ಪಶ್ಚಿಮ ಬಂಗಾಳದ ಮುಸ್ಲಿಂ ಬಹುಸಂಖ್ಯಾತ ಬೂತ್‌ನಿಂದ ಬಿಜೆಪಿಗೆ ಸಿಕ್ಕಿದ್ದು ಶೇ. 97 ರಷ್ಟು ಮತ; ಕೊನೆಯ ಹಂತದ ಮತ ಎಣಿಕೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು ಹೇಗೆ?
ಸಾಂದರ್ಭಿಕ ಚಿತ್ರ | Photo Credit : PTI
ಪಶ್ಚಿಮ ಬಂಗಾಳದ ‘ರಾಜರಹತ್ ನ್ಯೂ ಟೌನ್’ ವಿಧಾನಸಭಾ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ಮುನ್ನಡೆಯಲ್ಲಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅಲ್ಲಿ ಬಿಜೆಪಿ ಮೇಲುಗೈ ಸಾಧಿಸಿತು. ಇಲ್ಲಿನ ಮುಸ್ಲಿಂ ಬಹುಸಂಖ್ಯಾತ ಬೂತ್ ಒಂದರಲ್ಲಿ ಹಿಂದುತ್ವ ಸಿದ್ಧಾಂತದ ಬಿಜೆಪಿಗೆ ಅತ್ಯಧಿಕ ಪ್ರಮಾಣದಲ್ಲಿ ಮತಗಳು ಲಭಿಸಿರುವುದೇ ಇದಕ್ಕೆ ಕಾರಣ ಎಂದು ಚುನಾವಣಾ ಆಯೋಗದ ಬೂತ್-ವಾರು ಅಧಿಕೃತ ದತ್ತಾಂಶಗಳನ್ನು ವಿಶ್ಲೇಷಿಸಿ scroll.in ವರದಿ ಮಾಡಿದೆ.
294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಮತ್ತು ಎಪ್ರಿಲ್ 29 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಮೇ 5 ರಂದು ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಪಶ್ಚಿಮ ಬಂಗಾಳದ ಇತಿಹಾಸದಲ್ಲೇ ಮೊದಲ ಬಾರಿಗೆ ಅಧಿಕಾರಕ್ಕೇರಿದೆ.
ರಾಜರಹತ್ ನ್ಯೂ ಟೌನ್ ಕ್ಷೇತ್ರದ ಕುರಿತು scroll.in ಮಾಡಿದ ಗ್ರೌಂಡ್ ರಿಪೋರ್ಟ್ ಪ್ರಕಾರ, ಮೇ 4 ರವರೆಗೂ ತೃಣಮೂಲ ಕಾಂಗ್ರೆಸ್ 316 ಮತಗಳ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ, ಮರುದಿನ (ಮೇ 5) ನಡೆದ ಹೆಚ್ಚುವರಿ ಸುತ್ತಿನ ಮತ ಎಣಿಕೆಯ ನಂತರ, ಬಿಜೆಪಿ ನಿಖರವಾಗಿ ಅದೇ 316 ಮತಗಳ ಅಂತರದಿಂದ ಜಯಭೇರಿ ಬಾರಿಸಿತು. ಈ ಹೆಚ್ಚುವರಿ ಸುತ್ತಿನ ಮತ ಎಣಿಕೆಯ ಅಗತ್ಯ ಏಕಿತ್ತು ಎಂಬ ಕುರಿತು ಸ್ಕ್ರಾಲ್ ಕೇಳಿದ ಪ್ರಶ್ನೆಗಳಿಗೆ ಚುನಾವಣಾ ಆಯೋಗದಿಂದ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ.
ಈ ನಡುವೆ, ಉಭಯ ಪಕ್ಷಗಳ ಅಭ್ಯರ್ಥಿಗಳು ಮತ ಎಣಿಕೆ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಪರಸ್ಪರರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ವಿವಾದದ ಕೇಂದ್ರಬಿಂದುವಾದ ಮುಸಲ್ಮಾನ್ ಪಾರ
ಈ ವಿವಾದಾತ್ಮಕ ಚುನಾವಣಾ ಫಲಿತಾಂಶದ ಕೇಂದ್ರಬಿಂದುವಾಗಿರುವುದು ಉತ್ತರ ಕೋಲ್ಕತ್ತಾದ ‘ಮುಸಲ್ಮಾನ್ ಪಾರ’ ಎಂಬ ಪ್ರದೇಶ. ಇಲ್ಲಿ 164 ಮತ್ತು 165 ಎಂಬ ಎರಡು ಬೂತ್‌ಗಳಿವೆ. ಮತದಾರರ ಪಟ್ಟಿಯ ಪ್ರಕಾರ, ಈ ಎರಡೂ ಬೂತ್‌ಗಳಲ್ಲಿ ನೋಂದಾಯಿತರಾಗಿರುವ ಬಹುತೇಕ ಮತದಾರರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರೆಲ್ಲರೂ ಒಂದೇ ಮತದಾನ ಕೇಂದ್ರದಲ್ಲಿ ಮತ ಚಲಾಯಿಸುತ್ತಾರೆ.
ಮೇ 4 ಮತ್ತು 5 ರಂದು ಮತ ಎಣಿಕೆ ನಡೆದಾಗ, ಬೂತ್ ಸಂಖ್ಯೆ 164 ರ ಮತಗಳನ್ನು ಅದರ ನಿಗದಿತ ಸುತ್ತಿನಲ್ಲಿ ಎಣಿಕೆ ಮಾಡದೆ, ಇಡೀ ಮತ ಎಣಿಕೆ ಪ್ರಕ್ರಿಯೆಯ ಕೊನೆಯಲ್ಲಿ ಪ್ರತ್ಯೇಕ ಸುತ್ತಿನಲ್ಲಿ ಎಣಿಕೆ ಮಾಡಲಾಯಿತು. ಇದರ ಬೆನ್ನಲ್ಲೇ ಮುಸಲ್ಮಾನ್ ಪಾರದ ಒಟ್ಟು ಮತಗಳ ಪಟ್ಟಿಯಲ್ಲಿ ಒಂದು ವಿಚಿತ್ರ ವೈರುಧ್ಯ ಕಂಡುಬಂದಿದೆ. ಅದೇನೆಂದರೆ, ಬೂತ್ 165 ರಲ್ಲಿ ಬಿಜೆಪಿಗೆ ಕೆಲವೇ ಮತಗಳು ಲಭಿಸಿದ್ದರೆ, ಅಷ್ಟೇ ಜನಸಂಖ್ಯೆ ಹೊಂದಿರುವ ಪಕ್ಕದ ಬೂತ್ 164 ರಲ್ಲಿ ಮಾತ್ರ ಬಿಜೆಪಿಗೆ ಅಭೂತಪೂರ್ವ ಬಹುಮತ ಸಿಕ್ಕಿದೆ.
ಈ ಬಾರಿಯ ಪಶ್ಚಿಮ ಬಂಗಾಳ ಚುನಾವಣೆಯ ಮತದಾನದ ಮಾದರಿಯಲ್ಲಿ ಕಂಡುಬಂದಿರುವ ಕೋಮು ಧ್ರುವೀಕರಣದ ಟ್ರೆಂಡ್ ಗೆ ಇದು ಸಂಪೂರ್ಣವಾಗಿ ವಿರುದ್ಧವಾಗಿದೆ. ಒಂದೇ ರೀತಿಯ ಜನಸಂಖ್ಯೆ ಮತ್ತು ಸಾಮಾಜಿಕ ಹಿನ್ನೆಲೆಯಿರುವ ಎರಡು ಪಕ್ಕದ ಬೂತ್‌ಗಳಲ್ಲಿ ಇಂತಹ ಭಿನ್ನ ಫಲಿತಾಂಶ ಬಂದಿರುವುದನ್ನು ತರ್ಕಬದ್ಧವಾಗಿ ವಿವರಿಸುವುದು ಕಷ್ಟಸಾಧ್ಯ. ಈ ಗೊಂದಲಗಳ ಕುರಿತು ಚುನಾವಣಾ ಆಯೋಗಕ್ಕೆ ಕಳುಹಿಸಲಾದ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು scroll.in ವರದಿಯಲ್ಲಿ ಉಲ್ಲೇಖಿಸಿದೆ.
ಎಣಿಕೆಯಾಗದೆ ಬಾಕಿ ಉಳಿದಿದ್ದ ಬೂತ್
ಫಲಿತಾಂಶದ ದಿನದಂದು ಮತಗಳನ್ನು ಹೇಗೆ ಎಣಿಕೆ ಮಾಡಬೇಕು ಎಂಬುದರ ಕುರಿತು ಚುನಾವಣಾ ಆಯೋಗವು ಸ್ಪಷ್ಟ ಮಾರ್ಗಸೂಚಿಗಳನ್ನು ಹೊಂದಿದೆ. ಸಾಮಾನ್ಯವಾಗಿ ಮತ ಎಣಿಕೆಯನ್ನು ಕನಿಷ್ಠ 7 ಟೇಬಲ್ ಗಳಿರುವ ಎಣಿಕೆ ಕೇಂದ್ರದಲ್ಲಿ ನಡೆಸಲಾಗುತ್ತದೆ. ಪ್ರತಿ ಸುತ್ತಿನಲ್ಲಿಯೂ, ಪ್ರತಿ ಟೇಬಲ್ ನಲ್ಲಿರುವ ಎಣಿಕೆ ಅಧಿಕಾರಿಗಳು ಒಂದು ಬೂತ್ ನ ಮತಗಳನ್ನು ಕ್ರೋಡೀಕರಿಸುತ್ತಾರೆ.
ಚುನಾವಣಾ ಸಂಸ್ಥೆಯ ‘ಕೌಂಟಿಂಗ್ ಏಜೆಂಟ್ ಗಳ ಕೈಪಿಡಿ’ ಪ್ರಕಾರ, ಟೇಬಲ್ ಒಂದಕ್ಕೆ ಬೂತ್ ಒಂದರ ಇವಿಎಂ ಬಂದರೆ, ಟೇಬಲ್ ಎರಡಕ್ಕೆ ಬೂತ್ ಎರಡರ ಇವಿಎಂ ಹೋಗುತ್ತದೆ. ಹೀಗೆ ಕ್ರಮಬದ್ಧವಾಗಿ ಎಣಿಕೆ ಸಾಗುತ್ತದೆ. ಒಂದು ವೇಳೆ ಎಣಿಕೆ ಸಭಾಂಗಣದಲ್ಲಿ ಏಳು ಟೇಬಲ್‌ಗಳಿದ್ದರೆ, ಪ್ರತಿ ಸುತ್ತಿನಲ್ಲಿಯೂ ಏಳು ಬೂತ್‌ಗಳ ಮತಗಳನ್ನು ಎಣಿಕೆ ಮಾಡಲಾಗುತ್ತದೆ.
ರಾಜರಹತ್ ನ್ಯೂ ಟೌನ್ ಕ್ಷೇತ್ರವು ಒಟ್ಟು 330 ಬೂತ್‌ಗಳನ್ನು ಹೊಂದಿದೆ. ಇವುಗಳಲ್ಲಿ 320 ಮುಖ್ಯ ಬೂತ್‌ಗಳಾಗಿದ್ದರೆ, 10 ಹೆಚ್ಚುವರಿ ಬೂತ್‌ಗಳಾಗಿವೆ. 1,200 ಕ್ಕಿಂತ ಹೆಚ್ಚು ಮತದಾರರಿರುವ ಬೂತ್‌ಗಳಲ್ಲಿ ಮತದಾನವನ್ನು ಸುಲಭಗೊಳಿಸಲು ಇಂತಹ ಹೆಚ್ಚುವರಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.
ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಸುತ್ತಿನ ಫಲಿತಾಂಶಗಳನ್ನು, ಆ ಕ್ಷೇತ್ರದ ಬೂತ್-ವಾರು ದತ್ತಾಂಶಗಳೊಂದಿಗೆ ಹೋಲಿಸಿ scroll.in ಈ ವಿಶ್ಲೇಷಣೆ ಪ್ರಕಟಿಸಿದೆ. ವಿಶ್ಲೇಷಣೆಯ ಪ್ರಕಾರ, ಮೊದಲ ಸುತ್ತಿನಲ್ಲಿ ಎಲ್ಲಾ ಅಭ್ಯರ್ಥಿಗಳು ಪಡೆದ ಒಟ್ಟು ಮತಗಳ ಮೊತ್ತವು, 1 ರಿಂದ 20 ರವರೆಗಿನ ಬೂತ್ ಗಳಲ್ಲಿ ಅವರಿಗೆ ಲಭಿಸಿದ ಮತಗಳ ಮೊತ್ತಕ್ಕೆ ನಿಖರವಾಗಿ ತಾಳೆಯಾಗುತ್ತಿತ್ತು. ಉದಾಹರಣೆಗೆ, ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿಯೂಷ್ ಕನೋಡಿಯಾ 5,461 ಮತಗಳನ್ನು ಪಡೆದಿದ್ದರು. ಆ ಕ್ಷೇತ್ರದ ಮೊದಲ 20 ಬೂತ್ ಗಳಲ್ಲಿ ಅವರಿಗೆ ಸಿಕ್ಕ ಒಟ್ಟು ಮತಗಳ ಸಂಖ್ಯೆಯೂ ನಿಖರವಾಗಿ ಇಷ್ಟೇ ಆಗಿತ್ತು.
ಇದೇ ಮಾದರಿಯಲ್ಲಿ, ಎರಡನೇ ಸುತ್ತಿನ ಎಣಿಕೆಯು 21 ರಿಂದ 40 ರವರೆಗಿನ ಬೂತ್‌ಗಳ ಒಟ್ಟು ಮೊತ್ತವಾಗಿತ್ತು. ಮೂರನೇ ಸುತ್ತು ಅದರ ಮುಂದಿನ 20 ಬೂತ್ ಗಳ ಮತಗಳನ್ನು ಒಳಗೊಂಡಿತ್ತು. ಹೀಗೆ ಕ್ರಮಬದ್ಧವಾಗಿ ಎಣಿಕೆ ಸಾಗಿತ್ತು.
ಇದರರ್ಥ, ಎಣಿಕೆ ಅಧಿಕಾರಿಗಳು ಪ್ರತಿ ಸುತ್ತಿನಲ್ಲಿಯೂ 20 ಇವಿಎಂ ಮತಗಳನ್ನು ಎಣಿಕೆ ಮಾಡುತ್ತಿದ್ದರು. ಒಟ್ಟು 330 ಬೂತ್ ಗಳಿರುವ ಕ್ಷೇತ್ರಕ್ಕೆ ಈ ಲೆಕ್ಕಾಚಾರದ ಪ್ರಕಾರ ಕೇವಲ 17 ಸುತ್ತುಗಳ ಎಣಿಕೆ ಸಾಕಾಗುತ್ತಿತ್ತು. ಅಂದರೆ, ಮೊದಲ 16 ಸುತ್ತುಗಳಲ್ಲಿ ತಲಾ 20 ಇವಿಎಂಗಳಂತೆ 320 ಯಂತ್ರಗಳು ಮತ್ತು 17ನೇ ಸುತ್ತಿನಲ್ಲಿ ಉಳಿದ 10 ಯಂತ್ರಗಳ ಎಣಿಕೆ ಮುಗಿಯಬೇಕಿತ್ತು.
ಆದರೆ, ಮೇ 4 ಮತ್ತು ಮೇ 5 ರಂದು ನಡೆದ ಮತ ಎಣಿಕೆಯು ಒಟ್ಟು 18 ಸುತ್ತುಗಳವರೆಗೆ ಸುದೀರ್ಘವಾಗಿ ಸಾಗಿತು.
ಚುನಾವಣಾ ಆಯೋಗವು ಪ್ರಕಟಿಸಿರುವ 9ನೇ ಸುತ್ತಿನ ಮತದಾನದ ಅಂಕಿ-ಅಂಶಗಳನ್ನು ಗಮನಿಸಿದರೆ, ಆ ಸುತ್ತಿನಲ್ಲಿ ಕೇವಲ 19 ಇವಿಎಂಗಳನ್ನು ಮಾತ್ರ ಎಣಿಕೆಗೆ ತೆಗೆದುಕೊಳ್ಳಲಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಒಂದು ವೇಳೆ ಈ ಸುತ್ತಿನಲ್ಲಿ ನಿಗದಿಯಾಗಿದ್ದ ಬೂತ್ 159 ರಿಂದ ಬೂತ್ 177 ರವರೆಗಿನ ಎಲ್ಲಾ 20 ಇವಿಎಂ ಯಂತ್ರಗಳನ್ನು ಎಣಿಕೆ ಮಾಡಿದ್ದರೆ, ಒಟ್ಟು ಮತಗಳ ಸಂಖ್ಯೆ 16,870 ಆಗಬೇಕಿತ್ತು. ಆದರೆ ಅಧಿಕೃತ ಅಂಕಿ-ಅಂಶಗಳಲ್ಲಿ ಅದು 16,214 ಎಂದು ದಾಖಲಾಗಿದೆ. ಅಂದರೆ, ನಿಖರವಾಗಿ 656 ಮತಗಳು ಇಲ್ಲಿ ಕಡಿಮೆಯಾಗಿದ್ದವು.
ಚುನಾವಣಾ ಆಯೋಗದ ಬೂತ್-ಮಟ್ಟದ ದತ್ತಾಂಶದ ಪ್ರಕಾರ, ಬೂತ್ ಸಂಖ್ಯೆ 164 ರಲ್ಲಿ ಚಲಾವಣೆಯಾಗಿದ್ದ ಒಟ್ಟು ಮತಗಳ ಸಂಖ್ಯೆ 656. ಇದರರ್ಥ, ಎಣಿಕೆ ಅಧಿಕಾರಿಗಳು ಒಂಭತ್ತನೇ ಸುತ್ತಿನಲ್ಲಿ ಈ ನಿರ್ದಿಷ್ಟ ಬೂತ್ ಅನ್ನು ಎಣಿಕೆಗೆ ತೆಗೆದುಕೊಳ್ಳದೆ ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ಕೈಬಿಟ್ಟಿದ್ದರು.
ಕೊನೆಯ ಸುತ್ತಿನಲ್ಲಿ ಬದಲಾದ ಫಲಿತಾಂಶ
ಮೇ 4 ರಂದು ನಡೆದ 17ನೇ ಸುತ್ತಿನವರೆಗೂ ತೃಣಮೂಲ ಕಾಂಗ್ರೆಸ್ ನ ಚಟರ್ಜಿ ಅವರು ಬಿಜೆಪಿಯ ಕನೋಡಿಯಾ ವಿರುದ್ಧ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ ಅದು ಕೇವಲ 316 ಮತಗಳ ತೀರಾ ಕಿರಿದಾದ ಮುನ್ನಡೆಯಾಗಿತ್ತು. ಅವರು ಇವಿಎಂ ಮತಗಳಲ್ಲಿ 440 ರಷ್ಟು ಮುನ್ನಡೆ ಹೊಂದಿದ್ದರೂ, ಅಂದು ಬೆಳಿಗ್ಗೆಯೇ ಎಣಿಕೆಯಾಗಿದ್ದ ಪೋಸ್ಟಲ್ ಬ್ಯಾಲೆಟ್ ಮತಗಳಲ್ಲಿ 124 ರಷ್ಟು ಹಿನ್ನಡೆಯಲ್ಲಿದ್ದರು.
ಚುನಾವಣಾ ಆಯೋಗದ ದತ್ತಾಂಶಗಳ ಪ್ರಕಾರ, ಮೇ 5 ರಂದು ನಡೆದ ಕೊನೆಯ ಹಾಗೂ 18ನೇ ಸುತ್ತಿನಲ್ಲಿ ಎಣಿಕೆ ಮಾಡಲಾದ ಏಕೈಕ ಬೂತ್‌ನಲ್ಲಿ 656 ಮತಗಳಿದ್ದವು. ಇದು ಒಂಭತ್ತನೇ ಸುತ್ತಿನಲ್ಲಿ ಬಿಟ್ಟುಹೋಗಿದ್ದ ಬೂತ್ 164 ರಲ್ಲಿ ಚಲಾವಣೆಯಾಗಿದ್ದ ಮತಗಳಷ್ಟೇ ನಿಖರ ಸಂಖ್ಯೆಯಾಗಿತ್ತು.
ಇಲ್ಲಿ, ಇಡೀ ಫಲಿತಾಂಶವೇ ಉಲ್ಟಾ ಆಯಿತು. ಈ ಬೂತ್‌ನಲ್ಲಿ ಬಿಜೆಪಿಗೆ ಬರೋಬ್ಬರಿ 637 ಮತಗಳು ಲಭಿಸಿದರೆ, ತೃಣಮೂಲ ಕಾಂಗ್ರೆಸ್ ಗೆ ಸಿಕ್ಕಿದ್ದು ಕೇವಲ 5 ಮತಗಳು ಮಾತ್ರ. ಈ ಅನಿರೀಕ್ಷಿತ ತಿರುವಿನಿಂದಾಗಿ, ಅಂತಿಮವಾಗಿ ಇಡೀ ಕ್ಷೇತ್ರದ ಫಲಿತಾಂಶವು ಬಿಜೆಪಿಯ ಪರವಾಗಿ ಬದಲಾಯಿತು. ಬಿಜೆಪಿ ಅಭ್ಯರ್ಥಿ 316 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಮುಸಲ್ಮಾನ್ ಪಾರ
ಇತ್ತೀಚಿನ ಬಂಗಾಳದ ಚುನಾವಣೆಗಳಲ್ಲಿ ತೀವ್ರ ಕೋಮು ಧ್ರುವೀಕರಣ ಕಂಡುಬಂದಿದೆ. ಪಶ್ಚಿಮ ಬಂಗಾಳದ ಹಿಂದಿನ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ರಾಜ್ಯದ ಮುಸ್ಲಿಮರಲ್ಲಿ ಕೇವಲ ಶೇ. 4 ರಿಂದ ಶೇ. 7 ರಷ್ಟು ಜನರು ಮಾತ್ರ ಬಿಜೆಪಿಗೆ ಮತ ಹಾಕಿದ್ದಾರೆ. ‘ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್’ (CSDS) ಸಂಗ್ರಹಿಸಿದ ಮತದಾನದ ನಂತರದ ಅಂಕಿ-ಅಂಶಗಳ ಪ್ರಕಾರ, ಮುಸ್ಲಿಂ ಸಮುದಾಯದ ಸುಮಾರು ಶೇ. 70 ರಿಂದ ಶೇ. 75 ರಷ್ಟು ಜನರು ತೃಣಮೂಲ ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದಾರೆ.
ಪಶ್ಚಿಮ ಬಂಗಾಳದ ಪ್ರಮುಖ ಬಿಜೆಪಿ ನಾಯಕ ಸುವೇಂದು ಅಧಿಕಾರಿಯವರೂ ಸಹ ನಂದಿಗ್ರಾಮ ಕ್ಷೇತ್ರದಲ್ಲಿ ತಮ್ಮ ಗೆಲುವಿಗೆ ಹಿಂದೂ ಮತದಾರರೇ ಕಾರಣ. ಅಲ್ಲಿ ಸಂಪೂರ್ಣ ಮುಸ್ಲಿಂ ಮತಗಳು ತೃಣಮೂಲ ಕಾಂಗ್ರೆಸ್ ಗೆ ಹೋದವು ಎಂದು ಹೇಳಿದ್ದರು. “ನಾನು ನಂದಿಗ್ರಾಮದ ಹಿಂದೂಗಳಿಗಾಗಿ ಕೆಲಸ ಮಾಡುತ್ತೇನೆ” ಎಂದಿದ್ದರು. ಆದರೆ, ರಾಜರಹತ್ ನ್ಯೂ ಟೌನ್‌ನ ಬೂತ್ ಸಂಖ್ಯೆ 164 ರ ಮುಸ್ಲಿಂ ಮತದಾರರು ಈ ಮತದಾನದ ಮಾದರಿಯನ್ನು ಸಂಪೂರ್ಣವಾಗಿ ಉಲ್ಟಾ ಮಾಡಿದ್ದಾರೆ.
ಈ ಕ್ಷೇತ್ರದ ಬೂತ್ ಸಂಖ್ಯೆ 164 ಮತ್ತು 165 ಕ್ಕೆ ಒಳಪಡುವ ಮತದಾರರೆಲ್ಲರೂ ಜಗದೀಶ್‌ಪುರ ಎಫ್‌ಪಿ ಶಾಲೆಯ ಮತದಾನ ಕೇಂದ್ರದಲ್ಲೇ ಮತ ಚಲಾಯಿಸುತ್ತಾರೆ.
ಮತದಾರರ ಪಟ್ಟಿಯ ಪ್ರಕಾರ, ಬೂತ್ 164 ರಲ್ಲಿ 670 ಮತದಾರರಿದ್ದಾರೆ. ಅದರಲ್ಲಿ ಶೇ. 88 ಕ್ಕಿಂತ ಹೆಚ್ಚು ಅಂದರೆ 591 ಜನರು ಮುಸ್ಲಿಮರಾಗಿದ್ದಾರೆ. ಈ ಬೂತ್‌ನಲ್ಲಿ ಚಲಾವಣೆಯಾದ 656 ಮತಗಳಲ್ಲಿ ಬಿಜೆಪಿ ಶೇ. 97 ರಷ್ಟು ಮತಗಳನ್ನು ಗೆದ್ದುಕೊಂಡಿದೆ. ಇಲ್ಲಿನ ಪ್ರತಿಯೊಬ್ಬ ಹಿಂದೂ ಮತದಾರರೂ ಬಿಜೆಪಿಗೆ ಮತ ಹಾಕಿದ್ದಾರೆ ಎಂದುಕೊಂಡರೂ, ಪಕ್ಷಕ್ಕೆ ಮುಸ್ಲಿಂ ಮತದಾರರಿಂದ 558 ಮತಗಳು ಬಂದಿವೆ. ಇದರರ್ಥ, ಬೂತ್ 164 ರಲ್ಲಿದ್ದ ಶೇ. 94 ಕ್ಕಿಂತ ಹೆಚ್ಚು ಮುಸ್ಲಿಮರು ಬಿಜೆಪಿಗೆ ಮತ ಹಾಕಿದ್ದಾರೆ ಎಂದಾಗುತ್ತದೆ. ಬಂಗಾಳದ ಹಿಂದಿನ ಎಲ್ಲಾ ಅಂಕಿ-ಅಂಶಗಳನ್ನು ಗಮನಿಸಿದರೆ ಇದು ಅಚ್ಚರಿ ಮೂಡಿಸುವ ಸಂಖ್ಯೆಯಾಗಿದೆ.
ಅದೇ ರೀತಿ, ಬೂತ್ 165 ರಲ್ಲಿ 654 ಮತದಾರರಿದ್ದಾರೆ. ಅದರಲ್ಲಿ ಶೇ. 91 ಕ್ಕಿಂತ ಹೆಚ್ಚು ಅಂದರೆ 597 ಜನರು ಮುಸ್ಲಿಮರಾಗಿದ್ದಾರೆ. ವಿಚಿತ್ರವೆಂದರೆ, ಇವರೆಲ್ಲರೂ ಒಂದೇ ಪ್ರದೇಶಕ್ಕೆ ಸೇರಿದವರಾಗಿದ್ದರೂ, ಇಲ್ಲಿನ ಮತದಾರರು ತೀರಾ ಭಿನ್ನವಾಗಿ ಮತ ಚಲಾಯಿಸಿದ್ದಾರೆ. ಬಿಜೆಪಿಗೆ ಚಲಾವಣೆಯಾದ 638 ಮತಗಳಲ್ಲಿ ಕೇವಲ 32 ಮತಗಳು ಮಾತ್ರ ಬಂದಿದ್ದರೆ, ತೃಣಮೂಲ ಕಾಂಗ್ರೆಸ್ 290 ಮತಗಳನ್ನು ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಅಭ್ಯರ್ಥಿ 299 ಮತಗಳನ್ನು ಪಡೆದಿದ್ದಾರೆ.
ಒಂದೇ ನೆರೆಹೊರೆಯಲ್ಲಿರುವ, ಸುಮಾರು ಒಂದೇ ರೀತಿಯ ಧಾರ್ಮಿಕ ಹಿನ್ನೆಲೆ ಹೊಂದಿರುವ ಎರಡು ಬೂತ್‌ಗಳು ಇಷ್ಟು ತೀವ್ರವಾಗಿ ಭಿನ್ನವಾದ ಫಲಿತಾಂಶಗಳನ್ನು ಹೇಗೆ ನೀಡಿದವು ಎಂಬುದನ್ನು ವಿವರಿಸುವುದು ಕಷ್ಟ. ಬೂತ್ 164 ರಲ್ಲಿದ್ದ ಬಹುತೇಕ ಪ್ರತಿಯೊಬ್ಬ ಮತದಾರನೂ ಬಿಜೆಪಿಯನ್ನು ಬೆಂಬಲಿಸಿದರೆ, ಬೂತ್ 165 ರ ಮತದಾರರು ಹಾಗೆ ಮಾಡಲಿಲ್ಲ.
ಮತ ಎಣಿಕೆ ಪ್ರಕ್ರಿಯೆಯು ಈ ಗೊಂದಲವನ್ನು ಮತ್ತಷ್ಟು ಆಳವಾಗಿಸಿದೆ. ಬೂತ್ 164 ರ ಮತ ಎಣಿಕೆಯನ್ನು ಅದರ ನಿಗದಿತ ಸುತ್ತಿನಲ್ಲಿ ಬಿಟ್ಟು, ಕೊನೆಯಲ್ಲಿ ಪ್ರತ್ಯೇಕವಾಗಿ ಎಣಿಕೆ ಮಾಡಲಾಯಿತು. ಇದು ತೃಣಮೂಲ ಕಾಂಗ್ರೆಸ್ ಹೊಂದಿದ್ದ ಅಲ್ಪ ಮುನ್ನಡೆಯನ್ನು ಇಲ್ಲವಾಗಿಸಿತು. ಈ ಬೂತ್‌ನ ಇವಿಎಂ ಅನ್ನು ಏಕೆ ಪಕ್ಕಕ್ಕೆ ಇಡಲಾಗಿತ್ತು ಎಂಬುದಕ್ಕೆ ಚುನಾವಣಾ ಆಯೋಗವು ಇನ್ನೂ ಯಾವುದೇ ವಿವರಣೆ ನೀಡಿಲ್ಲ.
ಸೌಜನ್ಯ: scroll.in