Tamil Nadu | ಬೆಟ್ಟವೊಂದರ ಶತಮಾನದ ಹಳೆಯ ಸಂಘರ್ಷ: ಏನಿದು ಕಾರ್ತಿಕ ದೀಪ ವಿವಾದ?
Photo Credit : indianexpress.com
ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿರುವ ಹಿಂದೂ ದೇವಾಲಯ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಮುಸ್ಲಿಂ ದರ್ಗಾದ ನಡುವೆ ದೀರ್ಘಕಾಲದಿಂದ ವಿವಾದಕ್ಕೀಡಾಗಿರುವ ಸ್ಥಳದಲ್ಲಿ, ಒಂದು ಬಾರಿಯ ಕ್ರಮವಾಗಿ ಸಾಂಪ್ರದಾಯಿಕ ದೀಪ ಹಚ್ಚಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ನ. 24ರಂದು ನಡೆಯಲಿರುವ ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ, ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ವಿವಾದಿತ ಕಲ್ಲಿನ ಸ್ತಂಭದ ಬಳಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಿಂದ ಅಧಿಕೃತಗೊಂಡವರು ಮತ್ತು ಸರ್ಕಾರಿ ಅಧಿಕಾರಿಗಳು ಮಾತ್ರ ಈ ಧಾರ್ಮಿಕ ವಿಧಿಯನ್ನು ನೆರವೇರಿಸಬಹುದು ಎಂದು ನ್ಯಾಯಾಲಯ ಶುಕ್ರವಾರ (ನ. 20) ನೀಡಿದ ಮಧ್ಯಂತರ ಆದೇಶದಲ್ಲಿ ತಿಳಿಸಿದೆ.
►ಇದೇ ಬೆಟ್ಟದ ಮೇಲೆ ಸುಲ್ತಾನ್ ಸಿಕಂದರ್ ಅವುಲಿಯಾ ದರ್ಗಾ ಕೂಡ ಇದೆ.
ಈ ಸ್ಥಳಕ್ಕೆ ಸಂಬಂಧಿಸಿದ ಶತಮಾನದಷ್ಟು ಹಳೆಯದಾದ ಆಸ್ತಿ ವಿವಾದದ ಇತ್ತೀಚಿನ ಕಾನೂನು ಅಧ್ಯಾಯ ಇದಾಗಿದೆ. ಈ ವಿವಾದ ಹುಟ್ಟಿಕೊಂಡಿದ್ದು ಹೇಗೆ, ದಶಕಗಳ ಕಾಲ ಇಲ್ಲಿನ ಪೂಜಾ ಪದ್ಧತಿಗಳ ಮೇಲೆ ಅದು ಹೇಗೆ ಪ್ರಭಾವ ಬೀರಿತು ಮತ್ತು ಕಳೆದ ವರ್ಷ ಡಿಸೆಂಬರ್ ನಲ್ಲಿ ಇದು ಮತ್ತೆ ಮುನ್ನೆಲೆಗೆ ಬಂದಿದ್ದು ಹೇಗೆ ಎಂಬ ವಿವರ ಇಲ್ಲಿದೆ.
►ತಿರುಪ್ಪರಂಕುಂದ್ರಂ ಪ್ರಕರಣದ ಹಿನ್ನೆಲೆ
ಮಧುರೈ ಹೊರವಲಯದಲ್ಲಿರುವ ತಿರುಪ್ಪರಂಕುಂದ್ರಂ ಬೆಟ್ಟವು ಸುಮಾರು 1,050 ಅಡಿ ಎತ್ತರವಿದೆ. ಇದರ ತಪ್ಪಲಿನಲ್ಲಿ ಶತಮಾನಗಳಿಂದ ಹಿಂದೂಗಳ ಆರಾಧನಾ ಕೇಂದ್ರವಾಗಿರುವ ಅರುಲ್ಮಿಗು ಸುಬ್ರಹ್ಮಣ್ಯ ಸ್ವಾಮಿ ಗುಹಾಂತರ ದೇವಾಲಯವಿದೆ. ಕಾಲಾನಂತರದಲ್ಲಿ, ಈ ಬೆಟ್ಟವು ಶತಮಾನಗಳ ಹಿಂದೆ ಕೆತ್ತಲಾದ ಜೈನರ ಕಲ್ಲಿನ ಹಾಸಿಗೆಗಳು ಮತ್ತು ಗುಹೆಗಳಿಗೂ ನೆಲೆಯಾಯಿತು. ಬೆಟ್ಟದ ತುತ್ತತುದಿಯಲ್ಲಿ ಸೂಫಿ ಸಂತ ಸಿಕಂದರ್ ಬಾದ್ಶಾ ಅವರ ಸಮಾಧಿಯಿದ್ದು, ನಂತರ ಅಲ್ಲಿ ದರ್ಗಾ ನಿರ್ಮಾಣವಾಯಿತು.
ಈ ವಿಭಿನ್ನ ಧಾರ್ಮಿಕ ನೆಲೆಗಳು ಬೆಟ್ಟಕ್ಕೆ ಒಂದಕ್ಕಿಂತ ಹೆಚ್ಚು ಗುರುತುಗಳನ್ನು ನೀಡಿವೆ. ಜೈನರ ನಂಟಿನಿಂದಾಗಿ ಇದನ್ನು 'ಸಮಣರ್ ಬೆಟ್ಟ' ಎಂದೂ, ಸೂಫಿ ಸಂತನ ಹೆಸರಿನಲ್ಲಿ 'ಸಿಕಂದರ್ ಬೆಟ್ಟ' ಎಂದೂ ಕರೆಯಲಾಗುತ್ತದೆ. ಹಬ್ಬಗಳ ಸಂದರ್ಭದಲ್ಲಿ ಇಲ್ಲಿಗೆ ಪ್ರವೇಶಿಸುವ ಮತ್ತು ಓಡಾಡುವ ವಿಚಾರವಾಗಿ ಪ್ರಶ್ನೆಗಳು ಏಳುವುದರಿಂದ, ಇಲ್ಲಿ ನಿಯಮಿತವಾಗಿ ಪೊಲೀಸ್ ಭದ್ರತೆ ನಿಯೋಜಿಸುವ ಪರಿಸ್ಥಿತಿ ಇದೆ.
ಈ ಬೆಟ್ಟದ ಕಾನೂನು ಹೋರಾಟದ ಇತಿಹಾಸವು 1920ರಲ್ಲಿ ದಾಖಲಾದ ಸಿವಿಲ್ ದಾವೆಯವರೆಗೆ ಹೋಗುತ್ತದೆ. ಅಂದು ದೇವಾಲಯದ ಆಡಳಿತ ನಡೆಸುವ ಅರುಲ್ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಂ, ಇಡೀ ಬೆಟ್ಟದ ಒಡೆತನ ತನಗೆ ಸೇರಿದ್ದು ಎಂದು ಹಕ್ಕು ಮಂಡಿಸಿತ್ತು.
1923ರಲ್ಲಿ ವಿಚಾರಣಾ ನ್ಯಾಯಾಲಯವು ಮಹತ್ವದ ತೀರ್ಪು ನೀಡಿತು. ಅದರಂತೆ, ಬೆಟ್ಟದ ಬಹುಪಾಲು ಖಾಲಿ ಜಾಗ ಮತ್ತು ಯಾತ್ರಾರ್ಥಿಗಳ ಮಾರ್ಗವು ದೇವಾಲಯದ ಆಸ್ತಿಯೆಂದು ತೀರ್ಮಾನಿಸಲಾಯಿತು. ಇದೇ ವೇಳೆ, ಬೆಟ್ಟದ ಅತ್ಯಂತ ಎತ್ತರದ ತುದಿ, ಮಸೀದಿಯ ಸುತ್ತಮುತ್ತಲಿನ ಪ್ರದೇಶ, ನೆಲ್ಲಿತೋಪು ಪ್ರದೇಶ ಮತ್ತು ಮಸೀದಿಗೆ ಹೋಗುವ ಮೆಟ್ಟಿಲುಗಳು ಮುಸ್ಲಿಮರ ಆಸ್ತಿಯೆಂದು ನ್ಯಾಯಾಲಯ ಘೋಷಿಸಿತು. ಈ ವ್ಯವಸ್ಥೆಯೇ ಮುಂದಿನ ದಿನಗಳಲ್ಲಿ ಎದುರಾದ ಎಲ್ಲಾ ವಿವಾದಗಳಿಗೆ ಮೂಲ ಕಾರಣವಾಯಿತು.
►ಹಿಂದಿನ ವಿವಾದಗಳು
ತಿರುಪ್ಪರಂಕುಂದ್ರಂ ಬೆಟ್ಟದ ಕುರಿತಾದ ಕಾನೂನು ಹೋರಾಟ ದಶಕಗಳ ಕಾಲ ಮುಂದುವರಿಯಿತು.
2021ರಲ್ಲಿ ದರ್ಗಾದಲ್ಲಿದ್ದ ಮರದ ಧ್ವಜಸ್ತಂಭವನ್ನು ಬದಲಿಸಿ ಕಬ್ಬಿಣದ ಸ್ತಂಭ ಅಳವಡಿಸುವ ವಿಚಾರವಾಗಿ ವಿವಾದ ತಲೆದೋರಿತು. 2025ರ ಆರಂಭದಲ್ಲಿ ಬೆಟ್ಟದ ತುದಿಯಲ್ಲಿ ಪ್ರಾಣಿ ಬಲಿ ನೀಡಲು ಯತ್ನಿಸಿದಾಗ ಮತ್ತೊಂದು ವಿವಾದ ಭುಗಿಲೆದ್ದಿತು. ಈ ಬೆಟ್ಟವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿಯಮಗಳ ಅಡಿಯಲ್ಲಿ ಸಂರಕ್ಷಿತ ಸ್ಮಾರಕವಾಗಿದೆ ಎಂಬುದನ್ನು ಗಮನಿಸಿದ ಮೂವರು ನ್ಯಾಯಮೂರ್ತಿಗಳ ಪೀಠವು, ನಂತರ ಪ್ರಾಣಿ ಬಲಿಯನ್ನು ನಿಷೇಧಿಸಿತು.
ಪ್ರಸ್ತುತ ವಿವಾದವು ಬೆಟ್ಟದ ತುದಿಯ ಸಮೀಪವಿರುವ ಕಲ್ಲಿನ ಸ್ತಂಭದ ಬಳಿ ಹಬ್ಬದ ದೀಪ ಹಚ್ಚುವ ವಿಚಾರದ ಸುತ್ತ ಕೇಂದ್ರೀಕೃತವಾಗಿದೆ. ದೀಪಗಳನ್ನು ಹಚ್ಚಲೆಂದೇ ನಿರ್ಮಿಸಲಾದ ಈ ಸಾಂಪ್ರದಾಯಿಕ ರಚನೆಯನ್ನು 'ದೀಪಸ್ತಂಭ' (ದೀಪತೂಣ್) ಎಂದು ಕರೆಯಲಾಗುತ್ತದೆ. ಇದು ದರ್ಗಾದಿಂದ ಸುಮಾರು 50 ಮೀಟರ್ ದೂರದಲ್ಲಿದೆ.
19ನೇ ಶತಮಾನ ಮತ್ತು 20ನೇ ಶತಮಾನದ ಆರಂಭದಲ್ಲಿ ಬೆಟ್ಟದ ತುದಿಯ ಬಳಿ ದೀಪ ಹಚ್ಚಲು ನಡೆದ ಪ್ರಯತ್ನಗಳನ್ನು ಅಧಿಕಾರಿಗಳು ತಡೆದಿದ್ದರು ಎಂಬುದನ್ನು ನ್ಯಾಯಾಲಯದ ಮುಂದೆ ಸಲ್ಲಿಸಲಾದ ದಾಖಲೆಗಳು ತೋರಿಸಿವೆ. ಅಂದು ರೂಢಿಯಲ್ಲಿರುವ ಸಂಪ್ರದಾಯವಿಲ್ಲದಿರುವುದು ಮತ್ತು ಸಾರ್ವಜನಿಕ ಶಾಂತಿ ಸುವ್ಯವಸ್ಥೆಯ ಕಾರಣಗಳನ್ನು ನೀಡಿ ಇದಕ್ಕೆ ತಡೆ ಒಡ್ಡಲಾಗಿತ್ತು.
1994ರಲ್ಲಿ ಸ್ವಯಂಸೇವಕರು ಬೆಟ್ಟದ ತುದಿಯಲ್ಲಿ ದೀಪ ಹಚ್ಚಲು ಅನುಮತಿ ಕೋರಿದಾಗ ಈ ವಿಚಾರ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿತು. 1996ರಲ್ಲಿ ತೀರ್ಪು ನೀಡಿದ ಹೈಕೋರ್ಟ್, ಬೆಟ್ಟದ ಕೆಳಭಾಗದ ಇಳಿಜಾರಿನಲ್ಲಿರುವ ಉಚ್ಚಿಪಿಳ್ಳೈಯಾರ್ ದೇವಾಲಯದ ಬಳಿಯ ಬೇರೆ ಸ್ಥಳದಲ್ಲಿ ಕಾರ್ತಿಕ ದೀಪ ಹಚ್ಚುವಂತೆ ನಿರ್ದೇಶಿಸಿತು. ಅಲ್ಲದೆ, "ದರ್ಗಾ, ಮೆಟ್ಟಿಲುಗಳ ಸಾಲು ಮತ್ತು ನೆಲ್ಲಿತೋಪು ಪ್ರದೇಶದಿಂದ ಕನಿಷ್ಠ 15 ಮೀಟರ್ ದೂರವಿರುವ ಸೂಕ್ತ ಜಾಗದಲ್ಲಿ" ಪರ್ಯಾಯ ಸ್ಥಳಗಳನ್ನು ಪರಿಗಣಿಸಲು ದೇವಸ್ಥಾನಕ್ಕೆ ಅವಕಾಶ ನೀಡಿತು.
ಹೀಗಾಗಿ, ದಶಕಗಳ ಕಾಲ ಉಚ್ಚಿಪಿಳ್ಳೈಯಾರ್ ದೇವಾಲಯದ ಸಮೀಪವಿರುವ ದೀಪ ಮಂಟಪದಲ್ಲಿಯೇ ದೀಪ ಹಚ್ಚಲಾಗುತ್ತಿತ್ತು.
►ತಿರುಪ್ಪರಂಕುಂದ್ರಂ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು ಹೇಗೆ?
ಈ ಹಿನ್ನೆಲೆಯಲ್ಲಿ, 2025ರ ನ. ಅಂತ್ಯದಲ್ಲಿ ಭಕ್ತರ ಗುಂಪೊಂದು ನ್ಯಾಯಾಲಯದ ಮೊರೆ ಹೋಗಿ, ಡಿಸೆಂಬರ್ 3ರಂದು ಬೆಟ್ಟದ ತುದಿಯಲ್ಲಿರುವ 'ದೀಪಸ್ತಂಭ'ದ ಬಳಿ ಕಾರ್ತಿಕ ದೀಪ ಹಚ್ಚಲು ಅನುಮತಿ ಕೋರಿತು.
ಡಿ. 1ರಂದು ಏಕಸದಸ್ಯ ಪೀಠವು ಈ ಅರ್ಜಿಗಳಿಗೆ ಸಮ್ಮತಿ ಸೂಚಿಸಿತು. ಇದನ್ನು ಧಾರ್ಮಿಕ ಆಚರಣೆಯ ಮರುಸ್ಥಾಪನೆ ಎಂದು ಪರಿಗಣಿಸಿದ ನ್ಯಾಯಾಲಯ, ಪೊಲೀಸ್ ನೆರವಿನೊಂದಿಗೆ ದೀಪ ಹಚ್ಚುವಂತೆ ದೇವಾಲಯದ ಆಡಳಿತ ಮಂಡಳಿಗೆ ನಿರ್ದೇಶನ ನೀಡಿತು.
"ಕಾರ್ತಿಕ ಎಂಬುದು ಬೆಳಕಿನ ಹಬ್ಬವೂ ಹೌದು. ದೀಪಗಳನ್ನು ಕೇವಲ ಪೂಜಾ ಕೋಣೆಯಲ್ಲಿ ಮಾತ್ರವಲ್ಲದೆ ಮನೆಯ ತುಂಬೆಲ್ಲಾ ಹಚ್ಚಲಾಗುತ್ತದೆ. ಈ ವರ್ಷದಿಂದ ದೀಪಸ್ತಂಭದ ಬಳಿಯೂ ಕಾರ್ತಿಕ ದೀಪವನ್ನು ಹಚ್ಚಬೇಕು" ಎಂದು ನ್ಯಾಯಾಲಯ ಹೇಳಿತು. ಕಾನೂನು ಮತ್ತು ಸುವ್ಯವಸ್ಥೆಯ ಕಾರಣಗಳನ್ನು ನೀಡಿ ಆದೇಶವನ್ನು ಜಾರಿಗೊಳಿಸಲು ದೇವಾಲಯದ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದಾಗ, ನ್ಯಾಯಾಧೀಶರು ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿದರು ಮತ್ತು ಭದ್ರತೆಯೊಂದಿಗೆ ಸಣ್ಣ ತಂಡವೊಂದು ಬೆಟ್ಟ ಹತ್ತಲು ಅನುಮತಿ ನೀಡಿದರು.
►ಸರ್ಕಾರದ ಆಕ್ಷೇಪಣೆಗಳು
ರಾಜ್ಯ ಸರ್ಕಾರ ಮತ್ತು ಹಿಂದೂ ಧಾರ್ಮಿಕ ಹಾಗೂ ದತ್ತಿ ಇಲಾಖೆ (HR&CE) ಈ ಆದೇಶವನ್ನು ಪ್ರಶ್ನಿಸಿದವು. ಧಾರ್ಮಿಕ ಸಂಪ್ರದಾಯ ಮತ್ತು ಆಚರಣೆಗಳಿಗೆ ಸಂಬಂಧಿಸಿದ ವಿವಾದಗಳನ್ನು ರಿಟ್ ಅರ್ಜಿಗಳ ಮೂಲಕವಲ್ಲದೆ, HR ಮತ್ತು CE ಕಾಯ್ದೆಯ ಅಡಿಯಲ್ಲೇ ನಿರ್ಧರಿಸಬೇಕು ಎಂದು ಅವು ವಾದಿಸಿದವು. ಅಲ್ಲದೆ, ಆ ಕಲ್ಲಿನ ಸ್ತಂಭಕ್ಕೆ ಧಾರ್ಮಿಕ ಮಹತ್ವವಿದೆಯೇ ಎಂಬ ಬಗ್ಗೆಯೂ ಪ್ರಶ್ನೆ ಎತ್ತಿದ ಸರ್ಕಾರ, ಅದು ಕೇವಲ ಸರ್ವೆ ಗುರುತು ಅಥವಾ ಜೈನರ ಬಳಕೆಗೆ ಸಂಬಂಧಿಸಿದ ಅವಶೇಷವಾಗಿರಬಹುದು ಎಂದು ಹೇಳಿತು.
ಜನಸಂದಣಿ ನಿಯಂತ್ರಣ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ಬರುವ ಆತಂಕ ವ್ಯಕ್ತಪಡಿಸಿದ ಪೊಲೀಸರು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದರು. ಇದರಿಂದಾಗಿ ಕಳೆದ ವರ್ಷ ಹಬ್ಬದ ದಿನ ದೀಪ ಹಚ್ಚಲು ಸಾಧ್ಯವಾಗಲಿಲ್ಲ. ಬಳಿಕ ರಾಜ್ಯ ಸರ್ಕಾರ, HR ಮತ್ತು CE ಇಲಾಖೆ ಹಾಗೂ ದರ್ಗಾದ ಪ್ರತಿನಿಧಿಗಳು ಮೇಲ್ಮನವಿ ಸಲ್ಲಿಸಿದರು.
►ವಿಭಾಗೀಯ ಪೀಠದ ತೀರ್ಪೇನು?
ಈ ವರ್ಷದ ಆರಂಭದಲ್ಲಿ ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠವು ಈ ಪ್ರಕರಣದ ಕುರಿತು ತೀರ್ಪು ನೀಡಿತು.
ಆ ರಚನೆಯಲ್ಲಿ ಎಣ್ಣೆ ಮತ್ತು ಬತ್ತಿಗಳನ್ನು ಇಡಲು ಸಾಧ್ಯವಾಗುವಂತಹ ಕೆತ್ತನೆಯ ಕುಳಿ ಇರುವುದನ್ನು ಗಮನಿಸಿದ ನ್ಯಾಯಾಲಯ, ಅದೊಂದು 'ದೀಪಸ್ತಂಭ' (ದೀಪತೂಣ್) ಎಂದು ಸ್ಪಷ್ಟಪಡಿಸಿತು. ಅದು ಕೇವಲ ಸರ್ವೆ ಕಲ್ಲು ಎಂಬ ವಾದವನ್ನು ಪೀಠ ತಳ್ಳಿಹಾಕಿತು.
ಕಾನೂನು ಮತ್ತು ಸುವ್ಯವಸ್ಥೆಯ ವಿಚಾರವಾಗಿ ಪ್ರತಿಕ್ರಿಯಿಸಿದ ನ್ಯಾಯಾಲಯ, ಆಡಳಿತ ಯಂತ್ರದ ಆತಂಕಗಳು "ಕೇವಲ ಕಾಲ್ಪನಿಕ ಭೂತವಲ್ಲದೆ ಬೇರೇನೂ ಅಲ್ಲ" ಎಂದು ಹೇಳಿತು. ವರ್ಷಕ್ಕೊಮ್ಮೆ ದೇವಾಲಯದ ಅಧಿಕಾರಿಗಳ ಸಣ್ಣ ತಂಡವೊಂದು ಬೆಟ್ಟ ಹತ್ತಲು ಅವಕಾಶ ನೀಡುವುದನ್ನು ನಿಭಾಯಿಸಲು ಅಸಾಧ್ಯವಾದ ಕೆಲಸ ಎಂದು ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟಿತು.
ಇದೇ ವೇಳೆ, ಏಕಸದಸ್ಯ ಪೀಠದ ಆದೇಶವನ್ನು ಮಾರ್ಪಡಿಸಿದ ವಿಭಾಗೀಯ ಪೀಠ, ಸಾರ್ವಜನಿಕರಿಗೆ ಪ್ರವೇಶ ನೀಡದೆ ಕೇವಲ ಸೀಮಿತ ತಂಡದ ಮೂಲಕ ಮಾತ್ರ ದೇವಸ್ಥಾನವು ದೀಪಸ್ತಂಭದ ಬಳಿ ದೀಪ ಹಚ್ಚಬಹುದು ಎಂದು ನಿರ್ದೇಶಿಸಿತು. ಸ್ಮಾರಕದ ರಕ್ಷಣೆಗಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವಿಧಿಸುವ ಷರತ್ತುಗಳಿಗೆ ಒಳಪಟ್ಟು, ಈ ಪ್ರಕ್ರಿಯೆಯನ್ನು ಸಮನ್ವಯಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು.
►ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಹೇಗೆ?
ಈ ವರ್ಷದ ಜೂನ್ ನಲ್ಲಿ ತಮಿಳುನಾಡು ಸರ್ಕಾರವು ವಿಭಾಗೀಯ ಪೀಠದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಯಿತು. ದರ್ಗಾ ಆಡಳಿತ ಮಂಡಳಿ ಮತ್ತು ಇತರ ಕಕ್ಷಿದಾರರು ಸಹ ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿದರು. ದರ್ಗಾದ ಸಮೀಪವಿರುವ ಕಲ್ಲಿನ ಸ್ತಂಭದ ಬಳಿ ದೀಪ ಹಚ್ಚಲು ಅವಕಾಶ ನೀಡಿದರೆ, ದೇಶಾದ್ಯಂತ ಇರುವ ಸಾವಿರಾರು ಸರ್ವೆ ಕಲ್ಲುಗಳು ಧಾರ್ಮಿಕ ಸ್ವರೂಪ ಪಡೆದುಕೊಳ್ಳುವ ಅಪಾಯವಿದೆ ಎಂದು ತಮಿಳುನಾಡು ಸರ್ಕಾರ ಬುಧವಾರ ವಾದಿಸಿತು.
ಈ ವರ್ಷದ ಕಾರ್ತಿಕ ದೀಪೋತ್ಸವಕ್ಕೂ ಮುನ್ನ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನ. 24ರಂದು ವಿವಾದಿತ ಸ್ತಂಭದ ಬಳಿ ದೀಪ ಹಚ್ಚಲು ನ. 20ರಂದು ಮಧ್ಯಂತರ ಆದೇಶ ನೀಡಿದೆ. ಆದರೆ, ಇದು ಕೇವಲ ಒಂದು ಬಾರಿಯ ಕ್ರಮವಾಗಿರಬೇಕು ಮತ್ತು ಸುರಕ್ಷತಾ ಕ್ರಮಗಳಿಗೆ ಒಳಪಟ್ಟಿರಬೇಕು ಎಂದು ಷರತ್ತು ವಿಧಿಸಿದೆ.
ಮತ್ತೊಂದೆಡೆ, 'ದೀಪಸ್ತಂಭ'ದ ಬಳಿ ದೀಪ ಹಚ್ಚಲು ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಸೌಜನ್ಯ: indianexpress.com