×
Ad

ಕಾರುಗಳು ಮಾತಾಡುತಾವ!

ರಸ್ತೆ ಅಪಘಾತಗಳಿಗೆ ಬ್ರೇಕ್ ಹಾಕಲು ಬರುತ್ತಿದೆ V2V ಸಂವಹನ ತಂತ್ರಜ್ಞಾನ

Update: 2026-01-10 22:39 IST

Photo Credit : Freepik

ರಸ್ತೆ ಅಪಘಾತಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಉದ್ದೇಶದಿಂದ ವಾಹನದಿಂದ ವಾಹನಕ್ಕೆ (V2V) ಸಂವಹನ ತಂತ್ರಜ್ಞಾನ ವ್ಯವಸ್ಥೆಯನ್ನು ಭಾರತದಲ್ಲಿಯೂ ಪರಿಚಯಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ತಿಳಿಸಿದ್ದಾರೆ. ಈ ತಂತ್ರಜ್ಞಾನವು ಕಾರುಗಳು ಪರಸ್ಪರ ನೇರವಾಗಿ ಸಂವಹನ ನಡೆಸಲು ಹಾಗೂ ಚಾಲಕರಿಗೆ ಸ್ವಯಂಚಾಲಿತ ಎಚ್ಚರಿಕೆಗಳನ್ನು ನೀಡಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

ಈ ವ್ಯವಸ್ಥೆಯ ಮೂಲಕ ವಾಹನಗಳು ಮೊಬೈಲ್ ಅಥವಾ ಇಂಟರ್ನೆಟ್ ನೆಟ್‌ವರ್ಕ್‌ಗಳ ಅವಲಂಬನೆಯಿಲ್ಲದೆ ಸುರಕ್ಷತಾ ಎಚ್ಚರಿಕೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. V2V ಸಂವಹನವು ವಾಹನಗಳ ಮುಂಭಾಗ, ಹಿಂಭಾಗ ಮತ್ತು ಬದಿಗಳಲ್ಲಿ ಕಾರ್ಯನಿರ್ವಹಿಸಲಿದೆ. ಇದು ವಾಹನ ಸಂಚರಿಸುವ ಪ್ರದೇಶ ಹಾಗೂ ರಸ್ತೆಯ ತಿರುವುಗಳನ್ನು ಗಮನಿಸಿ, ಅಪಾಯಗಳು ಚಾಲಕರಿಗೆ ಕಾಣಿಸದಿದ್ದರೂ ಸಹ ಮುನ್ನೆಚ್ಚರಿಕೆ ನೀಡುತ್ತದೆ.

ಈ ತಂತ್ರಜ್ಞಾನವನ್ನು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಗೆ ಸಂಯೋಜಿಸಲಾಗುತ್ತದೆ. ಪ್ರತಿ ವಾಹನಕ್ಕೆ ಇದರ ಅಂದಾಜು ವೆಚ್ಚ 5,000–7,000 ರೂಪಾಯಿ ಆಗಿರಲಿದೆ. ಮೊದಲ ಹಂತದಲ್ಲಿ ಸಚಿವಾಲಯವು ಅಗತ್ಯ ಮಾನದಂಡಗಳು ಮತ್ತು ನಿಯಮಾವಳಿಗಳನ್ನು ಅಂತಿಮಗೊಳಿಸುತ್ತಿದೆ. ನಂತರ ಅಧಿಸೂಚನೆಯ ಮೂಲಕ ಹೊಸ ವಾಹನಗಳಲ್ಲಿ ಈ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುತ್ತದೆ. ಹಂತ ಹಂತವಾಗಿ ಹಳೆಯ ವಾಹನಗಳಲ್ಲಿಯೂ ಅಗತ್ಯ ಮಾರ್ಪಾಡುಗಳನ್ನು ಮಾಡಲಾಗುತ್ತದೆ ಎಂದು ಗಡ್ಕರಿ ಹೇಳಿದರು.

ಈ ವ್ಯವಸ್ಥೆಯ ಅನುಷ್ಠಾನಕ್ಕಾಗಿ ದೂರಸಂಪರ್ಕ ಇಲಾಖೆಯು National Frequency Allocation Plan ಅಡಿಯಲ್ಲಿ ಉಚಿತ ಸ್ಪೆಕ್ಟ್ರಮ್ ಒದಗಿಸಲಿದೆ. V2V ಉದ್ದೇಶಕ್ಕಾಗಿ 30 MHz (5.875–5.905 GHz) ಆವರ್ತನ ಬಳಕೆಗೆ ದೂರಸಂಪರ್ಕ ಇಲಾಖೆ (DoT) ತಾತ್ವಿಕವಾಗಿ ಒಪ್ಪಿಗೆ ನೀಡಿದೆ. ಇದರಿಂದ ವಾಹನ ತಯಾರಕರು ಹಾಗೂ ಆನ್-ಬೋರ್ಡ್ ಘಟಕ ತಯಾರಕರು ಹೆಚ್ಚುವರಿ ಸ್ಪೆಕ್ಟ್ರಮ್ ವೆಚ್ಚವಿಲ್ಲದೆ ಈ ವ್ಯವಸ್ಥೆಯನ್ನು ನಿಯೋಜಿಸಲು ಸಾಧ್ಯವಾಗುತ್ತದೆ. ಪ್ರಸಕ್ತ ವರ್ಷದೊಳಗೆ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ಹೇಳಿದರು.

ರಸ್ತೆಗಳಲ್ಲಿ ವಾಹನಗಳು ನಿಂತಿರುವ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬರುವ ವಾಹನಗಳು ಡಿಕ್ಕಿ ಹೊಡೆಯುವ ಘಟನೆಗಳು, ಮಂಜು ಕವಿದ ವಾತಾವರಣದಲ್ಲಿ ಚಾಲನೆ ಮಾಡುವ ಸಂದರ್ಭಗಳಲ್ಲಿ ಸಂಭವಿಸುವ ಅಪಘಾತಗಳನ್ನು ತಡೆಯಲು ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದರು. ಈ ಸುರಕ್ಷತಾ ಮಾನದಂಡಗಳಿಗೆ ಕಾನೂನು ಬೆಂಬಲ ನೀಡುವ ಸಲುವಾಗಿ 2026ರ ಬಜೆಟ್ ಅಧಿವೇಶನದಲ್ಲಿ ಮೋಟಾರು ವಾಹನ ಕಾಯ್ದೆಗೆ 61 ತಿದ್ದುಪಡಿಗಳನ್ನು ಸರ್ಕಾರ ಪ್ರಸ್ತಾಪಿಸಲು ಉದ್ದೇಶಿಸಿದೆ ಎಂದರು.

V2V ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತದೆ?

ಈ ವ್ಯವಸ್ಥೆ ವಾಹನಗಳಲ್ಲಿ ಅಳವಡಿಸಲಾಗುವ ಸಿಮ್ ಕಾರ್ಡ್‌ಗೆ ಹೋಲುವ ಸಾಧನದ ಮೂಲಕ ಕಾರ್ಯನಿರ್ವಹಿಸುತ್ತದೆ. ಯಾವುದೇ ದಿಕ್ಕಿನಿಂದ ಮತ್ತೊಂದು ವಾಹನ ಅತಿಯಾಗಿ ಹತ್ತಿರ ಬಂದಾಗ, ವಾಹನಗಳು ನೈಜ-ಸಮಯದ ಎಚ್ಚರಿಕೆಗಳನ್ನು ಸ್ವೀಕರಿಸುತ್ತವೆ. ಗೋಚರತೆ ಬಹುತೇಕ ಶೂನ್ಯಕ್ಕೆ ಇಳಿಯುವ ಅಥವಾ ಮಂಜು ಕವಿದ ಪರಿಸ್ಥಿತಿಗಳಲ್ಲಿ ಚಾಲನೆ ಮಾಡುವಾಗ ಈ ವೈಶಿಷ್ಟ್ಯ ಅತ್ಯಂತ ಉಪಯುಕ್ತವಾಗಿರುತ್ತದೆ.

V2V ತಂತ್ರಜ್ಞಾನವು ಸುರಕ್ಷಿತ ವಾಹನ ಅಂತರಕ್ಕೆ ಸಂಬಂಧಿಸಿದ ಎಚ್ಚರಿಕೆಗಳನ್ನು ಒದಗಿಸುತ್ತದೆ. ಹತ್ತಿರದ ರಸ್ತೆಬದಿಯಲ್ಲಿ ಇರುವ ವಾಹನಗಳ ಬಗ್ಗೆ ಚಾಲಕರಿಗೆ ಮುನ್ನೆಚ್ಚರಿಕೆ ನೀಡುತ್ತದೆ. ವಾಹನದ ಎಲ್ಲಾ ಬದಿಗಳಿಂದ ಸಂಕೇತಗಳನ್ನು ಒದಗಿಸುವ ಮೂಲಕ 360-ಡಿಗ್ರಿ ಸಂವಹನವನ್ನು ಇದು ಖಚಿತಪಡಿಸುತ್ತದೆ. ಉದಾಹರಣೆಗೆ, ನಿಮ್ಮ ವಾಹನದ ಮುಂದೆ ಸುಮಾರು 200 ಮೀಟರ್ ದೂರದಲ್ಲಿರುವ ಕಾರು ಹಠಾತ್ತನೆ ಬ್ರೇಕ್ ಹಾಕಿದರೆ, ಆ ಕಾರು ನಿಮಗೆ ಗೋಚರಿಸದಿದ್ದರೂ ಸಹ ನಿಮ್ಮ ಕಾರಿನ ಡ್ಯಾಶ್‌ಬೋರ್ಡ್ ತಕ್ಷಣ ಎಚ್ಚರಿಕೆ ನೀಡುತ್ತದೆ.

ವೆಚ್ಚ ಎಷ್ಟು?

ಅಂದಾಜು ಯೋಜನಾ ವೆಚ್ಚ ಸುಮಾರು 5,000 ಕೋಟಿ ರೂಪಾಯಿ ಆಗಿರಲಿದೆ. ಈ ವ್ಯವಸ್ಥೆಗೆ ಗ್ರಾಹಕರಿಂದ ಶುಲ್ಕ ವಿಧಿಸಲಾಗುತ್ತದೆ. ಆದರೆ ಅದರ ಪ್ರಮಾಣವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. 2026ರ ಅಂತ್ಯದೊಳಗೆ ತಂತ್ರಜ್ಞಾನವನ್ನು ಅಳವಡಿಸುವ ಗುರಿಯನ್ನು ಸಾರಿಗೆ ಸಚಿವಾಲಯ ಹೊಂದಿದೆ. ಹಂತ ಹಂತವಾಗಿ ಎಲ್ಲಾ ವಾಹನಗಳಲ್ಲಿ ಈ ವ್ಯವಸ್ಥೆಯ ಅನುಷ್ಠಾನ ಪ್ರಾರಂಭವಾಗುತ್ತದೆ. ಆರಂಭದಲ್ಲಿ ಹೊಸ ವಾಹನಗಳಲ್ಲಿ ಮಾತ್ರ ಉಪಕರಣಗಳನ್ನು ಸ್ಥಾಪಿಸಲಾಗುತ್ತದೆ.

ಇದು ADAS ಜೊತೆಗೆ ಕಾರ್ಯನಿರ್ವಹಿಸುತ್ತದೆಯೇ?

V2V ಸಂವಹನ ವ್ಯವಸ್ಥೆ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಜೊತೆ ಸಮನ್ವಯವಾಗಿ ಕಾರ್ಯನಿರ್ವಹಿಸುತ್ತದೆ. ಕೆಲವು ಪ್ರೀಮಿಯಂ SUV ಗಳಲ್ಲಿ ಈಗಾಗಲೇ ಇದೇ ರೀತಿಯ ತಂತ್ರಜ್ಞಾನ ಅಸ್ತಿತ್ವದಲ್ಲಿದೆ. ಆದರೆ V2V ನೆಟ್‌ವರ್ಕ್ ಅವಲಂಬಿತವಲ್ಲದ ಸಂವೇದಕಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಭಾರತದಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವಲ್ಲಿ ಮತ್ತು ಒಟ್ಟಾರೆ ಸಂಚಾರ ಸುರಕ್ಷತೆಯನ್ನು ಸುಧಾರಿಸುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಅಧಿಕಾರಿಗಳು ನಂಬಿದ್ದಾರೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ವಿ. ಉಮಾಶಂಕರ್ ಮಾತನಾಡಿ, ಈ ಕ್ರಮವು ಅಸ್ತಿತ್ವದಲ್ಲಿರುವ ಸುರಕ್ಷತಾ ವೈಶಿಷ್ಟ್ಯಗಳನ್ನು ಹೇಗೆ ಬಲಪಡಿಸುತ್ತದೆ ಎಂಬುದು ವಾಹನದ ಸಂವೇದಕಗಳು ಪತ್ತೆಹಚ್ಚುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ ಎಂದರು. ದೃಶ್ಯ ವ್ಯಾಪ್ತಿಯನ್ನು ಮೀರಿದ ಅಪಾಯಗಳ ಬಗ್ಗೆ ವಾಹನಗಳು ಪರಸ್ಪರ ಎಚ್ಚರಿಕೆ ನೀಡಲು V2V ನೆರವಾಗುತ್ತದೆ ಎಂದು ಅವರು ಹೇಳಿದರು.

ಐಐಟಿ ದೆಹಲಿಯ ವಾಹನ ಸುರಕ್ಷತೆ ಮತ್ತು ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಂ ತಜ್ಞ ಸುದೀಪ್ತೋ ಮುಖರ್ಜಿ, ರಸ್ತೆ ತಿರುವುಗಳು ಅಥವಾ ಅಪಾಯಗಳು ಗೋಚರಿಸದ ಸಂದರ್ಭಗಳಲ್ಲಿ V2V, ADAS ವ್ಯವಸ್ಥೆಯನ್ನು ಗಮನಾರ್ಹವಾಗಿ ಬಲಪಡಿಸಬಹುದು ಎಂದು ಅಭಿಪ್ರಾಯಪಟ್ಟರು. ಆದರೆ ನಿಜವಾದ ಮೌಲ್ಯಮಾಪನವು ರಸ್ತೆಯಲ್ಲಿ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. V2V ಹೊಂದಿರುವ ಮತ್ತು ಹೊಂದಿಲ್ಲದ ವಾಹನಗಳು ಒಟ್ಟಿಗೆ ಸಂಚರಿಸುವ ಸಂದರ್ಭಗಳಲ್ಲಿ ಉಂಟಾಗುವ ಸಂಕೀರ್ಣತೆಗಳ ಬಗ್ಗೆ ಅವರು ಎಚ್ಚರಿಸಿದರು.

V2V ಹೆಚ್ಚು ಮುಖ್ಯವಾಗುವುದು ಯಾವಾಗ?

ಪ್ರತಿಕ್ರಿಯೆ ಸಮಯ ಸೀಮಿತವಾಗಿರುವ ಅಥವಾ ಗೋಚರತೆ ಕಡಿಮೆಯಾಗಿರುವ ಸಂದರ್ಭಗಳಲ್ಲಿ V2V ಯ ನಿಜವಾದ ಮಹತ್ವ ಸ್ಪಷ್ಟವಾಗುತ್ತದೆ. ಹೆದ್ದಾರಿಗಳಲ್ಲಿ ಹಠಾತ್ ಬ್ರೇಕಿಂಗ್, ವೇಗವಾಗಿ ಸಂಚರಿಸುವ ರಸ್ತೆಗಳಲ್ಲಿ ನಿಲ್ಲಿಸಲಾದ ವಾಹನಗಳನ್ನು ಗುರುತಿಸುವುದು ಕಷ್ಟವಾಗುವ ಸಂದರ್ಭಗಳು, ಚಾಲಕರು ದೂರ ಮತ್ತು ವೇಗವನ್ನು ನಿಖರವಾಗಿ ಅಂದಾಜಿಸಲು ಕಷ್ಟಪಡುವ ಪರಿಸ್ಥಿತಿಗಳಲ್ಲಿ ಇದು ಸಹಾಯಕ್ಕೆ ಬರುತ್ತದೆ. ಕಡಿಮೆ ಗೋಚರತೆಯಲ್ಲಿಯೂ ಹತ್ತಿರದ ವಾಹನಗಳು ಸ್ಪಷ್ಟವಾಗಿ ಕಾಣಿಸದಿದ್ದರೂ ಅವುಗಳ ಇರುವಿಕೆಯನ್ನು ಚಾಲಕರಿಗೆ ತಿಳಿಸುತ್ತದೆ.

ಸರ್ಕಾರದ ಸಿದ್ಧತೆ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕಾರಿಗಳು ತಾಂತ್ರಿಕ ಮಾನದಂಡಗಳು ಮತ್ತು ಸಂವಹನ ಪ್ರೋಟೋಕಾಲ್‌ಗಳನ್ನು ಅಂತಿಮಗೊಳಿಸಲು ವಾಹನ ತಯಾರಕರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಅನುಷ್ಠಾನದ ಪ್ರಾರಂಭಿಕ ಹಂತದಲ್ಲಿ ಹೊಸ ವಾಹನಗಳನ್ನು ಒಳಗೊಳ್ಳುವ ನಿರೀಕ್ಷೆಯಿದೆ. ರಾಷ್ಟ್ರವ್ಯಾಪಿ ನಿಯೋಜನೆಗೆ ಬೆಂಬಲ ನೀಡಲು ರೇಡಿಯೋ ಸ್ಪೆಕ್ಟ್ರಮ್‌ನ ಮೀಸಲಾದ ಹಂಚಿಕೆಯನ್ನು ಯೋಜಿಸಲಾಗಿದೆ. ಹಸ್ತಕ್ಷೇಪವಿಲ್ಲದ ವಿಶ್ವಾಸಾರ್ಹ ಕಾರ್ಯಾಚರಣೆಯನ್ನು ಖಚಿತಪಡಿಸಲು ವಾಹನದಿಂದ ವಾಹನಕ್ಕೆ ಸಂವಹನಕ್ಕಾಗಿ ನಿರ್ದಿಷ್ಟ ಆವರ್ತನಗಳನ್ನು ಲಭ್ಯವಾಗುವಂತೆ ಮಾಡಲು ಟೆಲಿಕಾಂ ಅಧಿಕಾರಿಗಳು ಸಿದ್ಧತೆ ಸೂಚಿಸಿದ್ದಾರೆ.

V2V ವ್ಯವಸ್ಥೆಗೆ ಸರ್ಕಾರ ಮುಂದಾಗಿರುವುದೇಕೆ?

ಪ್ರತಿ ವರ್ಷ ರಸ್ತೆ ಅಪಘಾತಗಳಿಂದಾಗುವ ಸಾವುಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸರ್ಕಾರದ ದೃಷ್ಟಿಕೋನದಿಂದ, V2V ಸಂವಹನವು ರಸ್ತೆ ಅಪಘಾತಗಳನ್ನು ತಡೆಯುವ ಪರಿಣಾಮಕಾರಿ ಸಾಧನವಾಗಿದೆ. ಚಾಲಕರಿಗೆ ಹೆಚ್ಚು ಮಾಹಿತಿ ಮತ್ತು ಪ್ರತಿಕ್ರಿಯಿಸಲು ಹೆಚ್ಚಿನ ಸಮಯ ನೀಡುವ ಮೂಲಕ ಮಾನವ ದೋಷವನ್ನು ಕಡಿಮೆ ಮಾಡುವುದು ಇದರ ಉದ್ದೇಶ. 2023ರಲ್ಲಿ ಭಾರತದಲ್ಲಿ ಒಟ್ಟು 4,80,583 ರಸ್ತೆ ಅಪಘಾತಗಳು ದಾಖಲಾಗಿದ್ದು, 1,72,890 ಮಂದಿ ಸಾವನ್ನಪ್ಪಿದ್ದಾರೆ. ರಸ್ತೆ ಅಪಘಾತಗಳು ವರ್ಷದಿಂದ ವರ್ಷಕ್ಕೆ 4.18 ಶೇಕಡಾ ಹೆಚ್ಚಾಗಿದ್ದು, ಸಾವುಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ 2.61 ಶೇಕಡಾ ಏರಿಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News