×
Ad

ಸರ್ಕಾರಿ ನೌಕರರಿಗೆ ಬೆಂಗಳೂರಿನ UIDAI ತಂತ್ರಜ್ಞಾನ ಕೇಂದ್ರದಲ್ಲಿ ಉದ್ಯೋಗಾವಕಾಶ

Update: 2026-01-11 13:04 IST

ಕೇಂದ್ರ ಸರ್ಕಾರದ ಅಧಿಕಾರಿಗಳು, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ, ಸಾರ್ವಜನಿಕ ವಲಯದ ಉದ್ದಿಮೆಗಳು ಮತ್ತು ಸ್ವಾಯತ್ತ ಸಂಸ್ಥೆಗಳ ಸಿಬ್ಬಂದಿ ಅರ್ಜಿ ಸಲ್ಲಿಸಬಹುದು.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ತನ್ನ ಬೆಂಗಳೂರು ತಂತ್ರಜ್ಞಾನ ಕೇಂದ್ರದಲ್ಲಿ ಸಹಾಯಕ ನಿರ್ದೇಶಕ (ತಂತ್ರಜ್ಞಾನ) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು 2026ರ ಫೆಬ್ರವರಿ 2ರವರೆಗೆ ವಿಸ್ತರಿಸಲಾಗಿದೆ.

ಆಧಾರ್ (ಸಬ್ಸಿಡಿಗಳು ಮತ್ತು ಇತರೆ ಪ್ರಯೋಜನಗಳು ಹಾಗೂ ಸೇವೆಗಳ ಉದ್ದೇಶಿತ ವಿತರಣೆ) ಕಾಯ್ದೆ–2016ರ ಅಡಿಯಲ್ಲಿ ಸ್ಥಾಪಿತವಾಗಿರುವ UIDAI, ಆಧಾರ್ ಸಂಖ್ಯೆಗಳನ್ನು ನೀಡುವುದು ಹಾಗೂ ಅವುಗಳ ದೃಢೀಕರಣಕ್ಕೆ ಸಂಬಂಧಿಸಿದ ನೀತಿ, ಕಾರ್ಯವಿಧಾನ ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಹೊಂದಿದೆ.

UIDAI ಸಹಾಯಕ ನಿರ್ದೇಶಕ (ತಂತ್ರಜ್ಞಾನ) ವಿಭಾಗದಲ್ಲಿ ಎರಡು ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ UIDAI ತಂತ್ರಜ್ಞಾನ ಕೇಂದ್ರ, ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

►ಅರ್ಹತೆ ಮತ್ತು ಅನುಭವ

ಪೋಷಕ ಕೇಡರ್ ಅಥವಾ ಇಲಾಖೆಯಲ್ಲಿ ಸದೃಶ ಹುದ್ದೆಗಳನ್ನು ನಿಯಮಿತ ಆಧಾರದ ಮೇಲೆ ಹೊಂದಿರುವ ಕೇಂದ್ರ ಸರ್ಕಾರದ ಅಧಿಕಾರಿಗಳು ಅರ್ಜಿ ಸಲ್ಲಿಸಬಹುದು. ಪರ್ಯಾಯವಾಗಿ, 7ನೇ ಕೇಂದ್ರ ವೇತನ ಆಯೋಗದ ವೇತನ ಶ್ರೇಣಿ–10 (56,100 ರೂ. – 1,77,500 ರೂ.) ಅಥವಾ ವೇತನ ಶ್ರೇಣಿ–9 (53,100 ರೂ. – 1,67,800 ರೂ.) ರಲ್ಲಿ ಮೂರು ವರ್ಷಗಳ ನಿಯಮಿತ ಸೇವೆ ಪೂರ್ಣಗೊಳಿಸಿದವರು ಅರ್ಹರಾಗಿರುತ್ತಾರೆ.

ಇದಲ್ಲದೆ, 7ನೇ ಕೇಂದ್ರ ವೇತನ ಆಯೋಗದ ವೇತನ ಶ್ರೇಣಿ–8 (47,600 ರೂ. – 1,51,100 ರೂ.) ರಲ್ಲಿ ನಾಲ್ಕು ವರ್ಷಗಳ ನಿಯಮಿತ ಸೇವೆ ಮಾಡಿದವರು ಅಥವಾ ವೇತನ ಶ್ರೇಣಿ–7 (44,900 ರೂ. – 1,42,400 ರೂ.) ರಲ್ಲಿ ಆರು ವರ್ಷಗಳ ನಿಯಮಿತ ಸೇವೆ ಮಾಡಿದ ಅಧಿಕಾರಿಗಳು ಸಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಕನಿಷ್ಠ ಐದು ವರ್ಷಗಳ ಸೇವಾ ಅನುಭವ ಹೊಂದಿರಬೇಕು.

►ವಯೋಮಿತಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವೇಳೆಗೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 56 ವರ್ಷ ಮೀರಿರಬಾರದು.

►ಶೈಕ್ಷಣಿಕ ಅರ್ಹತೆ

ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ನಾಲ್ಕು ವರ್ಷಗಳ ಪದವಿ, ಅಥವಾ ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಯೋಜನಾ ನಿರ್ವಹಣೆ, ಸಂಗ್ರಹಣೆ, ಆರ್‌ಎಫ್‌ಪಿ ತಯಾರಿಕೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಯೋಜನೆಗಳು, ಇ-ಆಡಳಿತ, ನೆಟ್‌ವರ್ಕಿಂಗ್, ಟೆಲಿಕಾಂ ಅಥವಾ ಮಾಹಿತಿ ಭದ್ರತೆ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.

►ಭತ್ಯೆ ಮತ್ತು ಇತರೆ ಸೌಲಭ್ಯಗಳು

ಈ ಹುದ್ದೆಗಳಿಗೆ ಐದು ವರ್ಷಗಳ ಅವಧಿಗೆ ನೇಮಕಾತಿ ನಡೆಯಲಿದೆ. ನಿಯಮಾನುಸಾರ ಕನಿಷ್ಠ ಮೂರು ವರ್ಷಗಳಿಗೆ ಅವಧಿಯನ್ನು ಸೀಮಿತಗೊಳಿಸುವ ಅವಕಾಶವೂ ಇದೆ. ನೇಮಕಾತಿ, ಸಂಬಳ, ಭತ್ಯೆಗಳು, ವೈದ್ಯಕೀಯ ಸೌಲಭ್ಯಗಳು ಹಾಗೂ ಪ್ರಯಾಣ ಭತ್ಯೆಗಳು UIDAI (ಅಧಿಕಾರಿಗಳು ಮತ್ತು ನೌಕರರ ನೇಮಕಾತಿ) ನಿಯಮಗಳು–2020 ಹಾಗೂ UIDAI (ವೇತನ, ಭತ್ಯೆಗಳು ಮತ್ತು ಸೇವಾ ನಿಯಮಗಳು)–2020ರ ನಿಬಂಧನೆಗಳಿಗೆ ಒಳಪಟ್ಟಿರುತ್ತವೆ.

►ಅರ್ಜಿ ಸಲ್ಲಿಕೆ

ಸೂಕ್ತ ಅರ್ಜಿಗಳನ್ನು,

ನಿರ್ದೇಶಕ (HR), ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI),

ಆಧಾರ್ ಕಾಂಪ್ಲೆಕ್ಸ್, ಎನ್‌ಟಿಐ ಲೇಔಟ್, ಟಾಟಾ ನಗರ, ಕೊಡಿಗೆಹಳ್ಳಿ,

ತಂತ್ರಜ್ಞಾನ ಕೇಂದ್ರ, ಬೆಂಗಳೂರು – 560 092

ವಿಳಾಸಕ್ಕೆ ಕಳುಹಿಸಬೇಕು.

ಈ ಹಿಂದೆ ಅರ್ಜಿ ಸಲ್ಲಿಸಲು 2025ರ ಡಿಸೆಂಬರ್ 9 ಕೊನೆಯ ದಿನವಾತ್ತು, ಅದನ್ನು ಈಗ 2026ರ ಫೆಬ್ರವರಿ 2ರವರೆಗೆ ವಿಸ್ತರಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ನಿರ್ದೇಶಕ (ಲೆಫ್ಟಿನೆಂಟ್ ಕರ್ನಲ್ ನೀರಜ್ ಚೌಧರಿ) ಅವರನ್ನು ದೂರವಾಣಿ ಸಂಖ್ಯೆ 011-23478554 ಅಥವಾ dir.hr-hq@uidai.net.in ಇಮೇಲ್ ಮೂಲಕ ಸಂಪರ್ಕಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News