವಿರುದ್ಧ Ambernath Development Front ರಚಿಸಿದ್ದಾರೆ. ಇದರಲ್ಲಿ ಸ್ವತಂತ್ರ ಅಭ್ಯರ್ಥಿಗಳೂ ಸೇರಿದ್ದಾರೆ. ಆದ್ದರಿಂದ, ಕಾಂಗ್ರೆಸ್ ಮತ್ತು ಬಿಜೆಪಿ ಜತೆಯಾಗಿವೆ ಎಂದು ಹೇಳುವ ವರದಿಗಳು ತಪ್ಪಾಗಿವೆ. ದಯವಿಟ್ಟು ಗಮನಿಸಿ ಎಂದು ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ Xನಲ್ಲಿ ಪೋಸ್ಟ್ ಮಾಡಿದ್ದಾರೆ.

►"ಇದು ಒಳ್ಳೆಯದಲ್ಲ"

ಕಾಂಗ್ರೆಸ್ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ (ಎಂಪಿಸಿಸಿ) ಉಪಾಧ್ಯಕ್ಷ ಗಣೇಶ್ ಪಾಟೀಲ್ ಅವರು ಅಂಬರನಾಥ್ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಪ್ರದೀಪ್ ಪಾಟೀಲ್ ಅವರಿಗೆ ಪತ್ರ ಬರೆದು ಪಕ್ಷದ ನಿರ್ಧಾರವನ್ನು ತಿಳಿಸಿದ್ದಾರೆ. ಪತ್ರದಲ್ಲಿ, "ನಾವು ಕಾಂಗ್ರೆಸ್ ಚಿಹ್ನೆಯಲ್ಲಿ ಚುನಾವಣೆಗಳನ್ನು ಎದುರಿಸಿ ನಾವು 12 ಸ್ಥಾನಗಳನ್ನು ಗೆದ್ದಿದ್ದೇವೆ, ಆದರೆ ರಾಜ್ಯ ನಾಯಕತ್ವ ಅಥವಾ ರಾಜ್ಯ ಕಚೇರಿಗೆ ತಿಳಿಸದೆ, ನೀವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೀರಿ, ಇದು ಮಾಧ್ಯಮ ಮೂಲಗಳ ಮೂಲಕ ನಮಗೆ ತಿಳಿದುಬಂದಿದೆ. ಇದು ಒಳ್ಳೆಯದಲ್ಲ, ಆದ್ದರಿಂದ ರಾಜ್ಯ ಅಧ್ಯಕ್ಷ ಹರ್ಷವರ್ಧನ್ ಅವರ ಸೂಚನೆಯ ಪ್ರಕಾರ, ನಿಮ್ಮನ್ನು ಪಕ್ಷದಿಂದ ಅಮಾನತುಗೊಳಿಸಲಾಗುತ್ತಿದೆ" ಎಂದು ಹೇಳಿದ್ದಾರೆ

ಬಿಜೆಪಿ ಉತ್ತರಿಸಬೇಕು: ಶ್ರೀಕಾಂತ್ ಶಿಂಧೆ

ಮಹಾರಾಷ್ಟ್ರ ಬಿಜೆಪಿಯು ಅಂಬರ್‌ನಾಥ್‌ನಲ್ಲಿ ಕಾಂಗ್ರೆಸ್ ಮತ್ತು ಅಕೋಟ್‌ನಲ್ಲಿ ಎಐಎಂಐಎಂ ಜೊತೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ ಪಕ್ಷವು ಅಂತಹ ನಿರ್ಧಾರಗಳನ್ನು ವಿವರಿಸಬೇಕು ಎಂದು ಹೇಳಿದರು.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಕಲ್ಯಾಣ್‌ನ ಲೋಕಸಭಾ ಸಂಸದ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ, ಬಿಜೆಪಿ ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಮತ್ತು ಎಐಎಂಐಎಂ ಜೊತೆ ಮೈತ್ರಿ ಮಾಡಿಕೊಂಡಿದ್ದರೆ, ಅದಕ್ಕೆ ಬಿಜೆಪಿ ಉತ್ತರಿಸಬೇಕು ಎಂದು ಹೇಳಿದ್ದಾರೆ.

ಈ ಮೈತ್ರಿಗಳು ಹೇಗೆ ಮತ್ತು ಏಕೆ ರೂಪುಗೊಂಡವು ಎಂಬುದರ ಕುರಿತು ಮಾಧ್ಯಮಗಳು ಬಿಜೆಪಿ ನಾಯಕರನ್ನು ಕೇಳಬೇಕು. ಅವರಿಗೆ ವಿವರವಾದ ಪ್ರತಿಕ್ರಿಯೆಯನ್ನು ನೀಡಲು ಸಾಧ್ಯವಾಗುತ್ತದೆ. ಶಿವಸೇನಾ ಯಾವಾಗಲೂ ಕಾಂಗ್ರೆಸ್ ಅನ್ನು ಸೈದ್ಧಾಂತಿಕವಾಗಿ ವಿರೋಧಿಸಿದೆ. ಬಾಳಾಸಾಹೇಬ್ ಠಾಕ್ರೆ ತಮ್ಮ ರಾಜಕೀಯ ಜೀವನದುದ್ದಕ್ಕೂ ಕಾಂಗ್ರೆಸ್ ಅನ್ನು ನಿರಂತರವಾಗಿ ವಿರೋಧಿಸುತ್ತಿದ್ದರು. ಇಂದು ಅಂತಹ ಮೈತ್ರಿಗಳು ನಡೆಯುತ್ತಿದ್ದರೆ, ಅವುಗಳನ್ನು ಬಿಜೆಪಿ ವಿವರಿಸಬೇಕು. ಕಾಂಗ್ರೆಸ್‌ಗೆ ನಮ್ಮ ವಿರೋಧ ದೃಢವಾಗಿತ್ತು ಮತ್ತು ಹಾಗೆಯೇ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

ಬಿಜೆಪಿಯನ್ನು ಟೀಕಿಸಿದ ಶಿಂಧೆ, ಮಹಾಯುತಿ ಕೇಂದ್ರದಲ್ಲಿ, ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ. ಪುರಸಭೆ ಚುನಾವಣೆಗಳಲ್ಲಿ ಅದು ಉತ್ತಮ ಪ್ರದರ್ಶನ ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ಮಟ್ಟದಲ್ಲಿ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುತ್ತಿದೆ? ನಾವು ಯಾರ ಸಿದ್ಧಾಂತದ ವಿರುದ್ಧ ಹೋರಾಡಿದೆವೋ ಅವರೊಂದಿಗೆ ಅಧಿಕಾರವನ್ನು ಹಂಚಿಕೊಳ್ಳುತ್ತಿದ್ದರೆ, ಅದಕ್ಕೆ ಬಿಜೆಪಿ ಉತ್ತರಿಸಬೇಕು ಎಂದಿದ್ದಾರೆ.

ಶಿಂಧೆ ಪಾಳಯದ ಶಾಸಕ ಬಾಲಾಜಿ ಕಿನಿಕರ್, ಈ ಮೈತ್ರಿಯನ್ನು "ಅಪವಿತ್ರ ಮೈತ್ರಿ" ಎಂದು ಕರೆದಿದ್ದು ಬಿಜೆಪಿ ದ್ರೋಹ ಮಾಡಿದೆ ಎಂದಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತನಾಡಿದ ಪಕ್ಷ ಈಗ ಕಾಂಗ್ರೆಸ್ ಜೊತೆ ಆಡಳಿತ ನಡೆಸುತ್ತಿದೆ. ಇದು ಶಿವಸೇನೆಯ ಬೆನ್ನಿಗೆ ಚೂರಿ ಹಾಕುವುದಲ್ಲದೆ ಬೇರೇನೂ ಅಲ್ಲ" ಎಂದು ಆರೋಪಿಸಿದ್ದಾರೆ.

►ಅಂಬರನಾಥ್ ಮತ್ತು ಅಕೋಟ್‌ನಲ್ಲಿ ಏನೇನಾಯ್ತು?

ಥಾಣೆ ಜಿಲ್ಲೆಯ ಅಂಬರನಾಥ್‌ನಲ್ಲಿ, ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿ 60 ಸ್ಥಾನಗಳಲ್ಲಿ 14 ಸ್ಥಾನಗಳನ್ನು ಗೆದ್ದಿತು. ಮಹಾಯುತಿ ಸರ್ಕಾರದಲ್ಲಿ ಬಿಜೆಪಿಯ ಮಿತ್ರ ಪಕ್ಷವಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ, ತವರು ಕ್ಷೇತ್ರವಾದ ಥಾಣೆ ಜಿಲ್ಲೆಯ ಭಾಗವಾಗಿರುವ ಕೌನ್ಸಿಲ್‌ನಲ್ಲಿ 27 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ಬಿಜೆಪಿಯ ಸ್ಥಳೀಯ ಘಟಕವು ಕಾಂಗ್ರೆಸ್‌ನ ಸ್ಥಳೀಯ ಘಟಕ ಮತ್ತು ಅಜಿತ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಒಬ್ಬ ಸ್ವತಂತ್ರ ಅಭ್ಯರ್ಥಿಯೊಂದಿಗೆ ಮೈತ್ರಿ ಮಾಡಿಕೊಂಡು 31 ಕೌನ್ಸಿಲರ್‌ಗಳ 'ಅಂಬರನಾಥ್ ವಿಕಾಸ್ ಅಘಾಡಿ'ಯನ್ನು ರಚಿಸಿದ್ದು ಕೌನ್ಸಿಲ್‌ನಲ್ಲಿ ಬಹುಮತವನ್ನು ಪಡೆಯಿತು.

ಪಕ್ಷದ ಸ್ಥಳೀಯ ಘಟಕವು ಡಿಸೆಂಬರ್ 31 ರಂದು ಥಾಣೆ ಜಿಲ್ಲಾಧಿಕಾರಿಗೆ ಪತ್ರ ಸಲ್ಲಿಸಿ ಈ ಒಕ್ಕೂಟದ ಬಗ್ಗೆ ಕಚೇರಿಗೆ ತಿಳಿಸಿತು. ಬಿಜೆಪಿಯ ಅಭಿಜಿತ್ ಕರಂಜುಲೆ ಪಾಟೀಲ್ ಗುಂಪಿನ ನಾಯಕರಾಗಿದ್ದರು.

ವಿದರ್ಭದ ಅಕೋಲಾ ಜಿಲ್ಲೆಯ ಅಕೋಟ್‌ನಲ್ಲಿ, ಕಳೆದ ತಿಂಗಳು 33 ಸ್ಥಾನಗಳಿಗೆ ಚುನಾವಣೆ ನಡೆದ 35 ಸದಸ್ಯರ ಸ್ಥಳೀಯ ಸಂಸ್ಥೆಯಲ್ಲಿ 11 ಕೌನ್ಸಿಲರ್‌ಗಳೊಂದಿಗೆ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಈ ಚುನಾವಣೆಯಲ್ಲಿ AIMIM ಐದು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಪುರಸಭೆಯ ಮೇಲೆ ಹಿಡಿತ ಸಾಧಿಸಲು, ಬಿಜೆಪಿಯ ಸ್ಥಳೀಯ ನಾಯಕತ್ವವು ಎರಡು ಶಿವಸೇನೆ, ಎರಡು ಎನ್‌ಸಿಪಿ ಮತ್ತು ಬಚ್ಚು ಕಾಡು ನೇತೃತ್ವದ ಪ್ರಹಾರ್ ಜನಶಕ್ತಿ ಪಕ್ಷವನ್ನು ಒಳಗೊಂಡ 'ಅಕೋಟ್ ವಿಕಾಸ್ ಮಂಚ್' ಅನ್ನು ರಚಿಸಿತು.

AIMIM ಕೌನ್ಸಿಲರ್‌ಗಳು ಸಹ ಈ ಮೈತ್ರಿಕೂಟದ ಭಾಗವಾಗಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ವಂಚಿತ್ ಬಹುಜನ್ ಅಘಾಡಿ ವಿರೋಧ ಪಕ್ಷದಲ್ಲಿದೆ.

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾದ ರಾಜ್ಯಸಭಾ ಸಂಸದ ಸಂಜಯ್ ರಾವತ್, "AIMIM ನಮ್ಮ ಸುತ್ತಲೂ ಇಲ್ಲ, ನಾವು ಅವರ ಸುತ್ತಲೂ ಇಲ್ಲ. ಆದರೆ ಬಿಜೆಪಿ AIMIM ಜೊತೆ ಗುಪ್ತ ಮೈತ್ರಿ ಹೊಂದಿದೆ. ಅಕೋಟ್‌ನಂತಹ ಕೆಲವು ಸ್ಥಳಗಳಲ್ಲಿ ಅದು ಬಹಿರಂಗವಾಗಿದೆ. ಇದು ಅವರ ದ್ವಂದ್ವ ನೀತಿಯಾಗಿದೆ. ಕಾಂಗ್ರೆಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಕೂಡ "ತಪ್ಪು" ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News