×
Ad

Grok ಅಶ್ಲೀಲ ಕಂಟೆಂಟ್ ವಿವಾದ; ಪೋಸ್ಟ್‌ಗಳು ಮತ್ತು ಖಾತೆಗಳನ್ನು ರದ್ದು ಮಾಡಿದ ‘ಎಕ್ಸ್’ ಸಾಮಾಜಿಕ ಜಾಲತಾಣ

Update: 2026-01-11 14:15 IST

Image Credit: PTI

ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್ ತನ್ನ ವೆಬ್‌ತಾಣದಲ್ಲಿರುವ ಅಶ್ಲೀಲ ಕಂಟೆಂಟ್‌ಗಳ ವಿರುದ್ಧ ಕ್ರಮ ಕೈಗೊಂಡಿದೆ. ಕೇಂದ್ರ ಸರ್ಕಾರ ಅಶ್ಲೀಲ ಕಂಟೆಂಟ್ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ ಬಳಿಕ ಎಕ್ಸ್ 3500 ಪೋಸ್ಟ್‌ಗಳನ್ನು ಬ್ಲಾಕ್ ಮಾಡಿದ್ದು, 600ಕ್ಕೂ ಅಧಿಕ ಖಾತೆಗಳನ್ನು ರದ್ದು ಮಾಡಿದೆ. ಮಾಧ್ಯಮಗಳ ವಿವರಗಳ ಪ್ರಕಾರ ‘ಎಕ್ಸ್’ ತನ್ನ ವೇದಿಕೆಯಲ್ಲಿ ಅಶ್ಲೀಲ ಕಂಟೆಂಟ್‌ಗೆ ಅವಕಾಶ ನೀಡುವುದಿಲ್ಲ ಮತ್ತು ಸರ್ಕಾರದ ನಿಯಂತ್ರಣಗಳನ್ನು ಅನುಸರಿಸುವುದಾಗಿ ಸರ್ಕಾರಕ್ಕೆ ತಿಳಿಸಿದೆ.


►ಕಾನೂನುಬಾಹಿರ ಕಂಟೆಂಟ್ ತೆಗೆಯಲು ಆದೇಶ

‘ಎಕ್ಸ್‌’ ಸಾಮಾಜಿಕ ಜಾಲತಾಣದಿಂದ ಅಸಭ್ಯ, ಅಶ್ಲೀಲ ಮತ್ತು ಕಾನೂನುಬಾಹಿರ ವಿಷಯಗಳನ್ನು ತೆಗೆಯುವಂತೆ ಭಾರತದ ತಾಂತ್ರಿಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆದೇಶಿಸಿದ ಒಂದು ವಾರದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಮುಖ್ಯವಾಗಿ Grok ಮೂಲಕ ಉತ್ಪಾದಿಸಲಾಗುತ್ತಿರುವ ವಿಷಯಗಳನ್ನು ನಿಯಂತ್ರಿಸುವಂತೆ ಸೂಚಿಸಲಾಗಿತ್ತು. ತಪ್ಪಿದಲ್ಲಿ ಭಾರತೀಯ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿತ್ತು.

“ಎಐ ಆಧಾರಿತ ಸೇವೆಗಳಾದ Grok ಮತ್ತು xAI ನ ಇತರ ಸೇವೆಗಳ ದುರುಪಯೋಗದ ಮೂಲಕ ಅಶ್ಲೀಲ, ನಗ್ನ, ಅಸಭ್ಯ ಕಂಟೆಂಟ್‌ಗಳನ್ನು ಪೋಸ್ಟ್ ಮಾಡಲು ಅವಕಾಶ ಕೊಡುವುದು, ಉತ್ಪಾದಿಸುವುದು, ಪ್ರಕಟಿಸುವುದು ಅಥವಾ ಪ್ರಸಾರ, ಹಂಚಿಕೆ ಅಥವಾ ಅಪ್‌ಲೋಡ್ ಮಾಡುವುದನ್ನು ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ 72 ಗಂಟೆಗಳ ಒಳಗೆ ತಿಳಿಸಬೇಕು” ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿತ್ತು.

►ಎಐ ಸಾಧನಗಳನ್ನು ಬಳಸಿ ಅಶ್ಲೀಲ ಕಂಟೆಂಟ್ ರಚನೆ

ಎಐ ಸಾಧನಗಳನ್ನು ಬಳಸಿ ಅಶ್ಲೀಲ ಮತ್ತು ಅವಹೇಳನಕಾರಿ ವಿಷಯಗಳನ್ನು ತಯಾರಿಸಲಾಗುತ್ತಿದೆ ಮತ್ತು ಮುಖ್ಯವಾಗಿ ಮಹಿಳೆಯರನ್ನು ಗುರಿ ಮಾಡಲಾಗುತ್ತಿದೆ ಎನ್ನುವ ಕುರಿತ ಕಳವಳದ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ನಿರ್ದೇಶನ ಬಂದಿತ್ತು. ಸಚಿವಾಲಯ ಅಮೆರಿಕ ಮೂಲದ ಸಾಮಾಜಿಕ ಜಾಲತಾಣ ವೇದಿಕೆಗೆ ಕೈಗೊಂಡ ಕ್ರಮಗಳ ಕುರಿತು 72 ಗಂಟೆಗಳಲ್ಲಿ ವರದಿ ನೀಡುವಂತೆ ಸೂಚಿಸಿತ್ತು. ಅಂತಹ ವಿಷಯಗಳನ್ನು ತೆಗೆದುಹಾಕಲು ಮತ್ತು ಅಂತಹ ಬಳಕೆದಾರರ ವಿರುದ್ಧ ಕೈಗೊಂಡ ಕ್ರಮಗಳನ್ನು ತಿಳಿಸುವಂತೆ ಸರ್ಕಾರ ಸೂಚಿಸಿತ್ತು.

“ಪದೇಪದೆ ಸಾಮಾಜಿಕ ಜಾಲತಾಣಗಳ ಬಳಕೆದಾರರಿಂದ ದೂರುಗಳನ್ನು ಸ್ವೀಕರಿಸಲಾಗಿದೆ. ಸಾರ್ವಜನಿಕವಾಗಿ ಈ ಬಗ್ಗೆ ಚರ್ಚೆಯಾಗುತ್ತಿದೆ. ಸಂಸದೀಯ ಪ್ರತಿನಿಧಿಗಳು ದೂರು ಸಲ್ಲಿಸಿ ಎಕ್ಸ್‌ ಜಾಲತಾಣದಲ್ಲಿರುವ ವಿಷಯಗಳು ಸಭ್ಯತೆ ಮತ್ತು ಅಶ್ಲೀಲತೆ ಸಂಬಂಧಿತ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಹೇಳಿದ್ದಾರೆ. ಈಗಿರುವ ನಿಯಮಗಳ ಹೊರತಾಗಿಯೂ ನಿರ್ದಿಷ್ಟ ವರ್ಗದ ಕಾನೂನುಬಾಹಿರ ವಿಷಯಗಳು ವ್ಯಾಪಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿವೆ” ಎಂದು ಆದೇಶದಲ್ಲಿ ಹೇಳಲಾಗಿತ್ತು.

ಸರ್ಕಾರದ ಆದೇಶದಂತೆ ಇದೀಗ ಎಕ್ಸ್ ವೇದಿಕೆಯಿಂದ 3500 ಪೋಸ್ಟ್‌ಗಳನ್ನು ಬ್ಲಾಕ್ ಮಾಡಲಾಗಿದೆ ಮತ್ತು 600 ಖಾತೆಗಳನ್ನು ರದ್ದು ಮಾಡಲಾಗಿದೆ. ಇನ್ನು ಮುಂದೆ ಅಶ್ಲೀಲ ಇಮೇಜ್‌ಗಳ ಸೃಷ್ಟಿಗೆ ಅವಕಾಶ ಕೊಡುವುದಿಲ್ಲ ಎಂದು ‘ಎಕ್ಸ್‌’ ಸರ್ಕಾರಕ್ಕೆ ತಿಳಿಸಿದೆ.

►Grok ದುರುಪಯೋಗದ ಕುರಿತು ಕಳವಳ

Grok ಎಂಬುದು ಎಐ ಚಾಟ್‌ಬೋಟ್ ಅಪ್ಲಿಕೇಶನ್ ಆಗಿದ್ದು, 2023ರಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ ‘Grok ಇಮ್ಯಾಜಿನ್’ ಎನ್ನುವ ಹೊಸ ಫೀಚರ್ ಪರಿಚಯಿಸಲಾಗಿತ್ತು. ಇದನ್ನು ಬಳಸಿ ಅಸಭ್ಯ ಅಥವಾ ಅಶ್ಲೀಲ ಕಂಟೆಂಟ್ ಸೃಷ್ಟಿಸಬಹುದಾಗಿತ್ತು. ಪೇಯ್ಡ್ ಗ್ರಾಹಕರಿಗೆ ಮಾತ್ರ ಈ ವೈಶಿಷ್ಟ್ಯ ಲಭ್ಯವಿದೆ. ಎಕ್ಸ್ ಬಳಕೆದಾರರಿಗೆ ಈ ಚಾಟ್‌ಬೋಟ್ ಅನ್ನು ಉಚಿತವಾಗಿ ಬಳಸಲು ಅವಕಾಶ ನೀಡಲಾಗಿದೆ. ಎಕ್ಸ್ ಪೋಸ್ಟ್‌ಗಳಲ್ಲಿ ಗ್ರೋಕ್‌ಗೆ ಟ್ಯಾಗ್ ಮಾಡಿ ಬೇಕಾದ ವಿಷಯಕ್ಕೆ ಸೂಚನೆ ನೀಡಬಹುದು. ಪೋಸ್ಟ್ ಆಗಿರುವ ವ್ಯಕ್ತಿಯ ಫೋಟೋವನ್ನು ನಗ್ನಗೊಳಿಸುವಂತೆ ಹೇಳಿದರೂ ಅದು ಮಾಡುತ್ತದೆ ಎಂಬ ಆರೋಪಗಳೂ ಕೇಳಿಬಂದಿವೆ. ಒಂದು ವಿಚಾರದ ಬಗ್ಗೆ ಮಾಹಿತಿ ಹೆಕ್ಕಿ ತೆಗೆ ಎಂದು ಹೇಳಿದರೆ ಅದನ್ನೂ ಮಾಡುತ್ತದೆ ಎನ್ನಲಾಗಿದೆ.

ಆದರೆ ಎಕ್ಸ್‌ನಲ್ಲಿ ಇತ್ತೀಚೆಗೆ ಜನರು ಅಶ್ಲೀಲ ಕಂಟೆಂಟ್ ಸೃಷ್ಟಿ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ ಎನ್ನುವ ಕಳವಳ ಭಾರತದಲ್ಲಿ ವ್ಯಕ್ತವಾಗಿತ್ತು. ಇತರ ದೇಶಗಳಲ್ಲಿಯೂ ಈ ವಿಚಾರವಾಗಿ ಎಕ್ಸ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇಂಡೋನೇಷ್ಯಾ Grok ಅನ್ನು ಬ್ಲಾಕ್ ಮಾಡಿದೆ. ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಮಲೇಷ್ಯಾ ಮತ್ತು ಅಮೆರಿಕ ದೇಶಗಳು Grok ವಿರುದ್ಧ ತನಿಖೆಗೆ ಯೋಜಿಸಿವೆ. ಅಮೆರಿಕದ ಮೂವರು ಸಂಸದರು ಆ್ಯಪ್ ಸ್ಟೋರ್ ಮತ್ತು ಪ್ಲೇ ಸ್ಟೋರ್‌ಗಳಿಂದ Grok ಆ್ಯಪ್ ಅನ್ನು ತೆಗೆದುಹಾಕುವಂತೆ ಆ್ಯಪಲ್ ಮತ್ತು ಗೂಗಲ್‌ಗೆ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎನ್ ಕೆ ಸುಪ್ರಭಾ

contributor

Similar News