Gen Zಯ ಒಂದು ವರ್ಗ ಸಾಮಾಜಿಕ ಜಾಲತಾಣಗಳಿಂದ ದೂರ ಸರಿಯುತ್ತಿರುವುದೇಕೆ?
ಸಾಂದರ್ಭಿಕ ಚಿತ್ರ | Photo Credit : freepik
ವಯಸ್ಕರಿಂದ ಆರಂಭಿಸಿ Gen Z ಎಂದು ಕರೆಯಲಾಗುವ 20ರಿಂದ 30ರ ವಯಸ್ಸಿನೊಳಗಿನವರವರೆಗೆ ಒಂದು ವರ್ಗ ಸಾಮಾಜಿಕ ಜಾಲತಾಣಗಳಿಂದ ದೂರ ಸರಿಯುತ್ತಿದೆ. ಜಾಲತಾಣಗಳನ್ನು ಬಳಸಿದರೂ ತಮ್ಮ ಗುರುತನ್ನು ಬಿಡದಂತೆ ಜಾಗರೂಕತೆ ವಹಿಸುತ್ತಿದ್ದಾರೆ!
ಒಂದೆಡೆ Gen Z ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳನ್ನು ಹಾಕುವ ಮೂಲಕ ಇನ್ಫ್ಲೂಯೆನ್ಸರ್ ಆಗಿ ಲಕ್ಷಾಂತರ ದುಡಿಯುತ್ತಿದ್ದಾರೆ. ಅದೇ ಸಂದರ್ಭದಲ್ಲಿ Gen Z ನ ಮತ್ತೊಂದು ವರ್ಗ ಸಾಮಾಜಿಕ ಜಾಲತಾಣಗಳಿಂದ ದೂರ ಸರಿಯುತ್ತಿದೆ. ಸಾಮಾಜಿಕ ಜಾಲತಾಣದ ಚಟ ತಮ್ಮ ವೃತ್ತಿಜೀವನಕ್ಕೆ ಮಾರಕವಾಗಬಹುದು ಎಂದು ಕೆಲವರು ಪರಿಗಣಿಸಿದರೆ, ಇನ್ನು ಕೆಲವರು ತಮ್ಮ ಜೀವನದ ಗೌಪ್ಯತೆ ಕಾಪಾಡುವ ಅಗತ್ಯವಿದೆ ಎಂದು ಸಾಮಾಜಿಕ ಜಾಲತಾಣಗಳಿಂದ ದೂರ ಸರಿದಿದ್ದಾರೆ. ಇನ್ನೊಂದು ವರ್ಗ ಸಾಮಾಜಿಕ ಜಾಲತಾಣ ತಮ್ಮ ಬಹಳಷ್ಟು ಸಮಯವನ್ನು ಕಸಿಯುತ್ತಿರುವ ಕಾರಣ ಚಟ ಬಿಡಬೇಕು ಎಂದು ದೂರ ಸರಿದಿದ್ದಾರೆ.
ಭಾರತದಲ್ಲಿ ಸಾಮಾಜಿಕ ಜಾಲತಾಣದ ಆರಂಭಿಕ ಹಂತ ‘Orkut’ನಿಂದಲೇ ಪ್ರಾರಂಭಿಸಿದ ಮಹಿಳೆಯೊಬ್ಬರು ಹೇಳುವ ಪ್ರಕಾರ ಕಳೆದ ಹತ್ತು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಮತ್ತು ವೈಯಕ್ತಿಕ ವಿವರಗಳನ್ನು ಹಾಕುವುದು, ಬರೆದುಕೊಳ್ಳುವುದನ್ನು ಬಿಟ್ಟಿದ್ದಾರೆ. ಅದೇ ವಯಸ್ಸಿನ ಮತ್ತೊಬ್ಬ ಮಹಿಳೆ ಫೇಸ್ಬುಕ್ ನಲ್ಲಿ ಇದ್ದರೂ ಸ್ವಂತಕ್ಕೆ ಸಂಬಂಧಿಸಿದ ಯಾವುದೇ ವಿವರಗಳನ್ನು ಎಂದಿಗೂ ಪ್ರಕಟಿಸಿಲ್ಲ. ಇದು 35-40ರ ವಯಸ್ಸಿನ ಮಹಿಳೆಯರು ಸಾಮಾಜಿಕ ಜಾಲತಾಣಗಳಿಂದ ಹಿಂಜರಿದ ವಿಚಾರ. ಆದರೆ ಇದೀಗ Gen Z ಎಂದು ಕರೆಯಲಾಗುವ 20ರಿಂದ 30ರ ವಯಸ್ಸಿನೊಳಗಿನವರು ಏಕೆ ಸಾಮಾಜಿಕ ಜಾಲತಾಣಗಳಿಂದ ದೂರ ಸರಿಯುತ್ತಿದ್ದಾರೆ?
ಮಾನಸಿಕ ತಜ್ಞರು ಇದನ್ನು ಚರ್ಚಿಸಬೇಕಾದ ವಿಷಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದು ʼಟೆಕ್ಫೋಬಿಯಾʼ ಅಲ್ಲ, ಸೋಷಿಯಲ್ ಮೀಡಿಯಾ ಫೋಬಿಯಾ ಎಂದು ಬೇಕಾದರೆ ಹೇಳಬಹುದು. ಟೆಕ್ಫೋಬಿಯ ಎಂದರೆ ಎಲ್ಲಾ ರೀತಿಯ ಗಜೆಟ್ ಕುರಿತ ಭಯ ಆವರಿಸಬೇಕು. “ಇದೊಂದು ನಿಜಕ್ಕೂ ಚರ್ಚೆಗೆ ಒಳಪಡಬೇಕಾದ ವಿಷಯ. ಸಾಮಾಜಿಕ ಜಾಲತಾಣದಿಂದ ದೂರ ಸರಿಯವುದು ವೈಯಕ್ತಿಕ ಆಯ್ಕೆ. ಆದರೆ ವ್ಯಕ್ತಿಗಳು ಇತರರಿಂದ ಬರುವ ಕಮೆಂಟ್ಗಳಿಗೆ ಬಹಳ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ ಎಂದಾದಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವುದೇ ಉತ್ತಮ” ಎಂದು ಮಾನಸಿಕ ತಜ್ಞರಾದ ಗಣೇಶ್ ಪ್ರಸಾದ್ ಮುದ್ರಾಜೆ ಅಭಿಪ್ರಾಯಪಟ್ಟಿದ್ದಾರೆ.
► ಸಾಮಾಜಿಕ ಜಾಲತಾಣದ ಚಟ ಬಿಡುವ ಪ್ರಯತ್ನ
22ರ ವಯಸ್ಸಿನ ಪತ್ರಕರ್ತನಾಗಿರುವ ಮಹೇಶ್ ಅವರಿಗೆ ಸಾಮಾಜಿಕ ಜಾಲತಾಣ ಬಳಕೆ ಅತಿ ಅಗತ್ಯವಾಗಿದೆ. “ನನಗೂ ಸಾಮಾಜಿಕ ಜಾಲತಾಣ ಚಟವಾಗಿರುವುದು ಅನುಭವವಾಗಿ ಎರಡು ವರ್ಷ ಸಂಪೂರ್ಣವಾಗಿ ಬಳಕೆಯನ್ನು ತೊರೆದಿದ್ದೆ. ನಾನು ಯಾವಾಗಲೂ ಮೊಬೈಲ್ ನಲ್ಲೇ ಇರುತ್ತಿದ್ದೆ. ಸಂಬಂಧಿಕರು, ಮನೆಯವರು, ಸ್ನೇಹಿತರು ಯಾರು ಜೊತೆಗಿದ್ದರೂ ಕೇರ್ ಮಾಡ್ತಾ ಇರಲಿಲ್ಲ. ಒಬ್ಬನೇ ಮೊಬೈಲ್ ಅಲ್ಲಿ ಮಗ್ನ. ಅದು ಯಾವತ್ತೋ ಒಂದಿನ ಅನ್ನಿಸಿತು ನನ್ನನ್ನ ಮೊಬೈಲ್, ಸಾಮಾಜಿಕ ಜಾಲತಾಣ ಆಳೋದಕ್ಕೆ ಶುರು ಮಾಡಿದೆ ಅಂತ. ಆಗ 2 ವರ್ಷ ಬಳಸದೆ ಬಿಟ್ಟಿದ್ದೆ. ಈಗ ಕೆಲಸಕ್ಕೆ ಸೇರಿದ ಮೇಲೆ ಅನಿವಾರ್ಯ ಎಂದು ಇನ್ಸ್ಟಾಲ್ ಮಾಡಿಕೊಂಡಿದ್ದೇನೆ. ಆದರೆ, ಈಗ ಅಪರೂಪಕ್ಕೊಮ್ಮೆ ಬಳಸುತ್ತೇನೆ. ಸಾಮಾಜಿಕ ಜಾಲತಾಣಗಳಿಂದ ದೂರ ನಿಂತ ಮೇಲೆ ಮನಸ್ಸಿಗೆ ಸಮಾಧಾನ ಆಗಿದೆ, ಗಿಜಿಗಿಜಿ ತಪ್ಪಿದೆ” ಎಂದು ಅಭಿಪ್ರಾಯಪಟ್ಟರು.
► ಕೆಲಸಕ್ಕೆ ತೊಂದರೆ ನೀಡುತ್ತಿರುವ ಸಾಮಾಜಿಕ ಜಾಲತಾಣದ ಚಟ
ಶಿವಮೊಗ್ಗದ ನಿವಾಸಿಯಾಗಿರುವ 24 ಹರೆಯದ ಲೇಖಕಿ ದಿವ್ಯಶ್ರೀ ಅದರಂತೆ ಅವರು ಕಳೆದ ಒಂದು ವರ್ಷದಿಂದ ವಾಟ್ಸ್‌ಆ್ಯಪ್ ಹೊರತುಪಡಿಸಿ ಉಳಿದೆಲ್ಲಾ ಸಾಮಾಜಿಕ ಜಾಲತಾಣಗಳನ್ನು ತೊರೆದಿದ್ದಾರೆ. “ಇದೀಗ ಮನಸ್ಸಿಗೆ ಸಮಾಧಾನ ತಂದಿದೆ. ಸಂತೋಷವೆನಿಸುತ್ತಿದೆ. ನನ್ನ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸುತ್ತಿದ್ದೇನೆ. ನನಗಾಗಿ ಸಮಯ ದೊರೆತಿದೆ” ಎನ್ನುತ್ತಾರೆ ದಿವ್ಯಶ್ರೀ.
ಮುಂಬೈಯಲ್ಲಿ ಅನುವಾದಕಿಯಾಗಿ ಕೆಲಸ ಮಾಡುತ್ತಿರುವ 27ರ ಹರೆಯದ ಅನುವಾದಕಿಯಾಗಿರುವ ಪ್ರಾಜಕ್ತಾ ದೀಪಕ ಅಲಗೌಡರ ಪ್ರಕಾರ, “ಒಂದು ಸಮಯದಲ್ಲಿ ನಾನು ರೀಲ್ಸ್ ಮೊದಲಾಗಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಗ ನನ್ನ ವೃತ್ತಿಯ ಕೆಲಸಗಳನ್ನು ವಿಳಂಬ ಮಾಡುತ್ತಿದ್ದೆ. ಒಂದೊಮ್ಮೆ ಎಲ್ಲಾ ಆ್ಯಪ್ ಗಳನ್ನು ಡಿಲೀಟ್ ಮಾಡಿರುವುದೂ ಇದೆ. ಆದರೆ, ನಂತರ ಮತ್ತೆ ಇನ್ಸ್ಟಾಲ್ ಮಾಡಿಕೊಳ್ಳುತ್ತೇನೆ” ಎನ್ನುತ್ತಾರೆ. ಪ್ರಾಜಕ್ತಾ ಅವರು ಸಾಮಾಜಿಕ ಜಾಲತಾಣ ಚಟವಾಗದಂತೆ ಸಾಕಷ್ಟು ಮುತುವರ್ಜಿ ವಹಿಸುತ್ತಿದ್ದಾರೆ.
► ಗೌಪ್ಯತೆ ಕಾಪಾಡಿಕೊಂಡು ಸಾಮಾಜಿಕ ಜಾಲತಾಣದ ಬಳಕೆ
ಪ್ರಾಜಕ್ತಾ ಮತ್ತು ಮಹೇಶ್ ಹೇಳುವ ಪ್ರಕಾರ ಅವರು ಸಂಪೂರ್ಣವಾಗಿ ಸಾಮಾಜಿಕ ಜಾಲತಾಣದಿಂದ ಹೊರಬಂದಿಲ್ಲ. ಈಗಲೂ ರೀಲ್ಸ್ ನೋಡುತ್ತಾರೆ ಮತ್ತು ಬೇರೆಯವರು ಹಾಕಿರುವ ಪೋಸ್ಟ್ ಗಳನ್ನು ಗಮನಿಸುತ್ತಾರೆ. ಆದರೆ ಸ್ವಂತದ ವಿಷಯಗಳನ್ನು ಹಂಚಿಕೊಳ್ಳುವುದಿಲ್ಲ. “ಸಾಮಾಜಿಕ ಜಾಲತಾಣಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ವಿವರಗಳನ್ನು ಹಾಕುವುದರಿಂದ ವಂಚನೆಗೂ ದಾರಿಯಾಗಲಿದೆ” ಎಂದು ಪ್ರಾಜಕ್ತಾ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಕುಟುಂಬವೊಂದು ತಿರುಗಾಡಲೆಂದು ಈಶಾನ್ಯ ಭಾರತಕ್ಕೆ ಹೋಗಿದ್ದರು. ಅವರು ತಿರುಗಾಡುತ್ತಿದ್ದಾಗಲೇ ತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಮನೆಯಲ್ಲಿ ಯಾರೂ ಇಲ್ಲ ಎಂದು ತಿಳಿದುಕೊಂಡ ಕಳ್ಳರು ಮನೆಗೆ ದಾಳಿ ಮಾಡಿದ್ದಾರೆ. ಸುಮಾರು 25 ಲಕ್ಷ ರೂ.ಗಳಷ್ಟು ವಸ್ತುಗಳು ಕಳುವಾಗಿವೆ! ಇಂತಹ ಆನ್ಲೈನ್ ವಂಚನೆ ಇತ್ತೀಚೆಗೆ ಹೆಚ್ಚಾಗುತ್ತಿರುವ ಕಾರಣ ಸಾಮಾಜಿಕ ಜಾಲತಾಣದಲ್ಲಿ ಏನು ಹಾಕಬೇಕು ಮತ್ತು ಹಾಕಬಾರದು ಎನ್ನುವ ಕುರಿತು ವಿವೇಚನೆಯಿಂದ ನಡೆದುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳನ್ನು ಸಮತೋಲಿತವಾಗಿ ಬಳಸಬೇಕು ಎನ್ನುತ್ತಾರೆ ತಜ್ಞರು.
“ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಮತ್ತು ChatGPT ಅಥವಾ ಜೆಮಿನಿಯಿಂದಾಗಿ ನಮ್ಮ ಎಲ್ಲಾ ವಿವರಗಳೂ ಜನರಿಗೆ ತಿಳಿಯುತ್ತಿದೆ. ಹೀಗಾಗಿ ವಂಚನೆಗಳೂ ಹೆಚ್ಚಾಗಿವೆ. ಗೌಪ್ಯತೆ ಎನ್ನುವುದೇ ಇಲ್ಲ. ಎಲ್ಲವೂ ಎಲ್ಲರಿಗೂ ಗೊತ್ತಾಗುವ ಕಾರಣದಿಂದ ವಂಚನೆ ಹೆಚ್ಚಾಗುತ್ತಿದೆ” ಎನ್ನುತ್ತಾರೆ ಪ್ರಾಜಕ್ತಾ.
►ಆನ್ಲೈನ್ ಬಳಕೆಯಿಂದಾಗಿ ಪ್ರಾಡಕ್ಟ್ ಆಗುತ್ತಿರುವ ಆತಂಕ
ಇತ್ತೀಚೆಗೆ ಆಲ್ಗಾರಿದಂನಿಂದಾಗಿ ಡಾಟಾ ಬಹುಬೇಗನೇ ಕ್ಯಾಚ್ ಆಗಿಬಿಡುತ್ತದೆ. ನಮ್ಮ ಮೊಬೈಲ್ ಗಳ ಮೈಕ್ರೋಫೋನ್ಗಳಿಂದ ಆರಂಭಿಸಿ ಆನ್ಲೈನ್ ಹುಡುಕಾಟಗಳವರೆಗೆ ಎಲ್ಲವೂ ನೋಟೆಡ್ ಆಗಿರುತ್ತದೆ. ಈ ಬಗ್ಗೆ ವಿವರಿಸಿರುವ ಪ್ರಾಜಕ್ತಾ, “ನನಗೆ ಬಹಳ ಭಯವಾಗಿರುವ ಸಂಗತಿಯೆಂದರೆ ನಾವು ಏನಾದರೂ ಮಾತನಾಡಿದರೆ ಅಥವಾ ಆಲೋಚಿಸಿದರೂ ಸಹ ಮರುಕ್ಷಣದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅದಕ್ಕೆ ಸಂಬಂಧಿಸಿದ ಜಾಹೀರಾತು ಕಂಡುಬರುತ್ತದೆ. ಹೀಗಾಗಿ ನಮ್ಮ ಡಾಟಾ ಮತ್ತೊಬ್ಬರಿಗೆ ಸಿಗುತ್ತಿದೆ. ನಾವೊಂದು ಪ್ರೊಡಕ್ಟ್ ಆಗಿ ಬಿಟ್ಟಿದ್ದೇವೆ ಎನ್ನುವ ಭಾವನೆ ಬಂದುಬಿಟ್ಟಿದೆ” ಎನ್ನುತ್ತಾರೆ.
►ಸಾಮಾಜಿಕ ಜಾಲತಾಣದಲ್ಲಿ ʼಶೋಆಫ್ʼ ಆಗುತ್ತಿದೆಯೆ?
“ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಷಯಗಳನ್ನು ಹಾಕುವವರು ತಮ್ಮ ಸಂಭ್ರಮಕ್ಕಾಗಿ ಅದನ್ನು ಬರೆದುಕೊಳ್ಳುತ್ತಿಲ್ಲ. ತಾವು ಎಲ್ಲಿಗೆ ಊಟಕ್ಕೆ ಹೋಗಿದ್ದೇವೆ, ಎಷ್ಟು ಸುಖವಾಗಿದ್ದೇವೆ ಮತ್ತು ಸಂತೋಷದಿಂದ ಇದ್ದೇವೆ ಎನ್ನುವುದನ್ನು ಇತರರಿಗೆ ತೋರಿಸಲು ಫೋಟೋಗಳನ್ನು ಹಾಕುತ್ತಾರೆ. ಇದೊಂದು ರೀತಿಯ ಶೋ ಆಫ್ ಎಂದು ನನಗೆ ಅನಿಸುತ್ತದೆ” ಎನ್ನುತ್ತಾರೆ ಪ್ರಾಜಕ್ತಾ.
ಈ ಬಗ್ಗೆ ವಿಶ್ಲೇಷಿಸಿರುವ ಮುದ್ರಾಜೆ ಅವರು ಹೇಳುವ ಪ್ರಕಾರ, “ಗುರುತಿಸಿಕೊಳ್ಳಬೇಕು ಎನ್ನುವುದು ಜನರಲ್ಲಿರುವ ಸಹಜ ಪ್ರಚೋದನೆಯಾಗಿರುತ್ತದೆ. ಬಾಲ್ಯದಿಂದಲೇ ಈ ಪ್ರಚೋದನೆ ಬೆಳೆದು ಬಂದಿರುತ್ತದೆ. ಮಗುವನ್ನು ಪ್ರಶಂಸಿಸಿದರೆ ಖುಷಿಯಾಗಿಬಿಡುತ್ತದೆ. ಅದೇ ರೀತಿ ಬಾಲ್ಯದಿಂದಲೇ ಬೆಳೆದು ಬಂದಿರುವ ವರ್ತನೆ ಇದಾಗಿದೆ. ದೊಡ್ಡವರೂ ಅದಕ್ಕೆ ಭಿನ್ನವಾಗಿರುವುದಿಲ್ಲ. ತಮ್ಮ ಬಗ್ಗೆ ಹೇಳಿಕೊಳ್ಳುವುದು ಇತರರು ಲೈಕ್ ಮಾಡುವಾಗ ಖುಷಿಯಾಗುತ್ತದೆ. ಎಷ್ಟೋ ಮಂದಿ ರೋಗಿಗಳನ್ನು ನೋಡಿದ್ದೇನೆ. ಲೈಕ್ ಬಂದಿಲ್ಲ ಎಂದರೆ ಖಿನ್ನತೆಗೆ ಬೀಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ಗೆ ಲೈಕ್ ಬಂದಿಲ್ಲ ಎಂದರೆ ನನ್ನನ್ನು ಅಲಕ್ಷಿಸುತ್ತಿದ್ದಾರೆ ಎನ್ನುವ ಭಾವನೆ ಬರುವುದು. ನನ್ನ ಬಗ್ಗೆ ಯಾರಿಗೂ ಇಷ್ಟವಿಲ್ಲ ಎಂದು ತಮ್ಮ ವ್ಯಕ್ತಿತ್ವವನ್ನು ನೆಗೆಟಿವ್ ಆಗಿ ವಿಶ್ಲೇಷಿಸಲು ಆರಂಭಿಸುತ್ತಾರೆ. ಇಂತಹ ತುಡಿತವನ್ನು ವಾಟ್ಸ್‌ಆ್ಯಪ್, ಫೇಸ್ಬುಕ್ ಮೊದಲಾದ ಸಂಸ್ಥೆಗಳು ಬಳಸಿಕೊಳ್ಳಲು ತಮ್ಮ ಉತ್ಪನ್ನಗಳನ್ನು ಬಿಟ್ಟಿದ್ದಾರೆ”
ದಿವ್ಯಶ್ರೀ ಅವರೂ ಇಂತಹುದೇ ಕಳವಳ ವ್ಯಕ್ತಪಡಿಸಿದ್ದಾರೆ. “ಸಾಮಾಜಿಕ ಜಾಲತಾಣದಲ್ಲಿ ನಮ್ಮ ಪ್ರೊಫೈಲ್ ರೂಪಿಸುತ್ತಾರೆ ಮತ್ತು ಜಡ್ಜ್ ಮಾಡುತ್ತಾರೆ ಎಂದು ಅನಿಸಿದೆ. ನಾಲ್ಕು ವರ್ಷಗಳ ಹಿಂದೆ, ಫೇಸ್ಬುಕ್ ನಲ್ಲಿ ನನ್ನ ಖಾತೆ ತೆರೆದೆ. ಅದಕ್ಕಿಂತ ಮೊದಲು, ನನ್ನ ಆಪ್ತ ವಲಯ ಬಹಳ ಸೀಮಿತವಾಗಿತ್ತು. ನನ್ನ ಖಾತೆಯ ಮೂಲಕ ಆಲೋಚನೆಗಳನ್ನ ಬರೆದು ಹಂಚಿಕೊಳ್ಳುತ್ತಿದ್ದ ಕಾರಣಕ್ಕೆ, ಊಹೆಗೂ ನಿಲುಕದ ವಲಯವೊಂದು ಹತ್ತಿರವಾಯಿತು. ಮುಂದೆ ಇವರನ್ನು ಖುಷಿಯಾಗಿ ಇಡುವ ಸಲುವಾಗಿಯೇ ಬರೆಯುತ್ತಿದ್ದೇನೆ, ಫೋಟೋಗಳನ್ನ ಶೇರ್ ಮಾಡುತ್ತಿದ್ದೇನೆ ಅನ್ನಿಸಿದ್ದು ಸಹ ನಿಜ. ನಾನು ಏನಾಗಿದ್ದೇನೆ ಅನ್ನುವುದಕ್ಕಿಂತ ಮುಖ್ಯವಾಗಿ, ಅವರಿಗೆ ಹೇಗೇ ಕಾಣಬೇಕು ಅನ್ನುವ ಯೋಚನೆ ಶುರುವಾಯಿತು. ಇದರೊಂದಿಗೆ ಬೇರೆಯವರ ಪೋಸ್ಟ್ಗಳೊಂದಿಗೆ ನನ್ನನ್ನ ಹೋಲಿಸುಕೊಳ್ಳುವ ಕೆಟ್ಟ ಚಟ ಶುರುವಾಯಿತು. ಎಷ್ಟು ಲೈಕ್, ಎಷ್ಟು ಕಾಮೆಂಟ್ ಬಂದಿವೆ ಅನ್ನುವುದನ್ನೇ ನೋಡುತ್ತಾ ಕುಳಿತಿದ್ದ ನಾನು, ನನ್ನ ಮೇಲೆ ಗಮನ ಕೊಡಲೇ ಇಲ್ಲ, ಕೆಲವೇ ದಿನಗಳಲ್ಲಿ ನನ್ನೊಳಗಿದ್ದ ಒರಿಜಿನಲ್ ವ್ಯಕ್ತಿತ್ವವನ್ನ ಕಳೆದುಕೊಂಡು, ಸಮಾಜದ ಕಣ್ಣಿಗೆ ಹೇಗೇ ಬೇಕು ಹಾಗೇ ಒಂದು ಪ್ರೊಫೈಲ್ ನನಗೆ ಗೊತ್ತಿಲ್ಲದ ಹಾಗೇ ತಯಾರಾಯಿತು” ಎಂದು ಅಭಿಪ್ರಾಯಪಟ್ಟರು.
► ಸಾಮಾಜಿಕ ಜಾಲತಾಣ ತೊರೆದು ಸಮಾಧಾನ
ಸಾಮಾಜಿಕ ಜಾಲತಾಣ ತೊರೆದ ನಂತರ ಅನೇಕರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. “ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ದೂರ ನಿಂತ ಮೇಲೆ ಮನಸ್ಸಿಗೆ ಸಮಾಧಾನ ಆಗಿದೆ. ಮನಸ್ಸು ನನ್ನ ನಿಯಂತ್ರಣದಲ್ಲಿದೆ, ಯಾರದ್ದೋ ಕಾಮೆಂಟ್ ಗೆ ತಲೆ ಕೆಡಿಸಿಕೊಂಡು, ಇಡೀ ದಿನ ಹಾಳು ಮಾಡಿಕೊಳ್ಳುತ್ತಿದ್ದ ಪರಿಸ್ಥಿತಿಯಿಂದ ಹೊರಬಂದಿದ್ದೇನೆ. ನನ್ನ ಖುಷಿಗಾಗಿ, ನಂಗೆ ಏನು ಬೇಕು ಅದನ್ನಷ್ಟೇ ಮಾಡುತ್ತಾ, ನೆಮ್ಮದಿಯಿಂದ ಇದ್ದೇನೆ. ಟೀಕೆಗೆ ಒಳಗಾಗಿ, ಖಿನ್ನತೆಗೊಳಗಾಗುತ್ತಿದ್ದ ದಿನಗಳು ಈಗಿಲ್ಲ. ಈಗ ಯಾರೂ ನನ್ನನ್ನು ಗಮನಿಸುತ್ತಿಲ್ಲ ಎನ್ನುವ ಅನುಭವ ಆಗಿದೆ. ಇದು ಒಳ್ಳೇದು ಅಂತಾನೇ ಅನಿಸಿದೆ, ಕಾರಣ ಕೆಲವೊಮ್ಮೆ, ಯಾರೋ ಒಬ್ಬರು, ನಮ್ಮನ್ನೂ ಅತಿಯಾಗಿ ಗಮನಿಸುತ್ತಿದ್ದಾರೆ ಅಂತ ಗೊತ್ತಾದರೆ, ಆಗುವ ಕಿರಿಕಿರಿ ಸಾಮಾನ್ಯವಾದುದಲ್ಲ, ಹಾಗಾಗಿ ನನಗೆ ಈಗ ಅಂತ ಕಿರಿಕಿರಿ ಇಲ್ಲ” ಎಂದು ಉತ್ತರಿಸಿದರು ದಿವ್ಯಶ್ರೀ.
► ಪೂರ್ಣ ಇತಿಹಾಸ ತಿಳಿಯದೆ ಜಡ್ಜ್ ಮಾಡುವ ಆತಂಕ
21 ವರ್ಷ ವಯಸ್ಸಿನ ಕೇರಳದ ನಿವಾಸಿ ಧನುಷ್ ಪ್ರಕಾರ ಸಾಮಾಜಿಕ ಜಾಲತಾಣಗಳ ಕಾರಣದಿಂದ ದೈನಂದಿನ ಜೀವನದಲ್ಲಿ ನೈಜತೆ ಮರೆಯಾಗುತ್ತಿದೆ. ಓದನ್ನು ಮುಗಿಸಿ ಇನ್ನೇನು ಜುಲೈನಲ್ಲಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಲಿರುವ ಧನುಷ್ ಪ್ರಕಾರ, “ಇನ್ಸ್ಟಾಗ್ರಾಂನಂತಹ ವೇದಿಕೆಗಳಲ್ಲಿ ಎಲ್ಲವೂ ರಂಜನೀಯವಾಗಿ ಕಾಣಿಸುತ್ತದೆ ಮತ್ತು ಅದೊಂದು ರೀತಿಯ ಸುಸ್ತಾದ ಭಾವನೆ ತರುತ್ತದೆ. ಕೇವಲ ಲೈಕ್ಗಳು ಮತ್ತು ಮಾನ್ಯತೆಗಳಿಗಾಗಿ ನನ್ನ ವೈಯಕ್ತಿಕ ಜೀವನದ ಅಥವಾ ದೈನಂದಿನ ಜೀವನವನ್ನು ಸಾಮಾಜಿಕ ಜಾಲತಾಣದಲ್ಲಿ ತೋರಿಸಲು ನನಗೆ ಆಸಕ್ತಿ ಇಲ್ಲ. ಪೂರ್ಣ ಇತಿಹಾಸ ತಿಳಿದುಕೊಳ್ಳದೇ ಜನರು ಬೇಗನೇ ಜಡ್ಜ್ ಮಾಡುತ್ತಾರೆ. ನನ್ನ ಮಟ್ಟಿಗೆ ಆನ್ಲೈನ್ನಲ್ಲಿರುವುದೆಂದರೆ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೆಲಸಗಳನ್ನು ಹಂಚಿಕೊಳ್ಳುವುದು, ಕಲಿಕೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಹೊಸ ಅನ್ವೇಷಣೆಗಳನ್ನು ಅರ್ಥಮಾಡಿಕೊಳ್ಳುವುದೇ ವಿನಾ ಜೀವನಶೈಲಿಯನ್ನು ತೋರಿಸುವುದು ಅಲ್ಲ. ನನ್ನ ಖಾಸಗಿ ಜೀವನವನ್ನು ಕಂಟೆಂಟ್ ಆಗಿಸುವ ಬದಲಾಗಿ ಗೌಪ್ಯವಾಗಿ ಇಡಲು ಬಯಸುತ್ತೇನೆ. ಅತಿಯಾಗಿ ಹಂಚಿಕೊಳ್ಳುವುದರಿಂದ ಹಿಂದೆ ಸರಿದಿರುವುದರಿಂದ ಇತರರು ನನ್ನ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎಂದು ಚಿಂತಿಸುವ ಬದಲಾಗಿ ಮನಸ್ಸಿಗೆ ಸಮಾಧಾನ ತಂದಿದೆ.”