ಜಾಗತಿಕ ಪೆಟ್ರೋಲ್ ಪೂರೈಕೆ ಹೆಚ್ಚಿಸಲು ಅಮೆರಿಕ, ಚೀನಾ ಮತ್ತು ರಷ್ಯಾ ಪ್ರತಿಜ್ಞೆ; ಆದರೆ ಇದು ಹೇಗೆ ಸಾಧ್ಯ?
►ಪ್ರಿಯಾಂಕಾ ಶಂಕರ್ – Aljazeera. com ವರದಿ
Photo Credit : PTI
ಇಸ್ರೇಲ್ ಮತ್ತು ಅಮೆರಿಕ ಆರಂಭಿಸಿದ ಇರಾನ್ ಯುದ್ಧ ಹಾಗೂ ರಷ್ಯಾ ಆರಂಭಿಸಿದ ಉಕ್ರೇನ್ ಯುದ್ಧವು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತೀವ್ರ ಏರುಪೇರು ಉಂಟುಮಾಡಿರುವ ಬೆನ್ನಲ್ಲೇ, ಪೆಟ್ರೋಲಿಯಂ ಪೂರೈಕೆಯನ್ನು ಹೆಚ್ಚಿಸುವುದಾಗಿ ಅಮೆರಿಕ, ಚೀನಾ ಮತ್ತು ರಷ್ಯಾ ದೇಶಗಳು ಪ್ರತಿಜ್ಞೆ ಮಾಡಿವೆ.
ಗುರುವಾರ ಚೀನಾದ ಶೆನ್ಜೆನ್ ನಲ್ಲಿ ನಡೆದ ತ್ರಿಪಕ್ಷೀಯ ಶೃಂಗಸಭೆಯ ಬಳಿಕ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. "ಎಲ್ಲಾ ರಾಷ್ಟ್ರಗಳ ಹಿತದೃಷ್ಟಿಯಿಂದ ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ಯೋಜಿಸುತ್ತಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಇದರೊಂದಿಗೆ, "ಸ್ಥಿರವಾದ ಇಂಧನ ಪೂರೈಕೆಯ ಮಹತ್ವವನ್ನು" ಮೂವರು ನಾಯಕರು ಪುನರುಚ್ಚರಿಸಿದ್ದಾರೆ.
ಆದರೆ, ಇದು ವಾಸ್ತವದಲ್ಲಿ ಹೇಗೆ ಕಾರ್ಯರೂಪಕ್ಕೆ ಬರಲಿದೆ ಎಂಬ ಬಗ್ಗೆ ವಿಶ್ಲೇಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಹೆಚ್ಚುವರಿ ತೈಲ ಸಂಸ್ಕರಣಾ ಸಾಮರ್ಥ್ಯ ಇಲ್ಲದಿರುವುದು, ರಷ್ಯಾದ ಇಂಧನ ಮೂಲಸೌಕರ್ಯಗಳ ಮೇಲೆ ಉಕ್ರೇನ್ ನಿರಂತರ ದಾಳಿ ನಡೆಸುತ್ತಿರುವುದು ಹಾಗೂ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧದಿಂದ ಚೀನಾದ ಕಚ್ಚಾ ತೈಲ ಆಮದಿಗೆ ಅಡ್ಡಿಯಾಗಿರುವುದು ಇದಕ್ಕೆ ಮುಖ್ಯ ಕಾರಣಗಳಾಗಿವೆ.
"ಈ ತ್ರಿಪಕ್ಷೀಯ ಹೇಳಿಕೆಯನ್ನು ಜಾಗತಿಕ ಇಂಧನ ಪೂರೈಕೆ ಹೆಚ್ಚಿಸುವ ಮೊದಲ ಹೆಜ್ಜೆಯೆಂದು ಪರಿಗಣಿಸುವ ಬದಲು, ಕೇವಲ ರಾಜಕೀಯ ಸದ್ದು ಎಂದಷ್ಟೇ ನೋಡಬೇಕು" ಎಂದು ಕ್ಯಾಪಿಟಲ್ ಎಕನಾಮಿಕ್ಸ್ ನ ಹಿರಿಯ ಅರ್ಥಶಾಸ್ತ್ರಜ್ಞ ಹಮದ್ ಹುಸೇನ್ ಹೇಳಿರುವುದಾಗಿ Aljazeera.com ವರದಿ ಉಲ್ಲೇಖಿಸಿದೆ.
"ಗ್ರಾಹಕರು ಮತ್ತು ತಮ್ಮ ಮತದಾರರನ್ನು ಸಮಾಧಾನಪಡಿಸಲು ಈ ಘೋಷಣೆ ಮಾಡಿದಂತಿದೆ. ಪೂರೈಕೆ ಹೆಚ್ಚಿಸಲು ಈ ಹಿಂದೆ ನಡೆಸಿದ ಪ್ರಯತ್ನಗಳು (ಅಮೆರಿಕ-ರಷ್ಯಾ ಡೀಸೆಲ್ ಒಪ್ಪಂದದಂತಹವು) ಎಲ್ಲಿಗೂ ತಲುಪಲಿಲ್ಲ" ಎಂದು ಮಿಡಲ್ ಈಸ್ಟ್ ಕೌನ್ಸಿಲ್ ಆನ್ ಗ್ಲೋಬಲ್ ಅಫೇರ್ಸ್ನ ಹಿರಿಯ ಸಂಶೋಧಕ ಫ್ರೆಡೆರಿಕ್ ಷ್ನೇಯ್ಡರ್ ಅಭಿಪ್ರಾಯಪಟ್ಟಿದ್ದಾರೆ.
►ಈ ದೇಶಗಳ ತೈಲ ಸಂಸ್ಕರಣಾಗಾರಗಳು ಎಷ್ಟು ದೊಡ್ಡದಾಗಿವೆ?
ತೈಲ ಸಂಸ್ಕರಣಾ ಸಾಮರ್ಥ್ಯದ ಆಧಾರದ ಮೇಲೆ ಚೀನಾ ಮತ್ತು ಅಮೆರಿಕ ವಿಶ್ವದ ಅತಿ ದೊಡ್ಡ ರಾಷ್ಟ್ರಗಳಾಗಿದ್ದು, ರಷ್ಯಾ ಮತ್ತು ಭಾರತ ನಂತರದ ಸ್ಥಾನಗಳಲ್ಲಿವೆ.
►ಚೀನಾ
ಚೀನಾವು ಪ್ರತಿದಿನ ಸುಮಾರು 18.5 ರಿಂದ 18.83 ಮಿಲಿಯನ್ ಬ್ಯಾರೆಲ್ ಗಳಷ್ಟು (bpd) ತೈಲ ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಈ ದೇಶದ ತೈಲ ಸಂಸ್ಕರಣೆಯು ಕಚ್ಚಾ ತೈಲದ ಆಮದನ್ನೇ ಅವಲಂಬಿಸಿದೆ. ಹಾರ್ಮುಝ್ ಜಲಸಂಧಿಯಲ್ಲಿ ನಡೆಯುತ್ತಿರುವ ಅಮೆರಿಕ-ಇರಾನ್ ಸಂಘರ್ಷದಿಂದಾಗಿ ಈ ಆಮದಿಗೆ ತೀವ್ರ ಅಡ್ಡಿಯಾಗಿದೆ. ಸಾಮಾನ್ಯವಾಗಿ ಗಲ್ಫ್ ತೈಲ ರಫ್ತುದಾರರು ಇದೇ ಮಾರ್ಗದ ಮೂಲಕ ಏಷ್ಯಾಕ್ಕೆ ಹೆಚ್ಚಿನ ಪ್ರಮಾಣದ ಕಚ್ಚಾ ತೈಲವನ್ನು ಸಾಗಿಸುತ್ತಾರೆ.
ಅಮೆರಿಕದ ಇಂಧನ ಮಾಹಿತಿ ಆಡಳಿತದ (EIA) ನ. ವರದಿಯ ಪ್ರಕಾರ, 2026ರ ಎರಡನೇ ತ್ರೈಮಾಸಿಕದಲ್ಲಿ ಚೀನಾದ ಕಚ್ಚಾ ತೈಲ ಆಮದು ಪ್ರತಿದಿನ 2.1 ಮಿಲಿಯನ್ ಬ್ಯಾರೆಲ್ ಗಳಷ್ಟು ಕಡಿಮೆಯಾಗಿದೆ. ಮೂರನೇ ತ್ರೈಮಾಸಿಕದಲ್ಲಿ ಇದು ಮತ್ತೆ 0.8 ಮಿಲಿಯನ್ ಬ್ಯಾರೆಲ್ ಗಳಷ್ಟು ಕುಸಿದಿದೆ.
►ಅಮೆರಿಕ
ಈ ವರ್ಷದ ಜನವರಿ 1ರ ಅಂಕಿಅಂಶಗಳ ಪ್ರಕಾರ, ಅಮೆರಿಕವು ಪ್ರತಿದಿನ ಸುಮಾರು 18.16 ಮಿಲಿಯನ್ ಬ್ಯಾರೆಲ್ ಗಳಷ್ಟು ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಯುದ್ಧ ಆರಂಭವಾದಾಗಿನಿಂದ ಉತ್ಪಾದನೆ ಹೆಚ್ಚಾಗಿದ್ದು, ಈಗಾಗಲೇ ಪೂರ್ಣ ಸಾಮರ್ಥ್ಯದ ಹತ್ತಿರದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಅಕ್ಟೋಬರ್ ನಲ್ಲಿ ಬಿಡುಗಡೆಯಾದ EIA ವರದಿಯ ಪ್ರಕಾರ, "ಅಮೆರಿಕದ ತೈಲ ಸಂಸ್ಕರಣಾಗಾರಗಳು ಈ ವರ್ಷ ಸಾಮಾನ್ಯಕ್ಕಿಂತ ಹೆಚ್ಚಿನ ವೇಗದಲ್ಲಿ ಕೆಲಸ ಮಾಡಿವೆ. ಮೇ ಮತ್ತು ಸೆಪ್ಟೆಂಬರ್ ನಡುವೆ ಸಂಸ್ಕರಣಾಗಾರಗಳ ಬಳಕೆಯು ಶೇ. 95ಕ್ಕಿಂತ ಹೆಚ್ಚಿದ್ದು, 1998ರ ನಂತರ ಈ ತಿಂಗಳುಗಳಲ್ಲಿ ದಾಖಲಾದ ಗರಿಷ್ಠ ಪ್ರಮಾಣ ಇದಾಗಿದೆ."
►ರಷ್ಯಾ
ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯ ಪ್ರಕಾರ, ರಷ್ಯಾ ಪ್ರತಿದಿನ ಸುಮಾರು 6.5 ಮಿಲಿಯನ್ ಬ್ಯಾರೆಲ್ ಗಳಷ್ಟು ತೈಲ ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ.
ಆದರೆ, ರಷ್ಯಾದ ಇಂಧನ ಮೂಲಸೌಕರ್ಯಗಳ ಮೇಲೆ ಉಕ್ರೇನ್ ನಡೆಸುತ್ತಿರುವ ಡ್ರೋನ್ ದಾಳಿಗಳು ಅದರ ಸಂಸ್ಕರಣಾ ಸಾಮರ್ಥ್ಯದ ಮೇಲೆ ತೀವ್ರ ಪರಿಣಾಮ ಬೀರಿವೆ. "ಜೂನ್ ತಿಂಗಳಲ್ಲಿ ರಷ್ಯಾದ ತೈಲ ಸಂಸ್ಕರಣಾ ಪ್ರಮಾಣವು ದಿನಕ್ಕೆ 3.8 ಮಿಲಿಯನ್ ಬ್ಯಾರೆಲ್ ಗಳಿಗೆ ಕುಸಿದಿದೆ. ಇದು 20ಕ್ಕೂ ಹೆಚ್ಚು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟವಾಗಿದ್ದು, ಕಳೆದ ವರ್ಷಕ್ಕಿಂತ ಸುಮಾರು ಶೇ. 30ರಷ್ಟು ಕಡಿಮೆಯಾಗಿದೆ" ಎಂದು ಸೆಪ್ಟೆಂಬರ್ ನ ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯ ವರದಿ ತಿಳಿಸಿದೆ.
►ಭಾರತ
ಇದೇ ವೇಳೆ, ಸರ್ಕಾರಿ ಅಂಕಿಅಂಶಗಳ ಪ್ರಕಾರ ಭಾರತವು ಪ್ರತಿದಿನ ಸುಮಾರು 5.36 ಮಿಲಿಯನ್ ಬ್ಯಾರೆಲ್ ಗಳಷ್ಟು ತೈಲ ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಭಾರತವೂ ಸಹ ಕಚ್ಚಾ ತೈಲ ಆಮದನ್ನೇ ಹೆಚ್ಚಾಗಿ ಅವಲಂಬಿಸಿದ್ದು, ಹಾರ್ಮುಝ್ ಜಲಸಂಧಿಯಲ್ಲಿನ ದಿಗ್ಬಂಧನಗಳಿಂದಾಗಿ ತೈಲ ಪೂರೈಕೆಗೆ ತೊಂದರೆಯಾಗಿದೆ.
►ಅಮೆರಿಕಕ್ಕೆ ಇನ್ನೂ ಹೆಚ್ಚಿನ ಪೆಟ್ರೋಲಿಯಂ ಸಂಸ್ಕರಿಸಲು ಸಾಧ್ಯವೇ?
ಅಮೆರಿಕದ ಇಂಧನ ಮಾಹಿತಿ ಆಡಳಿತದ ಪ್ರಕಾರ, ಅಮೆರಿಕದ ತೈಲ ಸಂಸ್ಕರಣಾಗಾರಗಳು ಪ್ರಸ್ತುತ ತಮ್ಮ ಗರಿಷ್ಠ ಸಾಮರ್ಥ್ಯದ ಹತ್ತಿರದಲ್ಲಿ ಕಾರ್ಯನಿರ್ವಹಿಸುತ್ತಿವೆ.
"ಜಾಗತಿಕ ಮಟ್ಟದಲ್ಲಿ ಡಿಸ್ಟಿಲೇಟ್ ಇಂಧನ ತೈಲದ ಪೂರೈಕೆ ಕಡಿಮೆಯಾಗಿರುವುದರಿಂದ, ಅಮೆರಿಕದ ಇಂಧನ ರಫ್ತಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಇದೇ ಸಂಸ್ಕರಣಾಗಾರಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಮುಖ್ಯ ಕಾರಣ" ಎಂದು ನವೆಂಬರ್ ನ EIA ವರದಿ ತಿಳಿಸಿದೆ. ಡೀಸೆಲ್ ಇಂಧನ ಮತ್ತು ಲಘು ಇಂಧನ ತೈಲಗಳನ್ನು ಒಳಗೊಂಡಿರುವ ಸಂಸ್ಕರಿಸಿದ ಪೆಟ್ರೋಲಿಯಂ ಅನ್ನು ಡಿಸ್ಟಿಲೇಟ್ ಇಂಧನ ತೈಲ ಎನ್ನಲಾಗುತ್ತದೆ.
ಈ ವರ್ಷ ತೈಲ ಬೆಲೆ ಹೆಚ್ಚಿರುವುದರಿಂದ ಇನ್ನಷ್ಟು ತೈಲ ಸಂಸ್ಕರಿಸುವುದು ಲಾಭದಾಯಕವಾಗಬಹುದು. ಆದರೆ, ವಾಷಿಂಗ್ಟನ್ ಬಳಿ "ಹೆಚ್ಚುವರಿ ಸಾಮರ್ಥ್ಯ ಇಲ್ಲದಿರುವುದೇ" ದೊಡ್ಡ ಸಮಸ್ಯೆಯಾಗಿದೆ ಎಂದು ಅರ್ಥಶಾಸ್ತ್ರಜ್ಞ ಹುಸೇನ್ ಹೇಳಿದ್ದಾರೆ.
ಜಾಗತಿಕ ಇಂಧನ ಪೂರೈಕೆಯನ್ನು ಹೆಚ್ಚಿಸಲು ತಾವು ಬದ್ಧರಾಗಿದ್ದೇವೆ ಎಂದು ಟ್ರಂಪ್ ಆಡಳಿತ ಹೇಳಿದೆ. ಇದಕ್ಕಾಗಿ "ಸಾಧ್ಯವಿರುವ ಪ್ರತಿಯೊಂದು ಸಂಸ್ಕರಣಾಗಾರವನ್ನು ಮತ್ತೆ ತೆರೆಯುವ ಬಗ್ಗೆ ತಮ್ಮ ಇಲಾಖೆ ಮಾತುಕತೆ ನಡೆಸುತ್ತಿದೆ" ಎಂದು ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ತಿಳಿಸಿದ್ದಾರೆ.
ನ. 19ರ ರಾಯಿಟರ್ಸ್ ವರದಿಯ ಪ್ರಕಾರ, ಅಮೆರಿಕದ ತೈಲ ಸಂಸ್ಕರಣಾ ಕಂಪೆನಿ ವ್ಯಾಲೆರೊ ಎನರ್ಜಿ, ಟೆಕ್ಸಾಸ್ನ ಹೂಸ್ಟನ್ ಬಳಿಯಿರುವ ಶತಮಾನದಷ್ಟು ಹಳೆಯ ಲಿಯೊಂಡೆಲ್ ಬಾಸೆಲ್ ಇಂಡಸ್ಟ್ರೀಸ್ ಸಂಸ್ಕರಣಾಗಾರವನ್ನು ಅಕ್ಟೋಬರ್ ನಲ್ಲಿ ಖರೀದಿಸಲು ಒಪ್ಪಿಕೊಂಡಿದೆ. ಇದರ ಒಂದು ಭಾಗವನ್ನು ಪುನಶ್ಚೇತನಗೊಳಿಸುವ ಮೂಲಕ 2027ರ ಅಂತ್ಯದ ವೇಳೆಗೆ ಪ್ರತಿದಿನ 1,65,000 ಬ್ಯಾರೆಲ್ ಗಳಷ್ಟು ಹೆಚ್ಚುವರಿ ಸಂಸ್ಕರಣಾ ಸಾಮರ್ಥ್ಯವನ್ನು ಸೇರಿಸಲು ಕಂಪೆನಿ ಯೋಜಿಸಿದೆ.
ಈ ಯೋಜನೆಯು ಅಮೆರಿಕದಲ್ಲಿ ಹಲವು ವರ್ಷಗಳಿಂದ ಸಂಸ್ಕರಣಾಗಾರಗಳು ಮುಚ್ಚುತ್ತಿದ್ದ ಪ್ರಕ್ರಿಯೆಗೆ ತಿರುವು ನೀಡಲಿದ್ದು, ದೇಶದ ಒಟ್ಟು 18 ಮಿಲಿಯನ್ ಬ್ಯಾರೆಲ್ ಸಾಮರ್ಥ್ಯಕ್ಕೆ ಸುಮಾರು ಶೇ. 1ರಷ್ಟು ಕೊಡುಗೆ ನೀಡಲಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆದರೆ, ಈ ಸಂಸ್ಕರಣಾಗಾರವನ್ನು ಖರೀದಿಸಿ ಮತ್ತೆ ಕಾರ್ಯಾರಂಭ ಮಾಡಲು ತಗಲುವ ಒಟ್ಟು ವೆಚ್ಚ 1 ಬಿಲಿಯನ್ ಡಾಲರ್ ತಲುಪಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
►ರಷ್ಯಾಕ್ಕೆ ಪೂರೈಕೆ ಹೆಚ್ಚಿಸಲು ಸಾಧ್ಯವೇ?
ಕಳೆದ ವರ್ಷದಿಂದ ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲೆ ಉಕ್ರೇನ್ ನಡೆಸುತ್ತಿರುವ ದೂರಗಾಮಿ ಡ್ರೋನ್ ದಾಳಿಗಳು ದೇಶಾದ್ಯಂತ ತೀವ್ರ ಇಂಧನ ಕೊರತೆಗೆ ಕಾರಣವಾಗಿವೆ.
ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯ ಪ್ರಕಾರ, 2026ರ ಮೊದಲ ಎಂಟು ತಿಂಗಳಲ್ಲಿ ಸರಾಸರಿ ಮೂರು ದಿನಗಳಿಗೊಮ್ಮೆ ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲೆ ದಾಳಿ ನಡೆದಿದೆ.
ಅಕ್ಟೋಬರ್ ಅಂತ್ಯದಿಂದ ಡ್ರೋನ್ ದಾಳಿಗಳು ರಷ್ಯಾದ ತೈಲ ಸಂಸ್ಕರಣಾಗಾರಗಳ ಒಟ್ಟು ಕಚ್ಚಾ ತೈಲ ಸಂಸ್ಕರಣಾ ಪ್ರಮಾಣವನ್ನು ಶೇ. 45ರಷ್ಟು ಕಡಿತಗೊಳಿಸಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಇದರಿಂದಾಗಿ ಹಲವು ಪ್ರದೇಶಗಳಲ್ಲಿ ಇಂಧನ ಮಾರಾಟಕ್ಕೆ ಮಿತಿ ಹೇರಲು ಆರಂಭಿಸಲಾಗಿದೆ.
ಕ್ರಿಮಿಯಾದ ಸೆವಾಸ್ಟೊಪೋಲ್ ಪ್ರದೇಶದ ರಷ್ಯಾ ನಿಯೋಜಿತ ಗವರ್ನರ್ ಮಿಖಾಯಿಲ್ ರಜ್ವೊಝಾಯೆವ್ ಅವರು ಗುರುವಾರದಿಂದ ಹಲವು ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ಮಾರಾಟಕ್ಕೆ ಮಿತಿ ಹೇರಿರುವುದಾಗಿ ಹೇಳಿದ್ದಾರೆ ಎಂದು ರಾಯಿಟರ್ಸ್ ಶುಕ್ರವಾರ ವರದಿ ಮಾಡಿದೆ. ಇದರಂತೆ, ಒಂದು ಕಾರಿನ ಟ್ಯಾಂಕ್ ಭರ್ತಿ ಮಾಡಲು ಮತ್ತು ಜೆರಿಕ್ಯಾನ್ ಗಳಲ್ಲಿ ಕೇವಲ 20 ಲೀಟರ್ ಪೆಟ್ರೋಲ್ ಪಡೆಯಲು ಮಾತ್ರ ಅವಕಾಶ ನೀಡಲಾಗಿದೆ.
ಜನರು ಒಂದೇ ಬಾರಿಗೆ ನೂರಾರು ಲೀಟರ್ ಇಂಧನವನ್ನು ಕ್ಯಾನ್ ಗಳಲ್ಲಿ ತುಂಬಿಸಿಕೊಳ್ಳುವುದರಿಂದ ಬಂಕ್ ಗಳಲ್ಲಿ ಉದ್ದನೆಯ ಸಾಲುಗಳು ನಿರ್ಮಾಣವಾಗುತ್ತಿವೆ ಮತ್ತು ಇತರರಿಗೆ ಇಂಧನ ಸಿಗದಂತಾಗುತ್ತಿದೆ. ಇದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸ್ಥಳೀಯ ಅಧಿಕಾರಿಗಳ ಮಾಹಿತಿಯಂತೆ, ಸೈಬೀರಿಯಾದ ಟಾಮ್ಸ್ಕ್ ನಗರದಲ್ಲೂ ಕಳೆದ ವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವನ್ನು ಕ್ರಮವಾಗಿ 30 ಮತ್ತು 50 ಲೀಟರ್ ಗಳಿಗೆ ಸೀಮಿತಗೊಳಿಸಲಾಗಿದೆ.
ಮಾಸ್ಕೋದಿಂದ ಆಗ್ನೇಯಕ್ಕೆ 770 ಕಿ.ಮೀ ದೂರದಲ್ಲಿರುವ ಪೆನ್ಜಾ ನಗರದಲ್ಲಿ ಗುರುವಾರದಿಂದ ಪ್ರತಿ ವಾಹನಕ್ಕೆ 50 ಲೀಟರ್ ಪೆಟ್ರೋಲ್ ಮತ್ತು 200 ಲೀಟರ್ ಡೀಸೆಲ್ ಮಾತ್ರ ನೀಡಲು ನಿರ್ಬಂಧ ವಿಧಿಸಲಾಗಿದೆ. ಈ ತಿಂಗಳ ಆರಂಭದಲ್ಲೇ ಇನ್ನೂ ಅರ್ಧ ಡಜನ್ಗೂ ಹೆಚ್ಚು ಪ್ರದೇಶಗಳಲ್ಲಿ ಇಂತಹ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.
ಉಕ್ರೇನ್ ದಾಳಿಗಳು ಮುಂದುವರಿದಿರುವುದು ಮತ್ತು ರಷ್ಯಾವೇ ಇಂಧನ ಬಳಕೆಗೆ ಮಿತಿ ಹೇರಿರುವುದರಿಂದ, ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ತೈಲ ಸಂಸ್ಕರಿಸುವುದು ದೇಶಕ್ಕೆ ದೊಡ್ಡ ಸವಾಲಾಗಿದೆ.
ನವೆಂಬರ್ ನ EIA ವರದಿಯ ಪ್ರಕಾರ, ರಷ್ಯಾ ಪ್ರಮುಖ ಇಂಧನ ರಫ್ತುದಾರ ದೇಶವಾಗಿದ್ದು, ವಿಶೇಷವಾಗಿ ಡೀಸೆಲ್ ರಫ್ತಿನಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ, ಅದರ ತೈಲ ಸಂಸ್ಕರಣೆಯಲ್ಲಿ ಉಂಟಾಗುವ ಯಾವುದೇ ಅಡಚಣೆ ಮತ್ತು ರಫ್ತು ಕುಸಿತವು ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರಲಿದೆ.
ಕೆಲವು ಪ್ರಮಾಣದ ರಷ್ಯಾದ ಡೀಸೆಲ್ ರಫ್ತಿಗೆ ಅವಕಾಶ ನೀಡುವ ಒಪ್ಪಂದಕ್ಕೆ ಅಕ್ಟೋಬರ್ ನಲ್ಲಿ ಟ್ರಂಪ್ ಮತ್ತು ಪುಟಿನ್ ಸಮ್ಮತಿಸಿದ್ದರು. ಆದರೆ, ವ್ಯಾಪಾರಿಗಳು ಅದನ್ನು ಸ್ವೀಕರಿಸಲು ನಿರಾಕರಿಸಿರುವುದರಿಂದ ಹಡಗಿನಲ್ಲಿ ಸಾಗಿಸಲಾದ ಯಾವುದೇ ಇಂಧನವು ಗ್ರಾಹಕರನ್ನು ತಲುಪಿಲ್ಲ.
ರಷ್ಯಾದ ಸಂಸ್ಕರಣಾಗಾರಗಳ ಕಾರ್ಯಾಚರಣೆ ಸ್ಥಗಿತಗೊಂಡಿರುವುದು "ಏಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲೂ ತೈಲ ಸಂಸ್ಕರಣಾ ಚಟುವಟಿಕೆಗಳನ್ನು ಕಡಿಮೆ ಮಾಡಿದೆ. ಇದರಿಂದ ಸೆಪ್ಟೆಂಬರ್ ನಲ್ಲಿ ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಲು ಕಾರಣವಾಯಿತು" ಎಂದು EIA ವರದಿ ಉಲ್ಲೇಖಿಸಿದೆ.
►ಚೀನಾಕ್ಕೆ ಈ ಕೊರತೆಯನ್ನು ತುಂಬಲು ಸಾಧ್ಯವೇ?
ಈ ವರ್ಷದ ಆರಂಭದಲ್ಲಿ ಹಾರ್ಮುಝ್ ಜಲಸಂಧಿಯಲ್ಲಿ ನಡೆದ ಸಂಘರ್ಷದಿಂದಾಗಿ ಚೀನಾದ ಕಚ್ಚಾ ತೈಲ ಆಮದಿಗೆ ತೊಂದರೆಯಾಗಿತ್ತು. ಈಗ ಅದು ಬಹುತೇಕ ಚೇತರಿಸಿಕೊಂಡಿದೆ.
ಚೀನಾ ತನ್ನ ಕಾರ್ಯತಂತ್ರದ ಮತ್ತು ವಾಣಿಜ್ಯ ಸಂಗ್ರಹಾಗಾರಗಳಿಗೆ ಬರುವ ಅಥವಾ ಹೊರಹೋಗುವ ಕಚ್ಚಾ ತೈಲದ ಪ್ರಮಾಣವನ್ನು ಅಧಿಕೃತವಾಗಿ ಬಹಿರಂಗಪಡಿಸುವುದಿಲ್ಲ. ಆದರೂ, ವಿಶ್ವದ ಅತಿ ದೊಡ್ಡ ಕಚ್ಚಾ ತೈಲ ಆಮದುದಾರ ದೇಶವಾದ ಚೀನಾಕ್ಕೆ ಅಕ್ಟೋಬರ್ ನಲ್ಲಿ ಪ್ರತಿದಿನ 9.88 ಮಿಲಿಯನ್ ಬ್ಯಾರೆಲ್ ಗಳಷ್ಟು ತೈಲ ಬಂದಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಇದು ಸೆಪ್ಟೆಂಬರ್ ನ 9.03 ಮಿಲಿಯನ್ ಬ್ಯಾರೆಲ್ ಗಳಿಗೆ ಹೋಲಿಸಿದರೆ ಶೇ. 9.4ರಷ್ಟು ಹೆಚ್ಚಾಗಿದ್ದು, ಯುದ್ಧ ಆರಂಭವಾದ ಮಾರ್ಚ್ ನಂತರ ದಾಖಲಾದ ಗರಿಷ್ಠ ಪ್ರಮಾಣವಾಗಿದೆ.
ಸಮುದ್ರ ಮಾರ್ಗದ ಸರಕು ದತ್ತಾಂಶ ಸಂಸ್ಥೆ ವೋರ್ಟೆಕ್ಸಾ ಪ್ರಕಾರ, ಫೆಬ್ರವರಿ 28ರಂದು ಇರಾನ್ ಯುದ್ಧ ಆರಂಭವಾಗುವ ಮೊದಲು ಚೀನಾ ಸಮುದ್ರ ಮಾರ್ಗದ ಮೂಲಕ ದಿನಕ್ಕೆ ಸರಾಸರಿ 10.5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸುತ್ತಿತ್ತು.
ಆಮದು ಚೇತರಿಸಿಕೊಂಡಂತೆ ಅಕ್ಟೋಬರ್ ನಲ್ಲಿ ಚೀನಾ ಮತ್ತೆ ಕಚ್ಚಾ ತೈಲವನ್ನು ಸಂಗ್ರಹಿಸಿಡಲು ಆರಂಭಿಸಿದೆ.
ಅರ್ಥಶಾಸ್ತ್ರಜ್ಞ ಹುಸೇನ್ ಅವರ ಪ್ರಕಾರ, ಚೀನಾದ ಬಳಿ ಬಳಸಿಕೊಳ್ಳಬಹುದಾದ ಒಂದಿಷ್ಟು ಹೆಚ್ಚುವರಿ ತೈಲ ಸಂಸ್ಕರಣಾ ಸಾಮರ್ಥ್ಯವಿದೆ.
"ಆದರೆ, ಚೀನಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದಾಸ್ತಾನು ಕಡಿಮೆಯಿರುವಂತೆ ಕಾಣುತ್ತಿದೆ. ಹೀಗಾಗಿ, ಸಂಸ್ಕರಣಾ ಉತ್ಪಾದನೆಯಲ್ಲಿ ಯಾವುದೇ ಹೆಚ್ಚಳವಾದರೂ ಅದನ್ನು ರಫ್ತು ಮಾಡುವ ಬದಲು ತನ್ನದೇ ದಾಸ್ತಾನು ಮರುಪೂರಣಕ್ಕೆ ಬಳಸಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಇದರಿಂದ ಜಾಗತಿಕ ಇಂಧನ ಪೂರೈಕೆಯಲ್ಲಿನ ಬಿಕ್ಕಟ್ಟು ಮುಂದುವರಿಯಲಿದೆ" ಎಂದು ಅವರು ಹೇಳಿದ್ದಾರೆ.
"ಏನೇ ಆದರೂ, ಜಾಗತಿಕ ಇಂಧನ ಬೆಲೆಗಳನ್ನು ತಗ್ಗಿಸಲು ಮಧ್ಯಪ್ರಾಚ್ಯದಿಂದ ಸಂಸ್ಕರಿಸಿದ ತೈಲ ಉತ್ಪಾದನೆ ಮತ್ತೆ ಆರಂಭವಾಗುವುದು ಅತ್ಯಂತ ನಿರ್ಣಾಯಕವಾಗಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸೌಜನ್ಯ: Aljazeera.com