×
Ad

ದಸರಾ ಉದ್ಘಾಟಿಸಿ ದ್ವೇಷಕೋರರಿಗೆ ಪ್ರೀತಿ ಕಲಿಸಿದ ಬಾನು ಮುಷ್ತಾಕ್

ಬಾಗಿನ ಕವನ ವಾಚಿಸಿ, ಭಾಷಣದ ಮೆರುಗನ್ನು ಹೆಚ್ಚಿಸಿದ ಹೆಮ್ಮೆಯ ಕನ್ನಡತಿ

Update: 2025-09-22 12:46 IST

ಅವರು ಹಳದಿ ಬಣ್ಣದ ಮೈಸೂರು ರೇಷ್ಮೆ ಸೀರೆ, ಹಸಿರು ಕುಪ್ಪಸ ಧರಿಸಿ, ಮೈಸೂರು ಮಲ್ಲಿಗೆ ಮುಡಿದು ಬಂದರು. ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ಚಾಮುಂಡಿಗೆ ನಮಸ್ಕರಿಸಿ, ಆರತಿ ಪಡೆದರು. ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟಿಸಿದರು. ಟೀಕಾಕಾರರಿಗೆ ಇದು ಬೂಕರ್ ಪ್ರಶಸ್ತಿ ಪುರಸ್ಕೃತ ಲೆಖಕಿ ಬಾನು ಮುಷ್ತಾಕ್ ಕೊಟ್ಟ ಉತ್ತರವಾಗಿತ್ತು.

ದೇವಿ ದರ್ಶನ ಮಾಡುತ್ತಾರೆಯೇ, ಆರತಿ ತೆಗೆದುಕೊಳ್ಳುತ್ತಾರಾ, ಸಂಪ್ರದಾಯ ಪಾಲಿಸುತ್ತಾರಾ ಎಂದೆಲ್ಲ ಪ್ರಶ್ನಿಸಿದ ಬಿಜೆಪಿಯವರಿಗೆ ಈ ಮೂಲಕ ಬಾನು ಮುಷ್ತಾಕ್ ತಿರುಗೇಟು ನೀಡಿದ್ದಾರೆ.

ಚಾಮುಂಡಿಗೆ ಪೂಜೆ ವೇಳೆ ಬಾನು ಮುಷ್ತಾಕ್ ಭಾವುಕರಾಗಿರುವ ಬಗ್ಗೆಯೂ ವರದಿಗಳು ಹೇಳಿವೆ. ಚಾಮುಂಡೇಶ್ವರಿ ಪೂಜೆ ವೇಳೆ ಅವರು ಕಣ್ಣಂಚಿನ ನೀರನ್ನು ಒರೆಸಿಕೊಂಡ ಚಿತ್ರಗಳು ಕೂಡ, ಅವರನ್ನು ವಿರೋಧಿಸಿದ್ದ ಬಿಜೆಪಿಯವರಿಗೆ, ಅಂತ ಮನಸ್ಥಿತಿಯವರಿಗೆ ಉತ್ತರ ಕೊಡುತ್ತಿವೆ.

 

ಅನಂತರದ ತಮ್ಮ ಭಾಷಣದಲ್ಲಿ ಕೂಡ ಎಲ್ಲಿಯೂ ಕಹಿಗೆ ಅವಕಾಶವಿಲ್ಲದಂತೆ, ಪ್ರೀತಿ ತುಂಬಿಕೊಂಡು ಮಾತಾಡಿದ್ದಾರೆ. ಆಕಾಶ ಯಾರನ್ನೂ ಬೇರ್ಪಡಿಸುವುದಿಲ್ಲ. ಭೂಮಿ ಯಾರನ್ನು ಹೊರತಳ್ಳುವುದಿಲ್ಲ ಎಂದು ಬಾನು ಮುಷ್ತಾಕ್‌ ಹೇಳಿದ್ದಾರೆ.

ನಮ್ಮ ಸಂಸ್ಕೃತಿ ನಮ್ಮ ಬೇರು, ಸೌಹಾರ್ದ ನಮ್ಮ ಶಕ್ತಿ, ಆರ್ಥಿಕತೆಯೇ ನಮ್ಮ ರೆಕ್ಕೆ ಎಂದು ಅವರು ಈ ಬದುಕಿನ ವಿಸ್ತಾರದ ಬಗ್ಗೆ ನೋಟ ಒದಗಿಸಿದ್ದಾರೆ.

ವಿಶ್ವಕ್ಕೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಭಾರತದ ನೆಲೆಯಲ್ಲಿ ನಮ್ಮ ಯುವ ಶಕ್ತಿಯೊಂದಿಗೆ ಸೇರಿ ಮಾನವೀಯ ಮೌಲ್ಯಗಳ ಪ್ರೀತಿಯ ಹೊಸ ಸಮಾಜವನ್ನು ಕಟ್ಟೋಣ. ಅದರಲ್ಲಿ ಎಲ್ಲರಿಗೂ ಸಮಪಾಲು, ಸಮಬಾಳು ಇರಲಿ. ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಒಂದು ಚಿಗುರು ನಮ್ಮ ಎದೆಯಲ್ಲಿ ಒಡೆಯಲಿ ಎಂದು ಬಾನು ಮುಷ್ತಾಕ್ ಹಾರೈಸಿದ್ದಾರೆ.

 

ನಾವು ಅಸ್ತ್ರಗಳಿಂದಲ್ಲ, ಅಕ್ಷರಗಳಿಂದ ಬದುಕನ್ನು ಗೆಲ್ಲಬಹುದು. ಹಗೆಗಳಿಂದ ಅಲ್ಲ, ಪ್ರೀತಿಯಿಂದ ಬದುಕನ್ನು ಅರಳಿಸಬಹುದು ಎಂದು ಅವರು ಹೇಳಿದ್ದಾರೆ.

ಚಾಮುಂಡಿ ಸನ್ನಿಧಿ ಬಳಿ ಕರೆದುಕೊಂಡು ಹೋಗುವುದಾಗಿ ನನ್ನ ಸ್ನೇಹಿತೆ ಹೇಳಿದ್ದಳು. ಆದರೆ, ಸರ್ಕಾರದ ಮೂಲಕ ಚಾಮುಂಡೇಶ್ವರಿ ತಾಯಿಯೇ ನನ್ನನ್ನು ದಸರಾಗೆ ಕರೆಸಿಕೊಂಡಿದ್ದಾಳೆ. ಇದು ನನ್ನ ಜೀವನದ ಅತ್ಯಂತ ಗೌರವಯುತವಾದ ಘಳಿಗೆ ಎಂದು ಅವರು ಹೇಳಿದ್ದಾರೆ.

ದಸರಾ ಶಾಂತಿಯ ಹಬ್ಬ, ಸರ್ವ ಜನಾಂಗದ ಶಾಂತಿಯ ತೋಟ. ಈ ನೆಲದ ಸುಂಗಂಧವೂ ಐಕ್ಯತೆಯಾಗಲಿ. ಮೈಸೂರು ದಸರಾ ಕೇವಲ ದೇಶ ಮತ್ತು ರಾಜ್ಯಕ್ಕೆ ಸೀಮಿತವಾಗದೇ ಪ್ರಪಂಚದಾದ್ಯಂತ ನೆಲೆ ಕಂಡುಕೊಳ್ಳಲಿ ಎಂದು ಆಶಿಸಿದ್ದಾರೆ.

ಚಾಮುಂಡೇಶ್ವರಿ ಎಂದರೆ ಹೆಣ್ಣಿನಲ್ಲಿರುವ ಅಪಾರ ಶಕ್ತಿ. ಸ್ತ್ರೀತ್ವ ಎಂದರೆ ಕೇವಲ ಮೃದುತ್ವ, ತಾಳ್ಮೆ ಎಂದಲ್ಲ. ಅಪಾರ ಗಟ್ಟಿ ಬದುಕಿನ ಹೋರಾಟ ಎಂಬುದನ್ನು ನಾವು ಅರಿಯಬೇಕಿದೆ ಎಂದಿದ್ದಾರೆ.

ಮೈಸೂರಿನ ಇಡೀ ಒಡೆಯರ್ ಅರಸೊತ್ತಿಗೆ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಔದಾರ್ಯಕ್ಕೆ ಮಾದರಿಯಾಗಿತ್ತು. ಸಂಪತ್ತು ಹಂಚಿಕೊಂಡರೆ ವೃದ್ಧಿಯಾಗುತ್ತದೆ, ಶಕ್ತಿ ಹಂಚಿಕೊಂಡಾಗ ಮಾತ್ರ ದೀರ್ಘಕಾಲ ಬದುಕುತ್ತದೆ ಎಂದು ಹೇಳಿದ್ದರು ಎಂದು ಬಾನು ಮುಷ್ತಾಕ್ ನೆನಪಿಸಿಕೊಂಡರು.

ನಾನು ಇದುವರೆಗೂ ಹಲವಾರು ಕಾರ್ಯಕ್ರಮಗಳಿಗೆ ಆಹ್ವಾನಿತಳಾಗಿದ್ದೇನೆ. ನೂರಾರು ಬಾರಿ ದೀಪಗಳನ್ನು ಬೆಳಗಿಸಿದ್ದೇನೆ, ನೂರಾರು ಸಾರಿ ಪುಷ್ಪಾರ್ಚನೆ ಮಾಡಿದ್ದೇನೆ. ಮಂಗಳಾರತಿ ಕೂಡ ಸ್ವೀಕರಿಸಿದ್ದೇನೆ ಎಂದು ಅವರು ತಮ್ಮನ್ನು ಟೀಕಿಸಿದವರಿಗೂ ಸಮಾಧಾನ ಹೇಳಿದ್ದಾರೆ.

ಹಿಂದೂ ಧರ್ಮದ ಜೊತೆಗಿನ ತಮ್ಮ ಸಂಬಂಧ ವಿಶೇಷವಾದದ್ದು ಎಂದು ಹೇಳಿದ ಅವರು, ಆತ್ಮಕಥೆಯಲ್ಲಿ ನನ್ನ ಮತ್ತು ಹಿಂದೂ ಧರ್ಮದೊಂದಿಗಿನ ಸಂಬಂಧ, ಬಾಂಧವ್ಯ ಹೇಗಿದೆ ಎಂಬುದನ್ನು ಬರೆದಿದ್ದೇನೆ ಎಂದಿದ್ದಾರೆ.

ಒಬ್ಬ ಮುಸ್ಲಿಂ ಹೆಣ್ಣುಮಗಳು ಬಾಗಿನ ಪಡೆದಾಗ ಆಕೆಯ ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ತಮ್ಮ ಬಾಗಿನ ಕವನ ವಾಚನ ಮಾಡಿ, ಭಾಷಣದ ಮೆರುಗನ್ನು ಇನ್ನೂ ಹೆಚ್ಚಿಸಿದರು.

 

ದಸರಾ ಉದ್ಘಾಟನೆಗೆ ಅವರನ್ನು ಆಹ್ವಾನಿಸಿದ ದಿನದಿಂದಲೂ ಬಿಜೆಪಿಯವರ ವಿರೋಧ, ಅಸಹನೆ ಶುರುವಾಗಿತ್ತು. ಧರ್ಮದ ವಿಷಯ ಮುಂದೆ ಮಾಡಿ, ಅನೇಕ ಸವಾಲುಗಳನ್ನು ಹಾಕಲಾಯಿತು. ಹಿಂದೊಮ್ಮೆ ಅವರು ಕನ್ನಡ ಭುವನೇಶ್ವರಿ ಬಗ್ಗೆ ಆಡಿದ ಮಾತುಗಳ ವೀಡಿಯೊ ಮುಂದೆ ಮಾಡಿ, ಅವರು ಕನ್ನಡ ಭುವನೇಶ್ವರಿಯನ್ನೇ ಒಪ್ಪಿಲ್ಲ, ಇನ್ನು ಚಾಮುಂಡೇಶ್ವರಿಯನ್ನು ಒಪ್ಪುತ್ತಾರಾ ಎಂದೆಲ್ಲ ಪ್ರಶ್ನಿಸಿಲಾಯಿತು.

ಯಾವುದಕ್ಕೂ ಅವರು ಜಗ್ಗಲಿಲ್ಲ ಎಂದಾದಾಗ, ಕೋರ್ಟ್ ಮೆಟ್ಟಿಲೇರುವುದಕ್ಕೂ ಈ ಅಸಹಿಷ್ಣುಗಳು ಹಿಂದೆಮುಂದೆ ನೋಡಲಿಲ್ಲ. ಬಾನು ಮುಷ್ತಾಕ್ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಪಿಐಎಲ್ ಅರ್ಜಿಯನ್ನು ವಜಾಗೊಳಿಸಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದರೂ, ಸುಪ್ರೀಂ ಕೋರ್ಟ್ ಸಹ ಅರ್ಜಿ ವಜಾಗೊಳಿಸಿ ರಾಜ್ಯ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿತ್ತು.

ಎಷ್ಟೇ ಸವಾಲುಗಳು ಬಂದರೂ ಕೂಡ ದಿಟ್ಟವಾಗಿ ನಿಂತು ಬಾನು ಮುಷ್ತಾಕ್ ದಸರಾ ಉದ್ಘಾಟಿಸಿದ್ದಾರೆ. ನೈತಿಕ ಬೆಂಬಲ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಅವರನ್ನು ಸಹಿಸಲಾರದವರಿಗೆ, ಅತ್ಯಂತ ಕೆಟ್ಟ ಮನಸ್ಥಿತಿಯನ್ನು ತೋರಿಸಿದವರಿಗೆ, ಬಾನು ಮುಷ್ತಾಕ್ ಅವರ ಘನತೆಯುತ ನಡೆ ಮತ್ತು ನುಡಿ ಬಹಳಷ್ಟನ್ನು ಹೇಳಿರುತ್ತದೆ. ಆದರೆ ಸ್ವೀಕರಿಸುವ ಗುಣವೇ ಇಲ್ಲದವರಿಗೆ ದಸರೆಯೂ ರಾಜಕೀಯದ ಮತ್ತು ದ್ವೇಷದ ಅಖಾಡ ಮಾತ್ರವಾಗುವುದು ವಿಪರ್ಯಾಸ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News