ಅಲ್ಪ ಹಸಿವಿನಿಂದ ನಿದ್ರೆಗೆ ಜಾರುವುದರಿಂದ ಪ್ರಯೋಜನಗಳೇನು?
ಸಾಂದರ್ಭಿಕ ಚಿತ್ರ | Photo: freepik.com
ಸ್ವಲ್ಪ ಮಟ್ಟಿಗೆ ಹಸಿವೆಯ ಅನುಭವ ಜೀರ್ಣಕ್ರಿಯೆಯನ್ನೂ ಹಾಗೂ ನಿದ್ರೆಯ ಗುಣಮಟ್ಟವನ್ನೂ ಉತ್ತಮಗೊಳಿಸುತ್ತದೆ. ಏಕೆಂದರೆ ಭಾರವಾದ ರಾತ್ರಿ ಭೋಜನವನ್ನು ಕರಗಿಸುವಲ್ಲಿ ದೇಹ ಅತಿಯಾಗಿ ವ್ಯಸ್ತವಾಗಿರುವುದಿಲ್ಲ.
ಆನ್‌ಲೈನ್‌ನಲ್ಲಿ ಪೌಷ್ಠಿಕಾಂಶ ತಜ್ಞರು ಹೇಳುವ ಪ್ರಕಾರ, ರಾತ್ರಿ ಮಲಗಲು ಹೋಗುವಾಗ ಹೊಟ್ಟೆಯನ್ನು ಸಂಪೂರ್ಣ ತುಂಬಿಸಿಕೊಳ್ಳಬಾರದು. ಸ್ವಲ್ಪ ಹಸಿವೆ ಉಳಿದಿರಬೇಕು. ದೇಹ ಕ್ಯಾಲರಿ ಕೊರತೆಯನ್ನು ಎದುರಿಸಿದಾಗ ಶೇಖರಿಸಿದ ಕೊಬ್ಬನ್ನು ಬಳಸಿಕೊಳ್ಳಲು ಆರಂಭಿಸುತ್ತದೆ. ಈ ಸಂದರ್ಭದಲ್ಲಿ ದೇಹ ಕೊಬ್ಬು ಬಳಕೆಗೆ ಹೆಚ್ಚು ಒಲವು ತೋರಿಸುತ್ತದೆ.
►ಅತಿ ಹಸಿವಿನಿಂದ ಮಲಗಬಾರದು
ಸ್ವಲ್ಪ ಹಸಿವೆಯಿಂದ ಇರುವುದು ಎಂದರೆ ಹಸಿವಿನಿಂದ ಮಲಗಬೇಕು ಎಂದರ್ಥವಲ್ಲ. ಅತಿ ಹಸಿವಿನಿಂದ ಮಲಗಲು ಹೋದರೆ ಒತ್ತಡದ ಹಾರ್ಮೋನ್‌ಗಳಾದ ಕಾರ್ಟಿಸೋಲ್ ನ ಮಟ್ಟ ಏರಿಕೆಯಾಗಬಹುದು. ಇದರಿಂದ ನಿದ್ರೆಗೆ ತೊಂದರೆಯಾಗಬಹುದು. ಪರಿಣಾಮವಾಗಿ ಬೆಳಗ್ಗೆ ಬೇಗನೇ ಎಚ್ಚರವಾಗುವ ಸಾಧ್ಯತೆ ಇದೆ ಮತ್ತು ಮರುದಿನ ಹಸಿವೆ ಇನ್ನಷ್ಟು ಹೆಚ್ಚಾಗಬಹುದು. ನಿದ್ರಾ ರಾಹಿತ್ಯವು ಕೊಬ್ಬು ಕರಗುವಿಕೆಯನ್ನು ನಿಧಾನಗೊಳಿಸಬಹುದು ಮತ್ತು ಒಟ್ಟು ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ.
►ಅಧಿಕ ಆಹಾರ ಸೇವಿಸಿ ಮಲಗಬಾರದು
ಮಲಗುವ ಮೊದಲು ಅತಿಯಾದ ಆಹಾರ ಸೇವನೆಯೂ ಸಮಸ್ಯೆಗಳಿಗೆ ಕಾರಣವಾಗಬಹುದು. ತಜ್ಞರ ಪ್ರಕಾರ, ತಡರಾತ್ರಿ ಹೆಚ್ಚಿನ ಆಹಾರ ಸೇವನೆಯಿಂದ ಇನ್ಸುಲಿನ್ ಮಟ್ಟ ಏರಿಕೆಯಾಗಬಹುದು. ಇದರಿಂದ ಕೊಬ್ಬು ಶೇಖರಣೆಯಾಗುವ ಸಾಧ್ಯತೆ ಹೆಚ್ಚುತ್ತದೆ. ನಿದ್ರೆಯ ಸಮಯದಲ್ಲೂ ಜೀರ್ಣಕ್ರಿಯೆ ಮುಂದುವರಿಯುವುದರಿಂದ ನಿದ್ರಾ ವ್ಯತ್ಯಯ, ಹೊಟ್ಟೆ ಉಬ್ಬರಿಸುವಿಕೆ ಉಂಟಾಗಬಹುದು. ಅಲ್ಲದೆ, ಆಮ್ಲದ ರಿಫ್ಲಕ್ಸ್ (ಹೊಟ್ಟೆಯ ಆಮ್ಲವು ಅನ್ನನಾಳಕ್ಕೆ ಹಿಮ್ಮುಖವಾಗಿ ಹರಿಯುವ ಸ್ಥಿತಿ) ಉಂಟಾಗಿ ಎದೆಯುರಿ ಹಾಗೂ ಅಸಹನೀಯತೆ ಎದುರಾಗಬಹುದು.
ಸರಿಯಾದ ನಿದ್ರೆ ಇಲ್ಲದಿದ್ದರೆ ಹಸಿವೆಯನ್ನು ನಿಯಂತ್ರಿಸುವ ಹಾರ್ಮೋನ್‌ಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಮರುದಿನ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವ ಸಾಧ್ಯತೆ ಇದೆ. ಇಂತಹ ಪ್ರವೃತ್ತಿ ಮುಂದುವರಿದರೆ ತೂಕ ಏರಿಕೆ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಳ ಮತ್ತು ನಿರಂತರ ಸುಸ್ತಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರಿಂದ ದೇಹದ ಚಯಾಪಚಯ ಕ್ರಿಯೆ ನಿಧಾನಗೊಳ್ಳುವ ಸಾಧ್ಯತೆ ಇದೆ.
►ಕಾರ್ಬೋಹೈಡ್ರೇಟ್ ಸೇವಿಸಿ ಮಲಗಬಾರದು
ಮಲಗುವ ಮುನ್ನ ಕಾರ್ಬೋಹೈಡ್ರೇಟ್‌ಗಳ ಸೇವನೆಯಿಂದ ಅವು ಸರಿಯಾಗಿ ಜೀರ್ಣವಾಗಲು ಕಷ್ಟವಾಗಬಹುದು. ಇದರ ಪರಿಣಾಮವಾಗಿ ತೂಕ ಏರಿಕೆ ಮತ್ತು ಆಮ್ಲದ ಸಮಸ್ಯೆಗಳು ಉಂಟಾಗಬಹುದು. ಹೊಟ್ಟೆ ನೋವು, ಅಸಹನೀಯತೆ, ನಿರಂತರ ಎದೆಯುರಿ ಮತ್ತು ಆಸಿಡಿಟಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ದೀರ್ಘಾವಧಿಯಲ್ಲಿ ಇದು ಗ್ಯಾಸ್ಟ್ರೋಇಸೋಫೇಜಿಯಲ್ ರಿಫ್ಲಕ್ಸ್ ರೋಗ (GERD) ಗೆ ಕಾರಣವಾಗುವ ಸಾಧ್ಯತೆ ಇದೆ.
►ತಡರಾತ್ರಿ ಊಟ ಮಾಡಬಾರದು
ಕೆಲವರು ತಡರಾತ್ರಿ ಊಟ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಇಂತಹವರಿಗೆ ಬೊಜ್ಜು, ಹೃದಯ ಸಂಬಂಧಿತ ಸಮಸ್ಯೆಗಳು ಮತ್ತು ಮಧುಮೇಹದ ಅಪಾಯ ಹೆಚ್ಚಾಗಬಹುದು. ವಿಶೇಷವಾಗಿ ಸಂಸ್ಕರಿತ ಆಹಾರಗಳನ್ನು ರಾತ್ರಿ ಸಮಯದಲ್ಲಿ ಸೇವಿಸುವುದರಿಂದ ಕೊಲೆಸ್ಟರಾಲ್ ಮತ್ತು ಕೊಬ್ಬಿನ ಶೇಖರಣೆ ಹೆಚ್ಚಾಗಿ ಅಪಧಮನಿಗಳು ಕಿರಿದಾಗುವ ಸಾಧ್ಯತೆ ಇದೆ.
►ಸ್ವಲ್ಪ ಹಸಿವಿನಿಂದ ಮಲಗುವುದು ಉತ್ತಮ
ಸಂಕ್ಷಿಪ್ತವಾಗಿ ಹೇಳುವುದಾದರೆ, ಸ್ವಲ್ಪ ಮಟ್ಟಿಗೆ ಹಸಿವೆಯಿಂದ ನಿದ್ರೆಗೆ ಜಾರುವುದರಿಂದ ಕೊಬ್ಬಿನ ನಷ್ಟಕ್ಕೆ ಸಹಕಾರಿಯಾಗಬಹುದು ಮತ್ತು ಉತ್ತಮ ನಿದ್ರೆಯೂ ಲಭಿಸಬಹುದು. ರಾತ್ರಿಯ ಭೋಜನ ಸಮತೋಲಿತವಾಗಿದ್ದು, ಬೇಗನೇ ಸೇವಿಸಿದರೆ ಇದು ಇನ್ನಷ್ಟು ಪರಿಣಾಮಕಾರಿಯಾಗುತ್ತದೆ. ಪ್ರೋಟೀನ್ ಮತ್ತು ಫೈಬರ್ ಅಂಶಗಳುಳ್ಳ ಆಹಾರವನ್ನು ಆಯ್ಕೆ ಮಾಡುವುದು ಸೂಕ್ತ.
ನಿದ್ರೆಗೆ ಜಾರುವ ಕೆಲ ಗಂಟೆಗಳ ಮೊದಲು ಆಹಾರ ಸೇವನೆಯನ್ನು ಕಡಿಮೆಗೊಳಿಸಿದಾಗ ಇನ್ಸುಲಿನ್ ಮಟ್ಟ ನಿಧಾನವಾಗಿ ಇಳಿಯುತ್ತದೆ. ಇನ್ಸುಲಿನ್ ಮಟ್ಟ ಕಡಿಮೆಯಾದಾಗ ದೇಹದಲ್ಲಿ ಕೊಬ್ಬು ಶೇಖರಣೆಯಾಗುವ ಬದಲು ಶೇಖರಿಸಿದ ಕೊಬ್ಬನ್ನು ಬಳಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತದೆ. ನಿದ್ರೆಯ ಸಮಯದಲ್ಲಿ ಬೆಳವಣಿಗೆಗೆ ಸಹಾಯಕವಾಗುವ ಹಾರ್ಮೋನ್‌ಗಳ ಮಟ್ಟ ಏರಿಕೆಯಾಗುತ್ತದೆ. ಇದು ಕೊಬ್ಬು ಕರಗಿಸುವಿಕೆ, ಸ್ನಾಯುಗಳ ಪುನಶ್ಚೇತನ ಮತ್ತು ದೇಹದ ಒಟ್ಟು ಚೇತರಿಕೆಗೆ ನೆರವಾಗುತ್ತದೆ. ಹೀಗಾಗಿ ಸ್ವಲ್ಪ ಮಟ್ಟಿನ ಹಸಿವೆಯ ಅನುಭವ ಜೀರ್ಣಕ್ರಿಯೆಯನ್ನೂ ಮತ್ತು ನಿದ್ರೆಯ ಗುಣಮಟ್ಟವನ್ನೂ ಉತ್ತಮಗೊಳಿಸಲು ಸಹಾಯಕವಾಗುತ್ತದೆ.