×
Ad

ಪ್ರವಾಸಿಗರ ಜೇಬಿಗೆ ಕತ್ತರಿಯೆ? ಶ್ರೀಲಂಕಾ ಮತ್ತು ರಿಷಿಕೇಶದ ಪ್ರವಾಸ ವೆಚ್ಚದ ಅಂತರ ನೋಡಿ ಬೆರಗಾದ ನೆಟ್ಟಿಗರು

Update: 2026-06-26 22:40 IST

ಸಾಂದರ್ಭಿಕ ಚಿತ್ರ | Photo Credit : NDTV 

ದೇಶಿ ಪ್ರವಾಸೋದ್ಯಮಕ್ಕೆ ವಿದೇಶಿ ಪ್ರವಾಸವನ್ನು ಹೋಲಿಸಿದಾಗ ಭಾರತದಲ್ಲಿ ಹೋಟೆಲ್ ದರಗಳು ದುಬಾರಿಯಾಗುತ್ತಿರುವುದಕ್ಕೆ ಕಾರಣವೇನು?

ಭಾರತದಲ್ಲಿ ದೇಶೀಯ ಪ್ರವಾಸೋದ್ಯಮದ ಬೆಲೆಗಳನ್ನು ಅತಿಯಾಗಿ ಏರಿಸಲಾಗಿದೆಯೇ? ಇತ್ತೀಚೆಗೆ ದಿಲ್ಲಿ ಮೂಲದ ಉದ್ಯಮಿಯೊಬ್ಬರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ನೋಡಿದರೆ ಹಾಗೆನಿಸುತ್ತದೆ. ಅವರು ರಿಷಿಕೇಶ ಮತ್ತು ಶ್ರೀಲಂಕಾ ಪ್ರಯಾಣದ ವೆಚ್ಚಗಳನ್ನು ಹೋಲಿಸುವ ಪೋಸ್ಟ್ ಹಾಕಿದ್ದು, ಭಾರತದಲ್ಲಿ ಏರುತ್ತಿರುವ ದೇಶೀಯ ಪ್ರವಾಸೋದ್ಯಮದ ಬೆಲೆಗಳ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.

AI ಪ್ಲಾಟ್‌ಫಾರ್ಮ್ ನಿರ್ಮಿಸುವ ಉದ್ಯಮಿ ಪರಿಷ್ ಶರ್ಮಾ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಪ್ರಕಾರ, ಅವರ ಸ್ನೇಹಿತರು ರಿಷಿಕೇಶ ಪ್ರವಾಸಕ್ಕಾಗಿ ಹೋಟೆಲ್‌ಗಳನ್ನು ಪರಿಶೀಲಿಸಿದಾಗ, ದಿನಕ್ಕೆ 9,000 ರೂ.ರಿಂದ 15,000 ರೂ. ಒಳಗೆ ಉತ್ತಮ ಹೋಟೆಲ್‌ಗಳು ಲಭ್ಯವಿದ್ದವು. ಅದೇ ಸಮಯದಲ್ಲಿ ಮುಂಬೈನಿಂದ ದಿಲ್ಲಿಗೆ ಯವಿಮಾನ ಪ್ರಯಾಣದ ಒಂದು ಮಾರ್ಗದ ಟಿಕೆಟ್‌ಗೆ 7,000 ರೂ.ರಿಂದ 8,000 ರೂ.ವರೆಗೆ ಪಾವತಿಸಬೇಕಾಗುತ್ತಿತ್ತು. ಇದೇ ಬಜೆಟ್‌ನಲ್ಲಿ ಅವರ ಸ್ನೇಹಿತ ಶ್ರೀಲಂಕಾ ಪ್ರವಾಸವನ್ನು ಬುಕ್ ಮಾಡಿದರು. ಅಲ್ಲಿ ಅವರಿಗೆ ಪ್ರತಿ ರಾತ್ರಿಗೆ ಸಮುದ್ರಕ್ಕೆ ಎದುರಾಗಿರುವ ಐದು ನಕ್ಷತ್ರಗಳ ಹೋಟೆಲ್‌ಗಳು 3,000 ರೂ.ರಿಂದ 5,000 ರೂ. ಒಳಗೆ ಲಭ್ಯವಾಗಿದ್ದವು. ಶುದ್ಧ ಗಾಳಿ, ಹೆಚ್ಚು ಶಾಂತಿಯುತ ವಾತಾವರಣ ಮತ್ತು ಪ್ರವಾಸೋದ್ಯಮ ಸ್ನೇಹಿ ವ್ಯವಸ್ಥೆಗಳಿಂದ ಶ್ರೀಲಂಕಾ ಹಣಕ್ಕೆ ಉತ್ತಮ ಮೌಲ್ಯ ಒದಗಿಸಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಹೀಗಾಗಿ, ಭಾರತೀಯ ಪ್ರವಾಸೋದ್ಯಮವು ನೀಡುವ ಸೌಲಭ್ಯಗಳಿಗೆ ಹೋಲಿಸಿದರೆ ದುಬಾರಿಯಾಗುತ್ತಾ ಹೋಗುತ್ತಿದೆ. ಈ ಪರಿಸ್ಥಿತಿಯಲ್ಲಿ ಜನರು ಬೇರೆಡೆ ಉತ್ತಮ ಮೌಲ್ಯವನ್ನು ಹುಡುಕುತ್ತಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅನೇಕ ಪ್ರಯಾಣಿಕರು ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹೋಟೆಲ್ ಮತ್ತು ವಿಮಾನ ಪ್ರಯಾಣದ ವೆಚ್ಚಗಳು ಏರುತ್ತಿವೆ. ಆದರೆ ಪ್ರವಾಸೋದ್ಯಮ ಮೂಲಸೌಕರ್ಯ ಕಳಪೆಯಾಗಿದ್ದು, ನೈರ್ಮಲ್ಯದ ಕೊರತೆಯೂ ಇದೆ ಎಂದು ಅವರು ಹೇಳಿದ್ದಾರೆ.

ಕ್ಯಾಬ್ ಮಾಫಿಯಾದಿಂದ ಹಿಡಿದು ಶಾಪಿಂಗ್ ಮಾಫಿಯಾವರೆಗೆ ಪ್ರವಾಸದ ಅನುಭವ ಹಾಳಾಗುತ್ತದೆ ಎಂದು ಕೆಲವರು ಬರೆದಿದ್ದಾರೆ. ಆದರೆ, ಇನ್ನೂ ಕೆಲವರು ಭಾರತ ಮತ್ತು ಶ್ರೀಲಂಕಾದ ಕರೆನ್ಸಿಗಳ ನಡುವಿನ ಮೌಲ್ಯದ ಅಂತರವನ್ನು ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News